ಪುರಾಣದ ಮಾಹಿತಿ ಲೇಖನ ಸರಣಿ: ದಾಮೋದರ ಶೆಟ್ಟಿ ಇರುವೈಲು, ಮುಂಬಯಿ
ಅರ್ಜುನನ ಮಗ ಅಭಿಮನ್ಯುವಿನಿಂದ ಉತ್ತರೆಯಲ್ಲಿ ಹುಟ್ಟಿದ ಮಗನೇ ಪರೀಕ್ಷಿತ. ಈತನು ಧರ್ಮಾತ್ಮ ಹಾಗೂ ದೈವಭಕ್ತ. ಈತನ ಹೆಂಡತಿಯ ಹೆಸರು ಮಾದ್ರವತಿ. ಈತನ ಮಗನೇ ಜನಮೇಜಯ.
ಒಮ್ಮೆ ಬೇಟೆಗಾಗಿ ಹೋಗಿದ್ದ ಪರೀಕ್ಷಿತ, ದಣಿದು ಅಲ್ಲೇ ಇದ್ದ ಋಷ್ಯಾಶ್ರಮಕ್ಕೆ ಹೋಗಿ ತಪಸ್ಸಿಗೆ ಕುಳಿತಿದ್ದ ಶಮೀಕ ಋಷಿಯಲ್ಲಿ ನೀರು ಕೇಳುತ್ತಾನೆ. ಆದರೆ ಸಮಾಧಿ ಸ್ಥಿತಿಯಲ್ಲಿದ್ದ ಶಮೀಕ ಇದನ್ನು ಕೇಳಿಸಿಕೊಳ್ಳುವುದಿಲ್ಲ. ಆಗ ಕೋಪಗೊಂಡ ಪರೀಕ್ಷಿತ, ಶಮೀಕ ತನ್ನನ್ನು ಅವಮಾನ ಮಾಡಿದನೆಂದು ಭಾವಿಸಿ ಅಲ್ಲೇ ಸತ್ತು ಬಿದ್ದಿದ್ದ ಒಂದು ಹಾವನ್ನು ಬಿಲ್ಲಿನಿಂದ ಎತ್ತಿ ಅವನ ಕೊರಳಿಗೆ ಮಾಲೆಯ ರೀತಿ ಹಾಕಿ ಹೋಗುತ್ತಾನೆ. ಸ್ವಲ್ಪ ಸಮಯದಲ್ಲೆ ಅಲ್ಲಿಗೆ ಬಂದ ಶಮೀಕನ ಮಗನಾದ ಶೃಂಗಿ, ತಂದೆಗಾದ ಅವಮಾನದಿಂದ ಕೋಪಗೊಂಡು ಪರೀಕ್ಷಿತನು ಏಳು ದಿನಗಳೊಳಗಾಗಿ ತಕ್ಷಕನಿಂದ ಕಚ್ಚಲ್ಪಟ್ಟು ಸಾಯುವಂತೆ ಶಾಪ ಕೊಡುತ್ತಾನೆ.
ಪರೀಕ್ಷಿತನು ಶಾಪದ ವಿಚಾರ ತಿಳಿದು ಶೃಂಗಿಯ ಶಾಪದಿಂದ ತನ್ನನ್ನು ರಕ್ಷಿಸಿಕೊಳ್ಳಲು ಅರಮನೆಯಿಂದ ಬಹು ದೂರ ನೀರಿನ ನಡುವೆ ಒಂದು ಕಂಬದ ಮೇಲೆ ಭವನವನ್ನು ಕಟ್ಟಿಕೊಂಡು ಏಳು ದಿನಗಳ ಕಾಲ ಅದರಲ್ಲಿದ್ದುಕೊಂಡಿದ್ದನು. ಶುಕನೆಂಬ ಮಹರ್ಷಿಯು ಆಗ ರಾಜನಿಗೂ ರಾಣಿಗೂ ಭಾಗವತ ಕಥೆಯನ್ನು ಹೇಳುತ್ತಿದ್ದನು.
