ಯಕ್ಷಗಾನ.ಇನ್ ಅಪ್‌ಡೇಟ್ಸ್ ಪಡೆಯಲು ಫೇಸ್‌ಬುಕ್ | ಟ್ವಿಟರ್ | ಯೂಟ್ಯೂಬ್ | ಇನ್‌ಸ್ಟಾಗ್ರಾಂ ಫಾಲೋ ಮಾಡಿ.
ಶ್ರೀ ಕಣಿಪುರ ಗೋಪಾಲಕೃಷ್ಣ ದೇವಸ್ಥಾನದ ಸಭಾಮಂಟಪದಲ್ಲಿ ಬೆಳಿಗ್ಗೆ 9ರಿಂದ ರಾತ್ರಿ 9ರವರೆಗೆ ನಡೆಯುವ ಕಾರ್ಯಕ್ರಮದಲ್ಲಿ, ಕುಂಬಳೆ ಶ್ರೀಧರ ರಾವ್ ಸ್ಮೃತಿ-ಕೃತಿ 'ಕಲಾ ಶ್ರೀಧರ' ಅನಾವರಣಗೊಳ್ಳಲಿದೆ. ಸಂಜೆ 4ರಿಂದ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಎಡನೀರು ಮಠದ ಶ್ರೀಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಅವರ ಉಪಸ್ಥಿತಿಯಲ್ಲಿ ಕೃತಿಯನ್ನು ಮಾಣಿಲ ಶ್ರೀಧಾಮದ ಶ್ರೀಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಅನಾವರಣಗೊಳಿಸುವರು. ಕರ್ನಾಟಕ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರಾದ ಡಾ.ಟಿ.ಶ್ಯಾಮ್ ಭಟ್ ಅಧ್ಯಕ್ಷತೆ ವಹಿಸುವರು.
ಇದನ್ನೂ ಓದಿ: ಸಜ್ಜನಿಕೆಯ ಕಲಾವಿದ ಕುಂಬಳೆ ಶ್ರೀಧರ ರಾವ್
ಯಕ್ಷಗಾನದ ಹಿರಿಯ ವಿದ್ವಾಂಸ ಡಾ.ಎಂ.ಪ್ರಭಾಕರ ಜೋಶಿ ಅವರು ಶ್ರೀಧರ ರಾವ್ ಅವರನ್ನು ಸ್ಮರಿಸಿಕೊಳ್ಳಲಿದ್ದು, ಅಭ್ಯಾಗತರಾಗಿ ಧರ್ಮಸ್ಥಳದ ಡಿ.ಹರ್ಷೇಂದ್ರ ಕುಮಾರ್, ಕೃತಿಯ ಸಂಪಾದಕ ನಾ.ಕಾರಂತ ಪೆರಾಜ್ ಭಾಗವಹಿಸುವರು.
ಯಕ್ಷಗಾನೀಯ ಕಾರ್ಯಕ್ರಮಗಳು
ಕುಂಬಳೆ ನಾರಾಯಣ ಮಂಗಲದ ಶ್ರೀ ವಿಘ್ನೇಶ್ವರ ಯಕ್ಷಗಾನ ಕಲಾ ಸಂಘ, ಶೇಡಿಕಾವು ಪಾರ್ತಿಸುಬ್ಬ ಯಕ್ಷಗಾನ ಕಲಾ ಸಂಘ ಹಾಗೂ ಕುಂಬಳೆ ಶ್ರೀಧರ ರಾವ್ ಅಭಿಮಾನಿಗಳು ಸಂಘಟಿಸಿರುವ ಈ ಕಾರ್ಯಕ್ರಮವು ಬೆಳಿಗ್ಗೆ 9 ಗಂಟೆಗೆ ಉದ್ಘಾಟನೆಗೊಳ್ಳಲಿದೆ. 9.30ರಿಂದ ಕುಂಬಳೆ ಶ್ರೀಧರ ರಾವ್ ಅವರ ಪ್ರಧಾನ ಪಾತ್ರಗಳ ನೆನವರಿಕೆ ಎಂಬ ವಿಶಿಷ್ಟ ಕಾರ್ಯಕ್ರಮ ನಡೆಯಲಿದೆ.
