ಪುತ್ತೂರಿನಲ್ಲಿ ಜು.1ರಿಂದ ಪದ್ಯಾಣ ಸಂಸ್ಮರಣೆ ಮತ್ತು ಯಕ್ಷಗಾನ ತಾಳಮದ್ದಳೆ ಸಪ್ತಾಹ ಹಿನ್ನೆಲೆಯಲ್ಲಿ ಪದ್ಯಾಣ ಭಾಗವತರನ್ನು ನೆನಪಿಸಿಕೊಂಡಿದ್ದಾರೆ ಕುಮಾರ ಸುಬ್ರಹ್ಮಣ್ಯ ಮುಳಿಯಾಲ.
ಯಕ್ಷಗಾನ ರಂಗಭೂಮಿಯಲ್ಲಿ ಶಾಶ್ವತ ನೆನಪುಗಳನ್ನು ಉಳಿಸಿ ಹೋದ ಭಾಗವತ ದಿ| ಶ್ರೀ ಪದ್ಯಾಣ ಗಣಪತಿ ಭಟ್ಟರ ಹೆಸರಿನಲ್ಲಿ ದೊಡ್ಡದೊಂದು ಸಂಸ್ಮರಣಾ ಕಾರ್ಯಕ್ರಮ ಈ ಮೊದಲೇ ಆಗಬೇಕಿತ್ತು. ಈಗ ಕುರಿಯ ಪ್ರತಿಷ್ಠಾನದ ಉಜಿರೆ ಅಶೋಕ ಭಟ್ಟರು ಮುತುವರ್ಜಿ ವಹಿಸಿ ಕಲಾಭಿಮಾನಿಗಳ ಸಹಕಾರದೊಂದಿಗೆ ಪುತ್ತೂರಿನಲ್ಲಿ ಪದ್ಯಾಣ ಸಂಸ್ಮರಣೆ ಮತ್ತು ಯಕ್ಷಗಾನ ತಾಳಮದ್ದಳೆ ಸಪ್ತಾಹ ಆಯೋಜಿಸುವುದರ ಮೂಲಕ ಕೊರತೆಯೊಂದನ್ನು ನೀಗಿಸಿದ್ದಾರೆ. ಈ ಸಂದರ್ಭದಲ್ಲಿ ಸಿರಿಬಾಗಿಲು ಪ್ರತಿಷ್ಠಾನದ "ಮರೆಯಲಾಗದ ಮಹಾನುಭಾವರು" ಪುಸ್ತಕಕ್ಕಾಗಿ ಬರೆದ ಪದ್ಯಾಣದವರ ಬಗೆಗಿನ ಲೇಖನವನ್ನು ಕುಮಾರ ಸುಬ್ರಹ್ಮಣ್ಯ ಮುಳಿಯಾಲ ಹಂಚಿಕೊಂಡಿದ್ದಾರೆ.
ಪದ್ಯಾಣ ಗಣಪತಿ ಭಟ್ (21-01-1955 ರಿಂದ 12-10-2021)
ಪದ್ಯಾಣ ಕೇವಲ ಒಂದು ಭೌಗೋಳಿಕ ಪರಿಸರದ ಹೆಸರಲ್ಲ. ಇಲ್ಲಿ ಯಕ್ಷಗಾನದ ಉಸಿರಿದೆ, ಇಲ್ಲಿ ಯಕ್ಷಗಾನದ ಮಿಡಿತ ಇದೆ, ಇಲ್ಲಿ ಯಕ್ಷಗಾನದ ನುಡಿತ ಇದೆ! ಇಲ್ಲಿ ಯಕ್ಷಗಾನದ ಪರಿಮಳವಿದೆ! ಮತ್ತು ಇಲ್ಲಿ ಯಕ್ಷಗಾನದ ತಲೆಮಾರೇ ಇದೆ! ಎಲ್ಲಿಯ ತನಕ ಯಕ್ಷಗಾನವಿರುತ್ತದೆಯೋ ಅಲ್ಲಿಯವರೆಗೂ ಕಲಾಯಾನದ ಪಯಣದಲ್ಲಿ "ಪದ್ಯಾಣ" ಹೆಸರು ಸ್ಥಾಯಿಯಾಗಿರುತ್ತದೆ. ಪದ್ಯಾಣ ಮನೆತನವೇ ಹಾಗೆ, ಯಕ್ಷಗಾನದ ಪದ, ತಾಳ, ರಾಗದೊಂದಿಗೆ ಸಾಗಿ ಬಂದ ಮನೆತನ. ಆ ಕಾರಣದಿಂದಲೇ ಹೇಳಿದ್ದು, ಯಕ್ಷಗಾನವೆಂಬುದು ಪದ್ಯಾಣ ಮನೆತನದ ಉಸಿರು.
ಯಾರೂ ಅನುಕರಿಸಲಾಗದ, ಆದರೆ ಅನುಸರಣೆಗೆ ಪ್ರಯತ್ನಿಸಬಹುದಾದ ಯಕ್ಷಗಾನದ ಮೇರು ಅರ್ಥಧಾರಿ ದಿ| ಡಾ.ಶೇಣಿ ಗೋಪಾಲಕೃಷ್ಣ ಭಟ್ಟರು ಅತ್ಯಂತ ಮೆಚ್ಚಿದ, ತನ್ನದೇ ಶೈಲಿಯನ್ನು ಸ್ಥಾಪಿಸಿ ಪದ್ಯಾಣ ಶೈಲಿ ಹುಟ್ಟು ಹಾಕಿದ, ಅಪಾರ ಅಭಿಮಾನಿಗಳನ್ನು ಹೊಂದಿದ, ಮೆಲುಕು ಹಾಕುವ ಪದಗಳಿಂದ ಪ್ರೇಕ್ಷಕರ ಮನಸ್ಸಿನಲ್ಲಿ ಸ್ಥಾಯಿಯಾದ, ತೆಂಕುತಿಟ್ಟು ಯಕ್ಷಗಾನ ಕ್ಷೇತ್ರ ಕಂಡ ಸರ್ವ ಸಮರ್ಥ ಭಾಗವತ ಮತ್ತು ನಿರ್ದೇಶಕ ದಿ.ಪದ್ಯಾಣ ಗಣಪತಿ ಭಟ್ಟರು. ಎಲ್ಲರ ಪ್ರೀತಿಯ ಗಣಪ್ಪಣ್ಣ.
ಭಾಗವತಿಕೆಯಲ್ಲಿ ವಿಶಿಷ್ಟ ಶೈಲಿ!
