ನಾನೇ ದೇವನೆಂದು ಹಮ್ಮಿನಿಂದ ಮೆರೆಯುತ್ತಿದ್ದ ಪೌಂಡ್ರಕ ರಾಜನ ಕಥೆ ಇದು. ತಾವೇ ದೇವರು ಎಂದು ಬಿಂಬಿಸುವ ಮೂರ್ಖರು ಈಗಿನಂತೆ ಹಿಂದೆಯೂ ಇದ್ದರು. ಶ್ರೀ ಕೃಷ್ಣನ ಕಾಲದಲ್ಲಿಯೂ ಇಂತಹ ಒಬ್ಬ ಮೂರ್ಖನಿದ್ದ, ಅವನ ಹೆಸರು ಪೌಂಡ್ರಕ ವಾಸುದೇವ.
ಸಂಬಂಧದಲ್ಲಿ ಈತ ಕೃಷ್ಣನ ಮಲ ಸಹೋದರ. ಕಾಶೀ ರಾಜನ ಒಬ್ಬಳೇ ಮಗಳಾದ ಸುತನುವನ್ನು ವಸುದೇವನು ಮದುವೆಯಾಗಿದ್ದ. ಪೌಂಡ್ರಕ ವಾಸುದೇವ ಇವರ ಮಗ. ಕಂಸನನ್ನು ಕೊಂದು ಶ್ರೀಕೃಷ್ಣನು ಲೋಕವಿಖ್ಯಾತನಾಗಲು ಪೌಂಡ್ರಕನಿಗೆ ಕೃಷ್ಣನ ದೈವತ್ವ ಹಾಗೂ ಹೆಚ್ಚುತ್ತಿರುವ ಜನಪ್ರಿಯತೆ ಅಸೂಯೆ ಹುಟ್ಟಿಸಿತು.
ಕೃಷ್ಣನ ಹಾಗೇ ಕಾಣಲು ತಾನೂ ನಾಟಕದ ಕೃಷ್ಣ ವೇಷಧಾರಿಗಳಂತೆ ಶಂಖ, ಚಕ್ರ, ಗದೆ, ಪದ್ಮಗಳೆಲ್ಲನ್ನವನ್ನೂ ಧರಿಸಿದ್ದ. ಶ್ರೀವತ್ಸ ಚಿಹ್ನೆಯಾಗಿ ಎಷ್ಟು ಕಪ್ಪನ್ನು ಹಚ್ಚಿದರೂ ನಿಲ್ಲದಾಗ ತನ್ನ ವಕ್ಷವನ್ನೇ ಸುಟ್ಟು ಕರಕಲಾಗಿಸಿಕೊಂಡ.
ಚಿನ್ನದ ಗರುಡನನ್ನು ಮಾಡಿಸಿ ಅದರ ಮೇಲೆ ಕುಳಿತು (ಸೇವಕರು ಅದನ್ನು ಹೊರುತ್ತಿದ್ದರು) ಊರೆಲ್ಲ ತಾನೇ ವಾಸುದೇವ, ಭಗವಂತ ಅಂತ ಹೇಳಿಕೊಂಡ. ಪ್ರಜೆಗಳು ಭಯಕ್ಕೋ ಅಥವಾ ಭಕ್ತಿಗೋ, ನಂಬಿದರು.
ಈಗ ಪೌಂಡ್ರಕನಿಗೆ ಇನ್ನೂ ಆತ್ಮವಿಶ್ವಾಸ ಬಂತು. ಒಮ್ಮೆ ಕೃಷ್ಣನಿಲ್ಲದ ಸಮಯ ನೋಡಿ, ರಾತ್ರೋರಾತ್ರಿ ಮಥುರೆಯನ್ನು ಆಕ್ರಮಿಸಿದ. ಆದರೆ ಬಲರಾಮ, ಸಾತ್ಯಕಿಗಳಿಂದ ಪೆಟ್ಟು ತಿಂದು ಓಡಿಹೋದ.
ಸ್ವಲ್ಪ ಸಮಯದ ನಂತರ ಅವನು ಕೃಷ್ಣನಿಗೆ ಹೀಗೆ ಒಂದು ಓಲೆ ಕಳುಹಿಸಿದ- "ನೀನು ವಾಸುದೇವ ನಾಮವನ್ನು ತ್ಯಜಿಸಬೇಕು. ಶ್ರೀವತ್ಸ ಚಿಹ್ನೆ, ಕೌಸ್ತುಭ ಹಾರ, ಗರುಡ ವಾಹನಗಳನ್ನು ಉಪಯೋಗಿಸುವುದನ್ನು ಈಗಿಂದೀಗಲೇ ನಿಲ್ಲಿಸಬೇಕು."
ಉಗ್ರಸೇನಾದಿಗಳೆಲ್ಲರೂ ಅದನ್ನು ಓದಿ ಗಹಗಹಿಸಿ ನಕ್ಕರು. ಶ್ರೀಕೃಷ್ಣನು, ಪೌಂಡ್ರಕನನ್ನು ಕಾಣಲು ತಾನೇ ಬರುವುದಾಗಿ ದೂತನಲ್ಲಿ ಉತ್ತರ ಹೇಳಿ ಕಳುಹಿಸಿದ. ಕೃಷ್ಣನನ್ನು ಎದುರಿಸಲು ಪೌಂಡ್ರಕನು ಸುವರ್ಣ ಗರುಡವನ್ನು ಏರಿ ಬಂದ.
