ಅನನ್ಯ ಶೈಲಿ ಉಳಿಸಿಕೊಂಡು ಯಕ್ಷಗಾನದ ಶ್ರೇಷ್ಠತೆಯನ್ನು ಸಾರಬೇಕಿದೆ: ಪ್ರೊ.ಎಂ.ಎಲ್.ಸಾಮಗ

ಹರಿನಾರಾಯಣ-ಲೀಲಾವತಿ ಬೈಪಾಡಿತ್ತಾಯ ದಂಪತಿಗೆ ಎಂ.ಎಲ್.ಸಾಮಗ ಅಧ್ಯಕ್ಷತೆಯಲ್ಲಿ ಯಕ್ಷಾಭಿನಂದನೆ, ಶಿಷ್ಯಾಭಿವಂದನೆ

ಮೂಡುಬಿದಿರೆ: ಯಕ್ಷಗಾನೀಯತೆ ಎಂದರೇನು? ಎಂಬ ಪ್ರಶ್ನೆಯಿದೆ. ಉತ್ತರವೂ ಇದೆ. ಅದಕ್ಕೆ ಚೌಕಟ್ಟನ್ನು ನಿರೂಪಿಸಬೇಕಿದೆ. ಯಾಕೆಂದರೆ ಈಗಿನ ಮಕ್ಕಳಿಗೆ ಯಕ್ಷಗಾನದ ಮಾದರಿ ಎಂದು ಸಿಗುವಂಥದ್ದು ಬೈಪಾಡಿತ್ತಾಯರ ಭಾಗವತಿಕೆಯಲ್ಲ. ಇದು ಕುಣಿತಕ್ಕೂ ಅನ್ವಯಿಸುವ ಸತ್ಯ. ಯಾವುದು ಜನಪ್ರಿಯ ಆಗುತ್ತಿದೆಯೋ, ಅದನ್ನೇ ಅನುಕರಿಸುವುದರಿಂದ ಯಕ್ಷಗಾನೀಯತೆಗೆ ತೊಡಕಾಗುತ್ತಿದೆ ಎಂದು ಹಿರಿಯ ಯಕ್ಷಗಾನ ವಿದ್ವಾಂಸ, ಕಲಾವಿದ ಪ್ರೊ.ಎಂ.ಎಲ್.ಸಾಮಗ ಅಭಿಪ್ರಾಯಪಟ್ಟರು.

ಯಕ್ಷಗಾನ ಇತಿಹಾಸದ ಅಪೂರ್ವ ಗುರು ದಂಪತಿ ಹರಿನಾರಾಯಣ ಬೈಪಾಡಿತ್ತಾಯ ಹಾಗೂ ಲೀಲಾವತಿ ಬೈಪಾಡಿತ್ತಾಯ ಅವರ ಅಮೃತ ಮಹೋತ್ಸವ ಪ್ರಯುಕ್ತ ಶಿಷ್ಯರು ಮೂಡುಬಿದಿರೆಯ ಆಲಂಗಾರು ಮಹಾಗಣಪತಿ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ 2021 ನವೆಂಬರ್ 7ರ ಭಾನುವಾರ ಏರ್ಪಡಿಸಿದ್ದ "ಶ್ರೀಹರಿಲೀಲಾ-75 ಯಕ್ಷಾಭಿನಂದನಂ, ಶಿಷ್ಯಾಭಿವಂದನಂ, ಯಕ್ಷನಾದೋತ್ಸವಂ" ಕಾರ್ಯಕ್ರಮದ ಸಭಾಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.