ಪದ್ಯಾಣರದ್ದು ಏರು ಸ್ಥಾಯಿಯಲ್ಲಿ ಪದ್ಯವನ್ನು ತೆಗೆಯುವ ಶೈಲಿ ವಿಶಿಷ್ಟವಾದದ್ದು. ಪಾತ್ರದ ಮನೋಧರ್ಮಕ್ಕನುಗುಣವಾಗಿ ಪದ ಹೇಳುವ ಗಣಪ್ಪಣ್ಣನ ಶೈಲಿ ಅತ್ಯಂತ ಪ್ರಭಾವಶಾಲಿಯಾದದ್ದು. ಗಣಪಣ್ಣನಿಗೆ ರಾಗದ ಖಚಿತತೆಯಿತ್ತು. ತಾಳದ ಸ್ಪಷ್ಟತೆಯಿತ್ತು. ಭಾವದ ಪ್ರಸ್ತುತಿಯಿತ್ತು. ಹಿಮ್ಮೇಳದವರೊದಿಗೆ ಪೂರಕತೆಯಿತ್ತು. ಪರಿಪೂರ್ಣ ಭಾಗವತನಿಗಿರಬೇಕಾದ ಮೊದಲಾದ್ಯತೆಯ ಸರ್ವಾಂಗೀಣ ಅರ್ಹತೆಗಳೆಲ್ಲವೂ ಇದ್ದವು.
ಕುಂಡಾವು, ಸುರತ್ಕಲ್, ಮಂಗಳಾದೇವಿ, ಬಪ್ಪನಾಡು, ಎಡನೀರು, ಹೊಸನಗರ ಹಾಗೂ ಹನುಮಗಿರಿ ಮೇಳಗಳಲ್ಲಿ ಐದು ದಶಕಗಳ ಕಲಾಸೇವೆ ಮಾಡಿದ್ದಾರೆ. ಕನ್ನಡ, ತುಳು ಎರಡೂ ಭಾಷೆಗಳಲ್ಲಿ ಸಮರ್ಥವಾಗಿ ಭಾಗವತಿಕೆ ಮಾಡಿ ಕಲಾರಸಿಕರ ಮನ ಗೆದ್ದಿದ್ದಾರೆ. ಸಂಗೀತ ಜ್ಞಾನವುಳ್ಳ ಪದ್ಯಾಣರು ಯಕ್ಷಗಾನದ ಪದ್ಯಗಳಿಗೆ ಹೊಸ ರಾಗ ಸಂಯೋಜನೆ ಮಾಡಿದವರಾಗಿದ್ದಾರೆ. ಗಣಪ್ಪಣ್ಣ ರಾಗವನ್ನು ಬಳಸುವ ಕ್ರಮ, ಅದನ್ನು ದುಡಿಸಿಕೊಳ್ಳುವ ರೀತಿ, ಆವರ್ತನಗಳು, ಆಲಾಪನೆಗಳು ಅನ್ಯಾದೃಶ. ಗಣಪ್ಪಣ್ಣನ ಗೇಯ ಪದ್ಧತಿ ಮತ್ತು ಗಾನ ಪ್ರಸ್ತುತಿ ವಿಶಿಷ್ಟವಾದದ್ದು. ಅದು ಅವರಿಗೆ ಪರಂಪರಾನುಗತವಾಗಿ ಸಿದ್ಧಿಸಿದ್ದು ಎಂದರೆ ತಪ್ಪಾಗಲಾರದು.
ವಾಸಂತಿ ರಾಗದಲ್ಲಿ ಗಣಪ್ಪಣ್ಣನದ್ದು ಕ್ಲಾಸಿಕ್ ಪ್ರಸ್ತುತಿ. ಯಕ್ಷಗಾನದಲ್ಲಿ ಬಳಕೆಯಲ್ಲಿದ್ದ ವೃಂದಾವನ ಸಾರಂಗ, ರೇವತಿ, ಯಮನ್ ಕಲ್ಯಾಣಿ ರಾಗಗಳನ್ನು ಸಮರ್ಥವಾಗಿ ಬಳಸಿದ ಅದ್ಭುತ ಭಾಗವತ. ಗಣಪ್ಪಣ್ಣರ ಭಾಗವತಿಕೆಯಲ್ಲಿ ಸಾಹಿತ್ಯ ಸ್ಪಷ್ಟತೆ ನಿಖರವಾಗಿತ್ತು. ಪಾತ್ರಧಾರಿಗಳನ್ನು ಹುರಿದುಂಬಿಸುವ೦ತೆ ಪದ ಹೇಳುತ್ತಿದ್ದರು. ಪದದ ಭಾವವನ್ನು ಬಡಿದೇಳಿಸುತ್ತಿದ್ದರು. ಭಕ್ತಿ ಮತ್ತು ಕರುಣಾ ರಸದ ಪದಗಳಲ್ಲಂತೂ ಪದ್ಯಾಣರು ಪ್ರೇಕ್ಷಕರನ್ನು ಮಂತ್ರಮುಗ್ಧರಾಗಿಸುತ್ತಿದ್ದರು.
'ಸಂಗೀತಾ' ಸಂಸ್ಥೆಯವರು ಬಿಡುಗಡೆಗೊಳಿಸಿದ ಕರ್ಣಾವಸಾನ ಧ್ವನಿ ಸುರುಳಿಯಲ್ಲಿ ಪುತ್ತಿಗೆ ಮತ್ತು ಪದ್ಯಾಣರ ದ್ವಂದ್ವ ಭಾಗವತಿಗೆ. ಇದರಲ್ಲಿ ಪದ್ಯಾಣರ ಪದ ಸಾರ್ವಕಾಲಿಕ ದಾಖಲೆ, "ಶಿವ ಶಿವಾ ಸಮರದೊಳು... ಎನ್ನ ಕುಲವ ಕೃಷ್ಣನು ಎಚ್ಚರಿಸಿ" ಇದನ್ನು ವರ್ಣಿಸುವುದಕ್ಕೆ ಸಾಧ್ಯವಿಲ್ಲ. ಕೇಳುಗರನ್ನು ಪದ್ಯದ ಗುಂಗಿನಲ್ಲೇ ಇರುವಂತೆ ಮಾಡುತ್ತದೆ. ಹಾಗೆಯೇ ಬಭ್ರುವಾಹನ ಕಾಳಗದ "ಉತ್ತಮ ಮಣಿಪುರದರಸನ ಚಾವಡಿ" ಇದನ್ನು ಪದ್ಯಾಣರಂತೆ ಪ್ರಸ್ತುತಪಡಿಸುವವರು ಇನ್ನೊಬ್ಬರಿಲ್ಲ.
