ಮಹಿಷಾಸುರ ಮುಗಿಸಿ ರಕ್ತಬೀಜ ಮಾಡುತ್ತಿದ್ದ ಅದ್ವಿತೀಯ ಕಲಾವಿದ ಸಂಪಾಜೆ ಶೀನಪ್ಪ ರೈ

ಯಕ್ಷಗಾನ ಕಲಾವಿದ ಸಂಪಾಜೆ ಶೀನಪ್ಪ ರೈಗಳಿಗೆ ಸನ್ಮಾನ
ಸಂಪಾಜೆ ಶೀನಪ್ಪ ರೈಗಳಿಗೆ ಪಡ್ರೆ ಚಂದು ಸ್ಮಾರಕ ಯಕ್ಷಗಾನ ನಾಟ್ಯ ತರಬೇತಿ ಕೇಂದ್ರದ  ವಾರ್ಷಿಕೋತ್ಸವದಲ್ಲಿ ಅಡ್ಕಸ್ಥಳ ಪ್ರಶಸ್ತಿ
ಯಕ್ಷಗಾನ ಕಲಾವಿದ ದಿ. ಸಂಪಾಜೆ ಶೀನಪ್ಪ ರೈಗಳ ಜೊತೆಗಿನ ಆತ್ಮೀಯ ಒಡನಾಟವನ್ನು, ಅವರ ವಿನೀತ ಗುಣಗಳನ್ನು ನೆನಪಿಸಿಕೊಂಡಿದ್ದಾರೆ ಹಿರಿಯ ಕಲಾವಿದ, ಯಕ್ಷ ಗುರು ಸಬ್ಬಣಕೋಡಿ ರಾಮ ಭಟ್.
ಸಂಪಾಜೆ ಶೀನಪ್ಪ ರೈಯವರು ನಿಧನರಾದರು ಎಂಬ ವರ್ತಮಾನ ಕೇಳಿ ನನಗೆ ಬಹಳ ದುಃಖವಾಯಿತು.  ತೆಂಕುತಿಟ್ಟಿನ ಕದ್ರಿ ವಿಷ್ಣು ಅವರ ಶೈಲಿಯ ವೇಷ ಪರಂಪರೆಯ ಕೊಂಡಿಯೊಂದು ಕಳಚಿತು. ಶೀನಪ್ಪ ರೈಯವರು ನನ್ನ ತಂದೆ ಸಬ್ಬಣಕೋಡಿ ನರಸಿಂಹ ಭಟ್ ಅವರ ಅಭಿಮಾನಕ್ಕೆ ಪಾತ್ರರಾದವರು ಮತ್ತು ಸ್ನೇಹಿತರು ಕೂಡ. ಶೀನಪ್ಪರೈಗಳ ವೇಷ ಎಂದರೆ ಕದ್ರಿ ವಿಷ್ಣು ಅವರ ಛಾಪು ಎನ್ನುತ್ತಿದ್ದರು ನನ್ನ ತಂದೆಯವರು.

ಕುಂಡಾವು ಮೇಳದ ಯಕ್ಷಗಾನ ಕಬಕದಲ್ಲಿ ಮಾಡಿಸುತ್ತಿದ್ದ ಕಾಲದಲ್ಲಿ ಶೀನಪ್ಪ ರೈಗಳು ಕುಂಡಾವು ಮೇಳದಲ್ಲಿ ಇದ್ದರು. ಶೀನಪ್ಪ ರೈಯವರ ತಂದೆ ಉತ್ತಮ ಕಲಾವಿದರಾಗಿದ್ದರು. ಆದ್ದರಿಂದ ರಕ್ತಗತವಾಗಿ ಶೀನಪ್ಪ ರೈಯವರಲ್ಲಿ ಯಕ್ಷಗಾನದ ಕಲೆ ಅಂಟಿ ಕೊಂಡಿತ್ತು.1975ರಲ್ಲಿ ನಾನು ಧರ್ಮಸ್ಥಳ ಯಕ್ಷಗಾನ ಕೇಂದ್ರದಲ್ಲಿ  ಗುರು ಪಡ್ರೆ ಚಂದುರವರ ಶಿಷ್ಯತ್ವದಲ್ಲಿ ಕಲಿಯುತ್ತಿದ್ದಾಗ  ಶೀನಪ್ಪ ರೈಯವರು  ದೇವೇಂದ್ರ ಸಭಾಕ್ಲಾಸ್ ಅನ್ನು ಕಲಿಯುವುದಕ್ಕಾಗಿ   ಧರ್ಮಸ್ಥಳ ಕೇಂದ್ರಕ್ಕೆ ಬಂದಿದ್ದರು.

