ಪುರಾಣ ತಿಳಿಯೋಣ: ಪಾರ್ವತಿಯು ಸ್ವರ್ಣ ಗೌರಿಯಾಗಿದ್ದೇಕೆ?

ಸ್ವರ್ಣಗೌರೀ ವ್ರತ – ಗೌರಿ ಹಬ್ಬ – ಗೌರೀ ತೃತೀಯಾ ಬಗ್ಗೆ ಪೌರಾಣಿಕ ಕಥನದೊಂದಿಗೆ ಮಾಹಿತಿ ನೀಡಿದ್ದಾರೆ ಹರಿಕೃಷ್ಣ ಹೊಳ್ಳ, ಬ್ರಹ್ಮಾವರ

ಪ್ರಪಂಚದೆಲ್ಲೆಡೆಯೂ ವೈಭವದಿಂದ ಆಚರಿಸಲ್ಪಡುವ ಹಬ್ಬಗಳಲ್ಲಿ ಈ ಚೌತಿ ಹಬ್ಬವು ಒಂದಾಗಿದೆ. ಪ್ರತಿ ವರ್ಷದ ಭಾದ್ರಪದ ಮಾಸದ ಶುಕ್ಲಪಕ್ಷದ ಚೌತಿಯ ದಿನದಂದು ಈ ಹಬ್ಬವನ್ನು ಆಚರಿಸಲಾಗುತ್ತದೆ. ಈ ಚೌತಿ ಹಬ್ಬವು ಎಷ್ಟು ಮುಖ್ಯವೋ ಅಷ್ಟೇ ಮುಖ್ಯವಾದುದು ಅದರ ಹಿಂದಿನ ದಿನದ ಅಂದರೆ ತದಿಗೆಯ ದಿನದ ಸ್ವರ್ಣ ಗೌರೀ ವ್ರತ ಆಚರಣೆಯ ಹಬ್ಬ ಅಥವಾ ಗೌರಿ ಹಬ್ಬ ಅಥವಾ ಗೌರೀತೃತೀಯಾ. 

ಗಣೇಶ ಹಬ್ಬದ ರೀತಿಯಲ್ಲಿ ವಿಜೃಂಭಣೆಯಿಂದ ಆಚರಿಸದಿದ್ದರೂ ಸರಳವಾಗಿ ಭಕ್ತಿಯಿಂದ ಇದನ್ನು ಆಚರಿಸಲಾಗುತ್ತದೆ. ಹಿಂದಿನ ದಿನ ತಾಯಿ ಪಾರ್ವತಿಯ ಅಂದರೆ ಸ್ವರ್ಣಗೌರಿಯ ಹಬ್ಬವಾದರೆ ಮಾರನೇ ದಿನವೇ ಮಗ ಗಣೇಶನ ಹಬ್ಬ. ಹಿಂದಿನ ದಿನ ತವರಿಗೆ ಬಂದ ತಾಯಿಯನ್ನು ಮರಳಿ ಕರೆದುಕೊಂಡು ಹೋಗುವ ಕೆಲಸ ಗಣಪನದಾಗಿರುವುದರಿಂದ, ತಾಯಿ ಭೂಲೋಕಕ್ಕೆ ಬಂದ ಮಾರನೆ ದಿನವೇ ಗಣಪತಿಯೂ ಭೂಲೋಕಕ್ಕೆ ಅಜ್ಜಿಯ ಮನೆಗೆ ಬಂದು, ಅಲ್ಲಿ ಮಾಡಿದ ವಿವಿಧ ಭಕ್ಷ್ಯ ಭೋಜ್ಯಗಳನ್ನು ಭಕ್ಷಿಸಿ ಮರುದಿನ ತಾಯಿಯೊಂದಿಗೆ ಹಿಂತಿರುಗುತ್ತಾನೆ ಎಂಬುದು ಪ್ರತೀತಿಯಾಗಿದೆ.

