ಕದ್ರಿ ವಿಷ್ಣು, ಕೇದಗಡಿ, ಕುಟ್ಯಪ್ಪು, ಅಗರಿ, ಬಲಿಪ: ಯಕ್ಷರಂಗದ ವೈಭವ ಬಿಚ್ಚಿಟ್ಟ ಸಂಪಾಜೆ ಶೀನಪ್ಪ ರೈ

ಸಂಪಾಜೆ ಶೀನಪ್ಪ ರೈ


ಸಂಪಾಜೆ ಶೀನಪ್ಪ ರೈಯವರೊಂದಿಗೆ 2021 ಜನವರಿ 5ರಂದು ಮಾತನಾಡಿಸಿ ಮಾಡಿಕೊಂಡ ಟಿಪ್ಪಣಿ ಇದು. ಅನಾಮಿಕ ಹೆಸರಿನಲ್ಲಿ ವಾಟ್ಸ್ಆ್ಯಪ್‌ನಲ್ಲಿ ಹರಿದಾಡುತ್ತಿದ್ದ ಈ ಸುಂದರಾದ್ಭುತ ನಿರೂಪಣೆಯ ಲೇಖನ ಯಾರದು ಅಂತ ಗೊತ್ತಾದರೆ ಕಾಮೆಂಟ್ ಮೂಲಕ ತಿಳಿಸುವಂತೆ ಓದುಗರಲ್ಲಿ ವಿನಂತಿ.
ಕದ್ರಿ ವಿಷ್ಣು, ಕೇದಗಡಿ ಗುಡ್ಡಪ್ಪ ಗೌಡ, ಕುಂಬಳೆ ಕುಟ್ಯಪ್ಪು, ಅಗರಿ ಶ್ರೀನಿವಾಸರಾಯರು, ಬಲಿಪ ಭಾಗವತರು - ಈ ಗಣ್ಯರನ್ನು ನೆನಪಿಸಿಕೊಂಡಿರುವ ಸಂಪಾಜೆ ಶೀನಪ್ಪ ರೈ ಅವರು ಗತಕಾಲದ ಯಕ್ಷಗಾನ ವೈಭವ ಬಿಚ್ಚಿಟ್ಟ ವಿಶಿಷ್ಟ, ಓದಲೇಬೇಕಾದ ಮತ್ತು ಆಪ್ತವೆನಿಸುವ ಲೇಖನ ಇಲ್ಲಿದೆ.
1970ರ ದಶಕದ ಆರಂಭದ ಭಾಗವಿರಬೇಕು; ಕೇದಗಡಿ ಗುಡ್ಡಪ್ಪ ಗೌಡರೂ ನಾನೂ ಕಟೀಲು ಒಂದನೆಯ ಮೇಳದಲ್ಲಿದ್ದೆವು. ದೇವಿಮಹಾತ್ಮೆ ಪ್ರಸಂಗದಲ್ಲಿ ಅವರದ್ದು ರಕ್ತಬೀಜನಾದರೆ ನಾನು ದೇವೇಂದ್ರ. ಅಂದ ಹಾಗೆ, ನನ್ನನ್ನು ಕಟೀಲು ಮೇಳದ ಯಜಮಾನರಾದ ಕಲ್ಲಾಡಿ ವಿಠಲ ಶೆಟ್ಟರಲ್ಲಿ ಕರೆದೊಯ್ದು ಪರಿಚಯಿಸಿದವರು ಗುಡ್ಡಪ್ಪ ಗೌಡರೇ. ಒಂದು ಬಗೆಯಲ್ಲಿ ನನಗೆ ಅವರ ಬಗ್ಗೆ ಗುರುಭಾವ. 'ಭೀಷ್ಮ ವಿಜಯ’ದಲ್ಲಿ ಅವರ ಭೀಷ್ಮ ಪಾತ್ರ ಚಿತ್ರಣ ಅದ್ವಿತೀಯವಾದುದು. ನಾನು ಕೂಡ 'ಭೀಷ್ಮ ವಿಜಯ’ದ ಭೀಷ್ಮ ಪಾತ್ರ ಮಾಡಿದ್ದೇನೆ. ಆದರೆ, ಅದು ಗುಡ್ಡಪ್ಪ ಗೌಡರ ಮಟ್ಟಕ್ಕಲ್ಲ. ಅನೇಕ ಪಾತ್ರಗಳ ಚಿತ್ರಣದ ಸೂಕ್ಷ್ಮವನ್ನು ತಿಳಿದುಕೊಂಡದ್ದು ಅವರಿಂದಲೇ.

ಆಟ ಬಿಟ್ಟು ಹೇಗಿರಲಿ? ನಿದ್ದೆ ಬರುವುದಿಲ್ಲ!

