ಯಕ್ಷಗಾನ ರಂಗದ ಪ್ರೇಕ್ಷಕರು ಎಲ್ಲಿರಬೇಕು? ಹೇಗಿರುವವರು?


ಯಕ್ಷಗಾನ ಕಲೆ- ಪ್ರೇಕ್ಷಕವರ್ಗ- ಬದಲಾದ ದೃಷ್ಟಿಕೋನ -15: ಸುರೇಂದ್ರ ಪಣಿಯೂರ್ ಲೇಖನ ಸರಣಿ

ಭರತ ಮುನಿಯ ನಾಟ್ಯಶಾಸ್ತ್ರದಲ್ಲಿ ಉಲ್ಲೇಖಗೊಂಡ ಪ್ರಕಾರ ನಾಟ್ಯಮಂಡಪ, ನಾಟ್ಯಗೃಹ ಅರ್ಥಾತ್ ಇಂದಿನ ಕಾಲದ ಥಿಯೇಟರ್ ಅನ್ನುವ ರಚನೆಯಲ್ಲಿ ಪ್ರೇಕ್ಷಾಗೃಹದಲ್ಲಿರುವವರು ಪ್ರೇಕ್ಷಕರು. ಈ ಪ್ರೇಕ್ಷಾಗೃಹವು ರಂಗಪೀಠ, ರಂಗಶೀರ್ಷ ಇದಕ್ಕೆ ಅಭಿಮುಖವಾಗಿರುವಂತಹುದು. 

ಅದೇ ರೀತಿಯಲ್ಲಿಯಕ್ಷಗಾನವು ಬಯಲು ರಂಗಭೂಮಿಯಲ್ಲಿ (ಓಪನ್ ಥಿಯೇಟರ್) ಪ್ರದರ್ಶನಗೊಳ್ಳುವ  ಕಲೆಯಾಗಿದ್ದು, ಇಲ್ಲಿ ಜರುಗುವುದು ಬಯಲಾಟವಾಗಿರುತ್ತದೆ. ಈ ಬಯಲಾಟ ಪ್ರದರ್ಶನಗೊಳ್ಳುವ ಮಂಟಪವೇ ರಂಗಸ್ಥಳ. ಈ ರಂಗಸ್ಥಳಕ್ಕೆ ಅಭಿಮುಖವಾಗಿ ಕುಳಿತು ಪ್ರದರ್ಶನ ಈಕ್ಷಿಸುವವರೇ ಪ್ರೇಕ್ಷಕರು.
     
ಬಹಳ ಹಿಂದಿನ ಕಾಲದ ಯಕ್ಷಗಾನ ಪ್ರೇಕ್ಷಕರು ಸಾಮಾನ್ಯವಾಗಿ ಸಾಂಪ್ರದಾಯಿಕ ವಿದ್ಯಾವಂತರಲ್ಲ. ಇದರಲ್ಲಿ ಸಮಾಜದ ಮಧ್ಯಮ ಹಾಗೂ ಕೆಳಸ್ತರದ  ವರ್ಗಗಳ ಜನರದೇ ಸಿಂಹಪಾಲು. ಈ ಪ್ರೇಕ್ಷಕರಲ್ಲಿ ಹೆಚ್ಚಿನವರು ಯಕ್ಷಗಾನ ಕಲೆಯ ಆರಾಧಕರು. ಅವರಿಗೆ ಪುರಾಣ ಕಥೆಗಳನ್ನು ಕೇಳಿ ತಿಳಿವ ಜ್ಞಾನದಾಹವಿತ್ತು. ಜೊತೆಗೆ ಹೆಚ್ಚಿನ ಕಥೆಗಳನ್ನು ಕೇಳಿ ತಿಳಿದುಕೊಂಡ ಅನುಭವವಿತ್ತು.

ಎಷ್ಟೋ ಜನ ಅವಿದ್ಯಾವಂತರಿಗೂ ಯಕ್ಷಗಾನ ಪ್ರಸಂಗಗಳ ಪದ್ಯಗಳು ಕಂಠಸ್ಥವಾಗಿದ್ದವು. ಇವೆಲ್ಲವೂ ಬಾಯ್ದೆರೆಯಾಗಿ ಒಬ್ಬರಿಂದ ಒಬ್ಬರಿಗೆ ಹಸ್ತಾಂತರವಾಗಿ ಬಂದವುಗಳಾಗಿದ್ದವು. ಹಾಗಾಗಿ ಯಕ್ಷಗಾನ ಕಲೆಯನ್ನು ಆಸ್ವಾದಿಸಲು ಬೇಕಾದ ಪ್ರಾಥಮಿಕ ಅರ್ಹತೆ ಇದ್ದವರ ಸಂಖ್ಯೆಯೇ ಹೆಚ್ಚಾಗಿತ್ತು. ಈ ಜನರು ತಾವು ಸ್ವತಃ ಕಲಾವಿದರಲ್ಲದಿದ್ದರೂ ತಮ್ಮ ಅನುಭವದಿಂದ ಕಲಾವಿದರ ಅಭಿವ್ಯಕ್ತಿಯ ರಸಗ್ರಹಣ ಮಾಡಿ ತಪ್ಪು ಒಪ್ಪುಗಳನ್ನು ಗುರುತಿಸಬಲ್ಲವರಾಗಿದ್ದರು. ಯಕ್ಷಗಾನಕ್ಕೆ  ಇವರೇ ಸಾಂಪ್ರದಾಯಿಕ ಪ್ರೇಕ್ಷಕರು. ಹಾಗೂ ಇವರೇ ಮೂಲ ವಿಮರ್ಶಕರು.

