ತುಳಸಿ ಒಲ್ಲದ ಗಣೇಶನು ಮದುವೆಯಾದರೂ ಬ್ರಹ್ಮಚಾರಿ ಹೇಗೆ?

ಪುರಾಣ ತಿಳಿಯೋಣ: ಗಣಪತಿಯು ಪ್ರಥಮ ವಂದ್ಯ. ಗಣೇಶನು ಇಕ್ಷು ಚಾಪನ ಗೆಲಿದ ಕಥೆ, ಇಬ್ಬರು ಹೆಂಡಿರಿದ್ದರೂ ಬ್ರಹ್ಮಚಾರಿ ಎಂದು ಕರೆಸಿಕೊಳ್ಳುವ ಬಗೆ ಹೇಗೆ? ಪೌರಾಣಿಕ ಮಾಹಿತಿ ನೀಡಿದ್ದಾರೆ ಹರಿಕೃಷ್ಣ ಹೊಳ್ಳ, ಬ್ರಹ್ಮಾವರ
ಧರ್ಮಸ್ಥಳ ಯಕ್ಷಗಾನ ಮೇಳದಲ್ಲಿ ಪೂಜೆಗೊಳ್ಳುವ ಕಾರಣಿಕದ ಗಣೇಶ
ಇಕ್ಷುಚಾಪನ ಗೆಲಿದವ
ಒಮ್ಮೆ ತುಳಸಿಯು ತಪಸ್ಸನ್ನು ಆಚರಿಸುತ್ತಿರುವ ಗಣಪತಿಯನ್ನು ನೋಡಿ ಮೋಹಿತಳಾಗುತ್ತಾಳೆ. ಅವನನ್ನು ಒಲಿಸಿಕೊಳ್ಳಲು ಹಲವು ಪ್ರಯತ್ನಗಳನ್ನು ಮಾಡುತ್ತಾಳೆ. ಆತನ ಇದಿರಿನಲ್ಲಿ ಇಂಪಾಗಿ ಗಾಯನ ಹಾಡುತ್ತಾಳೆ. ಅನೇಕ ರೀತಿಯ ಹಾವ ಭಾವಗಳಿಂದ ನೃತ್ಯ ಮಾಡುತ್ತಾಳೆ. ಗೆಜ್ಜೆಯನ್ನು ಕುಣಿಸಿ ಸದ್ದು ಮಾಡುತ್ತಾಳೆ. ಹೀಗೆ  ಹಲವು ಚೇಷ್ಟೆಗಳನ್ನು ಮಾಡುತ್ತಾಳೆ. ಆದರೆ ಗಣಪತಿಯು ಇವಳ ಯಾವ ಚೇಷ್ಟೆಗೂ ಬಗ್ಗದೇ ಇದ್ದಾಗ ತುಳಸಿಯು ಮನ್ಮಥನ ಸಹಾಯವನ್ನು ಕೇಳುತ್ತಾಳೆ. ಮನ್ಮಥನು ಗಣಪತಿಯ ತಪಸ್ಸನ್ನು ಕೆಡಿಸಲು ತನ್ನ ಪಂಚ ಬಾಣಗಳನ್ನು ಅವನ ಮೇಲೆ ಪ್ರಯೋಗಿಸುತ್ತಾನೆ. ಆದರೆ ಮನ್ಮಥನ ಬಾಣಗಳು ಗಣಪತಿಯ ಮನಸ್ಸನ್ನು ವಿಚಲಿತಗೊಳಿಸಲಾಗದೇ ಸೋಲುತ್ತವೆ. ಹೀಗೆ ಸೋತಂತಹ ಕಾಮನು ತುಳಸಿಯಲ್ಲಿ ತನ್ನಿಂದ ಇನ್ನು ಸಾಧ್ಯವಿಲ್ಲ ಎಂದು ಹೇಳಿ ಹೊರಟು ಹೋಗುತ್ತಾನೆ. 

