![]() |
ಲೀಲಾ ಬೈಪಾಡಿತ್ತಾಯರ ಕತ್ತಿನಲ್ಲಿದ್ದ ಇದೇ ಚಿನ್ನದ ನೆಕ್ಲೇಸ್ ಕಳವಾಗಿತ್ತು |
ಯಕ್ಷಗಾನ ಗುರುಗಳಾದ ಹರಿನಾರಾಯಣ ಬೈಪಾಡಿತ್ತಾಯರು ತಮ್ಮ ತಿರುಗಾಟದ ಅನುಭವಗಳನ್ನು "ಯಕ್ಷ ಮೆಲುಕು" ಅಂಕಣದ ಮೂಲಕ ಹಂಚಿಕೊಂಡಿದ್ದಾರೆ. ಈ ಅಂಕಣದ 10ನೇ ಕಂತು ಇಲ್ಲಿದೆ.
ಯಕ್ಷಗಾನಕ್ಕೆ ಹೋಗುವ ಮಹಿಳೆಯರಿಗೆ ಸಾಕಷ್ಟು ಸವಾಲುಗಳಿರುತ್ತವೆ. ಅವುಗಳಲ್ಲಿ ಈ ರೀತಿಯ ಕಳ್ಳಕಾಕರ ಕಾಟವೂ ಒಂದು. ಅವುಗಳನ್ನೆಲ್ಲ ಮೆಟ್ಟಿ ನಿಂತ ಲೀಲಾ ಬೈಪಾಡಿತ್ತಾಯ ತಿರುಗಾಟದ ಸಾಧನೆ ಮಾಡಿ ಯಕ್ಷಗಾನ ಕಲಾಭಿಮಾನಿಗಳ ಜನಮಾನಸದಲ್ಲಿ ತಮ್ಮ ಛಾಪು ಮೂಡಿಸಿದ್ದಾರೆ.
ಇದು ಸುಮಾರು 1985ರ ಆಸುಪಾಸಿನ ಘಟನೆ. ಅರುವ ನಾರಾಯಣ ಶೆಟ್ಟರು ಕಟ್ಟಿದ ಅರುವ (ಅಳದಂಗಡಿ) ಶ್ರೀ ದೇವಿ ಸೋಮನಾಥೇಶ್ವರಿ ಪ್ರಸಾದಿತ ಯಕ್ಷಗಾನ ಮೇಳವು ಶುರುವಾಗಿ ಎರಡ್ಮೂರು ವರ್ಷವಾಗಿತ್ತಷ್ಟೇ. ಆ ಮೇಳದ ಪರಕೆದ ಪಿಂಗಾರ, ಪರಕೆದ ಗಗ್ಗರ, ಪರಕೆದ ಪದ್ದೆಯಿ ಮುಂತಾದ ತುಳು ಕಥಾನಕಗಳು ವಿಜೃಂಭಿಸುತ್ತಿದ್ದ ಸಮಯವದು.
ಹಾಗೇ ಒಂದು ತಿರುಗಾಟದಲ್ಲಿ, ಅರುವ (ಅರ್ವ) ಮೇಳದ ಆಟವಿದ್ದುದು ವೇಣೂರು ಸಮೀಪದ ಹೊಸಂಗಡಿಯಲ್ಲಿ. ಮೊದಲ ಬಾರಿಗೆ ಮಹಿಳೆಯೊಬ್ಬಳು ಯಕ್ಷಗಾನ ತಿರುಗಾಟಕ್ಕೆ ಸೇರಿದ ಮೇಳವಾಗಿತ್ತದು. ಹೀಗಾಗಿ, ಭಾಗವತರಾಗಿದ್ದ ಲೀಲಾ ಬೈಪಾಡಿತ್ತಾಯರನ್ನು ನೋಡಲು ಬರುವವರ ಸಂಖ್ಯೆಯೂ ಹೆಚ್ಚಾಗಿತ್ತು. ಬೆಳಿಗ್ಗೆ ಬೇರೆ ಊರಿನಿಂದ ಮೇಳದ ವ್ಯಾನ್ ಬಂದು ನಿಂತಾಗಲೇ ಜನ ಜಂಗುಳಿ ಸೇರಿತ್ತು. ಬಂದವರಿಗೆ ಅಲ್ಲಿ ನಿರಾಶೆ ಕಾದಿತ್ತು. ಕಾರಣವೆಂದರೆ, ವ್ಯಾನ್‌ನಿಂದ ಇಳಿಯುವವರಲ್ಲಿ ಹೆಂಗಸು ಇರಲಿಲ್ಲ. ಅರ್ಥಾತ್, ಲೀಲಾ ಬೈಪಾಡಿತ್ತಾಯರಿರಲಿಲ್ಲ.
