ಯಕ್ಷಗಾನ ಸ್ಥಗಿತವಾದರೂ ಪೂರ್ಣ ತಿರುಗಾಟದ ವೇತನ: ಕಟೀಲು ಮೇಳ ಕಲಾವಿದರ ಹರ್ಷ

ಕಟೀಲು 6 ಮೇಳಗಳ ದೇವರ ಪೂಜೆಯ ಸುಂದರ ದೃಶ್ಯ. ಚಿತ್ರ: kateeldevi.in/
ಮಂಗಳೂರು: ಕಳೆದೆರಡು ವರ್ಷಗಳಿಂದ ಕೊರೊನಾ-19 ಹಾವಳಿಯಿಂದಾಗಿ ಯಕ್ಷಗಾನ ಕಲೆಗೆ ಆದ ನಷ್ಟ ಅಷ್ಟಿಷ್ಟಲ್ಲ. ಇದರ ಜೊತೆ ಜೊತೆಗೇ ಕಲಾವಿದರನೇಕರನ್ನು ಕಳೆದುಕೊಂಡು ಯಕ್ಷಗಾನ ರಂಗವೂ ಒಂದಿಷ್ಟು ಬಡವಾಯಿತು.

ಈ ಹಂತದಲ್ಲಿ, ಯಕ್ಷಗಾನವನ್ನಷ್ಟೇ ನಂಬಿ ಜೀವನ ಸಾಗಿಸುತ್ತಿದ್ದ ಕಲಾವಿದರನೇಕರು ತೀವ್ರ ಸಂಕಷ್ಟಕ್ಕೆ ಸಿಲುಕಿದರು. ವಿವಿಧ ಮೇಳಗಳಲ್ಲಿ ಸಾವಿರಾರು ಕಲಾವಿದರಿದ್ದು, ಅದರಲ್ಲಿ ಶೇ.50ರಷ್ಟು ಮಂದಿಗಾದರೂ ಯಕ್ಷಗಾನವೇ ಬದುಕು. ಉಳಿದ ಕಲಾವಿದರೂ ತಮ್ಮದೇ ಆದ ಸಂಕಷ್ಟದಲ್ಲಿದ್ದಾರೆ.

ಇದನ್ನು ಪರಿಗಣಿಸಿ, ಈ ಬಾರಿ ಕಟೀಲು ದುರ್ಗಾಪರಮೇಶ್ವರಿ ಕ್ಷೇತ್ರದಿಂದ ನಡೆಯುವ ಆರೂ ಮೇಳಗಳ ಕಲಾವಿದರಿಗೆ ದೇಗುಲದ ಆಡಳಿತ ಮಂಡಳಿ ಹಾಗೂ ಮೇಳಗಳ ಯಜಮಾನರಾದ ಕಲ್ಲಾಡಿ ದೇವಿಪ್ರಸಾದ್ ಶೆಟ್ಟಿ ಅವರು ಸುಮಾರು 350ರಷ್ಟು ಮಂದಿ ಕಲಾವಿದರಿಗ ನೆರವಿಗೆ ಬಂದಿದ್ದಾರೆ.

ಲಾಕ್‌ಡೌನ್ ಕಾರಣದಿಂದಾಗಿ ಕಳೆದ ವರ್ಷವೂ ಸುಮಾರು 300ಕ್ಕೂ ಮಿಕ್ಕ ಕಲಾವಿದರಿಗೆ ಪೂರ್ಣ ವೇತನ ನೀಡಲಾಗಿತ್ತು. ಇದೇ ಸಂಪ್ರದಾಯವನ್ನು ಈ ಬಾರಿಯೂ ಮುಂದುವರಿಸಲಾಗಿದ್ದು, ಮೇ 25ರ ಪತ್ತನಾಜೆಗೆ 33 ದಿನ ಮುಂಚಿತವಾಗಿಯೇ ಅಂದರೆ ಏ.21ರಂದೇ ಮೇಳದ ತಿರುಗಾಟ ನಿಲ್ಲಿಸಲಾಗಿತ್ತು.

ಈ ಕಾರಣದಿಂದಾಗಿ ಆರೂ ಮೇಳಗಳ ಸಂಚಾಲಕರಾದ ಕಲ್ಲಾಡಿ ದೇವಿಪ್ರಸಾದ್ ಶೆಟ್ಟರು ಕಲಾವಿದರು ಹಾಗೂ ಸಹಾಯಕರು ಸೇರಿದಂತೆ ಸುಮಾರು 350ರಷ್ಟು ಮಂದಿಗೆ ಈ ವರ್ಷದ ತಿರುಗಾಟ ಸ್ಥಗಿತಗೊಂಡಿದ್ದ ಎರಡು ದಿನಗಳಲ್ಲಿ ಪೂರ್ತಿ ತಿರುಗಾಟದ ವೇತನ ನೀಡಿದ್ದಾರೆ.

