ಅಂದಿನ ಕಾಲದ ಯಕ್ಷಗಾನ ಹೇಗಿತ್ತು? ನೆನಪಿಸಿದ್ದು ಸಬ್ಬಣಕೋಡಿ ರಾಮ ಭಟ್ ಅವರ ಬಲಿಪರ ಬಗೆಗಿನ ಬರಹ


ಬಲಿಪ ನಾರಾಯಣ ಭಾಗವತರು ಹೇಗೆ ಹೇಳಿಕೊಡುತ್ತಿದ್ದರು? ಅಂದಿನ ಯಕ್ಷಗಾನ ಹೇಗಿತ್ತು? ಕಲಾವಿದ, ಗುರು ಸಬ್ಬಣಕೋಡಿ ರಾಮ ಭಟ್ (ಮೇಲಿನ ಚಿತ್ರ) ಅವರು ವಿವರಿಸಿದ್ದಾರೆ ನೋಡಿ:

ನಾನೊಬ್ಬ ಕಲಾವಿದನಾಗಿ ರೂಪ ಹೊಂದಲು ಬಲಿಪರೂ ಕಾರಣ.ತಾಳದ ಗತಿ ,ಪ್ರಸಂಗದ ನಡೆ ಹೇಳಿಕೊಡುತ್ತಿದ್ದರು. ಬಲಿಪರ ಒಡನಾಟದ ನೆನಪುಗಳನ್ನು ಮೆಲುಕು ಹಾಕುತ್ತಾ ಹೋದರೆ ಮೊದಲಿನ ಯಕ್ಷಗಾನದ ತಿರುಗಾಟ ಹೀಗೂ ಇತ್ತಲ್ಲಾ ಎಂದು ಕಾಣಿಸುತ್ತದೆ.

ನಾನು ಕಟೀಲು ಮೇಳದಲ್ಲಿ, ಇರಾ ಶ್ರೀ ಗೋಪಾಲಕೃಷ್ಣ ಭಾಗವತರೊಂದಿಗೆ, ಹಿರಿಯ ಮದ್ದಳೆಗಾರರಾದ ನೆಡ್ಲೆ ನರಸಿಂಹ ಭಟ್,  ಬಲಿಪ ಭಾಗವತರೊಂದಿಗೆ ಕಲಾವಿದನಾಗಿ ಮೂಡಿ ಬಂದವನು. ಗುರು ಪಡ್ರೆ ಶ್ರೀ ಚಂದುರವರೊಂದಿಗೆ ಒಡನಾಟದ ಭಾಗ್ಯ ಸಿಕ್ಕಿತ್ತು. ಅವರ ಒಡನಾಟದಲ್ಲಿ ನಾನೊಬ್ಬ ಕಲಾವಿದನಾಗಿ ಮೂಡಿಬಂದರೂ ಬಲಿಪ ಭಾಗವತರು ನನಗೆ ಹೆಚ್ಚಿನ ಒತ್ತು ಕೊಟ್ಟು ಕಲಾವಿದನನ್ನಾಗಿ ರೂಪಿಸಿದವರು.

ಅವರ ಎರಡನೇ ಮೇಳಕ್ಕೆ ನನ್ನನ್ನು  ಯಜಮಾನರಾದ ಶ್ರೀ ವಿಠಲ ಶೆಟ್ಟರು ವರ್ಗಾಯಿಸಿದರು. ಅದನ್ನು ನಾನೂ ಒಪ್ಪಿಕೊಂಡೆ. ಬಲಿಪರ ಒಡನಾಟದಲ್ಲಿ ನನಗೆ ಬಹಳ ತೃಪ್ತಿ ತಂದು ಕೊಟ್ಟಿದೆ. ಅವರು ಸದ್ಗುಣವಂತ ಭಾಗವತರು. ಅವರೊಬ್ಬರು ನಿಸ್ವಾರ್ಥ ವ್ಯಕ್ತಿತ್ವದವರು. ತಾನೂ ಪ್ರಸಿದ್ಧ ಭಾಗವತನಾಗಿ ತೃಪ್ತರಾದವರಲ್ಲ. ಇತರರ ಪ್ರತಿಭೆಯನ್ನು ಹುಡುಕಿ ತೆಗೆದು  ಪ್ರಸಿದ್ಧ ಕಲಾವಿದರಾಗುವ ತುಡಿತ ತುಂಬುತ್ತಿದ್ದರು. ಅದಕ್ಕೆ ಸಾಕ್ಷೀ ಭೂತನಾಗಿ ನಾನು.

