ಕೇಕಯ ದೇಶದ ರಾಜ ಅಶ್ವಪತಿ. ಈತನ ಮಗಳೇ ದಶರಥನ ಮೂವರು ಪತ್ನಿಯರಲ್ಲಿ ಎರಡನೆಯವಳು, ಭರತನ ತಾಯಿ ಕೈಕೇಯಿ. ಕೈಕೇಯಿಗೆ ಏಳು ಮಂದಿ ಸಹೋದರರು.
ಕೈಕೇಯಿಯ ತಾಯಿಯ ಕಥೆಯೊಂದು ಹೀಗಿದೆ. ಅಶ್ವಪತಿ ರಾಜನಿಗೆ ಮೃಗ, ಪಕ್ಷಿ, ಕೀಟಗಳ ಭಾಷೆ ಅರ್ಥವಾಗುವಂತೆ ಶಮೀಕನೆಂಬ ಋಷಿಯು ವರ ಕೊಟ್ಟಿದ್ದನು. ಈ ವರವನ್ನು ಕೊಡುವಾಗ ಋಷಿಯು "ರಾಜನೇ ನಿನಗೆ ಮೃಗ, ಪಕ್ಷಿಗಳು ಮತ್ತು ಜಂತುಗಳು ಮಾತಾಡುವುದು ಅರ್ಥವಾಗುತ್ತದೆ. ಆದರೆ ಎಚ್ಚರವಿರಲಿ, ಈ ಗುಟ್ಟನ್ನು ನೀನು ಬೇರೆಯವರಿಗೆ ತಿಳಿಸಿದರೆ ನಿನ್ನ ತಲೆಯು ಒಡೆದು ಸಾವಿರ ಹೋಳಾಗುವುದು" ಎಂದು ಎಚ್ಚರಿಕೆ ಕೊಟ್ಟನು.
ಒಂದು ದಿನ ರಾಜನು ತನ್ನ ಪತ್ನಿಯ ಜೊತೆ ಉದ್ಯಾನವನದಲ್ಲಿ ಮಾತನಾಡುತ್ತಾ ಕುಳಿತಿದ್ದನು. ಅದೇ ಸಮಯಕ್ಕೆ ಎರಡು ಪುಟ್ಟ ಪ್ರಣಯ ಪಕ್ಷಿಗಳು ಮಾತನಾಡುತ್ತಿದ್ದವು. ಅದನ್ನು ಕೇಳಿ ರಾಜನಿಗೆ ನಗು ಬಂದು ಜೋರಾಗಿ ನಕ್ಕನು. ಅವನ ಪಕ್ಕದಲ್ಲಿ ಕುಳಿತಿದ್ದ ರಾಣಿಯು ಈ ನಗುವಿಗೆ ಕಾರಣವೇನು ಎಂದು ಕೇಳಿದಳು. ಋಷಿ ಹೇಳಿದ ಮುನ್ನೆಚ್ಚರಿಕೆಯಂತೆ ಶಾಪದ ನೆನಪಾಗಿ ರಾಜನು ಸತ್ಯವನ್ನು ತಿಳಿಸಲು ಹಿಂಜರಿದು ಏನೋ ಒಂದು ನೆಪ ನೀಡಿ ಮರೆಮಾಚಲು ಪ್ರಯತ್ನಿಸಿದನು.
ಅದನ್ನು ಗಮನಿಸಿದ ರಾಣಿಯು "ನೀವು ನನ್ನಿಂದ ಏನನ್ನೋ ಮರೆಮಾಚಿದ್ದೀರಿ. ನನಗೆ ಹೇಳುವವರೆಗೂ ನಾನು ಊಟ ಮಾಡುವುದಿಲ್ಲ" ಎಂದಳು. ರಾಜನಿಗೆ ಉಭಯಸಂಕಟ. ಏನು ಮಾಡಬೇಕೆಂದು ತಿಳಿಯಲಿಲ್ಲ. ಕೊನೆಗೆ ಆತ ಹೇಳಿದ "ಪ್ರಿಯೆ, ಶಮೀಕ ಮಹರ್ಷಿಗಳು ನನಗೆ ಒಂದು ಅದ್ವಿತೀಯವಾದ ವರ ಕೊಟ್ಟಿದ್ದಾರೆ. ಹಾಗೂ ಈ ಗುಟ್ಟನ್ನು ಯಾರಿಗೂ ಹೇಳಬಾರದು, ಹೇಳಿದರೆ ನನ್ನ ತಲೆಯೊಡೆದು ಸಾವಿರ ಹೋಳಾಗುತ್ತದೆ ಎಂದೂ ಹೇಳಿದ್ದಾರೆ. ಈಗ ನಾನೇನು ಮಾಡಲಿ? ದಯಮಾಡಿ ಇದನ್ನು ಹೇಳುವಂತೆ ಒತ್ತಾಯ ಮಾಡಬೇಡ, ನನ್ನ ಪ್ರಾಣಕ್ಕೆ ಸಂಚಕಾರ ಬರುತ್ತದೆ" ಎಂದನು.
ಆದರೆ ರಾಣಿಯು "ನನಗೆ ಹೇಳುವುದರಿಂದ ನಿಮಗೆ ಏನಾದರೂ ನನಗೆ ಗೊತ್ತಿಲ್ಲ. ನಿಮ್ಮ ನಗುವಿಗೆ ಕಾರಣವೇನು ಎಂಬುದನ್ನು ಹೇಳಲೇಬೇಕು" ಎಂದು ಹಠ ಹಿಡಿದಳು. ರಾಜನಿಗೆ, ತನ್ನ ಜೀವಕ್ಕಿಂತ ಅವಳಿಗೆ ತನ್ನ ಗುಟ್ಟನ್ನು ತಿಳಿದುಕೊಳ್ಳುವುದೇ ಮುಖ್ಯವಾಗಿದೆ, ಅವಳು ಸ್ವಾರ್ಥಿಯಾಗಿದ್ದಾಳೆಂದಮೇಲೆ ಇವಳು ನನ್ನ ಜೊತೆಗೆ ಇರುವುದರಲ್ಲಿ ಅರ್ಥವಿಲ್ಲ ಎಂದು ತಿಳಿದು ರಾಣಿಗೆ ಹೇಳುತ್ತಾನೆ - "ಇನ್ನು ನನ್ನ ಜೊತೆ ನೀನು ಇರುವುದರಲ್ಲಿ ಅರ್ಥವಿಲ್ಲ. ತವರು ಮನೆಗೆ ಹೋಗು. ಇನ್ನೆಂದೂ ಇಲ್ಲಿಗೆ ಬರಬೇಡ. ಇದು ರಾಜಾಜ್ಞೆ" ಎಂದು ಕಳುಹಿಸಿಬಿಡುತ್ತಾನೆ. ಅವಳು ರಾಜನರಮನೆ ತೊರೆದು ತವರಿಗೆ ಮರಳುತ್ತಾಳೆ.
ಸಂ.: ದಾಮೋದರ ಶೆಟ್ಟಿ, ಇರುವೈಲು
Yakshagana.in ಸೇರಿಕೊಳ್ಳಿ: ವಾಟ್ಸ್ಆ್ಯಪ್ | ಟೆಲಿಗ್ರಾಂ | ಫೇಸ್ಬುಕ್ | ಟ್ವಿಟರ್ | ಯೂಟ್ಯೂಬ್ | ಇನ್ಸ್ಟಾಗ್ರಾಂ
Tags:
ಪುರಾಣ