ಬೈಪಾಡಿತ್ತಾಯರ ಯಕ್ಷಮೆಲುಕು: ವಿದ್ಯಾಭೂಷಣರಿಗೆ ಯಕ್ಷಗಾನ ಹಾಡುಗಾರಿಕೆಯ ಕ್ಷಿಪ್ರ ಪಾಠ

ತಮ್ಮ 60 ವರ್ಷಗಳ ಯಕ್ಷಗಾನ ಜೀವನದ ಬಗ್ಗೆ 'ಯಕ್ಷಮೆಲುಕು' ಸರಣಿಯಲ್ಲಿ ಮೆಲುಕುಹಾಕಿರುವ ಹರಿನಾರಾಯಣ ಬೈಪಾಡಿತ್ತಾಯರು, ಇಲ್ಲಿ ವಿದ್ಯಾಭೂಷಣರಿಗೆ ತಾಳಮದ್ದಳೆಯ ಹಾಡುಗಾರಿಕೆ ಹೇಳಿಕೊಟ್ಟ ಪ್ರಸಂಗವನ್ನು ನೆನಪಿಸಿಕೊಂಡಿದ್ದಾರೆ. ಹಿಂದಿನ ಹಲವು ಸಂಚಿಕೆಗಳು ಇಲ್ಲಿವೆ.

ಯಕ್ಷಗಾನವು ಆರಾಧನಾ ಕಲೆಯಾಗಿದ್ದು, ಅದಕ್ಕೆ ಮಂದಿರ, ಮಠ ಮಾನ್ಯಗಳ ಆಶ್ರಯವಂತೂ ಇದ್ದೇ ಇತ್ತು. ಆದರೂ ಕೆಲವು ಸಮಯ ಯಕ್ಷಗಾನವನ್ನು ನೋಡಬಾರದು, ವಿಶೇಷವಾಗಿ ಸ್ತ್ರೀಯರಿಗೆ ಅದನ್ನು ನೋಡುವುದೂ ನಿಷಿದ್ಧ; ನೋಡಿದರೆ ಏಳು ರಂಗ ಪೂಜೆಗಳನ್ನು ನೋಡಿ ದೋಷ ಪರಿಹಾರ ಮಾಡಿಕೊಳ್ಳಬೇಕೆಂಬ ಮೂಢನಂಬಿಕೆ ಚಾಲ್ತಿಯಲ್ಲಿತ್ತು.

