ಕಲಾವಿದರಿಗೆ ಆರ್ಥಿಕ ನೆರವಿಗೆ ಸರ್ವರ್ ಸಮಸ್ಯೆ: ವಯೋಮಿತಿ ಸಡಿಲಿಕೆ, ಅವಧಿ ವಿಸ್ತರಣೆ ಅಗತ್ಯ

ಪ್ರಾತಿನಿಧಿಕ ಚಿತ್ರ
ಮಂಗಳೂರು: ಕೋವಿಡ್ ಎರಡನೇ ಅಲೆಯಿಂದಾಗಿ ಎದುರಿಸಬೇಕಾದ ಲಾಕ್‌ಡೌನ್‌ನಿಂದ ಕಂಗೆಟ್ಟಿರುವ ಕಲಾವಿದರು ಸೇವಾ ಸಿಂಧು ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಸಲು ಸರ್ವರ್ ಸಮಸ್ಯೆಯೂ ಎದುರಾಗುತ್ತಿದೆ. ಜೊತೆಗೆ, 35 ವರ್ಷ ಮೇಲ್ಪಟ್ಟವರಿಗೆ ಮಾತ್ರ ಪರಿಹಾರ ಹಣ ನೀಡಲಾಗುತ್ತದೆ ಎಂಬ ನಿರ್ಣಯದ ವಿರುದ್ಧ ಕಲಾವಿದರು ಧ್ವನಿಯೆತ್ತಿದ್ದಾರೆ.

ಈ ವಯೋಮಿತಿಯನ್ನು ಸಡಿಲಿಸಬೇಕು ಮತ್ತು ಸರ್ವರ್ ಸಮಸ್ಯೆಯಿರುವುದರಿಂದಾಗಿ ಅರ್ಜಿ ಸಲ್ಲಿಸಲು ತೊಡಕಾಗುತ್ತಿದ್ದು, ಇದಕ್ಕಾಗಿ ಅರ್ಜಿ ಸಲ್ಲಿಕೆಯ ಅಂತಿಮ ಗಡುವನ್ನು ವಿಸ್ತರಿಸಬೇಕು ಎಂದು ಕಲಾವಿದರು ಆಗ್ರಹಿಸಿದ್ದಾರೆ.

35ರೊಳಗಿನ ಯುವ ಕಲಾವಿದರಿಗೂ ಅರ್ಜಿ ಸಲ್ಲಿಸಲು ಅವಕಾಶ ನೀಡಬೇಕು ಎಂದು ಸಾಂಸ್ಕೃತಿಕ ವಲಯದ ಗಣ್ಯರು ಆಗ್ರಹಿಸಿದ್ದಾರೆ.

ಈ ಬಗ್ಗೆ ಕರ್ನಾಟಕ ಜಾನಪದ ಅಕಾಡೆಮಿಯ ಮಾಜಿ ಅಧ್ಯಕ್ಷ ಪಿಚ್ಚಳ್ಳಿ ಶ್ರೀನಿವಾಸ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕರಿಗೆ ಪತ್ರ ಬರೆದಿದ್ದಾರೆ. ಈ ರೀತಿಯ ನಿರ್ಬಂಧಗಳು ಮಗುವನ್ನು ಚಿವುಟಿ ತೊಟ್ಟಿಲು ತೂಗುವಂತಾಗಿದೆ. ವಯೋಮಿತಿಯನ್ನು 25ಕ್ಕೆ ಇಳಿಸಬೇಕು ಮತ್ತು ಅರ್ಜಿ ಸಲ್ಲಿಕೆಗೆ ನಿಗದಿಪಡಿಸಿರುವ ಜೂ.10ರ ಕೊನೆಯ ದಿನಾಂಕವನ್ನೂ ವಿಸ್ತರಿಸಬೇಕು ಎಂದು ಆಗ್ರಹಿಸಿದ್ದಾರೆ.

‘ಕಲಾವಿದರಿಗೆ ಸೇವಾಸಿಂಧು ಪೋರ್ಟಲ್‌ನಲ್ಲಿ ಮೊಬೈಲ್ ಮೂಲಕ ಅರ್ಜಿ ಸಲ್ಲಿಸಲು ಅಸಾಧ್ಯವಾಗುತ್ತಿದೆ. ಲಾಕ್‌ಡೌನ್ ಇರುವುದರಿಂದ ಬೇರೆ ಕಡೆ ಹೋಗಿ ಅರ್ಜಿ ಸಲ್ಲಿಸಲು ಕೂಡ ಸಮಸ್ಯೆಯಾಗುತ್ತಿದೆ. ಈ ಕಾರಣದಿಂದಾಗಿ ಅರ್ಜಿ ಸಲ್ಲಿಕೆಯ ಅಂತಿಮ ದಿನಾಂಕವನ್ನು ವಿಸ್ತರಿಸಬೇಕು. ವಯೋಮಿತಿಯನ್ನು ಕೂಡ 25ಕ್ಕೆ ಇಳಿಕೆ ಮಾಡಬೇಕು' ಎಂದು ಕರ್ನಾಟಕ ನಾಟಕ ಅಕಾಡೆಮಿ ಮಾಜಿ ಅಧ್ಯಕ್ಷ ಎಲ್.ಬಿ. ಶೇಖ್ ಮಾಸ್ತರ್ ಮನವಿ ಮಾಡಿದ್ದಾರೆ.

ವಯೋಮಿತಿಯನ್ನು 20 ವರ್ಷಕ್ಕೆ ಇಳಿಸುವುದು ಸೂಕ್ತ. ₹ 3 ಸಾವಿರ ನೆರವು ಯುವ ಕಲಾವಿದರಿಗೆ ಆಸರೆಯಾಗಲಿದೆ ಎಂದು ಅಖಿಲ ಕರ್ನಾಟಕ ವೃತ್ತಿ ರಂಗಭೂಮಿ ನಾಟಕ ಕಂಪನಿಗಳ ಮಾಲೀಕರ ಸಂಘದ ಅಧ್ಯಕ್ಷ ಚಿಂದೋಡಿ ಶ್ರೀಕಂಠೇಶ ಆಗ್ರಹಿಸಿದ್ದಾರೆ.

ಚಿಕ್ಕ ವಯಸ್ಸಿನಲ್ಲೇ, ಉದಾಹರಣೆಗೆ 15ರ ಹರೆಯದಲ್ಲೇ ಕಲಾ ರಂಗಕ್ಕೆ ಪ್ರವೇಶಿಸಿರುವ ಕಲಾವಿದರು, ಕಲೆಯನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಅಂಥವರ 20 ವರ್ಷ ಕಲಾ ಸೇವೆಯನ್ನು ಗುರುತಿಸಬೇಕಾಗುತ್ತದೆ ಎಂಬುದು ಸಾಂಸ್ಕೃತಿಕ ವಲಯದಲ್ಲಿ, ವಿಶೇಷವಾಗಿ ಯಕ್ಷಗಾನ ಕ್ಷೇತ್ರದಲ್ಲಿ ಕೇಳಿ ಬರುತ್ತಿರುವ ಮಾತು. 

ಹಲವಾರು ಯಕ್ಷಗಾನ ಕಲಾವಿದರು, ವಯೋಮಿತಿಯನ್ನು ಇಳಿಸಬೇಕು ಮತ್ತು ಅಂತಿಮ ದಿನಾಂಕವನ್ನು ವಿಸ್ತರಿಸಬೇಕು ಎಂದು ಆಗ್ರಹಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

ನವೀನ ಹಳೆಯದು