ಯಕ್ಷಗಾನದಲ್ಲಿ ಮಹಿಳಾ ಪ್ರವೇಶಕ್ಕೆ ಧೈರ್ಯ ಮೂಡಿಸಿದವರು ಲೀಲಾವತಿ ಬೈಪಾಡಿತ್ತಾಯ: ಡಾ.ಜೋಶಿ ನುಡಿನಮನ



ಮಂಗಳೂರು:
ನಮ್ಮನ್ನಗಲಿದ ಲೀಲಾವತಿ ಬೈಪಾಡಿತ್ತಾಯರು ಮಹಿಳಾ ಕಲಾವಿದೆಯಾಗಿ ಹೆಸರು ಮಾಡಿದ್ದಷ್ಟೇ ಅಲ್ಲ, ಯಕ್ಷಗಾನ ರಂಗಕ್ಕೆ ಮಹಿಳೆಯರ ದಂಡನ್ನೇ ಸೃಷ್ಟಿಸಿದವರು. ಮಹಿಳೆಯರು ರಂಗವೇರುವಂತೆ ಧೈರ್ಯವನ್ನು ಮೂಡಿಸಿದವರು ಎಂದು ಹಿರಿಯ ವಿದ್ವಾಂಸ ಡಾ.ಪ್ರಭಾಕರ ಜೋಶಿ ಹೇಳಿದರು.

ಪ್ರಥಮ ವೃತ್ತಿಪರ ಮಹಿಳಾ ಭಾಗವತರಾದ ಲೀಲಾವತಿ ಬೈಪಾಡಿತ್ತಾಯ ಅವರಿಗೆ ಬಜಪೆಯ ಕೊಳಂಬೆ ಗ್ರಾಮದ ತಲಕಳ ಶ್ರೀ ಕಾಶಿ ವಿಶ್ವನಾಥೇಶ್ವರ ಮಹಾಗಣಪತಿ ದೇವಸ್ಥಾನ ಆವರಣದಲ್ಲಿ ಡಿ.26ರಂದು ಗುರುವಾರ ಆಯೋಜಿಸಲಾಗಿದ್ದ ಶ್ರದ್ಧಾಂಜಲಿ ಹಾಗೂ ಗಾನ ನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಯಕ್ಷಗಾನ.ಇನ್ ಅಪ್‌ಡೇಟ್ಸ್ ಪಡೆಯಲು ಫೇಸ್‌ಬುಕ್ | ಟ್ವಿಟರ್ | ಯೂಟ್ಯೂಬ್ ಇನ್‌ಸ್ಟಾಗ್ರಾಂ ಫಾಲೋ ಮಾಡಿ.

ಹಲವು ಕಾರಣಗಳಿಂದ ಸ್ಮರಣೀಯರಾದ ವ್ಯಕ್ತಿ ಲೀಲಾವತಿ ಬೈಪಾಡಿತ್ತಾಯರು. ಕಲಾವಿದೆಯಾಗಿ, ವ್ಯಕ್ತಿಯಾಗಿ, ಸಂಸಾರಿಯಾಗಿ, ಗುರುವಾಗಿ, ಅಷ್ಟೇ ಅಲ್ಲ, ಒಂದು ಚಳವಳಿಯ ನಾಯಕಿಯಾಗಿ... ಹೀಗೆ ನಾಲ್ಕಾರು ಸಂದರ್ಭಗಳಲ್ಲಿ ಅವರನ್ನು ನಾವು ನೋಡಬಹುದು. ಒಂದು ಜನಾಂಗಕ್ಕೆ, ದೂರದೂರಿಗೆಲ್ಲ ಹೋಗಬೇಕಾದ, ರಾತ್ರಿಯಿಡೀ ಹಾಡಬೇಕಾದ ಯಕ್ಷಗಾನದಂತಹಾ ಕಠಿಣವಾದ ಕಲೆಯಲ್ಲಿ 25 ವರ್ಷಕ್ಕೂ ಹೆಚ್ಚು ಅವಧಿಗೆ ತಿರುಗಾಟ ಮಾಡಿದ್ದು ದೊಡ್ಡ ಸಾಧನೆಯೇ ಸರಿ ಎಂದು ಡಾ.ಜೋಶಿ ನೆನಪಿಸಿಕೊಂಡರು.

