![]() |
ಕಾಸರಗೋಡು ಸಿರಿಬಾಗಿಲು ಪ್ರತಿಷ್ಠಾನದ ಪತ್ರಿಕಾಗೋಷ್ಠಿಯಲ್ಲಿ ಸಿರಿಬಾಗಿಲು ರಾಮಕೃಷ್ಣ ಮಯ್ಯ ಮಾತನಾಡಿದರು. |
ಮಂಗಳೂರು: ಯಕ್ಷಗಾನ ಸಾಹಿತ್ಯಕ್ಕೆ ಕೊಡುಗೆ ನೀಡಿ, ಗಡಿನಾಡಿನಲ್ಲಿ ಕನ್ನಡದ ಉಳಿವಿಗೆ ಹೋರಾಡಿದ ಕೀರ್ತಿಶೇಷ ವೆಂಕಪ್ಪಯ್ಯನವರ ಹೆಸರಿನಲ್ಲಿ ಯಕ್ಷಗಾನದ ಪರಂಪರೆಯನ್ನು ಬೆಳೆಸುವುದಕ್ಕಾಗಿಯೇ ಹುಟ್ಟಿಕೊಂಡ ಸಂಸ್ಥೆ ಕಾಸರಗೋಡು ಸಿರಿಬಾಗಿಲಿನ 'ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನ'. ಸುಮಾರು ಎರಡು ಕೋಟಿ ರೂ. ವೆಚ್ಚದಲ್ಲಿ ಸಿರಿಬಾಗಿಲಿನಲ್ಲಿ ಭವ್ಯವಾದ ಸಭಾಂಗಣ ಈ ಪ್ರತಿಷ್ಠಾನದ ಮೂಲಕ ಸಿದ್ಧಗೊಳ್ಳುತ್ತಿದೆ. ಮುಂದೆ ಇಲ್ಲಿ ಯಕ್ಷಗಾನ ಸಂಬಂಧಿ ಗೋಷ್ಠಿಗಳು, ತರಬೇತಿಗಳು, ಕಾರ್ಯಾಗಾರಗಳು ನಿರಂತರವಾಗಿ ನಡೆಯಲಿವೆ ಎಂದು ಭಾಗವತರಾದ ಸಿರಿಬಾಗಿಲು ರಾಮಕೃಷ್ಣ ಮಯ್ಯ ಅವರು ಹೇಳಿದರು.
ಬುಧವಾರ ಮಂಗಳೂರಿನಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ತಮ್ಮ ಪ್ರತಿಷ್ಠಾನ ಹಾಗೂ ವಾಟ್ಸಪ್ ಬಳಗದ ಮಾದರಿ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು.
ಯಕ್ಷಗಾನ ಕಲೆಯ ಬಗೆಗಿನ ಪೂರ್ಣ ಮೂಲಭೂತ ಜ್ಞಾನವನ್ನು ಹೊಸ ತಲೆಮಾರಿಗೆ, ಆಸಕ್ತರಿಗೆ ಮೂಡಿಸಿ ಆ ಮೂಲಕವಾಗಿ ನಮ್ಮ ಈ ಶ್ರೀಮಂತ ಕಲೆಯನ್ನು ಮುಂದಿನ ತಲೆಮಾರಿಗೆ ಯಥಾವತ್ ದಾಟಿಸುವ ಯೋಜನೆಗಳೆಲ್ಲ ಈಗಾಗಲೇ ಸಿದ್ಧವಾಗಿವೆ. ಕಳೆದ ಕೆಲವು ವರ್ಷಗಳಿಂದ ಈ ಪ್ರತಿಷ್ಠಾನದ ಮೂಲಕ ನಮ್ಮ ಕರಾವಳಿ ಜಿಲ್ಲೆಗಳ ವಿವಿಧೆಡೆಗಳಲ್ಲಿ ವಿದ್ವಾಂಸರು ಮತ್ತು ಅನುಭವಿ ಕಲಾವಿದರ ಸಹಕಾರದಿಂದ ಅರ್ಥಗಾರಿಕೆ - ಹಿಮ್ಮೇಳ - ಪಾರಂಪರಿಕ ನೃತ್ಯ - ಪ್ರಸಂಗ ನಡೆಗಳ ಕುರಿತಾಗಿ ಕಾರ್ಯಾಗಾರಗಳು ಈಗಾಗಲೇ ಸಂಪನ್ನಗೊಂಡು ಅವುಗಳ ದಾಖಲೀಕರಣಗಳು ಕೂಡ ಆಗಿವೆ. ಅವುಗಳೆಲ್ಲ ಅಧ್ಯಯನಕ್ಕೆ ಲಭ್ಯ ಇವೆ.