ಒಮ್ಮೆ ಕಟೀಲಿನಲ್ಲಿ ಆಟ. ಗುಡ್ಡಪ್ಪ ಗೌಡರು ನನ್ನಲ್ಲಿ , 'ಬಲ ಪೋಯಿ’ (ಬನ್ನಿ ಹೋಗೋಣ) ಎಂದು ಕರೆದರು. ನಾನು 'ದೂರ?’ (ಯಾವ ಕಡೆ?’) ಎಂದು ಅವರನ್ನು ಕೇಳಲಿಲ್ಲ. ಸುಮ್ಮನೆ ಅವರನ್ನು ಅನುಸರಿಸಿದೆ.  ದೇವಸ್ಥಾನದ ಗೋಪುರದತ್ತ ಕರೆದೊಯ್ದರು. ಅಲ್ಲೊಬ್ಬರು ಕಂಬಕ್ಕೊರಗಿ ಕುಳಿತಿದ್ದರು. ಶ್ಯಾಮಲ ವರ್ಣ. ನೀಳವಾದ ಮುಖ. ವಾರ್ಧಕ್ಯದಿಂದ ಸಹಜವಾಗಿಯೇ ದುರ್ಬಲವಾಗುತ್ತಿರುವ ಶರೀರ. 'ಇಂದ ಶೀನಪ್ಪ, ಉಂದು ಏರ್ ಗೊತ್ತುಂಡ?’ ಎಂದು ಕೇಳಿದರು ಗುಡ್ಡಪ್ಪಣ್ಣ. 'ಇಜ್ಜಿ' ಎಂದು ತಲೆಯಲ್ಲಾಡಿಸಿದೆ.

'ಉಂಬೆರ್‌ ಕದ್ರಿ ವಿಷ್ಣ್ವಣ್ಣೆ’ ಎಂದು ಗುಡ್ಡಪ್ಪಣ್ಣ ಹೇಳುತ್ತಿದ್ದಂತೆ ನನ್ನೊಳಗೆ ಸಂಚಲನ ಉಂಟಾಯಿತು. 'ಅಯ್ಯೊ ದೇವೆರೇ, ತೆರಿಯಂದೆ ಪೋಯೆನೆ’ (ಅಯ್ಯೋ ದೇವೆರೆ, ತಿಳಿಯದೇ ಹೋದೆನಲ್ಲ !’) ಎಂದುಕೊಂಡವನೇ ಬಾಗಿ ಅವರ ಕಾಲು ಹಿಡಿದೆ.  ಆ ಕ್ಷಣವನ್ನು ನೆನೆದರೆ ಇವತ್ತಿಗೂ ಮಾತು ಗದ್ಗದವಾಗುತ್ತದೆ. ರಂಗಸ್ಥಳ ಎಡಭಾಗಕ್ಕೆ ವಾಲುತ್ತಿದೆಯೆನೋ ಎಂದನ್ನಿಸುವ ‘ತೂಕ’ದ ಹೆಜ್ಜೆಗಳಲ್ಲಿ ರಂಗಸ್ಥಳವನ್ನು ಹೊಗುತ್ತಿದ್ದ ಈ ಹೊಂತಕಾರಿ ಕಲಾವಿದ ಗತವೈಭವದ ಕುರುಹೇ ಇಲ್ಲದೆ ಹೀಗೆ ಕುಳಿತಿರುವುದನ್ನು ನೋಡಿ ನನಗೆ ಸಂಕಟವೆನಿಸಿತು. ನಾನು ಅಕ್ಷರಶಃ ಬಾಗಿಯೇ ನಿಂತಿದ್ದೆ. 

'ಈ ಹುಡುಗೆ ಸಂಪಾಜೆದಾಯೆ. ಸೀನಪ್ಪೆ ಪಂದ್. ನಾಟ್ಯ ಬಾರಿ ಪೊರ್ಲು ಉಂಡು. ಕಟೀಲ್ ಮೇಳೊಗು ಪೊಸ ಸೇರ್ಪಡೆ’ ಎಂದು ಗುಡ್ಡಪ್ಪಣ್ಣ ನನ್ನನ್ನು ಪರಿಚಯಿಸಿದರು. ಕದ್ರಿ ವಿಷ್ಣುರವರು 'ಎಡ್ಡೆ ಆವಡಮ್ಮ’ ಎಂದು ನನ್ನ ತಲೆಯ ಮೇಲೆ ಕೈಯಿಟ್ಟರು. ನಾವು ಸ್ವಲ್ಪ ಹೊತ್ತು ಮಾತನಾಡಿ ಬೀಳ್ಕೊಂಡೆವು. 

