ಲೇಖಕರು: ದಾಮೋದರ ಶೆಟ್ಟಿ, ಇರುವೈಲ್ (ಮುಂಬಯಿ ನಿವಾಸಿ, ಹವ್ಯಾಸಿ ವೇಷಧಾರಿ. ಚಿತ್ರ: ಅವರ ವೇಷ)
ವಿಕರ್ಣ - ಧೃತರಾಷ್ಟ್ರನ ಮೂರನೆಯ ಮಗ. ಅಂದರೆ ದುರ್ಯೋಧನ - ದುಶ್ಯಾಸನರ ತಮ್ಮ. ಕೆಲವೊಂದು ಕಡೆ 24ನೆಯವನೆಂದೂ ಹೇಳಲಾಗುತ್ತಿದೆ.
ದ್ರೌಪದಿಯ ವಸ್ತ್ರಾಪಹರಣಕ್ಕೆಂದು ಕೌರವರು ಮುಂದಾದಾಗ ವಿಕರ್ಣನೊಬ್ಬನೇ ನ್ಯಾಯಯುತವಾದ ಮಾತನ್ನು ಸಭಿಕರಿಗೆ ಹೇಳಿದವನು. ಸಭಿಕರನ್ನುದ್ದೇಶಿಸಿ ಅವನು
"ಎಲೈ ಸಭಿಕರೇ, ಒಬ್ಬ ಸ್ತ್ರೀಯ ನ್ಯಾಯವನ್ನು ನಿಮ್ಮಿಂದ ತೀರಿಸಲಾಗಲಿಲ್ಲ. ದುರ್ಯೋಧನನ ಭಯದಿಂದ ನಿಜವಾದ ವಿಷಯ ವಿವರಿಸಿ ಮಾನವನ್ನುಳಿಸಲು ಒಬ್ಬರೂ ಮುಂದೆ ಬರಲಿಲ್ಲ. ನಿಮ್ಮನ್ನು ಸಭ್ಯರೆಂದು ಕರೆಯಬಹುದೇ? ದ್ರೌಪದಿ ಐವರ ಪತ್ನಿ. ನಮ್ಮೆಲ್ಲರಿಗೂ ಮಾತೃಸ್ಥಾನದ ಅತ್ತಿಗೆ. ಮೊದಲನೆಯದಾಗಿ ಯುಧಿಷ್ಠಿರನು ತನ್ನನ್ನು ಸೋತ ನಂತರ ಇವಳನ್ನು ಪಣಕ್ಕಿಟ್ಟು ಸೋತನು. ಸೋತವನು ಅನ್ಯ ಸೋದರರಿಗೂ ಪತ್ನಿಯಾದವಳನ್ನು ಪಣಕ್ಕಿಡಲು ಯುಧಿಷ್ಠಿರನಿಗೆ ಅಧಿಕಾರವೇ ಇಲ್ಲ. ಈಕೆಯನ್ನು ಪಣವಾಗಿಡುವಂತೆ ಯುಧಿಷ್ಠಿರನಿಗೆ ಬಲಾತ್ಕರಿಸಿದವನು ಶಕುನಿ. ಆದುದರಿಂದ ದ್ರೌಪದಿ ಎಂದೂ ದುರ್ಯೋಧನನ ವಸ್ತುವಾಗುವುದಿಲ್ಲ".
ಎಂದಾಗ ಸಭೆಯಲ್ಲಿದ್ದವರೆಲ್ಲ ಅವನ ಮಾತನ್ನು ಸರಿ ಎಂದು ಅನುಮೋದಿಸಿದ್ದರು. ಅಷ್ಟರ ಮಟ್ಟಿನ ಸಭ್ಯತೆ ಕೌರವರಲ್ಲಿ ಒಬ್ಬನಾದ ವಿಕರ್ಣನಲ್ಲಿತ್ತು. ಕರ್ಣನು ವಿಕರ್ಣನ ಮಾತನ್ನೊಪ್ಪದೆ, ದುಶ್ಯಾಸನನಿಗೆ ದ್ರೌಪದಿಯ ಸೀರೆಯನ್ನು ಸೆಳೆಯುವಂತೆ ಹೇಳಿದನು. ನಂತರ ದುಶ್ಯಾಸನನು ಹಾಗೆಯೇ ಮಾಡಿದನು.
ಶ್ರೀಕೃಷ್ಣನ ಅಕ್ಷಯಾಂಬರ ವರದಿಂದಾಗಿ ದ್ರೌಪದಿಯ ಮಾನ ಉಳಿಯಿತು, ದುಶ್ಯಾಸನನ ಗರ್ವಭಂಗವಾಯಿತು.
.
ಉತ್ತರ ಗೋಗ್ರಹಣ ಸಂದರ್ಭ ಇವನೂ ಬಂದಿದ್ದನು. ಕುರುಕ್ಷೇತ್ರದಲ್ಲಿ ಹದಿನಾಲ್ಕನೆಯ ದಿನದ ಯುದ್ಧದಲ್ಲಿ ನಕುಲನಿಂದ ಸೋತನು. ಮುಂದೆ ನಡೆದ ಕದನದಲ್ಲಿ, ಕರ್ಣನಿಗೆ ಸಹಾಯ ಮಾಡಲು ಹೋಗಿ ಭೀಮನಿಂದ ಹತನಾದನು.
Tags:
ಪುರಾಣ