ಪ್ರಾಚೀನದಲ್ಲಿ ಇವರ ಯಕ್ಷಗಾನದ ವಿಮರ್ಶೆ ಲಿಖಿತ ರೂಪದಲ್ಲಿ ಇರುತ್ತಿರಲಿಲ್ಲ. ಎಲ್ಲವೂ ಬಾಯ್ದೆರೆಯೇ ಆಗಿತ್ತು.

ಒಂದು ಪ್ರದರ್ಶನ. ಮುಗಿದ ನಂತರ ಬೆಳಗಾತ ಚೌಕಿಗೆ ಒಳಹೊಕ್ಕು ಕಲಾವಿದರಲ್ಲಿ ಪರಸ್ಪರ ಮಾತುಕತೆಯಲ್ಲಿ ಆ ದಿನದ ಆಟದ ಪ್ರದರ್ಶನದಲ್ಲಿ ಆಗಿರುವ ಒಳಿತು ಕೆಡುಕು ಅಂಶಗಳನ್ನು ಚರ್ಚೆ ಮಾಡುತ್ತಿದ್ದರು ಅವರು. ಒಳ್ಳೆಯದಾಗಿದ್ದ ವಿಚಾರಗಳನ್ನು ಪ್ರಶಂಸೆ ಮಾಡಿ, ಕೆಟ್ಟದ್ದು ಅನಿಸಿದ ವಿಚಾರಗಳನ್ನು  ಕೂಡ ಒಂದಷ್ಟು  ಪ್ರೀತಿಯಿಂದ ತಿದ್ದಿಕೊಳ್ಳಲು ಹೇಳಿ, ಆತ್ಮೀಯವಾಗಿ ಒಂದಷ್ಟು ವಿಚಾರ ವಿನಿಮಯ ಮಾಡಿಕೊಳ್ಳುತ್ತಾ ಇದ್ದರು.

ಈ ಅಂಶಗಳನ್ನು ಸಕಾರಾತ್ಮಕವಾಗಿ ಸ್ವೀಕರಿಸುವ ಕಲಾವಿದರು ಜವಾಬ್ದಾರಿಯುತ ಕಲಾವಿದರಾಗಿ ರಂಗದಲ್ಲಿ ಬೆಳೆಯುತ್ತಿದ್ದರು, ಒಂದಷ್ಟು ಅಭಿಮಾನಿಗಳನ್ನು ಹೊಂದುತ್ತಿದ್ದರು.
 
ಈ ರೀತಿಯ ವಿಮರ್ಶೆ ಮಾಡುವ ಪ್ರೇಕ್ಷಕರಲ್ಲಿ 3 ವಿಧ. 1) ಯಕ್ಷಗಾನದ ಬಗ್ಗೆ  ಗ್ರಾಂಥಿಕ ಅಧ್ಯಯನದ ಜೊತೆ ನೋಡಿ ಅನುಭವ ಹೊಂದಿದ ವಿಮರ್ಶಕರು. 2) ಸ್ವತಃ ಯಕ್ಷಗಾನ ಕ್ಷೇತ್ರದಲ್ಲಿ ಒಂದಷ್ಟು ಪರಿಣತಿ ಹೊಂದಿದ ವಿಮರ್ಶಕರು ಹಾಗೂ 3) ಮೇಳನಿಷ್ಠ, ವ್ಯಕ್ತಿನಿಷ್ಠ  ವಿಮರ್ಶಕರು. ಆದರೆ ಇವರೆಲ್ಲರೂ ಪ್ರೇಕ್ಷಕರು ಅನ್ನೋದನ್ನು ಮರೆಯಬಾರದು.