ಪದ್ಯಾಣರಲ್ಲಿ ಅಗರಿಯವರ ಪ್ರಭಾವ ಇದೆ. ಆದರೆ ಅನುಕರಣೆಯಿಲ್ಲ. ಅಗರಿಯವರಂತೆ ಹಾಡಬಲ್ಲರು. ಮಿಮಿಕ್ರಿ ಅಲ್ಲ. ಪದ್ಯಾಣರು ಮೇಳದ ಯಜಮಾನರಿಗಾಗಲಿ, ವ್ಯವಸ್ಥಾಪಕರಿಗಾಗಲಿ ಹೊರೆಯಾಗದ ಭಾಗವತ. ಸಮಯ ಪಾಲನೆಗೆ ಅವರದ್ದು ಮೊದಲ ಆದ್ಯತೆ. ಯಾವುದೇ ಕಾರ್ಯಕ್ರಮಕ್ಕೆ ಅರ್ಧ ಘಂಟೆ ಮೊದಲೇ ಪದ್ಯಾಣರು ಹಾಜರಿರುತ್ತಿದ್ದರು. ಯಾರೊಂದಿಗೂ ತಕರಾರು ಇಲ್ಲ. ಸದಾ ಹಸನ್ಮುಖಿ.
ಈಗಲೂ ನೆನಪಿದೆ. ನನ್ನ ಆಯೋಜನೆಯಲ್ಲಿ "ಯಕ್ಷಕೂಟ ಅಡ್ಯನಡ್ಕ " ಆಯೋಜಿಸಿದ "ಬ್ರಹ್ಮ ಕಪಾಲ" ಯಕ್ಷಗಾನ ತಾಳಮದ್ದಳೆ. ಪ್ರಾರಂಭದಿಂದ ಕೊನೆತನಕ ಅಮ್ಮಣ್ಣಾಯ - ಪದ್ಯಾಣ ದ್ವಂದ್ವ ಹಾಡುಗಾರಿಕೆ, ಶೇಣಿಯವರ ಬ್ರಹ್ಮ. ಆ ದಿನದ ಕಾರ್ಯಕ್ರಮ "ನ ಭೂತೋ ನ ...." ಎಂಬಂತೆ ಪ್ರಸ್ತುತವಾಯಿತು. ಅಡ್ಯನಡ್ಕ ಶಾಲೆಯ ಸಭಾಂಗಣದಲ್ಲಿ ಸ್ಥಳ ಸಾಕಾಗದೆ ಹೊರಗೆ ಜಗುಲಿಯಲ್ಲಿ ನಿಂತು ಜನ ಆಸ್ವಾದಿಸಿದರು. ಇದು ಪದ್ಯಾಣರಿಗಿರುವ ಆಕರ್ಷಣೆ. ನಮ್ಮ ಬೆಂಗಳೂರಿನ "ಯಕ್ಷಕಲಾ ರಂಜಿನಿ" ಕಾರ್ಯಕ್ರಮಗಳಿಗೆ ಸುಮಾರು ಹತ್ತು ವರ್ಷಗಳಿಗೂ ಮೇಲ್ಪಟ್ಟು ಖಾಯಂ ಭಾಗವತರು. ತೆಂಕು ಬಡಗಿನ ದ್ವಂದ್ವ ಭಾಗವತಿಕೆಯ ಕಾರ್ಯಕ್ರಮಗಳು ಅದಾಗಿದ್ದವು. ರವೀಂದ್ರ ಕಲಾಕ್ಷೇತ್ರದಲ್ಲಿ ಹೌಸ್‌ಫುಲ್ ಪ್ರದರ್ಶನಗಳಾಗುತ್ತಿದ್ದವು. ಇದು ಪದ್ಯಾಣರ ಜನಪ್ರಿಯತೆಗೆ ಸಾಕ್ಷಿ. ನಮ್ಮ ಯಕ್ಷಕಲಾ ರಂಜಿನಿ ಬೆಂಗಳೂರು ವತಿಯಿಂದ ಚಿನ್ನದ ಸರದೊಂದಿಗೆ `ಯಕ್ಷಗಾನ ಸ್ವರ್ಣಕಮಲ' ಪ್ರಶಸ್ತಿ (1998) ನೀಡಿ, ಗೌರವಿಸಿದ್ದೇವೆ.
ಗಣಪ್ಪಣ್ಣನಿಗೆ ಸ್ಟಾರ್ ವ್ಯಾಲ್ಯೂ ಸಿಕ್ಕುವಲ್ಲಿ ಶೇಣಿಯವರ ಕೊಡುಗೆಯೂ ಇದೆ. ಹಲವಾರು ರಾಗಗಳ ಬಗ್ಗೆ ಅದರ ಅಳವಡಿಸುವಿಕೆಯ ಬಗ್ಗೆ, ಸಮಯ ಸಂದರ್ಭ ಭಾವದ ಬಗ್ಗೆ ಮನವರಿಕೆ ಮಾಡಿಕೊಟ್ಟರು. ಪಾತ್ರದ ಸ್ಥಾಯಿ ಭಾವ ಮತ್ತು ಸಂಚಾರಿ ಭಾವದ ಬಗ್ಗೆ ತಿಳಿಹೇಳಿ ರಾಗದ ಅಳವಡಿಕೆ ಬಗ್ಗೆ ಹೇಳಿಕೊಟ್ಟರು. ಉದಾಹರಣೆಗೆ ರಾವಣ ವಧೆಯ ಹರನೇ ಶಂಕರನೇ ಪದವನ್ನು ಆನಂದ ಭೈರವಿಯಲ್ಲಿ, ಮಾಗಧ ವಧೆಯ "ತಿಳಿಯದಾದಿರೇ" ಪದ್ಯವನ್ನು ಮಾಂಡು ರಾಗದಲ್ಲಿ ಹಾಡುವಂತೆ ಪ್ರೇರೇಪಿಸಿದವರು ಶೇಣಿಯವರು ಮತ್ತು ಅದು ಪದ್ಯಾಣರಿಗೆ ಪ್ರಸಿದ್ಧಿಯನ್ನೂ ತಂದುಕೊಟ್ಟಿತು.