ಆದರೆ ನಮ್ಮ ಪ್ರಯತ್ನ ಬೇಕು. ಬಲಿಪರ ಗರಡಿಯಲ್ಲಿ ಪಳಗಿದ ಕಲಾವಿದರು ಬಹಳಷ್ಟು ಮಂದಿ ಇದ್ದಾರೆ.  ಶ್ರೀಯುತರಾದ ಪೆರುವಾಯಿ ನಾರಾಯಣ ಶೆಟ್ಟರು, ಅರುವ ನಾರಾಯಣ ಶೆಟ್ಟರು, ಸಂಪಾಜೆ ಶೀನಪ್ಪ ರೈ, ರೆಂಜಾಳ ರಾಮಕೃಷ್ಣ ರಾವ್, ಬೆಳಾಲು ಲಕ್ಷ್ಮಣ ಗೌಡ, ಗುಂಡಿಮಜಲು ಗೋಪಾಲ ಭಟ್, ಅಜೆಕ್ಕಾರು ರಾಜೀವ ಶೆಟ್ಟರು, ಗೇರುಕಟ್ಟೆ ಗಂಗಯ್ಯ ಶೆಟ್ಟಿಯವರು ಹೀಗೆ ಹಲವಾರು ಕಲಾವಿದರು ಪ್ರಸಿದ್ಧರಾದವರು.

ಅಂದಿನ ವ್ಯವಸ್ಥೆ ಹೇಗಿತ್ತು?
ನಾನು ಯಕ್ಷಗಾನ ಗುರುವಾಗಬೇಕಾದರೆ ಬಲಿಪರೇ ಕಾರಣರು. ಅವರು ಬಿಡಾರದಲ್ಲಿ ತಾಳದ ಗತಿ, ಪ್ರಸಂಗದ ನಡೆಗಳನ್ನು ಹೇಳಿಕೊಡುತ್ತಿದ್ದರು. ಆಗಿನ ತಿರುಗಾಟ ಬಹಳ ಕಷ್ಟವಾಗಿತ್ತು. ಕಲಾವಿದರಿಗೆ ಹೋಗಲು ದೂರದ ಸ್ಥಳಕ್ಕೆ ಲಾರಿ ಸೌಕರ್ಯ. ಅದರಲ್ಲಿ ವೇಷದ ಪೆಟ್ಟಿಗೆಗಳು. ಅದರ ಮೇಲೆ ನಾವು ಕೂತುಕೊಳ್ಳಬೇಕು.

ಹಳ್ಳಿ ರಸ್ತೆಗಳಿಗೆ ಡಾಮರೀಕರಣ ಆಗಿರಲಿಲ್ಲ. ಭಯಂಕರವಾದ ಧೂಳು. ಧೂಳಿನಿಂದ ನಮ್ಮ ಮೈಯೆಲ್ಲಾ ಮುಳುಗಿ ಹೋಗುತ್ತಿತ್ತು. ಈಗಿನ ಹಾಗೆ ಐಶಾರಾಮವಿರಲಿಲ್ಲ. ಆಟದ ಸ್ಥಳಕ್ಕೆ ತಲುಪಿದರೆ ಕೇಳುವವರಿಲ್ಲ. ನಾವೇ ಸ್ಥಳವನ್ನು ಹುಡುಕಿ ಬಿಡಾರದ ವ್ಯವಸ್ಥೆ ಮಾಡಬೇಕಿತ್ತು. ಸ್ನಾನಕ್ಕೆ ನೀರು ಎಲ್ಲಿದೆ? ಎಂದು ನಾವು ಹುಡುಕುತ್ತಾ ಹೋಗಬೇಕು. ನೀರು ಇರುವ ಕಡೆಗೆ ಹೋಗಿ ಕೊಡಪ್ಪಾನ ನಾವು ಮನೆಯವರಲ್ಲಿ ಕೇಳಿದಾಗ ಆಟದವರಿಗೆ ಕೊಡಪ್ಪಾನ ಇಲ್ಲ ಎಂಬ ತಾತ್ಸಾರದ  ಮಾತು.
(ಕಟೀಲು ಮೇಳದ ಹಳೆಯ ದೇವಿ ಮಹಾತ್ಮೆಯ ದೃಶ್ಯ. ಬಲಿಪ ಭಾಗವತರು ಇದ್ದಾರೆ. ಚಿತ್ರ ಕೃಪೆ: We Love Kateel Melas group.)