ಏಳನೆಯ ದಿನ ಕೆಲ ಬ್ರಾಹ್ಮಣರು ಬಂದು ಪರೀಕ್ಷಿತನಿಗೆ ಕೆಲವು ಹಣ್ಣುಗಳನ್ನು ಕೊಟ್ಟು ಹೋದರು. ಪರೀಕ್ಷಿತನು ತಿನ್ನುವುದಕ್ಕಾಗಿ ಒಂದು ಹಣ್ಣನ್ನು ಎತ್ತಿಕೊಂಡನು. ಕೂಡಲೇ ಅದರೊಳಗಿನಿಂದ ಒಂದು ಹುಳು ಹೊರಬಂದಿತು. ನೋಡುತ್ತಿದ್ದಂತೆಯೇ ಆ ಹುಳು ದೊಡ್ಡದಾಗಿ ಬೆಳೆದು ತನ್ನ ಬಾಯಿಂದ ವಿಷವನ್ನು ಉಗುಳಿ ಹೋಯಿತು. ಕಣ್ಣು ಮುಚ್ಚಿ ತೆರೆಯುವುದರೊಳಗಾಗಿ ಭವನದಲ್ಲಿದ್ದವರೆಲ್ಲಾ ಸತ್ತುಹೋದರು. ಹೀಗೆ ಶೃಂಗಿಯ ಶಾಪ ಫಲಿಸಿತು.
ಅನಂತರ ಜನಮೇಜಯನು ಹಸ್ತಿನಾವತಿಯ ಸಿಂಹಾಸನ ಏರಿದನು. ಈತನು ಪ್ರಜಾಕ್ಷೇಮಕ್ಕಾಗಿ ಅನೇಕ ಯಜ್ಞ ಯಾಗಗಳನ್ನೂ ದಾನಧರ್ಮಗಳನ್ನೂ ಮಾಡಿದನು. ಜನಮೇಜಯ ಮಹಾರಾಜನಿಗೆ ಇಬ್ಬರು ಗಂಡು ಮಕ್ಕಳು. ಮಕ್ಕಳಿಗೆ ಶತಾನೀಕ ಮತ್ತು ಶಂಕುಕರ್ಣರೆಂದು ಹೆಸರಿಟ್ಟನು.
ಒಂದು ದಿನ ಉತ್ತಂಕನೆಂಬ ಋಷಿಯು ಅರಮನೆಗೆ ಬಂದನು. ಜನಮೇಜಯನು ಋಷಿಯನ್ನು ಸ್ವಾಗತಿಸಿ - “ಮಹಾತ್ಮ, ತಮ್ಮ ಬರುವಿಕೆಯಿಂದ ನನ್ನ ಮನೆ ಪಾವನವಾಯಿತು. ನನ್ನಿಂದ ತಮಗೆ ಏನಾಗಬೇಕು?” ಎಂದು ಕೇಳಿದನು.
ಉತ್ತಂಕನು, “ಮಹಾರಾಜ, ಋಷಿಗಳಾದ ನಮಗೆ ಯಾರ ಮೇಲೂ ವೈರವಿಲ್ಲ. ಆದರೆ ನಾಗಲೋಕದ ತಕ್ಷಕನು ಗರ್ವದಿಂದ ನನಗೆ ಅಪಕಾರ ಮಾಡಿದ್ದಾನೆ. ದುರ್ಜನರನ್ನು ಶಿಕ್ಷಿಸಬೇಕಾದುದು ರಾಜನ ಕರ್ತವ್ಯ. ಆದ್ದರಿಂದ ನೀನು ಅವನನ್ನು ಶಿಕ್ಷಿಸಿ ಬುದ್ಧಿ ಕಲಿಸು.” ಎಂದನು.
ಜನಮೇಜಯ: “ಮಹಾತ್ಮರೇ, ಅವನು ಮಾಡಿದ ಅಪರಾಧವೇನು?”
