ಪುರಾಣ ತಿಳಿಯೋಣ ಸರಣಿಯಲ್ಲಿ ದಾಮೋದರ ಶೆಟ್ಟಿ, ಇರುವೈಲು ಬರಹ
ನಹುಷನು ಚಂದ್ರವಂಶದ ಅರಸ. ಇವನ ತಂದೆ ಆಯು ಮಹಾರಾಜ. ನಹುಷನು ಪ್ರಜೆಗಳನ್ನು ಅತಿ ಉತ್ತಮ ರೀತಿಯಲ್ಲಿ ಪಾಲಿಸಿ ಪ್ರಜಾರಂಜಕನೆನಿಸಿದ್ದನು. ಮಾತ್ರವಲ್ಲದೆ ಅನೇಕ ಯಜ್ಞ ಯಾಗಾದಿಗಳನ್ನು ಮಾಡಿ ಅತುಲವಾದ ಪುಣ್ಯವನ್ನು ಸಂಪಾದಿಸಿದ್ದನು.ಒಮ್ಮೆ ದೇವಲೋಕದಲ್ಲಿ ದೇವೇಂದ್ರನು ಬ್ರಾಹ್ಮಣನಾದ ವೃತ್ರಾಸುರನನ್ನು ಕೊಂದುದರಿಂದ ಬ್ರಹ್ಮಹತ್ಯೆಯು ಅವನನ್ನು ಬೆನ್ನಟ್ಟಿಕೊಂಡು ಬರುತ್ತಿತ್ತು. ಅವನು ತನ್ನ ಪೀಠವನ್ನು ಬಿಟ್ಟು ತಪ್ಪಿಸಿಕೊಂಡು ಎಲ್ಲೆಲ್ಲಿಯೋ ಓಡುತ್ತಿದ್ದುದರಿಂದ ದೇವಲೋಕದಲ್ಲಿ ದೇವೇಂದ್ರನ ಸ್ಥಾನ ರಿಕ್ತವಾಗಿತ್ತು.
ಆಗ ಸಪ್ತರ್ಷಿಗಳೆಲ್ಲಾ ಸೇರಿ ದೇವೇಂದ್ರನ ಪೀಠದಲ್ಲಿ ಪುಣ್ಯಾತ್ಮನಾದ ನಹುಷನನ್ನು ಕುಳ್ಳಿರಿಸುವುದಾಗಿ ತೀರ್ಮಾನಿಸುತ್ತಾರೆ. ನಹುಷನು ದೇವೇಂದ್ರನ ಪೀಠದಲ್ಲಿ ಕುಳಿತುಕೊಂಡು ಆಡಳಿತ ನಡೆಸುತ್ತಿರುವಾಗ ಒಮ್ಮೆ ದೇವೇಂದ್ರನ ಮಡದಿಯಾದ ಶಚೀದೇವಿ ಅವನ ಕಣ್ಣಿಗೆ ಬೀಳುತ್ತಾಳೆ. ಅವಳ ರೂಪ ಲಾವಣ್ಯಗಳಿಂದ ಆಕರ್ಷಿತನಾದ ನಹುಷ, ಅವಳನ್ನು ತನ್ನ ಪತ್ನಿಯಾಗಬೇಕೆಂದು ಕೇಳಿಕೊಳ್ಳುತ್ತಾನೆ. ಆದರೆ ಅವಳು ಒಪ್ಪುವುದಿಲ್ಲ.
ಕೊನೆಗೆ ನಹುಷ ತುಂಬಾ ಒತ್ತಾಯಿಸಿದಾಗ, ಬೃಹಸ್ಪತಿಯು ಅವಳಿಗೆ ಗುಪ್ತವಾಗಿ ಸೂಚಿಸಿದಂತೆ, ನಹುಷನು ಸಪ್ತರ್ಷಿಗಳು ಹೊತ್ತಂತಹ ಪಲ್ಲಕಿಯಲ್ಲಿ ಬಂದರೆ ಆತನನ್ನು ಸ್ವೀಕರಿಸುವುದಾಗಿ ಹೇಳುತ್ತಾಳೆ. ಅಂತೆಯೇ ನಹುಷನು ಸಪ್ತರ್ಷಿಗಳಿಂದ ಪಲ್ಲಕಿಯನ್ಮು ಹೊರಿಸಿಕೊಂಡು ಶಚಿಯ ಅರಮನೆಗೆ ಹೋಗುತ್ತಿರುವಾಗ, ಸಪ್ತರ್ಷಿಗಳಲ್ಲಿ ಒಬ್ಬರಾದ ಅಗಸ್ತ್ಯರು ನಿಧಾನವಾಗಿ ನಡೆಯುತ್ತಿರುವುದನ್ನು ನೋಡಿ, "ಸರ್ಪ" "ಸರ್ಪ" (ವೇಗವಾಗಿ ನಡೆ) ಎನ್ನುತ್ತಾ ಅವರ ತಲೆಗೆ ತನ್ನ ಕಾಲಿನಿಂದ ತುಳಿಯುತ್ತಾನೆ.
