ಶ್ರೀ ಹರಿ ಲೀಲಾ 75: ನ.7ರಂದು ಯಕ್ಷಾಭಿವಂದನಂ | ಶಿಷ್ಯಾಭಿನಂದನಂ | ಯಕ್ಷ ನಾದೋತ್ಸವಂ

ಯಕ್ಷಗಾನ ಲೋಕ ಕಂಡ ಅದ್ವಿತೀಯ ದಂಪತಿ ಶ್ರೀ ಹರಿನಾರಾಯಣ ಬೈಪಾಡಿತ್ತಾಯ ಹಾಗೂ ಲೀಲಾವತಿ ಬೈಪಾಡಿತ್ತಾಯರಿಗೆ 75 ತುಂಬಿದ ಪ್ರಯುಕ್ತ ಶಿಷ್ಯ ವೃಂದದವರು ಅಭಿಮಾನಿಗಳ ಜೊತೆಗೂಡಿ ಅವರನ್ನು ಗೌರವಿಸಲು ನಿರ್ಧರಿಸಿದ್ದಾರೆ.

"ಶ್ರೀ ಹರಿಲೀಲಾ-75 - ಯಕ್ಷಾಭಿನಂದನಂ, ಶಿಷ್ಯಾಭಿವಂದನಂ, ಯಕ್ಷನಾದೋತ್ಸವಂ" ಕಾರ್ಯಕ್ರಮವನ್ನು 07 ನವೆಂಬರ್ 2021ರಂದು ಮೂಡುಬಿದಿರೆಯ ಆಲಂಗಾರು ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ನಡೆಸಲು ನಿರ್ಧರಿಸಲಾಯಿತು.

ಇಡೀ ದಿನ ಪೂರ್ವರಂಗ ಪ್ರದರ್ಶನ, ಪಾರಂಪರಿಕ ಯಕ್ಷಗಾನೀಯ ಹಾಡುಗಳು, ಸಭಾ ಕಾರ್ಯಕ್ರಮ, ಗುರು ದಂಪತಿಗೆ ಅಭಿನಂದನೆ, ಅಭಿನಂದನ ಗ್ರಂಥ ಬಿಡುಗಡೆ, ಲೀಲಾವತಿ ಬೈಪಾಡಿತ್ತಾಯರ ಆತ್ಮಕಥನ ಬಿಡುಗಡೆ, ಪರಂಪರೆಯ ಯಕ್ಷಗಾನ ಪ್ರದರ್ಶನ ಹಾಗೂ ಬೈಪಾಡಿತ್ತಾಯ ದಂಪತಿ ಹೆಸರಿನಲ್ಲಿ ಡಿಜಿ ಯಕ್ಷ ಫೌಂಡೇಶನ್ (ರಿ), ಬೆಂಗಳೂರು ಮೂಲಕ ಹಿರಿಯ ಕಲಾವಿದರೊಬ್ಬರಿಗೆ ವಾರ್ಷಿಕ 'ಯಕ್ಷನಾದ ಪುರಸ್ಕಾರ' ಪ್ರದಾನ ಕಾರ್ಯಕ್ರಮಗಳು ನಡೆಯಲಿವೆ.

ಅಭಿನಂದನ ಸಮಿತಿ
ತನ್ನಿಮಿತ್ತ ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಸಮೂಹ ಸಂಸ್ಥೆಗಳ ಛೇರ್ಮನ್ ಡಾ.ಎಂ.ಮೋಹನ್ ಆಳ್ವ ಇವರ ಗೌರವಾಧ್ಯಕ್ಷತೆಯಲ್ಲಿ ಅಭಿನಂದನ ಸಮಿತಿಯನ್ನು ರಚಿಸಲಾಗಿದೆ. ಅಧ್ಯಕ್ಷರಾಗಿ ಚಂದ್ರಶೇಖರ ಭಟ್ ಕೊಂಕಣಾಜೆ, ಕಾರ್ಯದರ್ಶಿಯಾಗಿ ಆನಂದ ಗುಡಿಗಾರ ಕೆರ್ವಾಶೆ, ಕೋಶಾಧಿಕಾರಿಯಾಗಿ ಅವಿನಾಶ್ ಬೈಪಾಡಿತ್ತಾಯ, ಸಹ ಕಾರ್ಯದರ್ಶಿಗಳಾಗಿ ಗಿರೀಶ್ ಭಟ್ ಕಿನಿಲಕೋಡಿ, ಗುರುಪ್ರಸಾದ್ ಬೊಳಿಂಜಡ್ಕ, ಗಿರೀಶ್ ರೈ ಕಕ್ಕೆಪದವು ಅವರನ್ನು ಆಯ್ಕೆ ಮಾಡಲಾಗಿದೆ. ಜೊತೆಗೆ ಮಹಿಳಾ ಸಮಿತಿಗೆ ಶ್ರೀಮತಿ ಯೋಗಾಕ್ಷಿ ತಲಕಳ, ಶ್ರೀಮತಿ ಸಾಯಿ ಸುಮಾ ನಾವಡ ಹಾಗೂ ಶ್ರೀಮತಿ ಮೈತ್ರಿ ಭಟ್ ಕತ್ತಲ್‌ಸಾರ್ ಇವರನ್ನು ಆಯ್ಕೆ ಮಾಡಲಾಯಿತು. ಬೈಪಾಡಿತ್ತಾಯರ ಎಲ್ಲ ಶಿಷ್ಯರೂ ಸಮಿತಿಯ ಸದಸ್ಯರಾಗಿರುತ್ತಾರೆ.

