ಪುರಾಣ ಪ್ರಸಂಗ: ಎರಡು ಅಶ್ವಮೇಧಗಳ ಮುಖಾಮುಖಿ - ತಾಮ್ರಧ್ವಜ ಕಾಳಗ

ಪುರಾಣ ತಿಳಿಯೋಣ ಸರಣಿಯಲ್ಲಿ ತಾಮ್ರಧ್ವಜ ಕಾಳಗದ ಕಥಾನಕ ವಿವರಿಸಿದ್ದಾರೆ ಹರಿಕೃಷ್ಣ ಹೊಳ್ಳ, ಬ್ರಹ್ಮಾವರ

ಮಹಾಭಾರತ ಯುದ್ಧದ ನಂತರ ಬಂಧುಹತ್ಯಾ ದೋಷದ ಪರಿಹಾರಕ್ಕಾಗಿ ಧರ್ಮರಾಯನು ಅಶ್ವಮೇಧ ಯಾಗವನ್ನು ಕೈಗೊಳ್ಳುತ್ತಾನೆ. ಪೂಜಿಸಿ ಬಿಟ್ಟ ಅಶ್ವದ ಬೆಂಗಾವಲಾಗಿ ಅರ್ಜುನನ ನೇತೃತ್ವದ ಪಡೆ ತೆರಳುತ್ತದೆ. ಪಾಂಡವರ ಅಶ್ವವು ರತ್ನಪುರದ ಕಡೆಗೆ ತೆರಳುತ್ತದೆ. ಅಲ್ಲಿಯ ಅರಸ ಮಯೂರಧ್ವಜ. ವಿಷ್ಣು ದರ್ಶನಕ್ಕಾಗಿ ಅವನು ಏಳು ಅಶ್ವಮೇಧವನ್ನು ಮುಗಿಸಿ ಎಂಟನೇ ಅಶ್ವಮೇಧ ಯಾಗವನ್ನು ಮಾಡುತ್ತಾ ಇರುತ್ತಾನೆ. ಅವನ ಅಶ್ವದ ಬೆಂಗಾವಲಾಗಿ ಮಯೂರಧ್ವಜನ ಮಗ ತಾಮ್ರಧ್ವಜನು ತೆರಳುತ್ತಾನೆ. ದಾರಿಯಲ್ಲಿ ಎರಡೂ ಅಶ್ವಗಳು ಇದಿರುಬದಿರಾಗುತ್ತವೆ. ಪಾಂಡವರ ಅಶ್ವವನ್ನು ತಾಮ್ರಧ್ವಜ ಕಟ್ಟಿ ಹಾಕುತ್ತಾನೆ. ಆಗ ಯುದ್ಧ ನಡೆಯುತ್ತದೆ. ತಾಮ್ರಧ್ವಜನು ಮಹಾ ಪರಾಕ್ರಮಿ. ಆತ ಅರ್ಜುನನನ್ನೂ ಕೃಷ್ಣನನ್ನೂ ಬೆನ್ನುಬೆನ್ನು ತಾಗಿಸಿ ಹಗ್ಗದಿಂದ ಬಿಗಿದು ಕಟ್ಟಿ ಅವರ ಕುದುರೆಯೊಡನೆ ಮರಳಿ ತನ್ನ ರಾಜ್ಯ ರತ್ನಪುರಕ್ಕೆ ಹೋಗುತ್ತಾನೆ.

ಅಲ್ಲಿ ದೀಕ್ಷಾಬದ್ಧನಾಗಿ ಯಾಗದ ಅಧ್ವರ್ಯುವಾಗಿ ಕುಳಿತಿದ್ದ ಮಯೂರಧ್ವಜನಿಗೆ ತನ್ನ ಮಗ ಬೇಗನೇ ಹಿಂತಿರುಗಿದ್ದನ್ನು ನೋಡಿ ಆಶ್ಚರ್ಯವಾಗುತ್ತದೆ. ಏನೆಂದು ಮಗನನ್ನು ಕೇಳಿದಾಗ ಅವನು ತಾನು ಪಾಂಡವರ ಅಶ್ವವನ್ನು ಕಟ್ಟಿ ಅವರೊಡನೆ ಹೋರಾಡಿದುದಾಗಿಯೂ, ಕೃಷ್ಣಾರ್ಜುನರನ್ನು ಸೋಲಿಸಿ ಅಲ್ಲಿಯೇ ಕಟ್ಟಿ ಹಾಕಿ ಬಂದಿರುವುದಾಗಿಯೂ, ತಮ್ಮ ಕುದುರೆಯ ಜೊತೆ ಅವರ ಕುದುರೆಯನ್ನೂ ತಂದಿರುವುದಾಗಿಯೂ ಹೇಳಿ ಎರಡು ಕುದುರೆಗಳನ್ನು ತೋರಿಸುತ್ತಾನೆ. ಆಗ ಮಯೂರಧ್ವಜನಿಗೆ ದುಃಖವಾಗುತ್ತದೆ. ಮಗನನ್ನು ಬಯ್ಯುತ್ತಾನೆ. ಕೃಷ್ಣನನ್ನು ಸಾಕ್ಷಾತ್ಕರಿಸಿಕೊಳ್ಳುವುದಕ್ಕಾಗಿಯೇ ತಾನು ಈ ಯಾಗವನ್ನು ಮಾಡುತ್ತಿದ್ದೇನೆ. ನೀನು ಎಲ್ಲವನ್ನೂ ಹಾಳು ಮಾಡಿದೆ ಎಂದು ಅಳುತ್ತಾನೆ.