ಶೀನಪ್ಪ ರೈಯವರು  ಕಾವು ಕಣ್ಣರ ಶಿಷ್ಯ. ಆದರೆ ಅವರಿಗೆ ಸಭಾಕ್ಲಾಸು, ತೆರೆ ಪರಪ್ಪಾಟು ಮೊದಲಾದ ಪಾಠಗಳಾಗಿರಲಿಲ್ಲ. ಕಾರಣ ಏನು ತಿಳಿದಿಲ್ಲ. ಕಟೀಲು ಮೇಳಕ್ಕೆ ಅವರು ಪೀಠಿಕೆ ವೇಷಧಾರಿಯಾಗಿ ಸೇರ್ಪಡೆಗೊಂಡಿದ್ದರು. ಹಾಗಾದ್ದರಿಂದ ಮೇಳದ ಯಜಮಾನರಾದ ಶ್ರೀಯುತ ಕಲ್ಲಾಡಿ ವಿಠಲ ಶೆಟ್ಟರ ಮಾತಿನಂತೆ, ಪರಂಪರೆ ಒಡ್ಡೋಲಗವನ್ನು ಕಲಿಯುವುದಕ್ಕಾಗಿ ಧರ್ಮಸ್ಥಳ ಕೇಂದ್ರಕ್ಕೆ ಬಂದಿದ್ದರು. ಆಗ ಅವರ ಪರಿಚಯವಾಯಿತು.

ನನ್ನ ತಂದೆಯವರ ಹೆಸರನ್ನು ಹೇಳಿದೊಡನೆ ಅವರು ಬಹಳ ಖುಷಿ ಪಟ್ಟು ನಿಮ್ಮ ಸಬ್ಬಣಕೋಡಿ ಮನೆಗೆ ಬಂದು ವರುಷಕ್ಕೊಮ್ಮೆ ಊಟ ಮಾಡುತ್ತಾ ಇದ್ದೆ ಅಂದರು. ಅವರಿಗೆ ತಾನೊಬ್ಬ ಮೇರು ಕಲಾವಿದನೆಂಬ ಅಹಂ ಇಲ್ಲ. ನಾನು ಬಾಲಕನಾಗಿದ್ದರೂ 'ನೀವು' ಎಂಬ ಬಹುವಚನದಿಂದ ಮಾತನಾಡಿಸುತ್ತಿದ್ದರು. ಯಕ್ಷಗಾನ ಕೇಂದ್ರದಲ್ಲಿ ವಿದ್ಯಾರ್ಥಿಗಳೊಂದಿಗೆ ಸಹ ಭಾವದಿಂದ ವರ್ತಿಸುತ್ತಿದ್ದರು. ಪಡ್ರೆ ಗುರುಗಳ ಕಾಲಿಗೆ ನಾವು ನಮಸ್ಕರಿಸುತ್ತಿದ್ದಾಗ ಅವರು ಗುರುಗಳ ಪಾದಕ್ಕೆ ನಮಸ್ಕರಿಸುತ್ತಿದ್ದರು. ಗುರುಗಳು "ಶೀನಪ್ಪರೆ  ಈರ್ ಪಾದಗ್ ಅಡ್ಡ ಬೂರೊಡ್ಚಿ" ಎಂದಾಗ ಆಗ ನಿಗರ್ವಿ ರೈಗಳು "ಈರ್ ಎನ್ನ ಗುರು ಅತ್ತೇ?" ಕೇಳಿದ್ದರು.