ವಯೋಸಹಜ ದೌರ್ಬಲ್ಯದಿಂದ ಮೇಳದಲ್ಲಿ ತಿರುಗಾಟ ಮಾಡಲಾಗದ ಸ್ಥಿತಿಯಲ್ಲಿ ಅವರು ಆಡಿದ ಮಾತುಗಳು ಈಗಲೂ ನನಗೆ ಕೇಳಿಸುತ್ತಿವೆ. ‘ಆಟೊನು ಬುಡ್ದು ಎಂಚ ಇಪ್ಪುನೆ. ರಾತ್ರೆ ನಿದ್ರೆ ಬರ್ಪುಜಿ ಮಗಾ! ಮೇಳಗು ಬತ್ತ್‌‌ದ್ ಚೌಕಿಡಾಂಡಲ ದಾಲ ದೇವೆರೆ ಚಾಕ್ರಿ ಮಲ್ತೊಂದು ಇತ್ತೊಲಿಯೆ ಮಗಾ’. ನೆನೆದರೆ ಕಣ್ಣಲ್ಲಿ ನೀರು ತುಂಬುತ್ತದೆ. 

ಗತವೈಭವ: ಅರ್ಜುನನೊಬ್ಬನೇ
ಆ ವರ್ಷ ಕಟೀಲು ಮೇಳದ ದಿಗ್ವಿಜಯದ ಮೊದಲ ದಿನ ಅವರು ಸೇವೆ ಮಾಡಲು ಬಂದಿದ್ದರು. 'ಪ್ರಮೀಳಾರ್ಜುನ ಕಾಳಗ’ದ ಅರ್ಜುನ ಅವರದ್ದು. ಆ ದಿನಗಳಲ್ಲೆಲ್ಲ ಇಡೀ ಪಾಂಡವಾಶ್ವಮೇಧಕ್ಕೆ ಒಬ್ಬನೇ ಅರ್ಜುನ. ಸುಧನ್ವ, ಪ್ರಮೀಳಾ, ಘೋರಭೀಷಣ, ಬಭ್ರುವಾಹನ, ತಾಮ್ರಧ್ವಜ, ವೀರವರ್ಮ ಕಾಳಗಗಳನ್ನೆಲ್ಲ ಎಲ್ಲವನ್ನೂ ಸವ್ಯಸಾಚಿಯಾಗಿ ನಿರ್ವಹಿಸಬೇಕಾಗಿತ್ತು. ರಾತ್ರಿ ಒಂಬತ್ತು ಗಂಟೆಗೆ ಕಿರೀಟ ಕಟ್ಟಿದರೆ ಬಿಚ್ಚುವುದು ಬೆಳಗ್ಗಿನ ಜಾವದ ಮಂಗಲಕ್ಕೇ. ಹಾಗೆ ನೂರಾರು ಬಾರಿ ಅರ್ಜುನರಾಗಿದ್ದವರು ಕದ್ರಿ ವಿಷ್ಣ್ವಣ್ಣ. ಆ ದಿನ ಅವರದ್ದು ಪ್ರಮೀಳಾರ್ಜುನಕ್ಕೆ ಮಾತ್ರ ಅರ್ಜುನ. ಎಂಥ ಯಾತನೆಯಾಗಿರಬೇಕು ಅವರಿಗೆ! ದೇಹಕ್ಕೆ ಜರಾವಸ್ಥೆ ಅಡರಿತ್ತು. ಪೂರ್ಣ ರಾತ್ರಿ ಅರ್ಜುನ ಮಾಡಲು ಮನಸಿತ್ತು , ಮೈ ಒಪ್ಪಬೇಕಲ್ಲ!  ಏನು ಭಾಗ್ಯವೋ, ಪ್ರಮೀಳಾರ್ಜುನ ಮುಗಿಸಿ ಅಡ್ಡ ಚೌಕಿಗೆ ಬಂದ ಅವರ ಕೈಯಿಂದ ಬಿಲ್ಬಾಣಗಳನ್ನು ಕೊಂಡು ಬಭ್ರುವಾಹನ ಕಾಳಗಕ್ಕೆ ಪ್ರವೇಶಿಸಿದೆ. 

ಅಂದು ‘ವೇಷವೆಂದರೆ ಹೀಗಿರಬೇಕು’ ಎಂಬ ಸಂಕಲ್ಪವೊಂದು ನನಗರಿವಿಲ್ಲದಂತೆಯೇ ನನ್ನೊಳಗೆ ಪಲ್ಲವಿಸಿತ್ತು. ‘ಕದ್ರಿ ವಿಷ್ಣ್ವಣ್ಣನ ಲೆಕ್ಕಾನೇ ಒಂಜಿ ಜವ್ವನೆ ಇತ್ತೆ ಮೇಳೊಗು ಬೈದೆ’ ಎಂದು ಆ ದಿನಗಳಲ್ಲಿ ನನ್ನ ಬಗ್ಗೆ ಕೆಲವು ಹಿರಿಯರು ಮಾತನಾಡಿಕೊಳ್ಳುತ್ತಿದ್ದುದನ್ನು ನೆನೆದರೆ ಈಗಲೂ ನನಗೆ ಹೆಮ್ಮೆ ಎನಿಸುತ್ತಿದೆ.  ವಿಷ್ಣ್ವಣ್ಣರಂಥವರು ಗಜದಂತೆ ಸಾಗಿ ಹಾದಿ ಮಾಡಿಕೊಟ್ಟವರು. ಮುಂದಿನವರಾದ ನಮಗೆ ಆ ಹೆಜ್ಜೆಗಳೊಳಗೆ ನಮ್ಮ ಹೆಜ್ಜೆಗಳನ್ನು ಹೊಂದಿಸಲು ಅನುಕೂಲವಾಯಿತು. 

