ಯಕ್ಷಗಾನದಲ್ಲಿ ಸಾಹಿತ್ಯವನ್ನು ಮೂರು ವಿಭಾಗಗಳಲ್ಲಿ ವಿಭಾಗಿಸಬಹುದು. ಒಂದು ಪ್ರಸಂಗ ಸಾಹಿತ್ಯ- ಅದು ರಂಗಪಠ್ಯವಾಗಿದ್ದರೆ, ಎರಡನೆಯದಾಗಿ ಮೌಖಿಕ ಸಾಹಿತ್ಯವು ರಂಗಭಾಷೆಯಾಗಿ ಪ್ರಸ್ತುತಗೊಳ್ಳುತ್ತದೆ. ಮೂರನೆಯದು ವಿಮರ್ಶಾ/ ಸಂಶೋಧನಾ/ ಅಭಿನಂದನಾ ಸಾಹಿತ್ಯ.
ಈ ಮೂರನೇ ವಿಧದ ಸಾಹಿತ್ಯವು ಯಕ್ಷಗಾನದಲ್ಲಿ ಸರಿ ಸುಮಾರು 70-80 ವರುಷಗಳಿಂದ ದೊಡ್ಡ ಮಟ್ಟದಲ್ಲಿ ರಚನೆಯಾಗುತ್ತಿದೆ. ಇದರಲ್ಲಿ ಇಲ್ಲಿಯವರೆಗೆ 40ಕ್ಕೂ ಹೆಚ್ಚು ಸಂಶೋಧನ ಪ್ರಬಂಧಗಳು ಮಂಡನೆಯಾಗಿವೆ. ಸಾವಿರಾರು ಅಭಿನಂದನ ಗ್ರಂಥಗಳು, ಸಂಸ್ಮರಣ ಗ್ರಂಥಗಳು, ಕಲಾವಿದರ ಆತ್ಮಕಥೆಗಳು ಬಂದಿವೆ. ಇನ್ನು ಪತ್ರಿಕೆಯಲ್ಲಿ ವಿಮರ್ಶೆಗಳು, ಚಿಂತನೆಗಳು ದೊಡ್ಡ ಪ್ರಮಾಣದಲ್ಲಿ ದಾಖಲಾಗಿವೆ. ಇದರ ಜೊತೆಗೆ ನಾಲ್ಕೈದು ಯಕ್ಷಗಾನಕ್ಕಾಗಿಯೇ ಇರುವ ಪತ್ರಿಕೆಗಳಿವೆ. ಹೀಗೆ ಎಲ್ಲವೂ ಸೇರಿದರೆ ಅಂದಾಜು ಹತ್ತು ಸಾವಿರದಷ್ಟು ಕೃತಿಗಳು ರಚನೆಯಾಗಿವೆ. ಒಂದು ಕಲಾ ಪ್ರಕಾರದ ಮೇಲೆ ಇಷ್ಟೊಂದು ಸಂಖ್ಯೆಯ ಕೃತಿಗಳು ಕನ್ನಡವನ್ನು ಬಳಸಿ ರಚನೆಯಾಗಿರುವುದು ದಾಖಲೆಯೇ ಸರಿ.
ಹೀಗಿದ್ದರೂ ಹಿಂದೆ ಪ್ರಕಟಿತ ಎಷ್ಟೋ ಕೃತಿಗಳು ಇಂದು ಮರು ಮುದ್ರಣದ ಭಾಗ್ಯವನ್ನು ಕಾಣದೆ ಹಾಳಾಗಿ ಹೋಗುತ್ತಿರುವುದು ವ್ಯಥೆಯ ಸಂಗತಿ. ಇಂತಹ ಅಮೂಲ್ಯವಾದ ಯಕ್ಷಗಾನದ ಸಂಪತ್ತನ್ನು ಭವಿಷ್ಯದ ಪೀಳಿಗೆಗಾಗಿ ಉಳಿಸಿಕೊಳ್ಳುವ ಅನಿವಾರ್ಯತೆಯಿದೆ. ಈ ನಿಟ್ಟಿನಲ್ಲಿ ಬೆಂಗಳೂರಿನ ಯಕ್ಷವಾಹಿನಿ ತಂಡವು ಇವುಗಳನ್ನು ಸುವ್ಯವಸ್ಥಿತವಾಗಿ ಒಂದು ಕಡೆಯಲ್ಲಿ ರಕ್ಷಿಸುವುದಕ್ಕೆ ಮುಂದಾಗಿದೆ. ಇದುವೇ ಯಕ್ಷಪುಸ್ತಕ ಕೋಶ.