ಉತ್ತಂಕನು, "ನಾನು ಗುರುವಿನ ಬಳಿ ವೇದಗಳನ್ನೆಲ್ಲ ಕಲಿತೆ. ಗುರುವಿಗೆ ಗುರುದಕ್ಷಿಣೆ ಕೊಡಲು ಒಬ್ಬ ರಾಜನನ್ನು ಬೇಡಿ, ಕಿವಿಯಲ್ಲಿ ಧರಿಸುವ ಕುಂಡಲಗಳನ್ನು ಪಡೆದುಕೊಂಡೆ. ಗುರುವಿಗೆ ಅವನ್ನು ಕೊಡಲೆಂದು ತರುತ್ತಿರುವಾಗ ಬಾಯಾರಿಕೆಯಾಯಿತು. ಒಂದು ಬಾವಿಯ ದಡದಲ್ಲಿ ಕುಂಡಲಗಳನ್ನಿಟ್ಟು ನಾನು ನೀರು ಕುಡಿಯುತ್ತಿರುವಾಗ, ಈ ದುಷ್ಟನಾದ ತಕ್ಷಕನು ನನಗೆ ಗೊತ್ತಾಗದಂತೆ ಅವನ್ನು ಕದ್ದುಕೊಂಡು ನಾಗಲೋಕಕ್ಕೆ ಹೊರಟುಹೋದನು. ನಾನು ದುಃಖದಿಂದ ಎಲ್ಲೆಲ್ಲೋ ಹುಡುಕಿ ಕೊನೆಗೆ ನಾಗಲೋಕಕ್ಕೆ ಹೋಗಬೇಕಾಯಿತು. ನಾಗರಾಜನು ನನಗೆ ಕುಂಡಲಗಳನ್ನೇನ್ನೋ ಕೊಟ್ಟನು. ಆದರೆ ತಕ್ಷಕನಿಗೆ ಯಾವ ಶಿಕ್ಷೆಯನ್ನೂ ಕೊಡಲಿಲ್ಲ. ನೀನೇ ಹೇಳು, ಇದು ಸರಿಯೇ?”
ಜನಮೇಜಯನು ಯೋಚಿಸುತ್ತಾ “ತಕ್ಷಕನು ಅಪರಾಧಿಯೆಂಬ ಮಾತೇನೋ ಸರಿ. ಆದರೆ ಅವನು ಸರ್ಪಗಳ ಲೋಕದವನು. ತಮ್ಮ ಮಾತಿನಂತೆ ನಾಗರಾಜನು ಅವನನ್ನು ಶಿಕ್ಷಿಸಬೇಕಾಗಿತ್ತು. ನಾಗಲೋಕದ ಪ್ರಜೆಯ ಮೇಲೆ ನಮಗೆ ಅಧಿಕಾರವಿಲ್ಲ. ಅಂದಮೇಲೆ ತಕ್ಷಕನನ್ನು ಶಿಕ್ಷಿಸುವುದೆಂದರೆ ನಾಗಲೋಕದ ವೈರ ಕಟ್ಟಿದಂತಾಗುತ್ತದೆ. ನಮ್ಮ ರಾಜ್ಯದೊಳಕ್ಕೆ ಬಂದು ತಕ್ಷಕನು ಯಾವ ತಪ್ಪೂ ಮಾಡದಿರುವಾಗ ಇದೆಲ್ಲಾ ಸಾಧ್ಯವೇ?” ಎಂದನು.
ಉತ್ತುಂಕ ಋಷಿ ಮತ್ತೆ ಹೇಳಿದ: “ಜನಮೇಜಯ, ತಕ್ಷಕನು ನನಗೆ ಅಪರಾಧಿ. ಆದರೆ ಅವನು ನಿನಗೆ ವೈರಿ. ಧರ್ಮಾತ್ಮನಾದ ನಿನ್ನ ತಂದೆಯನ್ನು ಕಚ್ಚಿ ಕೊಂದವ ಈ ತಕ್ಷಕನೇ ಅಲ್ಲವೆ? ತಂದೆಯನ್ನೇ ಕೊಂದ ಈ ದ್ರೋಹಿಯನ್ನು ಶಿಕ್ಷಿಸಿ ತಂದೆಯ ಋಣ ತೀರಿಸದಿದ್ದರೆ ನೀನು ವೀರಪುತ್ರನಾಗಿ ಹುಟ್ಟಿದ್ದಕ್ಕೆ ಏನು ಸಾರ್ಥಕ?
