ಚೌತಿ ಹಬ್ಬ - 2: ಚಂದ್ರನಿಗೆ ಶಾಪ, ಕೃಷ್ಣನಿಗೂ ತಟ್ಟಿದ ಅಪವಾದದ ಕಥನ (ತಾಳಮದ್ದಳೆ ವಿಡಿಯೊ ಇದೆ)

ಗಣಪತಿಯನ್ನು ನೋಡಿ ಅವಮಾನಿಸಿದ ಚಂದ್ರನಿಗೆ ಗಣೇಶನ ಶಾಪ, ತತ್ಪರಿಣಾಮ ಶಾಪದ ಫಲವನ್ನು ಶ್ರೀಕೃಷ್ಣನೂ ಅನುಭವಿಸಬೇಕಾದ ಪ್ರಸಂಗವನ್ನು ವಿವರಿಸಿದ್ದಾರೆ ಹರಿಕೃಷ್ಣ ಹೊಳ್ಳ, ಬ್ರಹ್ಮಾವರ.
ಅಂದು ಚೌತಿ ಹಬ್ಬದ ರಾತ್ರಿಯಾಗಿತ್ತು. ಆಕಾಶದಲ್ಲಿ ಶುಕ್ಲಪಕ್ಷದ ಚಂದ್ರನಿದ್ದರೂ ಪ್ರಕಾಶಮಾನವಾದ ಬೆಳಕು ಇರಲಿಲ್ಲ. ಚಂದ್ರನು ತನ್ನ ಮಂದ ಬೆಳಕನ್ನೇ ಚೆಲ್ಲುತ್ತಾ ಭೂಮಿಯ ಕಡೆ ನೋಡುತ್ತಿದ್ದ. ಆಗ ಅವನ ದೃಷ್ಟಿಯು ರಾತ್ರಿಯ ಹೊತ್ತಿನಲ್ಲಿ ವಿಹಾರಕ್ಕೆ ಹೊರಟಿದ್ದ ಗಣಪತಿಯ ಮೇಲೆ ಬಿತ್ತು. ಗಣಪತಿಯು ಅಂದು ತನ್ನದೇ ಹಬ್ಬವಾಗಿದ್ದರಿಂದ ತನಗೆ ಇಷ್ಟವಾದ ಕಡುಬು, ಮೋದಕ ಮೊದಲಾದವುಗಳನ್ನೆಲ್ಲಾ ಸ್ವಲ್ಪ ಜಾಸ್ತಿಯಾಗಿಯೇ ತಿಂದು ಹೊಟ್ಟೆಯನ್ನು ಎಂದಿಗಿಂತಲೂ ಹೆಚ್ಚು ಉಬ್ಬಿಸಿಕೊಂಡು ನಡೆಯಲು ಕೂಡಾ ಕಷ್ಟಪಡುತ್ತಿದ್ದನು. ಗಣಪತಿಯ ಡೊಳ್ಳು ಹೊಟ್ಟೆ, ಕೋರೆ ದಾಡೆ, ಮೊರದಗಲದ ಕಿವಿ, ಸೊಂಡಿಲಿನ ಮೂಗನ್ನು ನೋಡಿ ಚಂದ್ರನು ತನ್ನಲ್ಲಿಯೇ ತಾನು ನಗುತ್ತಿದ್ದನು. ಆ ಚಂದ್ರನಿಗೆ ತಾನೇ ಸುಂದರನು, ತನಗಿಂತ ಸುಂದರರಾದವರು ಬೇರೆ ಯಾರೂ ಇಲ್ಲ ಎಂಬ ಅಹಂಕಾರವಿತ್ತು.

ಹೀಗಿರುವಾಗ ಇದಾವುದರ ಪರಿವೆಯೇ ಇಲ್ಲದೇ ತನ್ನಷ್ಟಕ್ಕೇ ತಾನು ಏದುಸಿರು ಬಿಡುತ್ತಾ ನಡೆಯುತ್ತಿದ್ದ ಗಣಪತಿಯು ಚಂದ್ರನ ಮಂದ ಬೆಳಕಿನಲ್ಲಿ ಸರಿಯಾಗಿ ಹಾದಿ ಕಾಣಿಸದೇ ನೆಲದ ಮೇಲೆ ಎಡವಿ ಬಿದ್ದನು. ಬಿದ್ದುದರಿಂದಾಗಿ ಮೊದಲೇ ಉಬ್ಬಿಕೊಂಡಿದ್ದ ಹೊಟ್ಟೆಯು ಬಿರಿಯಿತು. ಗಣಪತಿಯು ಕೂಡಲೇ ಅಲ್ಲಿಯೇ ಹಾದು ಹೋಗುತ್ತಿದ್ದ ನಾಗರ ಹಾವೊಂದನ್ನು ಹೆಕ್ಕಿ ಅದನ್ನು ತನ್ನ ಹೊಟ್ಟೆಗೆ ಸುತ್ತಿಕೊಂಡು ಹೊಟ್ಟೆಯು ಒಡೆದು ಹೋಗದಂತೆ ನೋಡಿಕೊಂಡನು.

