![]() |
ಪದ್ಯಾಣ ಗಣಪತಿ ಭಟ್ (66) ವರ್ಷ ಜನನ: 21-01-1955 ಮರಣ: 12-10-2021 ಚಿತ್ರ: ಸ್ವಸ್ತಿಕ್ ಪದ್ಯಾಣ |
ತೆಂಕುತಿಟ್ಟಿನ ಸುಪ್ರಸಿದ್ಧ ಭಾಗವತರಾದ ಪದ್ಯಾಣ ಗಣಪತಿ ಭಟ್ಟರು ಮಂಗಳವಾರ ಬೆಳಿಗ್ಗೆ 7.45ಕ್ಕೆ ನಿಧನರಾದ ಸುದ್ದಿ ಯಕ್ಷರಂಗವನ್ನೇ ಶೋಕದಲ್ಲಿ ಮುಳುಗುವಂತೆ ಮಾಡಿದೆ. ಅವರೊಂದಿಗಿನ ಒಡನಾಟದ ಅನುಭವಗಳನ್ನು ಹಂಚಿಕೊಂಡಿದ್ದಾರೆ ಮೂಡುಬಿದಿರೆಯ ಯಕ್ಷಗಾನ ಸಂಘಟಕ ಶಾಂತಾರಾಮ ಕುಡ್ವರು.
ಯಕ್ಷರಂಗ ಕಂಡ ಶ್ರೇಷ್ಠ ಭಾಗವತರಲ್ಲಿ ಓರ್ವರಾದ ಪದ್ಯಾಣ ಭಾಗವತರ ನಿಧನವು ಯಕ್ಷಗಾನ ಕ್ಷೇತ್ರಕ್ಕೆ ದೊಡ್ಡ ಹಿನ್ನಡೆ. ಯಕ್ಷಗಾನ ಹಿನ್ನೆಲೆಯ ಕುಟುಂಬದವರಾದರೂ, ಮಾಂಬಾಡಿ ನಾರಾಯಣ ಭಾಗವತರ ಶಿಷ್ಯರಾಗಿದ್ದ ಪದ್ಯಾಣರು, ಹಿಂದಿನ ಭಾಗವತರಾದ ಅಗರಿ, ಬಲಿಪ, ಮಂಡೆಚ್ಚ, ಕಡತೋಕ ಮುಂತಾದವರು ಹಾಗೂ ಈಗಿನ ಸಮಕಾಲೀನ, ಯುವಭಾಗವತರ ನಡುವಿನ ಕೊಂಡಿ ಎನಿಸಿಕೊಂಡವರು.
ಮಂಗಳವಾರ ಬೆಳಿಗ್ಗೆ 7.00 ಘಂಟೆಗೆ ಹಿರಿಯ ಹಾಗೂ ಸುಪ್ರಸಿದ್ಧ ಅರ್ಥಧಾರಿಗಳಾಗಿರುವ ಉಡುವೆಕೋಡಿ ಸುಬ್ಬಪ್ಪಯ್ಯರ ಸುಪುತ್ರ ಸತೀಶ್ ಅವರು ಪದ್ಯಾಣರನ್ನು ಭೇಟಿಯಾಗಲು ಬಂದಿದ್ದರು. ಅವರೊಂದಿಗೆ ವಿನೋದದಿಂದಲೇ ಮಾತಾಡಿಸಿದ್ದರು. ಆದರೆ ಪದ್ಯಾಣರು ಕೆಲವೇ ನಿಮಿಷದಲ್ಲಿ ಮೃತರಾದುದು ವಿಷಾದನೀಯ.
ಶುದ್ಧ ಪರಂಪರೆ ಶೈಲಿಯ ಭಾಗವತಿಕೆ ಹಾಗೂ ಸಂಗೀತ ಶೈಲಿಯ ಭಾಗವತಿಕೆ ಎರಡನ್ನೂ ಬಲ್ಲ ಅಪೂರ್ವ ಸಾಧಕರಾದ ಪದ್ಯಾಣರು ಬಿಳಿ ನಾಲ್ಕರ ಶ್ರುತಿಯಲ್ಲಿ ಮಂದ್ರ ಹಾಗೂ ಏರು ಸ್ವರಗಳಲ್ಲಿ ತಾಸುಗಟ್ಟಲೆ ಹಾಡಬಲ್ಲ ಶಾರೀರ ಹೊಂದಿದ ಭಾಗವತರು. ಸಂದರ್ಭಕ್ಕನುಸಾರವಾಗಿ ಕಪ್ಪು ಮೂರರ ಶ್ರುತಿಯಲ್ಲೂ ಅಷ್ಟೇ ಚೆನ್ನಾಗಿ ಹಾಡಬಲ್ಲವರು.
Yakshagana.in Updates ಗಾಗಿ: ವಾಟ್ಸ್ಆ್ಯಪ್-3 | ವಾಟ್ಸ್ಆ್ಯಪ್-1 | ವಾಟ್ಸ್ಆ್ಯಪ್-2 | . ಟೆಲಿಗ್ರಾಂ | ಫೇಸ್ಬುಕ್ | ಟ್ವಿಟರ್ | ಯೂಟ್ಯೂಬ್ | ಇನ್ಸ್ಟಾಗ್ರಾಂ
ಎಸ್.ಪಿ. ಬಾಲಸುಬ್ರಹ್ಮಣ್ಯಂ ಮೆಚ್ಚುಗೆ
ಈ ಟಿ.ವಿ. ಚಾನೆಲ್‌ನ ಜನಪ್ರಿಯ "ಎದೆ ತುಂಬಿ ಹಾಡುವೆನು" ಕಾರ್ಯಕ್ರಮಕ್ಕೆ ನಿರ್ಣಾಯಕರಾಗಿ ಪದ್ಯಾಣ ಗಣಪತಿ ಭಟ್ಟರು ಭಾಗವಹಿಸಿದಾಗ, ಸುಪ್ರಸಿದ್ಧ ಗಾಯಕರಾದ ಎಸ್. ಪಿ. ಬಾಲಸುಬ್ರಹ್ಮಣ್ಯಂ ನಿರೂಪಕರಾಗಿದ್ದರು. ಆಗ ಎಸ್.ಪಿ.ಯವರು ಪದ್ಯಾಣರಿಗೆ ಯಕ್ಷಗಾನದ ಹಾಡು ಹಾಡಲು ಕೇಳಿಕೊಂಡರು. ಪದ್ಯಾಣರು ಬಿಳಿ ನಾಲ್ಕರ ಶ್ರುತಿಯಲ್ಲಿ "ಕರ್ಣಪರ್ವ" ಪ್ರಸಂಗದ "ಆ ಕಿರೀಟಿಯು ನುಡಿದುದ ಕೇಳ" ಹಾಗೂ "ಕುಶಲವ ಕಾಳಗ"ದ "ಅರ ಕಂದರಯ್ಯ ನೀವು ಅಂಜಿಕಿಲ್ಲವೇ" ಹಾಡು ಹಾಡಿದಾಗ, ಮೇರು ಗಾಯಕ ಎಸ್.ಪಿ.ಯವರೇ ದಿಗ್ಭ್ರಮೆಗೊಂಡು, "ತಮ್ಮ ಶ್ರುತಿ ಯಾವಾಗಲೂ ಬಿಳಿ ನಾಲ್ಕೇಯಾ" ಎಂದು ಪ್ರಶ್ನಿಸಿದಾಗ ಪದ್ಯಾಣರು ಹೌದೆಂದರು.
ಆಗ ಎಸ್.ಪಿ.ಯವರು "ಇದು ಅದ್ಭುತ" ಎಂದು ಉದ್ಗರಿಸಿ, "ನಾವೆಲ್ಲ ಗಾಯಕರು ಹೌದು, ಆದರೆ ಮೈಕ್ ಗಾಯಕರು. ಮೈಕ್ ಇಲ್ಲದೇ ನಮಗೆ ಈ ರೀತಿ ಹಾಡಲು ಸಾಧ್ಯವಿಲ್ಲ. ನಿಮ್ಮ ಸಾಧನೆಗೆ ಶರಣು. ನೀವು ಇನ್ನಷ್ಟು ಪ್ರಸಿದ್ಧರಾಗಿ" ಎಂದು ಹಾರೈಸಿದ್ದರು.