ಇತ್ತ ಅದು ಹೇಗೋ ತಪ್ಪಿಸಿಕೊಂಡ ಕೃಷ್ಣಾರ್ಜುನರು ತಾಮ್ರಧ್ವಜನಿಂದ ಕುದುರೆಯನ್ನು ಬಿಡಿಸಿಕೊಳ್ಳುವ ಬಗ್ಗೆ ಉಪಾಯ ಮಾಡುತ್ತಾರೆ. ಕೃಷ್ಣನು ಒಬ್ಬ ಮುದಿ ಬ್ರಾಹ್ಮಣನಂತೆಯೂ ಅರ್ಜುನನು ಅವನ ಶಿಷ್ಯನಂತೆಯೂ ವೇಷ ಧರಿಸಿ ಮಯೂರಧ್ವಜ ಇದ್ದಲ್ಲಿಗೆ ಬರುತ್ತಾರೆ. ಅರಸನು ಎದ್ದು ನಮಸ್ಕರಿಸುವ ಮೊದಲೇ ಆ ಬ್ರಾಹ್ಮಣನು ಆಶೀರ್ವದಿಸುತ್ತಾನೆ. ಇದಿರುಗಡೆಯವರು ನಮಸ್ಕರಿಸುವ ಮೊದಲೇ ಬ್ರಾಹ್ಮಣರು ಅವರಿಗೆ ಆಶೀರ್ವದಿಸಬಾರದು, ಹಾಗೆ ಮಾಡಿದರೆ ಆಶೀರ್ವಾದ ಪಡೆದವರಿಗೆ ಕೆಡುಕು ಸಂಭವಿಸುತ್ತದೆ. ಹೀಗಾಗಿ ಮಯೂರಧ್ವಜ ಆಕ್ಷೇಪಿಸುತ್ತಾನೆ. ಆಗ ಬ್ರಾಹ್ಮಣನು ತಾನು ಒಂದು ದೊಡ್ಡ ಸಂಕಷ್ಟದಲ್ಲಿ ಇದ್ದುದರಿಂದ ತನಗೆ ಗಡಿಬಿಡಿಯಾಯಿತು ಎನ್ನುತ್ತಾನೆ. ಏನು ಕಷ್ಟ ಎಂದು ಕೇಳಿದಾಗ ಬ್ರಾಹ್ಮಣನು ಸುಳ್ಳು ಕತೆ ಹೇಳುತ್ತಾನೆ.

ತನಗೆ ಒಬ್ಬ ಮಗ ಇದ್ದುದಾಗಿಯೂ, ಅವನ ಮದುವೆ ಮಾಡಿಸಲು ಹಣ ಸಹಾಯಕ್ಕಾಗಿ ಅವನ ಜೊತೆ ಕೂಡಿ ನೀನಿದ್ದಲ್ಲಿಗೆ ಬರುವಾಗ ದಾರಿಯಲ್ಲಿ ಒಂದು ಸಿಂಹವು ಅವನನ್ನು ಹಿಡಿಯಿತು. ತಾನು ಪರಿಪರಿಯಾಗಿ ಬೇಡಿಕೊಂಡಾಗ ಅದು "ಮಯೂರಧ್ವಜನ ಶರೀರವನ್ನು ನೀಳವಾಗಿ ಸೀಳಿ ಅದರಲ್ಲಿ ಅರ್ಧ ಭಾಗ ತಂದುಕೊಟ್ಟರೆ ನಿನ್ನ ಮಗನನ್ನು ಬಿಟ್ಟು ಬಿಡುತ್ತೇನೆ" ಎಂದಿತು. "ಹೀಗಾಗಿ ಹೇಗಾದರೂ ಮಾಡಿ ನಿನ್ನ ಅರ್ಧ ದೇಹ ಕೊಟ್ಟು ತನ್ನ ಮಗನನ್ನು ಬದುಕಿಸಿಕೊಡು ಮಹಾರಾಯ" ಎನ್ನುತ್ತಾನೆ.