ಈ “ಸ್ವರ್ಣಗೌರೀ” ಎಂಬ ಹೆಸರಿಗೂ ಪೌರಾಣಿಕ ಹಿನ್ನೆಲೆ ಇದೆ. ಹಿಂದೆ ದಕ್ಷಯಜ್ಞದ ಸಂದರ್ಭದಲ್ಲಿ ಉರಿದು ಹೋದ ಪರಶಿವನ ಮಡದಿಯಾದ ದಾಕ್ಷಾಯಿಣಿಯು ನಂತರ ಪರ್ವತ ರಾಜನಿಗೆ ಮಗಳಾಗಿ ಜನಿಸುತ್ತಾಳೆ. ಅವಳೇ ಪಾರ್ವತಿ ಅಥವಾ ಗಿರಿಜೆ. ಪಾರ್ವತಿಯು ಮದುವೆಯ ವಯಸ್ಸಿಗೆ ಬಂದಾಗ ಪರ್ವತ ರಾಜನು ಆಕೆಗೆ ಮದುವೆಮಾಡಲು ಗಂಡು ಹುಡುಕಲು ಆರಂಭಿಸುತ್ತಾನೆ. ಆಗ ಪಾರ್ವತಿಯು ತಂದೆಗೆ ತನ್ನ ಪೂರ್ವಜನ್ಮದ ವೃತ್ತಾಂತವನ್ನು ತಿಳಿಸಿ, ತಾನು ಪರಶಿವನನ್ನಲ್ಲದೇ ಬೇರೆ ಯಾರನ್ನೂ ಮದುವೆಯಾಗುವುದಿಲ್ಲ ಎನ್ನುತ್ತಾಳೆ. ಇದಕ್ಕೆ ಎಲ್ಲರೂ ಒಪ್ಪುತ್ತಾರೆ. ಪಾರ್ವತಿಯು ಪರಶಿವನನ್ನು ಮೆಚ್ಚಿಸಲು ಕಾಡಿಗೆ ಹೋಗಿ ತಪೋನಿರತಳಾಗುತ್ತಾಳೆ. 

ಆದರೆ, ಎಷ್ಟೇ ತಪಸ್ಸು ಮಾಡಿದರೂ ಈಶ್ವರನು ಪಾರ್ವತಿಯನ್ನು ಮೆಚ್ಚುವುದಿಲ್ಲ. ಆಗ ಪಾರ್ವತಿಯು ಶಿವನು ತನ್ನನ್ನು ಮೆಚ್ಚದೇ ಇರಲು ತನ್ನ ಹಿಂದಿನ ಕಾಳಿಯ ರೂಪದ ಕಪ್ಪು ಮೈಬಣ್ಣವೇ ಕಾರಣ ಇರಬಹುದು ಎಂದುಕೊಂಡು ಬ್ರಹ್ಮನನ್ನು ಕುರಿತು ತಪಸ್ಸು ಮಾಡುತ್ತಾಳೆ. ಇವಳ ತಪಸ್ಸಿಗೆ ಒಲಿದ ಬ್ರಹ್ಮನು ಪ್ರತ್ಯಕ್ಷನಾಗುತ್ತಾನೆ. ಆಗ ಪಾರ್ವತಿಯು ತನ್ನ ಮೈಬಣ್ಣವು ಶಿವನು ಮನ ಸೋಲುವ ಹಾಗೆ, ಚಿನ್ನದಂತೆ ಹೊಳೆಯುವ ಹಾಗೆ ಮಾಡು ಎನ್ನುತ್ತಾಳೆ. ಬ್ರಹ್ಮನು ಹಾಗೆಯೇ ಆಗಲಿ ಎಂದು ಅವಳ ಕಪ್ಪನೆಯ ಕಾಳಿಯ ರೂಪವನ್ನು ತೆಗೆದು ಆಕೆಯನ್ನು ಸ್ವರ್ಣದ ವರ್ಣದವಳನ್ನಾಗಿಸುತ್ತಾನೆ. ಸಂಸ್ಕೃತದಲ್ಲಿ ಗೌರೀ ಎಂದರೂ ಸುವರ್ಣ ಅಥವಾ ಬಿಳಿ ಬಣ್ಣವುಳ್ಳವಳು ಎಂತಲೇ ಅರ್ಥವಾಗುತ್ತದೆ. ಹೀಗೆ ಪಾರ್ವತಿಯು ಅಂದಿನಿಂದ ಸ್ವರ್ಣಗೌರಿಯಾಗುತ್ತಾಳೆ. ನಂತರ ಆಕೆಯ ರೂಪಕ್ಕೆ ಶಿವನು ಮೆಚ್ಚುತ್ತಾನೆ. ಹೀಗೆ ಶಿವನನ್ನು ಒಲಿಸಿಕೊಂಡ ದಿನವೇ ಗೌರೀತೃತೀಯಾ ಎಂದು ನಂಬಲಾಗಿದೆ. ಮುಂದೆ ಒಂದು ದಿನ ಆಕೆಗೆ ಪರಶಿವನೊಡನೆ ಮದುವೆಯಾಗುತ್ತದೆ. 