ವಾಯ್ಸ್ ಕಲ್ಚರ್ ಬದಲು ನಾಯ್ಸ್ ಕಲ್ಚರ್
ಇಷ್ಟು ಒಳ್ಳೆಯ ಮನುಷ್ಯರಿರುತ್ತಾರೆಯೇ ಎಂದು ನಂಬಲು ಅಸಾಧ್ಯವಾದಂತೆ ಬದುಕಿದವರು ಲೀಲಕ್ಕ ಮತ್ತು ಹರಿಯಣ್ಣ ದಂಪತಿ. ತಾವು ಬದುಕಿದ ಊರುಗಳಿಗೆ, ಯಕ್ಷಗಾನಕ್ಕೆ ಕೀರ್ತಿ ತಂದುಕೊಟ್ಟ ಇತಿಹಾಸ ಸೃಷ್ಟಿ ಮಾಡಿದ್ದು ಲೀಲಕ್ಕ. ಒಳ್ಳೆ ಶೈಲಿ, ಒಳ್ಳೆ ತಿಳಿವಳಿಕೆ, ನೆಮ್ಮದಿಯ ಗಾಯನ ಅವರ ವಿಶೇಷತೆ ಎಂದು ಶ್ಲಾಘಿಸಿದ ಡಾ.ಜೋಶಿ, ಈಗಿನ ಗಾಯನ, ವಾದನ, ವೇಷಗಾರಿಕೆ ಎಂಬುದು ಬೊಬ್ಬೆ ಆಗಿಬಿಟ್ಟಿದೆ. ನಮ್ಮ ಕಿವಿ ಕೆಪ್ಪಾಗುವಷ್ಟು ಶಬ್ದ. ನಾದಮಯವಾಗಿಲ್ಲ. ವಾಯ್ಸ್ ಕಲ್ಚರ್ ಇಲ್ಲ, ನಾಯ್ಸ್ ಕಲ್ಚರ್ ಆಗಿಬಿಟ್ಟಿದೆ ಎಂದು ವಿಷಾದಿಸಿದರು.
ಬೈಪಾಡಿತ್ತಾಯ ಶಿಷ್ಯರಿಂದ ಗಾನ ನಮನ ನಡೆಯಿತು.

ಈಗ 40-50 ಮೇಳಗಳಿವೆ, ಯಕ್ಷಗಾನ ತುಂಬ ಬೆಳೆದಿದೆ, ಸಾವಿರಾರು ಕಲಾವಿದರಿದ್ದಾರೆ, ಹೋದಲ್ಲೆಲ್ಲ ಯಕ್ಷೋತ್ಸವಗಳು ಆಗುತ್ತಿವೆ. ಆದರೆ ಶೃಂಗಾರ, ಹಾಸ್ಯ, ಕಟ್ ಪೀಸ್, ಆರು ಮದ್ದಳೆ, ಎಂಟು ಚೆಂಡೆ, ಮತ್ತೊಂದು ತುಣುಕನ್ನಷ್ಟೇ ಪ್ರೊಜೆಕ್ಟ್ ಮಾಡುವುದು ಅತಿಯಾಗಿಬಿಟ್ಟಿದೆ. ಇದು ಯಕ್ಷಗಾನ ದೃಷ್ಟಿಯಿಂದ ಒಳ್ಳೆಯದಲ್ಲ. ಲೀಲಕ್ಕನವರ ಈ ಸಂದರ್ಭದಂದು ನಾನು ವಿಶೇಷವಾಗಿ ಉಲ್ಲೇಖಿಸುತ್ತೇನೆ ಇದನ್ನು ನಾನು. ಇಡೀ ಯಕ್ಷಗಾನ ಪ್ರದರ್ಶನವನ್ನು ನೋಡುವ ಮನಸ್ಸು ನಮ್ಮದ್ದಾಗಬೇಕು. ಯಕ್ಷಗಾನ ನಟ ಪ್ರಧಾನ ಕಲೆ ಎಂಬುದು ಹೌದಾದರೂ, ಇಂಥವರ ಹಾಡು, ಇಂಥವರ ವೇಷ, ಇಂಥವರ ಅರ್ಥ ಕೇಳಲಿಕ್ಕಾಗಿಯೇ ಹೋಗುತ್ತೇವೆ. ಆದರೆ, ಇದು ಎಲ್ಲರೂ ಸೇರಿ ಮಾಡುವ ಪ್ರದರ್ಶನ ಎಂಬುದು ಗಮನಿಸಬೇಕಾದ ವಿಚಾರ ಎಂದರು.