ಅಷ್ಟರಲ್ಲಿ ಮಯೂರಧ್ವಜನ ರಾಣಿ ಕುಮುದ್ವತಿ ಬಂದು, "ಅವನ ಅರ್ಧಾಂಗಿ ನಾನು, ನಾನು ಅವನ ಎಡ ಅರ್ಧ ದೇಹಕ್ಕೆ ಸಮಳು. ನನ್ನನ್ನೇ ಸಿಂಹಕ್ಕೆ ಒಪ್ಪಿಸಿ" ಎನ್ನುತ್ತಾಳೆ. ಮಗನಾದ ತಾಮ್ರಧ್ವಜನು ಬಂದು "ಮಗನು ತಂದೆಯ ಬಲ ಅರ್ಧ ಭಾಗಕ್ಕೆ ಸಮನು. ಹೀಗಾಗಿ ನನ್ನನ್ನೇ ಆ ಸಿಂಹಕ್ಕೆ ಒಪ್ಪಿಸಿ" ಎನ್ನುತ್ತಾನೆ. ಆದರೆ ಬ್ರಾಹ್ಮಣನು ಅದಕ್ಕೆ ಒಪ್ಪುವುದಿಲ್ಲ. ಮಯೂರಧ್ವಜನ ದೇಹದ ಬಲ ಅರ್ಧ ಭಾಗವನ್ನೇ ತರಬೇಕು ಎಂಬುದಾಗಿ ಸಿಂಹವು ಸ್ಪಷ್ಟವಾಗಿ ಹೇಳಿದೆ. ಅಲ್ಲದೇ ಅವನ ಹೆಂಡತಿ ಮತ್ತು ಮಗ ಇಬ್ಬರೂ ಸೇರಿ ಗರಗಸದಿಂದ ಕತ್ತರಿಸಿ ಕೊಡಬೇಕು ಅಂತ ಹೇಳಿದೆ ಎನ್ನುತ್ತಾನೆ.

ಅದರಂತೆ ಕುಮುದ್ವತಿ ಮತ್ತು ತಾಮ್ರಧ್ವಜ ಇಬ್ಬರೂ ಸೇರಿ ಗರಗಸದಿಂದ ಮಯೂರಧ್ವಜನನ್ನು ಸೀಳುವುದಕ್ಕೆ ತೊಡಗುತ್ತಾರೆ. ಸುಮಾರು ಅರ್ಧಾಂಶ ಕತ್ತರಿಸಿದ ನಂತರ ಮಯೂರಧ್ವಜನ ಎಡಗಣ್ಣಿನಿಂದ ಧಾರಾಕಾರವಾಗಿ ಕಣ್ಣೀರು ಸುರಿಯಲಾರಂಭಿಸುತ್ತದೆ. ಅದನ್ನು ಕಂಡ ಬ್ರಾಹ್ಮಣನು "ಏಳಯ್ಯ ಶಿಷ್ಯ, ಏಳು ಹೋಗೋಣ. ಹೀಗೆಲ್ಲ ಅತ್ತು ಕರೆದು ಕೊಡುವ ದಾನ ಯಾರಿಗೆ ಬೇಕು? ಏಳು ಹೋಗೋಣ" ಅಂತ ಹೊರಡುತ್ತಾನೆ. ಆಗ ಮಯೂರಧ್ವಜನು ಅವನನ್ನು ತಡೆದು ನಿಲ್ಲಿಸಿ, "ನನ್ನ ಬಲಭಾಗವಾದರೂ ಪ್ರಯೋಜನಕ್ಕೆ ಬಂತು. ಹೀಗಾಗಿ ಬಲ ಕಣ್ಣು ಆನಂದಿಸುತ್ತಿದೆ. ಎಡಭಾಗ ವ್ಯರ್ಥವಾಗಿ ಮಣ್ಣಾಗಿ ಹೋಗುತ್ತದಲ್ಲ ಅಂತ ಎಡಗಣ್ಣಿನಲ್ಲಿ ನೀರು ಸುರಿಯುತ್ತಾ ಇದೆ, ಅಷ್ಟೇ. ನಾನು ನೋವಿನಿಂದ ತಾಳಲಾರದೇ ಅತ್ತದ್ದಲ್ಲ" ಎನ್ನುತ್ತಾನೆ.

ಇದರಿಂದ ಸಂತೋಷಿತನಾದ ಬ್ರಾಹ್ಮಣನು ಕೂಡಲೇ ತನ್ನ ನಿಜರೂಪವನ್ನು ತೋರಿಸಿ ಅವನನ್ನು ಹರಸುತ್ತಾನೆ. ಅವನ ದೇಹವು ಮೊದಲಿನಂತೆ ಕೂಡಿಕೊಳ್ಳುತ್ತದೆ. ತನ್ನ "ಮಗ ಮಾಡಿದ ತಪ್ಪನ್ನು ಕ್ಷಮಿಸು ದೇವಾ" ಎನ್ನುತ್ತಾ ಮಯೂರಧ್ವಜನು ಕೃಷ್ಣನ ಕಾಲಿಗೆ ಎರಗುತ್ತಾನೆ. ಅಲ್ಲದೇ ತನ್ನ ಕುದುರೆಯನ್ನೂ ಕೂಡಾ ಅರ್ಜುನನಿಗೆ ಕೊಟ್ಟು ಕಪ್ಪ ಕಾಣಿಕೆಗಳನ್ನು ಇತ್ತು ಕಳುಹಿಸಿಕೊಡುತ್ತಾನೆ. (ಯಕ್ಷಗಾನ.ಇನ್).
-ಹರಿಕೃಷ್ಣ ಹೊಳ್ಳ, ಬ್ರಹ್ಮಾವರ

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

ನವೀನ ಹಳೆಯದು