ಆದರೆ, ಹಗಲಿಡೀ ಅನೌನ್ಸ್‌ಮೆಂಟ್ ನಡೆದಿತ್ತು. "ವಿಶೇಷ ಆಕರ್ಷಣೆ, ಒಂದೇ ಒಂದು ಆಟ, ನೋಡಲು ಮರೆಯದಿರಿ, ಮರೆತು ನಿರಾಶರಾಗದಿರಿ. ಗಾನ ಕೋಗಿಲೆ ಲೀಲಾ ಬೈಪಾಡಿತ್ತಾಯರ ಹಾಡುಗಾರಿಕೆ ಕೇಳಲು ಮರೆಯದಿರಿ" - ಎಂಬ ಅನೌನ್ಸ್‌ಮೆಂಟ್ ಮೈಕ್ ಮೂಲಕ ಹೊಸಂಗಡಿ, ವೇಣೂರು, ಮೂಡುಬಿದ್ರೆ ಪರಿಸರದ ಎಲ್ಲೆಡೆ ನಡೆದಿತ್ತು.
ಹೀಗಾಗಿ ಕತ್ತಲಾಗಿ ಆಟ ಶುರುವಾಗುವಷ್ಟರಲ್ಲಿ ಟೆಂಟ್ ಭರ್ತಿಯಾಗಿತ್ತು. ಮೇಳದ ಹೆಸರು ಮತ್ತು ಯಕ್ಷಗಾನ ರಂಗದಲ್ಲಿ ಹೊಸ ಕ್ರಾಂತಿ ಮಾಡಿದ ಮಹಿಳೆಯನ್ನು ನೋಡಲು, ಕೇಳಲು ಬಂದವರು - ಹೀಗೆ ಭರ್ಜರಿ ಕಲೆಕ್ಷನ್ ಆಗಿತ್ತು.
ಆಟ ಶುರುವಾಗಿ, ಲೀಲಾ ಬೈಪಾಡಿತ್ತಾಯರು ಮುಖ್ಯ ಸ್ತ್ರೀವೇಷ ಕುಣಿಸುವ ಪದ ಹಾಡಲು ಕುಳಿತು, ತೆರೆಯೊಳಗೆ ಚಿಕ್ಕ ಪ್ರಾಯದ ಬಾಲೆ ಚದುರೆ ನಿನ್ನಂಗವಾ... ಅಂತ ಶುರು ಮಾಡಿ, ಬಿಡ್ತಿಗೆ ಆದ ತಕ್ಷಣ ಶ್ರೀ ದೇವಿ ಸೋಮನಾಥೇಶ್ವರಿ ಯಕ್ಷಗಾನ ಮಂಡಳಿ, ಅರುವ, ಅಳದಂಗಡಿ ಎಂದು ಬರೆದಿದ್ದ ತೆರೆಯು ಮೇಲಕ್ಕೆ ಹೋದಾಗ, ಭರ್ಜರಿ ಕರತಾಡನ!
ಈ ಕರತಾಡನ ಆ ಕಂಚಿನ ಕಂಠದಿಂದ ಬಂದ ಪದಕ್ಕಾಗಿತ್ತು. ಇದು ಈಗಿನಂತೆ ಯಾವುದೇ ಭಾಗವತರೂ ಭಾಮಿನಿ ಹೇಳಿ ಮುಗಿಸಿದಾಕ್ಷಣ ಬೀಳುವ ಕಾಟಾಚಾರಾದ ಚಪ್ಪಾಳೆಗಳಂತಿರಲಿಲ್ಲ. ಸ್ತ್ರೀ ಕಂಠದಿಂದ ಬಂದ ಯಕ್ಷಗಾನದ ಹಾಡುಗಳಿಗೆ ಬಂದ ಸಾರ್ಥಕತೆಯ ಮೆಚ್ಚುಗೆಯಾಗಿತ್ತದು.