ಯಕ್ಷಗಾನಕ್ಕೆ ಅದರದ್ದೇ ಆದ ಅನನ್ಯ ಶೈಲಿಯಿದೆ. ಈ ಅನನ್ಯ ಶೈಲಿ ಯಾವುದು, ಉಳಿದ ಎಲ್ಲ ಕಲಾಪ್ರಕಾರಗಳಿಗಿಂತ ಯಕ್ಷಗಾನ ಹೇಗೆ ಭಿನ್ನ, ಯಾಕೆ ಭಿನ್ನ ಎಂಬುದನ್ನು ತಿಳಿದುಕೊಂಡು, ಆ ಮರ್ಯಾದೆಯೊಳಗೆ, ಆ ಮಿತಿಯೊಳಗೆ, ಸಾಧ್ಯವಾಗುವ ನೂತನತೆಯನ್ನು ತಂದುಕೊಂಡು, ಯಕ್ಷಗಾನವನ್ನು ಸದಾ ಜೀವಂತವಾಗಿರಿಸಿಕೊಂಡು, ಬೇರೆ ಕಲೆಗಳಿಗಿಂತ ಯಕ್ಷಗಾನವೇ ಶ್ರೇಷ್ಠ ಕಲೆ ಎಂಬುದನ್ನು ಸಾಧಿಸಿತೋರಿಸುವ ಸಾಮರ್ಥ್ಯ ನಮಗೆಲ್ಲ ಮೂಡಬೇಕಿದೆ ಎಂದು ಸಾಮಗರು ಅಭಿಪ್ರಾಯಪಟ್ಟರು.
ಯಕ್ಷಗಾನ ಮುಂದಿನ ತಲೆಮಾರಿಗೆ ಹಸ್ತಾಂತರಿಸುವುದು ಹೇಗೆಂಬುದಕ್ಕೆ ಉದಾಹರಣೆ
ವಿದ್ವಾಂಸರ ಬಾಯಿಂದ, ಆಧುನಿಕ ಯಕ್ಷ ಚಿಂತಕರಿಂದ ಒಂದು ಪ್ರಶ್ನೆಯನ್ನು ಹಲವೆಡೆ ಕೇಳುತ್ತಲೇ ಬಂದಿದ್ದೇವೆ. ಈ ಅತ್ಯಮೂಲ್ಯವಾದ ದೇಶೀಯ, ಸನಾತನ ಸಂಸ್ಕೃತಿ ಉಳಿಸುವ ಯಕ್ಷಗಾನ ಕಲೆಯನ್ನು ಮುಂದಿನ ತಲೆಮಾರಿಗೆ ಹಸ್ತಾಂತರಿಸುವುದು ಹೇಗೆ? ಯಾಕೆಂದರೆ ಈ ತಲೆಮಾರಿನವರ ಆಸಕ್ತಿಯ ವಿಷಯ ಬೇರೆ ಇದೆ. ಹಿರಿಯರ ಒತ್ತಡಕ್ಕೆ ಕೆಲವೊಮ್ಮೆ ಯಕ್ಷಗಾನಕ್ಕೆ ಬಂದರೂ, ಅವರು ಮೊಬೈಲಲ್ಲಿ ನಿರತರಾಗಿರುತ್ತಾರೆ ಎಂದ ಸಾಮಗರು, ಆದರೆ, ಮುಂದಿನ ತಲೆಮಾರಿಗೆ ಹಸ್ತಾಂತರಿಸುವುದು ಹೇಗೆ ಎಂಬುದಕ್ಕೆ ಅತ್ಯಂತ ಸಮರ್ಥವಾದ, ಉಳಿದವರಿಗೆ ಮಾರ್ಗಪ್ರವರ್ತಕವಾಗಬಲ್ಲಂತಹಾ ಉದಾಹರಣೆಯನ್ನು ಈ ಗುರು ದಂಪತಿ ಇಂದು ತೋರಿಸಿದ್ದಾರೆ ಎನ್ನುತ್ತಾ, ದಿನವಿಡೀ ನಡೆದ ಕಾರ್ಯಕ್ರಮದಲ್ಲಿ ಮಕ್ಕಳು ತೋರಿದ ಶಿಸ್ತುಬದ್ಧ ಯಕ್ಷಗಾನ ಪ್ರದರ್ಶನವನ್ನು ಶ್ಲಾಘಿಸಿದರು.