ಆಕಾಶದಲ್ಲಿದ್ದ ಚಂದ್ರನು ಇದನ್ನು ನೋಡಿ ಗಣಪತಿಯನ್ನು ಅಪಹಾಸ್ಯ ಮಾಡುತ್ತಾ ಗಟ್ಟಿಯಾಗಿ ಗಹಗಹಿಸಿ ನಕ್ಕು ಬಿಟ್ಟನು. ಚಂದ್ರನು ನಕ್ಕಿದ್ದನ್ನು ನೋಡಿ ಗಣಪತಿಗೆ ಸಿಟ್ಟು ಬಂದಿತು. ಆತನು ಚಂದ್ರನನ್ನು ನೋಡಿ “ನೀನು ಅತ್ಯಂತ ಸುಂದರನೆಂದು ಅಹಂಕಾರಿಯಾಗಿರುವೆ, ಆದ್ದರಿಂದ ನನ್ನನ್ನು ಅವಮಾನ ಮಾಡಿದೆ. ಹೀಗಾಗಿ ಇಂದಿನಿಂದ ಜನರು ನಿನ್ನನ್ನು ನೋಡುವುದೇ ಬೇಡ. ನೋಡಿದರೆ ಅವರಿಗೆ ಅಪವಾದ ಬರಲಿ” ಎಂದು ಆತನಿಗೆ ಶಾಪವನ್ನು ಕೊಟ್ಟನು.

ಗಣಪತಿಯು ಕೊಟ್ಟ ಶಾಪದಿಂದ ಚಂದ್ರನು ದುಃಖಿತನಾದನು. “ನನ್ನ ಸೌಂದರ್ಯವನ್ನು ಜನರು ನೋಡದೇ ಇದ್ದ ಮೇಲೆ ನನಗೆ ಆ ಸೌಂದರ್ಯವಿದ್ದರೂ ಏನು ಪ್ರಯೋಜನ? ಅದು ವ್ಯರ್ಥವೇ ಸರಿ” ಎಂದು ತಿಳಿದು ಶಾಪ ನಿವೃತ್ತಿಗಾಗಿ ಆತನು ಗಣಪತಿಯನ್ನು ಭಕ್ತಿಯಿಂದ ಪ್ರಾರ್ಥಿಸತೊಡಗಿದನು. ಚಂದ್ರನ ಪ್ರಾರ್ಥನೆಯಿಂದ ಪ್ರಸನ್ನನಾದ ಗಣಪತಿಯು ತಾನು ಕೊಟ್ಟ ಶಾಪದ ಪ್ರಭಾವವನ್ನು ಸ್ವಲ್ಪ ಕಡಿಮೆ ಮಾಡಿದನು.

"ಚಂದ್ರಗೆ ಶಾಪ" ಅಪರೂಪದ ಪ್ರಸಂಗದ ತಾಳಮದ್ದಳೆ ವಿಡಿಯೊ ಇಲ್ಲಿದೆ. ಲೀಲಾ ಬೈಪಾಡಿತ್ತಾಯ, ಹರಿನಾರಾಯಣ ಬೈಪಾಡಿತ್ತಾಯ, ಅವಿನಾಶ್ ಬೈಪಾಡಿತ್ತಾಯ ಹಿಮ್ಮೇಳ, ಡಾ.ಪ್ರಭಾಕರ ಜೋಷಿ, ಜಬ್ಬಾರ್ ಸಮೊ ಸಂಪಾಜೆ ಮುಮ್ಮೇಳದಲ್ಲಿದ್ದಾರೆ.