ಇಕ್ಷು ಅಂದರೆ ಕಬ್ಬು, ಚಾಪ ಅಂದರೆ ಬಿಲ್ಲು, ಇಕ್ಷುಚಾಪ ಅಂದರೆ ಕಬ್ಬನ್ನು ಬಿಲ್ಲಾಗಿ ಹಿಡಿದವನು ಅಂದರೆ ಕಬ್ಬಿಲ್ಲನಾದ ಮನ್ಮಥ ಎಂದರ್ಥ. ಹೀಗೆ ಗಣಪತಿಯು ಇಕ್ಷುಚಾಪನಾದ ಮನ್ಮಥನನ್ನು ಗೆಲಿದವನಾಗುತ್ತಾನೆ. ಇದರಿಂದ ಸಿಟ್ಟಾದ ತುಳಸಿಯು ಗಣಪತಿಗೆ ಶಾಪವನ್ನು ಕೊಡುತ್ತಾಳೆ. “ನೀನು ನಿನ್ನ ಸುಂದರ ರೂಪದಿಂದ ಅಹಂಕಾರ ಪಡುತ್ತಿರುವಿ. ಆದ್ದರಿಂದ ನಿನ್ನ ಸೌಂದರ್ಯಕ್ಕೆ ಕಾರಣವಾದ ಈ ದಂತಗಳಲ್ಲಿ ಒಂದು ದಂತವು ಮುಂದೆ ಪರಶುರಾಮನೊಡನೆ ನಡೆಯುವ ಯುದ್ಧದಲ್ಲಿ ಮುರಿಯಲಿ” ಎಂದು ಶಾಪವನ್ನು ಕೊಡುತ್ತಾಳೆ. ಆಗ ತಪಸ್ಸಿನಿಂದ ಎಚ್ಚೆತ್ತ ಗಣಪತಿಗೂ ಸಿಟ್ಟು ಬರುತ್ತದೆ. ಸಿಟ್ಟಾದ ಗಣಪತಿಯು “ನೀನು ಗಿಡವಾಗಿ ಹುಟ್ಟು” ಎಂದು ತುಲಸಿಗೆ ಪ್ರತಿ ಶಾಪವನ್ನು ಕೊಡುತ್ತಾನೆ. ಆಗ ತುಳಸಿಯು ದುಃಖದಿಂದ ಗಣಪತಿಯಲ್ಲಿ ಕ್ಷಮೆ ಕೇಳಿ ನನಗೆ ಅನುಗ್ರಹ ಮಾಡಬೇಕು ಎಂದು ಪ್ರಾರ್ಥಿಸುತ್ತಾಳೆ. ಗಣಪತಿಯು 'ನೀನು ಗಿಡವಾಗಿ ಹುಟ್ಟಿದರೂ ವಿಷ್ಣುವಿಗೆ ಅತ್ಯಂತ ಪ್ರಿಯಳಾಗುತ್ತೀ. ಆದರೆ ನಾನು ಮಾತ್ರ ಎಂದೆಂದಿಗೂ ನಿನ್ನನ್ನು ಸ್ವೀಕರಿಸುವುದಿಲ್ಲ' ಎಂದು ಹೇಳುತ್ತಾನೆ. ಆದ್ದರಿಂದ ಗಣಪತಿಗೆ ತುಳಸಿಯನ್ನು ಹಾಕಬಾರದು ಎಂಬ ಸಂಪ್ರದಾಯ ಬಂದಿದೆ. ಆದರೂ ವಿಷ್ಣುವಿಗೆ ಅರ್ಪಿಸಿದ ನಂತರ ಆ ತುಳಸಿಯನ್ನು ಗಣೇಶನಿಗೆ ಅರ್ಪಿಸಬಹುದು ಎಂದು ಪ್ರಾಜ್ಞರು ಹೇಳುತ್ತಾರೆ.
ವಿದ್ಯಾಧಿಪತಿದೇವ
ವಿದ್ಯಾದೇವತೆ ಯಾರು? ಎಂದು ಕೇಳಿದರೆ ಅದು ಬ್ರಹ್ಮನ ರಾಣಿಯಾದ ಸರಸ್ವತೀ ದೇವಿಯೇ. ಆ ಬಗ್ಗೆ ಸಂಶಯ ಬೇಡ. ಹಾಗಾದರೆ, “ವಿದ್ಯಾಧಿಪತಿದೇವ ಶಿವಸುತಂ ಗಣಪತಿಯೆ....” ಎಂದು ಗಣಪತಿಯನ್ನು ಹೊಗಳಿ ಹಾಡುತ್ತಾರಲ್ಲಾ, ಅದು ಯಾಕೆ? ಎಂದರೆ ಯಾರೇ ಆಗಲಿ ವಿದ್ಯಾಭ್ಯಾಸವನ್ನು ಆರಂಭಿಸುವಾಗ ಮೊದಲು ಬರೆಸುವುದು “ಓಂ ಗಣಾಧಿಪತಯೇ ನಮಃ” ಎಂಬ ವಾಕ್ಯವನ್ನು. ಅದಾದ ಬಳಿಕ  “ಸರಸ್ವತೀ ನಮಸ್ತುಭ್ಯಂ ವರದೇ ಕಾಮರೂಪಿಣೀಂ | ವಿದ್ಯಾರಂಭಂ ಕರಿಷ್ಯಾಮಿ ಸಿದ್ಧಿರ್ಭವತು ಮೇ ಸದಾ|” ಎಂಬ ಶ್ಲೋಕವನ್ನು ಬರೆಸುತ್ತಾರೆ. ಹೀಗೆ ಗಣಪತಿಯ ಆರಾಧನೆ ಇಲ್ಲದೇ ವಿದ್ಯಾರಂಭ ಸಾಧ್ಯವಿಲ್ಲ. ಹೀಗಾಗಿ ಗಣಪತಿಯನ್ನು ವಿದ್ಯಾಧಿಪತಿದೇವ ಎಂದು ಕರೆಯುತ್ತಾರೆ. 