ಪದ್ಯಾಣರು ಭಾಗವತಿಕೆಯ ಮೂಲ ತತ್ವ ಅರಿತವರು. ತಮ್ಮ ಹಾಡಿನೊಂದಿಗೆ ಮದ್ದಲೆವಾದಕರನ್ನೂ ಪರಿಣಾಮಕಾರಿಯಾಗಿ ಬಳಸಿಕೊಳ್ಳುತ್ತಿದ್ದರು. ಯಕ್ಷಗಾನ ಪದ್ಯಗಳಲ್ಲಿ ಸಾಮಾನ್ಯವಾಗಿ ನಾಲ್ಕು ಸಾಲುಗಳಿರುತ್ತವೆ. ಪದ್ಯಾಣರು ಪ್ರಥಮ ಸಾಲನ್ನು ಹೇಳಿ ಕೊನೆಗೆ ಆಲಾಪನೆಯನ್ನು ಮಾಡುತ್ತಿದ್ದರು. ಆಲಾಪನೆ ಕೊನೆಗೊಂಡಾಗ, ತಾನು ಆಲಾಪನೆಗೆ ತೆಗೆದುಕೊಂಡ ಕಾಲದಷ್ಟೇ ಮದ್ದಲೆವಾದಕರಿಗೆ ಮೂಲತಾಳದಲ್ಲೇ ನುಡಿಸಲು ಅವಕಾಶ ನೀಡುತ್ತಿದ್ದರು. ಆ ಕಾರಣ ಹಿಮ್ಮೇಳದ ಸಮನ್ವಯತೆಯಿಂದಾಗಿ ಭಾಗವತಿಕೆ ಅಂದಗೊಳ್ಳುತ್ತಿತ್ತು.
ಪದ್ಯಾಣರು ಸುರತ್ಕಲ್ ಮೇಳದಲ್ಲಿ ಇರುವಾಗ ಮದ್ದಲೆವಾದಕರಾಗಿದ್ದ ಕಡಬ ನಾರಾಯಣ ಆಚಾರ್ಯರು ಅಪಾರವಾಗಿ ಮಿಂಚಿದ್ದು ಇದಕ್ಕೊಂದು ಉದಾಹರಣೆ. (ಈ ಬಗ್ಗೆ ನಾನು ಕಳೆದ ವಾರ ಕಡಬದ್ವಯರ ಸಂಸ್ಮರಣೆ ಕಾರ್ಯಕ್ರಮದಲ್ಲಿ ಉಲ್ಲೇಖಿಸಿದ್ದೆ). ಪಾತ್ರಗಳ ಭಾವವನ್ನನುಸರಿಸಿ ರಾಗವನ್ನು ಬಳಸುವಲ್ಲಿ ಪದ್ಯಾಣರು ಸಿದ್ಧಹಸ್ತರು. ಪ್ರಸಂಗದಲ್ಲಿ ಬರೆದ ರಾಗಗಳು, ಸಂದರ್ಭಕ್ಕೆ ಹೊಂದಿಕೊಳ್ಳದಿದ್ದಲ್ಲಿ ರಾಗವನ್ನು ಬದಲಾಯಿಸುವ ಸ್ವಾತಂತ್ರ್ಯ ಭಾಗವತರಿಗಿದೆ. ಇದನ್ನು ಎಲ್ಲರೂ ಒಪ್ಪುವಂಥಹುದೇ. ಪದ್ಯಾಣರು ಇಂತಹ ಹಲವಾರು ಪ್ರಯೋಗಗಳನ್ನು ಮಾಡಿದವರು. ಕಾಲವನ್ನೂ, ಭಾವವನ್ನೂ ಲಕ್ಷಿಸಿ ಪದ್ಯಗಳ ರಾಗವನ್ನು ಪದ್ಯಾಣರು ಬಳಸಿಕೊಳ್ಳುತ್ತಿದ್ದರು.
ಯಕ್ಷಗಾನದಲ್ಲಿ ಪ್ರಚಲಿತದಲ್ಲಿಲ್ಲದ ಸಿಂಹೇದ್ರ ಮಧ್ಯಮ, ಯಮನ್ ಕಲ್ಯಾಣಿ, ವೃಂದಾವನ ಸಾರಂಗ್, ರೇವತಿ ಮೊದಲಾದ ರಾಗಗಳನ್ನು ಯಕ್ಷಗಾನದಲ್ಲಿ ಅಚ್ಚುಕಟ್ಟಾಗಿ ಬಳಸಿದ ಕೀರ್ತಿ ಪದ್ಯಾಣರಿಗೆ ಸಲ್ಲಬೇಕು. ಸಮಕಾಲೀನ ಭಾಗವತರಲ್ಲಿ "ವಾಸಂತಿ" ರಾಗವನ್ನು ಯಕ್ಷಗಾನ ಭಾಗವತಿಕೆಯಲ್ಲಿ ಪ್ರಥಮವಾಗಿ ಬಳಸಿದವರು ಪದ್ಯಾಣರು. ತಮ್ಮ ಸ್ವಂತ ಶೈಲಿಯನ್ನು ಭಾಗವತಿಕೆಯಲ್ಲಿ ಆಳವಡಿಸಿಕೊಂಡ ಕಾರಣ ಅಗರಿ ಶೈಲಿ, ಬಲಿಪ ಶೈಲಿ, ಕಡತೋಕ ಶೈಲಿಯಂತೆಯೇ "ಪದ್ಯಾಣ ಶೈಲಿ"ಯೂ ಯಕ್ಷರಂಗಕ್ಕೆ ಒದಗಿ ಬಂತು. ಷಣ್ಮುಖಪ್ರಿಯ, ಶಿವರಂಜಿನಿ, ನಾಟಿ, ಪೀಲು, ಕಾಪಿ, ಸುರುಟಿ, ತೋಡಿ ಮುಂತಾದ ರಾಗಗಳನ್ನು ಪದ್ಯಾಣರ ಭಾಗವತಿಕೆಯಲ್ಲೇ ಕೇಳುವ ಅಂದವೇ ಬೇರೆ.
ಪದ್ಯಾಣರ ಭಾಗವತಿಕೆಯಲ್ಲಿ ರಸಕ್ಕನುಗುಣವಾಗಿ ರಾಗಗಳ ಬಳಕೆ, ಸ್ಪಷ್ಟವಾದ ತಾಳ, ನಾಟ್ಯಕ್ಕನುಸಾರವಾಗಿ ತಾಳ ಬದಲಾವಣೆ, ಸಾಹಿತ್ಯದ ಪ್ರಾಧಾನ್ಯವನ್ನು ಅರ್ಥೈಸಿಕೊಂಡ ಸ್ಪಷ್ಟೋಚ್ಚಾರ, ಕಾಲಗತಿಗನುಸಾರವಾದ ರಾಗಗಳ ಬಳಕೆ ಕಂಡು ಬರುತ್ತದೆ. ಈ ಕಾರಣಕ್ಕಾಗಿ ಹಿರಿಯ, ಕಿರಿಯ ಕಲಾವಿದರೆಲ್ಲಾ ಪದ್ಯಾಣರ ಭಾಗವತಿಕೆ ಬಯಸುತ್ತಿದ್ದರು.