ಯಕ್ಷಗಾನದಲ್ಲಿ ಹೆಚ್ಚು ಪ್ರಸಿದ್ಧವಾಗಿರುವ ಸುರುಟಿ, ಕಾಂಬೋಧಿ ಮುಂತಾದ ರಾಗಗಳಿಗೆ ಸ್ವಚ್ಛವಾದ ಆಕಾರ ಕೊಟ್ಟು ಪ್ರಸ್ತುತಪಡಿಸಿದವರು ಲೀಲಕ್ಕ. ಈಗಿನ ಕಾಲದಲ್ಲಿ ಸ್ವರಕ್ಕೆ ಅಥವಾ ಮಾಧುರ್ಯಕ್ಕಷ್ಟೇ ಪ್ರಾಧಾನ್ಯ ಬಂದಿದೆ. ಅದು ಬೇಕು. ಆದರೆ, ಲೀಲಕ್ಕನದು ಮಾಧುರ್ಯಭರಿತವೂ ಇತ್ತು. ಯಾವುದೇ ವಿಕಾರವಿಲ್ಲದ ಸಹಜವಾದ ಭಾಗವತಿಕೆ ಅವರದು ಎಂದ ಜೋಶಿ, ಡೇರೆ ಮೇಳಗಳಾದ (ಟಿಕೆಟ್ ಇರುವ) ಅರುವ, ಕುಂಬಳೆ, ಬಪ್ಪನಾಡು ಮೇಳಗಳಲ್ಲಿ ಕಾಯಂ ಭಾಗವತರಾಗಿ, ಸಾಲಿಗ್ರಾಮದಂತಹಾ ಬಡಗು ಮೇಳಗಳಲ್ಲಿಯೂ ಹಾಡಿದ್ದಾರೆ. ಸುರತ್ಕಲ್, ಕದ್ರಿ ಮುಂತಾದ ಡೇರೆ ಮೇಳಗಳಲ್ಲಿ ಅತಿಥಿ ಭಾಗವತರಾಗಿ ಹಾಡಿದ್ದಾರೆ. ಮುಂಬಯಿಯಲ್ಲೂ ಕಂಠ ಮೆರೆದಿದ್ದಾರೆ. ಆ ಕಾಲದಲ್ಲಿ ಒಬ್ಬ ಹೆಂಗಸು ಹೀಗೆ ಹೆಸರು ಮಾಡಿದ್ದು ದೊಡ್ಡ ಕ್ರಾಂತಿಯೇ ಸರಿ ಎಂದರು.

ಮಹಿಳೆಯರ ದಂಡನ್ನೇ ಬೆಳೆಸಿದವರು
1940-50ನೇ ಇಸವಿ ಆಸುಪಾಸಿನಲ್ಲಿ ಬೆಳ್ಮಣ್‌ನ ಒಬ್ಬ ಮಹಿಳೆ, ಕೊಲ್ಲೂರು ಯಮುನಮ್ಮ ಮುಂತಾದವರೆಲ್ಲ ಇದ್ದರು. ಅವರು ಪ್ರಸಂಗದಲ್ಲಿ ಮೊದಲು ಒಂದು ನಾಲ್ಕು ಪದ್ಯ ಹಾಡುತ್ತಿದ್ದರಷ್ಟೇ. ಆ ಕಾಲದಲ್ಲಿ, ಗೃಹಿಣಿಯೊಬ್ಬಾಕೆ ನಾಲ್ಕು ಪದ್ಯ ಹೇಳಿದರೆಂಬುದು ಕುತೂಹಲದ ವಿಷಯವಾಗಿತ್ತಷ್ಟೇ. ಆದರೆ ಪೂರ್ಣಾವಧಿ ವ್ಯವಸಾಯಿಯಾಗಿ ಮೆರೆದವರು ಲೀಲಕ್ಕ. ನೈಜವಾಗಿ ಕೀರ್ತಿಯ ಎತ್ತರವನ್ನೇರಿದರು. ಅರ್ಹವಾಗಿಯೇ ರಾಜ್ಯೋತ್ಸವ ಪ್ರಶಸ್ತಿ ಬಂತು ಅವರಿಗೆ ಎಂದು ನೆನಪಿಸಿಕೊಂಡರು ಡಾ.ಜೋಶಿ.

