ಯಕ್ಷಗಾನದ ಇತಿಹಾಸಕ್ಕೆ ಸಾಕ್ಷಿಯಾಗಬಹುದಾದ ಎರಡು ಪುಸ್ತಕಗಳು -ಬೈಪಾಡಿತ್ತಾಯರ 75ರ ಅಭಿನಂದನ ಗ್ರಂಥ 'ಶ್ರೀಹರಿಲೀಲಾ ಯಕ್ಷಗಾನ ಕಲಾಯಾನ' ಮತ್ತು ಲೀಲಾ ಬೈಪಾಡಿತ್ತಾಯರ ಆತ್ಮಕಥನ 'ಯಕ್ಷ ಗಾನ ಲೀಲಾವಳಿ'. ಈ ಪುಸ್ತಕಗಳ ಮೌಲ್ಯದ ಬಗ್ಗೆ ಬೆಳಕು ಚೆಲ್ಲಿದ್ದಾರೆ ಡಾ.ಸಿಬಂತಿ ಪದ್ಮನಾಭ.
1. ಯಕ್ಷಗಾನ ಕಲಾಯಾನ
ಯಕ್ಷಗಾನ ಲೋಕ ಕಂಡ ಅನನ್ಯ ಗುರುದಂಪತಿ ಶ್ರೀ ಹರಿನಾರಾಯಣ ಬೈಪಾಡಿತ್ತಾಯ-ಶ್ರೀಮತಿ ಲೀಲಾವತಿ ಬೈಪಾಡಿತ್ತಾಯರ 75ನೇ ವರ್ಷದ ಸಂಭ್ರಮದಲ್ಲಿ ಅವರ ಶಿಷ್ಯವೃಂದ ಹಾಗೂ ಅಭಿಮಾನಿಗಳು ಅರ್ಪಿಸಿದ ಅಭಿನಂದನ ಗ್ರಂಥ ಇದು.
Yakshagana.in Updates ಗಾಗಿ: ವಾಟ್ಸ್ಆ್ಯಪ್-4 | ವಾಟ್ಸ್ಆ್ಯಪ್-3 | ವಾಟ್ಸ್ಆ್ಯಪ್-1 | ವಾಟ್ಸ್ಆ್ಯಪ್-2 | . ಟೆಲಿಗ್ರಾಂ | ಫೇಸ್ಬುಕ್ | ಟ್ವಿಟರ್ | ಯೂಟ್ಯೂಬ್ | ಇನ್ಸ್ಟಾಗ್ರಾಂ
ಇದು ಬರೀ ಅಭಿಮಾನ, ಪ್ರಶಂಸೆಯ ನುಡಿಗಳ ಸಂಗ್ರಹವಲ್ಲ. ಯಕ್ಷಗಾನ ರಂಗಭೂಮಿಯ ವಿವಿಧ ಆಯಾಮಗಳನ್ನು ಅನಾವರಣಗೊಳಿಸುವ ಅನೇಕ ಅಧ್ಯಯನಪೂರ್ಣ ಲೇಖನಗಳ ಆಕರ ಗ್ರಂಥ. ಪುಸ್ತಕ ಒಟ್ಟು ಏಳು ಅವತರಣಿಕೆಗಳಲ್ಲಿದೆ. ಮೊದಲನೇ ಅವತರಣಿಕೆಯಲ್ಲಿ 43 ಮಂದಿಯ ಅಭಿನಂದನ ಬರೆಹಗಳಿವೆ. ಬಂಧುಗಳು, ಸಹ ಕಲಾವಿದರು, ಮಕ್ಕಳು, ಶಿಷ್ಯರೆಲ್ಲ ಬೈಪಾಡಿತ್ತಾಯರ ಒಡನಾಟವನ್ನು ನೆನಪಿಸಿಕೊಂಡಿದ್ದಾರೆ. ಮುಂದಿನ ಐದು ವಿಭಾಗಗಳಲ್ಲಿ ಯಕ್ಷಗಾನ ಸಂಬಂಧೀ 29 ಅಧ್ಯಯನಪೂರ್ಣ ಲೇಖನಗಳು. ಕೊನೆಯ ಭಾಗದಲ್ಲಿ ಬೈಪಾಡಿತ್ತಾಯ ದಂಪತಿಯ ಜೀವನ-ಸಾಧನೆ ಮಾಹಿತಿ ಹಾಗೂ ಚಿತ್ರಸಂಪುಟ.