“ಭಾದ್ರಪದ ಶುದ್ಧ ಚತುರ್ಥಿಯಂದು ಅಂದರೆ ಈ ಚೌತಿ ಹಬ್ಬದಂದು ಯಾರು ನಿನ್ನನ್ನು ನೋಡುವರೋ ಅವರಿಗೆ ಮಾತ್ರ ಒಂದು ತಿಂಗಳ ಒಳಗಾಗಿ ಮಿಥ್ಯಾಪವಾದ ಉಂಟಾಗಲಿ. ತಿಂಗಳಿನ ಬೇರೆ ದಿನಗಳಂದು ನಿನ್ನನ್ನು ನೋಡಲು ಅಡ್ಡಿಯಿಲ್ಲ” ಎಂದು ಆತನಿಗೆ ವಿಶಾಪವನ್ನು ಕರುಣಿಸಿದನು. ಹೀಗಾಗಿ ಅಂದಿನಿಂದ ಆರಂಭಿಸಿ ಇಂದಿನವರೆಗೂ ಯಾರೂ ಕೂಡಾ ಚೌತಿ ಹಬ್ಬದ ದಿನದಂದು ಚಂದ್ರನನ್ನು ನೋಡುವುದಿಲ್ಲ.

ಕೃಷ್ಣನಿಗೂ ತಟ್ಟಿದ ಅಪವಾದ
ಗಣಪತಿಯ ಈ ಶಾಪಕ್ಕೆ ಜನಸಾಮಾನ್ಯರು ಮಾತ್ರವಲ್ಲ ದೇವಾನುದೇವತೆಗಳೂ ಕೂಡಾ ಹೊರತಲ್ಲ. ಒಂದು ಸಲ ಚೌತಿಯ ಹಬ್ಬದಂದು ಭಗವಾನ್ ಶ್ರೀಕೃಷ್ಣನು ಚಂದ್ರನನ್ನು ನೋಡಿದನು. ಹೀಗಾಗಿ ಆತನಿಗೂ ಕೂಡಾ ಸ್ಯಮಂತಕ ಮಣಿಯನ್ನು ಕದ್ದ ಕಳ್ಳ, ಕೊಲೆಗಾರ ಎಂಬೆಲ್ಲಾ ಅಪವಾದಗಳು ಬಂದವು. ಆ ಕತೆ ಹೀಗಿದೆ ಕೇಳಿ:

ಒಮ್ಮೆ ಯಾದವರಲ್ಲಿ ಓರ್ವನಾದ ವೃಂದಾವನದ ಅರಸ ಸತ್ರಾಜಿತನು ಸಮುದ್ರದ ತಡಿಯಲ್ಲಿ ಸೂರ್ಯನನ್ನು ಕುರಿತು ತಪಸ್ಸು ಮಾಡಿದನು. ಸತ್ರಾಜಿತನ ಭಕ್ತಿಗೆ ಮೆಚ್ಚಿ ಪ್ರಸನ್ನನಾದ ಸೂರ್ಯದೇವನು ಆತನ ಇದಿರಿನಲ್ಲಿ ಪ್ರತ್ಯಕ್ಷನಾಗಿ “ನಿನಗೆ ಏನು ವರ ಬೇಕು” ಎಂದು ಕೇಳಿದನು. ಆಗ ಸತ್ರಾಜಿತನು “ನಮ್ಮ ರಾಜ್ಯದಲ್ಲಿ ಮಳೆ ಬೆಳೆ ಎಲ್ಲವೂ ಸುಭಿಕ್ಷವಾಗಿ ಆಗಿ ನಮ್ಮ ರಾಜ್ಯವು ಸಂಪತ್ ಭರಿತವಾಗುವಂತೆ ಮಾಡು ದೇವಾ” ಎನ್ನುತ್ತಾನೆ. “ಹಾಗೆಯೇ ಆಗಲಿ” ಎಂದ ಸೂರ್ಯದೇವನು ತನ್ನ ಕುತ್ತಿಗೆಯಲ್ಲಿ ಇದ್ದ ಮಣಿಯೊಂದನ್ನು ಸತ್ರಾಜಿತನಿಗೆ ನೀಡಿ “ಇಗೋ, ಈ ಮಣಿಯನ್ನು ತೆಗೆದುಕೋ, ಇದು ಸ್ಯಮಂತಕವೆಂಬ ಮಣಿ. ಈ ಮಣಿ ಇರುವಲ್ಲಿ ಭೂಕಂಪವಾಗಲೀ, ಪ್ರವಾಹವಾಗಲೀ, ಕ್ಷಾಮಗಳಾಗಲೀ ಉಂಟಾಗುವುದಿಲ್ಲ. ಇದು ದಿನವೊಂದಕ್ಕೆ ಎಂಟು ಮಣ ಬಂಗಾರವನ್ನು ಕೂಡಾ ಕೊಡುತ್ತದೆ. ಮಾತ್ರವಲ್ಲದೇ ಇದು ನನ್ನಂತೆಯೇ ಪ್ರಭೆಯನ್ನು ಕೂಡಾ ಕೊಡುತ್ತದೆ” ಎನ್ನುತ್ತಾ ಆ ಮಣಿಯನ್ನು ಸತ್ರಾಜಿತನಿಗೆ ಕೊಟ್ಟು ಅಂತರ್ಧಾನನಾಗುತ್ತಾನೆ.

