ಯಕ್ಷಗಾನದ ಗುರುಕುಲವೇ ಆಗಿದ್ದ ಮೇಳಕ್ಕೆ ಸಾರಿಗೆ ವ್ಯವಸ್ಥೆ ತಂದ ಬದಲಾವಣೆ!

ಕಟೀಲು ಮೇಳಗಳ ಕಲಾವಿದರ ಸಂಚಾರಕ್ಕೆ ಬಸ್ಸು, ಸರಕು ಸಾಗಾಟಕ್ಕೆ ಲಾರಿಗಳು. ಚಿತ್ರ: ಎನ್.ಕೆ.ಎಸ್.ಆಚಾರ್ಯ
ಆ ಕಾಲದಲ್ಲಿ ಸಂಚಾರ, ಸಾರಿಗೆ ವ್ಯವಸ್ಥೆ ಇರಲಿಲ್ಲ. ಹೀಗಾಗಿ ಆರು ತಿಂಗಳ ಕಾಲ ಕಲಾವಿದರು ಮೇಳಗಳಲ್ಲೇ ಇರಬೇಕಾಗಿತ್ತು. ಇದು ಅವರ ಅಧ್ಯಯನಕ್ಕೆ, ಅನುಭವಿಗಳಿಂದ ಕಲಿಯುವಿಕೆಗೆ ಪೂರಕ ವಾತಾವರಣ ಕಲ್ಪಿಸಿತ್ತು. ಒಂದು ರೀತಿಯಲ್ಲಿ ಮೇಳ ಎಂದರೆ ಸಂಚಾರಿ ವಿಶ್ವವಿದ್ಯಾಲಯದಂತೆ. ಈ ಬದಲಾವಣೆಯ ಹಂತವನ್ನು ಯಕ್ಷಗಾನ ಕಲೆ -ಪ್ರೇಕ್ಷಕ ವರ್ಗ - ಬದಲಾದ ದೃಷ್ಟಿಕೋನ - ಸರಣಿ -20ರಲ್ಲಿ ವಿವರಿಸಿದ್ದಾರೆ ಸುರೇಂದ್ರ ಪಣಿಯೂರ್

ಯಕ್ಷಗಾನ ಮೇಳವು ಚರ ಮೇಳವಾಗಿ ರೂಪುಗೊಂಡ ಅಂದಿನ ದಿನಗಳಲ್ಲಿ ಅಂತಹ ಮೇಳಗಳು ಊರೂರು ತಿರುಗಾಟ ಮಾಡುತ್ತಾ ಪ್ರದರ್ಶನ ಕೊಡುವ ವ್ಯವಸ್ಥೆಯನ್ನು ರೂಢಿಸಿಕೊಂಡವು. ಮೇಳಗಳಲ್ಲಿ ಕಲಾಸೇವೆಗಾಗಿ ಸೇರಿಕೊಂಡ ಕಲಾವಿದರು ತಮ್ಮ ಜೀವನೋಪಾಯಕ್ಕಾಗಿ ಅವುಗಳನ್ನು ಆಶ್ರಯಿಸಿದರು. ಈ ರೀತಿ ದುಡಿಯುವ ಕಲಾವಿದರು ಹಾಗೂ ಆಳುಗಳಿಗೆ ಈ ಮೇಳಗಳಿಂದ ತಿರುಗಾಟದ ಸಮಯದಲ್ಲಿ ಸಿಗುವ ಸಂಬಳಕ್ಕಿಂತಲೂ ಹೊಟ್ಟೆತುಂಬ ಸಿಗುವ ಊಟವೇ ದೊಡ್ಡ ವಿಚಾರವಾಗಿತ್ತು. ನಂತರ ಸಿಕ್ಕಿದ ಅತ್ಯಲ್ಪ ಮೊತ್ತದ ಸಂಬಳವು ಸಂಸಾರ ನಿರ್ವಹಣೆಗೆ ಸಣ್ಣ ಪ್ರಮಾಣದ ದಾರಿಯಾಗಿತ್ತು. ಆದರೆ ಕಲಾವಿದರಿಗೆ ಯಕ್ಷಗಾನ ಕಲಾಸೇವೆಯಂತೂ ಸಂಪಾದನೆಯ ಮೂಲ ಉದ್ದೇಶ ಖಂಡಿತಾ ಆಗಿರಲಿಲ್ಲ.