ಅದನ್ನು ಮೀರಿ ಯಕ್ಷಗಾನ ಕಲಾವಿದರು ಜಾತಿ ಮತ ಭೇದವಿಲ್ಲದೆ ತಮ್ಮನ್ನು ತೊಡಗಿಸಿಕೊಂಡ ಪರಿಣಾಮವಾಗಿ ಯಕ್ಷಗಾನವು ಇಂದು ವಿಶ್ವಗಾನವಾಗಿ ಬೆಳೆದು ನಿಂತಿದೆ. ಇದನ್ನು ಈ ಪರಿಯಾಗಿ ಕಟ್ಟಿ ಕೊಟ್ಟಿರುವ ಹಿರಿಯ ಕಲಾವಿದರು, ಮಹಾಮಹಿಮರು ಪ್ರಾತಃಸ್ಮರಣೀಯರು. ಅವರು ಹಾಕಿಕೊಟ್ಟ ಹಾದಿಯಲ್ಲೇ ನಾವು ಮುಂದುವರಿಯಬೇಕಾಗಿದೆ. ನಾನಂತೂ ನನ್ನ ಗುರುಗಳು ಮತ್ತು ನನ್ನ ಯಕ್ಷಗಾನ ಕಲಾ ಜೀವನದಲ್ಲಿ ಸದಾ ಕಾಲ ತಮ್ಮ ಅನುಭವಗಳನ್ನು ಧಾರೆ ಎರೆಯುತ್ತಾ, ನನ್ನನ್ನು ತಿದ್ದಿ ತೀಡಿ ಬೆಳೆಸಿದ ಪುರುಷಯ್ಯ ಆಚಾರ್ಯ, ನೆಡ್ಲೆ ನರಸಿಂಹ ಭಟ್, ದಿವಾಣ ಭೀಮ ಭಟ್, ಚಿಪ್ಪಾರು ಕೃಷ್ಣಯ್ಯ ಬಲ್ಲಾಳ್, ಕುದ್ರೆಕೋಡ್ಲು ರಾಮ ಭಟ್, ಬಲಿಪ ನಾರಾಯಣ ಭಾಗವತರು, ಕಡತೋಕ ಮಂಜುನಾಥ ಭಾಗವತರು, ದಾಮೋದರ ಮಂಡೆಚ್ಚರು ಮುಂತಾದ ಹಿರಿಯ ಜೀವಗಳನ್ನು ಸದಾ ನೆನಪಿಟ್ಟುಕೊಳ್ಳುತ್ತೇನೆ. ತಪ್ಪಾದಾಗ ಅವರು ತಿದ್ದಿದ ಪರಿಣಾಮವಾಗಿ ನನಗೂ ಯಕ್ಷಗಾನದ ರಂಗ ನಿರ್ವಹಣೆ, ನಡೆಗಳ ಬಗ್ಗೆ ಒಂದಿಷ್ಟಾದರೂ ಜ್ಞಾನ ಬಂದಿದೆ. ಈಗಲೂ ಅಷ್ಟೇ, ರಂಗದಲ್ಲಿ ಏನಾದರೂ ತಪ್ಪು ಕಂಡುಬಂದಾಗಲೆಲ್ಲಾ ಅವರ ಮಾತುಗಳು ನೆನಪಾಗುತ್ತದೆ. ಹೀಗಾಗಿ ಯಕ್ಷಗಾನ ಪರಂಪರೆಯ ಉಳಿವಿಗೆ ಅವರು ನೀಡಿದ ಕೊಡುಗೆಗಳ ಹಾದಿಯಲ್ಲೇ ಮುಂದುವರಿದ ಕಾರಣದಿಂದಾಗಿ ಮತ್ತು ಅದನ್ನೇ ನನ್ನ ಶಿಷ್ಯರಿಗೂ ದಾಟಿಸುತ್ತಿರುವ ಕಾರಣದಿಂದಾಗಿ ಯಕ್ಷಗಾನೀಯತೆಯ ರಕ್ಷಣೆಗೆ ನನ್ನದೂ ಒಂದು ಅಳಿಲ ಸೇವೆ ಮುಂದುವರಿದಿದೆ.

ಈ ಪೀಠಿಕೆ ಯಾಕೆ ಎಂದರೆ, ಯಕ್ಷಗಾನವು ಆ ಕಾಲದಲ್ಲಿ ಬೆಳೆದುಬಿಟ್ಟಿತ್ತು ಮತ್ತು ಅದರ ಬಗ್ಗೆ ಗೌರವ ಭಾವನೆ, ಪೂಜ್ಯ ಭಾವನೆ ಎಲ್ಲರಿಗೂ ಇತ್ತು. ನಾನು ಯಕ್ಷಗಾನವಿಲ್ಲದ ದಿನಗಳಲ್ಲಿ ಸುಬ್ರಹ್ಮಣ್ಯ ಮಠಾಧೀಶರಾಗಿದ್ದ ಗೌರವಾನ್ವಿತ ವಿದ್ಯಾಭೂಷಣ ಅವರೊಂದಿಗೆ ಗಿಂಡಿ ಮಾಣಿಯಾಗಿ ಕೆಲವು ಕಾಲ ಕೆಲಸ ಮಾಡುತ್ತಿದ್ದೆ. ಜೀವನ ಸಾಗಬೇಕಲ್ಲ. ಆಗಿನ ಕಾಲದಲ್ಲಿ ಯಕ್ಷಗಾನದಿಂದಷ್ಟೇ ಬಂದ ಆದಾಯದಲ್ಲಿ, ಅದು ಕೂಡ ತೀರಾ ಕಡಿಮೆ, ಜೀವನ ಸಾಗಿಸುವುದೇ ಕಷ್ಟವಾಗಿತ್ತು. ಹೀಗಾಗಿ ಪೂಜಾ ಕಾರ್ಯಗಳಿಗೂ ಮುಂದಾಗಿದ್ದೆ.