ಇಂತಹಾ ಸುಸಂಸ್ಕೃತ  ವ್ಯಕ್ತಿ ರೈಗಳು. ನನ್ನ ತಂದೆಯವರು ಆಗಾಗ ಯಕ್ಷಗಾನ ಕೇಂದ್ರಕ್ಕೆ ಭೇಟಿ ಕೊಡುತ್ತಿದ್ದರು. ಆಗ ಶೀನಪ್ಪರೈಗಳನ್ನು ನೋಡಿ "ನೀವೇನು ಇಲ್ಲಿ?", ಆಗ ರೈಗಳು 'ನಾನು ಪಡ್ರೆ ಚಂದುವಣ್ಣನಲ್ಲಿ ನಾಟ್ಯವನ್ನು ತಿದ್ದಿಸಿ ಪರಂಪರೆಯ ಒಡ್ಡೋಲಗವನ್ನು ಕಲಿಯೋಣ ಅಂತ ಬಂದೆ" ಎಂದಿದ್ದರು. ನಗುತ್ತಾ ತಂದೆಯವರು "ನೀವು ಒಳ್ಳೆ ಕಲಾವಿದರು, ಇನ್ನೇನು ಕಲಿಯುವುದು?" ಎಂದು ಕೇಳಿದಾಗ "ನರಸಿಂಹ ಭಟ್ರೇ, ಕಲೆ ಎಂದರೆ ಸಮುದ್ರದಂತೆ. ನೀರು ತೆಗೆದಷ್ಟು ಬತ್ತದು. ನನ್ನ ಗುರುಗಳು ಕಾವು ಕಣ್ಣರಾದರೂ ತೆರೆ ಪರಪ್ಪಾಟು ಮೊದಲಾದ ತರಬೇತಿ ಸಿಕ್ಕಿಲ್ಲ. ಹಾಗೆ ಯಜಮಾನರಾದ ಶ್ರೀ ವಿಠಲ ಶೆಟ್ಟರ ಹೇಳಿಕೆಯಂತೆ ಇಲ್ಲಿಗೆ ಬಂದಿದ್ದೇನೆ" ಅಂದರು.

ಎರಡು ತಿಂಗಳ ಪರ್ಯಂತ ರೈಗಳು ಧರ್ಮಸ್ಥಳ ಯಕ್ಷಗಾನ ಕೇಂದ್ರದಲ್ಲಿ  ಪರಂಪರೆಯ ಎಲ್ಲಾ ಪ್ರಕಾರಗಳನ್ನು ಕಲಿತರು. ಆಮೇಲೆ ನಾನು ಕರ್ನಾಟಕ ಮೇಳಕ್ಕೆ  ಸೇರ್ಪಡೆಗೊಂಡೆ. ಮಳೆಗಾಲದಲ್ಲಿ ಬೊಂಬಾಯಿ ತಿರುಗಾಟಕ್ಕೆ  ಕಟೀಲು ಮೇಳದ ಕಲಾವಿದರು ಬರುತ್ತಿದ್ದರು. ಅವರಲ್ಲೊಬ್ಬ ಕಲಾವಿದ ಶೀನಪ್ಪರೈಗಳು. ಹಾಗೆ ಅವರ ಒಡನಾಟದ ಭಾಗ್ಯ ಸಿಕ್ಕಿತ್ತು. ಅವರ ವೇಷದ ಬಗ್ಗೆ ಶ್ರೀ ವಿದ್ವಾನ್ ದಾಮೋದರ ಮಂಡೆಚ್ಚರು, ರಾಜ್ಯಪ್ರಶಸ್ತಿ ವಿಜೇತ ಅಳಿಕೆ ರಾಮಯ್ಯ ರೈಗಳು, ಖಳನಾಯಕ ವೇಷಧಾರಿ ಎಂದು ಬಿಂಬಿತರಾದ ಬೋಳಾರ ನಾರಾಯಣ ಶೆಟ್ಟಿಯವರು ಮೊದಲಾದ ಹಿರಿ ಕಲಾವಿದರೂ ಮೆಚ್ಚುಗೆ ವ್ಯಕ್ತ ಪಡಿಸುತ್ತಿದ್ದರು.