ಹೀಗೆ ತಿರುಗಾಟ ಮಾಡುವ ಯಕ್ಷಗಾನ ಮೇಳಗಳು ತಮ್ಮ ಮೇಳದ ಪ್ರದರ್ಶನ ಏರ್ಪಡಿಸುವ ಸಲುವಾಗಿ ಊರೂರುಗಳಲ್ಲಿ ಕ್ಯಾಂಪ್ ನಿರ್ಧರಿಸಲು ಒಬ್ಬ "ಕ್ಯಾಂಪ್ ಮೆನೇಜರ್" ನನ್ನು ನಿಯುಕ್ತಿಗೊಳಿಸುತ್ತಿದ್ದರು. ಅವನೂ ಕೂಡ ಕಲಾವಿದರಲ್ಲಿ ಓರ್ವನಾಗಿರುತ್ತಿದ್ದ. ಅಥವಾ ಆತ ನಿವೃತ್ತ ಕಲಾವಿದನೇ ಆಗಿರುತ್ತಿದ್ದ ಅನ್ನೋದು ವಿಶೇಷ. ಯಾಕೆಂದರೆ ಅವನು ಕಲಾವಿದನಾಗಿ ಮೇಳ ತಿರುಗಾಟ ಮಾಡಿರುವ ಕಾರಣಕ್ಕೆ ಪ್ರತಿ ಊರವರಿಗೆ ಪರಿಚಿತನಾಗಿದ್ದು ಕ್ಯಾಂಪ್ ನಿಶ್ಚಯ ಮಾಡಲು ಸುಲಭವಾಗುತಿತ್ತು.

ಸಾಧಾರಣವಾಗಿ ಆತನು ಇಂತಹ ಕ್ಯಾಂಪ್‌ಗಳನ್ನು ಒಂದು ವಾರದ ಮೊದಲೇ ನಿಶ್ಚಯ ಮಾಡಿಕೊಂಡು ಯಕ್ಷಗಾನ ಪ್ರದರ್ಶನಕ್ಕೆ ಆ ಊರಿನ ದೇವಸ್ಥಾನ, ಶಾಲಾ ಮೈದಾನ, ತಪ್ಪಿದಲ್ಲಿ ಆ ಊರಲ್ಲಿ ಆಟ ಆಡಿಸುವವರ ಆಶಯದಂತೆ ಊರಿನ ನಡುವೆ ಹತ್ತಿರವಿರುವ ಅನುಕೂಲ ಜಾಗದಲ್ಲಿದ್ದ ಬಯಲಲ್ಲಿ ವ್ಯವಸ್ಥೆ ಮಾಡುತ್ತಿದ್ದನು. ಜೊತೆಗೆ ಮೇಳದ ಕಲಾವಿದರಿಗೆ ಹಾಗೂ ಆಳುಗಳಿಗೆ ಬಿಡಾರದ ವ್ಯವಸ್ಥೆಯನ್ನು ಮಾಡೋದು ಇವನದೇ ಜವಾಬ್ದಾರಿ. ಸಾಮಾನ್ಯವಾಗಿ ಬಿಡಾರವು ಆ ಊರಿನ ದೇವಸ್ಥಾನ, ಶಾಲೆ ಅಥವಾ ದೊಡ್ಡ ಮನೆಗಳಲ್ಲಿ ಆಗುತ್ತಾ ಇತ್ತು. ಈ ರೀತಿಯ ತಿರುಗಾಟ ವ್ಯವಸ್ಥೆಯಲ್ಲಿ ಕ್ಯಾಂಪ್‌ನಿಂದ ಕ್ಯಾಂಪ್‌ಗೆ ಕಲಾವಿದರು ಹಾಗೂ ಕೆಲಸದವರು ತಮ್ಮ ಜೊತೆಗೆ ಮೇಳದ ಸಾಮಾನನ್ನು ತಲೆಮೇಲೆ ಹೊತ್ತುಕೊಂಡೇ ಕ್ರಮಿಸಬೇಕಾಗಿತ್ತು.

