ಸಂಜೀವ ಸುವರ್ಣರಿಗೆ 'ಪಾರ್ತಿ ಸುಬ್ಬ'; ಅಮ್ಮಣ್ಣಾಯ, ಜಬ್ಬಾರ್, ಪೊಲ್ಯ, ವಿದ್ವಾನ್‌ಗೆ ಯಕ್ಷಗಾನ ಅಕಾಡೆಮಿ ಪುರಸ್ಕಾರ, ಯಾರಿಗೆಲ್ಲ ಪ್ರಶಸ್ತಿ? ಇಲ್ಲಿದೆ ವಿವರ



ಯಕ್ಷಗಾನ ಅಕಾಡೆಮಿ ಪ್ರಶಸ್ತಿ 2023

ಉಡುಪಿ: ಕರ್ನಾಟಕ ಯಕ್ಷಗಾನ ಅಕಾಡೆಮಿಯ 2023ನೇ ಸಾಲಿನ ಪ್ರಶಸ್ತಿಗಳನ್ನು ಘೋಷಿಸಿದ್ದು, ಪ್ರತಿಷ್ಠಿತ ‘ಪಾರ್ತಿಸುಬ್ಬ ಪ್ರಶಸ್ತಿ’ಗೆ ಯಕ್ಷಗಾನದ ಹಿರಿಯ ಗುರು ಉಡುಪಿಯ ಬನ್ನಂಜೆ ಸಂಜೀವ ಸುವರ್ಣ ಆಯ್ಕೆಯಾಗಿದ್ದಾರೆ. ಇದೇ ಸಂದರ್ಭದಲ್ಲಿ ಐದು ಮಂದಿಗೆ ಗೌರವ ಪ್ರಶಸ್ತಿ ಹಾಗೂ 10 ಮಂದಿಗೆ ಯಕ್ಷ ಸಿರಿ ಪ್ರಶಸ್ತಿ, ನಾಲ್ಕು ಮಂದಿಗೆ ಪುಸ್ತಕ ಬಹುಮಾನ ಪ್ರಶಸ್ತಿ, ಒಬ್ಬರಿಗೆ ದತ್ತಿನಿಧಿ ಪ್ರಶಸ್ತಿಯನ್ನು ಕರ್ನಾಟಕ ಯಕ್ಷಗಾನ ಅಕಾಡೆಮಿಯು ಘೋಷಿಸಿದೆ.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಪ್ರಶಸ್ತಿ ಘೋಷಿಸಿದ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ, ಪಾರ್ತಿಸುಬ್ಬ ಪ್ರಶಸ್ತಿಯು ₹1ಲಕ್ಷ ನಗದು ಒಳಗೊಂಡಿದ್ದು, ಎಲ್ಲ ಕಲಾವಿದರಿಗೆ ಪ್ರಶಸ್ತಿ ಪ್ರದಾನ ಸಮಾರಂಭವನ್ನು ನವೆಂಬರ್ ತಿಂಗಳಲ್ಲಿ ಮಂಗಳೂರಿನಲ್ಲಿ ನಡೆಸಲಾಗುತ್ತದೆ ಎಂದರು.

ಯಕ್ಷಗಾನ.ಇನ್ ಅಪ್‌ಡೇಟ್ಸ್ ಪಡೆಯಲು ಫೇಸ್‌ಬುಕ್ | ಟ್ವಿಟರ್ | ಯೂಟ್ಯೂಬ್ ಇನ್‌ಸ್ಟಾಗ್ರಾಂ ಫಾಲೋ ಮಾಡಿ.

ಯಕ್ಷಗಾನ ಕಲಾವಿದರಾದ, ತೆಂಕು ತಿಟ್ಟಿನ ಅಗ್ರಮಾನ್.ಭಾಗವತ ದಿನೇಶ್‌ ಅಮ್ಮಣ್ಣಾಯ, ಅರ್ಥಧಾರಿ ಎಂ. ಜಬ್ಬಾರ್‌ ಸಮೋ ಸಂಪಾಜೆ, ಭಾಗವತರಾದ ಪೊಲ್ಯ ಲಕ್ಷ್ಮೀನಾರಾಯಣ ಶೆಟ್ಟಿ, ಹಿರಿಯ ಯಕ್ಷಗಾನ ಪಾತ್ರಧಾರಿ ಚೆನ್ನಪ್ಪ ಗೌಡ ಸಜಿಪ, ಮೂಡಲಪಾಯ ಯಕ್ಷಗಾನ ಭಾಗವತ ನಾರಾಯಣಪ್ಪ ಎ.ಆರ್. ಅವರನ್ನು ಅಕಾಡೆಮಿಯ ಗೌರವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಈ ಪ್ರಶಸ್ತಿಯು ತಲಾ ₹50 ಸಾವಿರ ನಗದು ಒಳಗೊಂಡಿದೆ.

