
ಸಂಗ್ರಹಿತ ಲೇಖನ: ದಾಮೋದರ ಶೆಟ್ಡಿ, ಇರುವೈಲು [ಮುಂಬಯಿ ನಿವಾಸಿ, ಹವ್ಯಾಸಿ ವೇಷಧಾರಿ]
ಚಕ್ರವ್ಯೂಹದ ಹೆಸರು ಕೇಳಿದರೇನೇ ಸಾಕು, ವೈರಿಗಳು ಮೂರ್ಛೆ ಹೋಗುತ್ತಿದ್ದರಂತೆ. ಏಕೆಂದರೆ ಇಡಿಯ ಆರ್ಯಾವರ್ತದಲ್ಲೇ ಚಕ್ರವ್ಯೂಹವನ್ನು ಭೇದಿಸುವ ವಿದ್ಯೆ ಗೊತ್ತಿದ್ದದ್ದು ಬೆರಳೆಣಿಕೆಯ ಜನರಿಗೆ ಮಾತ್ರ! ಪಾರ್ಥ ನಂದನ ಅಭಿಮನ್ಯುವಿಗೆ ಚಕ್ರವ್ಯೂಹದ ಒಳಗೆ ಪ್ರವೇಶ ಮಾಡುವುದು ಗೊತ್ತಿತ್ತೇ ವಿನಹ ಹೊರ ಬರುವುದು ತಿಳಿದಿರಲಿಲ್ಲ.
ವಿಶ್ವವೇ ಕಂಡು ಕೇಳರಿಯದ ರುದ್ರ ಭಯಂಕರ ಯುದ್ಧ. ಕುರುಕ್ಷೇತ್ರದಲ್ಲಿ ನಡೆದ ಹದಿನೆಂಟು ದಿನದ ಕದನ. ಕುರುಕ್ಷೇತ್ರ ಯುದ್ದದ ಒಂದು ತಂತ್ರವೇ ಚಕ್ರವ್ಯೂಹ. ಎದುರಾಳಿಯನ್ನು ಹಣಿಯಲು ಸಾಧ್ಯವೇ ಇಲ್ಲವೆಂದಾದಾಗ ಕೊನೆಯ ತಂತ್ರವಾಗಿ ಚಕ್ರವ್ಯೂಹವನ್ನು ಹೆಣೆಯಲಾಗುತ್ತಿತ್ತು.
ಚಕ್ರವ್ಯೂಹವೆಂಬ ತಂತ್ರವನ್ನು ಹೆಣೆಯುತ್ತಿದ್ದ ರೀತಿಯೇ ಅತ್ಯದ್ಭುತ! ಸುರುಳಿಯಾಕಾರದ ಈ ವ್ಯೂಹ, ಸವ್ಯ ಹಾಗೂ ಅಪಸವ್ಯವಾಗಿ ನಿರಂತರ ಗರಗರನೆ ತಿರುಗುತ್ತಿರುತ್ತದೆ. ಹೆಸರು ಕೇಳಿದಾಗ ಯುದ್ದ ಆರಂಭಕ್ಕೆ ಮುನ್ನವೇ ಶತ್ರು ಸೈನಿಕರು ಮಾನಸಿಕವಾಗಿ ಜರ್ಜರಿತರಾಗಿ ಯುದ್ದೋತ್ಸಾಹವನ್ನೇ ಕಳೆದುಕೊಳ್ಳಬೇಕಾದರೆ, ವ್ಯೂಹದ ಭೀಕರತೆ ಹೇಗಿರಬೇಕು ಯೋಚಿಸಿ.
ಈ ವ್ಯೂಹ ಎಷ್ಟು ಶಿಸ್ತುಬದ್ಧವಾಗಿ ಕೆಲಸ ಮಾಡುತ್ತಿತ್ತೆಂದರೆ, ಒಬ್ಬನೇ ಒಬ್ಬ ಸೈನಿಕನೂ ಅತ್ತಿಂದಿತ್ತ ವಾಲುತ್ತಿರಲಿಲ್ಲ. ಪ್ರತಿ ಸೈನಿಕನ ಸ್ಥಳ ಬದಲಾವಣೆಗೂ ನಿಶ್ಚಿತವಾದ ಒಂದು ಡೋಲು, ನಗಾರಿ ಇಲ್ಲವೇ ಶಂಖನಾದವಿರುತ್ತಿತ್ತು. ಈ ನಾದಗಳಿಗುಣವಾಗಿಯೇ ಚಕ್ರವ್ಯೂಹದೊಳಗಿನ ಸೈನಿಕರು ಸ್ಥಾನ ಬದಲಾವಣೆ ಮಾಡುತ್ತಿದ್ದರೇ ಹೊರತು ತಮ್ಮಷ್ಟಕ್ಕೇ ತಾವು ಸ್ಥಾನ ಪಲ್ಲಟವಾಗುವಂತಿರಲಿಲ್ಲ.
ವ್ಯೂಹದಲ್ಲಿ ಒಟ್ಟು ಏಳು ಪದರಗಳಿರುತ್ತಿದ್ದವು. ಹೊರಗಿನ ಪದರದಲ್ಲಿ ಸಾಧಾರಣ ಯುದ್ದ ಕೌಶಲ ಹೊಂದಿದ ಸೈನಿಕರಿರುತ್ತಿದ್ದರು. ಆದರೆ ಒಳ ಹೋದಂತೆಲ್ಲಾ ಪ್ರತಿ ಪದರಗಳ ಸೈನಿಕರ ದೈಹಿಕ ಹಾಗೂ ಮಾನಸಿಕ ಸಾಮರ್ಥ್ಯ ಹೆಚ್ಚುತ್ತಾ ಹೋಗುತ್ತಿತ್ತು. ಅತೀ ಒಳಗಿನ ಪದರದ ಸೈನಿಕರು ಅತ್ಯಂತ ಬಲಾಢ್ಯರು ಮತ್ತು ಯುದ್ದ ಕೌಶಲ ನಿಪುಣರಾಗಿರುತ್ತಿದ್ದರು.