ಕಳೆದ ವರ್ಷದ ಕೊರೊನಾ ಲಾಕ್‌ಡೌನ್ ಅವಧಿಯಲ್ಲಿ 'ಕೊರೊನಾ ಯಕ್ಷ ಜಾಗೃತಿ' ಎನ್ನುವ ಯಕ್ಷಗಾನದ ಮೂಲಕ ರೋಗದ ಕುರಿತ ಜಾಗೃತಿ ಕಾರ್ಯಕ್ರಮ ಯುಟ್ಯೂಬ್ ಸಾಮಾಜಿಕ ಜಾಲತಾಣದಲ್ಲಿ ಕನ್ನಡ, ಇಂಗ್ಲಿಷ್ ಭಾಷೆಗಳಲ್ಲಿ ಪ್ರಸಾರವಾಗಿ ಲಕ್ಷಾಂತರ ಮಂದಿ ಇದನ್ನು ವೀಕ್ಷಿಸಿದ್ದಾರೆ, ಮಾತ್ರವಲ್ಲ, WHO ನ ಮೆಚ್ಚುಗೆಗೂ ಇದು ಪಾತ್ರವಾಗಿದೆ.
ಈ ಬಾರಿಯ ಲಾಕ್‌ಡೌನ್ ಸಂದರ್ಭದಲ್ಲಿ, ಪ್ರತಿಷ್ಠಾನವು ಯಕ್ಷಾನುಗ್ರಹ ವಾಟ್ಸ್ಆ್ಯಪ್ ಬಳಗದ ಮೂಲಕ 'ಮರೆಯಲಾಗದ ಮಹಾನುಭಾವರು' ಎನ್ನುವ ಮತ್ತೊಂದು ಮಹತ್ವಪೂರ್ಣ ಸರಣಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿ ಜನಮೆಚ್ಚುಗೆಗೆ ಪಾತ್ರವಾಗಿದೆ.
ಒಂದು ವಿಶ್ವವಿದ್ಯಾನಿಲಯ ಮಾಡಬಹುದಾದ ಕಾರ್ಯಕ್ರಮವನ್ನು ಈ ಪ್ರತಿಷ್ಠಾನವು ತನ್ನ ವಾಟ್ಸಾಪ್ ಬಳಗ 'ಯಕ್ಷಾನುಗ್ರಹ'ದ ಮೂಲಕ ಮಾಡಿದೆ. ಇದರಲ್ಲಿ ಕಳೆದ ಒಂದು ಶತಮಾನದಲ್ಲಿ ಯಕ್ಷಗಾನದ ಉಳಿವಿಗೆ, ಬೆಳೆಯುವಿಕೆಗೆ ಕಾರಣೀಕರ್ತರಾದ, ಕಾಲಗರ್ಭದಲ್ಲಿ ಸೇರಿಹೋದ ಕಲಾವಿದರ ಸಂಸ್ಮರಣಾ ಕಾರ್ಯ ಮೇ ತಿಂಗಳಿನಿಂದ ನಿರಂತರ ನಡೆದಿದೆ. ಪ್ರತಿದಿನ ಸಂಜೆ 5ರಿಂದ 10 ಗಂಟೆಯವರೆಗಿನ ಬಳಗದ ಸಮಯ ಈ ಕಾರ್ಯಕ್ರಮಕ್ಕೇ ಮೀಸಲು.
