ಬ್ರಹ್ಮ ಶಾಪಗ್ರಸ್ಥ ಗಂಗೆ, ಪ್ರತೀಪ: ಭೀಷ್ಮೋತ್ಪತ್ತಿಯ ಕಥನವಿಲ್ಲಿದೆ

ಭೀಷ್ಮ ವಿಜಯ ಪ್ರಸಂಗದ ಒಂದು ದೃಶ್ಯ
ಪುರಾಣ ತಿಳಿಯೋಣ ಸರಣಿಯಲ್ಲಿ ದಾಮೋದರ ಶೆಟ್ಟಿ, ಇರುವೈಲು ಸಂಗ್ರಹ ಬರಹ
ಹಿಂದೆ ಕುರುವಂಶದಲ್ಲಿ ಪ್ರತೀಪ ಎಂಬ ಮಹಾ ಧಾರ್ಮಿಕ ರಾಜನಿದ್ದನು. ಅವನು ಅನೇಕ ವರ್ಷಗಳ ಕಾಲ ಗಂಗಾದ್ವಾರದಲ್ಲಿ ಆಶ್ರಮವೊಂದನ್ನು ನಿರ್ಮಿಸಿಕೊಂಡು ಮಹಾಮಂತ್ರಗಳ ಜಪದಲ್ಲಿ ನಿರತನಾಗಿದ್ದನು. ಹೀಗಿರುವಾಗ ಒಂದು ದಿನ ಪ್ರತೀಪನು ಜಪ ಮಾಡುತ್ತಾ ಧ್ಯಾನದಲ್ಲಿದ್ದಾಗ ಸಾಕ್ಷಾತ್ ಗಂಗೆಯು ಸ್ತ್ರೀರೂಪದಲ್ಲಿಯೇ ಬಂದು ರಾಜಾ ಪ್ರತೀಪನ ಬಲತೊಡೆಯ ಮೇಲೆ ಕುಳಿತುಕೊಂಡಳು. ಆಕೆ ಕುಳಿತುಕೊಳ್ಳುತ್ತಿದ್ದಂತೆ ಎಚ್ಚರಗೊಂಡ ಪ್ರತೀಪನು ಒಂದಿನಿತೂ ಗೊಂದಲಕ್ಕೊಳಗಾಗದೆ ನಿರುದ್ವಿಗ್ನನಾಗಿ ಗಂಗೆಯನ್ನು ಮಾತಾಡಿಸಿದಾಗ ಆಕೆ ಪ್ರತೀಪನನ್ನು ವಿವಾಹವಾಗುವ ಬಯಕೆಯನ್ನು ಮುಂದಿಡುತ್ತಾಳೆ.

ಆಗ ಪ್ರತೀಪನು, ಬಲತೊಡೆಯ ಮೇಲೆ ಕುಳಿತವಳು ಮಗಳಿಗೆ ಅಥವಾ ಸೊಸೆಗೆ ಸಮಾನ. ಆದುದರಿಂದ ನಾನು ನಿನ್ನನ್ನು ವರಿಸಲಾರೆ ಎನ್ನುತ್ತಾನೆ. ಗಂಗೆ ಹೊರಟು ಹೋಗುತ್ತಾಳೆ.

ಇದರ ಕಾರಣವಾಗಿರುವ ಕಥೆ ಹೀಗಿದೆ:
ಒಮ್ಮೆ ಬ್ರಹ್ಮನ ಸಭೆಯಲ್ಲಿ ಎಲ್ಲ ಋಷಿಗಳು ಕುಳಿತುಕೊಂಡಿದ್ದಾರೆ. (ಋಷಿಗಳು ಎಂದರೇ ಬ್ರಹ್ಮ ಲೋಕದಲ್ಲಿ ಕುಳಿತುಕೊಳ್ಳುವಂತಹ ಯೋಗ್ಯತಾವಂತರು.)  ಆ ಸಭೆಯಲ್ಲಿ ಗಂಗೆಯೂ ಇದ್ದಳು. ಆಗ ಇದ್ದಕ್ಕಿದ್ದಂತೆ ಜೋರಾಗಿ ಗಾಳಿ ಬೀಸಿದಾಗ, ಆಕೆಯ ಸೀರೆಯ ಸೆರಗು ಜಾರಿತು.  ಅದನ್ನು ಅಲ್ಲಿದ್ದ ಮಹಾಭಿಷ (ಮಹಾಭಿಷಿಕ್) ಎಂಬ ಒಬ್ಬ ರಾಜ (ಋಷಿ) ಅಚಾತುರ್ಯದಿಂದ ನೋಡಿದ.