ದಿ| ಕಾಳಿಂಗ ನಾವುಡರು ಪ್ರಸಿದ್ಧಿಯ ಉತ್ತುಂಗದಲ್ಲಿರುವಾಗ ಅವರಿಗೆ ಸಮದಂಡಿಯಾಗಿ ಹಾಡಿ ಅವರೇ ಬೆರಗಾಗುವಂತೆ, ಅವರಿಂದಲೇ ಮೆಚ್ಚುಗೆಯನ್ನು ಗಿಟ್ಟಿಸಿಕೊಂಡವರು ಪದ್ಯಾಣರು. ಪದ್ಯಾಣರದ್ದು ರಾಗ ಸಂಚಾರವು ಪಂಚಮಕ್ಕೆ ಹೋಗಿ ಇಳಿಯುವ ಶೈಲಿ ಇದು ಪ್ರೇಕ್ಷಕನಿಗೆ ತಕ್ಷಣ ಪರಿಣಾಮ ಬೀರುತ್ತಿತ್ತು ಮತ್ತು ಇದು ಪದ್ಯಾಣದವರ ಶೈಲಿಯೇ ಆಗಿ ಸ್ಥಾಪಿತವಾಯಿತು.
ಪದ್ಯಾಣದವರು ಸರಳ ಮತ್ತು ನಿಗರ್ವಿ. ಅವರ ಮಾತಿನಲ್ಲಿ ಮುಗ್ಧತೆಯಿದೆ, ಪ್ರೀತಿಯಿದೆ, ಸಂಘಟಕರಿಗೆ ಹೊರೆಯಾದವರಲ್ಲ. ಎಂದೂ ಸಂಘಟಕರೊಡನೆ ಭಿನ್ನಾಭಿಪ್ರಾಯ ಬಂದುದಿಲ್ಲ. ಸಂಭಾವನೆ ಬಗ್ಗೆ ಮಾತನಾಡಿದವರಲ್ಲ. ರಂಗದಲ್ಲಿ ಸಕ್ರಿಯರು. ಅವರು ಪಾತ್ರಧಾರಿಗಳೊಡನೆ ಪಾತ್ರವಾಗುತ್ತಾರೆ. ಅವರ ಕ್ರಿಯಾಶೀಲತೆ ರಂಗದಲ್ಲಿ ಎದ್ದು ಕಾಣುತ್ತದೆ. ವೈಯಕ್ತಿಕ ವರ್ಚಸ್ಸಿನಲ್ಲೇ ಯಾವುದೇ ಪ್ರಸಂಗವನ್ನು ಯಶಸ್ವಿಯಾಗಿಸುವ ಸಾಮರ್ಥ್ಯ ಅವರಿಗಿತ್ತು.
ಪದ್ಯಾಣದವರಿಗೆ ಅಸಾಧಾರಣವಾದ ಪ್ರತ್ಯುತ್ಪನ್ನಮತಿತ್ವವಿತ್ತು. ಪ್ರಸಂಗದ ಮೇಲೆ ಹಿಡಿತವಿತ್ತು. ಪ್ರಸಂಗ ನಡೆಯ ಬಗ್ಗೆ ಖಚಿತತೆಯಾಯಿತ್ತು, ಪ್ರಸಂಗ ವಿಸ್ತಾರ ಮತ್ತು ಹ್ರಸ್ವಗೊಳಿಸುವ ಬಗ್ಗೆ ಸರಿಯಾದ ಅರಿವಿತ್ತು. ಎಲ್ಲಕ್ಕಿಂತ ಹೆಚ್ಚಾಗಿ ಸಮಯ ಪ್ರಜ್ಞೆ ಇತ್ತು.
ಎಲ್ಲ ಕಲಾವಿದರೊಂದಿಗೆ ಸ್ನೇಹಪರರಾಗಿದ್ದರು. ಯಾವ ಕಲಾವಿದನಿಗಾದರೂ ಹೊಂದುವ ವ್ಯಕ್ತಿತ್ವ ಮತ್ತು ಭಾಗವತಿಕೆ ಅವರದಾಗಿತ್ತು. ಹಿಮ್ಮೇಳಕ್ಕೆ ಒಗ್ಗುವ ಹಾಡುಗಾರಿಕೆ ಅವರದ್ದು. ಹಿಮ್ಮೇಳದವರೊಡನೆ ಅತ್ಯಂತ ಸಂತುಲಿತ ಹೊಂದಾಣಿಕೆ. ಎಲ್ಲಾ ಹಿಮ್ಮೇಳದವರು ಪದ್ಯಾಣದವರ ಭಾಗವತಿಕೆಗೆ ಅನುಭವಿಸಿ ಹಿಮ್ಮೇಳ ವಾದಿಸುತ್ತಿದ್ದರು. ಯಾರಿಗೂ ಕಿರಿ ಕಿರಿಯಾಗದ ಸುಖವಾದ ಹಾಡುಗಾರಿಕೆ ಅವರದ್ದಾಗಿತ್ತು.
ಬಾಲ್ಯ, ವಿದ್ಯಾಭ್ಯಾಸ, ಕಲಾ ವ್ಯವಸಾಯ
ಹುಟ್ಟೂರು ಕಲ್ಮಡ್ಕದಲ್ಲೇ ಪ್ರೌಢ ಶಿಕ್ಷಣ ಪೂರೈಸಿದ ಪದ್ಯಾಣದವರಿಗೆ ಭಾಗವತಿಕೆಯ ಗುರುಗಳು ಮಾಂಬಾಡಿ ನಾರಾಯಣ ಭಾಗವತರು. ಕಲಿತದ್ದು ಧರ್ಮಸ್ಥಳದಲ್ಲಿ. ವ್ಯವಸಾಯ ಮಾಡಿದ್ದು ಚೌಡೇಶ್ವರಿ, ಸುರತ್ಕಲ್ ಮೇಳ! ಸುದೀರ್ಘ 26 ವರ್ಷಗಳ ಬಳಿಕ ಮಂಗಳಾದೇವಿ, ಕರ್ನಾಟಕ ಮೇಳ, ನಂತರ ಹೊಸನಗರ ಮೇಳ, ಎಡನೀರು ಮೇಳ ಮೊದಲಾದ ಮೇಳಗಳಲ್ಲಿ ಕಲಾ ವ್ಯವಸಾಯ ಮಾಡಿ ವಿಜೃಂಭಿಸಿದ್ದಾರೆ.