Yakshagana.in Updatesಗಾಗಿ: ವಾಟ್ಸ್ಆ್ಯಪ್-3 | ವಾಟ್ಸ್ಆ್ಯಪ್-1 | ವಾಟ್ಸ್ಆ್ಯಪ್-2 | ಟೆಲಿಗ್ರಾಂ | ಫೇಸ್ಬುಕ್ | ಟ್ವಿಟರ್ | ಯೂಟ್ಯೂಬ್ | ಇನ್ಸ್ಟಾಗ್ರಾಂ
ಯಕ್ಷಗಾನ ರಂಗದ ಕಲಾವಿದರಿಗೆ ಸಂಬಂಧಿಸಿದಂತೆ ಬಂದಿರುವ ಅಭಿನಂದನ ಗ್ರಂಥಗಳು, ಸಂಸ್ಮರಣ ಗ್ರಂಥಗಳು, ಕಲಾವಿದರ ಆತ್ಮ ಕಥೆಗಳು ಹೀಗೆ ಎಲ್ಲವನ್ನು ಡಿಜಿಟಲೀಕರಣ ಮಾಡಿ ಅದನ್ನು ಅರ್ಚಿವ್ ಮಾಡಿ ಸರ್ವರಿಗೂ ಅದು ಲಭ್ಯವಾಗುವಂತೆ ಮಾಡುವುದು ಇದರ ಉದ್ದೇಶ.
ಹೀಗಾಗಿ, ಎಲ್ಲ ಯಕ್ಷಗಾನಾಭಿಮಾನಿಗಳಲ್ಲಿ ಈ ರೀತಿಯ ಅಮೂಲ್ಯವಾದ ಪುಸ್ತಕಗಳಿದ್ದರೆ ಯಕ್ಷವಾಹಿನಿಯ ಇ-ಲೈಬ್ರರಿಗೆ ನೀವು ಅದನ್ನು ಕೊಡಬಹುದು. ಎಲ್ಲರೂ ಸೇರಿ ಯಕ್ಷಗಾನದ ಅಮೂಲ್ಯ ದಾಖಲೆಗಳನ್ನು ಉಳಿಸುವ ಪ್ರಯತ್ನವನ್ನು ಮಾಡೋಣ. ಹಕ್ಕು ಸ್ವಾಮ್ಯದ ತೊಂದರೆ ಬರದಂತೆ ಲೇಖಕರ ಹಾಗೂ ಪ್ರಕಾಶಕರ ಅನುಮತಿಯನ್ನೂ ಕೊಡಿಸುವಂತೆ ಯಕ್ಷವಾಹಿನಿ ಬಳಗವು ವಿನಂತಿಸಿಕೊಂಡಿದೆ. ಈ ರೀತಿ ಸಂಚಯವಾದ ಗ್ರಂಥಗಳು ಮುಂದಿನ ಪೀಳಿಗೆಗೆ ಉಚಿತವಾಗಿ ಆನ್‌ಲೈನ್ ಮೂಲಕ ಲಭ್ಯವಾಗುತ್ತವೆ.
ಈಗಾಗಲೇ ವಿದ್ಯುನ್ಮಾನ ಪ್ರತಿಯಲ್ಲಿರುವ ಗ್ರಂಥಗಳನ್ನೂ ಲೇಖನಗಳನ್ನು ಸ್ವೀಕರಿಸಿ, ಕ್ರೋಡೀಕರಿಸಿ, ಅಂತರಜಾಲದ ಮೂಲಕ ಉಚಿತ ಬಿತ್ತರದ ವ್ಯವಸ್ಥೆ ಮಾಡುತ್ತಿರುವ ಯಕ್ಷವಾಹಿನಿ ಜೊತೆಗೆ ನೀವು ಕೂಡ ಹಕ್ಕು ಸ್ವಾಮ್ಯಕ್ಕೆ ಒಳಪಡದ ಅಥವಾ ಅಂತರ್ಜಾಲಕ್ಕೆ ಸೇರಿಸಲು ಒಪ್ಪಿಗೆ ಇರುವ ಪುಸ್ತಕಗಳನ್ನು ನಮಗೆ ನೀಡಬಹುದಾಗಿದೆ ಎಂದು ಯಕ್ಷವಾಹಿನಿ ಬಳಗದ 'ಯಕ್ಷ ಪುಸ್ತಕ ಕೋಶ' ಸಮಿತಿಯು ತಿಳಿಸಿದೆ.
ಇದುವರೆಗೆ ಯಕ್ಷವಾಹಿನಿ ಸಂಗ್ರಹಿಸಿರುವ ಪ್ರಸಂಗೇತರ ಯಕ್ಷಗಾನ ಗ್ರಂಥಗಳ ಇ-ಲೈಬ್ರರಿಯ ಕೊಂಡಿ ಇಲ್ಲಿದೆ (ಕ್ಲಿಕ್ ಮಾಡಿ).
ಇಮೇಲ್ ಸಂಪರ್ಕ: yakshapusthakakosha @ gmail.com
ಸಂಪರ್ಕ ಸಂಖ್ಯೆ: 99863 84205
Tags:
ಸುದ್ದಿ