ಆಗ ಬ್ರಹ್ಮದೇವರು, "ನನ್ನ ಸಭೆಗೆ ಬರಬೇಕಾದರೆ ಕೆಲವು ಯೋಗ್ಯತೆಗಳು ಇರಬೇಕು. ಸಭ್ಯತೆಯನ್ನು ಕಲಿತಿರಬೇಕು. ಯಾವುದೇ ಕಾರಣದಿಂದಲೂ ಸ್ತ್ರೀಯನ್ನು ಕಾಮದ ದೃಷ್ಟಿಯಿಂದ ನೋಡಬಾರದು. ನೀನು ನೋಡಿದುದರಿಂದ ನಿನಗೆ ಇನ್ನೂ ಚಿತ್ತ ಚಾಪಲ್ಯವಿದೆ ಅಂತ ಅರ್ಥ.  ಹಾಗಾಗಿ ನೀನು ಭೂಲೋಕದಲ್ಲಿ ಮನುಷ್ಯನಾಗಿ ಹುಟ್ಟಿ ಕಷ್ಟವನ್ನು ಅನುಭವಿಸು" ಅಂತ ಶಾಪ ಕೊಡುತ್ತಾರೆ.

ಅದೇ ರೀತಿ, ಗಂಗೆಯನ್ನೂ ನೋಡಿ,  "ನೀನೂ ನನ್ನ ಸಭೆಯಲ್ಲಿ ಇರುವುದಕ್ಕೆ ಯೋಗ್ಯಳಲ್ಲ. ಆದ್ದರಿಂದ ನೀನೂ ಭೂಲೋಕದಲ್ಲಿ ಹುಟ್ಟು ಎಂದು" ಶಾಪ ಕೊಟ್ಟರು. ಹೀಗೆ ಗಂಗೆ ಕೆಳಗೆ ಇಳಿದು ಬರುತ್ತಿರುವಾಗ ಪಕ್ಕದಲ್ಲಿ ಎಂಟು ಜನ ವಸುಗಳೂ ಇಳಿದು ಬರುತ್ತಿದ್ದರು.

ಅವರನ್ನೆಲ್ಲ ನೋಡಿದ ಗಂಗೆಯು:- "ಯಾಕೆ ಅಷ್ಟವಸುಗಳು ಕೆಳಗೆ ಬೀಳ್ತಿದ್ದೀರ...?" ಎಂದು ಅವರನ್ನೆಲ್ಲ ಕೇಳಿದಳು. ಆಗ ಅವರು ತಮ್ಮ ಕಥೆಯನ್ನು ಹೇಳಿದರು.

"ನಾವೆಲ್ಲರೂ (ಅಷ್ಟವಸುಗಳು) ನಮ್ಮ ಹೆಂಡತಿಯ ಜೊತೆ ವನವಿಹಾರಕ್ಕೆ ಹೋಗಿದ್ದೆವು. ವಸಿಷ್ಠಮಹರ್ಷಿಗಳ ಆಶ್ರಮಕ್ಕೆ ಹೋದೆವು. ಅಲ್ಲಿ ನಂದಿನಿ ಎನ್ನುವ ಹಸು ಓಡಾಡುತ್ತಿದ್ದುದನ್ನು ಕಂಡು, ಪ್ರಭಾಸ (ಅವನಿಗೆ ದ್ಯೂ ಎಂದು ಹೆಸರಿದೆ) ಅವನ ಸಹೋದರರ ಜೊತೆಗೆ ವಸಿಷ್ಠರ ಆಶ್ರಮಕ್ಕೆ ಹೋಗಿ, ಸ್ವಲ್ಪವೂ ಸಭ್ಯತೆ ಇಲ್ಲದೆ ಮತ್ತು ವಸಿಷ್ಠರನ್ನ ಒಂದು ಮಾತು ಕೇಳದೆಯೇ, ನಂದಿನಿಯ ಕೊರಳಿಗೆ ಹಗ್ಗವನ್ನ ಕಟ್ಟಿ ಎಳೆದೊಯ್ದ. ವಸಿಷ್ಠರು ಆಶ್ರಮಕ್ಕೆ ಬಂದಾಗ ಹಸು ಕಾಣಿಸಲಿಲ್ಲ. ಕಣ್ಣುಮುಚ್ಚಿ ತಪಃಶಕ್ತಿಯಿಂದ ನೋಡಿದರು. ಎಲ್ಲ ಗೊತ್ತಾಯ್ತು. ಆಗ ವಸಿಷ್ಠರು:- "ನೀವು ನನ್ನ ಹಸುವನ್ನು ಕದ್ದಿದ್ದರಿಂದ  ಮನುಷ್ಯರಾಗಿ ಹುಟ್ಟಿ" ಎಂದು ಶಾಪ ಕೊಟ್ಟರು.