"ಯಕ್ಷರಂಗದ ಭೀಷ್ಮ" ಎನಿಸಿದ, ಪ್ರಾತಃಸ್ಮರಣೀಯರಾದ ದಿ. ಶೇಣಿ ಗೋಪಾಲಕೃಷ್ಣ ಭಟ್ಟರ ಅತ್ಯಂತ ಪ್ರೀತಿಯ ಭಾಗವತರೆಂದರೆ ಪದ್ಯಾಣರು. ಪದ್ಯಾಣರ ಭಾಗವತಿಕೆಯಲ್ಲಿ ಶೇಣಿಯವರ ಅರ್ಥಗಾರಿಕೆ ಇನ್ನಷ್ಟು ಭಾವಪೂರ್ಣವಾಗಿ ಮೆರೆಯುತ್ತಿತ್ತು. ತಾಳಮದ್ದಳೆ ಕೂಟಗಳಿಗೆ ಆಹ್ವಾನ ಬಂದಾಗ, ಶೇಣಿಯವರು ಕೇಳುವ ಮೊದಲ ಪ್ರಶ್ನೆ "ಭಾಗವತರು ಯಾರು" ಎಂಬುದಾಗಿ. ಯಾರೆಂದು ನಿರ್ಧರಿಸಿಲ್ಲ ಎಂದು ಸಂಘಟಕರು ತಿಳಿಸಿದರೆ, ಶೇಣಿಯವರು ಹೇಳುತ್ತಿದ್ದರು - "ಭಾಗವತಿಕೆಗೆ ನಮ್ಮ ಪದ್ಯಾಣರಿಗೆ ಹೇಳಿ. ಕೂಟ ಒಳ್ಳೇದಾಗುತ್ತದೆ" (ಆ ಕಾಲದಲ್ಲಿ ತಾಳಮದ್ದಳೆ ಸಂಘಟಕರು ಮೊದಲು ಶೇಣಿಯವರನ್ನು ಆಹ್ವಾನಿಸಿ, ನಂತರ ಉಳಿದ ಕಲಾವಿದರನ್ನು ಆಹ್ವಾನಿಸುವುದು ರೂಢಿಯಾಗಿತ್ತು.) ಹೀಗೆ, ಶೇಣಿಯವರೇ ಮೆಚ್ಚಿದ ಭಾಗವತರಾಗಿದ್ದರು ಪದ್ಯಾಣರು.
ನಾನು 20 ವರ್ಷಗಳ ಹಿಂದೆ ನಮ್ಮ "ಯಕ್ಷಸಂಗಮ, ಮೂಡಬಿದಿರೆ"ಯ ಎರಡನೇ ವರ್ಷದ ಕಾರ್ಯಕ್ರಮಕ್ಕೆ ಶೇಣಿಯವರನ್ನು ಆಹ್ವಾನಿಸಿದೆ. ಪ್ರಸಂಗ "ಶರಸೇತು ಬಂಧನ". ಈ ಪ್ರಸಂಗದಲ್ಲಿ ಶೇಣಿಯವರ ಅವರ ಪಾತ್ರ ನಿಗದಿಯಾಗಿದ್ದು ಶ್ರೀಕೃಷ್ಣ. ಆದರೆ ಮೂಡಬಿದಿರೆಯ ಹನೂಮಂತ ದೇವರು ಅಪಾರವಾದ ಕಾರಣೀಕದಿಂದಾಗಿ ಅಲ್ಲಿನ ಸಮಸ್ತ ಆಸ್ತಿಕರ ಆರಾಧ್ಯ ದೇವರಾದ ಕಾರಣ, ನಾನು ಶೇಣಿಯವರಲ್ಲಿ ಈ ವಿಚಾರ ತಿಳಿಸಿ, "ಗುರುಗಳೇ, ಹನೂಮಂತನ ಪಾತ್ರ ನೀವೇ ಮಾಡಬೇಕೆಂಬುದಾಗಿ ನಮ್ಮೆಲ್ಲರ ಅಪೇಕ್ಷೆ. ಕೂಟ ಸಹಾ ಒಳ್ಳೇದಾಗಬೇಕು" ಎಂದೆ. ಶೇಣಿಯವರು ಒಪ್ಪಿ, "ಕೂಟ ಒಳ್ಳೇದು ಮಾಡುವಾ. ಭಾಗವತರು ಯಾರು?" ಎಂದರು. ನಾನು "ಪದ್ಯಾಣರು" ಎಂದೆ. ಕೂಡಲೇ ಶೇಣಿಯವರು "ಹಾಗಾದರೆ ಕೂಟ ಖಂಡಿತಾ ಒಳ್ಳೇದಾಗುತ್ತದೆ" ಎಂದರು. ಪದ್ಯಾಣರ ಮೇಲೆ ಅಷ್ಟು ಅಭಿಮಾನವಿತ್ತು ಶೇಣಿಯವರಿಗೆ.
ಸೂಕ್ತ ರಾಗ ಬಳಕೆ
"ಕರ್ಣಪರ್ವ" ಪ್ರಸಂಗದಲ್ಲಿ ಶೇಣಿಯವರ ಕರ್ಣನ ಪಾತ್ರ ಅತ್ಯಂತ ಪ್ರಸಿದ್ಧಿ. ಅದರಲ್ಲೂ "ಶಿವ ಶಿವಾ ಸಮರದೊಳು | ಕೈ ಸೋತೆನಲ್ಲಾ|" ಪದ್ಯಕ್ಕಂತೂ ಶೇಣಿಯವರು ಭಾವನಾತ್ಮಕವಾಗಿ ನಿರ್ವಹಿಸುತ್ತಿದ್ದರು. ಕರುಣರಸಪೂರಿತವಾದ ಈ ಪದ್ಯವನ್ನು ಪ್ರಸಂಗಕರ್ತರು "ನೀಲಾಂಬರಿ" ರಾಗದಲ್ಲಿ ಹಾಡಬೇಕೆಂದು ಸೂಚಿಸಿದ್ದಾರೆ. ಕರುಣರಸಕ್ಕೆ ಈ ರಾಗ ಸಮರ್ಥನೀಯವಾದ ಕಾರಣ ಹೆಚ್ಚಿನ ಎಲ್ಲಾ ಭಾಗವತರೂ ನೀಲಾಂಬರಿ ರಾಗದಲ್ಲೇ ಹಾಡುವುದು ವಾಡಿಕೆ. ಈ ಪದ್ಯದ ಗುಚ್ಛದಲ್ಲೇ ಮೂರನೇ ಪದ್ಯವಾದ, "ಎನ್ನ ಕುಲವ ಕೃಷ್ಣನು | ಎಚ್ಚರಿಸಿ ತಾ | ನೆನ್ನೊಡೆಯನ ಕೊಂದನು" ಹಾಡನ್ನು ಒಮ್ಮೆ ಪದ್ಯಾಣರು "ದೇವ ಗಾಂಧಾರ" ರಾಗದಲ್ಲಿ ಭಾವನಾತ್ಮಕವಾಗಿ ಹಾಡಿದರು. ಇದನ್ನು ಶೇಣಿಯವರು ಅಪಾರವಾಗಿ ಮೆಚ್ಚಿದರು. ಅಂದಿನಿಂದ ಶೇಣಿಯವರ ಸೂಚನೆಯಂತೆ ಆ ಹಾಡನ್ನು ಪದ್ಯಾಣರು ದೇವಗಾಂಧಾರ ರಾಗದಲ್ಲೇ ಹಾಡುತ್ತಿದ್ದರು. ಆಗ ಶೇಣಿಯವರೂ ಆ ಪದ್ಯವನ್ನು ಹಾಡುತ್ತಿದ್ದುದು ಅಂದಿನ ಪ್ರೇಕ್ಷಕರ ನೆನಪಲ್ಲಿ ಇಂದಿಗೂ ಉಳಿದಿದೆ. ಶೇಣಿಯವರು ತಾಳಜ್ಞಾನ ಹೊಂದಿದ್ದರೂ ನಾಟ್ಯ ಮಾಡುತ್ತಿರಲಿಲ್ಲ. ಆದರೂ, ಪದ್ಯಾಣರು ಹಾಡುವಾಗ ಶೇಣಿಯವರ ಕೈ ಕಾಲುಗಳು ತನ್ನಷ್ಟಕ್ಕೇ ಚಲನೆಗೊಳ್ಳುತ್ತಿದ್ದುದನ್ನು ನಾನು ಎಷ್ಟೋ ಸಲ ಕಂಡಿದ್ದೇನೆ. ಪದ್ಯಾಣರ ಹಾಡಿನ ಪ್ರಭಾವ ಅಷ್ಟು ಗಾಢವಾದುದು.