ಆ ಕಾಲದಲ್ಲಿ ಕೆಲವು ಮೇಳಗಳ ಸಾಮಾನು ಸಾಗಾಟಕ್ಕೆ ಸುಮಾರು 10 ಜನ ಹೊರೆ ಆಳುಗಳು ಇರುತ್ತಿದ್ದರು. ಅವರು ತಲೆ ಹೊರೆಯಲ್ಲೇ ಸಾಮಾನು ಸರಂಜಾಮುಗಳನ್ನು ಸಾಗಿಸುತ್ತಿದ್ದರು. ಮೇಳದ ಸಾಮಾನುಗಳನ್ನು ದೊಡ್ಡ ದೊಡ್ಡ ಬೆತ್ತದ ಪೆಟ್ಟಿಗೆಗಳಲ್ಲಿ ತುಂಬಿಸಿ ಸಾಗಿಸುವಂತಹ ವ್ಯವಸ್ಥೆ ಇತ್ತು. ಈ ಕಾರಣಕ್ಕಾಗಿ ಕಲಾವಿದರು ಹಾಗೂ ಹೊರೆಯಾಳುಗಳು ನಡೆದೇ ಹೋಗುವಷ್ಟು ದೂರದ ಕ್ಯಾಂಪ್ ನಿಶ್ಚಯ ಮಾಡಲಾಗುತ್ತಿತ್ತು. ಅದು ಸಾಧಾರಣ 5 -6 ಮೈಲಿಗಳ ಒಳಗೆ ಇರಬೇಕಿತ್ತು.

ಈ ರೀತಿಯ ವ್ಯವಸ್ಥೆಯಲ್ಲಿ ಮುಂಚಿತವಾಗಿ ಕ್ಯಾಂಪ್ ನಿಶ್ಚಯ ಮಾಡಲು ಆಗದಿದ್ದಲ್ಲಿ ಅಥವಾ ನಿಗದಿತ ಕ್ಯಾಂಪ್ ಅನಿರೀಕ್ಷಿತವಾಗಿ ರದ್ದುಗೊಂಡ ದೆಸೆಯಿಂದ ದಿಢೀರ್ ಕ್ಯಾಂಪ್ ನಿಗದಿಗೊಳಿಸಲು ಆತ ಅಂದಿನ ಆಟ ಮುಗಿಯುವ ಮೊದಲೇ ನಸುಕಿನಲ್ಲಿ ಹೊರಡುತ್ತಿದ್ದ. ಈ ಸಂದರ್ಭದಲ್ಲಿ  ಕಲಾವಿದರಿಗೆ ಆ ದಿನದ ಕ್ಯಾಂಪ್ ತಲುಪಲು ಮಾರ್ಗ ಸೂಚನೆಗಾಗಿ ದಾರಿಯಲ್ಲಿ ಹೋಗುತ್ತಾ ಅಲ್ಲಲ್ಲಿ ಸೊಪ್ಪಿನ ಗುರುತನ್ನು ಇಟ್ಟುಕೊಂಡು ಹೋಗುತ್ತಾ ಇದ್ದ. ಈ ರೀತಿಯ ವ್ಯವಸ್ಥೆಯು ಅನಿರೀಕ್ಷಿತವಾಗಿ ನಿಗದಿತವಾದ ಪ್ರದರ್ಶನದ ಸ್ಥಳ (ಕ್ಯಾಂಪ್) ತಲುಪಲು ಇದ್ದಂತಹ ಒಂದು ಜನಪದೀಯ ವ್ಯವಸ್ಥೆಯಾಗಿತ್ತು.