ಸ್ಯಮಂತಕ ಮಣಿಯ ಪ್ರಭಾವದಿಂದಾಗಿ ವೃಂದಾವನ ರಾಜ್ಯದಲ್ಲಿ ಸಂಪತ್ತು ತುಂಬಿ ತುಳುಕುವಂತಾಗುತ್ತದೆ. ಸತ್ರಾಜಿತನ ಸಂಬಂಧಿಕನೇ ಆದ ಶ್ರೀಕೃಷ್ಣನಿಗೆ ಆ ಮಣಿಯ ವಿಷಯವು ತಿಳಿಯುತ್ತದೆ. ಯಾದವರ ಪ್ರಮುಖನಾದ ಮಧುರೆಯ ಅರಸ ಹಾಗೂ ತನ್ನ ಅಜ್ಜನಾದ ಉಗ್ರಸೇನನಿಗೂ ಇಂತಹ ಭಾಗ್ಯ ಇಲ್ಲದೇ ಹೋಯಿತಲ್ಲ ಎಂದುಕೊಂಡು ಅವನು ಸತ್ರಾಜಿತನ ಬಳಿಗೆ ಹೋಗಿ “ಆ ಮಣಿಯನ್ನು ನನ್ನ ಅಜ್ಜನಾದ ಉಗ್ರಸೇನನಿಗೆ ಕೊಡುವೆಯಾ” ಎಂದು ಕೇಳುತ್ತಾನೆ. ಆದರೆ, ಸತ್ರಾಜಿತನು ಕೊಡಲು ನಿರಾಕರಿಸುತ್ತಾನೆ. “ಸರಿ ಬಿಡು, ಇಷ್ಟವಿಲ್ಲದಿದ್ದರೆ ಬೇಡ” ಎಂದುಕೊಂಡು ಕೃಷ್ಣನು ಹಿಂತಿರುಗುತ್ತಾನೆ. ಮತ್ತೆ ಆತನಿಗೆ ಆ ವಿಷಯವೇ ಮರೆತು ಹೋಗುತ್ತದೆ.

ಮುಂದೆ ಒಂದು ದಿನ ಸತ್ರಾಜಿತನ ತಮ್ಮನಾದ ಪ್ರಸೇನ ಎಂಬವನು ಆ ಮಣಿಯನ್ನು ಧರಿಸಿಕೊಂಡು, ಕುದುರೆಯನ್ನು ಏರಿ, ಶಬರರ ಪಡೆಯೊಂದಿಗೆ ಕಾಡಿಗೆ ಮೃಗ ಬೇಟೆಗೆ ಹೋಗುತ್ತಾನೆ. ಅಲ್ಲಿ ಸಿಂಹವೊಂದನ್ನು ಅಟ್ಟಿಸಿಕೊಂಡು ಹೋದ ಪ್ರಸೇನನು ತನ್ನೊಡನೆ ಬಂದಿದ್ದ ಶಬರ ಪಡೆಯವರಿಂದ ಬೇರ್ಪಟ್ಟು ಬಹು ದೂರ ಸಾಗುತ್ತಾನೆ. ಇತ್ತ ಪ್ರಸೇನನನ್ನು ಹುಡುಕಿ ಹುಡುಕಿ ವಿಫಲರಾದ ಶಬರರು ರಾತ್ರಿಯಾದ ನಂತರ ಅರಮನೆಗೆ ಹಿಂತಿರುಗಿ, ಸತ್ರಾಜಿತನಿಗೆ ಅರಣ್ಯದಲ್ಲಿ ಪ್ರಸೇನನು ಕಾಣೆಯಾದ ವಿಷಯವನ್ನು ತಿಳಿಸುತ್ತಾರೆ. ಆಗ ಸತ್ರಾಜಿತನಿಗೆ ಕೃಷ್ಣನ ನೆನಪಾಗುತ್ತದೆ. “ಸ್ಯಮಂತಕ ಮಣಿಯ ಮೇಲಿನ ಆಸೆಯಿಂದಾಗಿ ಅರಣ್ಯದಲ್ಲಿ ಆ ಕೃಷ್ಣನೇ ನನ್ನ ತಮ್ಮನನ್ನು ಕೊಂದು ಆ ಮಣಿಯನ್ನು ಅಪಹರಿಸಿದ್ದಾನೆ” ಎಂದು ಅಪವಾದವನ್ನು ಹುಟ್ಟಿಸುತ್ತಾನೆ. ಲೋಕದ ಜನರೆಲ್ಲ ಕೃಷ್ಣನೇ ಪ್ರಸೇನನನ್ನು ಕೊಂದು ಮಣಿಯನ್ನು ಅಪಹರಿಸಿದ ಎಂದು ಆಡಿಕೊಳ್ಳಲು ಪ್ರಾರಂಭಿಸುತ್ತಾರೆ.