ಗಣಪತಿ ಮದುವೆ
ಪುತ್ರರಿಬ್ಬರೂ ಪ್ರಾಯಕ್ಕೆ ಬಂದಾಗ ಶಿವಪಾರ್ವತಿಯರು ಮಕ್ಕಳಿಗೆ ಮದುವೆ ಮಾಡಿಸಬೇಕೆಂದು ಆ ವಿಷಯದಲ್ಲಿ ಆಲೋಚಿಸತೊಡಗಿದರು. ಇದನ್ನು ತಿಳಿದ ಷಣ್ಮುಖ ಮತ್ತು ಗಣಪತಿಯರು ಮೊದಲು ನಾನು ಮದುವೆಯಾಗುತ್ತೇನೆ - ಮೊದಲು ತಾನು ಮದುವೆಯಾಗುತ್ತೇನೆ ಎಂದು ಪೈಪೋಟಿಗೆ ನಿಂತವರಂತೆ ಕುಣಿದಾಡತೊಡಗಿದರು. ಆಗ ಶಿವಪಾರ್ವತಿಯರು ತಮ್ಮೊಳಗೆ ಪರಸ್ಪರ ಸಮಾಲೋಚಿಸಿಕೊಂಡು ಮಕ್ಕಳಿಬ್ಬರನ್ನೂ ಹತ್ತಿರ ಕರೆದು “ಮಕ್ಕಳೇ, ನಮಗೆ ನೀವಿಬ್ಬರೂ ಸಮಾನರು. ಹೀಗಾಗಿ ನಿಮ್ಮಿಬ್ಬರ ಮದುವೆಯ ವಿಷಯವಾಗಿ ನಾವು ಒಂದು ತೀರ್ಮಾನಕ್ಕೆ ಬಂದಿದ್ದೇವೆ. ನಮ್ಮ ಈ ತೀರ್ಮಾನದಿಂದ ನಿಮ್ಮಿಬ್ಬರಿಗೂ ಮುಂದೆ ಸುಖವಾಗಲಿದೆ” ಎನ್ನುತ್ತಾರೆ.