ಕಾರ್ಯಕ್ರಮದ ಮಹತ್ವ
ಶ್ರೀ ಹರಿನಾರಾಯಣ ಬೈಪಾಡಿತ್ತಾಯರು 6 ದಶಕಗಳಿಂದ ಮತ್ತು ಲೀಲಾವತಿ ಬೈಪಾಡಿತ್ತಾಯ ಅವರು ಐದು ದಶಕಗಳಿಂದ ಯಕ್ಷಗಾನ ಕ್ಷೇತ್ರದಲ್ಲಿದ್ದಾರೆ. ಅಲ್ಲದೆ ನೂರಾರು ಹಿಮ್ಮೇಳ ವಾದಕರನ್ನು ಯಕ್ಷಗಾನ ರಂಗಕ್ಕೆ ಕೊಡುಗೆಯಾಗಿ ನೀಡಿದ್ದಾರೆ. ಈಗಲೂ ಶಿಷ್ಯರಿಗೆ ಯಕ್ಷ ಶಿಕ್ಷಣ ನೀಡುತ್ತಿದ್ದಾರೆ. ಇಬ್ಬರಿಗೂ 75ರ ಹರೆಯ. ಇಬ್ಬರೂ ನಾದವನ್ನೇ ಬದುಕಾಗಿಸಿಕೊಂಡವರು, ಸ್ವರವನ್ನೇ ಉಸಿರಾಗಿಸಿಕೊಂಡವರು. ಪತಿ-ಪತ್ನಿ ಇಬ್ಬರಿಗೂ ಯಕ್ಷಗಾನ ಅಕಾಡೆಮಿ ಪ್ರಶಸ್ತಿ ಪುರಸ್ಕಾರವಾಗಿರುವುದೂ ಒಂದು ಐತಿಹಾಸಿಕ ದಾಖಲೆಯೇ.

ಸ್ತ್ರೀಯರಿಗೆ ಯಕ್ಷಗಾನಕ್ಕೆ ನೋಡುವುದಕ್ಕೂ ನಿಷೇಧ ಇದ್ದ ದಿನಗಳಲ್ಲೇ ರಂಗವೇರಿ, ಮದುವೆಯಾದ ಬಳಿಕವಷ್ಟೇ ಯಕ್ಷಗಾನವನ್ನು ಕಲಿತು, ಅದನ್ನೇ ಉಸಿರಾಗಿಸಿಕೊಂಡು, ವ್ಯವಸಾಯಿ (ಡೇರೆ) ಮೇಳಗಳಲ್ಲಿಯೇ ಪ್ರಧಾನ ಭಾಗವತರ ಸ್ಥಾನಕ್ಕೇರಿ ಮೆರೆದವರು ಲೀಲಾವತಿ ಬೈಪಾಡಿತ್ತಾಯ. ಆ ಕಾಲದಲ್ಲಿ ಒಬ್ಬ ಮಹಿಳೆಯನ್ನು ಯಕ್ಷಗಾನ ರಂಗಕ್ಕೇರಿಸಿ ಅದ್ವಿತೀಯರನ್ನಾಗಿ ಮೆರೆಸಿದ ಹರಿನಾರಾಯಣ ಬೈಪಾಡಿತ್ತಾಯರು, ಭಾಗವತಿಕೆಯಲ್ಲಿ ಅಗರಿ, ಇರಾ, ಬಲಿಪರು ಮತ್ತು ಕಡತೋಕರು, ಚೆಂಡೆ-ಮದ್ದಳೆಯಲ್ಲಿ ನೆಡ್ಲೆ, ದಿವಾಣ, ಕುದ್ರೆಕೋಡ್ಲು, ಬಲ್ಲಾಳರ ಗರಡಿಯಲ್ಲೇ ಪಳಗಿ, ಯಕ್ಷಗಾನೀಯ ಪೆಟ್ಟು-ಮಟ್ಟುಗಳಲ್ಲಿ, ರಂಗ ನಡೆಗಳಲ್ಲಿ 'ಇದಮಿತ್ಥಂ' ಎಂದು ಖಚಿತವಾಗಿ ಹೇಳಬಲ್ಲಷ್ಟು ಪರಿಣತರು. ತಮ್ಮ ಕೀರ್ತಿಶೇಷ ಗುರುಗಳಿಂದ ಪಡೆದ ಅನುಭವಾಮೃತವನ್ನು, ನುಡಿತ-ಬಡಿತಗಳನ್ನು, ಯಕ್ಷಗಾನದ ಪರಂಪರೆಯನ್ನು ಮುಂದಿನ ಪೀಳಿಗೆಗೆ ದಾಟಿಸಲು ಅವರು ಶ್ರಮಿಸುತ್ತಿದ್ದಾರೆ.

