ಶ್ರೀಹರಿಲೀಲಾ-75: ಬೈಪಾಡಿತ್ತಾಯರ ಪುಟಾಣಿ ಶಿಷ್ಯರಿಂದ ಯಕ್ಷ ನಾದೋತ್ಸವ, 14 ಚೆಂಡೆಗಳ ಅಬ್ಬರ ತಾಳ

14 ಮಂದಿ ಮಕ್ಕಳು ಚೆಂಡೆಯಲ್ಲಿ, ತಲಾ ಇಬ್ಬರು ಮದ್ದಳೆ ಮತ್ತು ಜಾಗಟೆ ಮೂಲಕ ಅಬ್ಬರತಾಳ ನುಡಿಸಿ ಗಮನ ಸೆಳೆದರು. ಚಿತ್ರಗಳು: ಮಧುಸೂದನ ಅಲೆವೂರಾಯ 

ಮೂಡುಬಿದಿರೆ: ಹರಿನಾರಾಯಣ ಬೈಪಾಡಿತ್ತಾಯ-ಲೀಲಾವತಿ ಬೈಪಾಡಿತ್ತಾಯ ದಂಪತಿಯ ಅಮೃತ ಮಹೋತ್ಸವ ಪ್ರಯುಕ್ತ ಶಿಷ್ಯವೃಂದದವರು ಏರ್ಪಡಿಸಿದ್ದ "ಶ್ರೀಹರಿಲೀಲಾ-75 ಯಕ್ಷಾಭಿನಂದನಂ, ಶಿಷ್ಯಾಭಿವಂದನಂ, ಯಕ್ಷನಾದೋತ್ಸವಂ" ಕಾರ್ಯಕ್ರಮದಲ್ಲಿ, ಯಕ್ಷಗಾನ ರಂಗದಿಂದ ದೂರವಾಗುತ್ತಿರುವ ಪೂರ್ವರಂಗದ ಪ್ರದರ್ಶನವನ್ನು ನೇರವಾಗಿ ಮತ್ತು ನೇರ ಪ್ರಸಾರದಲ್ಲಿ ವೀಕ್ಷಿಸಿದ ಯಕ್ಷಗಾನ ಪ್ರಿಯರು ಮೆಚ್ಚುಗೆಯ ಮಹಾಪೂರವನ್ನೇ ಹರಿಸಿದರು.

ಇಲ್ಲಿನ ಆಲಂಗಾರು ಶ್ರೀ ಮಹಾಗಣಪತಿ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ 2021 ನವೆಂಬರ್ 7ರ ಭಾನುವಾರ ಬೆಳಿಗ್ಗೆ ಚೌಕಿ ಪೂಜೆಯಿಂದ ಮೊದಲ್ಗೊಂಡು, ಬೈಪಾಡಿತ್ತಾಯ ದಂಪತಿಯ ಶಿಷ್ಯವೃಂದವೇ ನಡೆಸಿಕೊಟ್ಟ ಪೂರ್ವರಂಗದ ಪ್ರದರ್ಶನವು, ಯಕ್ಷಗಾನದ ರಂಗ ವೈಭವವನ್ನು ಮತ್ತೆ ಸಾಕ್ಷಾತ್ಕರಿಸಿತು.
ಕರ್ಗಲ್ಲು ವಿಶ್ವೇಶ್ವರ ಭಟ್ ಅವರ ನಾಟ್ಯ-ನಿರ್ದೇಶನದಲ್ಲಿ ಪಳಗಿದ ಮಕ್ಕಳು (ಇವರು ಬೈಪಾಡಿತ್ತಾಯರಲ್ಲಿ ಚೆಂಡೆ ಮದ್ದಳೆಯನ್ನೂ ಅಭ್ಯಾಸ ಮಾಡುತ್ತಿದ್ದಾರೆ) ಅಚ್ಚುಕಟ್ಟಾಗಿ ಹಿಮ್ಮೇಳ-ಮುಮ್ಮೇಳಗಳಲ್ಲಿ ಮೆರೆದು, ಭವಿಷ್ಯದ ಯಕ್ಷಗಾನ ಕಲಾವಿದರಾಗುವ ಆಶಾಭಾವ ಮೂಡಿಸಿದರು.
ಚೌಕಿಯಿಂದ ರಂಗಸ್ಥಳಕ್ಕೆ - ಶ್ರೀರಮಣ ಹರೇ....