ಯಕ್ಷಗಾನ ಪ್ರಿಯರಾಗಿದ್ದರೆ ಸ್ವಾಗತಿಸಿ ನಮಗೆ ವ್ಯವಸ್ಥೆ ಮಾಡುತ್ತಿದ್ದರು. ಚೌಕಿಗೆ ಹೋದರೆ ಮಡಲ ತಟ್ಟಿಯಿಂದ ಚೌಕಿ. ಚಳಿಗಾಲದಲ್ಲಿ ಹಿಮದ ಹನಿಯೆಲ್ಲ ನಮ್ಮ ತಲೆಯ ಮೇಲೆ. ರಂಗಸ್ಥಳದಲ್ಲಿ ಭಾಗವತರು ಕೂತುಕೊಳ್ಳಲು ಭತ್ತ ಬಡಿಯುವ ಪಡಿ. ಅದಕ್ಕೆ ಚಾಪೆಯೂ ಇರುತ್ತಿರಲಿಲ್ಲ. ಸಮತಟ್ಟಿನ ನೆಲವಿಲ್ಲ.  ನೆಲದಲ್ಲಿ ಧೂಳು ಬರಬಾರದು ಅನ್ನುವುದಕ್ಕಾಗಿ ಭತ್ತದ ಉಮಿಯನ್ನು ಹಾಕುತ್ತಿದ್ದರು. ಮಧ್ಯ ರಾತ್ರಿಯಿಂದ ದೂಳಿನ ಮಯವಾಗುವುದು.

ಅಂತಹ ಕಾಲಘಟ್ಟದಲ್ಲಿ ಎಲ್ಲಾ ಕಲಾವಿದರು ಸಹನೆಯಿಂದ ವ್ಯವಹರಿಸುತ್ತಿದ್ದರು. ಕಲಾರಾಧನೆ ಎಂಬ ನಿಟ್ಟಿನಲ್ಲಿ ಕಲಾವಿದರು ದುಡಿಯುತ್ತಿದ್ದರು. ಈಗಿನ ರಂಗಸ್ಥಳದಿಂದ ಅವತ್ತಿನ ರಂಗದಲ್ಲಿ ಕುಣಿಯಲು ಒಳ್ಳೆಯದಾಗುತ್ತಿತ್ತು. ರಂಗಸ್ಥಳದಲ್ಲಿ ಹೊಂಡಗಳಿದ್ದರೂ ಗುಂಡಿಮಜಲು, ನಾನೂ ಗಿರಕಿ ತೆಗೆಯುತ್ತಿದ್ದೆವು. ಇದಕ್ಕೆ ಮುಖ್ಯ ಕಾರಣ ಬಲಿಪರ ಹಾಡು, ಪೆರುವಾಯಿ ನಾರಾಯಣ ಭಟ್ಟರ ಚೆಂಡೆ.