ಆದರೆ, ನಿಜ ಸಂಗತಿ ಏನೆಂದರೆ ಇನ್ನೇನು ಸಿಂಹವನ್ನು ಹೊಡೆಯಬೇಕು ಎನ್ನುವಷ್ಟರಲ್ಲಿ ಪ್ರಸೇನನ ಮೇಲೆ ದಾಳಿ ಮಾಡಿದ ಆ ಸಿಂಹವು ಅವನನ್ನು ಕೊಂದು ಆ ಮಣಿಯನ್ನು ಕಚ್ಚಿಕೊಂಡು ಹೋಗಿರುತ್ತದೆ. ರಾತ್ರಿಯ ಹೊತ್ತಿನಲ್ಲಿ ಸಿಂಹದ ಬಾಯಿಯಲ್ಲಿ ಅಪಾರ ಪ್ರಭೆಯುಳ್ಳ ಬೆಲೆ ಬಾಳುವ ಮಣಿಯೊಂದು ಇರುವುದನ್ನು ಕಂಡು, ಜಾಂಬವನು ಆ ಸಿಂಹವನ್ನು ಕೊಂದು ಮಣಿಯನ್ನು ತಾನು ತೆಗೆದುಕೊಂಡು ಹೋಗಿ, ತನ್ನ ಗುಹೆಯಲ್ಲಿ ಇರುವ ತನ್ನ ಸಾಕು ಮಗಳಾದ ಜಾಂಬವತಿಗೆ ಕೊಡುತ್ತಾನೆ. ಆಕೆಯು ಅದನ್ನು ತನ್ನ ತಮ್ಮನಾದ ಅರ್ಥಾತ್ ಜಾಂಬವನ ಸಾಕು ಮಗನಾದ ಪ್ರವೀರನ ತೊಟ್ಟಿಲಿನ ಮೇಲ್ಗಡೆಯಲ್ಲಿ ಕಟ್ಟಿರುತ್ತಾಳೆ. ಆದರೆ, ಇದಾವುದೂ ತಿಳಿಯದ ಸತ್ರಾಜಿತನು ಆ ಕೃಷ್ಣನೇ ತನ್ನ ತಮ್ಮನನ್ನು ಕೊಂದು ಮಣಿಯನ್ನು ಅಪಹರಿಸಿದ್ದಾನೆ ಎಂದು ಆರೋಪಿಸುತ್ತಾನೆ. ಚೌತಿಯ ದಿನದಂದು ಚಂದ್ರನನ್ನು ನೋಡಿದ್ದರಿಂದಾಗಿ ಕೃಷ್ಣನಿಗೆ “ಮಣಿಗಳ್ಳ” ಎಂಬ ಅಪವಾದ ಬಂತು.

ಈ ಅಪವಾದವು ನಾರದರ ಮೂಲಕವಾಗಿ ಬಲರಾಮನ ಕಿವಿಗೂ ಬೀಳುತ್ತದೆ. ಬಲರಾಮನು ಕೃಷ್ಣನನ್ನು ಕರೆದು ಕೇಳುತ್ತಾನೆ. ಕೃಷ್ಣನು “ನನಗೇನೂ ಗೊತ್ತಿಲ್ಲ ಅಣ್ಣ. ಅಜ್ಜನಿಗಾಗಿ ನಾನು ಒಮ್ಮೆ ಆ ಮಣಿಯನ್ನು ಕೊಡುವಂತೆ ಕೇಳಿದ್ದು ಹೌದು. ಆದರೆ ಈಗ ಆ ಪ್ರಸೇನ ಬೇಟೆಗೆ ಹೋದ ವಿಷಯವಾಗಲೀ ಆತ ಮರಳಿ ಬಾರದೇ ಇರುವ ವಿಷಯವಾಗಲೀ ಯಾವುದೂ ನನಗೆ ಗೊತ್ತಿಲ್ಲ” ಎನ್ನುತ್ತಾನೆ. ಆಗ ಬಲರಾಮನು “ಹಾಗಿದ್ದರೆ, ಸಾಕ್ಷಿಗಾಗಿ ಕೆಲವು ಮಂದಿ ಯಾದವ ಪ್ರಮುಖರನ್ನು ಕರೆದುಕೊಂಡು, ಆ ಅರಣ್ಯಕ್ಕೆ ತೆರಳಿ ಸತ್ಯ ಏನೆಂಬುದನ್ನು ತಿಳಿದು ಕೊಂಡು ಅಪವಾದದಿಂದ ಮುಕ್ತನಾಗಿ ಬಾ” ಎಂದು ತಮ್ಮನನ್ನು ಹರಸಿ ಕಳುಹಿಸುತ್ತಾನೆ.