ರೈಗಳ  ವೇಷ ರಂಗಕ್ಕೆ ಹೋದಾಗ ಅವರ ವ್ಯಕ್ತಿತ್ವದ ಕುರಿತು, ಹಾಗೆಯೇ ವೇಷದ ಬಗ್ಗೆ ಎಲ್ಲಾ ಕಲಾವಿದರು ತುಂಬಾ ಹೊಗಳುತ್ತಿದ್ದರು. ಅಂದರೆ ಅವರು ರಂಗಕ್ಕೆ ಹೋದಾಗ ಮುಂದಿನಿಂದ ಪ್ರೇಕ್ಷಕರೂ, ಹಿಂದಿನಿಂದ ಚೌಕಿಯಲ್ಲಿ ಕಲಾವಿದರು ಕೂಡ ವೇಷದ ವೈಖರಿಗೆ ಶ್ಲಾಘನೆ ವ್ಯಕ್ತಪಡಿಸುತ್ತಿದ್ದರು. ನಾನು ಕರ್ನಾಟಕ ಮೇಳದಿಂದ ಕಟೀಲು ಮೇಳಕ್ಕೆ ಬಂದಾಗ ಅವರು ಎರಡನೇ ಮೇಳದಲ್ಲಿ ಬಲಿಪರ ಹಾಡುಗಾರಿಕೆಯ ಮೂಲಕ ರಂಗದಲ್ಲಿ ಮೆರೆಯುತ್ತಿದ್ದರು. ಅವರ ರಕ್ತಬೀಜ, ಇಂದ್ರಜಿತು, ಹಿರಣ್ಯಾಕ್ಷ, ಕಾರ್ತವೀರ್ಯ, ಅರ್ಜುನ, ದೇವೇಂದ್ರ ಮೊದಲಾದ ವೇಷಗಳಿಗೆ ಅದ್ಭುತ ಪ್ರಚಾರ ಇತ್ತು. ಅವರ ವೇಷವನ್ನು ನೋಡಲೆಂದೇ ಪ್ರೇಕ್ಷಕ ವರ್ಗ ಸೇರುತ್ತಿದ್ದರು.


ಕಟೀಲು ಕ್ಷೇತ್ರದಲ್ಲಿ ಮೂರು ಮೇಳ ಆದಾಗ  ಶೀನಪ್ಪರೈಗಳು ಒಂದನೇ ಮೇಳಕ್ಕೆ ವರ್ಗಾವಣೆಗೊಂಡರು. ಶ್ರೀ ಇರಾ ಗೋಪಾಲಕೃಷ್ಣ ಭಾಗವತರ ಹಾಡುಗಾರಿಕೆಯಲ್ಲಿ ಅವರ ವೇಷ ರಂಗೇರುತ್ತಿತ್ತು. ತ್ರಿವಿಕ್ರಮ ಶೆಣೈಯವರು ಆಗ ಮಹಿಷಾಸುರ ಪಾತ್ರ ಮಾಡುತ್ತಿದ್ದರು. ಕಾರಣಾಂತರದಿಂದ ಅರ್ಧ ಪಥದಲ್ಲೇ ಮೇಳ ಬಿಡಬೇಕಾದ ಪರಿಸ್ಥಿತಿ ಬಂತು. ಮೇಳವನ್ನು ಬಿಟ್ಟೇ ಹೋದರು. ಆಗ ನಾನು ಯಜಮಾನರಾದ ವಿಠಲ ಶೆಟ್ಟರ ವಿಶ್ವಾಸಕ್ಕೆ ಪಾತ್ರನಾಗಿದ್ದೆ.

ಬಜಪೆಯಲ್ಲಿ ದೇವಿ ಮಹಾತ್ಮೆ ಪ್ರಸಂಗ, ಮಹಿಷಾಸುರ ಪಾತ್ರಧಾರಿ ಶೆಣೈ ತಂಡದಲ್ಲಿಲ್ಲ. ಆಗ ನನ್ನ ಗುರುಗಳು ಮೇಳದ ಪ್ರಬಂಧಕರೂ ಆಗಿದ್ದರು. ನಾನು ಚೌಕಿಯ ಹೊರಗಡೆ ಇದ್ದೆ. ಯಜಮಾನರು ನನ್ನನ್ನು ನೋಡಿ "ರಾಮಭಟ್ರೇ' ನಿಮ್ಮ ಗುರುಗಳನ್ನು, ಇರಾ ಭಾಗವತರನ್ನು ಕರೆಯಿರಿ" ಎಂದರು. ಇಬ್ಬರೂ ಬಂದರು. ಭಾಗವತರು ಯಜಮಾನರನ್ನು ನೋಡುತ್ತಾ, "ಮಹಿಷಾಸುರ ಪಾತ್ರಕ್ಕೆ ಏನು ಮಾಡೋಣ?"  ಕೇಳಿದಾಗ ಯಜಮಾನರು, "ಅದಕ್ಕೇನಂತೆ? ನಮ್ಮ ಶೀನಪ್ಪ ರೈ ಇದ್ದಾನಲ್ಲ? ಸಮರ್ಥ. ಮಹಿಷಾಸುರ ಮಾಡಿ ರಕ್ತಬೀಜ ಮಾಡಲಿ".

