ನವೆಂಬರ್ 7ರಂದು ಬೈಪಾಡಿತ್ತಾಯ ದಂಪತಿಗೆ ಗ್ರಂಥಗೌರವ ಹಾಗೂ ಲೀಲಾವತಿ ಬೈಪಾಡಿತ್ತಾಯರ ಆತ್ಮಕಥನ ಬಿಡುಗಡೆ
ಮಂಗಳೂರು: ಅನುಭವಿ ಮದ್ದಳೆಗಾರ ಶ್ರೀ ಲಕ್ಷ್ಮೀಶ ಅಮ್ಮಣ್ಣಾಯರನ್ನು ಯಕ್ಷಗಾನದ ಕಲಾ ದಂಪತಿ ಶ್ರೀ ಹರಿನಾರಾಯಣ ಬೈಪಾಡಿತ್ತಾಯ ಹಾಗೂ ಶ್ರೀಮತಿ ಲೀಲಾವತಿ ಬೈಪಾಡಿತ್ತಾಯರ ಹೆಸರಿನಲ್ಲಿ ಕೊಡಮಾಡುವ "ಶ್ರೀ ಹರಿಲೀಲಾ ಯಕ್ಷನಾದ ಪ್ರಶಸ್ತಿ 2021" ಆಯ್ಕೆ ಮಾಡಲಾಗಿದೆ.
ಮೂಡುಬಿದಿರೆಯ ಆಲಂಗಾರು ಮಹಾಗಣಪತಿ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನವೆಂಬರ್ 7ರಂದು ನಡೆಯಲಿರುವ "ಶ್ರೀ ಹರಿಲೀಲಾ_75- ಯಕ್ಷಾಭಿವಂದನಂ, ಶಿಷ್ಯಾಭಿವಂದನಂ, ಯಕ್ಷನಾದೋತ್ಸವಂ" ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. (ಕಾರ್ಯಕ್ರಮದ ವಿವರ)ಈ ಪ್ರಶಸ್ತಿಯು ₹10,075 ನಗದು ಹಾಗೂ ಪ್ರಶಸ್ತಿ ಫಲಕ, ಸ್ಮರಣಿಕೆಯನ್ನು ಒಳಗೊಂಡಿರುತ್ತದೆ.
ಬೈಪಾಡಿತ್ತಾಯ ದಂಪತಿ ಹೆಸರಿನಲ್ಲಿ ಸ್ಥಾಪನೆಗೊಂಡಿರುವ ಡಿಜಿ ಯಕ್ಷ ಫೌಂಡೇಶನ್ (ರಿ) ಮೂಲಕ ಪ್ರತಿವರ್ಷವೂ ಯಕ್ಷಗಾನ ಹಿಮ್ಮೇಳ ಕಲಾವಿದರನ್ನು ಗುರುತಿಸಿ 'ಶ್ರೀ ಹರಿಲೀಲಾ ಯಕ್ಷನಾದ' ಪ್ರಶಸ್ತಿ ನೀಡಲು ನಿರ್ಧರಿಸಲಾಗಿದ್ದು, 2021ರ ಪ್ರಥಮ ಪ್ರಶಸ್ತಿಗೆ ಐದು ದಶಕಗಳ ಕಾಲದಿಂದ ಯಕ್ಷಗಾನ ಕಲಾಸೇವೆ ಮಾಡುತ್ತಿರುವ ಲಕ್ಷ್ಮೀಶ ಅಮ್ಮಣ್ಣಾಯರನ್ನು ಆಯ್ಕೆ ಮಾಡಲಾಗಿದೆ.
Yakshagana.in Updates ಗಾಗಿ: ವಾಟ್ಸ್ಆ್ಯಪ್-3 | ವಾಟ್ಸ್ಆ್ಯಪ್-1 | ವಾಟ್ಸ್ಆ್ಯಪ್-2 | . ಟೆಲಿಗ್ರಾಂ | ಫೇಸ್ಬುಕ್ | ಟ್ವಿಟರ್ | ಯೂಟ್ಯೂಬ್ | ಇನ್ಸ್ಟಾಗ್ರಾಂ
2 ಗ್ರಂಥಗಳ ಬಿಡುಗಡೆ:
75 ವರ್ಷ ತುಂಬಿದ ಗುರು ದಂಪತಿಯನ್ನು ಶಿಷ್ಯವೃಂದದವರು ಹಾಗೂ ಕಲಾಪೋಷಕರು ಅಭಿನಂದಿಸುತ್ತಿದ್ದು, ಇಡೀ ದಿನ ಯಕ್ಷಗಾನ ನಾದೋತ್ಸವ, ಗುರುದಂಪತಿಗೆ ಅಭಿನಂದನ ಗ್ರಂಥ ಗೌರವವನ್ನೂ ಅರ್ಪಿಸಲಾಗುತ್ತದೆ. ಶ್ರೀ ಗಣರಾಜ ಕುಂಬ್ಳೆ ನೇತೃತ್ವದಲ್ಲಿ ಶ್ರೀ ಸುಬ್ರಾಯ ಸಂಪಾಜೆ, ಶ್ರೀ ಅವಿನಾಶ್ ಬೈಪಾಡಿತ್ತಾಯ, ಶ್ರೀ ಡಾ.ಸಿಬಂತಿ ಪದ್ಮನಾಭ ಹಾಗೂ ಶ್ರೀಮತಿ ಆರತಿ ಪಟ್ರಮೆ ಅವರನ್ನೊಳಗೊಂಡ ಸಂಪಾದಕೀಯ ಮಂಡಳಿಯು ಶ್ರೀ ಹರಿಲೀಲಾ-75 ಯಕ್ಷಗಾನ ಕಲಾಯಾನ ಅಭಿನಂದನ ಗ್ರಂಥವನ್ನು ರೂಪಿಸಿದೆ. ಇದರಲ್ಲಿ ಗುರು ದಂಪತಿಗೆ ಅಭಿನಂದನ ನುಡಿಗಳಲ್ಲದೆ, ಯಕ್ಷಗಾನ ವಿದ್ವಾಂಸರ ಸಂಗ್ರಹಯೋಗ್ಯ, ಅಧ್ಯಯನಶೀಲ ಬರೆಹಗಳು ಇರಲಿವೆ.
