ಯಕ್ಷಗಾನ ಅಂದು ಮತ್ತು ಇಂದು: ವಿದ್ಯಾವಂತರು ಬಂದರು, ಗುಣಮಟ್ಟ?

ಯಕ್ಷಗಾನದ ಬಣ್ಣದ ವೇಷದ ಪಾರಂಪರಿಕತೆಯ ಸೊಗಡು. ಚಿತ್ರ: ನರೇನ್ಸ್ ಪೈ ಕ್ಲಿಕ್

ವಿದ್ಯೆಯಿಲ್ಲದವರೇ ಯಕ್ಷಗಾನ ರಂಗವನ್ನು ಆ ಕಾಲದಲ್ಲಿ ಮೆರೆಸಿದ್ದರು ಮತ್ತು ಪರಂಪರೆಯ ಉಳಿವಿಗೆ ಹೆಚ್ಚಿನ ಆಸ್ಥೆ ವಹಿಸಿದ್ದರು. ಆದರೀಗ ವಿದ್ಯಾವಂತರು ಪ್ರವೇಶಿಸಿದ್ದಾರೆ. ಯಕ್ಷಗಾನದ ಪರಂಪರೆಯ ಸೊಗಸು ಉಳಿಯಿತೇ? ಗುಣಮಟ್ಟ ಸುಧಾರಣೆಯಾಯಿತೇ? ಪ್ರಶ್ನೆ ಮುಂದಿಟ್ಟಿದ್ದಾರೆ ದಾಮೋದರ ಶೆಟ್ಟಿ, ಇರುವೈಲು.
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಅಗ್ರಮಾನ್ಯ ಕಲೆಯಾದ ಯಕ್ಷಗಾನಕ್ಕೆ ಇಂದು ಸ್ವಲ್ಪ ಮಟ್ಟಿಗೆ ಸಮೃದ್ಧಿಯ ಬೊಜ್ಜು ಆವರಿಸಿದೆ ಅನಿಸುತ್ತಿದೆ. ಯಕ್ಷಗಾನ ಕಲೆ ಇಂದು ಕೆಲವೇ ಕೆಲವರ ಆಸ್ತಿಯಾಗಿ ಉಳಿದಿಲ್ಲ. ದಕ್ಷಿಣ ಕನ್ನಡದ ಉದ್ದಗಲಕ್ಕೂ ನೂರಾರು ಹವ್ಯಾಸಿ ಹಾಗೂ ವೃತ್ತಿಪರ ಮೇಳಗಳಿವೆ. ಹಿಂದೆ ಹೆಚ್ಚಾಗಿ ಅವಿದ್ಯಾವಂತರಿಂದಲೇ ಕೂಡಿರುತ್ತಿದ್ದ ಕಲೆಯ ಅಂದಕ್ಕೆ ಇಂದು ವಿದ್ಯಾವಂತರೂ ಮರುಳಾಗಿ ಪೂರ್ಣ ಪ್ರಮಾಣದ ಕಲಾವಿದರಾಗುತ್ತಿದ್ದಾರೆ. ಪ್ರತಿ ಗ್ರಾಮದಲ್ಲೂ ಹವ್ಯಾಸಿ ಯಕ್ಷಗಾನ ಸಂಘಗಳಿವೆ. ಹಾಗಂತ ಯಕ್ಷಗಾನ ಪ್ರದರ್ಶನದ ಗುಣಮಟ್ಟದಲ್ಲಿ ಗಮನಾರ್ಹವಾದ ಸುಧಾರಣೆ ಆಗಿದೆ ಅಂತ ಹೇಳುವ ಹಾಗಿಲ್ಲ.