ಆ ಸಮಯದಲ್ಲಿ ಪೌಂಡ್ರಕನು ತನ್ನ ಸ್ನೇಹಿತನ ಕಾಶಿಯ ರಾಜ್ಯದಲ್ಲಿ ಇದ್ದುದರಿಂದ ಕೃಷ್ಣನು ಇಡೀ ಕಾಶೀ ನಗರವನ್ನು ಸುತ್ತುವರಿದನು. ಪೌಂಡ್ರಕ ರಾಜನು ಬಹು ಧೀರಯೋಧ. ಕೃಷ್ಣನು ಮುತ್ತಿಗೆ ಹಾಕಿದನೆಂದು ತಿಳಿಯುತ್ತಲೇ ಕಾಶೀರಾಜನ ಜೊತೆ ಎರಡು ಅಕ್ಷೌಹಿಣಿ ಸೈನ್ಯದೊಡನೆ ನಗರದಿಂದ ಹೊರಕ್ಕೆ ಬಂದನು.
ಕೃಷ್ಣನನ್ನು ಎದುರಿಸಲು ಅವನು ಮುಂದೆ ಬಂದಾಗ ಪೌಂಡ್ರಕನನ್ನು ಕೃಷ್ಣನು ಮೊಟ್ಟಮೊದಲ ಬಾರಿಗೆ ಕಣ್ಣಾರೆ ಕಂಡನು. ಪೌಂಡ್ರಕನು ಶಂಖ, ಚಕ್ರ, ಗದಾ ಪದ್ಮ ಮತ್ತು ಧನುಸ್ಸನ್ನು ಹಿಡಿದಿದ್ದನು. ಎದೆಯ ಮೇಲೆ ಶ್ರೀವತ್ಸ ಲಾಂಛನವಿತ್ತು. ಕೃತಕ ಕೌಸ್ತುಭ ಮಣಿ ಮತ್ತು ಶ್ರೀಕೃಷ್ಣನ ಹಾರವನ್ನೇ ಹೋಲುವಂತಹ ಹಾರವನ್ನು, ಪೀತಾಂಬರವನ್ನು ಧರಿಸಿದ್ದನು. ಅವನ ರಥದ ಮೇಲೆ ಇದ್ದ ಧ್ವಜವು ಕೃಷ್ಣನ ಧ್ವಜವನ್ನೇ ಅನುಕರಿಸಿ ಗರುಡನ ಸಂಕೇತವನ್ನು ಹೊಂದಿತ್ತು. ಪೌಂಡ್ರಕನು ತನ್ನ ನಿಲುವನ್ನೂ, ಉಡುಪನ್ನೂ ಅನುಕರಿಸುತ್ತಿದ್ದುದನ್ನು ಕಂಡಾಗ ಕೃಷ್ಣನಿಗೆ ನಗುವನ್ನು ತಡೆಯಲಾಗಲಿಲ್ಲ. ಬಹುತೃಪ್ತಿಯಿಂದ ನಕ್ಕನು.
ಪೌಂಡ್ರಕನ ಸೈನಿಕರು ಕೃಷ್ಣನ ಮೇಲೆ ಆಯುಧಗಳ ಮಳೆಯನ್ನೇ ಸುರಿಸಿದರು. ಕೃಷ್ಣನು ತನ್ನ ಬಾಣದಿಂದ ಪೌಂಡ್ರಕನ ಎಲ್ಲಾ ಸೈನಿಕರು, ಆನೆಗಳು, ಕುದುರೆಗಳು ಮತ್ತು ಒಂಟೆಗಳನ್ನು ಕೊಂದನು. ನಂತರ ತನ್ನ ಸುದರ್ಶನ ಚಕ್ರದಿಂದ ಪೌಂಡ್ರಕನ ಶಿರವನ್ನು ಕತ್ತರಿಸಿದನು.
ಹೀಗೆ ಪ್ರಜೆಗಳನ್ನು ಕಾಡುತ್ತಿದ್ದ, ಲೋಕ ಕಂಟಕನಾದ ದೊಂಬರಾಟದ ದೇವರಾದ ಪೌಂಡ್ರಕನ ಇತಿಶ್ರೀ ಆಯಿತು. ಆದರೂ ಪೌಂಡ್ರಕನು ವಾಸುದೇವನಂತೆ ವೇಷ ಧರಿಸಿ ಯಾವಾಗಲೂ ಕೃಷ್ಣನನ್ನೇ ಕುರಿತು ಧ್ಯಾನಿಸುತ್ತಿದುದರಿಂದ ಅವನಿಗೆ ಸಾರೂಪ್ಯ ಮುಕ್ತಿಯು ದೊರಕಿತಂತೆ.
ಸಂ. ದಾಮೋದರ ಶೆಟ್ಟಿ, ಇರುವೈಲು
Yakshagana.in ಸೇರಿಕೊಳ್ಳಿ: ವಾಟ್ಸ್ಆ್ಯಪ್ | ಟೆಲಿಗ್ರಾಂ | ಫೇಸ್ಬುಕ್ | ಟ್ವಿಟರ್ | ಯೂಟ್ಯೂಬ್ | ಇನ್ಸ್ಟಾಗ್ರಾಂ
Tags:
ಪುರಾಣ