ಈ ಹಿನ್ನೆಲೆಯಲ್ಲಿ ವಿವಿಧ ಕಲಾವಿದರು ಸಾಮಾಜಿಕ ಜಾಲ ತಾಣಗಳಲ್ಲಿ ಈ ಕುರಿತು ಮೇಳಗಳ ಯಜಮಾನರ ನೆರವಿನ ಹಸ್ತಕ್ಕೆ ತುಂಬು ಮನಸ್ಸಿನ ಕೃತಜ್ಞತೆ ಸಲ್ಲಿಸಿದ್ದಾರೆ. ಸಂಚಾಲಕರಿಗೆ, ಕಟೀಲು ಕ್ಷೇತ್ರದ ಆಸ್ರಣ್ಣ ಬಂಧುಗಳಿಗೂ ಇದಕ್ಕಾಗಿ ಕಲಾವಿದರು ಕೃತಜ್ಞತೆ ಸಲ್ಲಿಸಿದ್ದಾರೆ.

ಯಕ್ಷಗಾನ ಕಲಾವಿದರ ಬದುಕು ಕೂಡ ಕಷ್ಟದಲ್ಲಿದೆ. ಈ ಸಂದರ್ಭದಲ್ಲಿ ಪ್ರದರ್ಶನಗಳಿಲ್ಲದೆ, ದುಡಿಮೆಯಿಲ್ಲದ ಕಾರಣದಿಂದಾಗಿ ಹಲವಾರು ಕುಟುಂಬಗಳು ಸಂಕಷ್ಟ ಎದುರಿಸುತ್ತಿವೆ. ಅವರಿಗೆ ನೆರವಾಗಲು ಕೆಲವು ಸಂಘ ಸಂಸ್ಥೆಗಳು ಕೂಡ ಕೈಜೋಡಿಸುತ್ತಿರುವುದು ಸಂತಸದ ವಿಚಾರ.

ಇದೀಗ ಕೊರೊನಾ ಸಂಕಷ್ಟ ನಿವಾರಣೆಯಾದರೆ ನವೆಂಬರ್ ತಿಂಗಳಾಂತ್ಯದಲ್ಲಿ ಎಲ್ಲ ಮೇಳಗಳ ತಿರುಗಾಟವೂ ಆರಂಭವಾಗಿ ಕಲಾವಿದರ ಬದುಕೂ ಹಸನಾಗಬಹುದು.

ಕೊರೊನಾ ದೂರವಾಗಲಿ, ಯಕ್ಷಗಾನ ಕಲಾವಿದರ ಸಂಕಷ್ಟ ದೂರವಾಗಲಿ ಎಂಬ ಸದಾಶಯ Yakshagana.in ಜಾಲತಾಣದ್ದು ಕೂಡ.

ಕಲಾವಿದರಿಂದ ಕೆಲವು ಸಂದೇಶಗಳು ಇಲ್ಲಿವೆ:
★彡 ಕಟೀಲು ಮೇಳ  彡★
ಮೊದಲ ಬಾರಿಗೆ ಡೇರೆ ಮೇಳವನ್ನು ಸ್ಥಾಪಿಸಿ, ಯಕ್ಷಗಾನ ವೃತ್ತಿ ರಂಗಭೂಮಿಗೆ ಮೇಲ್ಪಂಕ್ತಿಯನ್ನು ಹಾಕಿಕೊಟ್ಟು ಕಲೆ ಮತ್ತು ಕಲಾವಿದರ ಆತ್ಮಗೌರವವನ್ನು ಎತ್ತಿ ಹಿಡಿದವರು ಕಲ್ಲಾಡಿ ಕೊರಗ ಶೆಟ್ಟರು. ವಿವಿಧ ಪ್ರಯೋಗಗಳಿಂದ ಯಕ್ಷಗಾನದ ಜನಪ್ರಿಯತೆಯನ್ನು ಹೆಚ್ಚಿಸಿ ಕಲಾವಿದರಿಗೆ ತಾರಾ ಮೌಲ್ಯವನ್ನು ತಂದುಕೊಟ್ಟವರು ಕಲ್ಲಾಡಿ ವಿಠಲ ಶೆಟ್ಟರು.