ಇದನ್ನೆಲ್ಲ ಕೇಳುತ್ತಾ ನಾನು ಅಲ್ಲೇ ಇದ್ದೆ. "ಶೀನಪ್ಪರೈ  ಬರಲು ಹೇಳಿ ಭಟ್ರೇ". ಶೀನಪ್ಪ ರೈಗಳು ಬಂದು ವಿನೀತನಾಗಿ ಯಜಮಾನರಿಗೆ ನಮಸ್ಕಾರ ಮಾಡುತ್ತಾ "ಏನು ಧಣಿಗಳೇ ?" ಕೇಳಿದರು. "ಈ ವರುಷದ ತಿರುಗಾಟ ಮುಕ್ತಾಯ ಆಗುವಲ್ಲಿಯವರೆಗೆ ದೇವಿ ಮಹಾತ್ಮೆಯಲ್ಲಿ ನಿನ್ನದೇ ಮಹಿಷಾಸುರ, ಬೇರೆ ಜನ ಬೇಡ" ಎಂದಾಗ, ಶೀನಪ್ಪ ರೈಗಳು ತಲೆ ಅಲ್ಲಾಡಿಸುತ್ತಾ 'ಸರಿ' ಅಂದರು. ಆ ವರುಷದಲ್ಲಿ ಅವರ ಮಹಿಷಾಸುರ, ರಕ್ತಬೀಜ - ಜನಮೆಚ್ಚುಗೆ ಪಡೆಯಿತು.

ಅವರೊಡನೆ ತಿರುಗಾಟದಲ್ಲಿ ಅವರ ಇಂದ್ರಜಿತು- ನನ್ನ ಲಕ್ಷ್ಮಣ, ಅವರ ಅರ್ಜುನ- ನನ್ನ ಕೃಷ್ಣ ಮೊದಲಾದ ವೇಷಗಳು ನನಗೂ ಹೆಸರು ತಂದುಕೊಟ್ಟಿದ್ದವು. ಅದೇ ವರುಷ  ಮಳೆಗಾಲದಲ್ಲಿ ಅವರು ಮನೆಯಲ್ಲಿ ಕೆಲಸದಲ್ಲಿ ತೊಡಗಿದ್ದಾಗ ಕಬ್ಬಿಣದ 'ಆಪು' ನಾಸಿಕಕ್ಕೆ ಬಡಿದು ಪುತ್ತೂರಿನ ಬೋನಂತಾಯ ಆಸ್ಪತ್ರೆಗೆ ದಾಖಲಾದರು. ಯಜಮಾನರ ಮನೆಯಲ್ಲಿ ನಾನು ಹಾಗೂ ಪ್ರಸಿದ್ಧ ಕಲಾವಿದ ಬಾಯಾರು ರಘುನಾಥ ಶೆಟ್ಟರು ವೇಷ ಭೂಷಣದ  ಕೆಲಸದಲ್ಲಿ ಇದ್ದೆವು. ನಮ್ಮಲ್ಲಿ ವಿಚಾರವನ್ನು ಹೇಳಿ ಪುತ್ತೂರಿಗೆ ತೆರಳಿದರು. ಅವರ ಕ್ಷೇಮವನ್ನು ವಿಚಾರಿಸಿ ಅದಕ್ಕೆ ಬೇಕಾದ ವ್ಯವಸ್ಥೆಯನ್ನು ಮಾಡಿದರು.

ಶೀನಪ್ಪರೈಗಳು ನನ್ನ ತಂದೆಯವರ ಸ್ನೇಹಿತರು. ಆದ್ದರಿಂದ ನಾವು ಅವರ ಆರೋಗ್ಯ ಕ್ಷೇಮವನ್ನು ನೋಡುವುದಕ್ಕೆ  ಪುತ್ತೂರಿಗೆ ಹೋದೆವು. ಶೀನಪ್ಪರೈಗಳಿಗೆ ನಾವು ಬಂದದ್ದನ್ನು ನೋಡಿ ಭಾರೀ ಸಂತೋಷ ಆಯಿತು. ನೋಡಿದಾಗ ನನಗೆ ದಿಗ್ಭ್ರಮೆ. ಮೂಗಿಗೆ ಸಂಪೂರ್ಣ ಬ್ಯಾಂಡೇಜ್ ಮಾಡಲಾಗಿತ್ತು. ನನ್ನ ತಂದೆ ಹಲವಾರು ವಿಚಾರವನ್ನು ಮಾತನಾಡಿ, ಕಟೀಲಮ್ಮನ  ಅನುಗ್ರಹದಿಂದ ಆದಷ್ಟು ಬೇಗನೆ ಗುಣವಾಗಲಿ ಎಂದು ಹಾರೈಸಿದರು. 