ದೇವನಾದ ಶ್ರೀಕೃಷ್ಣನಿಗೂ ಅವನ ಅಣ್ಣನಾದ ಬಲರಾಮನಿಗೂ ನಿಜವಾಗಿ ನಡೆದ ಸಂಗತಿ ಏನು ಎಂಬುದನ್ನು ಕುಳಿತಲ್ಲಿಯೇ ಅರಿತುಕೊಳ್ಳುವ ಸಾಮರ್ಥ್ಯ ಇದ್ದರೂ ಕೂಡಾ ಲೋಕದ ಜನರಿಗೆ ಸತ್ಯದ ಅರಿವಾಗಬೇಕಲ್ಲವೇ? ಹೀಗಾಗಿ ಯಾದವ ಪ್ರಮುಖರಾದ ಕೃತವರ್ಮ, ಸುಜ್ಯೋತಿ, ಸಾತ್ಯಕಿ ಮೊದಲಾದವರೊಡನೆ ಕೃಷ್ಣನು ಅರಣ್ಯಕ್ಕೆ ಹೋಗುತ್ತಾನೆ. ಅಲ್ಲಿ ಪ್ರಸೇನನು ಏರಿಕೊಂಡು ಹೋದ ಕುದುರೆಯ ಹೆಜ್ಜೆಯ ಗುರುತನ್ನೇ ಹಿಡಿದು ಹುಡುಕುತ್ತಾ ಹೋದಾಗ, ಒಂದು ಸರಸಿಯ ಕಡೆಯಲ್ಲಿ ಸತ್ತಿರುವ ಪ್ರಸೇನನ ದೇಹವು ಕಾಣಿಸುತ್ತದೆ. ಅಲ್ಲಿಂದ ಮುಂದೆ ಆ ಸಿಂಹದ ಹೆಜ್ಜೆಯ ಗುರುತನ್ನೇ ಹುಡುಕುತ್ತಾ ಹೋಗುತ್ತಾರೆ. ಅಲ್ಲಿ ಒಂದು ಕಡೆ ಸಿಂಹಕ್ಕೂ ಕರಡಿಯೊಂದಕ್ಕೂ ಯುದ್ಧವಾದ ಕುರುಹುಗಳು ಕಾಣಿಸುತ್ತವೆ. ತನ್ನೊಡನೆ ಬಂದ ಯಾದವರಿಗೆ ಆ ಕುರುಹುಗಳನ್ನೆಲ್ಲ ತೋರಿಸಿದ ಕೃಷ್ಣನು ಮುಂದೆ ಕರಡಿಯ ಹೆಜ್ಜೆಯ ಗುರುತನ್ನು ಹಿಡಿದು ಸಾಗುತ್ತಾನೆ. ಆ ಕರಡಿಯು ಗುಹೆಯೊಂದರ ಒಳಗೆ ಸಾಗಿದ ಚಿಹ್ನೆಗಳು ಕಾಣಿಸುತ್ತವೆ.