ಹೀಗೆ ಗೌರೀ ಅಥವಾ ಸ್ವರ್ಣಗೌರೀ ಎಂಬುದು ಶಿವನ ಸತಿಯಾದ ಪಾರ್ವತಿಯ ಇನ್ನೊಂದು ಹೆಸರು. ಶಿವನನ್ನು ವರಿಸಿ ಕೈಲಾಸದಲ್ಲಿ ನೆಲೆಸಿರುವ ಗೌರಿಯು ವರ್ಷಕ್ಕೊಮ್ಮೆ ಇದೇ ಗೌರಿ ಹಬ್ಬದ ದಿನದಂದು ತವರಿಗೆ ಅಂದರೆ ಭೂಮಿಗೆ ಅಂದರೆ ಹಿಮಾಲಯ ಇರುವ ಭಾರತಕ್ಕೆ ಬಂದು ಷೋಡಶೋಪಚಾರ ಪೂಜೆಯನ್ನು ಸ್ವೀಕರಿಸಿ, ಹೆಣ್ಣು ಮಕ್ಕಳಿಂದ ಬಾಗಿನ ಪಡೆದು ಸಂತೃಪ್ತಳಾಗಿ ಕೈಲಾಸಕ್ಕೆ ಹೋಗುತ್ತಾಳೆ ಎಂಬುದು ನಂಬಿಕೆ. ಈ ಕಾಲದಲ್ಲಿ ಸ್ವರ್ಣಗೌರಿಯನ್ನು ಸಾಕ್ಷಾತ್ಕರಿಸಿಕೊಳ್ಳುವುದು ಸಾಧ್ಯವಿಲ್ಲವಾಗಿರುವುದರಿಂದ ನೆರೆಕರೆಯ ಸುಮಂಗಲಿಯರನ್ನೇ ಆಹ್ವಾನಿಸಿ, ಆ ಮುತ್ತೈದೆಯೇ ಸ್ವರ್ಣಗೌರೀ ಎಂದು ತಿಳಿದುಕೊಂಡು ಅವರಿಗೆ ಬಾಗಿನ ಅರ್ಪಿಸಿ ನಮಸ್ಕರಿಸಿ, ಸತ್ಕರಿಸಿ, ಕೃತಾರ್ಥರಾಗುತ್ತಾರೆ.

ಮಹಿಳೆಯರೆಲ್ಲರಿಗೂ ಗೌರಿ ಹಬ್ಬ ಬಂತೆಂದರೆ ಸಡಗರ. ಮನೆಯಲ್ಲಿ ಮಂಟಪ ನಿರ್ಮಿಸಿ ಬಾಳೆಯ ಕಂದು, ಮಾವಿನ ತೋರಣ ಕಟ್ಟಿ ಅಲಂಕಾರ ಮಾಡಿ ಗೌರಿ ಮೂರ್ತಿಯನ್ನು ಶೃಂಗರಿಸಿ ಸಡಗರದಿಂದ ಗೌರಿ ಹಬ್ಬವನ್ನು ಆಚರಿಸುತ್ತಾರೆ. ಗಣಪನ ಹಬ್ಬಕ್ಕಿಂತ ಒಂದು ದಿನ ಮೊದಲೇ ತವರಿಗೆ ಬರುವ ಗೌರಿಯನ್ನು ಆದರದಿಂದ ಬರಮಾಡಿಕೊಂಡು ಪೂಜಿಸಲು ಸುಮಂಗಲಿಯರು ಕಾತರಿಸುತ್ತಾರೆ. ಗೌರಿಯ ಪೂಜೆ ಮಾಡಿದರೆ ತಮ್ಮ ಮಾಂಗಲ್ಯ ಗಟ್ಟಿಯಾಗಿರುತ್ತದೆ ಎಂಬುದು ಹಿಂದೂಗಳ ನಂಬಿಕೆ. ಗಣಪತಿ ಹಬ್ಬದ ಶುಭಾಶಯಗಳನ್ನು ವಿನಿಮಯ ಮಾಡಿಕೊಳ್ಳುವಾಗ ಗೌರೀ ಗಣೇಶ ಹಬ್ಬದ ಶುಭಾಶಯಗಳು ಎಂದು ಗಣಪತಿ ಹಬ್ಬದ ಹಿಂದಿನ ದಿನ ಬರುವ ಗೌರಿ ಹಬ್ಬವನ್ನು ಜೊತೆಯಲ್ಲಿ ಸೇರಿಸಿಕೊಂಡೇ ಹೇಳುತ್ತೇವೆ. ಬೇರಾವ ಹಬ್ಬಕ್ಕೂ ಈ ರೀತಿ ಇನ್ನೊಂದು ಹಬ್ಬವನ್ನು ಜೊತೆಯಲ್ಲಿ ಸೇರಿಸಿ ಹೇಳುವುದಿಲ್ಲ.

 ಹರಿಕೃಷ್ಣ ಹೊಳ್ಳ , ಬ್ರಹ್ಮಾವರ

ಗೂಗಲ್ ನ್ಯೂಸ್‌ನಲ್ಲಿ ಯಕ್ಷಗಾನ.ಇನ್ ಫಾಲೋ ಮಾಡಲು ಕ್ಲಿಕ್ ಮಾಡಿ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

ನವೀನ ಹಳೆಯದು