ಹೀಗೆ ಕಾಲ್ನಡಿಗೆಯಲ್ಲಿ ಕ್ಯಾಂಪಿನಿಂದ ಕ್ಯಾಂಪಿಗೆ ಹೋಗುವ ಕಾಲದಲ್ಲಿ ದೂರದ ಊರಿನಲ್ಲಿ ಕ್ಯಾಂಪ್ ನಿಶ್ಚಯ ಆಗಿದ್ದ ಸಂದರ್ಭದಲ್ಲಿ ಎಷ್ಟೋ ಸಲ ಮಧ್ಯಾಹ್ನದ ಊಟ ತಪ್ಪಿ ಕೇವಲ ಅವಲಕ್ಕಿ ಫಲಹಾರವನ್ನೇ ಸೇವಿಸಿಕೊಂಡು ಮಲಗಿ, ವಿಶ್ರಾಂತಿ ಮಾಡಿ ರಾತ್ರಿ ಹೊತ್ತಿನ ಒಂದೇ ಊಟವನ್ನು ಮಾಡಿಕೊಂಡು ವೇಷ ಮಾಡಿ ರಂಗದಲ್ಲಿ ರಾತ್ರಿ ಇಡೀ ಕುಣಿವ ಸಂದರ್ಭವೂ ಇರುತ್ತಿತ್ತು ಎಂಬುದನ್ನು ಗಮನಿಸಬೇಕು.

1950ರ ದಶಕದಲ್ಲಿ ಯಕ್ಷಗಾನ ಮೇಳಗಳ ಯಜಮಾನರುಗಳು ನಾಟಕ ಕಂಪನಿಗಳ ವ್ಯವಸ್ಥೆಯಿಂದ ಪ್ರೇರಿತರಾಗಿ ಮೇಳಕ್ಕೆ ಸಂಪಾದನೆಯನ್ನು ಗುರಿಯಾಗಿಸಿಕೊಂಡು ಡೇರೆ ಮೇಳಗಳೆನ್ನುವ ಹೊಸ ಕಲ್ಪನೆಯನ್ನು ಸಾಕಾರಗೊಳಿಸಿ ಪ್ರೇಕ್ಷಕರಿಂದ ನಿಗದಿತ ಹಾಸಲು (ಟಿಕೆಟ್)ಗಳನ್ನು ಸಂಗ್ರಹಿಸಿಕೊಂಡು ಪ್ರದರ್ಶನ ನೀಡಲು ಆರಂಭಿಸಿದರು. ಆ ಸಮಯದಲ್ಲಿ ಮೇಳದ ಸಾಮಾನು ಸಾಗಾಟಕ್ಕೆ ಮೋಟಾರು ವಾಹನಗಳ ಬಳಕೆ ಆರಂಭಗೊಂಡಿತು.

ಸರಕು ಸಾಗಾಟದಲ್ಲಿ ಆದ ಸುಧಾರಣೆಯ ಹಂತವಾಗಿ ಬಯಲಾಟದ ಮೇಳಗಳಲ್ಲಿ ಸುಮಾರು 1960ರ ದಶಕದಿಂದ ಎತ್ತಿನ ಗಾಡಿಯನ್ನು ಬಳಸಿಕೊಳ್ಳಲಾಯ್ತು. ಇದರಿಂದ ಮೇಳದ ಹೊರೆಯಾಳುಗಳಿಗೆ ಶ್ರಮ ತಪ್ಪಿತು. ಒಂದಷ್ಟು ಬಾಲ ಕಲಾವಿದರೂ ಅದರಲ್ಲೇ ಪ್ರಯಾಣಿಸಿ ಸುಖವುಂಡರು. ಇದೇ ಸುಧಾರಣೆಯ ಮುಂದುವರಿದ ಭಾಗವಾಗಿ ಸಾಗಾಟಕ್ಕೆ, ಕಲಾವಿದರ ಪ್ರಯಾಣಕ್ಕೆ ಮೋಟಾರು ವಾಹನಗಳನ್ನೂ ಬಳಕೆ ಆರಂಭವಾಯಿತು.