ಈ ದಂಪತಿ, ತೆಂಕು ತಿಟ್ಟಿಗೆ ಮಾತ್ರವೇ ಸೀಮಿತವಾಗದೆ, ಬಡಗು ತಿಟ್ಟು ಹೆಚ್ಚು ಪ್ರಸಿದ್ಧಿಪಡೆದಿರುವ ಉತ್ತರದ ನಾಡುಗಳಲ್ಲಿಯೂ ಅಷ್ಟೇ ಜನಪ್ರಿಯತೆ ಪಡೆದವರು. ಸಾಲಿಗ್ರಾಮದಂತಹಾ ಡೇರೆ ಮೇಳಗಳಲ್ಲಿಯೂ, ಕಾಳಿಂಗ ನಾವಡರಂತಹಾ ಪ್ರಸಿದ್ಧರ ಜೊತೆಗೂ ರಂಗಸ್ಥಳದಲ್ಲಿ ಯಕ್ಷಗಾನೀಯವಾಗಿ ಮೆರೆದಿದ್ದಾರೆ.

ಶಿಷ್ಯರು ಅವರಲ್ಲಿ ಮಾತಾ-ಪಿತರ ವಾತ್ಸಲ್ಯವನ್ನು ಕಂಡಿದ್ದಾರೆ, ಸಹ ಕಲಾವಿದರು ಅವರಲ್ಲೊಬ್ಬ ಗುರುವನ್ನು, ಅಮ್ಮನನ್ನು ಕಂಡಿದ್ದಾರೆ, ಯಕ್ಷಗಾನ ಕಲಾಭಿಮಾನಿಗಳು ಅವರಲ್ಲಿ ನಾದ-ಗಾನ-ರಾಗಗಳ ದೈವತ್ವವನ್ನು ಕಂಡಿದ್ದಾರೆ. ಇಷ್ಟು ಘನತರವಾದ ಗುಣ-ಪ್ರತಿಭಾ ಸಂಪನ್ನರಾಗಿದ್ದರೂ ಪ್ರಚಾರ ಬಯಸದೆ, ತಾವಾಯಿತು ತಮ್ಮ ಯಕ್ಷಗಾನ ಸೇವೆಯಾಯಿತು ಎಂದು ಕಾರ್ಯತತ್ಪರರಾಗಿ ಸರ್ವ ಜನಮಾನ್ಯರಾಗಿದ್ದಾರೆ.

ಈ ಹಿರಿಯ ಜೀವಗಳನ್ನು, ಯಕ್ಷಗಾನ ಪರಂಪರೆಯ ಪ್ರತಿನಿಧಿಗಳನ್ನು ಗೌರವಿಸುವ ಮಹತ್ಕಾರ್ಯಕ್ಕೆ ಯಕ್ಷಗಾನ ಕಲಾಭಿಮಾನಿಗಳು, ಶಿಷ್ಯ ವೃಂದದವರು ಮುಂದಾಗಿದ್ದು, ಯಕ್ಷಗಾನ ಕಲಾಭಿಮಾನಿಗಳು, ಕಲಾ ಪೋಷಕರ ಸಹಾಯ, ಸಹಕಾರವನ್ನು ಕೋರಲಾಗಿದೆ.

ಈ ಕಾರ್ಯಕ್ರಮದ ಯಶಸ್ಸಿಗೆ ಯಕ್ಷಗಾನ ಅಭಿಮಾನಿಗಳಿಂದ ಉದಾರ ಸಹಾಯವನ್ನು ನಿರೀಕ್ಷಿಸಲಾಗಿದೆ.
ಬ್ಯಾಂಕ್ ಖಾತೆ ವಿವರ ಈ ಕೆಳಗಿನಂತಿದೆ:
Name: Digi Yaksha Foundation
Current Account No.: 00000 0402 0448 6998
IFSC Code: SBIN0041189
Bank and Branch: SBI Hosakerehalli, Bengaluru
ಅಥವಾ
ಗೂಗಲ್ ಪೇ, ಫೋನ್ ಪೇ, ಪೇಟಿಎಂ ಮುಂತಾದ ಆ್ಯಪ್‌ಗಳ ಮೂಲಕ UPI ID: yakshagana@sbi ಅಥವಾ ಕೆಳಗಿನ QR Code ಸ್ಕ್ಯಾನ್ ಮಾಡಿಯೂ ಧನ ಸಹಾಯ ನೀಡಬಹುದು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

ನವೀನ ಹಳೆಯದು