ಅಂದಿನ ಕಲಾವಿದರಿಗೆ ಶಾರೀರಿಕ ಹಾಗೂ ಮಾನಸಿಕ ತ್ರಾಣವಿತ್ತು. ಯಾಕೆಂದರೆ  ಬಲಿಪರದು ಓಘದ ತಾಳವಲ್ಲ . ಕಾಲಕ್ಕೆ ಸರಿಯಾಗಿ ತಾಳ. ವೇಷವನ್ನು ನೋಡಿ ತಾಳದ ಲಯಗಳು. ಬಣ್ಣದ ವೇಷ, ಕಿರೀಟ ವೇಷ, ಸ್ರ್ತೀವೇಷಗಳಿಗೆ ವೇಗ ಗತಿಯ ತಾಳದಲ್ಲಿ ಪದ್ಯ ಹೇಳಲಾರರು. ಪುಂಡುವೇಷಗಳಲ್ಲಿ ನಾಲ್ಕನೇ ಕಾಲದಲ್ಲಿ ಹಾಡು ಹೇಳಿದರೂ ತಾಳ/ಲಯದಲ್ಲಿ ಇರಬಹುದು. ಲಯವಿಲ್ಲದ ತಾಳಕ್ಕೆ ಕುಣಿಯಲು ಕಷ್ಟ, ಕಲಾವಿದನಿಗೆ ಆಯಾಸ.

ತಾಳ  ವೇಗ ಗತಿಯಲ್ಲಿ ಇದ್ದ ಕೂಡಲೇ ಕಲಾವಿದನ ಶಾರೀರಿಕ ತ್ರಾಣ ಕಮ್ಮಿ ಆಗುತ್ತದೆ. ಬಲಿಪರ ಒಡನಾಟದಲ್ಲಿ ನಾನು  ಕೆಲವು ಕೆಲವು ಹಳ್ಳಿಗಳಿಗೆ ನಡೆದು ಹೋದದ್ದು ಇದೆ. ಆಗ ಅವರು ಅಜ್ಜ ಬಲಿಪರ ಒಡನಾಟದ ದಿನಗಳನ್ನು ನೆನಪಿಸುತ್ತಿದ್ದರು. ಪ್ರಸಂಗದ ನಡೆಯನ್ನು ಹೇಳುತ್ತಿದ್ದರು. ವೇಷದ ಕ್ರಮಗಳನ್ನು ತಿಳಿಯಪಡಿಸುತ್ತಿದ್ದರು. ಆಮೇಲೆ ಅವರು ಕಬ್ಬನ್ನು ಜಗಿಯುತ್ತಾ 'ಸಬ್ಬಣಕೋಡಿಯವರೇ' ನನ್ನ ಅಜ್ಜನೂ ಕಬ್ಬನ್ನು ಜಗಿಯುತ್ತಾ ಇದ್ದರು. ಹಾಡು ಹೇಳಲು ಸ್ವರಕ್ಕೆ ತೊಂದರೆ ಆಗುವುದಿಲ್ಲ ಎನ್ನುತ್ತಿದ್ದರು.

ಈ ರೀತಿ ಹಲವಾರು ಹಿಂದಿನ ಕಾಲದ ಯಕ್ಷಗಾನದ ಕಥೆಯನ್ನು ಹೇಳುತ್ತಾ ಇದ್ದವರು. ಅವರೊಂದಿಗೆ ಇದ್ದರೆ ನಡೆದ ಆಯಾಸವೇ ಗೊತ್ತಾಗುತ್ತಿರಲಿಲ್ಲ. ಎಷ್ಟೋ ಕಲಾವಿದರನ್ನು ( ನಾನೂ ) ಯಕ್ಷಗಾನಕ್ಕೆ ಸಮರ್ಪಿಸಿದ ಮೇರು ವ್ಯಕ್ತಿ ಅವರು. ಬಲಿಪರಿಗೆ ಬಲಿಪರೇ ಸಾಟಿ. ಬಲಿಪರ ಶಿಷ್ಯ ಎನ್ನಲು ನನಗೆ ಯಾವಾಗಲೂ ಹೆಮ್ಮೆ ಎನಿಸುತ್ತದೆ.

ಬರಹ: ಸಬ್ಬಣಕೋಡಿ ರಾಮಭಟ್, ನಿರ್ದೇಶಕರು, ಪಡ್ರೆ ಚಂದು ಸ್ಮಾರಕ ಯಕ್ಷಗಾನ ನಾಟ್ಯ ತರಬೇತಿ ಕೇಂದ್ರ ರಿ. ಪೆರ್ಲ 671552

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

ನವೀನ ಹಳೆಯದು