ಪದ್ಯಾಣದವರ ಬದ್ಧತೆ ಬಗ್ಗೆ ಇತ್ತೀಚೆಗೆ ಉಡುವೆಕೋಡಿ ರಾಧಾಕೃಷ್ಣ ಭಟ್ಟರು ಭಾಷಣವೊಂದರಲ್ಲಿ ಹೇಳಿದ ವಿಷಯ ಪ್ರಸ್ತಾಪಿಸದೆ ಇದ್ದರೆ ವಿಷಯದ ಪೂರ್ಣ ಅರಿವಾಗದು. ಪಡುಬಿದ್ರೆಯಲ್ಲಿ ಒಂದು ತಾಳಮದ್ದಲೆಗೆ ಇವರಿಬ್ಬರೂ ಬೈಕಿನಲ್ಲಿ ಹೊರಟಿದ್ದರು. ಮಂಗಳೂರಿನ ಪಂಪ್‌ವೆಲ್ ಸರ್ಕಲ್‌ನಲ್ಲಿ ರಿಕ್ಷಾವೊಂದು ಗುದ್ದಿದ್ದರ ಪರಿಣಾಮ ಇಬ್ಬರೂ ರಸ್ತೆಗೆ ಬಿದ್ದರು. ಗಣಪ್ಪಣ್ಣನಿಗೆ ಮೈ ಕೈಯೆಲ್ಲ ಗಾಯ, ರಕ್ತ ಒಸರುತ್ತಿತ್ತು. ಉಡುವೆಕೋಡಿಯವರು ವಾಪಸ್ ಹೋಗೋಣ ಎಂದರು ಆಗ ಪದ್ಯಾಣರು ಒಪ್ಪಲಿಲ್ಲ. ಅಲ್ಲಿರುವ ಒಬ್ಬರೇ ಭಾಗವತರಿಗೆ ಎರಡೆರಡು ಪ್ರಸಂಗ ಸುಧಾರಿಸುವುದು ಕಷ್ಟ. ಸಂಘಟಕರಿಗೆ ತೊಂದರೆಯಾಗುತ್ತದೆ, ಹಾಗಾಗಿ ಹೋಗಲೇ ಬೇಕು ಎಂದು ಹಟ ಹಿಡಿದರು. ಅಲ್ಲೆಲ್ಲಿಯೊ ಜವುಳಿ ಅಂಗಡಿಯಲ್ಲಿ ಹೊಸ ತುಂಬು ತೋಳಿನ ಅಂಗಿ ಖರೀದಿಸಿ ಕೈಗೆಲ್ಲಾ ಬ್ಯಾಂಡೇಜ್ ಮಾಡಿಸಿ ತಾಳಮದ್ದಳೆಯಲ್ಲಿ ಭರ್ಜರಿ ಮೂರು ಘಂಟೆ ಪದ ಹೇಳಿದರು. ತಾಳಮದ್ದಳೆ ಮುಗಿದ ಮೇಲೆ ಗಣಪ್ಪಣ್ಣನಿಗೆ ಕುಳಿತಲ್ಲಿಂದ ಏಳುವುದಕ್ಕೆ ಆಗಲಿಲ್ಲ. ನೋವು ಹೆಚ್ಚಾಗಿತ್ತು. ಕಲಾವಿದರಿಗೆಲ್ಲ ಆಗಲೇ ವಿಷಯ ಗೊತ್ತಾದ್ದು. ಇದು ಅವರ ನಿಷ್ಠೆ ಮತ್ತು ಬದ್ಧತೆಗೆ ಸಾಕ್ಷಿ. ಇನ್ನೊಬ್ಬರಿಗೆ ತನ್ನಿಂದಾಗಿ ತೊಂದರೆಯಾಗಬಾರದೆಂಬ ಪ್ರಾಮಾಣಿಕ ಮನೋಧರ್ಮ, ತನ್ನ ನೋವನ್ನೂ ನುಂಗಿಕೊಂಡು ಇನ್ನೊಬ್ಬರನ್ನು ಖುಷಿ ಪಡಿಸುವ ಹೃದಯ ವೈಶಾಲ್ಯತೆ. ಈ ಕಾರಣದಿಂದಲೇ ಪದ್ಯಾಣ ಗಣಪ್ಪಣ್ಣ ಎಲ್ಲರಿಗಿಂತ ಪ್ರತ್ಯೇಕವಾಗಿ ನಿಲ್ಲುವುದು.
ಪ್ರಶಸ್ತಿ ಪುರಸ್ಕಾರಗಳು, ಸಾಧನೆಗಳು:
(1) ಸಾಹಿತಿ ದೇ.ಜವರೇಗೌಡರ ಅಧ್ಯಕ್ಷತೆಯಲ್ಲಿ ನಡೆದ 8ನೇ ರಾಷ್ಟ್ರೀಯ ಕನ್ನಡ ಸಮ್ಮೇಳನದಲ್ಲಿ.
(2) 'ದೆಹಲಿ ಕನ್ನಡಿಗ' ಬಳಗದಿಂದ ಸಂಮಾನ. (1991).
(3) ದೆಹಲಿ ಕರ್ನಾಟಕ ಸಂಘದಿಂದ `ಭಾವರಸಗಂಭೀರ' ಪ್ರಶಸ್ತಿ.
(4) ಮಾಣಿಯ `ಯಕ್ಷ ಸಂಧ್ಯಾ ಸಂಗಮ'ದಿಂದ ಪುರಸ್ಕಾರ (1993).
(5) ಶ್ರೀ ಮಹಾಗಣಪತಿ ಮಹೋತ್ಸವ ಸೇವಾ ಸಮಿತಿ, ಹೊಳೆನರಸೀಪುರ ಇವರಿಂದ `ಯಕ್ಷಶ್ರೀ' ಬಿರುದು.
(6) ಸುಮಾರು 1500 ಕ್ಕೂ ಮಿಕ್ಕಿ ಯಕ್ಷಗಾನ ಧ್ವನಿಸುರುಳಿಗಳಿಗಾಗಿ ಭಾಗವತಿಕೆ; ನಿರ್ದೇಶನ.
(7) ಸುಮಾರು 150 ಕ್ಕೂ ಹೆಚ್ಚು ಯಕ್ಷಗಾನ ವೀಡಿಯೋಗಳಲ್ಲಿ ಭಾಗವತರಾಗಿ ಕೌಶಲ ಪ್ರದರ್ಶನ.
(8) ನೂರಾರು ಶಿಷ್ಯಂದಿರಿಗೆ ಸಾಂಪ್ರದಾಯಿಕ ಭಾಗವತಿಕೆಯ ತರಬೇತಿ.
