ಮದ್ದಳೆಯ ನಾದಲೀಲೆ: ಶ್ರೀ ಹರಿಲೀಲಾ ಯಕ್ಷನಾದ ಪುರಸ್ಕೃತ ಲಕ್ಷ್ಮೀಶ ಅಮ್ಮಣ್ಣಾಯ



ಯಕ್ಷಗಾನ ರಂಗದ ಅನುಭವಿ ಮದ್ದಳೆಗಾರ, ಮದ್ದಳೆಯ ನುಡಿತದಲ್ಲೇ ನಾದಲೀಲೆ ಹರಿಸಬಲ್ಲ ಲಕ್ಷ್ಮೀಶ ಅಮ್ಮಣ್ಣಾಯರಿಗೆ ಯಕ್ಷಗಾನದ ಕಲಾ ದಂಪತಿ ಶ್ರೀ ಹರಿನಾರಾಯಣ ಬೈಪಾಡಿತ್ತಾಯ ಹಾಗೂ ಶ್ರೀಮತಿ ಲೀಲಾವತಿ ಬೈಪಾಡಿತ್ತಾಯರ ಹೆಸರಿನಲ್ಲಿ ಕೊಡಮಾಡುವ "ಶ್ರೀ ಹರಿಲೀಲಾ ಯಕ್ಷನಾದ ಪ್ರಶಸ್ತಿ 2021" ಅರ್ಹವಾಗಿಯೇ ಒಲಿದಿದೆ.

ತೆಂಕುತಿಟ್ಟು ಯಕ್ಷಗಾನ ರಂಗದಲ್ಲಿ ಪರಂಪರೆಯ ನಡೆಗಳು, ನುಡಿತಗಳೊಂದಿಗೆ ಹಿಮ್ಮೇಳ ವಾದನದಲ್ಲಿ ಶ್ರೇಷ್ಠ ಮದ್ದಳೆಗಾರರ ಸಾಲಿನಲ್ಲಿ ನಿಲ್ಲುವವರು ಲಕ್ಷ್ಮೀಶ ಅಮ್ಮಣ್ಣಾಯರು. ಇವರ ಮದ್ದಳೆ ವಾದನ ಹಾಗೂ ಚೆಂಡೆ ವಾದನ ಶೈಲಿಯು ಬಹುತೇಕ ಚಿಪ್ಪಾರು ಕೃಷ್ಣಯ್ಯ ಬಲ್ಲಾಳರನ್ನು ಹೋಲುತ್ತದೆ.
ವಾದನದ ಪರಿಶುದ್ಧತೆಗೆ, ಆನಂದಮಯ ನುಡಿತಕ್ಕೆ ಹೆಸರಾಗಿರುವ ಲಕ್ಷ್ಮೀಶ ಅಮ್ಮಣ್ಣಾಯರು 28 ವರ್ಷಗಳ ಕಾಲ ವಿವಿಧ ವ್ಯವಸಾಯಿ ಮೇಳಗಳಲ್ಲಿ ತಿರುಗಾಟ ಮಾಡಿದ್ದಾರೆ. ಆದರೆ, ಅದಕ್ಕೂ ಹೆಚ್ಚು ವರ್ಷಗಳ ಕಾಲ ಹವ್ಯಾಸಿಯಾಗಿಯೂ ಯಕ್ಷಗಾನ ಕಲಾ ಸೇವೆ ಮಾಡಿದ್ದಾರೆ. ಪ್ರಚಾರ ಬಯಸದ ಅಮ್ಮಣ್ಣಾಯರ ಯಕ್ಷಗಾನದ ನುಡಿತಗಳ ಸವಿಯನ್ನು ಉಂಡವರಿಗಂತೂ ಇವರ ಕೈಚಳಕ ಆಪ್ಯಾಯಮಾನವಾಗುತ್ತದೆ.

ಕೃಷಿಯ ಕೈಂಕರ್ಯ ಮಾಡುತ್ತಿದ್ದರೂ, ಯಕ್ಷಗಾನದ ಉಪಾಸನೆಯಿಂದಾಗಿ ಅವರು ಕರಾವಳಿ ಪರಿಸರದಲ್ಲಿ ಮನೆಮಾತಾಗಿದ್ದಾರೆ. ಉತ್ತಮ ಹಿಮ್ಮೇಳ ವಾದಕರಷ್ಟೇ ಅಲ್ಲದೆ, ಉತ್ತಮ ಚಿತ್ರ ಕಲಾವಿದನೂ ಹೌದು, ವೇಷಧಾರಿಯಾಗಿಯೂ ಗಮನ ಸೆಳೆದಿದ್ದಾರೆ. ಅಷ್ಟೇ ಅಲ್ಲ, ಮದ್ದಳೆ ತಯಾರಿ, ಮದ್ದಳೆಗೆ ಶಾಯಿ ಹಾಕುವುದರಲ್ಲಿಯೂ ಅವರು ಕಸುಬು ಮಾಡಿದ್ದಾರೆ. ತಂದೆ ವಿಷ್ಣು ಅಮ್ಮಣ್ಣಾಯರು ಭಾಗವತರಾಗಿ, ಅರ್ಥಧಾರಿಯಾಗಿ ಹೆಸರು ಪಡೆದವರಾಗಿದ್ದು, ಸಂಗೀತ, ಕಲೆ ಪರಂಪರೆಯ ಅಮ್ಮಣ್ಣಾಯ ಮನೆತನದ ಅನರ್ಘ್ಯ ರತ್ನ ಇವರು.

