ಭಾಗವತ ಪದ್ಯಾಣ ಗಣಪತಿ ಭಟ್ ನಿಧನ: ಪದ ಯಾನಕ್ಕೆ ಮಂಗಳ ಹಾಡಿ ನಿರ್ಗಮಿಸಿದ ಪದ್ಯಾಣ


ಮಂಗಳೂರು:
ತೆಂಕುತಿಟ್ಟು ಯಕ್ಷಗಾನ ರಂಗದ ಅಗ್ರಮಾನ್ಯ ಭಾಗವತರಾದ ಪದ್ಯಾಣ ಗಣಪತಿ ಭಟ್ ಅವರು ಮಂಗಳವಾರ ಬೆಳಿಗ್ಗೆ ತಮ್ಮ ಮನೆಯಲ್ಲಿ ನಿಧನರಾದರು. ಅವರಿಗೆ 66 ವರ್ಷ ವಯಸ್ಸಾಗಿತ್ತು.

ಕೆಲವು ತಿಂಗಳ ಹಿಂದೆ ಕೊರೊನಾ ಅವರನ್ನು ಬಾಧಿಸಿತ್ತು. ಆ ಬಳಿಕ ನ್ಯೂಮೋನಿಯಾಕ್ಕೆ ತಿರುಗಿತ್ತು. ಈ ನಡುವೆ ಹೃದಯ ಸಂಬಂಧಿ ಕಾಯಿಲೆಯೂ ಅವರನ್ನು ಕಾಡಿತ್ತು.  ಇಂದು ಬೆಳಿಗ್ಗೆ  ಕಲ್ಮಡ್ಕದ ಮನೆಯಲ್ಲಿ ಉಲ್ಲಾಸದಿಂದಲೇ ಇದ್ದ ಪದ್ಯಾಣರು, ಅಚಾನಕ್ ಆಗಿ ಹೃದಯಾಘಾತದಿಂದ ನಿಧನರಾಗಿ ಯಕ್ಷಗಾನ ಲೋಕಕ್ಕೆ ಆಘಾತ ಉಂಟು ಮಾಡಿದ್ದಾರೆ.

ಪದ್ಯಾಣ ಅವರ ಹಠಾತ್ ನಿಧನದ ಸುದ್ದಿ ತಿಳಿಯುತ್ತಿದ್ದಂತೆಯೇ ಯಕ್ಷಗಾನ ಅಭಿಮಾನಿಗಳು, ಆಘಾತಕ್ಕೀಡಾದರು. ಸಾಮಾಜಿಕ ಮಾಧ್ಯಮಗಳಲ್ಲೆಲ್ಲಾ ಯಕ್ಷಗಾನ ಅಭಿಮಾನಿಗಳು ಕಂಬನಿ ಸುರಿಸಿದ್ದಾರೆ.

ಯಕ್ಷಗಾನ ರಂಗಕ್ಕೆ ಪದ್ಯಾಣ ಮನೆತನದ ಕೊಡುಗೆ ಅಪಾರ. ಈ ಮನೆತನದ ಪದ್ಯಾಣ ತಿರುಮಲೇಶ್ವರ ಭಟ್ಟ ಮತ್ತು ಸಾವಿತ್ರಿ ದಂಪತಿಯ ಮೂರನೇ ಮಗನಾಗಿ 1955ರಲ್ಲಿ ಗಣಪತಿ ಭಟ್ ಜನಿಸಿದ್ದರು. ಆ ಕಾಲದಲ್ಲಿ ಭಾಗವತಿಕೆಗೆ ಹೆಸರಾಗಿದ್ದ ಅಜ್ಜ ಪುಟ್ಟು ನಾರಾಯಣ ಭಟ್ಟರಿಂದಲೇ ಭಾಗವತಿಕೆಯ ಪ್ರಾಥಮಿಕ ಪಾಠ ಪಡೆದು, ಬಳಿಕ ಮಾಂಬಾಡಿ ನಾರಾಯಣ ಭಾಗವತರಲ್ಲಿ ಅಭ್ಯಾಸ ಮುಂದುವರಿಸಿದರು.
ಭಾಗವತಿಕೆಯ ಸೂಕ್ಷ್ಮಪಾಠ, ತಾಳಗತಿ ಹಾಗೂ ಪಟ್ಟುಗಳಲ್ಲಿ ಪರಿಣತಿ ಹೊಂದಿದ್ದ ಗಣಪತಿ ಭಟ್ಟರು ತಮ್ಮ 16ರ ವಯಸ್ಸಿನಲ್ಲೇ ಚೌಡೇಶ್ವರೀ ಮೇಳಕ್ಕೆ ಸಂಗೀತಗಾರರಾಗಿ ಸೇರುವ ಮೂಲಕ ತಮ್ಮ ಪದ ಯಾನ ಆರಂಭಿಸಿದ್ದರು. ಬಳಿಕ ಕುಂಡಾವು ಮೇಳ, ಕಸ್ತೂರಿ ವರದರಾಯ ಪೈ ಯಾಜಮಾನ್ಯದ ಸುರತ್ಕಲ್‌ ಮೇಳ ಸೇರಿ ಖ್ಯಾತಿಯ ಉತ್ತುಂಗಕ್ಕೇರಿದರು.

