ಉಪರಿಚರ ವಸುವಿನ ವೀರ್ಯದಿಂದ ಜನಿಸಿದ ಮತ್ಸ್ಯಗಂಧಿ, ಯೋಜನಾ ಗಂಧಿಯಾಗಿ ಕುರುವಂಶದ ರಾಣಿಯಾದ ಮತ್ತು ಭೀಷ್ಮ ಪ್ರತಿಜ್ಞೆಯ ಕಥೆ ಇಲ್ಲಿದೆ. ಪುರಾಣ ತಿಳಿಯೋಣ ಸರಣಿಯಲ್ಲಿ ದಾಮೋದರ ಶೆಟ್ಟಿ, ಇರುವೈಲು
ದುಷ್ಯಂತನ ಪುತ್ರನಾದ ಭರತನ ಪೀಳಿಗೆಯಲ್ಲಿ ಜನಿಸಿದ ಅಜಮೀಢನಿಂದ ಮೂರು ಕವಲುಗಳು ಪ್ರಾರಂಭವಾದವು. ಒಂದು ಕವಲಿನಲ್ಲಿ ಶಂತನು ಜನಿಸಿದರೆ, ಇನ್ನೊಂದು ಕವಲಿನಲ್ಲಿ ಉಪರಿಚರ ವಸು ಜನಿಸಿದನು. ಮತ್ತೊಂದು ಪೀಳಿಗೆಯಲ್ಲಿ ಪಾಂಚಾಲರು ಜನಿಸಿದರು. ಈ ಉಪರಿಚರವಸುವು ಚೇದಿ ರಾಜ್ಯವನ್ನು ಧರ್ಮದಿಂದ ಪರಿಪಾಲಿಸುತ್ತಿದ್ದನು. ಇವನು ಇಂದ್ರನನ್ನು ಮೆಚ್ಚಿಸಿ ವಿಮಾನವೊಂದನ್ನು ಪಡೆದು ಗಗನದಲ್ಲಿ ವಿಹರಿಸುತ್ತಿದ್ದವನಾಗಿದ್ದನು.
ಒಮ್ಮೆ ಕೋಲಾಹಲ ಎಂಬ ಅಸುರನು ಪರ್ವತ ರೂಪದಲ್ಲಿ ಬಂದು ಶುಕ್ತಿಮತಿ ನದಿಯಲ್ಲಿ ನಿಂತು ನದಿಯನ್ನು ಬಂಧಿಸಿದನು. ಆಗ ಈ ಅಸುರ ಮತ್ತು ನದಿಯ ಅಧಿದೇವತೆಯರ ಬಲವಂತದ ಸಮಾಗಮದಿಂದ ಗಿರಿಕಾ ಎಂಬ ಪುತ್ರಿಯು ಜನಿಸಿದಳು. ಒಮ್ಮೆ ಉಪರಿಚರ ವಸುವು ಇಲ್ಲಿಗೆ ಬಂದು ನದಿಯ ದುರವಸ್ಥೆಗೆ ಮರುಗಿ ಪರ್ವತವನ್ನು ಸೀಳಿ, ಅಸುರನನ್ನು ಸಂಹರಿಸಿದನು.
ಕೃತಜ್ಞತಾಪೂರ್ವಕವಾಗಿ ಶುಕ್ತಿಮತಿ ದೇವಿಯು ಗಿರಿಕಾಳನ್ನು ಉಪರಿಚರ ವಸುವಿಗೆ ಕೊಟ್ಟು ಮದುವೆ ಮಾಡಿದಳು. ಉಪರಿಚರ ವಸುವಿನ ಪತ್ನಿಯಾದ ಗಿರಿಕಾಳು ಸುಶೀಲಳೂ, ಲಾವಣ್ಯವತಿಯೂ ಆಗಿದ್ದಳು. ಕಾಲಕ್ರಮದಲ್ಲಿ ಉಪರಿಚರ ವಸುವಿಗೆ ಬೃಹದ್ರಥ ಮುಂತಾದ ಮಕ್ಕಳು ಜನಿಸಿದರು. ಬೃಹದ್ರಥನು ತನ್ನದೇ ಆದ ಮಗಧ ರಾಜ್ಯವನ್ನು ಸ್ಥಾಪಿಸಿ ಅದರ ಅಧಿಪತಿಯಾದನು. ಬೃಹದ್ರಥನ ಪುತ್ರನೇ ಜರಾಸಂಧ.
