ಸಜ್ಜನಿಕೆಯ ಅಪರೂಪದ ವ್ಯಕ್ತಿತ್ವ, ಯಕ್ಷಗಾನ ಕಲಾವಿದ ಕು೦ಬ್ಳೆ ಶ್ರೀಧರ ರಾವ್ ನಿಧನ

ಕುಂಬಳೆ ಶ್ರೀಧರ ರಾವ್ ಮತ್ತವರ ವೇಷಗಳ ವೈವಿಧ್ಯ. ಚಿತ್ರಕೃಪೆ: ಅಂತರ್ಜಾಲದ ವಿವಿಧ ತಾಣಗಳು

ಪುತ್ತೂರು: ಸ್ತ್ರೀಪಾತ್ರಧಾರಿಯಾಗಿ ಮಿಂಚಿ, ಪುರುಷ ಪಾತ್ರಗಳಿಗೂ ಸೈ ಅನ್ನಿಸಿಕೊಂಡು, ಕ್ಯಾಸೆಟ್ ಕಾಲದಲ್ಲಿಯೇ ಎಲ್ಲರ ಮನೆಮಾತಾಗಿದ್ದ ಯಕ್ಷಗಾನ ಕಲಾವಿದ ಕುಂಬ್ಳೆ ಶ್ರೀಧರ ರಾವ್ ಅವರು ಶುಕ್ರವಾರ ಪುತ್ತೂರು ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನರಾದರು. ಅವರಿಗೆ 76 ವರ್ಷ ವಯಸ್ಸಾಗಿತ್ತು.

ಸರಳ ಸಜ್ಜನಿಕೆ ಜೊತೆಗೆ ಅತ್ಯುತ್ತಮ ಮಾತುಗಾರಿಕೆ, ಭಾವಪೂರ್ಣ ಅಭಿನಯಕ್ಕೆ ಹೆಸರಾಗಿದ್ದ ಕುಂಬ್ಳೆ ಶ್ರೀಧರ ರಾವ್ ಅವರಿಗೆ ಬೆಳಿಗ್ಗೆ ಎದೆನೋವು ಕಾಣಿಸಿಕೊಂಡಿತ್ತು. ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ಅವರು ನಿಧನರಾಗಿದ್ದು, ಯಕ್ಷಗಾನದ ಅಭಿಮಾನಿಗಳು ಆಘಾತಕ್ಕೀಡಾಗಿದ್ದಾರೆ.

ಯಕ್ಷಗಾನ.ಇನ್ ಅಪ್‌ಡೇಟ್ಸ್ ಪಡೆಯಲು ಫೇಸ್‌ಬುಕ್ | ಟ್ವಿಟರ್ | ಯೂಟ್ಯೂಬ್ ಇನ್‌ಸ್ಟಾಗ್ರಾಂ ಫಾಲೋ ಮಾಡಿ. ಹಾಗೂ ನಮ್ಮ ಯಕ್ಷಗಾನ.ಇನ್ ವಾಟ್ಸ್ಆ್ಯಪ್ ಚಾನೆಲ್ ಸೇರಿಕೊಳ್ಳಿ.   

ಕುಂಬ್ಳೆ ಶ್ರೀಧರ ರಾವ್: ಎಲ್ಲ ಪಾತ್ರಗಳಿಗೂ ಸೈ
ಧರ್ಮಸ್ಥಳ ಕ್ಷೇತ್ರ ಮಹಾತ್ಮೆಯ ಅಮ್ಮು ಬಲ್ಲಾಳ್ತಿ, ದಕ್ಷ ಯಜ್ಞದ ದಾಕ್ಷಾಯಿಣಿ ಹಾಗೂ ಲಕ್ಷ್ಮೀ, ಸುಭದ್ರೆ ಮುಂತಾದ ಸ್ತ್ರೀ ಪಾತ್ರಗಳಿಗೆ ಜೀವಂತಿಕೆ ತುಂಬಿದವರು ಕುಂಬ್ಳೆ ಶ್ರೀಧರ ರಾವ್. ಕಲ್ಲಾಡಿ ಕೊರಗ ಶೆಟ್ಟರ ಇರಾ ಮೇಳದಿಂದ ಯಕ್ಷಗಾನ ರಂಗದಲ್ಲಿ ತೊಡಗಿಕೊಂಡ ಶ್ರೀಧರ ರಾಯರು ಮುಂದೆ ಕೂಡ್ಲು, ಪುನಃ ವಿಠಲ ಶೆಟ್ರ ಇರಾ (ಕುಂಡಾವು), ಮೂಲ್ಕಿ, ಕರ್ನಾಟಕ ಮೇಳಗಳಲ್ಲಿ ತಿರುಗಾಟ ನಡೆಸಿ, ಧರ್ಮಸ್ಥಳ ಮೇಳದಲ್ಲಿ ನಿರಂತರವಾಗಿ ಐದು ದಶಕಗಳಿಗೂ ಕಾಲ ಸೇವೆ ಸಲ್ಲಿಸಿದ ಸಾಧನೆ ಅವರದು.