ಯಕ್ಷಗಾನದಲ್ಲಿ ಇಂದು ಏನು ಬದಲಾವಣೆಗಳು ಆಗಿವೆ ಎಂದು ತಿಳಿಯಬೇಕಾದರೆ, ಹಿಂದೆ ಶುದ್ಧ ಯಕ್ಷಗಾನ ಹೇಗಿತ್ತು ಅನ್ನುವುದನ್ನು ತಿಳಿದಿರಬೇಕು. ಯಕ್ಷಗಾನಕ್ಕೆ ಒಂದು ಪಠ್ಯಕ್ರಮ ಇಲ್ಲದೇ ಇರುವುದರಿಂದ ಹಿಂದಿನವರು ಆಡುತ್ತಿದ್ದ ಯಕ್ಷಗಾನವನ್ನೇ ಪರಂಪರೆ ಅಂತ ಸ್ವೀಕರಿಸಬೇಕಾದ ಅನಿವಾರ್ಯತೆಯೂ ಇದೆ.
ಹಿಂದೆ ಸಂಪೂರ್ಣ ಯಕ್ಷಗಾನಕ್ಕೆ ಭಾಗವತನೇ ಸೂತ್ರಧಾರ. ಅವರಿಗೆ ಸಂಪೂರ್ಣ ಆಟದ ನಡೆಯ ಬಗ್ಗೆ ಆಳವಾದ ಜ್ಞಾನವಿರುತ್ತಿತ್ತು. ಎಷ್ಟೇ ದೊಡ್ಡ ಕಲಾವಿದನಾದರೂ ಭಾಗವತರನ್ನು ಅತಿಕ್ರಮಣ ಮಾಡುವ ಹಾಗಿಲ್ಲ. ಇಂದು ಭಾಗವತರು ಬರೇ ಹಾಡುವುದಕ್ಕೆ ಮಾತ್ರ ಸೀಮಿತವಾಗುತ್ತಿದ್ದಾರೆ. ಒಂದೇ ರಾತ್ರಿಯ ಪ್ರಸಂಗದಲ್ಲಿ ಮೂರು ನಾಲ್ಕು ಭಾಗವತರಿರುವುದು ಕಥೆಯ ನಿರಂತರತೆಯ ದೃಷ್ಟಿಯಿಂದ ಅಪೇಕ್ಷಣೀಯವಲ್ಲ. ಇಂತಹ ಸಂದರ್ಭದಲ್ಲಿ ಹೆಚ್ಚಾಗಿ ಹಿಮ್ಮೇಳ ಹಾಗೂ ಮುಮ್ಮೇಳಗಳ ಮಧ್ಯೆ ಸಮನ್ವಯತೆ ಕೊರತೆ ಉಂಟಾಗುವ ಸಾಧ್ಯತೆ ಇದೆ.

ಶುದ್ಧ ಯಕ್ಷಗಾನದ ಶೈಲಿಯ ಹಾಡುಗಾರಿಕೆಯಿಂದ ದೂರ ಸರಿದು, ಚಪ್ಪಾಳೆ ಗಿಟ್ಟಿಸಲೋಸುಗ ಹಾಡುಗಳನ್ನು ತಿರುಚಿ ವಿವಿಧ ರೀತಿಯ ಸರ್ಕಸ್ ಮಾಡುವ ಚಾಳಿ ಇಂದು ಅರ್ಬುದ ರೋಗದಂತೆ ಎಲ್ಲೆಡೆ ಪಸರಿಸಿದೆ. ಭಾಗವತರು ದೀರ್ಘ ಆಲಾಪನೆಗೆ ತೊಡಗಿದರೆ ಮುಮ್ಮೇಳದಲ್ಲಿರುವ ವೇಷಧಾರಿಗಳು ಏನು ತಾನೇ ಅಭಿನಯಿಸಲು ಸಾಧ್ಯ?

ಹಾಗಂತ ಇಂತಹ ಅಪಸವ್ಯಗಳು ಹಿಮ್ಮೇಳದಲ್ಲಿ ಮಾತ್ರ ಇವೆ ಅಂತ ಭಾವಿಸಕೂಡದು. ಮುಮ್ಮೇಳದ ಅನುಭವೀ ಕಲಾವಿದರೂ ತಮ್ಮ ಮಿತಿಗಿಂತ ಹೆಚ್ಚಾಗಿ ಅಭಿನಯಿಸುವುದು, ಮಾತಾಡುವುದೂ ಹೆಚ್ಚಾಗುತ್ತಿದೆ. ಚಾಲು ಕುಣಿತಗಳು ಕೆಲವೊಮ್ಮೆ ಸಾಕಷ್ಟು ಚಪ್ಪಾಳೆ ಬೀಳದ ಹೊರತು ನಿಲ್ಲುವುದೇ ಇಲ್ಲ. ಮಾತುಗಾರಿಕೆಯಲ್ಲೂ ಕೆಲವು ವೃತ್ತಿಪರರಲ್ಲಿಯೂ ಅಧ್ಯಯನದ ಕೊರತೆ ಎದ್ದು ಕಾಣುತ್ತದೆ. ಭಾಷಾ ಶುದ್ಧಿಗಾಗಿ ಹಾಗೂ ಪುರಾಣದ ಕಥೆಗಳನ್ನು ತಿಳಿದುಕೊಳ್ಳಲು ಆಳವಾದ ಅಧ್ಯಯನ ಅತೀ ಅಗತ್ಯ.