Yakshagana.in Updates ಗಾಗಿ: ವಾಟ್ಸ್ಆ್ಯಪ್-3 | ವಾಟ್ಸ್ಆ್ಯಪ್-1 | ವಾಟ್ಸ್ಆ್ಯಪ್-2 | ಟೆಲಿಗ್ರಾಂ | ಫೇಸ್ಬುಕ್ | ಟ್ವಿಟರ್ | ಯೂಟ್ಯೂಬ್ | ಇನ್ಸ್ಟಾಗ್ರಾಂ
ಕಲಾವಿದರನ್ನು ಮೊದಲೇ ನಿರ್ಧರಿಸಿ ಅವರ ಕುರಿತಾಗಿ ಮತ್ತು ಅವರ ಕೊಡುಗೆಗಳನ್ನು ಕುರಿತಾಗಿ ಬರೆಯುವವರನ್ನು ಕೂಡ ಮೊದಲೇ ನಿರ್ಧರಿಸಿ ಅವರಿಂದ ಲೇಖನವನ್ನು ಪ್ರತೀದಿನ ಸಮಯಕ್ಕೆ ಸರಿಯಾಗಿ ವಾಟ್ಸಾಪ್ ಗುಂಪಿನಲ್ಲಿ ಪ್ರಕಟಿಸುವುದು, ಬಳಿಕ ಗುಂಪಿನ ಸದಸ್ಯರ ಅನಿಸಿಕೆ, ಚರ್ಚೆ ನಡೆಯುತ್ತದೆ.
ತೆಂಕು-ಬಡಗು ಎನ್ನುವ ಭೇದವಿಲ್ಲದೆ ನಡೆದ ಈ ಕಾರ್ಯಕ್ರಮದಲ್ಲಿ ತೆಂಕು ಬಡಗಿನ ಎಲ್ಲ ಸಹೃದಯ ಸದಸ್ಯರು ಅದ್ಭುತವಾಗಿ ಸ್ಪಂದಿಸಿದ್ದಾರೆ. ಇಲ್ಲಿ ಸಂಗ್ರಹಿತವಾದ ಎಲ್ಲ ಮಾಹಿತಿಗಳು ಗ್ರಂಥದ ರೂಪದಲ್ಲಿ ಹೊರಬರಲಿವೆ. ಕುಂದಾಪುರದ ನೇರಳಕಟ್ಟೆಯ ಶ್ರೀ ರಾಘವೇಂದ್ರ ಉಡುಪರ ನೇತೃತ್ವದಲ್ಲಿ ಉಳಿದ ಸದಸ್ಯರ ಸಹಕಾರದಿಂದ ಪ್ರತಿಷ್ಠಾನ ಮತ್ತು ಬಳಗದ ಹೆಸರಲ್ಲಿ ಪುಸ್ತಕವು ಪ್ರಕಟವಾಗಲಿದೆ.
ಈ ಗ್ರಂಥವು ಮುಂದಿನ ಯಕ್ಷಗಾನ ಕುರಿತ ಅಧ್ಯಯನಗಳಿಗೆ ಒಂದು ಮಹತ್ವಪೂರ್ಣವಾದ ಆಕರವಾಗಲಿದೆ. ಈ ಲೇಖನ ಸರಣಿ 105 ದಿನಗಳಲ್ಲಿ ಈಗಾಗಲೇ 100 ಕಲಾವಿದರ ಸಂಖ್ಯೆಯನ್ನು ದಾಟಿದೆ. ಇನ್ನು ಮುಂದೆ ಈ ಸರಣಿ ಪರಿಸ್ಥಿತಿಗೆ ಅನುಗುಣವಾಗಿ ವಾರದಲ್ಲಿ 3 ದಿನ ಮುಂದುವರಿಯಲಿದೆ. ಶೇಣಿ ಸಂಸ್ಮರಣೆ 2 ದಿನ, ದೇರಾಜೆ ಸೀತಾರಾಮಯ್ಯ ಮತ್ತು ಎಡನೀರು ಶ್ರೀ ಶ್ರೀ ಶ್ರೀ ಕೇಶವಾನಂದ ಭಾರತಿ ಸ್ವಾಮೀಜಿಯವರ ಸ್ಮರಣೆ 3 ತಲಾ ದಿನ ನಡೆದಿತ್ತು.
ಈ ಸರಣಿಯ ಶತದಿನ ಆಚರಣೆ ತಾ.4.9.2021ರಂದು ಎಡನೀರು ಸಂಸ್ಥಾನದಲ್ಲಿ ಕೃಷ್ಣಐಕ್ಯರಾದ ಶ್ರೀ ಶ್ರೀ ಕೇಶವಾನಂದ ಭಾರತೀ ಸ್ವಾಮೀಜಿಯವರ ಸಂಸ್ಮರಣೆಯೊಂದಿಗೆ ಸಂಪನ್ನಗೊಂಡಿತು. ಚಾತುರ್ಮಾಸ ಆಚರಿಸುತ್ತಿರುವ ಶ್ರೀ ಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಿಯವರು ಅನುಗ್ರಹದ ನುಡಿಗಳನ್ನಾಡಿದರು. ಬಳಗದ ಸದಸ್ಯರಿಂದ ಕವಿ ಶ್ರೀಧರ್ ಡಿ ಎಸ್ ವಿರಚಿತ 'ಸತ್ತ್ವಶೈಥಿಲ್ಯ' ಎನ್ನುವ ತಾಳಮದ್ದಳೆ ನಡೆಯಿತು.