ಮುಂದೆ ಕೆಲವು ದಿನಗಳಾದ ಬಳಿಕ ಕದ್ರಿ ವಿಷ್ಣ್ವಣ್ಣ ತೀರಿಕೊಂಡರು. ಆ ದಿನ ನಮಗೆ ವಾಮಂಜೂರು ಕಡೆಯಲ್ಲೆಲ್ಲಿಯೂ ಬಿಡಾರ. ಸುದ್ದಿ ಕೇಳಿದ ಗುಡ್ಡಪ್ಪಣ್ಣ ಮತ್ತು ನಾವು ಕೆಲವು ಕಲಾವಿದರು ಕಾರು ಮಾಡಿಕೊಂಡು ಕದ್ರಿಗೆ ಬಂದೆವು. ಹೆಜ್ಜೆಯಿಟ್ಟ ಬಿರುಸಿಗೆ ಎದ್ದ ಧೂಳು ರಂಗಸ್ಥಳದ ಮೇಲ್ಕಟ್ಟಿಗೆ ಸೋಕುವಂತೆ ಮಾಡಿದ, ಜೋಡಾಟದ ಪಂಥದಲ್ಲಿ ಎಂತೆಂಥ ಇದಿರುವೇಷಗಳನ್ನು ಮಣಿಸಿದ ಜೀವವೊಂದು ಶಾಶ್ವತವಾಗಿ ವಿರಮಿಸಿತ್ತು. ನೋಡುತ್ತಿದ್ದಂತೆ ನನ್ನ ಕಣ್ಣುಗಳು ಒದ್ದೆಯಾಗತೊಡಗಿದ್ದವು. ನನ್ನ ಸನಿಹ ನಿಂತಿದ್ದ ಗುಡ್ಡಪ್ಪ ಗೌಡರು ಜತೆಸಲಗವನ್ನು ಕಳೆದುಕೊಂಡ ಒಂಟಿಭಾವದಲ್ಲಿ ಮೌನವಾಗಿದ್ದರು.

ರಂಗದಲ್ಲಿ ರೀಟ ವಾಲಿದ್ದಕ್ಕೆ ತಪ್ಪು ಕಾಣಿಕೆ
ಆಗ ಕಟೀಲು ಮೇಳದ ಕೆಲವು ಆಟಗಳಿಗೆ, ಕಟೀಲಿನಲ್ಲಿ ನಡೆಯುವ ನವರಾತ್ರಿಯ ಆಟಗಳಿಗೆ ಅಗರಿ ಶ್ರೀನಿವಾಸ ಭಾಗವತರು ಬರುತ್ತಿದ್ದರು. ಒಮ್ಮೆ ‘ರತಿಕಲ್ಯಾಣ’ ಪ್ರಸಂಗ. ನನ್ನದು ಕೌಂಡ್ಲಿಕ. ನಾನು ಕೊಂಚ ಅಳುಕಿದ್ದೆ.  ಪಾತ್ರಕ್ಕೆ ನ್ಯಾಯ ಒದಗಿಸಲು ಶಕ್ತಿ ಮೀರಿ ಪ್ರಯತ್ನಿಸಿದ್ದೆ. ಕೊನೆಗೆ ದ್ರೌಪದಿ ಚಂಡಿಕೆಯಾಗಿ ಬರುವಾಗ ನಾನು ತಲೆಯನ್ನು ನೆಲದತ್ತ ಬಾಗಿಸಿ ವೀರಾವೇಶದ ತುರೀಯವನ್ನು ಕಾಣಿಸಿದೆ. ಆಗೆಲ್ಲ ಪಾತ್ರಗಳು ಸಾವು ಸನ್ನಿಹಿತವಾಗುವ ಸಂದರ್ಭದಲ್ಲಷ್ಟೇ ತಲೆಯನ್ನು ನೆಲದತ್ತ ಬಾಗಿಸಿ ಕುಣಿಯುವ ಸಂಪ್ರದಾಯವಿತ್ತು. ಕಿರೀಟದ ಹಗ್ಗ ಕಳಚಿ ನನ್ನ ಕಿರೀಟ ಹಿಂದಕ್ಕೆ ವಾಲಿತು. ಆದರೆ, ಕೆಳಕ್ಕೆ ಬೀಳದೆ ಕೇಸರದಲ್ಲಿ ಸಿಕ್ಕಿಹಾಕಿಕೊಂಡಿತು. ಅದನ್ನು ಕೌಶಲದಲ್ಲಿ ಮರಳಿ ತಲೆಯಲ್ಲಿರಿಸಿ ಯುದ್ಧಭಾಗ ಮುಗಿಸಿ ನಿರ್ಗಮಿಸಿದೆ. ಅಗರಿ ಶ್ರೀನಿವಾಸ ಭಾಗವತರು ಇವತ್ತು ಖಂಡಿತ ಬೈದು ಬಿಡುತ್ತಾಾರೆ ಎಂದು ಒಳಗೊಳಗೆ ಹೆದರಿದ್ದೆ. ಚೌಕಿಯಲ್ಲಿ ಮಂಗಲ ಪದ್ಯ ಹಾಡುತ್ತಿದ್ದ ಭಾಗವತರತ್ತ ನೋಡಿದೆ. ಅವರು ನನ್ನನ್ನು ಕರೆದು ಗದರಿಸುವ ಸೂಚನೆ ಕಾಣಲಿಲ್ಲ. ನಾನು ನಿಶ್ಚಿಂತೆಯಿಂದ ಬಣ್ಣ ತೆಗೆದು ಉಡುಪು ಧರಿಸಿ ಹೊರಟೆ. 