ಹಿಂದೆಲ್ಲಾ ಬಾಲ ಕಲಾವಿದರು ತಮ್ಮ ಪಾತ್ರ ಮುಗಿದ ಮೇಲೆ, ಚೌಕಿಯಲ್ಲಿ ಅಥವಾ ರಂಗಸ್ಥಳದ ಪಕ್ಕದಲ್ಲಿ ಕುಳಿತು ಹಿರಿಯ ಕಲಾವಿದರ ಪಾತ್ರವನ್ನು ನೋಡಿ ಬಹಳಷ್ಟು ವಿಷಯಗಳನ್ನು ತಿಳಿದುಕೊಳ್ಳುತ್ತಿದ್ದರು. ಆದರೆ ಈಗ ಇವ್ಯಾವುದಕ್ಕೂ ವ್ಯವಧಾನ ಇಲ್ಲ. ತಮ್ಮ ಪಾತ್ರ ಮುಗಿದ ತಕ್ಷಣ ವಾಹನ ಏರಿ ಇನ್ನೊಂದು ಆಟಕ್ಕೋ ಮನೆಗೋ ಹೋಗುವವರು ಕಲಿಯುವಿಕೆಗಿರುವ ಅಮೂಲ್ಯ ಅವಕಾಶವನ್ನು ಕಳೆದು ಕೊಳ್ಳುತ್ತಿದ್ದಾರೆ.

ಆಹಾರ್ಯದಲ್ಲೂ ಬಹಳಷ್ಟು ಬದಲಾವಣೆಗಳಾಗಿವೆ. ಹಿಂದಿನ ವುಲನ್ ಮೀಸೆಗಳ ಬದಲು ಇಂದು ವಿವಿಧ ವಿನ್ಯಾಸದ ಕಟ್ಟು ಮೀಸೆಗಳಿವೆ. ಲೆಕ್ಕಕ್ಕಿಂತ ಹೆಚ್ಚು ಮಿರುಗುವ ದಗಲೆ, ಜಾಕೆಟ್‌ಗಳು ಮಣಿ ಆಭರಣದ ಚಂದವನ್ನು ಮಸುಕಾಗಿಸುತ್ತಿವೆ. 

ಇನ್ನೊಂದು ಬಹುದೊಡ್ಡ ಸಮಸ್ಯೆಯೆಂದರೆ ಪ್ರಖರವಾದ ವಿದ್ಯುದ್ದೀಪಗಳ ಬಳಕೆ. ರಂಗಸ್ಥಳ ಪ್ರಕಾಶಮಾನವಾದಷ್ಟೂ ಆಟ 'ರೈಸುತ್ತದೆ' ಎನ್ನುವುದೊಂದು ತಪ್ಪು ಕಲ್ಪನೆ. ಪ್ರಕಾಶಮಾನವಾದ ಹೆಲೋಜನ್ ದೀಪಗಳು ಬಹಳಷ್ಟು ಶಾಖವನ್ನು ಉತ್ಪತ್ತಿ ಮಾಡುವುದರೊಂದಿಗೆ ಕಲಾವಿದರ ಕಣ್ಣಿಗೂ ಹಾನಿ ಉಂಟು ಮಾಡುತ್ತದೆ. ಮಂದ್ರವಾದ ತಿಳಿ ಹಳದಿ ಬೆಳಕಿನಲ್ಲಿ, ಹಿಂದುಗಡೆ ಕಡುಕಪ್ಪು ಅಥವಾ ಕಡುನೀಲಿ ಬಣ್ಣದ ಪರದೆ ಇದ್ದಲ್ಲಿ ವೇಷಗಳು ಎದ್ದು ಕಾಣುತ್ತವೆಯೇ ಹೊರತು ಪ್ರಕಾಶಮಾನವಾದ ಬೆಳಕಿನಲ್ಲಿ ಅಲ್ಲ. ಒಂದು ಅಲೌಕಿಕವಾದ ಲೋಕವನ್ನು, ಅತಿಮಾನುಷ ವ್ಯಕ್ತಿಗಳನ್ನು ಹತ್ತಡಿ ಉದ್ದಗಲದ ರಂಗಸ್ಥಳದಲ್ಲಿ ತೋರಿಸುವಲ್ಲಿ ಬೆಳಕನ್ನು ಸರಿಯಾಗಿ ಉಪಯೋಗಿಸುವುದು ಅತೀ ಅಗತ್ಯ.