ಆ ವರುಷದ ತಿರುಗಾಟಕ್ಕೆ ರೈಗಳು ಸಿದ್ಧರಾದರು. ತಿರುಗಾಟದಲ್ಲಿ ದಣಿವರಿಯದೇ ವೇಷವನ್ನು ಮಾಡಿದರು. ಶೀನಪ್ಪರೈಗಳು ತೆಂಕುತಿಟ್ಟಿನ ಅಗ್ರಮಾನ್ಯ ಕಲಾವಿದ ಮತ್ತು ರಾಜ್ಯ ಪ್ರಶಸ್ತಿ ಪುರಸ್ಕೃತ. ರಂಗದಲ್ಲಿ ದಣಿವರಿಯದ ಕಲಾವಿದರಾಗಿ ಪ್ರಸಿದ್ದಿಯನ್ನು ಪಡೆದರು. ಎಲ್ಲರ ಪ್ರೀತಿಗೆ ಪಾತ್ರರಾಗಿ ತಮ್ಮ ಹೆಸರನ್ನು ಅಜರಾಮರವಾಗಿಸಿದರು. ಅವರ ವಿದ್ವತ್ತನ್ನು ಮೆಚ್ಚಿ ಪಡ್ರೆ ಚಂದು ಸ್ಮಾರಕ ಯಕ್ಷಗಾನ ನಾಟ್ಯ ತರಬೇತಿ ಕೇಂದ್ರದ (22.2.2013) ಎಂಟನೇ  ವಾರ್ಷಿಕೋತ್ಸವದಲ್ಲಿ ಅವರಿಗೆ ಅಡ್ಕಸ್ಥಳ ಪ್ರಶಸ್ತಿಯನ್ನು ನೀಡಿ ಅಭಿನಂದಿಸಿದೆವು. ಆದಿನ ಅವರು ಪ್ರಶಸ್ತಿ, ಅಭಿನಂದನೆಗೆ ವಂದಿಸುತ್ತಾ "ಸಬ್ಬಣಕೋಡಿಯರು ಕಟೀಲು ಮೇಳದಲ್ಲಿ ನನ್ನ ಒಡನಾಡಿ ಕಲಾವಿದ. ಅವರ ಸಾಧನೆಗೆ ಮೆಚ್ಚಿದ್ದೇನೆ. ಕಲಾ ದೇವಿ ಅವರಿಗೆ ಆಯುರಾರೋಗ್ಯ ಭಾಗ್ಯವನ್ನು ಅನುಗ್ರಹಿಸಲಿ" ಎಂದು ಹಾರೈಸಿದ್ದರು.

ಶೀನಪ್ಪರೈಗಳು ತೆಂಕುತಿಟ್ಟಿನ ಮಹಾನ್ ಕಲಾವಿದರು. ಅವರ ಒಡನಾಟ, ಅವರ ಆತ್ಮೀಯ ಮಾತುಗಳನ್ನು ಮರೆಯಲು ಅಸಾಧ್ಯ. ಯಕ್ಷಗಾನ ಕಲಾ ಕ್ಷೇತ್ರದಲ್ಲಿ ಅವರ ಹೆಸರು ಅಜರಾಮರ. ಅವರ ಆತ್ಮಕ್ಕೆ ನನ್ನ ನೂರು ನಮನಗಳು.

✍🏾 ಸಬ್ಬಣಕೋಡಿ ರಾಮಭಟ್, ನಿರ್ದೇಶಕರು, ಪಡ್ರೆ ಚಂದು ಸ್ಮಾರಕ ಯಕ್ಷಗಾನ ನಾಟ್ಯ ತರಬೇತಿ ಕೇಂದ್ರ ರಿ., ಪೆರ್ಲ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

ನವೀನ ಹಳೆಯದು