ವಿದ್ಯಾಭೂಷಣರು ಚಿಕ್ಕ ಪ್ರಾಯದಲ್ಲೇ ಅನಿವಾರ್ಯವಾಗಿ ಪೀಠವೇರಿದವರು. ಬಹುಶಃ 1970ರ ದಶಕದ ಆರಂಭ. ಆಗಿನ್ನೂ ವಿದ್ಯಾಭೂಷಣರು ವೀಣೆ, ಸಂಗೀತ ಕಲಿಯುತ್ತಿದ್ದರಷ್ಟೇ. ವೀಣೆ, ಸಂಗೀತ ಕಲಿಸಲು ಉಡುಪಿಯಿಂದ ವಿದ್ವಾಂಸರೊಬ್ಬರು ಬರುತ್ತಿದ್ದರು. ಆ ಕಾಲದಲ್ಲಿ ಮೃದಂಗ ವಿದ್ವಾನ್ ಎಂ.ಆರ್.ಸಾಯಿನಾಥ್ (ಆಕಾಶವಾಣಿ ಕಲಾವಿದ) ಅವರೂ ಬರುತ್ತಿದ್ದರು.

ಅದೇ ಸಂದರ್ಭದಲ್ಲಿ ಸುಬ್ರಹ್ಮಣ್ಯ ಮಠದಲ್ಲೇ ಯಕ್ಷಗಾನ ತಾಳಮದ್ದಳೆಯೊಂದನ್ನು ಏರ್ಪಡಿಸಲಾಯಿತು. ಅದಾಗಲೇ ಯಕ್ಷಗಾನವು ಆರಾಧನಾ ಕಲೆಯಾಗಿ ಪರಿಪೂರ್ಣವಾಗಿ ಬೆಳೆದಾಗಿತ್ತು. ಅಷ್ಟಾವಧಾನ ಸೇವೆಯಲ್ಲಿ ಯಕ್ಷಗಾನ ಸೇವೆಯೂ ಒಂದಲ್ಲವೇ? ಹೀಗಾಗಿ ಯಾವುದೇ ಕಟ್ಟುಪಾಡುಗಳಿಲ್ಲದ ಕಾರಣ, ದೇವತಾ ಸೇವೆಯೇ ಆದ ಕಾರಣ, ಮಠದಲ್ಲಿ ನಡೆಯುವ ತಾಳಮದ್ದಳೆಗೆ ವಿದ್ಯಾಭೂಷಣರೇ ಹಾಡಬೇಕೆಂದು ನಿರ್ಧಾರವೂ ಆಯಿತು. ಅವರಿನ್ನೂ ಹಾಡುಗಾರಿಕೆಯಲ್ಲಿ ಖ್ಯಾತರಾಗಿರಲಿಲ್ಲ. 

ಅವರು ನಂತರ ಹಾಡುವ ಸ್ವಾಮೀಜಿ ಎಂದು, ದಾಸರಪದಗಳ ಮೂಲಕ ಮನೆಮಾತಾದವರು. ಅವರ ಕಂಚಿನ ಕಂಠದ ಮಾಧುರ್ಯವು ಎಂಥವರನ್ನೂ ಸೆಳೆಯುತ್ತದೆ! ಎಷ್ಟೋ ಮನೆಗಳಲ್ಲಿ ಬೆಳಿಗ್ಗೆ ಆಗುವುದೇ ವಿದ್ಯಾಭೂಷಣರ ಹಾಡುಗಳಿಂದ ಎಂದರೆ ಅತಿಶಯೋಕ್ತಿಯಲ್ಲ. ಅಂಥ ಭಕ್ತಿ ಪಂಥದ ತೇರೆಳೆಯುವವರಾಗಿ ಸ್ವಾಮೀಜಿ ಮುಂಚೂಣಿಯಲ್ಲಿದ್ದಾರೆ, ಈಗಲೂ ಈ ಕೈಂಕರ್ಯ ಮುಂದುವರಿಸುತ್ತಿದ್ದಾರೆ.