ಹೀಗೆ, ಪ್ರಸಂಗ ಚಾಲ್ತಿಯಲ್ಲಿರುವಾಗಲೇ, ಮಧ್ಯೆ ಒಂದೈದು ನಿಮಿಷ ಸಮಯಾವಕಾಶವಿದ್ದುದರಿಂದ ಭಾಗವತರು ಬಹಿರ್ದೆಸೆಗೆ ಹೋಗಿಬರುವ ಪರಿಪಾಠ. ಆದರೆ, ಆ ದಿನ ದುರದೃಷ್ಟವೆಂಬಂತೆ ಅವರು ಹೋಗಿದ್ದು ಆಟದ ಟೆಂಟಿನ ಹೊರಗೆ, ಕತ್ತಲಲ್ಲಿ ಝಡ್ ಧಡ್ ಝಡ್ ಝಡ್ ಅಂತ ಧ್ವನಿ ಮಾಡುತ್ತಿದ್ದ ಜನರೇಟರ್ ಇರುವ ಸ್ಥಳಕ್ಕೇ. ಅವರ ಕತ್ತಿನಲ್ಲಿ ಯಕ್ಷಗಾನದಿಂದಲೇ ಬಂದ ಹಣವನ್ನು ಒಟ್ಟುಗೂಡಿಸಿ, ಆಸೆ ಪಟ್ಟು ಮಾಡಿಸಿದ ಮೊದಲ ಚಿನ್ನದ ನೆಕ್ಲೇಸ್ ಇತ್ತು.
ಆಗ ಬೇಸಿಗೆ ರಜೆಯಲ್ಲಿ ಇಬ್ಬರು ಮಕ್ಕಳು ಕೂಡ ಆಟಕ್ಕೆ ಬಂದು, ಚೌಕಿಯಲ್ಲಿ ನಿದ್ರೆ ಮಾಡಿದ್ದರು. ಸಾಮಾನ್ಯವಾಗಿ, ರಾತ್ರಿ ಬಹಿರ್ದೆಸೆಗೆ ಹೋಗಬೇಕಾದಾಗ ಯಾವತ್ತೂ ಮಕ್ಕಳನ್ನು ಅಥವಾ ಪತಿಯನ್ನೇ ಕರೆದೊಯ್ಯುತ್ತಿದ್ದಳು ಅವಳು. ಸ್ತ್ರೀಯರಿಗೆ ಹೋದಲ್ಲೆಲ್ಲಾ ಇದೊಂದು ಸವಾಲು ಸಾಮಾನ್ಯವಲ್ಲವೇ? ಗಂಡಸರಾದರೆ ಗದ್ದೆಯ ಯಾವುದೋ ಮೂಲೆಯಲ್ಲಿ ಹೋಗುತ್ತಾರೆ, ಆದರೆ ಹೆಂಗಸರಿಗೆ ಹಾಗಲ್ಲವಲ್ಲ.
ಆದರೆ, ದುರದೃಷ್ಟಕ್ಕೆ, ಆ ದಿನ ಸಮಯಾವಕಾಶ ಕಡಿಮೆಯಿದ್ದುದರಿಂದ, ಮತ್ತೆ ಚೌಕಿಗೆ ಬಂದು, ಮಕ್ಕಳನ್ನೆಬ್ಬಿಸಿ ಹೋಗುವ ಬದಲು, ಬೇಗ ಬರೋಣವೆಂದುಕೊಂಡು ತಾನೇ ಹೊರಟಿರಬೇಕು ಆಕೆ. ಆದರೆ, ಲೀಲಾ ರಂಗಸ್ಥಳದಿಂದ ಇಳಿದು ಹೊರಗೆ ಹೋಗುವುದನ್ನೇ ಕಾದಿದ್ದವನೊಬ್ಬ, ಆಕೆಯನ್ನೇ ಹಿಂಬಾಲಿಸುತ್ತಾ ಬಂದು, ಹಿಂದಿನಿಂದ ಎರಡೂ ಕೈಗಳಿಂದ ಲೀಲಾಳ ಬಾಯಿ ಮುಚ್ಚಿ, ನೆಕ್ಲೇಸ್ ಸೆಳೆದುಕೊಂಡಿದ್ದ. ಸಹಾಯಕ್ಕಾಗಿ ಕೂಗಾಡಿದಾಗ, ಆತನ ಹಿಡಿತ ಜೋರಾಯಿತು. ಬಾಯಿಯನ್ನೇ ಹರಿಯುವಂತೆ ಎರಡೂ ಕೈಗಳಿಂದ ಎಳೆದುಬಿಟ್ಟು, ನೆಕ್ಲೇಸ್ ಸಿಕ್ಕಿದ್ದೇ ತಡ ಓಡಿ ಹೋದ.