ಒಮ್ಮೆ ಉಪರಿಚರ ವಸುವು ವನವಿಹಾರದಲ್ಲಿದ್ದಾಗ ಅದ್ರಿಕೆ ಎಂಬ ಗಂಧರ್ವ ಕನ್ಯೆಯನ್ನು ಕಂಡು ಆತನ ವೀರ್ಯವು ಸ್ಖಲನವಾಯಿತು. ಉಪರಿಚರ ವಸು ವೀರ್ಯವನ್ನು ಅಭಿಮಂತ್ರಿಸಿ ಒಂದು ಗಿಡುಗ ಪಕ್ಷಿಯನ್ನು ಕರೆದು "ನೀನು ತಕ್ಷಣ ಈ ವೀರ್ಯವನ್ನು ಒಯ್ದು ನನ್ನ ಪತ್ನಿಗೆ ಕೊಡು" ಎಂದು ಪ್ರಾರ್ಥಿಸಿದನು. ಅದರಂತೆ ಗಿಡುಗವು ವೀರ್ಯವನ್ನು ತನ್ನ ಪಂಜದಲ್ಲಿಟ್ಟುಕೊಂಡು ಹಾರತೊಡಗಿತು.
ಆದರೆ ವೀರ್ಯವು ಜಾರಿ ಯಮುನಾ ನದಿಯಲ್ಲಿ ಬಿದ್ದಿತು. ಆ ವೀರ್ಯವನ್ನು ಒಂದು ಮತ್ಸ್ಯವು ನುಂಗಿ ಗರ್ಭ ಧರಿಸಿತು. ಕೆಲಕಾಲದ ನಂತರ ಆ ಮೀನು ದಾಶರಾಜನ ಬಲೆಗೆ ಬಿದ್ದು ಅವನ ಮನೆಯನ್ನು ಸೇರಿದಾಗ ಅದು ಒಂದು ಗಂಡು ಮತ್ತು ಒಂದು ಹೆಣ್ಣು ಮಗುವಿಗೆ ಜನ್ಮ ನೀಡಿತು. ದಾಶರಾಜನು ಹೆಣ್ಣು ಮಗುವನ್ನು ತನ್ನಲ್ಲಿಯೇ ಇಟ್ಟುಕೊಂಡನು. ಗಂಡು ಶಿಶುವನ್ನು ಮತ್ಸ್ಯರಾಜ ಎಂದು ಕರೆದು ಅದನ್ನು ತನ್ನ ದೇಶದ ರಾಜನಿಗೆ ಕೊಟ್ಟನು.
ಆ ಹೆಣ್ಣು ಮಗುವನ್ನು ಸತ್ಯವತಿ ಎಂದೂ ಕರೆಯುತ್ತಿದ್ದರು. ಅವಳ ದೇಹದಿಂದ ಮೀನಿನ ವಾಸನೆ ಹೊರಹೊಮ್ಮುತ್ತಿದ್ದುದರಿಂದ ಅವಳಿಗೆ ಮತ್ಸ್ಯಗಂಧಿ ಎಂಬ ಇನ್ನೊಂದು ಹೆಸರಾಯಿತು. ಮತ್ಸ್ಯಗಂಧಿಯನ್ನು ಕೂಡುವುದಕ್ಕೆ ಮುಂಚೆ ಪರಾಶರರು ಅವಳಲ್ಲಿದ್ದ ಮೀನಿನ ವಾಸನೆಯನ್ನು ಹೋಗಲಾಡಿಸಿದ್ದೂ ಅಲ್ಲದೆ ಅವಳ ದೇಹದಿಂದ ಸುವಾಸನೆಯು ಹೊರಹೊಮ್ಮುವಂತೆ ಮಾಡಿದರು. ಈ ಸುವಾಸನೆಯು ಒಂದು ಯೋಜನದ ತನಕ ಹರಡುತ್ತಿದ್ದುದರಿಂದ ಅವಳನ್ನು ಯೋಜನಗಂಧಿ ಎಂದು ಕರೆಯಲಾಯಿತು.