ಚೌಕಿಮನೆಯಲ್ಲಿ ಉಪಯೋಗಿಸುವಷ್ಟೇ ಬೆಳಕನ್ನು ರಂಗಸ್ಥಳದಲ್ಲಿಯೂ ಉಪಯೋಗಿಸಿದರೆ ಬಣ್ಣಗಳು ಅದ್ಭುತವಾಗಿ ಕಾಣಿಸಲು ಸಾಧ್ಯ. ಅತಿಯಾದ ಬೆಳಕಿನಲ್ಲಿ ಕೆಲವು ವೇಷಗಳು ಪೇಲವವಾಗಿ ಕಾಣಿಸುತ್ತವೆ, ಮಾತ್ರವಲ್ಲ ಕೆಲವು ಅನಗತ್ಯ ವಿವರಗಳಾದ - ನೇತಾಡುತ್ತಿರುವ ಹಗ್ಗದ ತುದಿ, ಕಲಾವಿದನ ಮುಖದ ಬೆವರು ಸಭೆಗೆ ನಿಚ್ಚಳವಾಗಿ ಕಾಣಿಸುತ್ತದೆ.

ತಾಳಮದ್ದಳೆಯ ಕಲಾವಿದರು ವೇಷಧಾರಿಗಳಾದ ಮೇಲೆ ಮಾತುಗಾರಿಕೆಯೂ ಅಗತ್ಯಕ್ಕಿಂತ ದೀರ್ಘವಾಗುತ್ತಿದೆ ಎಂಬ ಆರೋಪ ಹಿಂದೆಯೂ ಇತ್ತು, ಈಗಲೂ ಇದೆ.

ಯಕ್ಷಗಾನದ ಪೂರ್ವರಂಗಗಳಾದ ಕೋಡಂಗಿ, ನಿತ್ಯವೇಷ, ಪೀಠಿಕಾ ಸ್ತ್ರೀ ವೇಷ, ಗಣಪತಿ ಸುಬ್ರಾಯ, ಹೊಗಳಿಕೆ ಇವುಗಳು ಸೇವೆ ಆಟದ ಮೇಳಗಳನ್ನು ಬಿಟ್ಟರೆ ಬೇರೆಲ್ಲೂ ಇಂದು ಕಾಣಸಿಗುತ್ತಿಲ್ಲ. ಈ ಕಾಲದ ಆವಶ್ಯಕತೆಯಾದ ಕಾಲಮಿತಿ ಯಕ್ಷಗಾನದಲ್ಲಿ ಇವೆಲ್ಲ ಸಂಪೂರ್ಣ ಮಾಯವಾಗಿವೆ.

ಹಾಗಂತ ಯಕ್ಷಗಾನವು ಎಲ್ಲಾ ರಂಗದಲ್ಲಿಯೂ ಕುಲಗೆಟ್ಟಿದೆ ಎನ್ನುವ ಹಾಗಿಲ್ಲ. ವಿದ್ಯಾವಂತರ ಪ್ರವೇಶದಿಂದಾಗಿ ಯಕ್ಷಗಾನದಲ್ಲಿ ಹಿಂದಿಗಿಂತ ಹೆಚ್ಚು ಭಾಷಾ ಶುದ್ಧಿ ಇದೆ. ಸುಮಾರು ಐವತ್ತು ಅರುವತ್ತು ವರ್ಷಗಳ ಹಿಂದೆ ಕಲಾವಿದರೂ ಪ್ರೇಕ್ಷಕರೂ ಅಷ್ಟೇನೂ ವಿದ್ಯಾವಂತರಲ್ಲದಿದ್ದುದರಿಂದ ಮಾತಿನಲ್ಲಿ ಅಲ್ಪಪ್ರಾಣ ಮಹಾಪ್ರಾಣದ ತಪ್ಪುಗಳು, ವ್ಯಾಕರಣ ದೋಷಗಳು ಸಾಮಾನ್ಯವಾಗಿದ್ದವು. ಸ್ಥೂಲವಾಗಿ ಹೇಳುವುದಾದರೆ ಕೆಲ ಬೆಳವಣಿಗೆಗಳು ಒಳ್ಳೆಯದಿದ್ದರೆ, ಇನ್ನು ಕೆಲವು ಯಕ್ಷಗಾನದ ಅಂದವನ್ನು ಕೆಲಮಟ್ಟಿಗೆ ಹಾಳುಗೆಡವಿದೆ ಎನ್ನಬೇಕಾಗುತ್ತದೆ.

(ಕಳೆದ ವರ್ಷ ಮುಂಬಯಿಯ ಒಂದು ಕಾರ್ಯಕ್ರಮದಲ್ಲಿ ನಾನು ಮಾಡಿದ ಭಾಷಣದ ಆಯ್ದ ಭಾಗಗಳು)

✍ ದಾಮೋದರ ಶೆಟ್ಟಿ, ಇರುವೈಲು

ಗೂಗಲ್ ನ್ಯೂಸ್‌ನಲ್ಲಿ ಯಕ್ಷಗಾನ.ಇನ್ ಫಾಲೋ ಮಾಡಲು ಕ್ಲಿಕ್ ಮಾಡಿ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

ನವೀನ ಹಳೆಯದು