ಬೆಳಗ್ಗೆ ಕಟೀಲು ಬೀದಿಯ ಹೊಟೇಲಿನಲ್ಲಿ ನಾವೆಲ್ಲ ಚಹಾತಿಂಡಿ ಸೇವಿಸುತ್ತಿದ್ದೆವು. ಮತ್ತೊಂದು ಬೆಂಚಿನಲ್ಲಿ ಅಗರಿ ಶ್ರೀನಿವಾಸ ಭಾಗವತರೂ ಇದ್ದರು. ಇದ್ದಕ್ಕಿದ್ದಂತೆ, ‘ಕೋಡೆ ಕೌಂಡ್ಲಿಕೆ ಮಲ್ತಿನಾಯೆ ಏರ್’ (‘ನಿನ್ನೆ ಕೌಂಡ್ಲಿಕ ಮಾಡಿದವನು ಯಾರು?’)  ಎಂದರು. ನಾನು ಒಮ್ಮೆಲೆ ಕಂಪಿಸಿ ಕುಳಿತಲ್ಲಿಂದ ಎದ್ದು ನಿಂತೆ. ಮೆಲ್ಲನೆ ಅವರತ್ತ ಸರಿದು ನಿಂತೆ. ‘ಇಂದಪ್ಪ ನಿನಟ ನಾಲಾಣೆ ಉಂಡ. ಇಜ್ಜಿಡ ಯೇನ್ ಕೊರ್ಪೆ. ತರೆಕ್ ಮೂಜಿ ಸುತ್ತು ತೊರತ್‌ದ್ ದೇವರೆ ಡಬ್ಬಿಗ್ ಪಾಡ್‌ದ್‌ ಬಲ’ (‘ನೋಡಪ್ಪ ನಿನ್ನಲ್ಲಿ ನಾಲ್ಕಾಣೆ ಉಂಟಾ? ಮೂರು ಸಲ ನಿವಾಳಿಸಿ ದೇವರ ಡಬ್ಬಿಗೆ ಹಾಕು’) ಎಂದರು. 

ಅವರು ಯಾಕೆ ಅದನ್ನು ಹೇಳುತ್ತಿದ್ದಾರೆ ಎಂದು ನನಗೆ ಅರ್ಥವಾಯಿತು. ತತ್‌ಕ್ಷಣ ದೇವಸ್ಥಾನಕ್ಕೆ ಹೋಗಿ ಅವರೆಂದಂತೆಯೇ ಮಾಡಿದೆ. ರಂಗಸ್ಥಳದಲ್ಲಿ ಸಿಂಹದಂತಿದ್ದ ಅಗರಿ ಶ್ರೀನಿವಾಸ ಭಾಗವತರು ನನ್ನ ಪ್ರಮಾದವನ್ನು ಕ್ಷಮಿಸಿ ಅದಕ್ಕೆ ಸರಳವಾದ ಪ್ರಾಾಯಶ್ಚಿತ್ತವನ್ನು ಸೂಚಿಸಿದ ಪರಿ ಇವತ್ತಿಗೂ ನನಗೆ ನೆನಪಾಗುತ್ತಿದೆ. ಮುಂದೆ ಯಾವತ್ತೂ ನನ್ನ ತಲೆಯ ಕಿರೀಟ ಅಲ್ಲಾಡಿದ್ದಿಲ್ಲ. 