(9) ಯಕ್ಷಗಾನ ಅಭಿಮಾನಿಗಳ ಸಮೂಹ, ಶಿರ್ವದಿಂದ ಸಂಮಾನ. (1994)
(10) ಶಾರದಾ ಪೀಠ ಶೃಂಗೇರಿ ವ್ಯಾಪ್ತಿಯ ನಾಗರಿಕರಿಂದ ಗೌರವ (1995)
(11) ಶ್ರೀ ಗುರುರಾಘವೇಂದ್ರ ಮಠ, ಕಲ್ಲಾರೆ (ಪುತ್ತೂರು) ಇದರ ಸಾರ್ವಜನಿಕ ಗಣೇಶೋತ್ಸವ ಸಮಿತಿಯಿಂದ ಪುರಸ್ಕಾರ (1997)
(12) ಬೆಂಗಳೂರು ಗಿರಿನಗರದ ಶ್ರೀ ಮಹಾಗಣಪತಿ ದೇವರ ಸನ್ನಿಧಿಯಲ್ಲಿ ಪುರಸ್ಕಾರ.
(13) ತೆಂಕುತಿಟ್ಟು ಯಕ್ಷಗಾನ ಪ್ರತಿಷ್ಠಾನ, ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಿದ ತೆಂಕು-ಬಡಗು ಸ್ಪರ್ಧಾ ಪ್ರದರ್ಶನದಲ್ಲಿ ವಿಶೇಷ ಅಭಿನಂದನೆ.
(14) ಮುಂಬೈಯ ಮಾಟುಂಗ ಕರ್ನಾಟಕ ಸಂಘದಲ್ಲಿ ಯಕ್ಷಗಾನ ಅಭಿಮಾನಿ ಬಳಗದಿಂದ ಪುರಸ್ಕಾರ (1998)
(15) ಮಂಗಳ ಕಲಾ ಸಾಹಿತ್ಯ ವೇದಿಕೆ, ಪಟ್ಟೆ (ಬಡಗನ್ನೂರು, ಉಡುಪಿ) ಇವರಿಂದ ಅಭಿನಂದನೆ (1998)
(16) ಬೆಂಗಳೂರಿನ ಯಕ್ಷಕಲಾ ರಂಜಿನಿಯಿಂದ `ಯಕ್ಷಗಾನ ಸ್ವರ್ಣಕಮಲ' ಪ್ರಶಸ್ತಿ (1998)
(17) ಸಾಮ್ರಾಟ್ ಸ್ಪೋರ್ಟ್ಸ್ ಕ್ಲಬ್, ಮಾನ್ಯ (ಕಾಸರಗೋಡು) ಇವರಿಂದ `ದಿ. ಪಟ್ಟಾಜೆ ವೆಂಕಟ್ರಮಣ ಭಟ್ ಸ್ಮಾರಕ ಪ್ರಶಸ್ತಿ' (1999)
(18) ಪುತ್ತೂರು ಕೃಷ್ಣ ಭಟ್ಟರ ಜನ್ಮಶತಮಾನೋತ್ಸವ ಸಂದರ್ಭ ಪಂಜದ ಪಂಚಲಿಂಗೇಶ್ವರ ದೇಗುಲದಲ್ಲಿ ಸಂಮಾನ.
(19) ಕಾಸರಗೋಡು ಕನ್ನಡ ಬಳಗ, ವಿದ್ಯಾನಗರ ಇವರಿಂದ `ದಸರಾ ನಾಡಹಬ್ಬ'ದ ಪ್ರಯುಕ್ತ ಸಂಮಾನ. (2002)
(20) ಶ್ರೀ ರಾಘವೇಶ್ವರ ಭಾರತೀ ಕಲ್ಯಾಣ ಕೇಂದ್ರ, ಬೆಂಗಳೂರು ನಡೆಸಿದ `ಯಕ್ಷಗಾನ ಸಪ್ತಾಹ'ದಲ್ಲಿ (ಶ್ರೀರಾಮಾಯಣ ದರ್ಶನ) ಜನಮನ್ನಣೆ (2002)
(21) ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ನಡೆದ 24 ಗಂಟೆಗಳ ಯಕ್ಷಗಾನ ಕಾರ್ಯಕ್ರಮ ಕಲ್ಯಾಣೋತ್ಸವ'ದಲ್ಲಿ ವಿಶೇಷ ಜನಮನ್ನಣೆ (2003)
(22) ಶ್ರೀ ಅಯ್ಯಪ್ಪ ಮಂದಿರ ತಿಮ್ಮಂಗೂರು ಅಣೆ, ವರ್ಕಾಡಿ ಇವರಿಂದ ಸಂಮಾನ. (2003)
(23) ಪಂಜ ಪಂಚಶ್ರೀ ಜೇಸೀಸ್ ಅವರಿಂದ `ಜೇಸಿ ಸಪ್ತಾಹ'ದ ಅಂಗವಾಗಿ ಸಂಮಾನ. (2003)
(24) ಶ್ರೀ ಎಡನೀರು ಮಠದಿಂದ 29ನೇ ಯಕ್ಷಗಾನ ಸಪ್ತಾಹದಲ್ಲಿ ಸಂಮಾನ. (2004)
(25) ಹೊಸನಗರ ಶ್ರೀ ರಾಮಚಂದ್ರಾಪುರ ಮಠದ ಆಶ್ರಯದಲ್ಲಿ ನಡೆದ `ಯಕ್ಷಗಾನ ಮಹಾಸಮ್ಮೇಳನ'ದಲ್ಲಿ ಭಾಗವತರಾಗಿ ಸೇವೆ (2004)
(26) ಶ್ರೀ ಮಹಾಲಕ್ಷ್ಮಿ ದೇವಸ್ಥಾನ, ಉಚ್ಚಿಲ (ಉಡುಪಿ) ಇಲ್ಲಿ ಉಪಾಧ್ಯಾಯ ಸಹೋದರರಿಂದ ಸಂಮಾನ. (2006)
(27) `ಈ ಟಿ. ವಿ.' ಕನ್ನಡ ವಾಹಿನಿಯ ಜನಪ್ರಿಯ `ಎದೆ ತುಂಬಿ ಹಾಡುವೆನು' ಸರಣಿಯ ತೀರ್ಪುಗಾರನಾಗಿ ನಿರ್ವಹಣೆ; ಎಸ್.ಪಿ. ಬಾಲಸುಬ್ರಹ್ಮಣ್ಯಂ ತಂಡದಿಂದ ಪ್ರಶಂಸೆ (2007)
(28) ಶ್ರೀ ದುರ್ಗಾಂಬಾ ಕಲಾ ಸಂಗಮ ಶರವೂರು – ರಜತ ಮಹೋತ್ಸವ ವರುಷಾಚರಣೆ ಸಮಾರೋಪ ಸಂದರ್ಭ ಸಂಮಾನ – (2008)
(29) ಕುರಿಯ ಪ್ರತಿಷ್ಠಾನದ ದಶಮಾನೋತ್ಸವ ಸಂದರ್ಭದಲ್ಲಿ ಪ್ರತಿಷ್ಠಾನದ ವತಿಯಿಂದ "ಗೌರವಾರ್ಪಣೆ" ( 2008 ).