 ಈ ರೀತಿಯಲ್ಲಿ ವಿಮರ್ಶೆ ಮಾಡಲು ಪ್ರೇಕ್ಷಕನಾದವನಿಗೆ ಯಾವ ರೀತಿಯ ಅಕಾಡೆಮಿಕ್ ಅಧ್ಯಯನವೂ ಬೇಡ. ಒಬ್ಬ ಸಾಮಾನ್ಯ ಪ್ರೇಕ್ಷಕ ತಾನು ತನ್ನ ಧೀರ್ಘಕಾಲದಲ್ಲಿ  ಕಂಡು ಕೇಳಿದ ಅನುಭವದಿಂದ ರಂಗದಲ್ಲಿಯ ಸರಿ ತಪ್ಪುಗಳನ್ನು ವಿಮರ್ಶೆ ಮಾಡಬಲ್ಲ. ಈ ರೀತಿಯ ಪ್ರೇಕ್ಷಕರು ಹಾಗೂ ಜವಾಬ್ದಾರಿ ಇದ್ದ ಕಲಾವಿದರು ಸೇರಿಕೊಂಡು ನಮ್ಮದಾದ ಯಕ್ಷಗಾನವನ್ನು ಈ ಮಟ್ಟಕ್ಕೆ ಬೆಳೆಸಿದವರು.

ಎಷ್ಟೋ ಸಂದರ್ಭಗಳಲ್ಲಿ ತಾನು ಮೆಚ್ಚಿ ಇಷ್ಟ ಪಡುವ ಕಲಾವಿದನ ಬದುಕಿನ ಜವಾಬ್ದಾರಿಯನ್ನು ಹೊತ್ತ ಪ್ರೇಕ್ಷಕರೂ ಇದ್ದರು ಅನ್ನುವುದು ಕೂಡಾ ಇತಿಹಾಸ.
      
ಇಲ್ಲಿ ಒಂದು ವಿಚಾರವನ್ನು ಗಮನಿಸಬೇಕು. ಅಂದಿನ ದಿನಗಳಲ್ಲಿ ಉನ್ನತವರ್ಗದ ಜನರು ಸಾರ್ವಜನಿಕವಾಗಿ ಪ್ರೇಕ್ಷಕರಾಗಿ ಭಾಗವಹಿಸಲಾಗದ ಕಲೆ ಯಕ್ಷಗಾನವಾಗಿತ್ತು. ಒಂದು ವೇಳೆ ಇದನ್ನು ಮೀರಿಯೂ ಯಕ್ಷಗಾನ ಕಲಾ ಪ್ರದರ್ಶನವನ್ನು ಈಕ್ಷಿಸಿದಲ್ಲಿ ಪ್ರಾಯಶ್ಚಿತ್ತ ರೂಪದಲ್ಲಿ ಹನ್ನೆರಡು ರಂಗಪೂಜೆಯನ್ನು ನೋಡಬೇಕೆನ್ನುವ ಕಟ್ಟುಪಾಡಿತ್ತು ಅನ್ನುತ್ತಾರೆ. ಇದಕ್ಕೆ ಮಡಿವಂತಿಕೆಯ ಆಚರಣೆಯ ಕಾರಣವೂ ಇದ್ದಿರಬಹುದು.

ವಿಪರ್ಯಾಸವೆಂದರೆ ರಂಗನ ಲೀಲೆಯನ್ನು ರಂಗದಲ್ಲಿ ಕಂಡ ಕಾರಣಕ್ಕಾಗಿ ಪ್ರಾಯಶ್ಚಿತ್ತರೂಪದಲ್ಲಿ  ರಂಗಪೂಜೆಯ ವೀಕ್ಷಣೆ. ಆದರೂ ಇದಕ್ಕೆ ಅಪವಾದ ಎಂಬಂತೆ ಯಕ್ಷಗಾನ ಪ್ರೇಕ್ಷಾಗೃಹದಲ್ಲಿ ಒಂದು ಬ್ರಹ್ಮಸಭೆ ಇತ್ತು. ಈ ಸ್ಥಳ ಉನ್ನತ ವರ್ಗದವರಿಗೆ ಯಕ್ಷಗಾನ ಪ್ರದರ್ಶನ ವೀಕ್ಷಿಸಲು ಮೀಸಲಿರಿಸಿದ ಸ್ಥಳವಾಗಿತ್ತು.

ಏನೇ ಇರಲಿ, ಈ ಎಲ್ಲ ಅಪವಾದ, ಕಳೆಗಳನ್ನು ಕಿತ್ತು, ಕೀಳರಿಮೆಯನ್ನು ಕಳೆದುಕೊಂಡ ಯಕ್ಷಗಾನ ಕಲೆಯು ಪಂಡಿತ ಪಾಮರ ಹಾಗೂ ಸಮಾಜದ ಎಲ್ಲಾ ಸ್ತರದ  ಜನರಿಂದ ಮನ್ನಿಸಲ್ಪಟ್ಟಿದ್ದು ವರ್ತಮಾನ ಕಾಲದ ಉತ್ತಮ ಬೆಳವಣಿಗೆ. (ಸಶೇಷ).

 ಲೇ: ಸುರೇಂದ್ರ ಪಣಿಯೂರ್

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

ನವೀನ ಹಳೆಯದು