ಮತ್ತೆರಡು ಶ್ಲಾಘನೀಯ ಕಾರ್ಯಗಳು ಈ ಸರಣಿಯ ಜೊತೆಜೊತೆಯಲ್ಲೇ ನಡೆದಿವೆ. ಒಂದು 'ನುಡಿಗನ್ನಡ-ಸರಿಗನ್ನಡ' ಎನ್ನುವುದು. ನಮ್ಮ ನಿತ್ಯ ವ್ಯವಹಾರದ ಕನ್ನಡ ಬಳಕೆಯಲ್ಲಾಗುವ ತಪ್ಪುಗಳನ್ನು ಮತ್ತು ಸರಿಪ್ರಯೋಗಗಳ ಕುರಿತಾದ ಮಾಹಿತಿ ಇದರ ಆಶಯ. ಬಳಗದ ಭಾಷಾ ವಿದ್ವಾಂಸರಾದ ಶ್ರೀ ಕೊಕ್ಕಡ ವೆಂಕಟರಮಣ ಭಟ್ಟರು ಇದನ್ನು ನಡೆಸಿಕೊಡುತ್ತಿದ್ದಾರೆ.
ಮತ್ತೊಂದು, ಬಳಗದ ಸದಸ್ಯರಿಗೆ ಯಕ್ಷಗಾನ ಸಾಹಿತ್ಯ ಸಂಬಂಧೀ ಸ್ಪರ್ಧೆಗಳು. ಪ್ರಸಂಗ ಸಾಹಿತ್ಯ, ಪಾತ್ರ, ಕವಿ, ಸಂದರ್ಭಗಳೇ ಮೊದಲಾದ ಕುರಿತಾಗಿ ಅತ್ಯಂತ ಕ್ರಿಯಾಶೀಲವಾಗಿ ಪ್ರಶ್ನೆಗಳನ್ನು ನಿತ್ಯ ಸಂಜೆ ಕೇಳಲಾಗುತ್ತಿತ್ತು. ಸದಸ್ಯರು ಸಮಯದ ಮಿತಿಯೊಳಗೆ ಉತ್ತರವನ್ನು ನೀಡಬೇಕಾಗಿತ್ತು. ಬಳಗದ ಎಲ್ಲ ಸದಸ್ಯರು ಬಹಳ ಉತ್ಸಾಹದಿಂದ ಇದರಲ್ಲಿ ಭಾಗವಹಿಸುತ್ತಿದ್ದರು. ಅದರಲ್ಲೂ ಹೊಸ ಪೀಳಿಗೆಯ ಸಣ್ಣ ಹುಡುಗರು ಇದರಲ್ಲಿ ಪೂರ್ಣ ತೊಡಗಿಸಿಕೊಳ್ಳುತ್ತಿದ್ದರು. ಒಂದು ಸಮೂಹ ಮಾಧ್ಯಮ ಕ್ರಿಯಾತ್ಮಕವಾಗಿ ಚಿಂತನಾಶೀಲವಾಗಿ ಹೇಗೆ ತೊಡಗಿಸಿಕೊಳ್ಳಬಹುದು ಎನ್ನುವುದನ್ನು ಪ್ರತಿಷ್ಠಾನ ಈ ಮೂಲಕ ಸಮರ್ಥವಾಗಿ ತೋರಿಸಿಕೊಟ್ಟು ಆದರ್ಶಪಥವನ್ನು ಹುಟ್ಟು ಹಾಕಿದೆ.
ಪತ್ರಿಕಾಗೋಷ್ಠಿಯಲ್ಲಿ ಜಿ.ಕೆ. ಭಟ್ ಸೇರಾಜೆ, ಯೋಗೀಶ್ ರಾವ್ ಚಿಗುರುಪಾದೆ, ಸತೀಶ್ ಭಟ್, ಬಜಗೋಳಿ ಉಪಸ್ಥಿತರಿದ್ದರು.
Tags:
ಸುದ್ದಿ