ಆ ಸಂದರ್ಭದಲ್ಲಿ ಅಷ್ಟ ವಸುಗಳು ಋಷಿಗಳ ಕಾಲಿಗೆ ಬಿದ್ದು "ನಮ್ಮದು ತಪ್ಪಾಯಿತು, ದಯಮಾಡಿ ಕ್ಷಮಿಸಿ. ಶಾಪವನ್ನ ಹಿಂದಕ್ಕೆ ಪಡೆದುಕೊಳ್ಳಿ" ಎಂದು ಬೇಡಿಕೊಂಡರು. ವಸಿಷ್ಠರು: "ಹಾಗಾದರೇ ಒಂದು ಪ್ರತಿ ಶಾಪವನ್ನ ಕೊಡುತ್ತಿದ್ದೇನೆ. ನೀವು ಏಳು ಜನ ಘನವಾದ ಅಪರಾಧ ಮಾಡದೇ ಇದ್ದುದರಿಂದ ಹುಟ್ಟಿದ ತಕ್ಷಣ ಸತ್ತು ಮತ್ತೆ ವಸುಗಳಾಗುತ್ತೀರಿ. ಆದರೆ ಒಬ್ಬನಿಗೆ ಮಾತ್ರ ಹಾಗೆ ಬರುವುದಕ್ಕೆ ಆಗುವುದಿಲ್ಲ. ಅವನೇ ಪ್ರಭಾಸ (ದ್ಯೂ). ಆತ  ತನ್ನ ಹೆಂಡತಿಯ ಮಾತನ್ನು ಕೇಳಿ ಗೋವನ್ನು ಅಪಹರಿಸಿ  ಎಳೆದುಕೊಂಡು ಹೋಗುವಾಗ "ತುಂಬಾ ಮುಳ್ಳಿರುವ ಒಂದು ದೊಣ್ಣೆಯಿಂದ ಹೊಡೆದ". ಆದ್ದರಿಂದ ಅವನು ಮುಳ್ಳಿನ ವೇದನೆಯನ್ನು ಸ್ವತಃ  ಅನುಭವಿಸುವವರೆಗೂ ಹಿಂದೆ ಬರುವ ಹಾಗಿಲ್ಲ.

ಈ ಕಥೆಯನ್ನು ಅಷ್ಟವಸುಗಳೆಲ್ಲರೂ ಗಂಗೆಗೆ ಹೇಳಿ, ಅವಳಲ್ಲಿ "ಅಮ್ಮಾ, ಹೇಗಿದ್ದರೂ ನೀನು ಭೂಮಿಗೆ ಇಳೀತಾ ಇದ್ದೀಯ.  ಹಾಗಾಗಿ ದಯವಿಟ್ಟು ನಿನ್ನ ಹೊಟ್ಟೆಯಲ್ಲಿ ನಾವು ಹುಟ್ಟುವುದಕ್ಕೆ ಒಪ್ಪಿಕೋ ಮತ್ತು ನಾವು ಹುಟ್ಟಿದಾಗಲೇ ನಮ್ಮನ್ನ ಸಾಯಿಸು. ನಾವು ವಾಪಸು ಹೋಗುತ್ತೇವೆ.  ಆದರೆ ಒಬ್ಬನನ್ನ ಮಾತ್ರ ಹಾಗೆ ಸಾಯಿಸಬಾರದು. ಅದು ಯಾರೆಂದರೇ ದ್ಯೂ" ಎಂದು ಬೇಡಿಕೊಂಡರು.