ಸಜ್ಜನಿಕೆಯ ಅಪರೂಪದ ವ್ಯಕ್ತಿತ್ವ
ಕುಂಬಳೆ ಕಮಲಾಕ್ಷ ನಾಯಕ್ ಮತ್ತು ಪಡ್ರೆ ಚಂದು ಅವರಲ್ಲಿ ನಾಟ್ಯಾಭ್ಯಾಸ ಮಾಡಿದ್ದ ಅವರು ಉಡುಪಿ ಕಲಾ ಕೇಂದ್ರದಲ್ಲಿ ಒಂದು ಮಳೆಗಾಲದಲ್ಲಿ ಬಡಗು ನೃತ್ಯಾಭ್ಯಾಸವನ್ನೂ ಮಾಡಿದ್ದರು.

ಶೇಣಿ ಗೋಪಾಲಕೃಷ್ಣ ಭಟ್ ಅವರ ರಾವಣ, ವಾಲಿ ಪಾತ್ರಗಳಿಗೆ ಮಂಡೋದರಿ, ತಾರೆಯಾಗಿ ಅರ್ಥ ಹೇಳುತ್ತಲೇ ಬೆಳೆದ ಶ್ರೀಧರ ರಾಯರ ವಾಗ್ವೈಖರಿ ಕೇಳಿದರೆ ರೋಮಾಂಚನ. ಅವರು ಕಲಿತದ್ದು 3ನೇ ತರಗತಿಯಾದರೂ, ಮಾಡಿದ ಸಾಧನೆ ಅಗಾಧ. ಇರಾ ಮೇಳದಲ್ಲಿ 'ಕನಕಮಾಲಿನಿ ಪರಿಣಯ' ಪ್ರಸಂಗದಲ್ಲಿ ಅರುವ ಕೊರಗಪ್ಪ ಶೆಟ್ಟರ 'ಪುಷ್ಪಧ್ವಜ'ನೊಂದಿಗೆ ಇವರ 'ಕನಕಮಾಲಿನಿ' ಪಾತ್ರ, ಕುಂಬಳೆ ಸುಂದರ ರಾಯರ ವಿಷ್ಣು, ಶ್ರೀಧರ ರಾಯರ ಲಕ್ಷ್ಮಿ, ಪುತ್ತೂರು ನಾರಾಯಣ ಹೆಗ್ಡೆಯವರ ಹಿರಣ್ಯಕಶಿಪು, ಶ್ರೀಧರರ ಕಯಾದು, ಹೆಗ್ಡೆಯವರ ಋತುಪರ್ಣನಿಗೆ ಇವರ ದಮಯಂತಿ, ಗೋವಿಂದ ಭಟ್ಟರ ಋತುಪರ್ಣನಿಗೂ ದಮಯಂತಿ, ಕುಂಬ್ಳೆ ಸುಂದರ ರಾವ್ ಈಶ್ವರ, ಕುಂಬ್ಳೆ ಶ್ರೀಧರ ರಾವ್ ದಾಕ್ಷಾಯಿಣಿ ಇವೆಲ್ಲ ಪಾತ್ರಗಳು ಮನೆಮಾತಾಗಿದ್ದವು. ಅದೇ ರೀತಿ, ಪುತ್ತೂರು ಶ್ರೀಧರ ಭಂಡಾರಿಯವರ ಬಭ್ರುವಾಹನ, ಅಭಿಮನ್ಯು ಪಾತ್ರಗಳೆದುರು ಶ್ರೀಧರ ರಾಯರ ಚಿತ್ರಾಂಗದೆ, ಸುಭದ್ರೆ ಜತೆಗಾರಿಕೆ ಮರೆಯಲಾಗದ ನೆನಪುಗಳು. ಸೀತಾ ಪರಿತ್ಯಾಗದ ಸೀತೆ, ಭೀಷ್ಮ ವಿಜಯದ ಅಂಬೆ ಪಾತ್ರ ಪ್ರೇಕ್ಷಕರ ಮನದಲ್ಲಿ ಅಚ್ಚೊತ್ತಿದೆ.

ಧರ್ಮಸ್ಥಳ ಮೇಳವೊಂದರಲ್ಲೇ ಐವತ್ತರಷ್ಟು ವರ್ಷ ತಿರುಗಾಟ ನಡೆಸಿರುವ ಶ್ರೀಧರ ರಾಯರು, ಕ್ಷೇತ್ರ ಮಹಾತ್ಮೆಯ ಅಮ್ಮುಬಲ್ಲಾಳ್ತಿ ಪಾತ್ರಕ್ಕೆ ಹೊಸ ಹೊಳಹು ನೀಡಿದವರು. ಅದುವರೆಗೆ ಪಾತಾಳ ವೆಂಕಟರಮಣ ಭಟ್ಟರು ಈ ಪಾತ್ರವನ್ನು ಮೇಲ್ಮಟ್ಟಕ್ಕೆ ಏರಿಸಿದ್ದರು.