ಈ ಪರಂಪರೆಯ ದೇವೀಪ್ರಸಾದ ಶೆಟ್ಟರು ಕಟೀಲು ಮೇಳಗಳ ಯಜಮಾನರಾಗಿ ಕಲ್ಲಾಡಿ ಮನೆತನದ ಕಲಾಪ್ರೀತಿಯನ್ನು ಮುನ್ನಡೆಸುತ್ತಿದ್ದಾರೆ. ಇವರು ಹತ್ತು ರೂಪಾಯಿ ಕೊಟ್ಟು ಹತ್ತು ಪತ್ರಿಕೆಗಳಲ್ಲಿ ತಮ್ಮ ಪ್ರಚಾರವನ್ನು ಬಯಸಲಿಲ್ಲ, ಬದಲಾಗಿ ಮೌನದಿಂದ ತನ್ನ ಸಂಸ್ಥೆಯಲ್ಲಿ ದುಡಿಯುವ ಸುಮಾರು 350ಕ್ಕಿಂತಲೂ ಹೆಚ್ಚಿನ ಸದಸ್ಯರಿಗೆ ತಿರುಗಾಟದ ಪೂರ್ತಿ ಸಂಬಳವನ್ನಿತ್ತು ಉಪಕರಿಸಿದ್ದಾರೆ, ಕೊರೋನಾ ಸಂಕಷ್ಟದ ನಡುವೆ ಕಷ್ಟಪಡುವ ಕಲಾವಿದರನ್ನು ಆಧರಿಸಿದ್ದಾರೆ.

ಹಿಮಾಲಯಕ್ಕಿಂತಲೂ ಹಿರಿದಾದ ಇವರ ಔದಾರ್ಯದ ಔನ್ನತ್ಯಕ್ಕೆ ತಲೆಬಾಗುತ್ತೇನೆ. ಕಟೀಲು ಮೇಳದ ಇವರ ಯಜಮಾನಿಕೆ ಇನ್ನೂ ಅನೇಕಾನೇಕ ಸಂವತ್ಸರಗಳ ಕಾಲ ನಡೆಯುವಂತೆ ಯಕ್ಷಗಾನ ಕಲಾ ಪ್ರಿಯೆ ಶ್ರೀ ದೇವಿ ಭ್ರಮರಾಂಬೆಯ ಅನುಗ್ರಹವೂ,  ಕಲಾಪ್ರಿಯರೂ ಕಲಾವಿದರೂ ಆದ ಆಸ್ರಣ್ಣರೆಲ್ಲರ ಆಶೀರ್ವಾದವೂ ಸದಾ ಇರಲಿ ಎಂದು ಹಾರೈಸುತ್ತೇನೆ.

ಗೌರವಾನ್ವಿತ ಯಜಮಾನರಾದ ಶ್ರೀ ದೇವೀಪ್ರಸಾದ ಶೆಟ್ಟಿ ಅವರಿಗೆ ಸಾವಿರದ ನಮನಗಳು 🙏
- ತಾರಾನಾಥ ವರ್ಕಾಡಿ

---
ನಮ್ಮ ಹೆಮ್ಮೆಯ ಯಜಮಾನರಿಗೆ ಹೃದಯಪೂರ್ವಕ ಕೃತಜ್ಞತೆಗಳು 
ಕೋವಿಡ್ ಕಾರಣದಿಂದ ಸತತ 2ನೆ ವರ್ಷವೂ ಯಕ್ಷಗಾನ ಮೇಳಗಳ ತಿರುಗಾಟ ಅರ್ಧದಲ್ಲೇ ಮೊಟಕುಗೊಂಡದ್ದು ಕಲಾವಿದರ ಜೀವನಕ್ಕೆ ದೊಡ್ಡ ಹೊಡೆತವನ್ನೇ ನೀಡಿದೆ. ಇದನ್ನು ನಂಬಿಕೊಂಡ ಸಕಲರಿಗೂ ಈ ಮಹಾಮಾರಿ ಸಮಸ್ಯೆ ಒಡ್ಡಿರುವುದು ಅರಗಿಸಲೇಬೇಕಾದ ಸತ್ಯ. ಕಟೀಲು ಮೇಳ ಈ ಸಲ ಕೇವಲ 132 ಪ್ರದರ್ಶನಗಳನ್ನು ಮಾತ್ರ ನೀಡಲು ಸಾಧ್ಯವಾಯಿತು. ಬಹುತೇಕ 48 ಆಟಗಳು ನಷ್ಟವಾಯಿತು.