ಗಮನ ಸೆಳೆದ ಪುಟಾಣಿಗಳು ಅತಿಶಯ ಮದ್ದಳೆ, ಪ್ರಾಣೇಶ್ ಚೆಂಡೆ

ಕೋಡಂಗಿ ಕುಣಿತ

ಬಾಲಗೋಪಾಲರು

ಮುಖ್ಯಸ್ತ್ರೀವೇಷ

ಪ್ರೇಕ್ಷಕರು

ಪ್ರೇಕ್ಷಕರು

ಪ್ರೇಕ್ಷಕರು. ಚಿತ್ರಗಳು: ಮಧುಸೂದನ ಅಲೆವೂರಾಯ
ಚೌಕಿಯಿಂದ ರಂಗಸ್ಥಳಕ್ಕೆ ದೇವರಪ್ಪಣೆ ಪಡೆದುಕೊಂಡು, ಸಂಪ್ರದಾಯಬದ್ಧವಾಗಿ, ಶ್ರೀರಮಣ ಸರಸೀರುಹಾಕ್ಷ.... ಹರೇ ಎನ್ನುತ್ತಾ, ಚೆಂಡೆ-ಮದ್ದಳೆ- ಜಾಗಟೆ-ಚಕ್ರತಾಳಗಳೊಂದಿಗೆ ಕೋಡಂಗಿ ವೇಷಧಾರಿ ಮಕ್ಕಳು ರಂಗಸ್ಥಳಕ್ಕೆ ದೀಪ ಹಿಡಿದುಕೊಂಡು ಬಂದು, ಸಭಾವಂದನೆ ನೆರವೇರಿಸಿ, ಪೂರ್ವರಂಗದ ಕುಣಿತಗಳಿಗೆ ನಾಂದಿ ಹಾಡಿದರು.

ಆರಂಭದಲ್ಲಿ ಅತಿಶಯ್ ರಾವ್ ಮತ್ತು ಪ್ರಾಣೇಶ್ ಆಚಾರ್ ಎಂಬಿಬ್ಬರು ಪುಟಾಣಿಗಳು ಮುದದಿಂದ ನಿನ್ನ ಪದ್ಯಕ್ಕೆ ಮದ್ದಳೆ-ಚೆಂಡೆ ನುಡಿಸಿದ್ದು ಗಮನ ಸೆಳೆಯಿತು. ಚೆಂಡೆ-ಮದ್ದಳೆಯಷ್ಟೂ ಉದ್ದವಿಲ್ಲದ ಈ ಪುಟಾಣಿ ಮಕ್ಕಳ ಅಭ್ಯಾಸಕ್ಕೆ ಜೈ ಎಂದು ಪ್ರೇಕ್ಷಕರ ಕಡೆಯಿಂದ ಶ್ಲಾಘನೆ ನುಡಿಯೂ ಕೇಳಿಬಂದಿತು.

ಡೌರು ಕುಣಿತ (ಕೋಡಂಗಿ ವೇಷಗಳು), ಬಾಲಗೋಪಾಲರು, ಗಣಪತಿ ಕೌತುಕ, ಷಣ್ಮುಖ ಸುಬ್ರಾಯ, ಮುಖ್ಯಸ್ತ್ರೀ ವೇಷ, ಬಳಿಕ ಗುರು ಹರಿನಾರಾಯಣ ಬೈಪಾಡಿತ್ತಾಯರ ನಿರ್ದೇಶನದಲ್ಲಿ 14 ಚೆಂಡೆಗಳೊಂದಿಗೆ ಮಕ್ಕಳಿಂದಲೇ ಅಬ್ಬರತಾಳದ (ಪ್ರಸಂಗ ಪೀಠಿಕೆ) ವೈಭವ ಹಾಗೂ ಪೀಠಿಕೆ ಸ್ತ್ರೀವೇಷಗಳನ್ನು ರಂಗದಲ್ಲಿ ಅಚ್ಚುಕಟ್ಟಾಗಿ ಪ್ರಸ್ತುತಪಡಿಸಿ ಗಮನ ಸೆಳೆದರು.

