ಕರ್ಗಲ್ಲು ವಿಶ್ವೇಶ್ವರ ಭಟ್, ವಾಸುದೇವ ರಾವ್, ಕೆರೆಕೈ ಉಮಾಕಾಂತ ಭಟ್ ಅವರಿಗೆ ಯಕ್ಷಗಾನ ಕಲಾರಂಗ ಪ್ರಶಸ್ತಿ ಪ್ರದಾನ

ಕರ್ಗಲ್ಲು ವಿಶ್ವೇಶ್ವರ ಭಟ್, ಕೆರೆಕೈ ಉಮಾಕಾಂತ ಭಟ್, ವಾಸುದೇವ ರಾವ್ ಸುರತ್ಕಲ್ ಅವರಿಗೆ ಪ್ರಶಸ್ತಿ ಪ್ರದಾನ

ಉಡುಪಿ: ಕಲಿಕೆಯಲ್ಲಿ ಯಕ್ಷಗಾನವನ್ನು ಅಳವಡಿಸಿಕೊಳ್ಳಬೇಕಾದ ಅಗತ್ಯವಿದೆ ಎಂದು ಮಂಗಳೂರು ವಿವಿ ಕುಲಪತಿ ಪ್ರೊ.ಪಿ.ಎಸ್.ಯಡಪಡಿತ್ತಾಯ ಅವರು ವ್ಯಕ್ತಪಡಿಸಿದ್ದಾರೆ.

ಶ್ರೀ ಕೃಷ್ಣಮಠದ ಪರ್ಯಾಯ ಶ್ರೀ ಅದಮಾರು ಮಠ ಆಶ್ರಯದಲ್ಲಿ ಭಾನುವಾರ ಉಡುಪಿಯ ಯಕ್ಷಗಾನ ಕಲಾರಂಗವು ರಾಜಾಂಗಣದಲ್ಲಿ ಆಯೋಜಿಸಿದ್ದ ಕಲಾರಂಗದ ಪ್ರಶಸ್ತಿ ಪ್ರದಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.

ಕಲಿಕೆಯಾಗಿ ಯಕ್ಷಗಾನವನ್ನು ಅಳವಡಿಸುವಲ್ಲಿ ವಿದ್ವಾಂಸರು ಹಾಗೂ ಯಕ್ಷಗಾನದ ಪೋಷಕ ಸಂಸ್ಥೆಗಳ ಸಹಕಾರ ಅಗತ್ಯವಿದೆ. ಮಂಗಳೂರು ವಿವಿಯ ಯಕ್ಷಗಾನ ಪೀಠವು ಈಗ ದಶಮಾನೋತ್ಸವವನ್ನು ಆಚರಿಸುತ್ತಿದ್ದು, ಯಕ್ಷಗಾನ ಶಿಕ್ಷಣ, ಪ್ರಕಾಶನ, ಸಂಶೋಧನೆಗಳಲ್ಲಿ ವಿವಿ ಸಹಕಾರವನ್ನು ನೀಡಲಿದೆ ಎಂದವರು ಹೇಳಿದರು.
ತೆಂಕುತಿಟ್ಟಿನ ಯಕ್ಷಗಾನದ ಗುರು, ನಾಟ್ಯಾಚಾರ್ಯ ಕರ್ಗಲ್ಲು ವಿಶ್ವೇಶ್ವರ ಭಟ್ ಅವರಿಗೆ ತಲ್ಲೂರು ಕನಕಾ ಅಣ್ಣಯ್ಯ ಶೆಟ್ಟಿ ಪ್ರಶಸ್ತಿ ಹಾಗೂ 40 ಸಾವಿರ ರೂ. ನಗದು ಪುರಸ್ಕಾರ, ತಾಳಮದ್ದಳೆ ಅರ್ಥಧಾರಿ, ಸಂಘಟಕ ಸುರತ್ಕಲ್ ವಾಸುದೇವ ರಾವ್ ಅವರಿಗೆ ಮಟ್ಟಿ ಮುರಳೀಧರ ರಾವ್ ಪ್ರಶಸ್ತಿ, ತಾಳಮದ್ದಳೆ ಅರ್ಥಧಾರಿ, ವಿದ್ವಾಂಸ ವಿ.ಉಮಾಕಾಂತ ಭಟ್ ಕೆರೆಕೈ ಅವರಿಗೆ ಪೆರ್ಲ ಪಂಡಿತ ಕೃಷ್ಣ ಭಟ್ ಪ್ರಶಸ್ತಿಯನ್ನು (ತಲಾ 20 ಸಾವಿರ ರೂ. ನಗದು ಪುರಸ್ಕಾರ) ಪ್ರದಾನ ಮಾಡಲಾಯಿತು.