ಸುರತ್ಕಲ್ ಮೇಳದ ಇನ್ನೋರ್ವ ಸುಪ್ರಸಿಧ್ಧ ಕಲಾವಿದರಾದ ತೆಕ್ಕಟ್ಟೆ ಆನಂದ ಮಾಸ್ತರರೂ ಪದ್ಯಾಣರ ಭಾಗವತಿಕೆಯನ್ನು ಅಪಾರವಾಗಿ ಮೆಚ್ಚುತ್ತಿದ್ದರು. ಪದ್ಯಾಣರ ಹಾಡಿಗೆ ತೆಕ್ಕಟ್ಟೆಯವರು, "ಅದ್ಭುತ", "ಗಂಧರ್ವ ಗಾಯನ" ಎಂದೆಲ್ಲಾ ವೇದಿಕೆಯಲ್ಲೇ, ಸಂದರ್ಭೋಚಿತವಾಗಿ ಪ್ರಶಂಸಿಸುತ್ತಿದ್ದರು. ಒಮ್ಮೆ ತೆಕ್ಕಟ್ಟೆಯವರು ನನ್ನಲ್ಲಿ ಮಾತಾಡುತ್ತಾ "ಭಾವಾ, (ಸಂಬಂಧದಲ್ಲಿ ತೆಕ್ಕಟ್ಟೆ ಅವರು ನನಗೆ ಭಾವ) ಈ ಪದ್ಯಾಣರು ಹಾಡುವಾಗ, ನನಗೆ ನಾಟ್ಯ ಮಾಡಲು ಆಶೆಯಾಗುತ್ತದೆ. ಆದರೆ ಏನು ಮಾಡಲಿ? ನನಗೆ ನಾಟ್ಯ ಬರುವುದಿಲ್ಲವಲ್ಲಾ" ಎಂದಿದ್ದರು. ತೆಕ್ಕಟ್ಟೆಯವರೂ, ಶೇಣಿಯವರಂತೆ ಅಪ್ರತಿಮ ವಿದ್ವಾಂಸರು, ಮಾತುಗಾರರು. ಆದರೂ ನಾಟ್ಯದಲ್ಲಿ ಅಷ್ಟೊಂದು ಪರಿಣತಿ ಹೊಂದಿರಲಿಲ್ಲ.
ಪದ್ಯಾಣರು ಸುರತ್ಕಲ್ ಮೇಳದಲ್ಲಿ ಅಪಾರ ಪ್ರಸಿದ್ಧಿ ಪಡೆದಿದ್ದರು. ಸತಿ ಶೀಲವತಿ, ಕಡುಗಲಿ ಕುಮಾರ ರಾಮ, ಸಾಧ್ವಿ ಸದಾರಮೆ, ಪಾಪಣ್ಣ ವಿಜಯ, ಶನೀಶ್ವರ ಮಹಾತ್ಮೆ, ತಿರುಪತಿ ಕ್ಷೇತ್ರ ಮಹಾತ್ಮೆ, ರಾಜಾ ಯಯಾತಿ, ನಾಟ್ಯರಾಣಿ ಶಾಂತಲಾ ಮುಂತಾದ ಪ್ರಸಂಗಗಳನ್ನು ಅಗರಿ ರಘುರಾಮ ಭಾಗವತರೊಂದಿಗೆ ನಿರ್ದೇಶಿಸಿ ಪ್ರಸಂಗದ ಯಶಸ್ಸಿಗೆ ಕಾರಣರಾಗಿದ್ದರು ಪದ್ಯಾಣರು.
"ರಾಜಾಯಯಾತಿ" ಪ್ರಸಂಗದಲ್ಲಿ ಮಧ್ಯಮಾವತಿ ರಾಗದಲ್ಲಿ ಹಾಡುತ್ತಿದ್ದ, "ಇಂದಿನ ಜಲಕ್ರೀಡೆ| ಮನದಾ| ನಂದವಾಯಿತು ನೋಡೆ", ಸುರುಟಿ ರಾಗದಲ್ಲಿ ಹಾಡುತ್ತಿದ್ದ "ಇಂದು ದೂರವಿರುವೆ ಕುಡಿಯದೆ ಬಂದರೆ ಬಳಿ ಬರುವೆ" ಮುಂತಾದ ಹಾಡುಗಳು ನನ್ನ ಕಿವಿಗಳಲ್ಲಿ ಈಗಲೂ ಗುನುಗುಡುತ್ತಿವೆ. ಉಜ್ರೆ ರಾಜ, ಈಶ್ವರ್ ಭಟ್, ಶಿವರಾಮ ಜೋಗಿ, ರಮೇಶಾಚಾರ್ಯ, ವೇಣೂರು ಸದಾಶಿವ ಕುಲಾಲ್, ಪೆರ್ಲ ಜಗನ್ನಾಥ ಶೆಟ್ಟಿ, ವಾಸುದೇವ ಸಾಮಗ, ಜನಾರ್ದನ ಗುಡಿಗಾರ, ಪುತ್ತಿಗೆ ಕುಮಾರ ಗೌಡ, ಪೂಕಳ, ಬಾಬು ಕುಡ್ತಡ್ಕ, ಕಾಂಚನ ಸಂಜೀವ ರೈ, ವೇಣೂರು ಸುಂದರಾಚಾರ್ಯ ಮುಂತಾದ ಕಲಾವಿದರನ್ನು ರಂಗದಲ್ಲಿ ಕುಣಿಸುತ್ತಿದ್ದ ದೃಶ್ಯಗಳು ಈಗಲೂ ನನ್ನ ಕಣ್ಣ ಮುಂದಿವೆ.
ಸುರತ್ಕಲ್ ಮೇಳದವರ ತುಳು ಪ್ರಸಂಗ ಒಂದರಲ್ಲಿ, ಕನ್ಯೆಯೊಬ್ಬಳ ಮದುವೆಯಾಗಿ, ಗಂಡನ ಮನೆಗೆ ಕಳಿಸುವ ಸನ್ನಿವೇಶದಲ್ಲಿ, ಪದ್ಯಾಣರು ತುಳು ಜಾನಪದ ಹಾಡಾದ "ಜಾಲ ಕಟ್ಟೆಡ್ ಇತ್ತಿ ತುಳಸಿ ದಯೀ ಅಮ್ಮಾ | ಪೋಲಾ ಮಾಮಿಲ್ಲಾಡೆ ತುಡರಾದ್" ಹಾಡನ್ನು ಯಕ್ಷಗಾನೀಯ ಶೈಲಿಯಲ್ಲಿ, ಮೋಹನ ರಾಗದಲ್ಲಿ ಹಾಡುವಾಗ ಪ್ರೇಕ್ಷಕರೂ ದನಿಗೂಡಿಸುತ್ತಿದ್ದರು. ಈ ಪದ್ಯವನ್ನು ನಾನು ಏಳೆಂಟು ವರ್ಷಗಳ ಹಿಂದೆ ಪದ್ಯಾಣರಲ್ಲಿ ತಿಳಿಸಿದಾಗ, "ಕುಡ್ವರೇ, ಆ ಪದ್ಯದ ಸಾಹಿತ್ಯ ನಿಮಗೆ ಇನ್ನೂ ನೆನಪಿದೆಯಲ್ಲವೇ?" ಎಂದು ಮೆಚ್ಚುಗೆ ಸೂಚಿಸಿದ್ದರು.