ಯಕ್ಷಗಾನ ಬಿಡಬೇಡಿ
ಮಕ್ಕಳಲ್ಲಿ ಈ ರೀತಿಯ ಆಸಕ್ತಿ ಬೆಳೆಸಿದ್ದೇ ಈ ಗುರು ದಂಪತಿಯ ದೊಡ್ಡ ಸಾಧನೆ. ಆದರೆ ಈ ಮಕ್ಕಳಿಗೆ ಬಲುದೊಡ್ಡ ಜವಾಬ್ದಾರಿ ಇದೆ. ಇಂದಿನ ಪ್ರದರ್ಶನವನ್ನು ಮರೆಯಬೇಡಿ. ಮುಂದುವರಿಸಿಕೊಂಡು ಹೋಗಬೇಕು. ನಿತ್ಯವೂ ಅರ್ಧ-ಒಂದು ಗಂಟೆ ಬಾರಿಸದಿದ್ದರೆ ಮದ್ದಳೆಗೂ ಬೇಸರವಾಗುತ್ತದೆ. ಕಲಿತ ವಿದ್ಯೆಗೆ ಅಪಚಾರವಾಗದಂತೆ ದಯವಿಟ್ಟು ಶಿಷ್ಯ-ಶಿಷ್ಯೆಯರು, ವಿಶೇಷವಾಗಿ ಸಣ್ಣ ಸಣ್ಣ ಮಕ್ಕಳು ಇದನ್ನು ಮುಂದುವರಿಸಿಕೊಂಡು ಹೋಗಬೇಕು ಎಂದು ಅವರು ವಿನಂತಿಸಿಕೊಂಡರು.

ಕಲಿತು, ದೊಡ್ಡ ಉದ್ಯೋಗ ಪಡೆದು ರಾಜ್ಯದಿಂದ ಹೊರಗೆ, ದೇಶದಿಂದ ಹೊರಗೆ ಹೋದ ಬಳಿಕ, ಜೀವನದಲ್ಲಿ ನೆಲೆ ಕಂಡುಕೊಂಡ ಬಳಿಕವಾದರೂ ಖಂಡಿತವಾಗಿಯೂ ಪುರುಸೊತ್ತು ಸಿಗುತ್ತದೆ. ಬಾಲ್ಯದಲ್ಲಿ ಕಲಿತು ಗಟ್ಟಿ ಮಾಡಿದ ಈ ವಿದ್ಯೆಯನ್ನು ಉಪಯೋಗಿಸುವುದಕ್ಕೆ, ವಿನಿಯೋಗಿಸುವುದಕ್ಕೆ ಅವಕಾಶ ಖಂಡಿತಾ ಸಿಗುತ್ತದೆ ಎಂದು ಸಾಮಗರು ಹೇಳಿದರು.

ಯಕ್ಷಗಾನಕ್ಕೆ ನಿರಂತರತೆ, ವ್ಯಾಪಕತೆ ಅಗತ್ಯ
ಯಕ್ಷಗಾನವು ಸಾರ್ವತ್ರಿಕವಾಗಿ ಪಸರಿಸಬೇಕು. ಯಕ್ಷಗಾನ ಕರ್ನಾಟಕ ರಾಜ್ಯದ ಪ್ರಾತಿನಿಧಿಕ ಕಲೆಯಾಗಬೇಕು ಎಂಬ ಕೂಗೆದ್ದಿದೆ. ಈ ಮಾನ್ಯತೆ ದೊರಕಬೇಕಿದ್ದರೆ, ಅದಕ್ಕೆ ನಿರಂತರತೆ ಬೇಕು, ಸಂಬಂಧಿತ ಕಾರ್ಯಕ್ರಮಗಳು ನಡೆಯುತ್ತಿರಬೇಕು, ವ್ಯಾಪಕತೆ ಬೇಕಿದೆ. ಇಂಥ ಕಾರ್ಯಕ್ರಮಗಳು, ಇಲ್ಲಿ ಬಿಡುಗಡೆಯಾಗುತ್ತಿರುವ ಗ್ರಂಥಗಳು... ಇವೆಲ್ಲವನ್ನು ಕಂಡು ಯಕ್ಷಗಾನದ ಹೊರಗಿರುವವರು ದಂಗಾಗಿ ಹೋಗುತ್ತಾರೆ. ಯಕ್ಷಗಾನದಲ್ಲಿ ನಿತ್ಯ ನಿರಂತರ ಅಧ್ಯಯನ ನಡೆಯುತ್ತಿರುವುದಕ್ಕೆ ಇದು ಸಾಕ್ಷಿ. ಇಷ್ಟೊಂದು ಪುಸ್ತಕಗಳು ಬರುತ್ತಿವೆಯಲ್ಲ, ಇದು ನಿರಂತರವಾಗಿರಬೇಕು. ಹೀಗಾದರೆ, ಸರಕಾರಕ್ಕೂ ಮುಟ್ಟುತ್ತದೆ. ಈ ಕಲೆಯು ಸದಾ ಕಾಣಿಸುತ್ತಿರಬೇಕು. ಇಂಥ ಕಾರ್ಯಕ್ರಮಗಳು ಆಗುತ್ತಿರಬೇಕು. ಇದು ಅದ್ಭುತ ಕಾರ್ಯಕ್ರಮ. ಉತ್ತಮವಾಗಿ ಸಂಘಟಿಸಿದ್ದೀರಿ ಎನ್ನುತ್ತಾ ಶಿಷ್ಯರನ್ನು ಅಭಿನಂದಿಸಿದರು.