ಅಕಾಡೆಮಿಯ ಯಕ್ಷಸಿರಿ ವಾರ್ಷಿಕ ಪ್ರಶಸ್ತಿಗೆ ತೆಂಕು ತಿಟ್ಟು ಯಕ್ಷಗಾನ ಕಲಾವಿದ ರಘುನಾಥ ಶೆಟ್ಟಿ ಬಾಯಾರು, ಪ್ರಸಾಧನ ತಜ್ಞ, ತೆಂಕು ತಿಟ್ಟು ಕಲಾವಿದ ದಿವಾಕರ ದಾಸ ಕಾವಳಕಟ್ಟೆ, ತೆಂಕು ತಿಟ್ಟು ವೇಷಧಾರಿ ಸುಬ್ರಾಯ ಪಾಟಾಳಿ ಸಂಪಾಜೆ, ಬಡಗು ತಿಟ್ಟು ವೇಷಧಾರಿ ನರಾಡಿ ಭೋಜರಾಜ ಶೆಟ್ಟಿ, ಬಡಗು ತಿಟ್ಟು ಚೆಂಡೆ ವಾದಕ ಸದಾನಂದ ಪ್ರಭು ಬೈಂದೂರು, ಬಡಗು ತಿಟ್ಟು ಹಾಸ್ಯಗಾರ ಹೊಳೆಮಗೆ ನಾಗಪ್ಪ ಮರಕಾಲ, ಬಡಗು ತಿಟ್ಟು ವೇಷಧಾರಿ ಶಿರಳಗಿ ತಿಮ್ಮಪ್ಪ ಹೆಗಡೆ, ತೆಂಕು -ಬಡಗು ವೇಷಧಾರಿ ಬಾಬು ಕುಲಾಲ್‌ ಹಳ್ಳಾಡಿ, ಮೂಡಲಪಾಯದ ಭಾಗವತ ಶಿವಯ್ಯ ತುಮಕೂರು ಹಾಗೂ ಮೂಡಲಪಾಯ ಭಾಗವತ ಜೀಯಪ್ಪ, ಕೋಲಾರ ಅವರನ್ನು ಆಯ್ಕೆ ಮಾಡಲಾಗಿದ್ದು, ಪ್ರಶಸ್ತಿಯು ತಲಾ ₹25 ಸಾವಿರ ನಗದನ್ನು ಒಳಗೊಂಡಿದೆ ಎಂದರು.

ಕರ್ಕಿ ಹಿರಿಯ ಪರಮಯ್ಯ ಹಾಸ್ಯಗಾರ ದತ್ತಿನಿಧಿ ಪ್ರಶಸ್ತಿಗೆ ಬಡಗುತಿಟ್ಟು ಭಾಗವತರಾದ ಗೋಪಾಲಕೃಷ್ಣ ಶಂಕರ ಭಟ್‌ ಜೋಗಿಮನೆ ಅವರನ್ನು ಆಯ್ಕೆ ಮಾಡಲಾಗಿದೆ. ಈ ಪ್ರಶಸ್ತಿಯು  ₹25 ಸಾವಿರ ನಗದನ್ನು ಒಳಗೊಂಡಿದೆ.

2022ನೇ ಸಾಲಿನ ಪುಸ್ತಕ ಬಹುಮಾನಕ್ಕೆ ವಿದ್ವಾನ್‌ ಗಣಪತಿ ಭಟ್‌, ಮನೋರಮಾ ಬಿ.ಎನ್‌. ಹಾಗೂ 2023ನೇ ಸಾಲಿನ ಪುಸ್ತಕ ಬಹುಮಾನಕ್ಕೆ ಸತೀಶ್‌ ಜಿ. ನಾಯ್ಕ ಮತ್ತು ಎಚ್‌ . ಸುಜಯೀಂದ್ರ ಹಂದೆ ಅವರನ್ನು ಆಯ್ಕೆ ಮಾಡಲಾಗಿದೆ. ತಲಾ ₹25 ಸಾವಿರ ನಗದನ್ನು ಈ ಬಹುಮಾನವು ಒಳಗೊಂಡಿದೆ.

ಪ್ರಶಸ್ತಿ ಪ್ರದಾನ ಸಮಾರಂಭವು ನವೆಂಬರ್‌ 2ನೇ ಅಥವಾ 3ನೇ ವಾರದಲ್ಲಿ ಮಂಗಳೂರಿನ ಟೌನ್‌ಹಾಲ್‌ನಲ್ಲಿ ನಡೆಯಲಿದೆ. ಪತ್ರಿಕಾಗೋಷ್ಠಿಯಲ್ಲಿ ಅಕಾಡೆಮಿ ರಿಜಿಸ್ಟ್ರಾರ್‌ ನಮ್ರತಾ ಎನ್‌., ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಉಪಸ್ಥಿತರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

ನವೀನ ಹಳೆಯದು