ಸರಿ, ಹಿರಿಯ ವಿದ್ವಾಂಸರಾದ ಲಕ್ಷ್ಮೀಶ ತೋಳ್ಪಾಡಿಯವರು ವಿದ್ಯಾಭೂಷಣರಿಗೆ ಯಕ್ಷಗಾನದ ರುಚಿ ಹತ್ತಿಸುವ ನಿಟ್ಟಿನಲ್ಲಿ ತಾಳಮದ್ದಳೆ ಏರ್ಪಡಿಸಿದರು. ಆಗ ಹಿರಿಯ ಅರ್ಥಧಾರಿ, ವಿದ್ವಾಂಸ ದೇರಾಜೆ ಸೀತಾರಾಮಯ್ಯರು ವಯಸ್ಸಿನ ಕಾರಣದಿಂದ ಅರ್ಥ ಹೇಳುವುದನ್ನು ಬಹುತೇಕ ನಿಲ್ಲಿಸಿದ್ದರು. ಆದರೆ, ಸುಬ್ರಹ್ಮಣ್ಯ ಮಠದ ಸ್ವಾಮಿಗಳು ಹೇಳಿದ ಕಾರಣ, ಒಪ್ಪಿದ್ದರು. ಜೊತೆಗೆ ಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರಿಗಳು, ಬರೆಪಾಡಿ ನಾರಾಯಣ ಭಟ್ಟರು ಮುಂತಾದವರು ಅರ್ಥಗಾರಿಕೆಗೆ ನಿಗದಿಯಾಯಿತು. ಪ್ರಸಂಗ 'ಅಹಲ್ಯೋದ್ಧಾರ'. ನಾನು ಚೆಂಡೆಗೆ, ನನ್ನ ತಮ್ಮ ಅನಂತ ಬೈಪಾಡಿತ್ತಾಯ ಮದ್ದಳೆಗೆ, ವಿದ್ಯಾಭೂಷಣರು ಹಾಡುಗಾರಿಕೆಗೆ.

ನಮ್ಮದು ಆಪ್ತ ಒಡನಾಟವಾಗಿದ್ದುದರಿಂದ ವಿದ್ಯಾಭೂಷಣರು ಯಕ್ಷಗಾನದಲ್ಲಿ ಹಾಡುವಾಗ ಏನಾದರೂ ತಪ್ಪಾದರೆ? ಅಂತ ಅಳುಕು ವ್ಯಕ್ತಪಡಿಸಿದರು. ಅಂಥ ಅದ್ಭುತ ಕಲೆಗೆ ಅಪಚಾರವಾಗಬಾರದಲ್ಲ ಎಂಬ ಅತೀವ ಕಳಕಳಿ ಅವರ ಧ್ವನಿಯಲ್ಲಿತ್ತು.

ನಾನೂ ಯಕ್ಷಗಾನಕ್ಕೆ ಕಾಲಿಟ್ಟು ಎಂಟ್ಹತ್ತು ವರ್ಷವಷ್ಟೇ ಆಗಿತ್ತು ಅನಿಸುತ್ತದೆ. ಆದರೆ ಅನುಭವ ಆಗಿತ್ತು. ಹೀಗಾಗಿ, ಅವರಿಗೆ ಧೈರ್ಯ ತುಂಬಿ, "ನಿಮಗೆ ಹೇಳಿಕೊಡುತ್ತೇನೆ. ಅದೇ ರೀತಿ ಹೇಳಿಬಿಡಿ. ಹೇಗೂ ಸಂಗೀತ ಮತ್ತು ರಾಗ-ತಾಳ ಜ್ಞಾನವಿದೆಯಲ್ಲ" ಎಂದು ಅವರನ್ನು ಹುರಿದುಂಬಿಸಿದೆ.

ಗಜಮುಖದವಗೆ ಗಣಪಗೆ ಹಾಡಿನಿಂದಲೇ ನೇರವಾಗಿ ಅವರ ಯಕ್ಷಗಾನ ಹಾಡುಗಾರಿಕೆ ಕಲಿಕೆ ಆರಂಭವಾಯಿತು. ಅವರು ಕ್ಷಿಪ್ರಗ್ರಾಹಿಯಾಗಿದ್ದರು. ಹೇಳಿದ್ದನ್ನು ತಕ್ಷಣವೇ ಬರಸೆಳೆದುಕೊಂಡಂತೆ ಪಾಠವನ್ನು ತಮ್ಮದಾಗಿಸಿಕೊಳ್ಳುವ ಶಕ್ತಿ ಅವರಿಗಿತ್ತು. ಈ ಕಾರಣಕ್ಕಾಗಿ ಐದಾರು ಕ್ಲಾಸುಗಳಲ್ಲಿಯೇ ಅವರು, ಯಕ್ಷಗಾನದ ಗಣಪತಿ ಸ್ತುತಿಯಿಂದ ಹಿಡಿದು ಅಹಲ್ಯೋದ್ಧಾರ ಪ್ರಸಂಗಕ್ಕಾಗುವ ಪದ್ಯಗಳನ್ನು ಕಲಿತುಕೊಂಡುಬಿಟ್ಟಿದ್ದರು.  ಬಹುಶಃ ತೀರಾ ಕಡಿಮೆ ಸಂಖ್ಯೆಯ ತಾಳಗಳು. ಎಷ್ಟು ಬೇಕೋ ಅಷ್ಟನ್ನು ಹೇಳಿಕೊಟ್ಟಿದ್ದೆ. ಕಲಿತ ಬಳಿಕ ಮತ್ತೂ ಅಳುಕು ತೋರಿದಾಗ, ನಾನಿದ್ದೇನಲ್ಲ ಎಂದು ಧೈರ್ಯವನ್ನೂ ಅವರಿಗೆ ತುಂಬಿದೆ.