ಯಕ್ಷರಂಗದ ಭೀಷ್ಮ ಎಂದು ಕರೆಸಿಕೊಂಡಿರುವ ಡಾ| ಶೇಣಿ ಗೋಪಾಲಕೃಷ್ಣ ಭಟ್ಟ, ಯಕ್ಷರಂಗದ ಮತ್ತೊಬ್ಬ ವಿದ್ವಾಂಸ ಶಂಕರನಾರಾಯಣ ಸಾಮಗ, ತೆಕ್ಕಟ್ಟೆ ಆನಂದ ಮಾಸ್ತರ್‌, ಕುಂಬ್ಳೆ ಸುಂದರ ರಾವ್‌ ಮೊದಲಾದ ಕಲಾವಿದರೊಂದಿಗೆ ಸುರತ್ಕಲ್‌ ಮೇಳದಲ್ಲಿ ಪದ್ಯಾಣರು ತಮ್ಮ ಇಂಪಾದ ಕಂಠ, ಏರು ಶ್ರುತಿ, ಭಾವನಾತ್ಮಕ ಗಾಯನದಿಂದ ಯಕ್ಷರಂಗಕ್ಕೆ ತಮ್ಮದೇ ಆದ ಶೈಲಿಯ ಕೊಡುಗೆ ನೀಡಿದರು.

ಸುರತ್ಕಲ್ ಮೇಳವು ತಿರುಗಾಟ ನಿಲ್ಲಿಸಿದ ತರುವಾಯ ಅವರು ಬಪ್ಪನಾಡು, ಮಂಗಳಾದೇವಿ, ಕರ್ನಾಟಕ, ಎಡನೀರು ಹಾಗೂ ಹೊಸನಗರ ಮೇಳಗಳಲ್ಲಿ ತಮ್ಮ ಕಂಠ ಸಿರಿಯನ್ನು ಹರಿಸಿ ಅಪಾರ ಅಭಿಮಾನಿಗಳನ್ನು ಗಳಿಸಿಕೊಂಡರು. ನಾಲ್ಕು ದಶಕಗಳಿಂದ ಅವರ ಯಕ್ಷಗಾನ ಕಲಾಯಾನ ಮುಂದುವರಿದಿತ್ತು.  ಸರ್ವಜನಮಾನ್ಯರಾದ, ಸಜ್ಜನ ಪದ್ಯಾಣರು ಗಾನಗಂಧರ್ವರೆಂದೇ ಖ್ಯಾತರಾದವರು. ಯಕ್ಷಗಾನದ ಅಮೂಲ್ಯ ಕೊಂಡಿಯೊಂದು ಕಳಚಿಬಿದ್ದಂತಾಗಿದೆ.

ಅವರು ಪತ್ನಿ ಶೀಲಾಶಂಕರಿ, ಇಬ್ಬರು ಮಕ್ಕಳು ಸ್ವಸ್ತಿಕ್ ಹಾಗೂ ಕಾರ್ತಿಕ್ ಅವರನ್ನು ಅಗಲಿದ್ದಾರೆ.

ಹಲವಾರು ಪ್ರಶಸ್ತಿಗಳು ಅವರಿಗೆ ಸಂದಿದ್ದು, ಅಭಿಮಾನಿಗಳು ಸನ್ಮಾನಿಸಿದ್ದಾರೆ. 60ರ ಸಂದರ್ಭದಲ್ಲಿ ಪದ್ಯಾಣ ಪದಯಾನ ಎಂಬ ಅಭಿನಂದನ ಗ್ರಂಥ ಗೌರವವನ್ನು ಅಭಿಮಾನಿಗಳು ಅವರಿಗೆ ಅರ್ಪಿಸಿದ್ದಾರೆ. ಈ-ಟಿವಿಯ ಎದೆತುಂಬಿ ಹಾಡುವೆನು ಕಾರ್ಯಕ್ರಮದಲ್ಲಿ ಗಾಯಕ ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರೊಂದಿಗೆ ಭಾಗವಹಿಸಿದ ಯಕ್ಷಗಾನದ ಭಾಗವತರೆಂಬ ಕೀರ್ತಿ ಅವರದು.

ಪದ್ಯಾಣ ಗಣಪತಿ ಭಟ್ ಅವರನ್ನು ಕಳೆದುಕೊಂಡ ಯಕ್ಷಗಾನ ರಂಗವು ಬಡವಾಗಿದೆ. ತಮ್ಮದೇ ಶೈಲಿಯ ಮೂಲಕ ರಂಗದಲ್ಲಿ ಹುಚ್ಚೆಬ್ಬಿಸುತ್ತಿದ್ದ, ಕಲಾವಿದರನ್ನು ಹುರಿದುಂಬಿಸುತ್ತಿದ್ದ ಪದ್ಯಾಣರು ಪದ ಯಾನದಲ್ಲಿ ಮಂಗಳಪದ ಹಾಡಿ ನಿರ್ಗಮಿಸಿದ್ದಾರೆ. ಅವರ ಆತ್ಮಕ್ಕೆ ಚಿರ ಶಾಂತಿ ದೊರೆಯಲಿ. ಚರಮಾಂಜಲಿಗಳು.
-Yakshagana.in

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

ನವೀನ ಹಳೆಯದು