ಮಂಗಳೂರು ವಿವಿ ಯಕ್ಷಗಾನ ಅಧ್ಯಯನ ಕೇಂದ್ರ: 15 ಸಾಧಕರಿಗೆ ದಶಮಾನೋತ್ಸವ ಪ್ರಶಸ್ತಿ

ಪ್ರಾತಿನಿಧಿಕ ಚಿತ್ರ

ಮಂಗಳೂರು: ಮಂಗಳೂರು ವಿಶ್ವವಿದ್ಯಾಲಯದ ಡಾ.ಪಿ.ದಯಾನಂದ ಪೈ ಮತ್ತು ಪಿ.ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರವು ದಶಮಾನೋತ್ಸವ ಸಡಗರದಲ್ಲಿದ್ದು, ಕುಂಬ್ಳೆ, ಬೈಪಾಡಿತ್ತಾಯ, ಅರುವ ಸೇರಿದಂತೆ ಯಕ್ಷಗಾನ ಕ್ಷೇತ್ರದಲ್ಲಿ ಶ್ರಮಿಸಿದ 15 ಮಂದಿ ಸಾಧಕರಿಗೆ ‘ದಶಮಾನೋತ್ಸವ ಪ್ರಶಸ್ತಿ’ ಘೋಷಿಸಲಾಗಿದೆ.

ತೆಂಕು, ಬಡಗುತಿಟ್ಟಿನ ಹಿಮ್ಮೇಳ ಹಾಗೂ ಮುಮ್ಮೇಳ ಸೇರಿದಂತೆ ಹದಿನೈದು ಮಂದಿ ‘ದಶಮಾನೋತ್ಸವ ಪ್ರಶಸ್ತಿ’ಗೆ ಹಾಗೂ ಯಕ್ಷಗಾನ ಸಾಹಿತ್ಯ ಕ್ಷೇತ್ರದ ಇಬ್ಬರು ಸಾಧಕರು ‘ಕೃತಿ ಪ್ರಶಸ್ತಿ’ಗೆ ಆಯ್ಕೆಯಾಗಿದ್ದಾರೆ.


ಮುಮ್ಮೇಳದಲ್ಲಿ ಹಿರಿಯ ಯಕ್ಷಗಾನ ಕಲಾವಿದರಾದ ಕುಂಬ್ಳೆ ಸುಂದರ ರಾವ್, ಅರುವ ಕೊರಗಪ್ಪ ಶೆಟ್ಟಿ, ಪೇತ್ರಿ ಮಾಧವ ನಾಯ್ಕ್, ಮುಖ್ಯಪ್ರಾಣ ಕಿನ್ನಿಗೋಳಿ, ಕೃಷ್ಣ ಯಾಜಿ ಬಳ್ಕೂರು, ಆರ್ಗೋಡು ಮೋಹನ್ ದಾಸ್ ಶೆಣೈ, ಶಿವರಾಮ ಜೋಗಿ, ಪೂಕಳ ಲಕ್ಷ್ಮೀನಾರಾಯಣ ಭಟ್, ಉಬರಡ್ಕ ಉಮೇಶ್ ಶೆಟ್ಟಿ ಅವರಿಗೆ ದಶಮಾನೋತ್ಸವ ಪ್ರಶಸ್ತಿ ದೊರೆಯಲಿದೆ.

ಹಿಮ್ಮೇಳ ಕ್ಷೇತ್ರದಲ್ಲಿ ಸುದೀರ್ಘ ಸೇವೆ ಮಾಡಿರುವ ಸುಬ್ರಹ್ಮಣ್ಯ ಧಾರೇಶ್ವರ, ಕುರಿಯ ಗಣಪತಿ ಶಾಸ್ತ್ರಿ, ಪುತ್ತಿಗೆ ರಘುರಾಮ ಹೊಳ್ಳ, ದಿನೇಶ ಅಮ್ಮಣ್ಣಾಯ, ಪದ್ಯಾಣ ಶಂಕರನಾರಾಯಣ ಭಟ್, ಹರಿನಾರಾಯಣ ಬೈಪಾಡಿತ್ತಾಯ ಅವರಿಗೆ ‘ದಶಮಾನೋತ್ಸವ ಪ್ರಶಸ್ತಿ’ ನೀಡಲಾಗುವುದು.

ಯಕ್ಷಗಾನ ಸಾಹಿತ್ಯ ಕೃತಿಗಳನ್ನು ರಚಿಸಿರುವ ಡಾ.ಉಪ್ಪಂಗಳ ಶಂಕರನಾರಾಯಣ ಭಟ್ ಹಾಗೂ ಡಾ.ಚಂದ್ರಶೇಖರ್ ದಾಮ್ಲೆ ಅವರು ದಶಮಾನೋತ್ಸವದ ‘ಕೃತಿ ಪ್ರಶಸ್ತಿ’ಗೆ ಆಯ್ಕೆಯಾಗಿದ್ದಾರೆ.

ದಶಮಾನೋತ್ಸವದ ಸಂದರ್ಭದಲ್ಲಿ ಯಕ್ಷಗಾನಕ್ಕೆ ಹಾಗೂ ಯಕ್ಷಗಾನ ಕೇಂದ್ರದ ಬೆಳವಣಿಗೆಗೆ ಸಹಕಾರ ನೀಡಿದವರನ್ನು ಕೇಂದ್ರದ ವತಿಯಿಂದ ಗೌರವಿಸಲಾಗುವುದು. ನವೆಂಬರ್ ಕೊನೆಯ ವಾರದಲ್ಲಿ ನಡೆಯುವ ದಶಮಾನೋತ್ಸವ ಉದ್ಘಾಟನೆ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಹಾಗೂ ಸನ್ಮಾನ ನಡೆಯಲಿದೆ ಎಂದು ಯಕ್ಷಗಾನ ಅಧ್ಯಯನ ಕೇಂದ್ರದ ನಿರ್ದೇಶಕ ಪ್ರೊ. ಶ್ರೀಪತಿ ಕಲ್ಲೂರಾಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

ನವೀನ ಹಳೆಯದು