ಅದೇ ರೀತಿ, ಶಿಷ್ಯರಿಂದ ಪಡೆದ ಈ ರೀತಿಯ ಅಭಿನಂದನೆಯಿಂದ ಉತ್ತೇಜನಗೊಂಡು, ಈ ಗುರು ದಂಪತಿ ಮತ್ತಷ್ಟು ಶಿಷ್ಯರನ್ನು ತಯಾರು ಮಾಡುವಂತಾಗಲಿ ಎಂದು ಹಾರೈಸಿದರಲ್ಲದೆ, ಶಿಷ್ಯರಾಗಿರುವವರು ಯಕ್ಷಗಾನವನ್ನು ಮುಂದುವರಿಸಿಕೊಂಡು ಹೋಗಬೇಕೆಂದು ಆಶಿಸಿದರು.

ರಿಹರ್ಸಲ್ ಅಗತ್ಯ
ಮಾತು ಆರಂಭಿಸುವ ಮೊದಲು ಗುರು ದಂಪತಿಗಳಿಗೆ ನಮಸ್ಕರಿಸಿದ ಸಾಮಗರು, 20-30 ವರ್ಷಗಳ ಹಿಂದೆ ಬಪ್ಪನಾಡು ಮೇಳದಲ್ಲಿ ನಾನು ಗುರು ದಂಪತಿಗೆ ನಮಸ್ಕರಿಸಿಯೇ ರಂಗಕ್ಕೆ ಬರುತ್ತಿದ್ದೆ ಎಂದು ನೆನಪಿಸಿಕೊಳ್ಳುತ್ತಾ, ಅಲ್ಲಿಯೂ ಮದ್ದಳೆಗಾರರ ವಾಮಾಂಗಿಯಾಗಿ ಭಾಗವತರು ಕೂತದ್ದು. ಮದ್ದಳೆಗಾರ, ಭಾಗವತರಿಗೆ ನಮಸ್ಕರಿಸಿ ರಂಗಕ್ಕೆ ಬರುವುದೇ ಯಕ್ಷಗಾನದ ಶಿಸ್ತು ಎಂದು ಒತ್ತಿ ಹೇಳಿದರು.

ಶಿವರಾಮ ಕಾರಂತರು ಯಕ್ಷಗಾನಕ್ಕೆ ನವೀನತೆ ತಂದವರು. ಹೊರಗೆ ಹೋಗಿ ಪ್ರದರ್ಶನ ಕೊಡುವಾಗ ಅಷ್ಟು ಶಿಸ್ತಿನಿಂದ, ಅಚ್ಚುಕಟ್ಟಾಗಿ, ಯಾವ ಪ್ರೇಕ್ಷಕರಿಗೆ ಪ್ರದರ್ಶನ ಕೊಡುತ್ತಿದ್ದೀರಿ ಎಂಬುದನ್ನು ತಿಳಿದುಕೊಂಡು, ರಿಹರ್ಸಲ್ ಮಾಡಿಕೊಂಡೇ ರಂಗವೇರಬೇಕು ಅಂತ ಅವರೇ ಹೇಳಿದ್ದರು. ಪ್ರಬುದ್ಧ, ಪಳಗಿದ ಹಿರಿಯ ಕಲಾವಿದರನ್ನು ಜೊತೆಗಿರಿಸಿಕೊಂಡು, ಅವರನ್ನು ರಿಹರ್ಸಲ್‌ಗೆ, ರಂಗ ತಾಲೀಮಿಗೆ ಒಪ್ಪಿಸುವುದು ಅಷ್ಟು ಸುಲಭವಲ್ಲ. ಆದರೆ, ಇಷ್ಟು ಹಿರಿಯರಾದರೂ ಶಿಸ್ತು, ರಿಹರ್ಸಲ್ ಬೇಕು ಎಂದಾಗ ಅದಕ್ಕೆ ಒಗ್ಗಿಕೊಳ್ಳುವ ಸಾತ್ವಿಕ ಮನಸ್ಥಿತಿ ಇವರಲ್ಲಿದೆ ಎಂದರು ಸಾಮಗರು.