"ಪದ್ಯಾಣ ಶೈಲಿ"ಯೊಂದಿಗೆ ಅಗರಿ ಶೈಲಿ, ಬಲಿಪ ಶೈಲಿಯಲ್ಲೂ ಪದ್ಯಾಣರು ಪ್ರಬುದ್ಧತೆ ಸಾಧಿಸಿದ್ದರು. ಅಗರಿ ರಘುರಾಮ ಭಾಗವತರ ಒಡನಾಟವಿದ್ದ ಕಾರಣ ಅಗರಿ ಶೈಲಿಯಲ್ಲಿ ಪದ್ಯವನ್ನು ಉತ್ತಮವಾಗಿ ಹಾಡುತ್ತಿದ್ದರು. ನಾನು ಕಳೆದ 30 ವರ್ಷಗಳಿಂದಲೂ ಆಟಕೂಟಗಳಿಗೆ ಹೋಗುವಾಗ ಪದ್ಯಾಣರಿಗೆ "ಅಗರಿ ಶೈಲಿ"ಎಂದು ಚೀಟಿ ಬರೆದು ಕಳಿಸುತ್ತಿದ್ದೆ. ಪದ್ಯಾಣರು ಸಂದರ್ಭೋಚಿತವಾಗಿ ಅಗರಿ ಶೈಲಿಯಲ್ಲಿ ಅಗರಿಯವರ ಸುಪ್ರಸಿದ್ಧ ಮಧ್ಯಮಾವತಿ, ಅಭೇರಿ ರಾಗಗಳಲ್ಲಿ ಪದ್ಯ ಹೇಳುತ್ತಿದ್ದುದನ್ನು ಮರೆಯಲು ಸಾಧ್ಯವೇ? ಇತ್ತೀಚೆಗಿನ ವರ್ಷಗಳಲ್ಲಿ ನನ್ನನ್ನು ನೋಡಿದ ಕೂಡಲೇ, ಪದ್ಯಾಣರು ಅಗರಿ ಶೈಲಿಯ ಕೆಲವು ಪದ್ಯಗಳನ್ನಾದರೂ ಹೇಳುತ್ತಿದ್ದರು. ಆದ ಕಾರಣ ನಾನೂ ಚೀಟಿ ಕಳಿಸುವುದನ್ನು ಬಿಟ್ಟಿದ್ದೆ. ಇತ್ತೀಚೆಗೆ ಪ್ರತೀ ಪ್ರಸಂಗದಲ್ಲೂ ನಾಲ್ಕೈದು ಹಾಡನ್ನಾದರೂ ಅಗರಿ ಶೈಲಿಯಲ್ಲಿ ಹಾಡುತ್ತಾರೆ.
ಕಲೆಯನ್ನು ಸಮರ್ಥವಾಗಿ ಪ್ರಸ್ತುತಪಡಿಸಬಲ್ಲವ "ಕಲಾವಿದ"ಎನಿಸಿಕೊಳ್ಳುತ್ತಾನೆ. ಆ ಕಲಾವಿದ ತನ್ನ ಕಲೆಯನ್ನು ಇತರರಿಗೆ ಕಲಿಸಬಲ್ಲವನಾದರೆ "ಕಲಾವಿದ ಗುರು" ಎನಿಸಿಕೊಳ್ಳುತ್ತಾನೆ. ಈ ಎರಡೂ ಗುಣ ಎಲ್ಲರಲ್ಲೂ ಇರಲೇಬೇಕೆಂದಿಲ್ಲ. ಕಲಾಪ್ರದರ್ಶನ ಮಾಡುವ ಕೆಲವರಿಗೆ ಕಲಿಸಲು ತಿಳಿಯದಿರಬಹುದು. ಅಥವಾ ಕಲಿಸುವ ಸಾಮರ್ಥ್ಯ ಉಳ್ಳವನಿಗೆ ಆ ಕಲೆಯನ್ನು ಸಮರ್ಥವಾಗಿ ಪ್ರದರ್ಶಿಸಲು ಸಾಧ್ಯವಾಗದಿರಲೂಬಹುದು. ಈ ಎರಡೂ ಗುಣವಿದ್ದವರು "ಅಭಿಜಾತ ಕಲಾವಿದ" ಅನಿಸಿಕೊಳ್ಳುತ್ತಾರೆ. ಪದ್ಯಾಣರು ಅಭಿಜಾತ ಕಲಾವಿದರು. ಅತ್ಯುತ್ತಮ ಭಾಗವತರಾಗಿದ್ದು, ನೂರಾರು ಶಿಷ್ಯರನ್ನೂ ಹೊಂದಿದ್ದಾರೆ. ರವಿಚಂದ್ರ ಕನ್ನಡಿಕಟ್ಟೆ, ಪ್ರಫುಲ್ಲಚಂದ್ರ ನೆಲ್ಯಾಡಿ, ಪುತ್ತೂರು ರಮೇಶ್ ಭಟ್, ಹರಿಯಪ್ಪ ಶೆಣೈ, ಕಿಗ್ಗ ಹಿರಿಯಣ್ಣ ಆಚಾರ್ಯ, ಸಾಯಿನಾಥ ನಾವಡರಂಥಹ ಸುಪ್ರಸಿದ್ಧ ಭಾಗವತರು ಪದ್ಯಾಣರ ಶಿಷ್ಯರೆಂಬುದು ಗಮನಾರ್ಹ.
ಪದ್ಯಾಣ ಗಣಪತಿ ಭಟ್ಟರು ನನ್ನ ಅತ್ಯಂತ ಪ್ರೀತಿಯ ಭಾಗವತರು. ಮೊದಲೆಲ್ಲಾ ನಾನು ಪದ್ಯಾಣರ ಹಾಡು ಕೇಳಲು ಎಷ್ಟೋ ದೂರದ ಊರಿಗೆ ಹೋಗುತ್ತಿದ್ದೆ. ಆವಾಗಲೆಲ್ಲಾ ಪದ್ಯಾಣರು, "ಕುಡ್ವರೇ, ಇಷ್ಟು ದೂರ ಬಂದಿದ್ದೀರಾ?" ಅನ್ನುತ್ತಿದ್ದರು. ನಮ್ಮ "ಯಕ್ಷಸಂಗಮ" ಪ್ರಾರಂಭವಾಗಿ 20 ವರ್ಷಗಳು ಸಂದಿವೆ. ಪ್ರಾರಂಭದಿಂದ ಹಿಡಿದು, ಇಂದಿನವರೆಗೂ ನಮ್ಮ ಕೂಟದ ಕಾಯಂ ಭಾಗವತರು ಪದ್ಯಾಣರೇ. ಸರಳ, ವಿನಯಶೀಲ ವ್ಯಕ್ತಿತ್ವದ ಪದ್ಯಾಣರಲ್ಲಿ ನಾನು "ಭಾಗವತರೇ, ನಿಮ್ಮ ಹಾಡುಗಾರಿಕೆ ಒಳ್ಳೇದಾಗಿತ್ತು" ಎಂದರೆ, ಪದ್ಯಾಣರು "ಇಲ್ಲಾ, ಕುಡ್ವರೇ, ಇವತ್ತು ಒಳ್ಳೇದಾಗಲಿಲ್ಲ. ನೀವು ನನ್ನ ಮೇಲಿಟ್ಟ ಅಭಿಮಾನದಿಂದ, ನಿಮಗೆ ಒಳ್ಳೇದಾಗಿ ಕಂಡಿದೆ" ಎಂದು ವಿನಯದಿಂದಲೇ ಹೇಳುತ್ತಿರುವುದು ಪದ್ಯಾಣರ ದೊಡ್ಡ ಗುಣ.