ಲೀಲಾಳ ಕೂಗು ಆ ಜನರೇಟರ್ ಸೌಂಡ್ ಮಧ್ಯೆ ಯಾರಿಗೂ ಕೇಳಿಸಲೇ ಇಲ್ಲ. ಆಕೆ ಅಳುತ್ತಲೇ ಚೌಕಿಗೆ ಬಂದು, ಮಾತನ್ನೂ ಆಡಲಾಗದೆ ಕುಸಿದು ಕುಳಿತಳು. ಸುದ್ದಿ ಚೌಕಿಯಿಂದ ಹೊರಗೆ ಹರಡುತ್ತಾ, ಸಭೆಗೂ ತಿಳಿಯಿತು. ಕಳ್ಳನೊಬ್ಬ ಭಾಗವತರ ಸರ ಸೆಳೆದುಕೊಂಡು, ಬಾಯಿ ಹರಿದು ಹಾಕಿದನಂತೆ ಎಂಬ ಸುದ್ದಿ. ತಕ್ಷಣ ಆಟ ನಿಂತಿತು.
ಊರಿನ ಜನರೆಲ್ಲಾ ಚೌಕಿಯಲ್ಲಿ ಜಮಾಯಿಸಿದರು. ಸ್ಥಳೀಯ ಯುವಕರೆಲ್ಲ ಸೇರಿ ಕಳ್ಳನನ್ನು ಹೇಗಾದರೂ ಪತ್ತೆ ಮಾಡಬೇಕೆಂದು ಆಕ್ರೋಶದಿಂದ ಕುದಿಯುತ್ತಿದ್ದರು. ಅವರಲ್ಲೊಬ್ಬರಿಗೆ ಹೊಳೆಯಿತು, ಇದು ಅವನೇ ಅಂತ. ಅವನ ಹೆಸರು ಮಹಮ್ಮದ್, ಸಣ್ಣಪುಟ್ಟ ಕಳ್ಳತನಗಳಿಂದಲೇ ಆ ಊರಿನ ನಿದ್ದೆ ಕೆಡಿಸಿದ್ದ. ಜನರೆಲ್ಲಾ ಅವನ ಮನೆಗೆ ಹೋದರು, ಅವನನ್ನು ಮನೆಯಿಂದ ಹೊರಗೆ ಬರುವಂತೆ ಕೂಗಿದರು. ಆತ ನಿದ್ದೆಯಿದ್ದೆದ್ದವನಂತೆ ಕಣ್ಣುಜ್ಜುತ್ತಾ ಬಂದಾಗ, ಊರವರು ವಿಚಾರಿಸಲಾರಂಭಿಸಿದರು. ಆತ ತಡವರಿಸಿದಾಗ ಜನರಿಗೆ ಸಂಶಯ ದೃಢವಾಯಿತು.
ಕೊನೆಗೆ ಚಿನ್ನದ ಸರ ಎಲ್ಲಿ ಅಂತ ಕೇಳಿದರು. ಬಾಯಿ ಬಿಡದಿದ್ದಾಗ ಕೆಲವರು ಆತನಿಗೆ ಚೆನ್ನಾಗಿ ತದುಕಿದರು. ನೋವು ತಡೆಯಲಾರದೆ ಆತ ಕೊನೆಗೂ ಬಾಯಿ ಬಿಟ್ಟ. ಮುಳಿ ಹುಲ್ಲಿನ ಮಾಡಿನ ಅಡಿಯಲ್ಲಿ ಅಡಗಿಸಿಟ್ಟು ಬಂದು ಅವನು ಮಲಗಿಬಿಟ್ಟಿದ್ದ! ನಂತರ ಊರವರು ಪೊಲೀಸರನ್ನು ಕರೆದು ಕಳ್ಳನನ್ನು ಅವರ ಕೈಗೆ ಒಪ್ಪಿಸಿದರು.