ಗಂಗೆ ಒಪ್ಪಿಕೊಂಡಳು.  ಹೀಗೆ ಬ್ರಹ್ಮನಿಂದ ಶಾಪಗ್ರಸ್ತರಾದವರೇ ಗಂಗೆ ಹಾಗೂ ಪ್ರತೀಪ. ಭೂಮಿಗೆ ಬಂದ ಗಂಗೆಯನ್ನು ಕಾಲಾಂತರದಲ್ಲಿ ಪ್ರತೀಪನ ಮಗನಾದ ಶಂತನು ನೋಡಿ ಮರುಳಾಗಿ, ಅವಳಲ್ಲಿ ತನ್ನನ್ನು ಮದುವೆಯಾಗುವಂತೆ ಕೇಳಿಕೊಳ್ಳುತ್ತಾನೆ. ಆಗ ಗಂಗೆ ಒಂದು ಷರತ್ತನ್ನು ಇಡುತ್ತಾಳೆ. ಅದೇನೆಂದರೆ "ನನ್ನನ್ನು  ಮದುವೆಯಾಗಬೇಕಾದರೆ, ನಾನು ಮಾಡುವ ಯಾವುದೇ ಕೆಲಸಕ್ಕೆ ನೀನು ವಿರೋಧ ಮಾಡಕೂಡದು. ನೀನು ವಿರೋಧ ವ್ಯಕ್ತಪಡಿಸಿದ ತಕ್ಷಣ ನಾನು ಹೊರಟು ಹೋಗುತ್ತೇನೆ" ಎಂದಳು.  ಶಂತನು ಒಪ್ಪಿ ಮದುವೆಯಾದ.

ನಂತರ...

ಮೊದಲನೆಯ ಮಗು ಹುಟ್ಟಿತು, ಗಂಗೆ ಎಳೆ ಹಸುಳೆಯನ್ನು ನದಿಯಲ್ಲಿ ಬಿಸಾಕಿದಳು.

ಎರಡನೆಯದು ಹುಟ್ಟಿತು, ಮತ್ತೆ ನೀರಿನಲ್ಲಿ ಹಾಕಿದಳು.

ಮೂರನೆಯದು, ನಾಲ್ಕನೆಯದು, ಐದು, ಆರು, ಏಳನೆಯ ಮಗುವೂ ಹುಟ್ಟಿತು. ಒಬ್ಬೊಬ್ಬರನ್ನೇ ನೀರಲ್ಲಿ ಹಾಕುತ್ತಾ ಹೋದಳು ಗಂಗೆ.

ಶಂತನು ಕೊಟ್ಟ ಮಾತಿಗೆ ಕಟ್ಟುಬಿದ್ದು, ಇದನ್ನೆಲ್ಲ ನೋಡುತ್ತಾ ಇದ್ದವನು ಮನಸ್ಸಿಗೆ ಸಮಾಧಾನವಾಗದೇ ಎಂಟನೆಯ ಶಿಶು  ಹುಟ್ಟಿದಾಗ ಗಂಗೆ ನದಿಯಲ್ಲಿ ಬಿಸಾಕುವ ಸಮಯದಲ್ಲಿ, ಗಂಗೆಯ ಕೈಹಿಡಿದು, "ಒಬ್ಬನನ್ನಾದರೂ ನನಗೆ ಬಿಟ್ಟುಕೊಡು" ಎಂದು ಕೇಳಿದ.

ಗಂಗೆ: "ಸರಿ ತೆಗೆದುಕೋ" ಎಂದು ಹೇಳಿ ಶಂತನುವನ್ನು ಬಿಟ್ಟು ಹೊರಡಲು ಸಿದ್ದಳಾದಳು.

ಹೀಗೆ ಕೊನೆಗೆ ಹುಟ್ಟಿರುವ ಮಗನೇ ದೇವವ್ರತ. ಅವನೇ ಮುಂದೆ "ಭೀಷ್ಮ"ನಾದ. ಗಂಗೆ ಹೋಗುವಾಗ ದೇವವ್ರತನನ್ನೂ ಜೊತೆಯಲ್ಲಿ ಕರೆದೊಯ್ದು ಅವನನ್ನು ಸಕಲ ವಿದ್ಯಾ ಪಾರಂಗತನನ್ನಾಗಿಸಿ ಮರಳಿ ಶಂತನುವಿನಲ್ಲಿಗೆ ಕರೆದು ತಂದುಬಿಡುತ್ತಾಳೆ.

ಅದೇ ಭೀಷ್ಮನು, ಭೀಷ್ಮಾಚಾರ್ಯರಾಗಿ ಕುರುಕ್ಷೇತ್ರದಲ್ಲಿ ಹತ್ತು ದಿನಗಳವರೆಗೆ ಯುದ್ಧ ಮಾಡಿದ ಮೇಲೆ ಶರಶಯ್ಯೆಯಲ್ಲಿ ಮಲಗಿ ಅವರ ಹಿಂದಿನ ಜನ್ಮದ ಪಾಪಕ್ಕೆ ಪ್ರಾಯಶ್ಚಿತ್ತ ಮಾಡಿಕೊಳ್ಳುತ್ತಾರೆ.

ಸಂ.: ದಾಮೋದರ ಶೆಟ್ಟಿ, ಇರುವೈಲು

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

ನವೀನ ಹಳೆಯದು