(30) ಕಲ್ಮಡ್ಕದ ಸಂಗಮ ಕಲಾ ಸಂಘದಿಂದ ಹುಟ್ಟೂರ ಸಂಮಾನ ಹಾಗೂ ಯಕ್ಷರತ್ನ ಬಿರುದು (2010)
(31) ಶ್ರೀ ಸುಬ್ರಾಯ ಕ್ಷೇತ್ರ ವಗೆನಾಡು - ಬಿ ರಮಾನಾಥ ರೈ, ಶಾಸಕರು ಬಂಟ್ವಾಳ ವಿಧಾನಸಭಾ ಕ್ಷೇತ್ರ, ಇವರ ಘನ ಅಧ್ಯಕ್ಷತೆಯಲ್ಲಿ ಸಂಮಾನ. (2010)
(32) ಹೊಸನಗರ ಮೇಳದ ಬಳಗ ಮುಂಬಯಿ ವಿಶ್ವೇಶ್ವರಯ್ಯ ಸಭಾಭವನ ಮಾಟುಂಗ ಮಂಬಯಿ ಇವರಿಂದ ಪತ್ರಪುಷ್ಪದೊಂದಿಗೆ ಪುರಸ್ಕಾರ (2012)
(33) ಭಾಗವತ ಪುತ್ತಿಗೆ ರಘುರಾಮಹೊಳ್ಳರ - 'ರಘುರಾಮಾಭಿನಂದನ' ಸಂಮಾನ(2013)
(34) ಕಲ್ಕೂರ ಪ್ರತಿಷ್ಠಾನದ ವತಿಯಿಂದ ಮಂಗಳೂರು ಪುರಭವನದಲ್ಲಿ ಯಕ್ಷ ಸಿರಿ ಪುರಸ್ಕಾರ. (2012)
(35) ನಾಗ ದೇವರು ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನ, ಬಿ.ಸಿ ರೋಡು ಇವರಿಂದ ಶ್ರೀ ಕ್ಷೇತ್ರದ ರಾಜಾಂಗಣದಲ್ಲಿ ನವರಾತ್ರಿ ಉತ್ಸವದ ಸಂದರ್ಭ ಸಂಮಾನ(2012)
(36) ಶ್ರೀ ರಾಮ ಕಲಾಸಂಘ ಕೋಣನಕುಂಟೆ ಬೆಂಗಳೂರು ವತಿಯಿಂದ ಶ್ರೀ ವರದಾಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಸಂಮಾನ - (2012)
(37) ಅಖಿಲ ಹವ್ಯಕ ಮಹಾಸಭಾ ಬೆಂಗಳೂರು ಇವರಿಂದ ವಿದ್ವತ್ ಸಂಮಾನ. (2014)
(38) ಕಲಾಪೋಷಕ ‘ದಿ.ಸರ್ಪಂಗಳ ಸುಬ್ರಹ್ಮಣ್ಯ ಭಟ್ ಸ್ಮಾರಕ ಯಕ್ಷಗಾನ ಸಾಧಕ ಪ್ರಶಸ್ತಿ' – (2014)
(39) ಬೋಳೂರು ದೋಗ್ರ ಪೂಜಾರಿ ಸ್ಮಾರಕ ಪ್ರಶಸ್ತಿ' – (2014)
(40) ತೆಂಕುತಿಟ್ಟು ಯಕ್ಷಗಾನ ಪ್ರತಿಷ್ಠಾನ ಯಕ್ಷಗಾನ, ದಾಸರಹಳ್ಳಿ ಬೆಂಗಳೂರು ದಶಮಾನೋತ್ಸವ ಪುರಸ್ಕಾರ.(2014 )
(41) ಯಕ್ಷ ಕಲಾ ಪೊಳಲಿ - 19 ನೇ ವರ್ಷದ ವರ್ಧಂತಿ ಉತ್ಸವದ ಪ್ರಯುಕ್ತ ಪೊಳಲಿ ರಾಜರಾಜೇಶ್ವರಿ ದೇವಸ್ಥಾನದ ರಾಜಾಂಗಣದಲ್ಲಿ ಡಾ.ಪ್ರಭಾಕರ ಭಟ್ ಕಲ್ಲಡ್ಕ ಸಮ್ಮುಖದಲ್ಲಿ ಸಂಮಾನ. (2014 )
(42) ಯಕ್ಷ ಮಿತ್ರರು ಕೈಕಂಬ ಬಿ.ಸಿ ರೋಡು ಇವರಿಂದ ಸಂಮಾನ (2014 )
(43) ಯಕ್ಷ ಲಹರಿ ಕಿನ್ನಿಗೋಳಿ ಇವರಿಂದ - ಸಾಧನಾಶೀಲ ಪ್ರಶಸ್ತಿ. (2015 )
(44) ಶ್ರೀ ರಾಮಾಂಜನೇಯ ಮಂದಿರ ಕೆಂಜಾರು, ಹತ್ತು ಸಮಸ್ತರು ಆಯೋಜಿಸಿದ ಕಾರ‍್ಯಕ್ರಮದಲ್ಲಿ ಸಂಮಾನ (2015 )
(45) ಯಕ್ಷ ಸ್ವರ್ಣ ಪ್ರಶಸ್ತಿ ಪತ್ರ - ಪುನರೂರು ಮುಲ್ಕಿ ಇವರಿಂದ (2015 )
(46) ರಜತಚಂದ್ರ - ಧರ್ಮಸ್ಥಳ ಚಂದ್ರಶೇಖರರ ಕಲಾಯಾನದ ಬೆಳ್ಳಿಹಬ್ಬದ ಸಂದರ್ಭ ಸಂಮಾನ - ( 2015 )
(47) ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನದ ವತಿಯಿಂದ ಜರುಗಿದ ಸಂಪಾಜೆ ಯಕ್ಷೋತ್ಸವ ರಜತ ಸಂಭ್ರಮದ ಗೌರವ. ( 2015 )