ಲೀಲಕ್ಕ ಬರೇ ತಿರುಗಾಟದ ಕಲಾವಿದರಾಗಿ ಮಾತ್ರವೇ ಆಗಿರಲಿಲ್ಲ. ಒಂದು ದೊಡ್ಡ ದಂಡನ್ನು ಬೆಳೆಸಿದರು. ಮಹಿಳೆಯರ ಸಮೂಹಕ್ಕೇ ಧೈರ್ಯ ಕೊಟ್ಟರು. ಹಿಂದೆಲ್ಲ ಕಷ್ಟಪಟ್ಟು, ಮುಜುಗರದಿಂದ, ಆತಂಕದಿಂದಲೇ, ವಿನೀತವಾಗಿ, ನಾನು ಎರಡು ಪದ್ಯ ಹೇಳಲೇ? ಅನ್ನುತ್ತಲೇ ರಂಗ ಏರಿದವರಿದ್ದರು. ಆದರೆ ಈಗಿನ ಪರಿಸ್ಥಿತಿ ಹಾಗಿಲ್ಲ. ಲೀಲಕ್ಕನ ಬಳಿಕ, ಹೆಂಗಸರು ಕೂಡ ಧೈರ್ಯವಾಗಿ, ಗತ್ತಿನಿಂದಲೇ ರಂಗ ಏರತೊಡಗಿದ್ದಾರೆ. ಇಂಥ ಆತ್ಮವಿಶ್ವಾಸ ಕೊಟ್ಟವರು ಲೀಲಕ್ಕ ಎಂದ ಡಾ.ಜೋಶಿ, ಅವರ ಸಾಹಸದ ಹಿಂದೆ ಇರುವ ಬೆನ್ನೆಲುಬು ಪತಿ ಹರಿನಾರಾಯಣ ಬೈಪಾಡಿತ್ತಾಯರು. ಅವಕಾಶವಿದ್ದರೆ, ಅವರಿಬ್ಬರಿಗೂ ವಿಶೇಷವಾಗಿ ದಂಪತಿಗೆ ಜಂಟಿಯಾಗಿ ರಾಜ್ಯೋತ್ಸವ ಪುರಸ್ಕಾರ ಕೊಡಬೇಕಿತ್ತು ಎಂಬ ಪ್ರಸ್ತಾಪ ಮಾಡಿರುವುದನ್ನು ನೆನಪಿಸಿಕೊಂಡರು.

ಲೀಲಕ್ಕನಿಂದ ಇತಿಹಾಸ ಸೃಷ್ಟಿ
ಹೆಂಗಸು ತಿರುಗಾಟ ಮಾಡುವುದೆಂದರೆ ತುಂಬ ತೊಡಕುಗಳಿವೆ. ಇದು ಸತ್ಯವೇ. ಜನರ ಕೆಟ್ಟ ದೃಷ್ಟಿಗೆ ಸಿಲುಕುವುದೇ ಹೆಚ್ಚು. ಆ ದೃಷ್ಟಿಯಲ್ಲಿ, ಕಪ್ಪು ಚುಕ್ಕೆಯಿಲ್ಲದೆ ಮಾತೃತ್ವವನ್ನೂ, ಸಾಹೋದರ್ಯತ್ವವನ್ನೂ ಏಕಕಾಲದಲ್ಲಿ ವ್ಯಕ್ತಪಡಿಸಿದವರು ಲೀಲಕ್ಕ. ಸೌಮ್ಯ, ಸಮಾಧಾನದೊಂದಿಗೆ, ಇಡೀ ಯಕ್ಷಗಾನ ರಂಗದಲ್ಲಿ ಅಕ್ಕನ ರೀತಿಯ ಭಾವನೆ ನಿರ್ಮಾಣ ಮಾಡಿ
ಯಕ್ಷಗಾನ ರಂಗದ ಅಕ್ಕನಾಗಿ ಮೆರೆದವರು ಲೀಲಕ್ಕ ಎಂದರು.