ಅಗರಿ ಶ್ರೀನಿವಾಸ ಭಾಗವತರಿಗೆ ನನ್ನ ಪಾತ್ರನಿರ್ವಹಣೆ ಮೆಚ್ಚುಗೆಯಾಗಿರಬೇಕು. ಹಾಗಾಗಿಯೇ ಅವರು ನನಗೆ ಗದರದೆ, ನನ್ನೊಳಗೆ ಭೀತಿ ಮೂಡಿಸದೆ, ತಪ್ಪನ್ನು ಕ್ಷಮಿಸಿ, ದೇವರೂ ಕ್ಷಮಿಸುವಂತೆ ಮಾಡಿ ನನ್ನ ಆತ್ಮವಿಶ್ವಾಸವನ್ನು ಹೆಚ್ಚಿಸಿದ್ದರು. 


ಮತ್ತೊಮ್ಮೆ ಅವರ ಭಾಗವತಿಕೆಯಲ್ಲಿ ‘ಕಾರ್ತವೀರ್ಯಾರ್ಜುನ ಕಾಳಗ’ದ ಕಾರ್ತವೀರ್ಯಾರ್ಜುನನಾಗಿದ್ದೆ. ನನ್ನದು ರಂಗಕ್ಕೆ ಅವಶ್ಯವಿದ್ದಷ್ಟೇ ಅರ್ಥ. ಒಂದರ ಬಳಿಕ ಒಂದು ಪದ. ಚೆನ್ನಾಗಿ ಕಸುಬು ಮಾಡಿದರೆ ‘ಕೈಕರಣ’ದ ಪದ ಕೊಡುತ್ತಿದ್ದರು. ನನ್ನದು ಆಗ ಜವ್ವನ. ಭಾಗವತರ ಮನೋಧರ್ಮವನ್ನನುಸರಿಸಿ ಪಾತ್ರಚಿತ್ರಣ ಮಾಡಿದೆ. ಬೆಳಗ್ಗೆ ಚೌಕಿಯಲ್ಲಿ ಮಂಗಲ ಪದ ಹಾಡಿದ ಬಳಿಕ, ‘ಕೋಡೆ ಅವು ಕಾರ್ತವೀರ್ಯೆ ಮಲ್ದಿನ ಜವ್ವನೆ ಏರ್?’ (‘ನಿನ್ನೆ ಕಾರ್ತವೀರ್ಯ ಮಾಡಿದ ಹುಡುಗ ಯಾರು?’) ಎಂದು ಕೇಳಿದರು. ನಾನು ಬಣ್ಣ ತೆಗೆಯುತ್ತಿದ್ದೆ. ಏನಾದರೂ ಬೈದುಬಿಡುತ್ತಾಾರೋ ಎಂದು ಹೆದರುತ್ತ, ‘ಯಾನ್ ಭಾಗವತರೆ’ (ನಾನು ಭಾಗವತರೆ’) ಎಂದೆ ಮೆಲುದನಿಯಲ್ಲಿ. ‘ಎಡ್ಡೆ ಮಲ್ತ ಅವ. ಎಡ್ಡೆ ಭವಿಷ್ಯ ಉಂಡು ನಿಕ್ಕ್‌’ (‘ಚೆನ್ನಾಗಿ ಮಾಡಿದ್ದಿ. ಒಳ್ಳೆಯ ಭವಿಷ್ಯವಿದೆ ನಿನಗೆ’)ಎಂದರು.

ಅದು ನನಗೆ ಪದವಿ ಸರ್ಟಿಫಿಕೇಟ್ ಸಿಕ್ಕಿದ ಹಾಗೆ.    