ಈ ಮೇಳದ ಸಾಮಾನು ಸಾಗಾಟದಲ್ಲಿ ಆದ ಸುಧಾರಣೆ ಹಾಗೂ ಬದಲಾವಣೆಗಳ ಪರಿಣಾಮವನ್ನು ಅವಲೋಕಿಸಿದರೆ, ಮೇಳದ ಕಲಾವಿದರಾದಿಯಾಗಿ ಎಲ್ಲರಿಗೂ ಕಾಲ್ನಡಿಗೆಯ ಶ್ರಮ ತಪ್ಪಿತು. ವಿಶ್ರಾಂತಿ ಪಡೆವ ಅವಧಿ ಹೆಚ್ಚಾಗಿ ಸೌಖ್ಯವುಂಟಾಯಿತು. ಇದರಿಂದ ಮೇಳವಾಸಿಗಳ ಆರೋಗ್ಯ ಸುಧಾರಿಸಿತು.
ಒಮ್ಮೆ ಮೇಳದ ತಿರುಗಾಟ ಆರಂಭಗೊಂಡ ಮೇಲೆ ಮೇಳದ ಕಲಾವಿದರು ಮನೆಗೆ ಪದೇ ಪದೇ ಭೇಟಿ ಕೊಡುತ್ತಿದ್ದದ್ದು ಅಪರೂಪ. ಹೆಚ್ಚು ಕೇಳಿದರೆ ಮೇಳದ ಕಲಾವಿದರೊಂದಿಗೆ ಮನೆಯವರಿಗೆ ಸಂಪರ್ಕ ಸಂವಹನಕ್ಕೂ ತೊಂದರೆ ಇದ್ದ ದಿನಗಳವು. ದಿನವೂ ಮನೆಗೆ ಹೋಗಿ ಬರಲು ಅನುಕೂಲವಾಗುವಂತೆ ವಾಹನದ ವ್ಯವಸ್ಥೆಯೂ ಇದ್ದಿರಲಿಲ್ಲ. ಹಾಗಾಗಿ ಅಪರೂಪದಲ್ಲಿ ಹದಿನೈದು ದಿನಕ್ಕೊಮ್ಮೆ, ತಿಂಗಳಿಗೊಮ್ಮೆ ಅಥವಾ ಹಬ್ಬ ಹರಿದಿನ ವಿಶೇಷಗಳಿಗಷ್ಟೇ ಅಗತ್ಯವಿದ್ದಲ್ಲಿ ಕಲಾವಿದರು ತಮ್ಮ ಮನೆಗೆ ಹೋಗಿ ಬರುತ್ತಿದ್ದರು. ಆ ಕಾಲದ ಅವಿಭಕ್ತ ಕುಟುಂಬ ವ್ಯವಸ್ಥೆಯಲ್ಲಿ ಕಲಾವಿದರಿಗೂ ತಮ್ಮ ಕುಟುಂಬದ ಪರಿಪಾಲನೆ ಹಾಗೂ ಜೋಪಾಸನೆಗಾಗಿ ಚಿಂತಿಸುವ ತೊಂದರೆ ಇರುತ್ತಿರಲಿಲ್ಲ.

