✍ ಯಕ್ಷರಂಗವಾಳಿದ ರಾಮಯ್ಯರನ್ನು ನೆನಪಿಸಿಕೊಂಡಿದ್ದಾರೆ ಯಕ್ಷಗಾನ ಗುರುಗಳಾದ ಸಬ್ಬಣಕೋಡಿ ರಾಮ ಭಟ್ ಅವರು.
ಯಕ್ಷಗಾನ ಕ್ಷೇತ್ರದಲ್ಲಿ ರಾಮಯ್ಯ ಎಂಬ ಹೆಸರು ಪ್ರಸಿದ್ಧವಾಗಿ ಮೂಡಿ ಬಂದಿದೆ. ಪ್ರಸಿದ್ಧ ಭಾಗವತರಾದ ಅಂದಿನ ದೊಡ್ಡ ಬಲಿಪರು, ಈಗಿನ ಬಲಿಪರು, ಮಂಡೆಚ್ಚರು, ಅಗರಿಯವರು, ಕಡತೋಕರು, ಕುಂಡೆಚ್ಚರು ಮೊದಲಾದ ಪ್ರಸಿದ್ಧ ಭಾಗವತರೊಂದಿಗೆ ಕಲಾವಿದರಾಗಿ ಪ್ರಸಿದ್ದಿ ಪಡೆದವರಲ್ಲಿ ಹಲವು ಮಂದಿ 'ರಾಮಯ್ಯ'ರಿದ್ದಾರೆ.
ಕೂಡ್ಲು ಮೇಳ, ಕಟೀಲು ಮೇಳ, ಕರ್ನಾಟಕ ಮೇಳ, ಧರ್ಮಸ್ಥಳ ಮೇಳ, ಸುರತ್ಕಲ್ ಮೇಳ - ಹೀಗೆ ಹಲವಾರು ಮೇಳಗಳಲ್ಲಿ ವೇಷಗಳನ್ನು ಮಾಡಿ ತಮ್ಮದೇ ಆದ ಛಾಪನ್ನು ಒತ್ತಿದವರು ಈ ರಾಮಯ್ಯರು. 1) ಅಳಿಕೆ ರಾಮಯ್ಯ 2) ವಿಟ್ಲ ರಾಮಯ್ಯ 3 ) ಎಂಪೆಕಟ್ಟೆರಾಮಯ್ಯ 4 ) ಗುಂಪೆ ರಾಮಯ್ಯ 5) ಪುಳಿಂಚ ರಾಮಯ್ಯ 6 ) ಗುಬ್ಯರಾಮಯ್ಯ
ಇವರೆಲ್ಲರ ವೇಷಗಳು ರಂಗಸ್ಥಳ ಪ್ರವೇಶಿಸಿದರೆ ನೋಡಲು ಬಹಳ ಚಂದ. ಒಮ್ಮೆ ನೋಡಿದರೆ ಮಗದೊಮ್ಮೆ ನೋಡೋಣವೆಂದು ಕಾಣಿಸುತ್ತದೆ. ಶ್ರೀಯುತ ಅಳಿಕೆ ರಾಮಯ್ಯರವರು ರಾಜ್ಯ ಪ್ರಶಸ್ತಿ ವಿಜೇತರು. ಸ್ರ್ತೀವೇಷ, ಪುಂಡು ವೇಷ, ಕಿರೀಟ ವೇಷ ಮೊದಲಾದ ವೇಷಗಳನ್ನು ಮಾಡಿ ಜನಮೆಚ್ಚುಗೆ ಗಳಿಸಿದವರು. ನನ್ನ ಗುರುಗಳಾದ ಪಡ್ರೆ ಚಂದುರವರ ಸಮಕಾಲೀನರು.
ಅಳಿಕೆಯವರೊಂದಿಗೆ ನನಗೆ ಕರ್ನಾಟಕ ಮೇಳದಲ್ಲಿ ಮತ್ತು ಕಟೀಲು ಮೇಳದಲ್ಲಿ ತಿರುಗಾಟ ಆಗಿದೆ. ಅವರ ವೇಷಗಳ ಕುರಿತು ಲೇಖನ ಬರೆದಷ್ಟೂ ಮುಗಿಯದು. ಅವರ ಋತುಪರ್ಣ ತೆಂಕುತಿಟ್ಟಿನಲ್ಲಿ ದಾಖಲೆಯಾಗಿ ಉಳಿದಿದೆ. ಋತುಪರ್ಣ ವೇಷವನ್ನು ಪ್ರತ್ಯಕ್ಷ ಕಂಡಂತಹ ಅಂದಿನ ಮುಖ್ಯಮಂತ್ರಿ ಮಾನ್ಯ ಎಸ್. ನಿಜಲಿಂಗಪ್ಪನವರು ಮೆಚ್ಚಿ ರಾಜ್ಯ ಪ್ರಶಸ್ತಿಯನ್ನು ಘೋಷಿಸಿದರು.