ಪುಟ್ಟ ಪುಟ್ಟ ಮಕ್ಕಳೂ ಚೆಂಡೆ, ಮದ್ದಳೆಯಲ್ಲಿ ಮತ್ತು ಕುಣಿತದಲ್ಲಿ ತಮ್ಮ ಪ್ರತಿಭೆಯನ್ನು ಮೆರೆದರು. ಹಿಮ್ಮೇಳದಲ್ಲಿ ಶ್ರಾವ್ಯ ಕೆ.ತಲಕಳ, ಅತಿಶಯ ರಾವ್ ಕೊಂಚಾಡಿ, ಸಮರ್ಥ ಉಡುಪ ಕತ್ತಲ್‌ಸಾರ್, ಪ್ರಾಣೇಶ್ ಆಚಾರ್ ನಾರಳ, ಜಾಹ್ನವಿ ಆಚಾರ್ ನಾರಳ, ಅನಿರುದ್ಧ ಭಟ್ ಕಜೆ, ನಂದಿತಾ ರಾವ್ ಮಂಗಳೂರು, ಶಿವಮನ್ಯು ಭಟ್ ಪೊನ್ನಗಿರಿ, ರುದ್ರಮನ್ಯು ಭಟ್ ಪೊನ್ನಗಿರಿ, ದಿವ್ಯಾ ಭಟ್ ಪುತ್ತಿಗೆ, ಕೌಶಿಕ್ ಕತ್ತಲ್‌ಸಾರ್, ಮಹತಿ ಶೆಟ್ಟಿ ಅಂಡಾಲ, ಶ್ರೀರಾಮ ಶರ್ಮ ತಲಕಳ, ಶಶಾಂಕ ರಾವ್ ನರಿಕ್ಕಳ, ಶ್ರವಣ್ ಉಡುಪ ಕತ್ತಲ್‌ಸಾರ್ ಅವರು ಗಮನ ಸೆಳೆದರು.

ಪೂರ್ಣ ಕಾರ್ಯಕ್ರಮದ ವಿಡಿಯೊ ಲಿಂಕ್ ಇಲ್ಲಿದೆ:

ಮುಮ್ಮೇಳದಲ್ಲಿ ಶಮಾ ಕೆ.ತಲಕಳ, ಚೈತನ್ಯ ತಲಕಳ, ರಕ್ಷಿತಾ ಎಚ್., ಖುಷಿ ಕತ್ತಲ್‌ಸಾರ್, ಅನನ್ಯಾ ಸುವರ್ಣ ಮುರನಗರ, ದೀಕ್ಷಾ ಪೆರಾರ, ಚೈತ್ರಾ ತಲಕಳ, ಕೌಶಿಕ್ ಕತ್ತಲ್‌ಸಾರ್, ಅಮೃತ್ ಗೋಳಿಪಲ್ಕೆ ಮುಮ್ಮೇಳದಲ್ಲಿ ಪೂರ್ವರಂಗದ ನಾಟ್ಯವನ್ನು ಪ್ರಸ್ತುತಪಡಿಸಿದರು. ಬಳಿಕ ಮಹಿಳಾ ಹಿಮ್ಮೇಳವೇ ಇರುವ ಯಕ್ಷ ನಾದೋತ್ಸವ, ನಂತರ ಬೈಪಾಡಿತ್ತಾಯರ ಶಿಷ್ಯರಲ್ಲಿ ಮೇಳಗಳಿಗೆ ಹೋಗಿ ತಿರುಗಾಟ ಮಾಡಿದ, ಮಾಡುತ್ತಿರುವ ಭಾಗವತರು, ಚೆಂಡೆ-ಮದ್ದಳೆವಾದಕರಿಂದ ಯಕ್ಷ ನಾದೋತ್ಸವವು ಯಕ್ಷಗಾನವನ್ನು ವೈಭವವಾಗಿಸಿತು.

#ShreeHariLeela

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

ನವೀನ ಹಳೆಯದು