ಅದು ಜಾಂಬವ ವಾಸಿಸುವ ಗುಹೆ. ಈ ಜಾಂಬವನೆಂದರೆ ಅಂದು ರಾಮಾಯಣ ಕಾಲದಲ್ಲಿ ಶ್ರೀರಾಮನೊಡನೆ ಇದ್ದು ರಾವಣನ ರಾಕ್ಷಸ ಸೇನೆಯೊಡನೆ ಹೋರಾಡಿದ ಅದೇ ರಾಮ ಭಕ್ತನಾದ ಜಾಂಬವ. ಅಂದು ಶ್ರೀರಾಮನು ತನ್ನ ಅವತಾರವನ್ನು ಪರಿಸಮಾಪ್ತಿ ಮಾಡುವಾಗ ಅಳುತ್ತಿರುವ ಜಾಂಬವನ ಮೈದಡವಿ “ಯುಗ ಯುಗಾಂತರಗಳಲ್ಲಿಯೂ ನಿನಗೆ ಶ್ರೀರಾಮನ ದರ್ಶನ ಭಾಗ್ಯವನ್ನು ಕರುಣಿಸುತ್ತೇನೆ” ಎಂದು ಮಾತು ಕೊಟ್ಟಿದ್ದನು. ಈಗ ಆ ಜಾಂಬವನಿಗೆ ತನ್ನ ಶ್ರೀರಾಮರೂಪವನ್ನು ತೋರಿಸುವ ಕಾಲ ಬಂದಿದೆ ಎಂಬುದನ್ನು ಅರಿತ ಶ್ರೀಕೃಷ್ಣನು ತನ್ನೊಡನೆ ಬಂದ ಯಾದವರನ್ನೆಲ್ಲ ಗುಹೆಯ ಹೊರಗಡೆ ನಿಲ್ಲಿಸಿ ತಾನೊಬ್ಬನೇ ಗುಹೆಯ ಒಳಗಡೆ ಪ್ರವೇಶಿಸುತ್ತಾನೆ. ಹೀಗಾಗಿ ಶ್ರೀಕೃಷ್ಣನ ಶ್ರೀರಾಮ ರೂಪವನ್ನು ನೋಡುವ ಭಾಗ್ಯ ಆ ಯಾದವರಿಗೆ ಇಲ್ಲವಾಯಿತು.

ಒಳಗಡೆ ಹೋದಾಗ ಕತ್ತಲು ಆವರಿಸಿದ್ದ ಗುಹೆಯೊಳಗೆ ಹಗಲಿನಷ್ಟೇ ಪ್ರಭೆ ಇತ್ತು. ಅದು ಆ ಸ್ಯಮಂತಕ ಮಣಿಯ ಪ್ರಭಾವ. ಆ ಮಣಿಯನ್ನು ತರಳನಾದ ಪ್ರವೀರನ ತೊಟ್ಟಿಲ ಮೇಲ್ಗಡೆಯಲ್ಲಿ ಕಟ್ಟಲಾಗಿತ್ತು. ಜಾಂಬವನ ಸಾಕು ಕುವರಿ ಜಾಂಬವತಿಯು ಹಾಡು ಹೇಳುತ್ತಾ ಆ ತೊಟ್ಟಿಲನ್ನು ತೂಗಿ ತನ್ನ ತಮ್ಮನನ್ನು ಮಲಗಿಸಲು ಯತ್ನಿಸುತ್ತಿದ್ದಳು. ಜಾಂಬವನು ಕಾಣಿಸದೇ ಇದ್ದಾಗ ಕೃಷ್ಣನು ತನ್ನ ಪಾಂಚಜನ್ಯವನ್ನು ಮೊಳಗಿಸುತ್ತಾನೆ. ಅದರ ಧ್ವನಿಗೆ ಹೆದರಿದ ಜಾಂಬವತಿಯು ಅಳುತ್ತಾಳೆ. ಆಗ ಒಳಗಡೆ ಇದ್ದ ಜಾಂಬವನು ಓಡಿ ಬರುತ್ತಾನೆ. ಕೃಷ್ಣನು ಆ ಮಣಿಯನ್ನು ತನಗೆ ಕೊಡುವಂತೆ ಕೇಳುತ್ತಾನೆ. ಜಾಂಬವನು ಶ್ರೀರಾಮನನ್ನು ದೇವರೆಂದು ನಂಬಿ ಆತನ ಧ್ಯಾನದಲ್ಲಿಯೇ ಇದ್ದವನು ಹೊರತು ಶ್ರೀಕೃಷ್ಣನ ಪರಿಚಯ ಆತನಿಗೆ ಇರಲಿಲ್ಲ. ಹೀಗಾಗಿ ಜಾಂಬವನು ಮಣಿಯನ್ನು ಕೊಡಲು ಒಪ್ಪುವುದಿಲ್ಲ. ಆಗ ಜಾಂಬವನಿಗೂ ಕೃಷ್ಣನಿಗೂ ಯುದ್ಧವಾಗುತ್ತದೆ. ಯುದ್ಧದಲ್ಲಿ ಜಾಂಬವನಿಗೆ ಸೋಲಾಗುತ್ತದೆ. ಶ್ರೀರಾಮನ ಭಕ್ತನಾದ ನನಗೆ ಯಃಕಶ್ಚಿತ್ ಒಬ್ಬ ಮಾನವನಿಂದ ಸೋಲಾಯಿತಲ್ಲ ಎಂದು ಆತನು ಅಳುತ್ತಾನೆ.