ಜನಮೇಜಯನು ಆಶ್ಚರ್ಯದಿಂದ “ನನ್ನ ತಂದೆಗೆ ಶಮೀಕ ಋಷಿಯ ಮಗನಾದ ಶೃಂಗಿಯಿಂದ ಶಾಪವಿತ್ತೆಂದು ಕೇಳಿದ್ದೆನಲ್ಲ?" ಎಂದನು.
ಉತ್ತಂಕ: ಜನಮೇಜಯ, ಶಾಪವು ಕೇವಲ ನೆಪಮಾತ್ರ. ನಿನ್ನ ತಂದೆಯನ್ನು ಔಷಧದಿಂದ ಉಳಿಸಲು ಕಾಶ್ಯಪನೆಂಬ ವಿಷ ವೈದ್ಯನು ಬರುತ್ತಿದ್ದ. ತಕ್ಷಕನು ಅವನು ಬರದಂತೆ ತಡೆದನು. ಇಲ್ಲದಿದ್ದರೆ ಧರ್ಮಾತ್ಮನೂ ದೈವಭಕ್ತನೂ ಆದ ನಿನ್ನ ತಂದೆ ಸಾಯುತ್ತಿದ್ದನೇ? ಒಟ್ಟಿನಲ್ಲಿ ನನಗೆ ತೋಚಿದ್ದು ಹೇಳಿದ್ದೇನೆ. ನಿನ್ನಿಷ್ಟ ಬಂದಂತೆ ಮಾಡು ಎಂದು ಹೇಳಿ ಉತ್ತಂಕ ಋಷಿ ಹೊರಟುಹೋದನು.
ಈ ಮಾತುಗಳನ್ನು ಕೇಳಿ ಜನಮೇಜಯನಿಗೆ ಬಹಳ ದುಃಖವಾಯಿತು, ಕೋಪ ಬಂದಿತು. ಆಗ ಮಂತ್ರಿಗಳೂ ಸಹ ಜನಮೇಜಯನನ್ನು ಕುರಿತು “ಪ್ರಭೂ, ಋಷಿ ಹೇಳಿದ್ದೆಲ್ಲವೂ ನಿಜ. ತಮಗೆ ತಿಳಿದರೆ ದುಃಖವಾಗುವುದೆಂದು ಆಗ ನಾವು ಹೇಳಲಿಲ್ಲ” ಎಂದರು.
ಮಂತ್ರಿಗಳ ಮಾತು ಮುಗಿಯುತ್ತಿದ್ದಂತೆ ಜನಮೇಜಯನ ಕೋಪ ಕೆರಳಿತು. ರೋಷದಿಂದ ಅರಮನೆಯೆಲ್ಲಾ ನಡುಗುವಂತೆ ಗರ್ಜಿಸಿದನು. “ದ್ರೋಹಿ ತಕ್ಷಕ! ನಿನಗೆ ನನ್ನ ತಂದೆ ಮಾಡಿದ್ದ ಅಪರಾಧವಾದರೂ ಏನು? ಆತನು ಬದುಕಿದ್ದರೆ ನಿನಗಾಗುತ್ತಿದ್ದ ನಷ್ಟವೇನು? ನೀನಂತೂ ವಿಷಜಂತು. ಆದರೆ ಉಪಕಾರ ಮಾಡಲು ಬರುತ್ತಿದ್ದ ವೈದ್ಯನನ್ನು ಬರದಂತೆ ಮಾಡಿದ ದ್ರೋಹಕ್ಕಾಗಿ ನಿನಗೆ ಶಿಕ್ಷೆ ಮಾಡಿಯೇ ತೀರುತ್ತೇನೆ. ನಿನ್ನಿಂದ ಮುಂದೆ ಯಾರಿಗೂ ಅನ್ಯಾಯ ಆಗಲು ಬಿಡುವುದಿಲ್ಲ. ನಿನ್ನ ಪರವಾಗಿ ದೇವತೆಗಳೇ ಅಡ್ಡ ಬಂದರೂ ನನ್ನನ್ನು ತಡೆಯಲಾರರು!".