ಪುತ್ರರಿಬ್ಬರೂ ಬಹಳ ಕುತೂಹಲದಿಂದ ಅದೇನೆಂದು ಕೇಳುತ್ತಾರೆ. ಆಗ ಶಿವಪಾರ್ವತಿಯರು “ಮೊದಲು ನೀವಿಬ್ಬರೂ ಈ ಪೃಥ್ವಿಯನ್ನು ಒಮ್ಮೆ ಸುತ್ತಿ ಬರಬೇಕು. ನಿಮ್ಮಿಬ್ಬರಲ್ಲಿ ಯಾರು ಮೊದಲು ಭೂಪ್ರದಕ್ಷಿಣೆ ಮಾಡಿ ಬರುತ್ತಾರೋ ಅವರಿಗೆ ಮೊದಲು ಮದುವೆ ಮಾಡಿಸುತ್ತೇವೆ” ಎನ್ನುತ್ತಾರೆ. ತಂದೆತಾಯಿಯರ ಈ ಮಾತನ್ನು ಕೇಳಿದ ಕೂಡಲೇ ಷಣ್ಮುಖನು ತನ್ನ ವಾಹನವಾದ ನವಿಲನ್ನು ಏರಿ ಭೂಪ್ರದಕ್ಷಿಣೆಗೆಂದು ಹೊರಟೇಬಿಡುತ್ತಾನೆ.

ಆದರೆ, ಬುದ್ಧಿವಂತನಾದ ಗಣೇಶನು ಇನ್ನೂ ಅಲ್ಲೇ ಕುಳಿತು ಆಲೋಚಿಸುತ್ತಾನೆ. ತಾನು ತನ್ನ ವಾಹನವಾದ ಇಲಿಯನ್ನು ಏರಿ ಹೊರಟರೆ ಹೇಗೂ ಷಣ್ಮುಖನನ್ನು ಹಿಂದಿಕ್ಕಲು ಸಾಧ್ಯ ಇಲ್ಲ. ಆದರೂ ತಾನು ಈ ಸ್ಪರ್ಧೆಯನ್ನು ಗೆಲ್ಲಲೇಬೇಕು. ಏನು ಮಾಡಲಿ? ಎಂದು ಆಲೋಚಿಸುತ್ತಾ, ಒಂದು ಉಪಾಯವನ್ನು ಮಾಡುತ್ತಾನೆ.

ಆತನು ಕೂಡಲೇ ಹೋಗಿ ಸ್ನಾನ ಮಾಡಿ ಬರುತ್ತಾನೆ. ತಂದೆತಾಯಿ ಇಬ್ಬರನ್ನೂ ಮಣೆ ಹಾಕಿ ಕುಳ್ಳಿರಿಸುತ್ತಾನೆ. ವಿಧಿವತ್ತಾಗಿ ತಂದೆತಾಯಿಯರಿಗೆ ಪೂಜೆಯನ್ನು ಸಲ್ಲಿಸಿ, ಏಳು ಬಾರಿ ಅವರಿಗೆ ಪ್ರದಕ್ಷಿಣೆ ಬಂದು, ಏಳುಬಾರಿ ಉದ್ದಂಡವಾಗಿ ಅವರಿಗೆ ನಮಸ್ಕರಿಸುತ್ತಾನೆ. ಮತ್ತು ತಂದೆತಾಯಿಯರಲ್ಲಿ ಹೀಗೆನ್ನುತ್ತಾನೆ- “ಅಪ್ಪಾ, ತಂದೆತಾಯಿಯರನ್ನು ಪೂಜಿಸಿ, ಅವರಿಗೆ ಏಳು ಬಾರಿ ಪ್ರದಕ್ಷಿಣ ನಮಸ್ಕಾರಗಳನ್ನು ಸಲ್ಲಿಸಿದರೆ ಅದು ಏಳು ಬಾರಿ ಭೂಪ್ರದಕ್ಷಿಣೆ ಬಂದುದಕ್ಕೆ ಸಮ ಮತ್ತು ತಂದೆತಾಯಿಯರನ್ನು ಮನೆಯಲ್ಲಿಯೇ ಬಿಟ್ಟು ತೀರ್ಥಯಾತ್ರೆಗೆ ಹೋದರೆ ಅಂದರೆ ಭೂಪ್ರದಕ್ಷಿಣೆ ಮಾಡಿದರೆ ಅದು ತಂದೆತಾಯಿಯರನ್ನು ಹತ್ಯೆಗೈದುದಕ್ಕೆ ಸಮ ಎಂಬುದಾಗಿ ವೇದ ಮತ್ತು ಶಾಸ್ತ್ರಗಳಲ್ಲಿ ಹೇಳಿದೆ ಅಲ್ಲವೇ? ಪುತ್ರನಾದವನಿಗೆ ತಂದೆತಾಯಿಯರ ಪಾದಸೇವೆಯ ತೀರ್ಥ ಮತ್ತು ಸ್ತ್ರೀಯಾದವಳಿಗೆ ಪತಿಯ ಪಾದಸೇವೆಯ ತೀರ್ಥವೇ ಎಲ್ಲಾ ತೀರ್ಥಕ್ಷೇತ್ರಗಳ ಪುಣ್ಯತೀರ್ಥಕ್ಕಿಂತ ಹೆಚ್ಚು ಶ್ರೇಷ್ಠವಾದುದು ಅಲ್ಲವೇ? ಹೀಗಾಗಿ ವೇದಶಾಸ್ತ್ರಗಳ ಪ್ರಕಾರ ನಾನು ಭೂಪ್ರದಕ್ಷಿಣೆ ಬಂದಂತೆಯೇ ಆಯಿತು. ಅಂದರೆ ನಾನೇ ಈ ಸ್ಪರ್ಧೆಯನ್ನು ಗೆದ್ದಂತಾಯಿತು. ಆದ್ದರಿಂದ ನನಗೇ ಮೊದಲು ಮದುವೆ ಮಾಡಿ” ಎನ್ನುತ್ತಾನೆ.