ಕಟೀಲು ಮೇಳದಲ್ಲಿ ಈಗಿನ ಹಿರಿಯ ಶ್ರೀಗಳಾದ ಬಲಿಪರೊಂದಿಗೆ ತಿರುಗಾಟವನ್ನು ಮಾಡಿ ನಿವೃತ್ತರಾದವ ಅಳಿಕೆಯವರು. ಅವರು ರಂಗಕ್ಕೆ ಪ್ರವೇಶಿಸಿದಾಗ ಪ್ರೇಕ್ಷಕರು ಅಳಿಕೆಯವರು ಬಂದರು ಎಂದು ತಮ್ಮೊಳಗೆ ಉದ್ಘೋಷಿಸುತ್ತಿದ್ದರು. ಇದನ್ನು ನಾನು ಪ್ರತ್ಯಕ್ಷ ಕಂಡವನು.
(2) ವಿಟ್ಲ ರಾಮಯ್ಯ. ಇವರ ವೇಷವನ್ನು ನಾನು ಬಾಲ್ಯದಲ್ಲಿ ನೋಡಿದ್ದೇನೆ. ಭಾರ್ಗವ ವಿಜಯದ ಭಾರ್ಗವ ಕಿರೀಟದ ವೇಷ. ಕೊಡಲಿಯನ್ನು ಹಿಡಿದು ಪ್ರವೇಶಿಸಿದಾಗ ನಮ್ಮೆಲ್ಲರ ಮೈ ರೋಮಾಂಚನ ಆಗಿತ್ತು. ನನ್ನ ತಂದೆಯವರಲ್ಲಿ ಇವರು ಯಾರು? ಎಂದು ಪ್ರಶ್ನಿಸಿದೆ. ಇವರು ವಿಟ್ಲ ರಾಮಯ್ಯ ಅಂದರು. ಮೇಳ ಕೂಡ್ಲು. ಮತ್ತೆ ಅವರು ನಮ್ಮ ಮನೆ ಸಬ್ಬಣಕೋಡಿಗೆ ಬಂದಿದ್ದರು. ಎಲ್ಲಾ ತರದ ಕಿರೀಟ ವೇಷಗಳನ್ನು ಮಾಡಿದರೂ ವಿಟ್ಲ ರಾಮಯ್ಯ ಎನ್ನುವ ಹೆಸರನ್ನು ಉಳಿಸಿದವರು.
(3) ಎಂಪೆಕಟ್ಟೆ ರಾಮಯ್ಯ. 1973ರಲ್ಲಿ ಧರ್ಮಸ್ಥಳ ಮೇಳದ ಯಕ್ಷಗಾನ ಬಯಲಾಟ ವಿಟ್ಲದಲ್ಲಿ ನಡೆದಿತ್ತು. ಪಾಂಡವಾಶ್ವಮೇಧ. ಅದರಲ್ಲಿ ಸುಧನ್ವ ಮೋಕ್ಷದ ಅರ್ಜುನನಾಗಿ ಎಂಪೆಕಟ್ಟೆ ರಾಮಯ್ಯ, ಕೃಷ್ಣನಾಗಿ ಕೆ. ಗೋವಿಂದಭಟ್, ಸುಧನ್ವನಾಗೀ ಶ್ರೀ ಕುಂಬಳೆ ಸುಂದರ ರಾವ್.
ಅಂದಿನ ಅರ್ಜುನ ಪ್ರೇಕ್ಷಕರ ಮನ ಸೂರೆ ಗೊಂಡಿತ್ತು. ಎಂಪೆಕಟ್ಟೆಯವರ ಕಣ್ಣನ್ನು ನೋಡಿದರೆ ಸಾಕು, ಆಕರ್ಷಣೀಯ. ಖಳ ನಾಯಕ, ನಾಯಕ ಪಾತ್ರ ಮಾಡುವಂತಹ ಸಮರ್ಥ ಕಲಾವಿದರು ಎಂಪೆಕಟ್ಟೆ ರಾಮಯ್ಯ.