ಗಾನ ಲಯ, ಛಂದೋ ಲಯ, ಅರ್ಥ ಲಯ - ಮೂರೂ ಸರಿ ಇರಬೇಕು ಭಾಗವತರಿಗೆ. ಇಲ್ಲವಾದಲ್ಲಿ ಸಾಹಿತ್ಯ, ರಾಗ, ತಾಳಕ್ಕೆ ತೊಡಕು. ಇದರ ಸ್ಪಷ್ಟ ಕಲ್ಪನೆ ಇದ್ದದ್ದು ಲೀಲಕ್ಕನಲ್ಲಿ. ಅವರ ಶಿಷ್ಯರನ್ನು ಸುಲಭವಾಗಿ ಗುರುತಿಸಬಹುದು. ಅಬ್ಬರವಿಲ್ಲದ, ಜ್ಞಾನ, ಸೌಮ್ಯ ಇರುವ ಭಾಗವತಿಕೆ ಕೇಳಿದರೆ, ಇದು ಲೀಲಾವತಿಯವರ ಶಿಷ್ಯರಿರಬೇಕು ಅಂತ ಗುರುತಿಸಬಹುದು. ಇದುವೇ ಲೀಲಾವತಿ ಪ್ರಜ್ಞೆ ಎಂದ ಅವರು, ಲೀಲಕ್ಕನವರು ಬೇರೆಯ ಕಲಾವಿದರ ಮೂಲಕ ಪುನರ್ಜನ್ಮ ಪಡೆದು ಬರಲಿ. ಲೀಲಾವತಿ ಪ್ರಜ್ಞೆಯ ಭಾಗವತರು ಮುಂದೆ ಬರಲಿ, ಬೆಳೆಯಲಿ ಎಂದು ಹಾರೈಸಿದರು.

ಕಲಾಪೋಷಕ ಪ್ರದೀಪ್ ಕುಮಾರ್ ಕಲ್ಕೂರ, ಸುಧಾಕರ ರಾವ್ ಪೇಜಾವರ, ಚಂದ್ರಶೇಖರ ಭಟ್ ಕೊಂಕಣಾಜೆ, ನೆಲ್ಲಿಮಾರು ಸದಾಶಿವ ರಾವ್, ಸಂಜಯ್ ಕುಮಾರ್, ಶಾಲಿನಿ ಹೆಬ್ಬಾರ್, ಸಾಯಿಸುಮಾ ಮಿಥುನ್ ನಾವಡ, ವಿಜಯ ಗೋಪಾಲ್ ಸುವರ್ಣ (ಕಂದಾವರ ಪಂಚಾಯತ್ ಮಾಜಿ ಅಧ್ಯಕ್ಷೆ), ಶರವೂರು ಶ್ರೀನಿವಾಸ ರಾವ್, ಸುಬ್ರಹ್ಮಣ್ಯ ಬೈಪಾಡಿತ್ತಾಯ ನಂದಳಿಕೆ ಮೊದಲಾದವರು ಅಗಲಿದ ಚೇತನಕ್ಕೆ ನುಡಿನಮನ ಸಲ್ಲಿಸಿದರು. ಪುತ್ರ ಅವಿನಾಶ್ ಬೈಪಾಡಿತ್ತಾಯರು ಅಮ್ಮನ ಬದುಕಿನ ಚಿತ್ರಣ ಮುಂದಿಟ್ಟು, ಯಕ್ಷಗಾನದಲ್ಲಿ ಡಾ.ಜೋಶಿ ಅವರು ಹೇಳಿರುವಂತೆ, 'ಲೀಲಾವತಿ ಪ್ರಜ್ಞೆ' ಮುಂದುವರಿಯಬೇಕು ಎಂದರಲ್ಲದೆ, ಅಮ್ಮನ ಅನಾರೋಗ್ಯದ ಕುರಿತ ಪೂರ್ಣ ಚಿತ್ರಣ ನೀಡಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

ನವೀನ ಹಳೆಯದು