ಕಾಲೋಚಿತ ಸಂಮಾನ
25 ವರ್ಷಗಳ ಹಿಂದೆ ಮಿತ್ರರೊಂದಿಗೆ ಸೇರಿ ಮೂಡುಬಿದಿರೆಯಲ್ಲಿ ಸುರತ್ಕಲ್ ಮೇಳದ ವೇದಿಕೆಯಲ್ಲಿ ಶೇಣಿ, ರಾಮದಾಸ ಸಾಮಗ, ಪದ್ಯಾಣರಿಗೆ ಸಂಮಾನ ಮಾಡಿದ್ದೆವು. ಅಭಿನಂದನಾ ಭಾಷಣ ಮಾಡಿದ ಡಾ| ಪ್ರಭಾಕರ ಜೋಷಿಯವರು ಶೇಣಿ, ಸಾಮಗರನ್ನು ಅಭಿನಂದಿಸಿ ಪದ್ಯಾಣರನ್ನು ಅಭಿನಂದಿಸುವಾಗ, "ಈ ಇಬ್ಬರು ಪ್ರಸಿದ್ಧ ಮಾತುಗಾರರನ್ನು ಸಂಮಾನಿಸುವ ಸಂದರ್ಭದಲ್ಲೇ, ಭಾಗವತರಾದ ಪದ್ಯಾಣರ ಸಂಮಾನ ಔಚಿತ್ಯಪೂರ್ಣವಾಗಿದೆ. ಏಕೆಂದರೆ ಈ ಮಾತುಗಾರರ ಅರ್ಥಗಾರಿಕೆ ಮಿಂಚಬೇಕಾದರೆ, ಭಾವೋತ್ಕರ್ಷ ರಸ ಸೃಷ್ಟಿಯಾಗಬೇಕು. ಅಂತಹ ರಸ ಸೃಷ್ಟಿಯಾಗುವುದು ಭಾಗವತರಿಂದ. ಪದ್ಯಾಣರು ಅಂಥಹ ಶ್ರೇಷ್ಠ ಭಾಗವತರಾದ ಕಾರಣ, ಶ್ರೇಷ್ಠ ಅರ್ಥಧಾರಿಗಳೊಂದಿಗೆ ಸಂಮಾನ ಮಾಡುತ್ತಿರುವುದು ಕಾಲೋಚಿತ" ಎಂದಿದ್ದರು.
ಸಂಮಾನದ ನಂತರ "ಸತ್ಯ ಹರಿಶ್ಚಂದ್ರ" ಯಕ್ಷಗಾನ ಪ್ರದರ್ಶನ ಇತ್ತು. ಶೇಣಿಯವರ ಪೂರ್ವಾರ್ಧದ ಹರಿಶ್ಚಂದ್ರ. ಪದ್ಯಾಣರು ಹಾಡುಗಾರಿಕೆಯಲ್ಲಿದ್ದರು. ವಿಶ್ವಾಮಿತ್ರ ಸೃಷ್ಟಿಸಿದ ಕನ್ಯೆಯರು ಹರಿಶ್ಚಂದ್ರನ ಸಮ್ಮುಖ ನರ್ತನ ಮಾಡುವ ದೃಶ್ಯ. ಪದ್ಯಾಣರು ಭಾವಪೂರ್ಣವಾಗಿ, ಶೃಂಗಾರ ರಸದಲ್ಲಿ ಹಾಡುವಾಗ ಕನ್ಯೆಯರ ನಾಟ್ಯ ಆಕರ್ಷಕವಾಗಿತ್ತು. ಶೇಣಿಯವರೂ ಹಾಡಿಗೆ ತಲೆದೂಗುತ್ತಿದ್ದರು. ನಾಟ್ಯ ಮುಗಿದ ನಂತರ ಶೇಣಿಯವರು (ಹರಿಶ್ಚಂದ್ರ) ಕನ್ಯೆಯರಲ್ಲಿ "ನಿಮ್ಮ ಸಂಗೀತಜ್ಞಾನ ಅತ್ಯಮೋಘ. ನಮ್ಮ ಆಸ್ಥಾನದಲ್ಲೂ ಇಂತಹ ಸಂಗೀತಗಾರರಿಲ್ಲ. ಆದರೆ ನಿಮ್ಮ ನಾಟ್ಯ, ಸಂಗೀತಕ್ಕೆ ಸಾಟಿಯಾಗಲಿಲ್ಲ. ನೋಡುವಾ ಇನ್ನೊಮ್ಮೆ ಹಾಡಿ ನಾಟ್ಯ ಮಾಡಿ" ಎಂದು ಇನ್ನೊಂದು ಹಾಡನ್ನು ಪದ್ಯಾಣರಿಂದ ಹಾಡಿಸಿ, ಆಸ್ವಾದಿಸಿದರು.
ಪದ್ಯಾಣರು ಶೇಣಿಯವರ ಮೆಚ್ಚಿನ ಭಾಗವತರು ಹಾಗೂ ಪದ್ಯಾಣರು ಸುಪ್ರಸಿದ್ಧ ಭಾಗವತರಾಗಲು ಶೇಣಿಯವರ ಕೊಡುಗೆಯೂ ಅಪಾರ ಎಂಬುದು ಗಮನೀಯ. ಪದ್ಯಾಣರು ಕೇವಲ ಭಾಗವತರು ಮಾತ್ರ ಆಗಿರಲಿಲ್ಲ. ಕಥೆಯ ತಿರುಳನ್ನು ಅರಿತು ಪದ್ಯವನ್ನು ಹೇಳುತ್ತಿದ್ದರು. ಉತ್ತಮ ಹಾಸ್ಯಪ್ರಜ್ಞೆಯನ್ನೂ ಹೊಂದಿದ್ದರು. ಹಾಸ್ಯಗಾರರ ಸ್ವಗತಕ್ಕೆ ಹಾಸ್ಯದಿಂದಲೇ ಸ್ಪಂದಿಸುತ್ತಿದ್ದರು. "ಹೌದಾ", "ಛೆ", ಹೌದಲ್ಲಾ", "ಮತ್ತೇ" ಮುಂತಾಗಿ ಸ್ವಗತಕ್ಕೆ ಪೂರಕ ಪಾತ್ರವಾಗಿ ನಿರ್ವಹಿಸುತ್ತಿದ್ದರು.
ಸುಮಾರು 25 ವರ್ಷಗಳ ಹಿಂದೆ ಮಂಗಳೂರು ಪುರಭವನದಲ್ಲಿ ತುಳು ಪ್ರಸಂಗವೊಂದರಲ್ಲಿ, ದುಷ್ಟಮಂತ್ರಿಯ ಪ್ರವೇಶವಾಯಿತು. ಪ್ರವೇಶದ ಪದ್ಯ ಆ ಮಂತ್ರಿ ಬೇಟೆಗೆ ಹೋದ ತನ್ನ ಅರಸನನ್ನು ಮೋಸದಿಂದ ಕೊಲ್ಲಲು ಹೊರಟಿದ್ದಾನೆ ಎಂಬುದಾಗಿತ್ತು. ಮಂತ್ರಿಯ ಪಾತ್ರ ನಿರ್ವಹಿಸಿದ ಕಲಾವಿದ ರಾಮಾಯಣ, ಮಹಾಭಾರತ, ಶಾಸ್ತ್ರ ಎಲ್ಲಾ ವಿಷಯ ಮಾತಾಡಿದ. ಆದರೆ ತಾನು ಬಂದ ವಿಷಯವನ್ನೇ ಹೇಳಲಿಲ್ಲ. ಭಾಗವತಿಕೆಯಲ್ಲಿದ್ದ ಪದ್ಯಾಣರು "ಕಥೆಯಲ್ಲೇ" ಇದ್ದವರು ಎರಡು ಮೂರು ಬಾರಿ ಮಂತ್ರಿಯ ಪಾತ್ರ ಮಾಡಿದ ವೇಷಧಾರಿಯಲ್ಲಿ, "ಬಂದ ಉದ್ದೇಶ ಏನು ?" ಎಂದು ಕೇಳಿದರೂ, ಆ ಕಲಾವಿದ ಮಂತ್ರಿಗಳ ಕರ್ತವ್ಯವೇನು, ಒಳ್ಳೇ ಮಂತ್ರಿಯಾಗಲು ಅರ್ಹತೆ ಏನು ಇವೇ ವಿಷಯ ಹೇಳುತ್ತಿದ್ದ. ನಂತರ ಮುಂದಿನ ಪದ್ಯಕ್ಕೆ ಎತ್ತುಗಡೆ ಕೊಟ್ಟ. ಆದರೆ ಪದ್ಯಾಣರು ಪದ್ಯ ಕೊಡಲೇ ಇಲ್ಲ. ಪುನಃ ಎತ್ತುಗಡೆ ಕೊಟ್ಟ. ಕೂಡಲೇ ಪದ್ಯಾಣರೂ ತಮಾಷೆಯಲ್ಲೇ, "ಮೊದಲು ನೀವೀಗ ಬಂದ ಉದ್ದೇಶ ತಿಳಿಸಿ. ಅದೆಲ್ಲಾ ನಂತರ ನೋಡುವಾ. ಆದೀತಾ?" ಎಂದೇ ಬಿಟ್ಟರು. ಆಗ ಆ ಮಂತ್ರಿಗೆ ಹೊಳೆಯಿತು. ಅಂತೂ ತಾನು ಬಂದ ಉದ್ದೇಶ ತಿಳಿಸಿದ. ನಂತರವೇ ಪದ್ಯಾಣರು ಮುಂದಿನ ಪದ್ಯಕ್ಕೆ ಹೋದರು. ಇದಲ್ಲವೇ ಉತ್ತಮ ಭಾಗವತರೆಂದರೆ?