ಜನಮೇಜಯನು ಸರ್ಪಗಳ ನಾಶಕ್ಕಾಗಿ ನಾಗಯಜ್ಞವನ್ನು ಮಾಡಲು ತೀರ್ಮಾನಿಸಿ, ಯಜ್ಞಕ್ಕೆ ಬೇಕಾದ ಸಾಮಗ್ರಿಗಳನ್ನು ಸಿದ್ಧಪಡಿಸುವಂತೆ ಮಂತ್ರಿಗಳಿಗೆ ಅಪ್ಪಣೆ ಮಾಡಿದ. ತಕ್ಷಕನು ಪ್ರಾಣವನ್ನು ಉಳಿಸಿಕೊಳ್ಳುವುದಕ್ಕಾಗಿ ತನ್ನ ಸ್ನೇಹಿತನಾದ ಇಂದ್ರನ ಪೀಠಕ್ಕೆ ಸುರುಳಿ ಸುತ್ತಿಕೊಂಡು ಅಲ್ಲೇ ಇರುತ್ತಾನೆ.
ತಕ್ಷಕನ ಸಂಹಾರಕ್ಕಾಗಿ ಯಜ್ಞವು ಪ್ರಾರಂಭವಾಯಿತು. ಮಂತ್ರಗಳ ಮೋಹಕ್ಕೆ ತರಗೆಲೆಗಳಂತೆ ಬಂದು ಸರ್ಪಗಳು ಬೆಂಕಿಗೆ ಬೀಳುತ್ತಿದ್ದವು. ಮೊದಲಿಗೆ ಸಣ್ಣ ಹಾವುಗಳು, ಬರುಬರುತ್ತಾ ದೊಡ್ಡ ಹಾವುಗಳು ಬರಲಾರಂಭಿಸಿದವು. ಎಲ್ಲವೂ ಬಂದು ಆ ದೊಡ್ಡ ಯಜ್ಞ ಕುಂಡದ ಬೆಂಕಿಗೆ ಬಿದ್ದು ಬೂದಿಯಾಗತೊಡಗಿದವು. ತಲೆ-ಬಾಲಗಳನ್ನು ಬಡಿಯುತ್ತಾ ಒದ್ದಾಡುವಾಗ ಅವು ಮಾಡುವ ಬುಸ್ ಬುಸ್ ಎಂಬ ಭಯಂಕರ ಶಬ್ದದ ಜೊತೆಯಲ್ಲಿ ವಿಷವು ತುಂಬಿಹೋಯಿತು.
ನಾಗಲೋಕವೇ ಅಳಿದು ಹೋಗುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಇಷ್ಟಾದರೂ ತಕ್ಷಕನು ಏಕೆ ಕಾಣಿಸುತ್ತಿಲ್ಲವೆಂದು ಜನಮೇಜಯನಿಗೆ ಯೋಚನೆಯಾಯಿತು. ಅಷ್ಟರಲ್ಲಿ ಹೋಮ ಕುಂಡದಲ್ಲಿ ಅಗ್ನಿದೇವನು ಪ್ರತ್ಯಕ್ಷನಾಗಿ “ಇಂದ್ರನು ತಕ್ಷಕನನ್ನು ತನ್ನ ಬಳಿ ರಕ್ಷಿಸಿಕೊಂಡಿದ್ದಾನೆ” ಎಂದು ಹೇಳಿ ಮತ್ತೆ ಬೆಂಕಿಯ ರೂಪ ತಾಳಿದನು.
ಜನಮೇಜಯನಿಗೆ ಕೋಪ ಉಕ್ಕಿಬಂದು, ದುಷ್ಟರಿಗೆ ಸಹಾಯ ಮಾಡುವುದು ಅಪರಾಧ. ಮಹಾಮುನಿಗಳೇ, ಇಂದ್ರನು ತಕ್ಷಕನನ್ನು ಕೈಬಿಡದಿದ್ದರೆ ಯಜ್ಞಕ್ಕೆ ತಕ್ಷಕನ ಜೊತೆಗೆ ಇಂದ್ರನನ್ನೂ ಬೀಳಿಸಿರಿ, ಎಂದನು.