ಪದ್ಯದಿಂದ ಪದ್ಯಕ್ಕೆ ಏರಬೇಕಿದ್ದ ವೀರಾವೇಶ
ನಾನು ಕಟೀಲು ಎರಡನೆಯ ಮೇಳದಲ್ಲಿರುವಾಗ ಕಿರಿಯ ಬಲಿಪ ನಾರಾಯಣ ಭಾಗವತರು ಪ್ರಧಾನ ಭಾಗವತರು. ಹಿರಣ್ಯಾಕ್ಷ, ಇಂದ್ರಜಿತು ಪಾತ್ರಗಳು ಮೆರೆಯಲಾರಂಭಿಸಿದ್ದು ಅವರ ಭಾಗವತಿಕೆಯಲ್ಲಿಯೇ. ಕೆಲಸ ಕಂಡರೆ ಪದಗಳನ್ನು ಕಟ್ಟಿ ಕೊಡುತ್ತಿದ್ದರು. ಇಂದ್ರಜಿತುವಿನ ಪ್ರವೇಶಕ್ಕೆ ಹನ್ನೆರಡು ಪದ್ಯಗಳು, ಯುದ್ಧದಲ್ಲಿ ಏಳೇಳು ಪದ್ಯಗಳು. ಪದ್ಯದಿಂದ ಪದ್ಯಕ್ಕೆ ಸುತ್ತು ಕಡಿಮೆಯಾಗಬಾರದು, ಗುತ್ತು ಅಧಿಕವಾಗಬೇಕು. ದೇಹ ಬೆವತು ಬಳಲುತ್ತಿದ್ದಂತೆಯೇ ಹರುಪು ಕೆದರುತ್ತಿತ್ತು. ಹಿರಣ್ಯಾಕ್ಷನ ಪ್ರವೇಶದಲ್ಲಿದ್ದ ಅಬ್ಬರದ ನಾಲ್ಕು ಪಟ್ಟು ಅಧಿಕ ಕೆಲಸವನ್ನು ಶ್ವೇತವರಾಹದೆದುರಿನ ಯುದ್ಧದ ದೃಶ್ಯದಲ್ಲಿ ಕಾಣಿಸಬೇಕು. ಕುಂಬಳೆ ಕುಟ್ಯಪ್ಪುರವರ ‘ವರಾಹ’ವಾದರೆ ಸೋಗವಲ್ಲಿಯಲ್ಲಿಯೇ ಇದಿರುವೇಷವನ್ನು ಮರೆಸಿಬಿಡುವಂಥ ದೈತ್ಯ ಪ್ರತಿಭೆ. ಅವರ ಮುಂದೆ ನನ್ನ ವೇಷವನ್ನು ಕಾಣಿಸಬೇಕೆಂಬ ಛಲದಲ್ಲಿಯೇ ನಾನು ಮೇಲೇರುತ್ತ ಬಂದೆ. 

ಚೌಕಿಯಲ್ಲಿ ಕುಂಬಳೆ ಕುಟ್ಯಪ್ಪಣ್ಣ ನನಗೆ ಮುಖವರ್ಣಿಕೆಯಲ್ಲಿ ಬಣ್ಣಗಳ ಬಳಕೆಯ ಸೂಕ್ಷ್ಮವನ್ನು, ಹಸಿಬಣ್ಣದ ಸೊಗಸನ್ನು ಹೇಳಿಕೊಟ್ಟರು. ಆಗ ಮದ್ಲೆಗಾರರಾಗಿದ್ದ ಕಾಸರಗೋಡು ವೆಂಕಟರಮಣರವರು ಚೆಂಡೆಯ ನುಡಿತಗಳ ಮೂಲಕವೇ ನನಗೆ ನಮೂನೆಗಳಲ್ಲಿ ಕುಣಿಯುವುದನ್ನು ಕಲಿಸಿದರು. 

ಕುರಿಯ ವಿಠಲಶಾಸ್ತ್ರಿ, ಪಡ್ರೆ ಚಂದುರಂಥವರಿಗೆ ಗುರುಗಳಾಗಿದ್ದ ಕಾವು ಕಣ್ಣರಿಂದ ಹೆಜ್ಜೆಗಾರಿಕೆ ಕಲಿಯುವುದಕ್ಕಿಂತ ಹೆಚ್ಚಿನ ಭಾಗ್ಯ ಬೇರುಂಟೆ?  ಕೆಲವಾರು ವರ್ಷ ಕಾಲ ಇರಾ ಗೋಪಾಲಕೃಷ್ಣ ಕುಂಡೆಚ್ಚರವರ ಭಾಗವತಿಕೆಯಲ್ಲಿ ನನ್ನ ವೇಷ ಮೆರೆದಿದ್ದೆ. ಅವರ ಭಾಗವತಿಕೆಯಲ್ಲಿ ‘ಕಿರಾತಾರ್ಜುನ ಕಾಳಗ’ದ ಅರ್ಜುನನಾಗಿದ್ದೆ. ಕಿರಾತೇಶ್ವರನಾಗಿದ್ದವರು ಬಣ್ಣದ ಮಾಲಿಂಗರವರು. ದೀರ್ಘದೇಹಿಯಾಗಿರುವ ಮಾಲಿಂಗಣ್ಣ ರಂಗಸ್ಥಳಕ್ಕೆ ಒಂದು ಸುತ್ತು ಬಂದರೆ ಇದಿರುವೇಷ ಕುಬ್ಜವಾಗಿಬಿಡುತ್ತಿತ್ತು. ಭಾಗವತರು ಅಡಿಗಡಿಗೆ ಪದ ಕೊಟ್ಟು, ಪದದಿಂದ ಪದಕ್ಕೆ ನನ್ನ ವೇಷವನ್ನು ಕಾಣಿಸಲು ಅನುವು ಮಾಡಿಕೊಡುತ್ತಿದ್ದರು.  ಬಣ್ಣದ ಮಾಲಿಂಗಣ್ಣನವರೂ ನನ್ನ ಬಣ್ಣವನ್ನು ತಿದ್ದಿ ತೀಡಿದ್ದಾರೆ. 