(48) ಯಕ್ಷಕೂಟ ಮಲ್ಕಾಜೆ ಮಾಡ ಹಾಗೂ ಊರ ಹತ್ತು ಸಮಸ್ತರು ಬಂಟವಾಳ -ದಿ.ಚೆನ್ನಪ್ಪ ಶೆಟ್ಟಿ ದ್ವಿತೀಯ ವರ್ಷದ ಸಂಸ್ಮರಣೆ ಆಚರಣೆ ಸಂದರ್ಭ ಸಂಮಾನ -(2016 )
(49) ವಿಟ್ಲ ಪಂಚಲಿಂಗೇಶ್ವರ ದೇವಸ್ಥಾನ – ಸಂಮಾನ ( 2016 )
(50) ತಿರುಮಲ ವೆಂಕಟರಮಣ ದೇವಸ್ಥಾನ ಬಂಟವಾಳ ವತಿಯಿಂದ ಸಂಮಾನ. (2016 )
(51) ಯಕ್ಷ ಸಂಗಮ ಮೂಡಬಿದಿರೆ – ಯಕ್ಷರಂಗದ ಗಾನಕಲಾ ಸಿಂಧೂರ ಶ್ರೀ ಮೋಹನ ಆಳ್ವರ ಅಧ್ಯಕ್ಷತೆಯಲ್ಲಿ ವಿಧಾನಸಭಾ ವಿಪಕ್ಷೀಯ ಮುಖ್ಯ ಸಚೇತಕ ಶ್ರೀ ಕೆ. ಅಭಯಚಂದ್ರ ಜೈನ ಹಾಗೂ ಗಣ್ಯರ ಉಪಸ್ಥಿತಿಯಲ್ಲಿ ಸಂಮಾನ (2017 )
(52) ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನಟರಾಜ ವೇದಿಕೆಯಲ್ಲಿ ಶೀನಪ್ಪ ಭಂಡಾರಿ ಪ್ರತಿಷ್ಠಾನ ಬನ್ನೂರು ಪುತ್ತೂರು ವತಿಯಿಂದ ಸಂಮಾನ ( 2017 )
(53) ಮಡಪಾಡಿ ತೆಂಕ ಎಡಪದವು ಬೋರುಗುಡ್ಡೆ ಹತ್ತು ಸಮಸ್ತರು ಇವರಿಂದ ಸಂಮಾನ. ( 2018 )
(54) ಆಳ್ವಾಸ್ ನುಡಿಸಿರಿಯಲ್ಲಿ ವಯೊಲಿನ್ ಮಾಂತ್ರಿಕ ಮೈಸೂರ್ ನಾಗರಾಜ್ ಮತ್ತು ಪ್ರವೀಣ್ ಗೋಡ್ಕಿಂಡಿ ಅವರ ಕೊಳಲಿನೊಂದಿಗೆ ಯಕ್ಷಗಾನ ಹಾಡಿನ ಪ್ರಸ್ತುತಿ
(55) ‘ದಿವಾಣ ಪ್ರಶಸ್ತಿ' ಕೋಡಪದವು. ( 2018 )
(56) ನಾಟ್ಯಗುರು ಸಬ್ಬಣಕೋಡಿ ರಾಮ ಭಟ್ಟರ ನೇತೃತ್ವದ ಪಡ್ರೆ ಚಂದು ಸ್ಮಾರಕ ಯಕ್ಷಗಾನ ನಾಟ್ಯ ತರಬೇತಿ ಕೇಂದ್ರ (ರಿ ) ಪೆರ್ಲ ವತಿಯಿಂದ "ಪಡ್ರೆ ಚಂದು ಪ್ರಶಸ್ತಿ "-(2019).
(57) "ತೆಂಕಬೈಲು ಪ್ರಶಸ್ತಿ "-(2020 )
ಕೌಟುಂಬಿಕವಾಗಿ
ಪದ್ಯಾಣ ನಾರಾಯಣ ಭಟ್ಟ (ಪುಟ್ಟು ನಾರಾಯಣ ಭಾಗವತ)ರ ಹಿರಿಯ ಮಗ ತಿರುಮಲೇಶ್ವರ ಭಟ್ಟ ಮತ್ತು ಸಾವಿತ್ರಿ ಅಮ್ಮ ದಂಪತಿಗಳ ಮೂರನೆಯ ಮಗ ಪದ್ಯಾಣ ಗಣಪತಿ ಭಟ್ಟರು.
ಗಣಪತಿ ಭಟ್ಟರ ಪತ್ನಿ ಶೀಲಾ ಶಂಕರಿ. ಪುತ್ರ ಸ್ವಸ್ತಿಕ ಪದ್ಯಾಣ ಪುತ್ತೂರಿನ ಖಾಸಗಿ ಕಂಪೆನಿಯ ಉದ್ಯೋಗಿ, ಇನ್ನೊಬ್ಬ ಪುತ್ರ ಕಾರ್ತಿಕ ಪದ್ಯಾಣ, ಕಲ್ಮಡ್ಕದಲ್ಲಿ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಸೊಸೆಯಂದಿರಾದ ತಿರುಮಲೇಶ್ವರಿ ಮತ್ತು ವೀಣಾ.
ಅಜರಾಮರ ಪದ್ಯಾಣ ಗಣಪತಿ ಭಟ್ಟರು
ತೆಂಕು ತಿಟ್ಟಿನ ಯಕ್ಷಗಾನದ ಕಲಾ ವಿಸ್ತರಣೆಯಲ್ಲಿ ತನ್ನದೇ ಆದ ಮೆರೆಯಲಾಗದ ಕೊಡುಗೆಯನ್ನು ಕೊಟ್ಟು ಪದ್ಯಾಣ ಶೈಲಿಯನ್ನೇ ಹುಟ್ಟು ಹಾಕಿ, ಅಜಾತ ಶತ್ರುವೆನಿಸಿ, ಜನಾನುರಾಗಿಯಾಗಿ, ಸರ್ವ ಮಾನ್ಯರಾಗಿ, ಭೌತಿಕವಾಗಿ ನಮ್ಮೊಡನೆ ಇಲ್ಲದಿದ್ದರೂ, ಯಕ್ಷಗಾನವನ್ನು ಪ್ರೀತಿಸುವ ಎಲ್ಲಾ ಕಲಾಭಿಮಾನಿಗಳ ಮನಸ್ಸಿನಲ್ಲಿ ಅಜರಾಮರರಾಗಿ ಶಾಶ್ವತರಾಗಿ ಸ್ಥಾಪಿತರಾದರು.
ಪೂರಕ ಮಾಹಿತಿ ಒದಗಿಸಿದ ಪದ್ಯಾಣ ಗಣಪತಿ ಭಟ್ಟರ ಮಗ ಸ್ವಸ್ತಿಕ ಪದ್ಯಾಣ ಅವರಿಗೆ ಕೃತಜ್ಞತೆಗಳು.
✍©ಕುಮಾರ ಸುಬ್ರಹ್ಮಣ್ಯ ಮುಳಿಯಾಲ