ಪ್ರಶಸ್ತಿ ಪ್ರದಾನ ಮಾಡಿ ಆಶೀರ್ವಚನ ನೀಡಿದ ಅದಮಾರು ಶ್ರೀ ಈಶಪ್ರಿಯತೀರ್ಥ ಸ್ವಾಮೀಜಿಯವರು, "ಭಗವಂತನನ್ನು ಅರಿಯಲು ನಮ್ಮ ಪೂರ್ವಜರು ಬೇರೆ ಬೇರೆ ವೇದಿಕೆಗಳನ್ನು ಸೃಷ್ಟಿಸಿದರು. ಅವುಗಳಲ್ಲಿ ಯಕ್ಷಗಾನ, ತಾಳಮದ್ದಳೆಗಳೂ ಸೇರಿವೆ. ಸಾಮಾನ್ಯ ಜನರೂ ಇಂತಹ ವೇದಿಕೆಗಳಲ್ಲಿ ಭಾಗವಹಿಸಿದರೆ ಲಾಭಕರ. ಕಲಾವಿದರು ಉತ್ತಮ ಸಮಾಜ ನಿರ್ಮಾಣದ ಕೆಲಸ ಮಾಡುತ್ತಿದ್ದಾರೆ. ಇವರೆಲ್ಲರು ಹೃದಯಗಂಗೆಯಲ್ಲಿ ಗಂಗಾಸ್ನಾನ ಮಾಡಿಸುವ ಪರಿಶ್ರಮ ಅಮೂಲ್ಯ" ಎಂದು ನುಡಿದರು.

ಪ್ರಶಸ್ತಿಯನ್ನು ಪ್ರಾಯೋಜಿಸಿರುವ ತಲ್ಲೂರು ಫ್ಯಾಮಿಲಿ ಟ್ರಸ್ಟ್ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ, ಕೊಲ್ಲೂರು ದೇವಸ್ಥಾನದ ಮಾಜಿ ಧರ್ಮದರ್ಶಿ ಕೃಷ್ಣಪ್ರಸಾದ ಅಡ್ಯಂತಾಯ ವೇದಿಕೆಯಲ್ಲಿದ್ದರು.

ಕಲಾರಂಗದ ಅಧ್ಯಕ್ಷ ಎಂ.ಗಂಗಾಧರ ರಾವ್ ಸ್ವಾಗತಿಸಿ, ಕಾರ್ಯದರ್ಶಿ ಮುರಳಿ ಕಡೆಕಾರ್ ಕಾರ್ಯಕ್ರಮ ನಿರ್ವಹಿಸಿದರು. ನಾರಾಯಣ ಹೆಗಡೆಯವರು ಪ್ರಶಸ್ತಿ ಪುರಸ್ಕೃತರನ್ನು ಪರಿಚಯಿಸಿದರು. ಜೊತೆ ಕಾರ್ಯದರ್ಶಿ ಎಚ್.ಎನ್.ಶೃಂಗೇಶ್ವರ ವಂದಿಸಿದರು. ಉಪಾಧ್ಯಕ್ಷರಾದ ಎಸ್.ವಿ.ಭಟ್, ಪಳ್ಳಿ ಕಿಶನ್ ಹೆಗ್ಡೆ ಕೂಡ ವೇದಿಕೆಯಲ್ಲಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

ನವೀನ ಹಳೆಯದು