ಗರತಿ ಪಾತ್ರಗಳನ್ನು ಭಕ್ತಿ, ಕರುಣ ರಸಗಳೊಂದಿಗೆ ಮೆರೆಸಿದ ಶ್ರೀಧರ ರಾಯರಿಗೆ ಸ್ತ್ರೀಪಾತ್ರಕ್ಕೆ ಒಪ್ಪುವ ಶಾರೀರವೂ ಇತ್ತು. ಹಿತ ಮಿತವಾದ ನಾಟ್ಯ, ಉತ್ತಮ ರಂಗ ನಡೆ, ಶುಚಿ-ರುಚಿಯ ಮಾತುಗಾರಿಕೆಯಿಂದ ಗಮನ ಸೆಳೆದ ಅವರು, ಕಾಲಾಂತರದಲ್ಲಿ ಪುರುಷ ಪಾತ್ರಗಳತ್ತ ಗಮನ ಹರಿಸಿದರು. ಸ್ತ್ರೀಪಾತ್ರಗಳ ಮಾಧುರ್ಯ, ಲಾಲಿತ್ಯಕ್ಕೆ ಒಗ್ಗಿಹೋಗಿದ್ದ ಅವರು, ಪುರುಷ ವೇಷಕ್ಕೆ ಬೇಕಾದ ಗಾಂಭೀರ್ಯ, ಗತ್ತುಗಳನ್ನು ಮೈಗೂಡಿಸಿಕೊಳ್ಳಲು ಹೆಚ್ಚೇನೂ ಸಮಯ ಬೇಕಾಗಲಿಲ್ಲ. ಪಕಡಿ ವೇಷ, ಕಿರೀಟ ವೇಷ ಎರಡರಲ್ಲೂ ಮೆರೆದರು. ಕೃಷ್ಣನಾದರು, ಅರ್ಜುನನೂ ಆದರು, ಬಲರಾಮನೂ ಆದರು. ದೇವಿ ಮಹಾತ್ಮೆಯಲ್ಲಿ ಶ್ರೀದೇವಿಯಾಗಿ ಮತ್ತು ರಕ್ತಬೀಜನಾಗಿಯೂ ಗಮನ ಸೆಳೆದರು. ಧರ್ಮಸ್ಥಳ ಕ್ಷೇತ್ರ ಮಹಾತ್ಮೆಯಲ್ಲಿ ಈಶ್ವರ ಪಾತ್ರಕ್ಕಂತೂ ಇವರು ಮಾಡಿದ ಪಾತ್ರಪೋಷಣೆ ಅನನ್ಯ.

ಜನನ, ಬಾಲ್ಯ
1948ರಲ್ಲಿ ಕಾಸರಗೋಡು ಜಿಲ್ಲೆಯ ಕುಂಬಳೆಯಲ್ಲಿ ಮಹಾಲಿಂಗ ಮತ್ತು ಕಾವೇರಿ ದಂಪತಿಯ ಪುತ್ರರಾಗಿ ಜನಿಸಿದ ಶ್ರೀಧರ ರಾವ್‌, 34 ನೆಕ್ಕಿಲಾಡಿ ಗ್ರಾಮದ ಶಾಂತಿನಗರ ಸಮೀಪದ ಬೇರಿಕೆಯಲ್ಲಿ ವಾಸವಾಗಿದ್ದರು. ಪತ್ನಿ ಸುಲೋಚನಾ ಅಧ್ಯಾಪಿಕೆ. ಮೂವರು ಮಕ್ಕಳು. ಉಪ್ಪಿನಂಗಡಿ ಸನಿಹದ ಕೃಷ್ಣನಗರದಲ್ಲಿ ವಾಸ. 

ಕರ್ನಾಟಕ ಯಕ್ಷಗಾನ ಅಕಾಡೆಮಿ ಪ್ರಶಸ್ತಿ, ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರ ಪಟ್ಟಾಭಿಷೇಕದ ಸಂದರ್ಭದಲ್ಲಿ ಸನ್ಮಾನ, ಎಡನೀರು ಮಠದ ಸನ್ಮಾನ, ಶೇಣಿ ಹೆಸರಿನಲ್ಲಿ ಗೌರವ ಅವರಿಗೆ ದೊರೆತಿವೆ.

ಸಾಧಾರ: ನಾ.ಕಾರಂತ ಪೆರಾಜೆ ಅವರ ಬರಹ

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

ನವೀನ ಹಳೆಯದು