ಪದ್ಯಕ್ಕೇ ಅಣ್ಣ, ನೈಜ ಭಾಗವತ
ಎಂಪೆಕಟ್ಟೆ ರಾಮಯ್ಯ ರೈಗಳು ಆ ಕಾಲದಲ್ಲಿ ಸುಪ್ರಸಿದ್ಧ ಕಲಾವಿದರು. ವಕ್ರೋಕ್ತಿ, ವ್ಯಂಗ್ಯೋಕ್ತಿಗಳಿಗೆ ಪ್ರಸಿದ್ಧರಾದವರು. ಅಷ್ಟೇ ವಿನೋದ ಪ್ರಿಯರು. ಅವರಿಗೆ ಪದ್ಯಾಣರ ಭಾಗವತಿಕೆಯ ಮೇಲೆ ವಿಶೇಷ ಅಭಿಮಾನ. ಪದ್ಯಾಣರು ಎದುರು ಇಲ್ಲದಾಗ "ಎಂಕ್ಲೆನ ಮಾಣಿ ಭಾಗವತೆರ್" ಎನ್ನುತ್ತಿದ್ದವರು, ಪದ್ಯಾಣರ ಎದುರಲ್ಲಿ "ಭಾಗವತೆರೇ" ಎಂದು ಕರೆಯುವಷ್ಟು ಪದ್ಯಾಣರ ಮೇಲೆ ಪ್ರೀತಿ. ಒಮ್ಮೆ ಪುರಭವನದ ಮಳೆಗಾಲದ ಕಾರ್ಯಕ್ರಮದಂದು ನಾನೂ ಎಂಪೆಕಟ್ಟೆ ರಾಮಯ್ಯ ರೈಗಳೂ ಚೌಕಿಯಲ್ಲಿ ಮಾತಾಡುತ್ತಾ ಇದ್ದಾಗ ಪದ್ಯಾಣರು ಬಂದರು. ನಾನು "ಭಾಗವತರೇ, ನಮಸ್ಕಾರ" ಎಂದೆ. ಪದ್ಯಾಣರು ಪ್ರತಿ ನಮಸ್ಕರಿಸಿ ನನ್ನ ಬಳಿ ಕುಳಿತರು. ಆಗ ಎಂಪೆಕಟ್ಟೆಯವರು, "ಕುಡ್ವರೇ, ಇವರು ಪದ್ಯಾಣ ಅಲ್ಲ. ಪದ್ಯಕ್ಕೇ ಅಣ್ಣ" ಎಂದರು. ನಾನು ವಿನೋದದಿಂದ, "ಅದ್ಯಾಕೆ ರಾಮಯ್ಯಣ್ಣ?" ಎಂದೆ. ಆಗ ಎಂಪೆಕಟ್ಟೆಯವರು, "ಕೆಲವು ಭಾಗವತರೆಲ್ಲಾ ಪದ್ಯ ಹೇಳುವುದು. ಅದರಲ್ಲಿ ರಸಭಾವವಿಲ್ಲ. ಆದರೆ ನಮ್ಮ ಗಣಪಣ್ಣ ಪದ್ಯ ಹೇಳುವುದಲ್ಲಾ. ಪದ್ಯ ಹಾಡುವುದು. ಇವರಲ್ಲಿರುವುದು ರಸಭಾವಯುಕ್ತವಾದ ಭಾಗವತಿಕೆ"ಎಂದರು.
ನಮ್ಮ "ಯಕ್ಷಸಂಗಮ ಮೂಡಬಿದ್ರಿ"ಯಲ್ಲಿ 2012 ರಲ್ಲಿ ಪದ್ಯಾಣ ಗಣಪತಿ ಭಟ್ಟರ ಸಂಮಾನ ಸಂದರ್ಭದಲ್ಲಿ ಅಭಿನಂದನಾ ಭಾಷಣ ಮಾಡುತ್ತಾ ಸುಪ್ರಸಿದ್ಧ ಅರ್ಥಧಾರಿಗಳಾದ ಉಜಿರೆ ಅಶೋಕ ಭಟ್ ಅವರು, "ನಾಲ್ಕು ಘಂಟೆಗಳ ಹಾಡುಗಾರಿಕೆಯಲ್ಲಿ ಪದ್ಯಾಣರು 70 ರಾಗಗಳನ್ನು ಬಳಸುತ್ತಿದ್ದರು. ಒಂದು ಕಾಲದಲ್ಲಿ ಪದ್ಯಾಣರೊಂದಿಗೆ ದ್ವಂದ್ವ ಹಾಡುಗಾರಿಕೆಗೆ ಬಂದಿದ್ದ ಬಡಗಿನ ಸುಪ್ರಸಿದ್ಧ ಭಾಗವತರಾದ ಕಾಳಿಂಗ ನಾವುಡರೇ ಪದ್ಯಾಣರ ಹಾಡುಗಾರಿಕೆ ನೋಡಿ ಅಪಾರವಾಗಿ ಮೆಚ್ಚಿದ್ದರು" ಎಂದಿದ್ದರು.
ಪದ್ಯಾಣರ ಸ್ವಾಮಿಭಕ್ತಿ, ವಿನಯಶೀಲತೆ
2010 ರಲ್ಲಿ ನಮ್ಮ ಯಕ್ಷಸಂಗಮದ ಕಾರ್ಯಕ್ರಮಕ್ಕೆ ಪದ್ಯಾಣರನ್ನು ಆಹ್ವಾನಿಸಿದಾಗ, ಬೇರೊಂದು ಕಡೆ ಕಾರ್ಯಕ್ರಮ ಒಪ್ಪಿದ್ದೇನೆ. ಅದು ಮುಗಿಸಿ ರಾತ್ರಿ ಒಂದು ಘಂಟೆಗೆ ಬರುವುದಾಗಿ ತಿಳಿಸಿದ್ದರು. ನಾನೂ ಒಪ್ಪಿದೆ. ಆ ವರ್ಷ ಸುರತ್ಕಲ್ ಮೇಳದ ಯಜಮಾನರಾದ ಕಸ್ತೂರಿ ವರದರಾಯ ಪೈಗಳಿಗೆ ಸಂಮಾನ ಎಂದು ನಿಶ್ಚಯಿಸಲಾಗಿತ್ತು. ಕಾರ್ಯಕ್ರಮದಂದು, ರಾತ್ರಿ 9.30 ಘಂಟೆಗೆ ಪೈಗಳಿಗೆ ಸಂಮಾನ ನಡೆಯಿತು. ನಾನು ವೇದಿಕೆಯಲ್ಲಿದ್ದೆ. ಅಷ್ಟರಲ್ಲಿ ಪದ್ಯಾಣರು ವೇದಿಕೆಗೆ ಆಗಮಿಸಿ ಅವರ ಪರವಾಗಿ ವರದರಾಯ ಪೈಗಳಿಗೆ ಶಾಲು ಹೊದಿಸಿ ಹಾರಾರ್ಪಣೆ ಮಾಡಿ ವಂದಿಸಿದರು. ನನಗೆ ಪದ್ಯಾಣರು ಬಂದದ್ದೇ ಗೊತ್ತಿರಲಿಲ್ಲ. ಸಂಮಾನದ ನಂತರ ನಾನು, "ಭಾಗವತರೇ, ಒಂದು ಘಂಟೆಗೆ ಬರುತ್ತೀರೆಂದಿರಲ್ಲವೇ? ಅದೇನು ಬೇಗ ಬಂದಿರಿ?"ಎಂದೆ. ಆಗ ಪದ್ಯಾಣರು, "ಕುಡ್ವರೇ, ನಿಮ್ಮ ಈ ವರ್ಷದ ಸಂಮಾನ ನನ್ನ ಯಜಮಾನರಾದ ವರದರಾಯ ಪೈಗಳಿಗೆ ಎಂದು ನಿಮ್ಮ ಆಹ್ವಾನ ಪತ್ರಿಕೆ ನೋಡಿಯೇ ತಿಳಿದದ್ದು. ನಾನು 26 ವರ್ಷಗಳ ಕಾಲ ದುಡಿದ ಮೇಳದ ಯಜಮಾನರಿಗೆ ಸಂಮಾನ ಎಂದಾಗ ನಾನು ಬಾರದಿದ್ದರೆ ಹೇಗೆ? ಅದಕ್ಕಾಗಿ ಅಲ್ಲಿ ಮೊದಲು ಭಾಗವತಿಕೆ ಮಾಡಿ ಬೇಗನೇ ಬಂದೆ" ಎಂದರು.