ಮೇಳವೇ ಗುರುಕುಲ
ಹಾಗಾಗಿ ಕಲಾವಿದರಿಗೆ ಹಗಲು ಹೊತ್ತು ಬಿಡಾರದಲ್ಲಿ, ರಾತ್ರಿ ಹೊತ್ತು ರಂಗಸ್ಥಳದಲ್ಲಿ ಹಿರಿಯ ಕಲಾವಿದರಿಂದ ಹೆಜ್ಜೆಗಾರಿಕೆ, ಮಾತುಗಾರಿಕೆ, ಹಿಮ್ಮೇಳವಾದನ, ಭಾಗವತಿಕೆ, ಪ್ರಸಂಗನಡೆ ನಿರ್ವಹಣೆ ಅನುಭವ ಎಲ್ಲವನ್ನೂ ಕಲಿಯುವ ಅವಕಾಶವಿತ್ತು. ಈ ಅವಕಾಶವನ್ನು ಮೇಳದಲ್ಲಿ ಕಾಯಂ ಆಗಿಯೇ ಇರುತ್ತಿದ್ದ ಕಲಾವಿದರು ಧಾರಾಳವಾಗಿ ಬಳಸಿಕೊಂಡು ವಿವಿಧ ಹಂತಗಳನ್ನು ದಾಟಿಕೊಂಡು ಪಕ್ವತೆಯನ್ನು ಗಳಿಸಿ ಪರಿಪೂರ್ಣವಾಗಿ ರೂಪುಗೊಳ್ಳುತ್ತಿದ್ದರು. ಈ ರೀತಿಯಲ್ಲಿ ಯಕ್ಷಗಾನ ಮೇಳವೆಂಬುದು ಸಂಚಾರಿ ವಿಶ್ವವಿದ್ಯಾಲಯ ಇದ್ದ ಹಾಗೆ ಇತ್ತು. ಇದೊಂದು ರೀತಿಯ ಗುರುಕುಲ ರೀತಿಯಲ್ಲಿ 'ನೋಡಿ ತಿಳಿದು ಮಾಡಿ ಕಲಿಯುವಿಕೆಯ' ವಿಧಾನವಾಗಿತ್ತು.

ಆನಂತರದ ದಿನಗಳಲ್ಲಿ ಮೇಳದ ಕಲಾವಿದರ ಸಂಪಾದನೆಯ ಪರಿಸ್ಥಿತಿಯಲ್ಲಿ ಸುಧಾರಣೆ ಹೊಂದಿತು. ಕೈಯಲ್ಲಿ ಹಣ ಓಡಾಡಿತು. ನಿತ್ಯ ಪ್ರಯಾಣದ ವ್ಯವಸ್ಥೆಯು ಬದಲಾಯಿತು. ಬಸ್ಸುಗಳ ಅನುಕೂಲವಾಯಿತು. ನಂತರ ಕಲಾವಿದರೂ ಸ್ವಂತ ವಾಹನದ ವ್ಯವಸ್ಥೆ ಮಾಡಿಕೊಂಡರು. ದಿನಾಲೂ ಮನೆಗೆ ಹೋಗಿ ಬರುವ ಕಲಾವಿದ ಮೇಳಕ್ಕೆ ತನ್ನ ರಂಗ ನಿರ್ವಹಣೆಯ ಹೊತ್ತಿಗೆ ಚೌಕಿಗೆ ಬಂದು ಬಣ್ಣ ಹಚ್ಚಿ ತನ್ನ ವೇಷ ನಿರ್ವಹಣೆ ಮುಗಿದ ಕೂಡಲೇ ವೇಷ ಕಳಚಿ ಬಣ್ಣ ಒರೆಸಿ ರಾತ್ರಿಯಲ್ಲಿಯೇ ಮನೆಯತ್ತ ತನ್ನ ವಾಹನವೇರಿ ಹೊರಟ. ಈ ವಿದ್ಯಮಾನ ಇತ್ತೀಚಿನದು. ಈ ಕಾರಣದಿಂದ ಮೇಳದ ಬಿಡಾರದಲ್ಲಿ ವಿಶ್ರಮಿಸುವ ಕಲಾವಿದರ ಸಂಖ್ಯೆ ಕಡಿಮೆಯಾಯಿತು. ಬೆರಳೆಣಿಕೆಯಷ್ಟು ಕಲಾವಿದರು ಮಾತ್ರ ಬಿಡಾರದಲ್ಲಿ ಅನಿವಾರ್ಯತೆಯಿಂದ ಉಳಿದರು. ಇದಕ್ಕೆ ಇನ್ನೊಂದು ಕಾರಣವೂ ಇದೆ.