ವೇದಿಕೆಯಲ್ಲಿ ಅಕ್ಕ-ಪಕ್ಕದಲ್ಲೇ ಕುಳಿತಿರುವುದರಿಂದ, ಆ ದಿನದ ತಾಳಮದ್ದಳೆಗೆ ಅಗತ್ಯವಿರುವ ಎಲ್ಲ ಮಾಹಿತಿಯನ್ನೂ ಅಲ್ಲಲ್ಲೇ ನೀಡುತ್ತಾ ಬಂದೆ - ಎಂದರೆ ಮುಂದಿನ ಪದ್ಯ ಹೇಗೆ, ಯಾವ ಪದವನ್ನು ಬಿಡಬೇಕಾಗುತ್ತದೆ, ಯಾವುದನ್ನು ಅರ್ಥಧಾರಿಗಳು ಎತ್ತಿಕೊಡುತ್ತಾರೆಂಬುದನ್ನು ಗಮನಿಸಿ, ಯಾವ ಪದ್ಯ - ಹೀಗೆ ಮಾಹಿತಿ ನೀಡುತ್ತಾ ಹೋದೆ.

ಎಲ್ಲಿಯೂ ಲೋಪವಾಗದಂತೆ ಆ ತಾಳಮದ್ದಳೆ ಮೂಡಿಬಂತು. ವಿದ್ಯಾಭೂಷಣರು ಈಗಂತೂ ಗಾಯನ ಲೋಕದಲ್ಲಿ ಏರಿದ ಎತ್ತರವನ್ನು ನೋಡಿದರೆ ಅವರೆಂಥ ಪ್ರತಿಭಾವಂತ ಎಂಬುದು ತಿಳಿಯುತ್ತದೆ. ಅಂಥವರಿಗೆ ತಾನೂ ಯಕ್ಷಗಾನದ ಪಾಠ ಮಾಡಿದೆ ಎಂಬ ಹೆಮ್ಮೆ ನನ್ನದು. ಜೊತೆಗೆ, ಸಂಗೀತ ಕಲಿತಿದ್ದ ನನ್ನ ಪತ್ನಿಯನ್ನು ಯಕ್ಷಗಾನಕ್ಕೆ ತಯಾರು ಮಾಡಿದ ರೀತಿಯಲ್ಲೇ, ಸಂಗೀತ ವಿದ್ವಾಂಸರಾಗಿದ್ದ ವಿದ್ಯಾಭೂಷಣರನ್ನೂ ಯಕ್ಷಗಾನದಲ್ಲಿ ಹಾಡುವಂತೆ ಮಾಡಿದ ಧನ್ಯತಾ ಭಾವ ನನ್ನದು.

ಆ ಬಳಿಕ, 1995ರಲ್ಲಿ ವಿದ್ಯಾಭೂಷಣರು ಎಡನೀರು ಮಠದಲ್ಲಿ ಹಾಡಿದ ಕೃಷ್ಣಸಂಧಾನದ ತಾಳಮದ್ದಳೆಯ ತುಣುಕು ಇಲ್ಲಿದೆ. ಇದರಲ್ಲಿ ಪೇಜಾವರ ಮಠಾಧೀಶರಾಗಿದ್ದ ಶ್ರೀ ವಿಶ್ವೇಶ್ವರತೀರ್ಥ ಸ್ವಾಮೀಜಿ ಶ್ರೀಕೃಷ್ಣನಾಗಿ ಹಾಗೂ ಎಡನೀರು ಶ್ರೀ ಕೇಶವಾನಂದ ಭಾರತಿ ಸ್ವಾಮೀಜಿ ಅವರು ಕೌರವನಾಗಿ ಅರ್ಥ ಹೇಳಿದ್ದಾರೆ. ನೋಡಲೇಬೇಕಾದ ತಾಳಮದ್ದಳೆಯ ತುಣುಕು ಇದು. 

✍ ಹರಿನಾರಾಯಣ ಬೈಪಾಡಿತ್ತಾಯ

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

ನವೀನ ಹಳೆಯದು