ಈಗ ಹೋಮದ ವೇಗ ಮತ್ತಷ್ಟು ಜೋರಾಯಿತು. ಮಂತ್ರಶಕ್ತಿಯ ಪ್ರಭಾವಕ್ಕೆ ತಕ್ಷಕನ ಜೊತೆ ಇಂದ್ರನ ಸಮೇತ ಆತನ ಪೀಠವೂ ಯಜ್ಞಕುಂಡದತ್ತ ಎಳೆಯಲು ಆರಂಭವಾಯಿತು.
ಆಗ ನಾಗರೆಲ್ಲಾ ಆಸ್ತೀಕನೆಂಬ ಮಹಾ ಜ್ಞಾನಿಯ ಮೊರೆ ಹೊದರು. ಆಸ್ತೀಕನು ಮತ್ತಾರೂ ಅಲ್ಲ, ನಾಗರಾಜನಾದ ವಾಸುಕಿಯ ತಂಗಿ ವಜರತ್ಕಾರುವಿನ ಮಗ. ನಾಗಲೋಕವನ್ನು ರಕ್ಷಿಸುವುದಕ್ಕಾಗಿ ನಾಗರಾಜನು ಸೋದರಳಿಯನ ಸಹಾಯ ಬೇಡಿದನು. ವೇದಗಳನ್ನೋದಿ ಜ್ಞಾನಿಯಾಗಿದ್ದ ಆಸ್ತೀಕನು ಪರೋಪಕಾರವೇ ಧರ್ಮವೆಂದು ತಿಳಿದವನು. ಸರಿ ಎಂದು ಅಭಯವಿತ್ತನು.
ಇನ್ನೇನು ಬೆಂಕಿಯೊಳಕ್ಕೆ ತಕ್ಷಕನು ಬೀಳಬೇಕು, ಆ ವೇಳೆಗೆ ಯಜ್ಞ ನಿಲ್ಲಲಿ ಎಂದು ಯಾರೋ ಕೂಗಿ ಹೇಳಿದಂತಾಯಿತು. ಜನಮೇಜಯನು ಆಶ್ಚರ್ಯದಿಂದ ‘ಯಾರದು?’ ಎಂದು ತಿರುಗಿ ನೋಡಿದನು. ಎದುರಿನಲ್ಲಿ ಒಬ್ಬ ತೇಜಸ್ವಿಯಾದ ಬಾಲತಪಸ್ವಿಯು ನಿಂತಿದ್ದನು.
ಅಲ್ಲಿದ್ದ ಜನರೆಲ್ಲರೂ ಕೇಳುವಂತೆ ಅವನು ಹೇಳತೊಡಗಿದನು: ಜನಮೇಜಯ ಮಹಾರಾಜ, ನನ್ನ ಹೆಸರು ಆಸ್ತೀಕ. ನೀನು ನಿನ್ನ ತಂದೆಯನ್ನು ಮೀರಿಸಿದ ಧರ್ಮಾತ್ಮ. ಪರೋಪಕಾರಕ್ಕಾಗಿ ನಾನೂ ಸಹ ನಿನ್ನಲ್ಲಿ ಒಂದು ವರವನ್ನು ದಾನವಾಗಿ ಬೇಡಲು ಬಂದಿದ್ದೇನೆ.
ಜನಮೇಜಯನು ಆತನನ್ನು ಹುಡುಗನೆಂದು ತಿರಸ್ಕಾರ ಮಾಡಲಿಲ್ಲ. ಬಹಳ ಗೌರವದಿಂದ ಅವನನ್ನು ಕುಳ್ಳಿರಿಸಿ, "ಮಹಾನುಭಾವಾ, ನೋಡುವುದಕ್ಕೆ ತಾವು ಬಾಲಕನಂತಿದ್ದರೂ ಮಾತುಗಳಿಂದ ಜ್ಞಾನಿಗಳಾಗಿದ್ದೀರಿ. ದೇವರು ನಿಮ್ಮ ರೂಪದಲ್ಲಿ ಬಂದನೆಂದೇ ಭಾವಿಸಿದ್ದೇನೆ. ಏನು ಬೇಕೋ ಕೇಳಿರಿ. ಅದು ಏನೇ ಆಗಲಿ, ಕೊಡುತ್ತೇನೆ!” ಎಂದನು.