ತೀರ ಹೊರಗಿನ ಪದರದಲ್ಲಿ ಕಾಲಾಳು ಸೈನಿಕರಿದ್ದರೆ, ಒಳ ಪದರಗಳಲ್ಲಿ ಆನೆ-ಕುದುರೆಯ ಮೇಲಿರುವ ಸೈನಿಕರಿರುತ್ತಿದ್ದರು. ಚಕ್ರವ್ಯೂಹದ ರಚನೆ ಗುರು ದೋಣಾಚಾರ್ಯರೇ ಮಾಡುತ್ತಿದ್ದುದು. ಇಂತಹ ಒಂದು ಅದ್ಬುತ ರಣತಂತ್ರ ಇಡಿಯ ವಿಶ್ವದಲ್ಲೇ ಆಗಲೂ ಇರಲಿಲ್ಲ, ಈಗಲೂ ಇಲ್ಲ!
ರಥದ ಚಕ್ರದಂತೆ ಕಾಣುವ ಈ ವ್ಯೂಹದ ರಚನೆಯಲ್ಲಿ ಪ್ರತಿ ಕ್ಷಣಕ್ಕೂ ಸೈನಿಕನ ಸ್ಥಾನ ಪಲ್ಲಟವಾಗುತ್ತಿದ್ದುದ್ದರಿಂದ ಒಳ ಬರುವ ಮತ್ತು ಹೊರ ಹೋಗುವ ದಾರಿಯೂ ಅದಕ್ಕನುಗುಣವಾಗಿ ಕ್ಷಣ ಕ್ಷಣಕ್ಕೂ ಬದಲಾಗುತ್ತಿತ್ತು! ಅದಕ್ಕೇ ಒಮ್ಮೆ ಚಕ್ರವ್ಯೂಹದ ಒಳ ಹೊಕ್ಕ ವ್ಯಕ್ತಿ ಹಿಂದಿರುಗಿ ಬರಲಾಗದೆ ಅದರೊಳಗೇ ಪ್ರಾಣ ತ್ಯಜಿಸುತ್ತಿದ್ದುದು.
ಚಕ್ರವ್ಯೂಹವನ್ನು ರಚಿಸಿ ದ್ರೋಣಾಚಾರ್ಯರು ಯುದ್ಧಕ್ಕೆ ಕರೆ ಕೊಟ್ಟ ಸಂದರ್ಭದಲ್ಲಿ ಕೃಷ್ಣಾರ್ಜುನರು ಸಂಶಪ್ತಕರೊಂದಿಗೆ ಯುದ್ಧ ನಿರತರಾಗಿರುವುದರಿಂದಾಗಿ ಅರ್ಧಂಬರ್ಧ ವಿದ್ಯೆ ತಿಳಿದಿರುವ ಅಭಿಮನ್ಯು ಚಕ್ರವ್ಯೂಹ ಭೇದಿಸುವ ನಿರ್ಧಾರ ಮಾಡುತ್ತಾನೆ. ಅಭಿಮನ್ಯೂ ವೀರಾವೇಶದಿಂದ ಹೋರಾಡಿದರೂ ಕೌರವರ ಕುತಂತ್ರದಿಂದಾಗಿ ಸಾವನ್ನಪ್ಪುತ್ತಾನೆ.
ಚಕ್ರವ್ಯೂಹವೆಂದರೇನೆ ಸಾಕ್ಷಾತ್ ಮೃತ್ಯು ಕೂಪ. ಈ ಮೃತ್ಯು ಕೂಪವನ್ನು ಭೇದಿಸಿ ಹೊರ ಬರುವವರು ಎಂಥಹ ಮಹಾನ್ ವೀರರಾಗಿರಬಹುದು? ಆತನ ಯುದ್ದ ನೈಪುಣ್ಯ ಎಂತಹುದಾಗಿರಬಹುದು? ಕಲ್ಪನೆಗೂ ನಿಲುಕದು. ಸಾವಿರಾರು ವರ್ಷಗಳ ಹಿಂದೆ ಇಂತಹ ಅತ್ಯದ್ಭುತ ಯುದ್ದ ತಂತ್ರವನ್ನು ಹೆಣೆದ ಮತ್ತು ಕಾರ್ಯಗತಗೊಳಿಸಿದ ನಮ್ಮ ಪೂರ್ವಜರ ಅಪಾರ ಜ್ಞಾನ ಮತ್ತು ಪಾಂಡಿತ್ಯಕ್ಕೆ ನಮೋ ನಮಃ.
ಜ್ಞಾನಿಗಳಿಗೆ, ವಿಜ್ಞಾನಿಗಳಿಗೆ ಇವತ್ತಿನವರೆಗೂ ಇಂತಹ ಒಂದು ಅದ್ಭುತ ಯುದ್ದ ತಂತ್ರದ ರಹಸ್ಯವನ್ನು ಭೇದಿಸುವ ಬಗೆ ತಿಳಿದಿಲ್ಲವೆಂದಾದರೆ ನಮ್ಮ ಪೂರ್ವಜರ ಪಾಂಡಿತ್ಯದ ಬಗ್ಗೆ ಹೆಮ್ಮೆ ಮೂಡಿ ಬರುತ್ತದೆ. ಅದೇ ನಮ್ಮ ಜನ್ಮ ಭೂಮಿ ಭಾರತದ ಪೆರ್ಮೆ.
Tags:
ಪುರಾಣ