ಇದರಿಂದ ಕ್ರುದ್ಧರಾದ ಅಗಸ್ತ್ಯರು ಅವನಿಗೆ ಸರ್ಪವಾಗುವಂತೆ ಶಾಪ ಕೊಡುತ್ತಾರೆ. ಆಗ ತನ್ನ ಅಪರಾಧವನ್ನು ಮನಗಂಡ ನಹುಷ, ಅವರಲ್ಲಿ ತನಗೆ ಶಾಪ ಪರಿಹಾರವನ್ನು ನೀಡುವಂತೆ ಬೇಡಿಕೊಳ್ಳುತ್ತಾನೆ. ಆಗ ಅಗಸ್ತ್ಯರು ಮುಂದೆ ಅವನದೇ ವಂಶದಲ್ಲಿ ಹುಟ್ಟಿದ ಧರ್ಮರಾಯನೊಂದಿಗೆ ಸಂಭಾಷಿಸಿದಾಗ ಶಾಪ ವಿಮೋಚನೆಯಾಗುತ್ತದೆ ಎಂದು ಹೇಳುತ್ತಾರೆ.
ಹೀಗೆ ಬಹುಕಾಲ ಹೆಬ್ಬಾವಾಗಿ ಒಂದು ಗುಹೆಯಲ್ಲಿ ನಹುಷ ಬಿದ್ದಿರುತ್ತಾನೆ. ಒಮ್ಮೆ ಪಾಂಡವರು ವನವಾಸದಲ್ಲಿದ್ದಾಗ ಬೇಟೆಗೆ ಹೋದ ಭೀಮನು ಆ ಹೆಬ್ಬಾವಿನ ಹಿಡಿತಕ್ಕೆ ಸಿಕ್ಕಿಬೀಳುತ್ತಾನೆ. ಭೀಮನನ್ನು ಆ ಹೆಬ್ಬಾವು ಬಲವಾಗಿ ಸುರುಳಿ ಸುತ್ತಿ ಹಿಡಿದಿಟ್ಟುಕೊಳ್ಳುತ್ತದೆ. ಆಗ ಭೀಮನನ್ನು ಹುಡುಕಿಕೊಂಡು ಬಂದ ಧರ್ಮರಾಯ, ಆ ಹೆಬ್ಬಾವು ಕೇಳಿದ ಧರ್ಮಸೂಕ್ಷ್ಮದ ಪ್ರಶ್ನೆಗಳಿಗೆ ಉತ್ತರಿಸಿ ಭೀಮನನ್ನು ಬಿಡಿಸುತ್ತಾನೆ. ತಕ್ಷಣವೇ ಶಾಪ ವಿಮೋಚನೆಯಾದ ನಹುಷನು, ದಿವ್ಯ ದೇಹವನ್ನು ಧರಿಸಿ ಮತ್ತೆ ಸ್ವರ್ಗಕ್ಕೆ ಹೋಗುತ್ತಾನೆ.
ಸಂ.: ದಾಮೋದರ ಶೆಟ್ಟಿ, ಇರುವೈಲು
Yakshagana.in ಸೇರಿಕೊಳ್ಳಿ: ವಾಟ್ಸ್ಆ್ಯಪ್ | ಟೆಲಿಗ್ರಾಂ | ಫೇಸ್ಬುಕ್ | ಟ್ವಿಟರ್ | ಯೂಟ್ಯೂಬ್ | ಇನ್ಸ್ಟಾಗ್ರಾಂ
Tags:
ಪುರಾಣ