ಇತ್ತ ಗಂಗೆಯು, ಮಾತಿಗೆ ತಪ್ಪಿದ ಶಂತನುವನ್ನು ಬಿಟ್ಟು ದೇವಲೋಕಕ್ಕೆ ಹೋದ ಮೇಲೆ ಶಂತನು ಅತ್ಯಂತ ದುಃಖಪೀಡಿತನಾದನು. ಒಮ್ಮೆ ಅವನು ಯಮುನಾ ನದಿಯ ತೀರದಲ್ಲಿ ವಿಹರಿಸುತ್ತಿದ್ದಾಗ ಮತ್ಸ್ಯಗಂಧಿಯನ್ನು ನೋಡಿ, ಅವಳ ರೂಪಕ್ಕೆ ಬೆರಗಾಗಿ, ಅವಳ ಬಳಿ ಸಾರಿ "ಸುಂದರಿ, ನಾನು ಹಸ್ತಿನಾವತಿಯ ರಾಜನಾದ ಶಂತನು. ನೀನು ಒಪ್ಪಿದರೆ ನಿನ್ನನ್ನು ಮದುವೆಯಾಗುತ್ತೇನೆ"ಎಂದನು.
ಅದೇ ಸಮಯಕ್ಕೆ ಅಲ್ಲಿಗೆ ಬಂದ ದಾಶರಾಜನು "ಮಹಾರಾಜ, ಮಗಳ ಕನ್ಯಾಸೆರೆಯನ್ನು ಬಿಡಿಸುವುದು ತಂದೆಯಾದವನ ಆದ್ಯ ಕರ್ತವ್ಯ. ಭರತ ವಂಶದ ನಿನಗಿಂತ ಶ್ರೇಷ್ಠನಾದ ವರನನ್ನು ನನ್ನಿಂದ ತರಲಾಗುವುದಿಲ್ಲ. ನನ್ನ ಮಗಳಲ್ಲಿ ಜನಿಸುವ ಪುತ್ರನು ನಿನ್ನ ಉತ್ತರಾಧಿಕಾರಿಯಾಗುವುದಾದರೆ ನನ್ನ ಅಭ್ಯಂತರವಿಲ್ಲ" ಎಂದು ಹೇಳಿದನು.
ತನ್ನ ಜ್ಯೇಷ್ಠ ಪುತ್ರನಾದ ದೇವವ್ರತನಿಗೆ ಅನ್ಯಾಯ ಮಾಡಲು ಶಂತನುವಿನ ಮನಸ್ಸು ಒಪ್ಪಲಿಲ್ಲವಾದ್ದರಿಂದ ಅವನು ನಿರಾಶನಾಗಿ ಅರಮನೆಗೆ ಬಂದನು. ಇದಾದ ನಂತರ ಶಂತನು ಯಾವಾಗಲೂ ಅನ್ಯಮನಸ್ಕನಾಗಿಯೇ ಇರುತ್ತಿದ್ದನು.
ತಂದೆಯ ದುಃಖಕ್ಕೆ ಕಾರಣವನ್ನು ತಿಳಿದ ಮಗ ದೇವವ್ರತನು ದಾಶರಾಜನಲ್ಲಿಗೆ ಹೋಗಿ "ದಾಶರಾಜ, ನಾನು ನನ್ನ ಉತ್ತರಾಧಿಕಾರತ್ವವನ್ನು ಈ ಕ್ಷಣ ತ್ಯಜಿಸುತ್ತೇನೆ. ಅಲ್ಲದೆ ನಾನು ಇಂದಿನಿಂದ ನೈಷ್ಠಿಕ ಬ್ರಹ್ಮಚರ್ಯೆಯನ್ನು ಪಾಲಿಸುತ್ತೇನೆ" ಎಂದು ಪ್ರತಿಜ್ಞೆ ಮಾಡಿದನು. ಈ ರೀತಿ ಭೀಷಣ ಪ್ರತಿಜ್ಞೆ ಮಾಡಿದ್ದರಿಂದ ದೇವವ್ರತನಿಗೆ ಭೀಷ್ಮ ಎಂಬ ಹೆಸರಾಯಿತು.
ಸಂ.: ದಾಮೋದರ ಶೆಟ್ಟಿ, ಇರುವೈಲು
Yakshagana.in ಸೇರಿಕೊಳ್ಳಿ: ವಾಟ್ಸ್ಆ್ಯಪ್ | ಟೆಲಿಗ್ರಾಂ | ಫೇಸ್ಬುಕ್ | ಟ್ವಿಟರ್ | ಯೂಟ್ಯೂಬ್ | ಇನ್ಸ್ಟಾಗ್ರಾಂ
Tags:
ಪುರಾಣ