ಇದೇ ಸಂದರ್ಭದಲ್ಲಿ, ಯಕ್ಷಗಾನದಲ್ಲಿ ಮಹಿಳಾ ಕ್ರಾಂತಿಗೆ ಬುನಾದಿ ಹಾಕಿಕೊಟ್ಟ ಭಾಗವತರಾದ ಶ್ರೀಮತಿ ಲೀಲಾವತಿ ಬೈಪಾಡಿತ್ತಾಯ ಅವರ ಆತ್ಮಕಥನ ಯಕ್ಷ ಗಾನಲೀಲಾವಳಿ ಕೃತಿಯು ಬಿಡುಗಡೆಯಾಗಲಿದೆ. ವಿಜಯ ಕರ್ನಾಟಕದ ಪುರವಣಿ ವಿಭಾಗದ ಮುಖ್ಯಸ್ಥರಾದ ಶ್ರೀಮತಿ ವಿದ್ಯಾರಶ್ಮಿ ಪೆಲತ್ತಡ್ಕ ಅವರು ಈ ಗ್ರಂಥವನ್ನು ಸಂಪಾದಿಸಿ ನಿರೂಪಿಸಿದ್ದಾರೆ.
ಯಕ್ಷಗಾನ ವಿದ್ವಾಂಸ ಎಂ.ಎಲ್.ಸಾಮಗ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಶ್ರೀ ಹರಿನಾರಾಯಣ ದಾಸ ಆಸ್ರಣ್ಣ, ಕಟೀಲು ಅವರು ಆಶೀರ್ವಚನ ನೀಡಲಿದ್ದಾರೆ. ಶ್ರೀ ಡಿ.ಹರ್ಷೇಂದ್ರ ಕುಮಾರ್ ಧರ್ಮಸ್ಥಳ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ಶ್ರೀ ಸುನಿಲ್ ಕುಮಾರ್, ಕಲಾಪೋಷಕ ಟಿ.ಶ್ಯಾಮ್ ಭಟ್, ಸ್ಥಳೀಯ ಶಾಸಕರಾದ ಶ್ರೀ ಉಮಾನಾಥ ಕೋಟ್ಯಾನ್, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಶ್ರೀ ಡಾ.ಮೋಹನ್ ಆಳ್ವ, ಪಂಚಮೇಳಗಳ ಯಜಮಾನರಾದ ಶ್ರೀ ಕಿಶನ್ ಹೆಗ್ಡೆ, ಉಡುಪಿ ಯಕ್ಷಗಾನ ಕಲಾರಂಗದ ಶ್ರೀ ಮುರಳಿ ಕಡೆಕಾರ್, ಮಾಜಿ ಸಚಿವ ಶ್ರೀ ಬಿ.ನಾಗರಾಜ ಶೆಟ್ಟಿ, ಉದ್ಯಮಿ ಶ್ರೀಪತಿ ಭಟ್ ಮುಂತಾದವರು ಭಾಗವಹಿಸಲಿದ್ದಾರೆ.
ಶುಕ್ರವಾರ (08 ಅಕ್ಟೋಬರ್ 2021) ಮಂಗಳೂರು ಪ್ರೆಸ್ ಕ್ಲಬ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಶ್ರೀಹರಿಲೀಲಾ ಅಭಿನಂದನ ಸಮಿತಿಯ ಅಧ್ಯಕ್ಷ ಚಂದ್ರಶೇಖರ ಭಟ್ ಕೊಂಕಣಾಜೆ, ಕಾರ್ಯದರ್ಶಿ ಆನಂದ ಗುಡಿಗಾರ, ಖಜಾಂಚಿ ಅವಿನಾಶ್ ಬೈಪಾಡಿತ್ತಾಯ, ಕಾರ್ಯದರ್ಶಿಗಳಾದ ಸಾಯಿಸುಮಾ ನಾವಡ ಮತ್ತು ಮೈತ್ರಿ ಭಟ್ ಕತ್ತಲ್‌ಸಾರ್ ಇದ್ದರು.
Tags:
ಸುದ್ದಿ