ಇಷ್ಟಾದರೂ ನಮ್ಮ ಯಜಮಾನರಾದ ಕಲ್ಲಾಡಿ ದೇವಿಪ್ರಸಾದ ಶೆಟ್ಟರು ಈ ತಿರುಗಾಟದ ಪೂರ್ಣ ಸಂಬಳವನ್ನು ತನ್ನ ಮೇಳದ ಎಲ್ಲರಿಗೂ ನೀಡಿದ್ದಾರೆ. ಎಷ್ಟೇ ದೊಡ್ಡ ಸಮಸ್ಯೆ ತನ್ನೆದುರಿದ್ದರೂ ಅದನ್ನು ತನ್ನ ಮುಖಭಾವದಲ್ಲಿ ಹೊರಗೆ ತೋರಿಸಿಕೊಂಡದ್ದನ್ನು ನಾನು ಕಂಡದ್ದೇ ಇಲ್ಲ. ತನ್ನನ್ನು ನಂಬಿರುವ ಅಗಾಧ ಕಲಾಸಮುದಾಯಕ್ಕೆ ಕಳೆದ ವರ್ಷದಂತೆಯೇ ಈ ಬಾರಿಯೂ  ಪೂರ್ಣ ವೇತನವನ್ನು ನೀಡುವ ಮೂಲಕ ಹೃದಯವೈಶಾಲ್ಯವನ್ನು ಮೆರೆದಿದ್ದಾರೆ.

ಕಟೀಲು ಮೇಳದ ಸರ್ವರ ವತಿಯಿಂದ ಯಜಮಾನರಿಗೆ ಕೃತಜ್ಞತೆಯನ್ನು ಸಮರ್ಪಿಸುತ್ತೇನೆ. ಕಲಾಮಾತೆ ಕಟೀಲು ಶ್ರೀ ದುರ್ಗಾಪರಮೇಶ್ವರಿ ನಮ್ಮ ಯಜಮಾನರಿಗೆ ಎಲ್ಲಾ ರೀತಿಯ ನೆಮ್ಮದಿ-ಶಕ್ತಿಯನ್ನು ನೀಡಲಿ, ಕಲಾವಿದರಿಗೂ ಒಳ್ಳೆಯ ದಿನಗಳನ್ನು ಅನುಗ್ರಹಿಸಲಿ ಎಂದು ಬೇಡಿಕೊಳ್ಳುತ್ತೇನೆ. 
-ಡಾ.ಶ್ರುತಕೀರ್ತಿರಾಜ

---
ಯಾಜಮಾನ್ಯದ ಔನತ್ಯ ತೋರಿಸಿದ ನಮ್ಮ ಯಜಮಾನರು

ಕಟೀಲು ಮೇಳದ ಕಲಾವಿದ ಹೀಗೆ ಹೇಳುವುದು ಪ್ರತಿಯೋರ್ವ ಕಲಾವಿದನಿಗೂ ಹೆಮ್ಮೆ, ಅಭಿಮಾನದ ವಿಷಯ.

ಸರ್ವೇಶ್ವರಿ, ಕಲಾಮಾತೆ ಜಗತ್ ರಕ್ಷಕಿಯ ಮೇಳದಲ್ಲಿ ಸೇವೆಮಾಡುವುದು ಭವದ ಭಾಗ್ಯವೇ ಸರಿ. ಆರು ತಿಂಗಳ ಈ ಪುಣ್ಯೋತ್ಸವಕ್ಕೆ ಈ ಬಾರಿಯೂ ಕೊರೋನ ಎಂಬ ಮಹಾಮಾರಿ ವಕ್ಕರಿಸಿ ಬಹು ದಿನಗಳ ಬೆಳಕಿನ ಯಜ್ಞವನ್ನು ನುಂಗಿತು. ಅದನ್ನೇ ನಂಬಿರುವ ಕಲಾವಿದರು ಬಲು ದೊಡ್ಡ ಹೊಡೆತವನ್ನು ಅನುಭವಿಸಿದರು. ಕಲಾವಿದರ ನೋವನ್ನು, ಕಷ್ಟವನ್ನರಿತ ಯಜಮಾನರಾದ ಕಲ್ಲಾಡಿ ದೇವಿಪ್ರಸಾದ ಶೆಟ್ಟರು ಪೂರ್ತಿ ಸಂಬಳ ಪಾವತಿಸುವುದರೊಂದಿಗೆ ಯಾಜಮಾನಿಕೆಯ ಎತ್ತರವನ್ನು ತೋರಿಕೊಟ್ಟಿದ್ದಾರೆ. ಅವರ ಹೃದಯ ವೈಶಾಲ್ಯ,, ಕಲಾವಿದರ ಮೇಲಿನ ಅವರ ಪ್ರೀತಿಗೆ ಕೈ ಮುಗಿಯುತ್ತಿದ್ದೇವೆ.

ಧನ್ಯವಾದಗಳು ಧಣಿಗಳೇ
ನಮ್ಮ ಧಣಿಗಳು ನಮಗೆ ಹೆಮ್ಮೆ
-ವಾದಿರಾಜ ಕಲ್ಲೂರಾಯ, ಕಟೀಲು ನಾಲ್ಕನೇ ಮೇಳ

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

ನವೀನ ಹಳೆಯದು