ಅರೆಕಾಲಿಕವಾಯಿತು ಯಕ್ಷಗಾನ ಕಲಾ ವ್ಯವಸಾಯ
ಆಧುನಿಕ ಪ್ರಪಂಚದಲ್ಲಿ ಅವಿಭಕ್ತ ಕುಟುಂಬಗಳು ಹರಿದು ಹಂಚಾಗಿ ಒಂದು ಮಗು, ಗಂಡ, ಹೆಂಡತಿಯೆಂಬ ಮೈಕ್ರೋ ಕುಟುಂಬ ವ್ಯವಸ್ಥೆಯು ಪ್ರಚಲಿತಕ್ಕೆ ಬಂದಿತು. ಹಾಗಾಗಿ ಕಲಾವಿದರಿಗೆ ಮನೆಬದಿಯ ಜವಾಬ್ದಾರಿಯೂ ಹೆಚ್ಚಿತು. ಜೊತೆಗೆ ಯಕ್ಷಗಾನದ ಮೇಲಿನ ಅಸಕ್ತಿಗಾಗಿ ಮೇಳ ಸೇರಿದ ಕಲಾವಿದ ಅಲ್ಲಿಯ ಸಂಪಾದನೆಯಿಂದ ಸದ್ಯದ ಕಾಲದ ದುಬಾರಿ ಖರ್ಚಿನ ಹಣದುಬ್ಬರದ ವ್ಯವಸ್ಥೆಯಲ್ಲಿ ತನ್ನ ಸಂಸಾರದ ನಿರ್ವಣೆಯ ಖರ್ಚು ವೆಚ್ಚವನ್ನು ಸರಿತೂಗಿಸಲು ಕಷ್ಟವಾಗಿ, ಹಗಲಿಗೆ ಅನ್ಯ ಉದ್ಯೋಗವನ್ನೂ ಆಶ್ರಯಿಸುವ ಅನಿವಾರ್ಯತೆಗೆ ಒಳಗಾದ. ಹಾಗಾಗಿ ಈಗ ಯಕ್ಷಗಾನ ಕ್ಷೇತ್ರದಲ್ಲಿ ಹಗಲಿಗೆ ಅನ್ಯ ವೃತ್ತಿಯಾದ ಉಪನ್ಯಾಸಕರು ವಿವಿಧ ಕ್ಷೇತ್ರದ ತಂತ್ರಜ್ಞರೂ, ಕಲಾವಿದರಾಗಿ ದುಡಿಯುತ್ತಿರುವುದನ್ನು ಕಾಣಬಹುದು. ಇದಕ್ಕೆ ಇನ್ನೊಂದು ಕಾರಣ ಯಕ್ಷಗಾನ ಕ್ಷೇತ್ರದಲ್ಲಿ ಕಲಾವಿದನ ಸ್ಥಾನಕ್ಕೆ (ಕೇಡರ್) ಅನುಗುಣವಾಗಿ ಸಂಬಳ ನಿಗದಿಯಿಲ್ಲದಿರುವುದು. ಅಲ್ಲಿ ಏನಿದ್ದರೂ, ಜನಾಕರ್ಷಣೆಯ ಮಾನದಂಡಗಳನ್ನು ಆಧರಿಸಿದ ಮೋಹಬೆಲೆಯ ಸಂಬಳ. ಹಾಗಾಗಿ ಎಲ್ಲ ಕಲಾವಿದರಿಗೂ ಕೈ ತುಂಬಾ ಸಂಪಾದನೆ ಇದೆಯೆಂದು ಹೇಳಲು ಅಸಾಧ್ಯ. ಹೀಗಾಗಿ ಕಲಾವಿದರು ಮೇಳದಲ್ಲಿ ಕೇವಲ ಪ್ರದರ್ಶನ ಕಾಲಕ್ಕೆ ಮಾತ್ರ ಲಭ್ಯವಾದರು. ಇದೊಂದು ರೀತಿಯಲ್ಲಿ ಅರೆಕಾಲಿಕ ಅಥವಾ ಪಾರ್ಟ್ ಟೈಮ್ ಅಥವಾ ಫ್ರೀಲ್ಯಾನ್ಸ್ ಉದ್ಯೋಗ ಅನಿಸಿಕೊಂಡಿತು.