ಮಗನ ಈ ಮಾತುಗಳಿಗೆ ನಕ್ಕು ಸಂತುಷ್ಟರಾದ ಶಿವಪಾರ್ವತಿಯರು ಕೂಡಲೇ ಪ್ರಜಾಪತಿ ವಿಶ್ವರೂಪನ ಮಕ್ಕಳಾದ ಸಿದ್ಧಿ ಮತ್ತು ಬುದ್ಧಿಯರನ್ನು ಗಣಪತಿಗೆ ಕೊಟ್ಟು ವಿವಾಹವನ್ನು ಏರ್ಪಡಿಸುವುದೆಂದು ನಿರ್ಣಯಿಸುತ್ತಾರೆ. ವಿಶ್ವರೂಪನೂ ಕೂಡಾ ಪರಶಿವನ ಯೋಗ್ಯತೆಗೆ ಅನುಸಾರವಾಗಿ ವಿಜೃಂಭಣೆಯಿಂದ ಮದುವೆಯನ್ನು ಮಾಡಿಸುತ್ತಾನೆ. ಗಣೇಶನ ಮದುವೆಗೆ ದೇವಾನುದೇವತೆಗಳೆಲ್ಲರೂ ಆಗಮಿಸುತ್ತಾರೆ. ಬ್ರಹ್ಮ ಮತ್ತು ವಿಷ್ಣು ಕೂಡಾ ಆಗಮಿಸುತ್ತಾರೆ. ಜೋಡಿ ಕನ್ಯೆಯರೊಡನೆ ಗಣಪತಿಯ ಮದುವೆಯು ಬಹಳ ವೈಭವದಿಂದ ನೆರವೇರುತ್ತದೆ. ಮಾತ್ರವಲ್ಲದೇ ಮದುವೆಯಾಗಿ ಕೆಲವು ಕಾಲಾನಂತರ ಸಿದ್ಧಿಗೆ “ಕ್ಷೇಮ” ಎಂಬ ಮಗನೂ ಮತ್ತು ಬುದ್ಧಿಗೆ “ಲಾಭ” ಎಂಬ ಮಗನೂ ಜನಿಸುತ್ತಾರೆ.

ಇತ್ತ ಗಣಪತಿಯು ಇಬ್ಬರು ಪತ್ನಿಯರು ಹಾಗೂ ಇಬ್ಬರು ಪುತ್ರರೊಡನೆ ಆನಂದದಿಂದ ಸಂಸಾರ ಸಾಗಿಸುತ್ತಿರುವಾಗ ಅತ್ತಲಿಂದ ಷಣ್ಮುಖನು ಭೂಪ್ರದಕ್ಷಿಣೆಯನ್ನು ಮುಗಿಸಿ ಹಿಂತಿರುಗುತ್ತಾನೆ. ವಿಷಯವನ್ನು ತಿಳಿದು ಆತನಿಗೆ ತುಂಬಾ ಬೇಸರವಾಗುತ್ತದೆ. ತಂದೆತಾಯಿಯರು ಎಷ್ಟೇ ಹೇಳಿದರೂ ಕೇಳದೇ ಆತನು ಕೋಪಿಸಿಕೊಂಡು ಕ್ರೌಂಚ ಪರ್ವತಕ್ಕೆ ಹೋಗಿ ಅಲ್ಲಿ ತಪೋನಿರತನಾಗಿ ಕುಳಿತುಕೊಳ್ಳುತ್ತಾನೆ.