ಆಗ ಹಗಲು ಬಿಡಾರದಲ್ಲಿಯೇ ರಂಗಶಿಕ್ಷಣ. ಮದ್ಲೆಗಾರ ನೆಡ್ಲೆ ನರಸಿಂಹ ಭಟ್ಟರು ತಾವು ಮಲಗಿದ್ದಲ್ಲಿಂದ ಎದ್ದು ಚಾಪೆಯನ್ನು ಕೊಂಚ ಮಡಚಿ ಕೋಲಿನಲ್ಲಿ ಚೆಂಡೆಯ ನುಡಿತಗಳನ್ನು ನುಡಿಸುತ್ತಿದ್ದರು. ನಾನು ಕುಣಿಯುತ್ತಿದ್ದೆ. ‘ಹಾಗಲ್ಲ, ಹೀಗೆ’ ಎಂದು ತಿದ್ದುತ್ತಿದ್ದರು. ಹಗಲಿನ ಈ ಬಗೆಯ ಕಲಿಕೆಯಿಂದಾಗಿ ರಾತ್ರಿ ರಂಗಸ್ಥಳವನ್ನು ಪ್ರವೇಶಿಸುವ ಧೈರ್ಯ ಹೆಚ್ಚುತ್ತಿತ್ತು. ಮತ್ತೊಬ್ಬ ಮದ್ಲೆಗಾರ ಅಡೂರು ಸುಂದರರಾಯರು ಅರ್ಧರಂಗಸ್ಥಳವರೆಗೆ ಬಂದು ನನ್ನ ಇಂದ್ರಜಿತು, ಹಿರಣ್ಯಾಕ್ಷ, ಭಾನುಕೋಪ ಮುಂತಾದ ಪಾತ್ರಗಳನ್ನು ಪ್ರೋತ್ಸಾಹಿಸುತ್ತಿದ್ದರು. 

ಈಗ ಎಲ್ಲವೂ ನೆನಪಾಗುತ್ತಿದೆ. ಕ್ಷಣದಿಂದ ಕ್ಷಣಕ್ಕೆ , ಪದ್ಯದಿಂದ ಪದಕ್ಕೆ ವೇಷವನ್ನು ಎತ್ತಿ ಕಾಣಿಸದೆ ವಿಧಿಯಿಲ್ಲ. ನನ್ನ ಸುತ್ತಮುತ್ತ ಅಂಥ ಮಹಾಪ್ರತಿಭೆಗಳಿದ್ದರು. ಹಿರಣ್ಯಾಕ್ಷನ ಪ್ರವೇಶದ ಅಬ್ಬರದ ನಾಲ್ಕುಪಟ್ಟು ಕೆಲಸವನ್ನು ವರಾಹಸ್ವಾಮಿಯ ಜೊತೆಗಿನ ಯುದ್ಧದಲ್ಲಿ ಕಾಣಿಸಬೇಕಿತ್ತು. 'ಇಂದ್ರಜಿತುವಿನ ಜನಕ ದುಗುಡವಿದೇಕೆ’ ಪದ್ಯದಿಂದ 'ದೀಕ್ಷೆಯನು ಬಿಸುಟೆದ್ದು’ ಪದ್ಯಕ್ಕಾಗುವಾಗ ಕಸುಬನ್ನು ಶಿಖರಕ್ಕೆ ಮುಟ್ಟಿಸಬೇಕಿತ್ತು. ದಗಲೆಯೊಳಗಿನ ಮೈ ಬೆವತಷ್ಟೂ ವೇಷದೊಳಗಿನ ಆವೇಶ ಕೆದರುತ್ತಿತ್ತು. ತೌಡು ಹರಡಿದ ಬಾಕಿಮಾರು ಗದ್ದೆಯ ನೆಲದಲ್ಲಿ ನಿಜವಾದ ಅರ್ಥದಲ್ಲಿ ಹುಡಿ ಹಾರುತ್ತಿತ್ತು. 

ನಾನು ಮಾಡಿದ್ದೇನೆ ಎನ್ನಲಾರೆ, ದೇವರು ಮಾಡಿಸಿದ್ದಾನೆ, ಅಷ್ಟೆ.

-ಸಂಪಾಜೆ‌ ಶೀನಪ್ಪ ರೈಗಳು ಹೇಳಿದ್ದು. ನಿರೂಪಣೆ: ಅನಾಮಿಕ

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

ನವೀನ ಹಳೆಯದು