ಎಡನೀರು: ಪರಂಪರೆಯ ಕೃಷ್ಣನ ಒಡ್ಡೋಲಗದೊಂದಿಗೆ ಮಕ್ಕಳ ಯಕ್ಷಗಾನ

ಪಡ್ರೆ ಚಂದು ಯಕ್ಷಗಾನ ಕಲಿಕೆಯ ಮಕ್ಕಳ ತಂಡದಿಂದ ಯಕ್ಷಗಾನ ಪ್ರದರ್ಶನ
31 ಆಗಸ್ಟ್ 2021ರಂದು ಎಡನೀರಿನಲ್ಲಿ ಶ್ರೀ ಶ್ರೀ ಸಚ್ಚಿದಾನಂದ ಸ್ವಾಮೀಜಿಯವರ ಅನುಗ್ರಹದಿಂದ, ಪರಂಪರೆಯ ನಾಟ್ಯಗುರು ಎಂದೇ ಪ್ರಸಿದ್ಧರಾದ ದ.ಕ‌. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ನಾಟ್ಯಗುರು  ಶ್ರೀ ಸಬ್ಬಣಕೋಡಿ ರಾಮ ಭಟ್ಟರ ನಿರ್ದೇಶನದಲ್ಲಿ  ಪೇಜಾವರ ಶ್ರೀ ವಿಶ್ವೇಶತೀರ್ಥ ಪ್ರಶಸ್ತಿ ಪುರಸ್ಕೃತ ಸಂಸ್ಥೆಯಾದ ಪಡ್ರೆ ಚಂದು ಸ್ಮಾರಕ ಯಕ್ಷಗಾನ ನಾಟ್ಯತರಬೇತಿ ಕೇಂದ್ರ (ರಿ) ಪೆರ್ಲದ ವಿದ್ಯಾರ್ಥಿಗಳಿಂದ ಪ್ರದರ್ಶಿಸಲ್ಪಟ್ಟ ಯಕ್ಷಗಾನ "ಶಕ್ತಿಪರೀಕ್ಷೆ" ಯು ಪ್ರೇಕ್ಷಕರ ಮನಸ್ಸನ್ನು ಗೆಲ್ಲುವಲ್ಲಿ ಯಶಸ್ವಿಯಾಯಿತು.

ಕೃಷ್ಣ ಹಾಗೂ ಅಷ್ಟಮಾಂಗನೆಯರ ಜತೆಗಿನ ಪರಂಪರೆಯ ಒಡ್ಡೋಲಗದ ನಾಟ್ಯವನ್ನು ಪುಟ್ಟ ಮಕ್ಕಳು ಕುಣಿದದ್ದು ನೋಡುವುದೇ ಕಣ್ಣಿಗೆ ಹಬ್ಬವಾಗಿತ್ತು. ಪ್ರಾರಂಭದಲ್ಲೇ ಗುರುಗಳು ಬ್ರಹ್ಮೈಕ್ಯರಾದ ಶ್ರೀ ಶ್ರೀ ಕೇಶವಾನಂದ ಸ್ವಾಮೀಜಿಯವರನ್ನು ಭಕ್ತಿಪೂರ್ವಕ ಸ್ಮರಿಸಿ,  ಸ್ವಾಮೀಜಿಯವರಿಗೂ ಕೇಂದ್ರಕ್ಕೂ ಗುರುಗಳಿಗೂ ಇದ್ದ ಅವಿನಾಭಾವ ಸಂಬಂಧ, ಆ ಒಡನಾಟದ ಅನುಭವಗಳನ್ನು ಹಂಚಿಕೊಂಡರು.
ಪ್ರತ್ಯಕ್ಷವಾಗಿ ಯಕ್ಷಗಾನವನ್ನು ನೋಡುವ ಭಾಗ್ಯ ಲಭಿಸಿದ ನಾವೇ ಧನ್ಯರು. ಜನರು ಮೆಚ್ಚಿಕೊಂಡಿದ್ದಾರೆ ಎನ್ನುವುದಕ್ಕೆ ಆ ಸಭಾಂಗಣದಲ್ಲಿ ಸೇರಿದ್ದ ಜನರೇ ಸಾಕ್ಷಿ. ಅಂತರ್ಜಾಲದ ಮೂಲಕ ಹರಿದುಬರುತ್ತಿದ್ದ ಪ್ರತಿಕ್ರಿಯೆಗಳ ಮಹಾಪೂರವೇ ನಿದರ್ಶನ. 

ಪರಂಪರೆಯ ಹಿಮ್ಮೇಳ ಗುರು ಹಾಗೂ ಭಾಗವತರಾಗಿದ್ದ ದಿ. ತೆಂಕಬೈಲು ತಿರುಮಲೇಶ್ವರ ಶಾಸ್ತ್ರಿಯವರ ಸುಪುತ್ರ ಮುರಳೀಕೃಷ್ಣ ಶಾಸ್ತ್ರಿಯವರ ಸುಶ್ರಾವ್ಯವಾದ ಹಾಡುಗಾರಿಕೆ  ಕಾರ್ಯಕ್ರಮಕ್ಕೆ ಮತ್ತಷ್ಟು ಮೆರುಗು ನೀಡಿತು. "ಯಕ್ಷರತ್ನ" ಬಿರುದಾಂಕಿತ  ಶ್ರೀ ರಾಘವ ಬಲ್ಲಾಳ್ ಕಾರಡ್ಕ ಹಾಗೂ ಅಂಬೆಮೂಲೆ ಶಿವಶಂಕರ ಭಟ್, ವರ್ಷಿತ್ ಕಿಜೆಕ್ಕಾರು ಇವರ ಚೆಂಡೆ ಮದ್ದಳೆಗಳ ಪರಂಪರೆಯ  ಹಿಮ್ಮೇಳ ಕಾರ್ಯಕ್ರಮವನ್ನು  ಚಂದಗಾಣಿಸಿಕೊಟ್ಟಿತು.