ಅಧ್ಯಯನಕ್ಕೆ, ಅಭ್ಯಾಸಕ್ಕೆ ಅಡಚಣೆ
ಈ ರೀತಿಯ ಬದಲಾವಣೆಯಿಂದ ಯಕ್ಷಗಾನ ಕ್ಷೇತ್ರದಲ್ಲಿ ಕಲಿಯುವಿಕೆಯ ಬದ್ಧತೆ ಕಡಿಮೆಯಾಯಿತು. ವೇಗ ಜೀವನವನ್ನು ರೂಢಿಸಿಕೊಂಡ ಕಲಾವಿದರು ರಂಗವೇರುವ ಹೊತ್ತಿಗೆ ಬಂದು ಆ ಹೊತ್ತಿಗೆ ಹೊಳೆದಷ್ಟು ನಿರ್ವಹಣೆಗೈದು ಮನೆಗೆ ನಿರ್ಗಮಿಸುವ ಧಾವಂತವೇ ಹೆಚ್ಚಾಗಿದೆ. ಇದರಿಂದ ಅಧ್ಯಯನಪೂರ್ವಕವಾಗಿ, ಪರಿಪೂರ್ಣವಾದ ರಂಗ ಕಲೆಯ ಸಾರವನ್ನು ರಂಗದಲ್ಲಿ ಕೊಡಲು ಅಸಾಧ್ಯವಾಯಿತು. ಇದು ಕೂಡಾ ಇಂದಿನ ಯಕ್ಷಗಾನ ಪ್ರದರ್ಶನಗಳು ಸೊರಗಲು ಕಾರಣವಾಗಿದೆ. ಆದರೆ ಇದಕ್ಕೆ ಅಪವಾದ ಎಂಬಂತೆ ಪ್ರಸ್ತುತ  ತಮ್ಮ ಅಧ್ಯಯನಶೀಲ ಹಾಗೂ ಸಾಧಿಸುವ ಮನೋಧರ್ಮದಿಂದ ಕೆಲವೇ ಕೆಲವು ಪ್ರತಿಭಾವಂತ ಯುವ ಕಲಾವಿದರು ರಂಗದಲ್ಲಿ ಗುರುತಿಸಿಕೊಂಡಿರುವುದು ಸಂತಸದ ವಿಚಾರ ಹಾಗೂ ಯಕ್ಷಗಾನ ಕ್ಷೇತ್ರಕ್ಕಾದ ಲಾಭ.

ಯಕ್ಷಗಾನ ಕ್ಷೇತ್ರದಲ್ಲಿ ಸರಕು ಸಾಗಾಣಿಕೆ ಹಾಗೂ ಸಾರಿಗೆ ವ್ಯವಸ್ಥೆ ವಿಚಾರದಲ್ಲಿ ಆಗಿರುವ ಸುಧಾರಣೆ ಖಂಡಿತ ಖುಷಿಯ ವಿಚಾರ. ಯುವ ಕಲಾವಿದರು ಈ ರೀತಿಯ ಸೌಲಭ್ಯದ ಜೊತೆಗೆ, ಯಕ್ಷಗಾನ ರಂಗದಲ್ಲಿ ತಮ್ಮ ಅಧ್ಯಯನಶೀಲ ಸಾಧನೆಯನ್ನು ಮೈಗೂಡಿಸಿಕೊಂಡು ಯಕ್ಷಗಾನ ಕಲೆಯನ್ನು ಮುಂದಿನ ಪೀಳಿಗೆಗೆ ಯಕ್ಷಗಾನವಾಗಿಯೇ ಉಳಿಸಿಕೊಳ್ಳುವಲ್ಲಿ ನಿರತರಾಗಬೇಕೆಂದು ಕಳಕಳಿಯ ವಿನಂತಿ. (ಸಶೇಷ)

✍ ಸುರೇಂದ್ರ ಪಣಿಯೂರು

1 ಕಾಮೆಂಟ್‌ಗಳು

ನಿಮ್ಮ ಅಭಿಪ್ರಾಯ ತಿಳಿಸಿ

ನವೀನ ಹಳೆಯದು