ಹಿಮ್ಮೇಳದಲ್ಲಿ ದಿನೇಶ ಅಮ್ಮಣ್ಣಾಯ, ಪುತ್ತಿಗೆ ರಘುರಾಮ ಹೊಳ್ಳ, ಸಿರಿಬಾಗಿಲು ರಾಮಕೃಷ್ಣ ಮಯ್ಯ, ಲಕ್ಷ್ಮೀಶ ಅಮ್ಮಣ್ಣಾಯ, ಪಿ.ಜಿ.ಜಗನ್ನಿವಾಸ ರಾವ್, ರಾಮಮೂರ್ತಿ ಕುದ್ರೆಕೂಡ್ಲು, ಲವಕುಮಾರ್ ಐಲ ಭಾಗವಹಿಸುವರು. ಸುದರ್ಶನ ವಿಜಯ ಪ್ರಸಂಗದಲ್ಲಿ ಸುದರ್ಶನನಾಗಿ ಸುಣ್ಣಂಬಳ ವಿಶ್ವೇಶ್ವರ ಭಟ್, ವಿಷ್ಣು ಆಗಿ ಗೋಪಾಲ ನಾಯಕ್ ಸೂರಂಬೈಲು, ಲಕ್ಷ್ಮೀ ಆಗಿ ಶಂಭು ಶರ್ಮ ಪಾತ್ರ ಚಿತ್ರಣ ನೀಡಲಿರುವರು. ಬಳಿಕ ದಮಯಂತಿ ಪ್ರಸಂಗದ ಸುದೇವನಾಗಿ ವಸಂತ ಗೌಡ ಕಾಯರ್ತಡ್ಕ, ದಮಯಂತಿಯಾಗಿ ಎಂ.ಕೆ.ರಮೇಶ ಆಚಾರ್ಯ, ಚೈದ್ಯರಾಣಿಯಾಗಿ ದಿವಾಕರ ಆಚಾರ್ಯ ಗೇರುಕಟ್ಟೆ ಪಾತ್ರಗಳನ್ನು ಕಟ್ಟಿಕೊಡಲಿದ್ದಾರೆ.
ಮಧ್ಯಾಹ್ನ 1 ಗಂಟೆಯಿಂದ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನದ ಸಂಯೋಜನೆಯಲ್ಲಿ ಯಕ್ಷಗಾನ ತಾಳಮದ್ದಳೆ ಕೃಷ್ಣ ಸಂಧಾನ ಪ್ರಸ್ತುತಿಗೊಳ್ಳಲಿದೆ. ಕೃಷ್ಣನಾಗಿ ಉಜಿರೆ ಅಶೋಕ ಭಟ್, ಕೌರವನಾಗಿ ಡಾ.ಎಂ.ಪ್ರಭಾಕರ ಜೋಶಿ, ವಿದುರನಾಗಿ ಅಶೋಕ ಕುಂಬ್ಳೆ ಭಾಗವಹಿಸುವರು.
ಸಭಾ ಕಾರ್ಯಕ್ರಮದ ಬಳಿಕ ಶ್ರೀ ಮಹಾಲಕ್ಷ್ಮೀ ಕೃಪಾಪೋಷಿತ ಯಕ್ಷಗಾನ ಮಂಡಳಿ, ಶ್ರೀಧಾಮ, ಮಾಣಿಲ - ಇದರ ವತಿಯಿಂದ, ಸತೀಶ್ ಪುಣಿಂಚತ್ತಾಯ, ಪೆರ್ಲ ಇವರ ಸಂಯೋಜನೆಯಲ್ಲಿ ಕಂಸ ವಧೆ ಯಕ್ಷಗಾನ ಪ್ರಸಂಗ ಪ್ರದರ್ಶನಗೊಳ್ಳಲಿದೆ.