ತೆಂಕಬೈಲು ತಿರುಮಲೇಶ್ವರ ಶಾಸ್ತ್ರಿಗಳ ಶಿಷ್ಯರಾದ ಅನ್ವಯಕೃಷ್ಣ ಪಳ್ಳತ್ತಡ್ಕ ಇವರ ಸಭಾಲಕ್ಷಣದ  ಹಾಡುಗಾರಿಕೆಗೆ ಬಾಲಪ್ರತಿಭೆಗಳಾದ ಆದಿತ್ಯ ಬರೆಕೆರೆಯ ಚೆಂಡೆವಾದನ ಅದೇ ರೀತಿ ಶ್ರೀಶನಾರಾಯಣ ಕೋಳಾರಿಯವರ ಹಿಮ್ಮೇಳವು ಪ್ರೇಕ್ಷಕರ ಗಮನ ಸೆಳೆಯಿತು. ಶ್ರೀ ದುರ್ಗಾಂಬಾ ಯಕ್ಷಗಾನ ಕಲಾಸಂಘ ಮಲ್ಲ ಇದರ ರಾಕೇಶ್ ಮಲ್ಲ , ಧನರಾಜ್ ಎಡನೀರು ಇವರ ವೇಷಭೂಷಣ, ಉತ್ತಮ ಧ್ವನಿವರ್ಧಕ, ಬೆಳಕು ವ್ಯವಸ್ಥೆ ಹಾಗೂ "ಕಹಳೆ" ಯವರ ಸಹಕಾರವನ್ನು ಮರೆಯುವಂತಿಲ್ಲ.

ವಿಡಿಯೊ ಇಲ್ಲಿದೆ

ಅದೇ ರೀತಿ ಯಕ್ಷಗಾನ ಕಲಾವಿದರಾದ ಬಾಲಕೃಷ್ಣ ಏಳ್ಕಾನ ಹಾಗೂ ಶಿವರಾಜ್ ಬಜಕ್ಕೂಡ್ಲು, ರಂಜಿತ್ ಗೋಳಿಯಡ್ಕ, ಲೋಕೇಶ್ ಮಲ್ಲ, ಸಂತೋಷ್ ಎಡನೀರು ವೇಷಭೂಷಣದಲ್ಲಿ ಸಹಕರಿಸಿದ್ದರು.

ಅಂತರ್ಜಾಲದ ಮೂಲಕ  ದೇಶವಿದೇಶಗಳಿಂದ ವೀಕ್ಷಿಸುತ್ತಿದ್ದ ಪ್ರೇಕ್ಷಕರಿಂದ ಪ್ರತಿಕ್ರಿಯೆಗಳ ಮಹಾಪೂರವೇ ಹರಿದು ಬಂತು. ವಿದೇಶದಿಂದ ಈ ಕಾರ್ಯಕ್ರಮವನ್ನು ವೀಕ್ಷಿಸಿ ಮೆಚ್ಚಿಕೊಂಡು ರಾಮಪ್ರಸಾದ ಅಮ್ಮೆನಡ್ಕ ಎಂಬ ಅಭಿಮಾನಿಯೋರ್ವರು ಕೇಂದ್ರದ ಬ್ಯಾಂಕ್ ಖಾತೆಗೆ ಹಣವನ್ನು ಜಮಾ ಮಾಡಿದ್ದಾರೆ!

ಅದೇ ರೀತಿ  ಶ್ರೀ ಶ್ರೀ ಸಚ್ಚಿದಾನಂದ ಸ್ವಾಮೀಜಿಯವರೂ ಪ್ರಾರಂಭದಿಂದ ಕೊನೆಯವರೆಗೂ ಕಾರ್ಯಕ್ರಮವನ್ನು ವೀಕ್ಷಿಸಿದ್ದಲ್ಲದೆ ಪರಂಪರೆಯ ಈ ನಾಟ್ಯಕ್ರಮದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದನ್ನೂ ಮರೆಯುವಂತಿಲ್ಲ. ಎಲ್ಲ ಹಿಮ್ಮೇಳದ ಕಲಾವಿದರನ್ನೂ ಮುಮ್ಮೇಳದ ಬಾಲ, ಯುವ ಕಲಾವಿದರನ್ನೂ  ಪ್ರೀತಿಪೂರ್ವಕ ಹರಸಿ ಎಲ್ಲರಲ್ಲೂ ಧನ್ಯತಾಭಾವವನ್ನು ಮೂಡಿಸಿದ್ದಾರೆ. ಇದೆಲ್ಲದಕ್ಕೂ ಕಾರಣ ನಮ್ಮ ಗುರುಗಳು ಎನ್ನುವುದನ್ನು ಮರೆಯುವಂತಿಲ್ಲ.

 ಜ್ಯೋತ್ಸ್ನಾ ಕಡಂದೇಲು

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

ನವೀನ ಹಳೆಯದು