(4) ಗುಂಪೆ ರಾಮಯ್ಯ. ಇವರೊಂದಿಗೆ ಕರ್ನಾಟಕ ಮೇಳದಲ್ಲಿ ನನಗೆ ತಿರುಗಾಟದ ಅನುಭವವಿದೆ. ಒಳ್ಳೆಯ ಮಾತುಗಾರ. ಶ್ರೀ ರಾಮದಾಸ ಸಾಮಗರ ಸ್ಥಾನವನ್ನು ತುಂಬಬಹುದಾಗಿದ್ದ ಸಮರ್ಥ ಕಲಾವಿದ. ಭೀಷ್ಮ ಪರ್ವದ ಭೀಷ್ಮನಂತೂ ಬಹಳ ಪ್ರಸಿದ್ಧ. ಮಾತುಗಾರಿಕೆ ಹಾಗೂ ವೇಷಗಳಲ್ಲಿ ತಮ್ಮದೇ ಛಾಪನ್ನು ಒತ್ತಿ ಪ್ರೇಕ್ಷಕರ ಮನಸ್ಸಿನಲ್ಲಿ ಉಳಿದರು ಗುಂಪೆ ರಾಮಯ್ಯನವರು.
(5) ಪುಳಿಂಚ ರಾಮಯ್ಯ. ಇವರೊಂದಿಗೆ ಕರ್ನಾಟಕ ಮೇಳದಲ್ಲಿ ತಿರುಗಾಟ ಆಗಿತ್ತು. ಬಣ್ಣದ ವೇಷಗಳಲ್ಲಿ ಸುಪ್ರಸಿದ್ಧರು. ಆಮೇಲೆ ಕಿರೀಟ ವೇಷಗಳನ್ನು ಮಾಡುವಂತಹಾ ಸಮರ್ಥರು. ಹಾಸ್ಯದಲ್ಲೂ ಬಹಳ ಹೆಸರನ್ನು ಗಳಿಸಿದವರು. ಇವರ ಶುಂಭ, ರಾವಣ, ಯಮ ಮೊದಲಾದ ವೇಷಗಳಂತೂ ಅದ್ಭುತ. ಹೀಗೆ ಹೆಸರನ್ನು ಗಳಿಸಿದವರು ಪುಳಿಂಚರು.
(6) ಗುಬ್ಯ ರಾಮಯ್ಯ. ಇವರು ಒಬ್ಬ ತೆಂಕುತಿಟ್ಟಿನ ಸಮರ್ಥ ಕಲಾವಿದರು. 1972ರಲ್ಲಿ ನನ್ನ ಅಜ್ಜನ ಮನೆ ಸಮೀಪ ಪಂಜಿಗದ್ದೆ ಎಂಬಲ್ಲಿ ಸುಂಕದಕಟ್ಟೆ ಮೇಳದವರ ಶಶಿಪ್ರಭಾ ಪರಿಣಯ ಎಂಬ ಯಕ್ಷಗಾನ ಬಯಲಾಟ ನಡೆದಿತ್ತು. ಆದಿನ ಶ್ರೀ ಗುಬ್ಯ ರಾಮಯ್ಯ ಅವರ ಮಾರ್ತಾಂಡ ತೇಜ ಎಲ್ಲರ ಮನ ಸೂರೆಗೊಂಡಿತು. ಗುಬ್ಯ ರಾಮಯ್ಯ ಪುಂಡು ವೇಷ, ಕಿರೀಟ ವೇಷ ಎಲ್ಲವನ್ನೂ ಮಾಡಬಲ್ಲ ತೆಂಕುತಿಟ್ಟಿನ ಸಮರ್ಥ ಅಗ್ರಮಾನ್ಯ ಕಲಾವಿದರಾಗಿದ್ದರು.
ಈಗಿನ ರೀತಿ ಮೊಬೈಲ್ ಯುಗ ಆಗುತ್ತಿದ್ದರೆ ಈ ಎಲ್ಲ ರಾಮಯ್ಯರ ವೇಷಗಳ ದಾಖಲೆ ಇರುತ್ತಿತ್ತು. ಈ ಎಲ್ಲಾ ರಾಮಯ್ಯರು ಯಕ್ಷರಂಗಕ್ಕೆ ಕೊಟ್ಟಂತಹಾ ಕೊಡುಗೆ ಅದ್ಭುತ, ಮರೆಯಲಸಾಧ್ಯ.
ಬರಹ: ಸಬ್ಬಣಕೋಡಿ ರಾಮಭಟ್ ನಿರ್ದೇಶಕರು, ಪಡ್ರೆ ಚಂದು ಸ್ಮಾರಕ ಯಕ್ಷಗಾನ ನಾಟ್ಯ ತರಬೇತಿ ಕೇಂದ್ರ, (ರಿ) ಪೆರ್ಲ.
Yakshagana.in ಸೇರಿಕೊಳ್ಳಿ: ವಾಟ್ಸ್ಆ್ಯಪ್ | ಟೆಲಿಗ್ರಾಂ | ಫೇಸ್ಬುಕ್ | ಟ್ವಿಟರ್ | ಯೂಟ್ಯೂಬ್ | ಇನ್ಸ್ಟಾಗ್ರಾಂ