ಬಾಲ್ಯದಲ್ಲಿ ಯಕ್ಷಗಾನದ ಆಸಕ್ತಿ ಇಲ್ಲದಿದ್ದರೂ, ಮನೆ ವಾತಾವರಣವು ಅವರನ್ನು ಯಕ್ಷಗಾನಕ್ಕೆ ಸೆಳೆದುತಂದಿತು. ನಂತರದಲ್ಲಿ ಮುಂಡ್ರುಪಾಡಿ ಶ್ರೀಧರ ರಾಯರಲ್ಲಿ ಚೆಂಡೆ-ಮದ್ದಳೆ ಕಲಿಕೆ ಆರಂಭಿಸಿದರು. ಕಲಿಕೆಯ ಹಂತದಲ್ಲಿಯೇ ಇವರ ವಾದನ ಶೈಲಿಯನ್ನು ಗುರುತಿಸಿದ ಯಕ್ಷಗಾನ ರಂಗದ ಪ್ರಾತಃಸ್ಮರಣೀಯರಾದ ಚಿಪ್ಪಾರು ಕೃಷ್ಣಯ್ಯ ಬಲ್ಲಾಳ್ ಅವರು, ತಾವು ತಿರುಗಾಟ ಮಾಡುತ್ತಿದ್ದ ಧರ್ಮಸ್ಥಳ ಮೇಳಕ್ಕೆ ಸೇರಿಸಿಕೊಂಡು, ಅಮ್ಮಣ್ಣಾಯರೊಳಗಿನ ಪ್ರತಿಭೆಗೆ ನವಚೈತನ್ಯ ನೀಡಿ ಪೋಷಿಸಿದರು.

ಬಲ್ಲಾಳರ ಪ್ರೋತ್ಸಾಹ, ಕಲಿಸುವಿಕೆ ಮತ್ತು ಆ ಕಾಲದ ಶ್ರೇಷ್ಠ ಭಾಗವತರಾದ ಕಡತೋಕ ಮಂಜುನಾಥ ಭಾಗವತರ ಒಡನಾಟ, ಮಾರ್ಗದರ್ಶನಗಳಿಂದ ಲಕ್ಷ್ಮೀಶ ಅಮ್ಮಣ್ಣಾಯರ ಮದ್ದಳೆ ಪ್ರತಿಭೆಯು ಯಕ್ಷಗಾನ ರಂಗಕ್ಕೊಂದು ಆಸ್ತಿಯಾಗಿ ರೂಪುಗೊಳ್ಳುತ್ತಾ ಹೋಯಿತು. ಮೇಳ ತಿರುಗಾಟ ಅವಧಿಯಲ್ಲಿ ಲಕ್ಷ್ಮೀಶ ಅಮ್ಮಣ್ಣಾಯರಿಗೆ ಚೆಂಡೆವಾದನವನ್ನು ಬಿಟ್ಟುಕೊಟ್ಟು ಬಲ್ಲಾಳರು ಮದ್ದಳೆಗೆ ಕುಳಿತುಕೊಂಡು ಪ್ರೋತ್ಸಾಹಿಸುತ್ತಿದ್ದುದು ಇವರ ವಾದನ ವೈಖರಿಗೆ ಸಿಕ್ಕ ಗೌರವವೆಂದೇ ಹೇಳಬೇಕು.

1958ರಲ್ಲಿ ಆಗಿನ ಸುಳ್ಯ ತಾಲೂಕಿನ ಪಂಜ ಸಮೀಪದ ಬಳ್ಪ ಎಂಬಲ್ಲಿ ವಿಷ್ಣು ಅಮ್ಮಣ್ಣಾಯ-ಲಕ್ಷ್ಮೀ ಅಮ್ಮ ದಂಪತಿಗೆ ಜನಿಸಿದ ಲಕ್ಷ್ಮೀಶ ಅಮ್ಮಣ್ಣಾಯರ ಚೆಂಡೆ ಹಾಗೂ ಮದ್ದಳೆ - ಎರಡರ ನುಡಿತಗಳೂ ಕರ್ಣಾನಂದಕರ. ಸ್ಪಷ್ಟವಾದ ಉರುಳಿಕೆ ಪೆಟ್ಟುಗಳು, ಬಲವಾದ ಘಾತ ಪೆಟ್ಟುಗಳಿಂದ ಬಲ್ಲಾಳರ ವಾದನವು ನೆನಪಾಗುತ್ತದೆ. ಇವರ ಮದ್ದಳೆಯ ಛಾಪುವಿನ ಸುನಾದ ಸದಾ ನೆನಪಿನಲ್ಲಿಡುವಂಥದ್ದು.