ತನ್ನ ಭಕ್ತನಾದ ಜಾಂಬವನು ಅಳುತ್ತಿರುವುದನ್ನು ನೋಡಿ ಸಹಿಸಿಕೊಳ್ಳಲಾರದೇ ಕೃಷ್ಣನು ಶ್ರೀರಾಮನ ರೂಪವನ್ನು ತಾಳಿ ಜಾಂಬವನ ಇದಿರಿನಲ್ಲಿ ಪ್ರತ್ಯಕ್ಷನಾಗುತ್ತಾನೆ. ಶ್ರೀರಾಮನನ್ನು ನೋಡಿದ ಜಾಂಬವನು ರಾಮನ ಭಜನೆ ಮಾಡುತ್ತಾ ಆನಂದದಿಂದ ಕುಣಿದಾಡುತ್ತಾನೆ. ಶ್ರೀರಾಮನ ಮತ್ತೊಂದು ಅವತಾರವೇ ಶ್ರೀಕೃಷ್ಣನ ರೂಪ ಎಂಬುದನ್ನು ತಿಳಿದು ಒಂದೆಡೆಯಲ್ಲಿ ಸಂತೋಷಪಟ್ಟರೆ, ಇನ್ನೊಂದೆಡೆಯಲ್ಲಿ ತನ್ನ ದೇವರೊಡನೆ ತಾನೇ ಹೋರಾಡಿದೆನಲ್ಲಾ ಎಂದು ಪಶ್ಚಾತ್ತಾಪ ಪಡುತ್ತಾನೆ. ಹೀಗೆ ಹೋರಾಡಿದ ತಪ್ಪಿನ ಪರಿಮಾರ್ಜನೆಗಾಗಿ ಆ ಸ್ಯಮಂತಕ ಮಣಿಯನ್ನು ಅವನಿಗೆ ಅರ್ಪಿಸುತ್ತಾನೆ. ಮಾತ್ರವಲ್ಲದೇ ತನ್ನ ಸಾಕು ಮಗಳಾದ ಜಾಂಬವತಿಯನ್ನು ಕೃಷ್ಣನಿಗೆ ಕೊಟ್ಟು ಮದುವೆ ಮಾಡಿಸುತ್ತಾನೆ. ಜಾಂಬವತಿಯನ್ನು ಕೃಷ್ಣನು ತನ್ನ ಅಷ್ಟ ಮಹಿಷಿಯರಲ್ಲಿ ಒಬ್ಬಳಾಗಿ ಸ್ವೀಕರಿಸುತ್ತಾನೆ.

ನಂತರ ಎಲ್ಲರೂ ಗುಹೆಯ ಹೊರಗಡೆ ಬಂದು ಅಲ್ಲಿ ಕಾದಿದ್ದ ಯಾದವ ಪ್ರಮುಖರಿಗೆ ವಿಷಯಗಳನ್ನು ವಿವರವಾಗಿ ತಿಳಿಸುತ್ತಾರೆ. ನಂತರ ಕೃಷ್ಣನು ಎಲ್ಲರೊಡನೆ ತೆರಳಿ ಸತ್ರಾಜಿತನಿಗೆ ಆ ಮಣಿಯನ್ನು ಒಪ್ಪಿಸಿ, ನಡೆದಿರುವ ಸತ್ಯ ವಿಷಯಗಳನ್ನೆಲ್ಲ ತಿಳಿಸಿ ಅಪವಾದದಿಂದ ಮುಕ್ತನಾಗುತ್ತಾನೆ. ಕೃಷ್ಣನ ಮೇಲೆ ಅಪವಾದ ಹೊರಿಸಿದ ತಪ್ಪಿನ ಪರಿಮಾರ್ಜನೆಗಾಗಿ ಸತ್ರಾಜಿತನು ತನ್ನ ಕುವರಿಯಾದ ಸತ್ಯಭಾಮೆಯನ್ನು ಕೃಷ್ಣನಿಗೆ ಕೊಟ್ಟು ಮದುವೆ ಮಾಡಿಸುತ್ತಾನೆ. ಕೃಷ್ಣನು ಆಕೆಯನ್ನೂ ಕೂಡಾ ತನ್ನ ಅಷ್ಟ ಮಹಿಷಿಯರಲ್ಲಿ ಒಬ್ಬಳಾಗಿ ಸ್ವೀಕರಿಸುತ್ತಾನೆ.

✍ ಹರಿಕೃಷ್ಣ ಹೊಳ್ಳ, ಬ್ರಹ್ಮಾವರ

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

ನವೀನ ಹಳೆಯದು