ಸಹ ಕಲಾವಿದರೊಂದಿಗೆ ಸ್ನೇಹಶೀಲರಾಗಿದ್ದ ಪದ್ಯಾಣರು ಅದೆಷ್ಟೋ ಕಲಾವಿದರಿಗೆ ನೆರವಾಗಿದ್ದಾರೆ. ಸಹ ಕಲಾವಿದರನ್ನು ತಿದ್ದಿ ತೀಡಿ ಬೆಳೆಸಿದ್ದಾರೆ. ಸರಳತೆಯೇ ಗುಣವಾಗಿರುವ ಪದ್ಯಾಣರ ಅಂತಿಮ ಸಂಸ್ಕಾರಕ್ಕೆ ಯಕ್ಷಗಾನ ಪೋಷಕರಾದ ಟಿ.ಶಾಮ್ ಭಟ್, ಕಲಾವಿದರ ಪಾಲಿನ ಕಾಮಧೇನು ಎನಿಸಿದ ಪಟ್ಲ ಸತೀಶ್ ಶೆಟ್ಟಿ, ಪದ್ಯಾಣರ "ಪಟ್ಟ ಶಿಷ್ಯ" ರವಿಚಂದ್ರ ಕನ್ನಡಿಕಟ್ಟೆಯವರು ತಮ್ಮ ಮಂಗಳವಾರದ ಮೂರು ಕಾರ್ಯಕ್ರಮ ರದ್ದುಪಡಿಸಿ, ಕೊನೆವರೆಗೂ ಭಾಗಿಯಾಗಿದ್ದರು. ಸೀತಾರಾಮ ಕುಮಾರ್ ಕಟೀಲು, ಸಂತೋಷ್ ಹಿಲಿಯಾಣ, ಬೆಳ್ಳಾರೆ ರಾಮ ಜೋಯಿಸ್, ವೆಂಕಟರಮಣ ಭಟ್ ಸುಳ್ಯ, ಹನುಮಗಿರಿ ಮೇಳದ ಸರ್ವ ಕಲಾವಿದರು, ಪದ್ಯಾಣರ ಒಡನಾಟದ ಕಲಾವಿದರು, ಬಂಧುಗಳಾದ ಪದ್ಯಾಣ ಶಂಕರ ನಾರಾಯಣ ಭಟ್, ಪದ್ಯಾಣ ಜಯರಾಮ ಭಟ್, ಚೈತನ್ಯ ಪದ್ಯಾಣ ಸಹಿತ ಸಹ ಕಲಾವಿದರು, ಸಾವಿರಾರು ಅಭಿಮಾನಿಗಳು ನೆರೆದಿದ್ದುದು ಹಾಗೂ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳಾದ ಬೊಮ್ಮಾಯಿಯವರೂ ಸಹಾ ಶೋಕ ಸಂದೇಶ ನೀಡಿದ್ದುದು ಪದ್ಯಾಣರ ಜನಪ್ರಿಯತೆಗೊಂದು ದ್ಯೋತಕ.
ಪದ್ಯಾಣರ ಒಡನಾಡಿಯಾಗಿದ್ದ ಸುಪ್ರಸಿದ್ಧ ಹಾಸ್ಯಗಾರ ಸೀತಾರಾಮ ಕುಮಾರ್ ಕಟೀಲು ಅವರಿಗೆ ನಿನ್ನೆ ಬೆಳಿಗ್ಗೆ ಕನಸಿನಲ್ಲಿ ಕಾಣಿಸಿಕೊಂಡ ಪದ್ಯಾಣರು, "ಏ ಸೀತರಾಮ ಲಕ್ಕ್ ಯಾ. ಚಾ ಮಲ್ತ್‌ದ್ ಕಣಾ" ಎಂದಿದ್ದರಂತೆ. ಎಚ್ಚರಗೊಂಡ ಸೀತಾರಾಮರು ಕೂಡಲೇ ಪದ್ಯಾಣರಿಗೆ ಕರೆ ಮಾಡಿದಾಗ ಅವರ ಮೊಬೈಲ್ ಸ್ವಿಚಾಫ್ ಆಗಿತ್ತು. ನಂತರ ಅವರ ಮಗ ಸ್ವಸ್ತಿಕ್‌ಗೆ ಕರೆ ಮಾಡಿ ಪದ್ಯಾಣರ ಆರೋಗ್ಯ ವಿಚಾರಿಸಿದ್ದರು. ನಂತರ ನನಗೆ ಕರೆ ಮಾಡಿ ಈ ಗುರುವಾರ ಪದ್ಯಾಣರ ಮನೆಗೆ ಹೋಗುವಾ ಎಂದಾಗ ನಾನೂ ಒಪ್ಪಿದ್ದೆ. ಆದರೆ, ವಿಧಿವಿಲಾಸದ ಅಟ್ಟಹಾಸವೇನೋ, ನಾವಿಬ್ಬರೂ ಅವರ ಅಂತಿಮ ದರ್ಶನಕ್ಕೆ ಹೋಗಬೇಕಾಯಿತು.
ಪದ್ಯಾಣ ಗಣಪತಿ ಭಟ್ಟರು ಇಬ್ಬರು ಪುತ್ರರಾದ ಸ್ವಸ್ತಿಕ್, ಕಾರ್ತಿಕ್ ಹಾಗೂ ಧರ್ಮಪತ್ನಿ ಶ್ರೀಮತಿ ಶೀಲಾ ಶಂಕರಿ, ಅಪಾರ ಕುಟುಂಬಸ್ಥರು ಸಹಿತ ಲಕ್ಷಾಂತರ ಅಭಿಮಾನಿಗಳನ್ನು ಅಗಲಿದ್ದಾರೆ. ಅವರ ಆತ್ಮಕ್ಕೆ ಸದ್ಗತಿ ದೊರಕಲಿ ಹಾಗೂ ಅವರ ಕುಟುಂಬಸ್ಥರಿಗೆ ಅಗಲುವಿಕೆಯ ಶೋಕವನ್ನು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತಾ 'ಯಕ್ಷಸಂಗಮ, ಮೂಡುಬಿದಿರೆ' ಹಾಗೂ ಸಮಸ್ತ ಅಭಿಮಾನಿಗಳ ಪರವಾಗಿ ಶ್ರದ್ಧಾಂಜಲಿ ಅರ್ಪಿಸುತ್ತೇನೆ.
✍ ಎಂ.ಶಾಂತರಾಮ ಕುಡ್ವ, ಮೂಡಬಿದಿರೆ
Tags:
ಕಲಾವಿದ