ಧರ್ಮಸ್ಥಳ, ಮಂಗಳಾದೇವಿ, ಬಪ್ಪನಾಡು, ಪುತ್ತೂರು, ಅರುವ, ಕರ್ನಾಟಕ, ಕುಂಬ್ಳೆ, ಕದ್ರಿ ಮೇಳಗಳಲ್ಲಿ ಕಲಾ ವ್ಯವಸಾಯಿಯಾಗಿ ತಿರುಗಾಟ ನಡೆಸಿರುವ ಲಕ್ಷ್ಮೀಶ ಅಮ್ಮಣ್ಣಾಯರು, ಎಡನೀರು ಮೇಳದಲ್ಲಿ 15 ವರ್ಷಗಳ ಕಾಲ ಅರೆಕಾಲಿಕ ತಿರುಗಾಟವನ್ನೂ ನಡೆಸಿದ್ದಾರೆ. ಯಾವುದೇ ಗಿಮಿಕ್ಸ್‌ಗೆ ಇಳಿಯದೆ, ಯಕ್ಷಗಾನದ ಪರಂಪರೆಯ ಪೆಟ್ಟುಗಳನ್ನೇ ಕಲಾಭಿಮಾನಿಗಳ ಕಿವಿಗಳಲ್ಲಿ ಅನುರಣಿಸುವಂತೆ ಮಾಡಿದವರು ಅಮ್ಮಣ್ಣಾಯರು.

ಪತ್ನಿ ಗೀತಾ ಅಮ್ಮಣ್ಣಾಯ, ಮಗಳು ವಿಭಾರಾಣಿ (ಬರೆಹಗಾರ್ತಿ, ಬ್ಯಾಂಕ್ ಉದ್ಯೋಗಿ), ಮಗ ಗುರುಮೂರ್ತಿ, ಮಗಳು ಶುಭಾರಾಣಿ ಅವರ ಸಂತೃಪ್ತ ಕುಟುಂಬ ಇವರದು. ಹಿರಿಯ ಅಳಿಯ ಕೃಷ್ಣಪ್ರಕಾಶ ಉಳಿತ್ತಾಯ, ಬ್ಯಾಂಕ್ ಉದ್ಯೋಗಿಯಾಗಿದ್ದರೂ ಖ್ಯಾತ ಮದ್ದಳೆಗಾರರಾಗಿ ಹೆಸರು ಮಾಡಿದವರು. ಮಗ ಗುರುಮೂರ್ತಿ ಹಾಗೂ ಸೊಸೆ ಅನುಷಾ (ಸಂಗೀತ ಕಲಾವಿದೆ) ಇಬ್ಬರೂ ಹರಿನಾರಾಯಣ ಬೈಪಾಡಿತ್ತಾಯ ಹಾಗೂ ಲೀಲಾವತಿ ಬೈಪಾಡಿತ್ತಾಯರಲ್ಲಿ ಅನುಕ್ರಮವಾಗಿ ಚೆಂಡೆಮದ್ದಳೆ ಹಾಗೂ ಭಾಗವತಿಕೆ ಕಲಿಯುತ್ತಿದ್ದಾರೆ.

63ರ ಹರೆಯದ ಅಮ್ಮಣ್ಣಾಯರು ಈಗಲೂ ಕೃಷಿಯಲ್ಲಿ ತೊಡಗಿಕೊಂಡಿದ್ದು, ಆತ್ಮೀಯರು ಕರೆದಾಗ ಯಕ್ಷಗಾನದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಯಕ್ಷಗಾನದಲ್ಲಿ ಭಾಗವತಿಕೆಗೆ ಪೂರಕವಾಗಿ ಮದ್ದಳೆ ನುಡಿಸಬೇಕೇ ಹೊರತು, ಮದ್ದಳೆಯೇ ವಿಜೃಂಭಿಸುವಂತಿರಬಾರದು. ಭಾವ-ರಸಕ್ಕನುಗುಣವಾಗಿ ಮದ್ದಳೆ, ಚೆಂಡೆಗಳ ವಾದನವೂ, ಮುಮ್ಮೇಳದ ಸಾಂಗತ್ಯವೂ ಎರಕವಾದಂತಿರಬೇಕು ಎಂಬ ಖಚಿತ ಭಾವನೆ ಲಕ್ಷ್ಮೀಶ ಅಮ್ಮಣ್ಣಾಯರದು.
-ಅವಿನಾಶ್ ಬೈಪಾಡಿತ್ತಾಯ

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

ನವೀನ ಹಳೆಯದು