ಎಲ್ಲ ಕಾರ್ಯಕ್ರಮಗಳನ್ನು ನನ್ನ ಕಣ್ಣರಳಿಸಿ, ಕಿವಿಯರಳಿಸಿ ನೋಡಿದ್ದೇನೆ. ಗಮನಿಸಿದ ವಿಷಯ ಎಂದರೆ, ಈ ಬಗೆಯಲ್ಲಿ ಶಿಷ್ಯರನ್ನು ತಯಾರಿ ಮಾಡಿ, ಅವರಿಂದ ಇವತ್ತೊಂದು ಇಂತಹಾ ಕಾರ್ಯಕ್ರಮವನ್ನು ಕೊಟ್ಟಿರಲ್ಲ. ಅದು ಅತಿ ಅದ್ಭುತವಾದದ್ದು ಎಂದ ಅವರು, ಶ್ರೀಹರಿಲೀಲಾ ಯಕ್ಷನಾದ ಪ್ರಶಸ್ತಿ ಪುರಸ್ಕೃತ ಲಕ್ಷ್ಮೀಶ ಅಮ್ಮಣ್ಣಾಯರಿಗೆ ಈ ಗೌರವ ದೊರೆತಿರುವುದು ಅರ್ಹರಿಗೆ ದೊರೆತ ಸನ್ಮಾನ ಎಂದರು. ಇವರಲ್ಲೂ, ಬೈಪಾಡಿತ್ತಾಯ ದಂಪತಿಯಲ್ಲೂ ಇರುವ ಸಮಾನ ಗುಣವೆಂದರೆ, ಮುದುಡಿಕೊಳ್ಳುವ ಗುಣ. ತನ್ನನ್ನು ತಾನು ಬೆಳಕಿಗೆ ತಂದುಕೊಂಡು ತೋರಿಸಿಕೊಳ್ಳುವ ಗುಣವಲ್ಲ. ಭಾರತೀಯ ಸನಾತನ ಪರಂಪರೆಯ ಲಕ್ಷಣವಿದು. ಅಂಥವರು ಇವರು. ಅವರಿಗೆ ಗೌರವಿಸಿದ್ದು ಅತ್ಯಂತ ಔಚಿತ್ಯಪೂರ್ಣವಾದುದು ಎಂದರು.

ಒಂದು ಒಳ್ಳೆಯ ಕಾರ್ಯಕ್ರಮ ಅಂತ ಹೇಳುವುದು ಉತ್ಪ್ರೇಕ್ಷೆಯೂ ಅಲ್ಲ, ಅಧ್ಯಕ್ಷನೆಂಬ ನೆಲೆಯಲ್ಲಿ ಶಿಷ್ಟಾಚಾರಕ್ಕೂ ಈ ಮಾತು ಆಡಿಲ್ಲ. ಈ ಪ್ರಮಾಣದಲ್ಲಿ, ಚಿಕ್ಕ ಚಿಕ್ಕ ಮಕ್ಕಳೂ ಕಾರ್ಯಕ್ರಮ ಮಾಡಿದ್ದಾರೆ. ಅವರ ಹೆತ್ತವರಲ್ಲಿ ವಿನಂತಿಸುತ್ತೇನೆ. ಆ ಮಕ್ಕಳು ಇದನ್ನು ಮುಂದುವರಿಸುವಂತೆ ನೋಡಿಕೊಳ್ಳಿ, ಯಕ್ಷಗಾನವು ವಿಶ್ವಗಾನವಾಗಲಿ ಎಂದು ಎಂ.ಎಲ್.ಸಾಮಗರು ಹಾರೈಸಿದರು.

#ShreeHariLeela

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

ನವೀನ ಹಳೆಯದು