ಹೀಗೆ, ಕಾನೂನು ಪ್ರಕಾರವಾಗಿ ಸರವನ್ನೂ ಪೊಲೀಸರಿಗೆ ಒಪ್ಪಿಸಲಾಯಿತು. ಈ ಚಿನ್ನದ ನೆಕ್ಲೇಸ್ ಅನ್ನು ಮರಳಿ ಪಡೆಯಲು ಮೂರ್ನಾಲ್ಕು ವರ್ಷಗಳ ಕಾಲ ಕೋರ್ಟ್‌ಗೆ ಅಲೆಯಬೇಕಾಯಿತು.
ಆದರೆ, ಆ ಊರಿನ ಯಕ್ಷಗಾನ ಪ್ರಿಯರು ಅನೇಕರು, ಛೇ, ನಮ್ಮ ಊರಿಗೆ ಬಂದ ಅಮ್ಮನಿಗೆ ಹೀಗಾಯಿತಲ್ಲಾ ಅಂತ ಕಣ್ಣೀರಿಟ್ಟಿದ್ದರು. ಇನ್ನು ನಮಗೆ ಆಟವೇ ಬೇಡ. ಕಳ್ಳನಿಗೊಂದು ಶಾಸ್ತಿ ಮಾಡಲೇಬೇಕು ಅಂತ ತೀರ್ಮಾನಿಸಿ ಅವರು ಈ ಉಪಕಾರ ಮಾಡಿದ್ದರು. ಅವರು ಯಕ್ಷಗಾನದಿಂದಾಗಿ ತೋರಿಸಿದ ಪ್ರೀತಿ, ಕಾಳಜಿ ಬಗ್ಗೆ ಈಗಲೂ ಮನಸ್ಸು ತುಂಬಿ ಬರುತ್ತಿದೆ. ವಿಧ ವಿಧವಾಗಿ ಸಾಂತ್ವನ ಹೇಳಿದರು. ಕೊನೆಗೆ ಕಾರು ಮಾಡಿ, ನಮ್ಮನ್ನು ಊರಿಗೆ ಕಳುಹಿಸಿಕೊಟ್ಟರು.
ಲೀಲಾಳ ಬಾಯಿಗೆ ಸ್ಟಿಚ್ ಹಾಕಬೇಕಾಯಿತು. ಮಾನಸಿಕವಾಗಿಯೂ ಸ್ಥೈರ್ಯ ಕುಸಿದಿತ್ತು. ತಿಂಗಳ ಕಾಲ ಅವಳಿಗೆ ಹಾಡಲಾಗಿರಲಿಲ್ಲ. ಆದರೆ ಎಲ್ಲ ಕಲಾವಿದರು ಧೈರ್ಯ ತುಂಬಿದರು ಹಾಗೂ ವೈದ್ಯೋಪಚಾರದಿಂದ ಕೊನೆಗೆ ಆಕೆ ಗುಣಮುಖಳಾಗಿ, ಮರಳಿ ತಿರುಗಾಟಕ್ಕೆ ಹೊರಟುಬಿಟ್ಟಳು.
ಯಕ್ಷಗಾನ ಮೇಳಗಳಿಗೆ ಹೋಗುವ ಸ್ತ್ರೀಯರಿಗೆ ಬೇರೆಷ್ಟೋ ಅಡೆತಡೆಗಳ ನಡುವೆ ಇಂಥ ತೊಂದರೆಗಳೂ ಇರುತ್ತಿದ್ದವು. ಇದು ಕೂಡ ಒಂದು ಪಾಠ. (ಯಕ್ಷಗಾನ.ಇನ್).
Yakshagana.in ಸೇರಿಕೊಳ್ಳಿ: ವಾಟ್ಸ್ಆ್ಯಪ್ | ಟೆಲಿಗ್ರಾಂ | ಫೇಸ್ಬುಕ್ | ಟ್ವಿಟರ್ | ಯೂಟ್ಯೂಬ್ | ಇನ್ಸ್ಟಾಗ್ರಾಂ
Tags:
ಯಕ್ಷ ಮೆಲುಕು