ಆಸ್ತೀಕ: ವೀರ ಜನಮೇಜಯ, ಈ ಯಜ್ಞದಿಂದ ಸ್ವರ್ಗದಲ್ಲಿರುವ ನಿನ್ನ ತಂದೆಯ ಋಣ ತೀರಿಸಿದ್ದೀಯೆ. ನಾಗಲೋಕದಲ್ಲಿದ್ದ ವಿಷಸರ್ಪಗಳನ್ನು ಕೊಂದು ಪ್ರಜೆಗಳಿಗೂ ಉಪಕಾರ ಮಾಡಿದ್ದೀಯೆ. ನಿನ್ನ ಯಜ್ಞವು ಮುಂದುವರಿದರೆ ನಾಗಲೋಕದಲ್ಲಿ ಈಗ ಉಳಿದಿರುವ ಸಜ್ಜನರೂ ನಾಶವಾಗುತ್ತಾರೆ. ಇದು ಸರಿಯಲ್ಲ. ಯಜ್ಞವನ್ನು ನಿಲ್ಲಿಸು, ತಕ್ಷಕನನ್ನು ಬಿಟ್ಟುಬಿಡು. ಇದೇ ನಾನು ಬೇಡುವ ವರ.” ಜನಮೇಜಯನಲ್ಲಿ ಹೀಗೆ ವರವನ್ನು ಕೇಳಿದನು.
ಜನಮೇಜಯನಿಗೆ ದಿಕ್ಕು ತೋರಲಿಲ್ಲ. ಬೇರೆ ಏನು ಕೊಟ್ಟರೂ ಆಸ್ತೀಕನು ಒಪ್ಪುವಂತಿಲ್ಲ. ಕೊನೆಗೆ ಜನಮೇಜಯನು ಶಾಂತನಾಗಿ, “ಸತ್ಯವೇ ದೇವರೆಂದು ವೇದ ಶಾಸ್ತ್ರಗಳು ಹೇಳುತ್ತವೆ. ಕೊಟ್ಟ ಮಾತಿಗೆ ನಾನು ತಪ್ಪುವುದಿಲ್ಲ. ಸಜ್ಜನರಿಗೆ ನನ್ನಿಂದ ಹಿಂಸೆಯಾಗುವುದು ಬೇಡ. ಈ ಯಜ್ಞ ನಿಲ್ಲಲಿ, ಆಸ್ತೀಕಮುನಿಯ ಮನಸ್ಸು ತೃಪ್ತವಾಗಲಿ” ಎಂದನು.
ಈಗಲೂ ನಾಗರ ಹಾವು ಮನೆಗೆ ಬಂದರೆ ಆಸ್ತೀಕನ ಹೆಸರು ಉಚ್ಚರಿಸಿದರೆ ಹಾವು ನಮಗೆ ಯಾವುದೇ ತೊಂದರೆ ಕೊಡದೆ ಹೊರಟು ಹೋಗುತ್ತದೆ ಎಂಬ ನಂಬಿಕೆ ಇದೆ.
ಸಂ: ದಾಮೋದರ ಶೆಟ್ಟಿ, ಇರುವೈಲು
Yakshagana.in ಸೇರಿಕೊಳ್ಳಿ: ವಾಟ್ಸ್ಆ್ಯಪ್ | ಟೆಲಿಗ್ರಾಂ | ಫೇಸ್ಬುಕ್ | ಟ್ವಿಟರ್ | ಯೂಟ್ಯೂಬ್ | ಇನ್ಸ್ಟಾಗ್ರಾಂ
Tags:
ಪುರಾಣ