ಬ್ರಹ್ಮಚಾರಿ ಗಣಪತಿ
ಇಬ್ಬರು ಹೆಂಡಿರಿದ್ದರೂ ಕೂಡಾ ಗಣಪತಿಯನ್ನು “ಬ್ರಹ್ಮಚಾರಿ” ಎನ್ನುತ್ತಾರಲ್ಲ. ಅದು ಹೇಗೆ? ಎಂಬ ಪ್ರಶ್ನೆ ಮೂಡುತ್ತದೆ. ಬ್ರಹ್ಮಚಾರಿ ಅಂದರೆ ಸುಖ ಭೋಗದ ಏಕೈಕ ಕಾರಣಕ್ಕಾಗಿ ಹೆಣ್ಣಿನ ಸಂಪರ್ಕ ಮಾಡದೇ ಇದ್ದವನು ಎಂದರ್ಥ. ಹೀಗಾಗಿ ಮದುವೆ ಆಗದೇ ಇರುವವನು ಸಾಮಾನ್ಯವಾಗಿ ಬ್ರಹ್ಮಚಾರಿ ಎನಿಸಿಕೊಳ್ಳುತ್ತಾನೆ. ಆದರೆ ಮದುವೆಯಾಗದೇ ಇದ್ದರೂ ಸುಖ ಭೋಗಕ್ಕಾಗಿ ಹೆಣ್ಣಿನ ಸಂಪರ್ಕ ಮಾಡಿದವನಿದ್ದರೆ ಅವನು ನಿಜವಾದ ಬ್ರಹ್ಮಚಾರಿ ಅಲ್ಲ. ನೋಡುವವರ ಕಣ್ಣಿಗಷ್ಟೇ ಅವನು ಬ್ರಹ್ಮಚಾರಿ. ಅದೇರೀತಿ ಮದುವೆ ಆಗಿಯೂ ಕೇವಲ ಸಂತಾನ ಪ್ರಾಪ್ತಿಗಾಗಿ ಮಾತ್ರ ಹೆಣ್ಣನ್ನು ಕೂಡಿದ್ದು, ಇತರ ಸಂದರ್ಭಗಳಲ್ಲಿ ಕೇವಲ ಸುಖಕ್ಕಾಗಿ ಹೆಣ್ಣನ್ನು ಬಳಸಿಕೊಳ್ಳದೇ ಇದ್ದವನು ಇದ್ದರೆ ಅವನೂ ಬ್ರಹ್ಮಚಾರಿಯೇ ಎನಿಸಿಕೊಳ್ಳುತ್ತಾನೆ. ಅಂತಹ ಬ್ರಹ್ಮಚಾರಿಗಳ ಸಾಲಲ್ಲಿ ಗಣಪತಿ ಬರುತ್ತಾನೆ. ಸಿದ್ಧಿ ಮತ್ತು ಬುದ್ಧಿಯರೆಂಬ ಇಬ್ಬರು ಹೆಂಡಿರು ಇದ್ದೂ ಕೂಡಾ ಗಣಪತಿಯು ಬ್ರಹ್ಮಚಾರಿ ಎನಿಸಿಕೊಂಡದ್ದು ಹೀಗೆ. ಹದಿನಾರು ಸಾವಿರದ ನೂರೆಂಟು ಹೆಂಡಿರಿದ್ದೂ ಶ್ರೀಕೃಷ್ಣನು ಬ್ರಹ್ಮಚಾರಿ ಎನಿಸಿಕೊಂಡದ್ದು ಕೂಡಾ ಈ ಅರ್ಥದಲ್ಲಿಯೇ.

 ಹರಿಕೃಷ್ಣ ಹೊಳ್ಳ, ಬ್ರಹ್ಮಾವರ

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

ನವೀನ ಹಳೆಯದು