ಡಾ| ರಮಾನಂದ ಬನಾರಿ, ಡಾ. ಕಬ್ಬಿನಾಲೆ ವಸಂತ ಭಾರದ್ವಾಜ್, ಶ್ರೀ ಪದ್ಯಾಣ ಶಂಕರನಾರಾಯಣ ಭಟ್, ಡಾ. ಎಂ. ಪ್ರಭಾಕರ ಜೋಶಿ, ಪ್ರೊ. ಲಕ್ಷ್ಮೀನಾರಾಯಣ ಸಾಮಗ, ಡಾ. ಚಂದ್ರಶೇಖರ ದಾಮ್ಲೆ, ಶ್ರೀ ಶ್ರೀಧರ ಡಿ.ಎಸ್., ವಿದ್ವಾನ್ ಉಮಾಕಾಂತ ಭಟ್ ಕೆರೇಕೈ, ಶ್ರೀ ರಾಧಾಕೃಷ್ಣ ಕಲ್ಚಾರ್ ವಿಟ್ಲ, ಶ್ರೀ ವಾಸುದೇವ ರಂಗ ಭಟ್ ಮಧೂರು, ಡಾ. ನಾಗವೇಣಿ ಮಂಚಿ, ಕುರಿಯ ಗಣಪತಿ ಶಾಸ್ತ್ರಿ, ಶ್ರೀ ತಾರಾನಾಥ ವರ್ಕಾಡಿ, ಶ್ರೀ ನಾ.ಕಾರಂತ ಪೆರಾಜೆ, ಡಾ. ಶ್ರುತಕೀರ್ತಿ ರಾಜ್, ಶ್ರೀ ರವಿಶಂಕರ ವಳಕ್ಕುಂಜ, ಶ್ರೀ ಸುಣ್ಣಂಬಳ ವಿಶ್ವೇಶ್ವರ ಭಟ್, ಪ್ರೊ. ಶ್ರೀಪತಿ ಕಲ್ಲೂರಾಯ, ಶ್ರೀ ಕಟೀಲು ಸಿತ್ಲ ರಂಗನಾಥ ರಾವ್, ಶ್ರೀಮತಿ ಜಯಲಕ್ಷ್ಮೀ ಕಾರಂತ, ಶ್ರೀಮತಿ ವಿದ್ಯಾ ಕೋಳ್ಯೂರು, ಶ್ರೀಮತಿ ಸುಮಂಗಲಾ ರತ್ನಾಕರ್ ... ಇನ್ನೂ ಅನೇಕ ಮಂದಿಯ ಮೌಲಿಕ ಲೇಖನಗಳಿಂದ ಗ್ರಂಥ ಸಂಗ್ರಹಯೋಗ್ಯವೆನಿಸಿದೆ.
ಪ್ರಧಾನ ಸಂಪಾದಕರು ಯಕ್ಷಗಾನ ಕಲಾವಿದರೂ, ಲೇಖಕರೂ, ಪ್ರಸ್ತುತ ಶ್ರೀ ರಾಮಕುಂಜೇಶ್ವರ ಮಹಾವಿದ್ಯಾಲಯದ ಪ್ರಾಂಶುಪಾಲರೂ ಆಗಿರುವ ಶ್ರೀ ಗಣರಾಜ ಕುಂಬ್ಳೆ. ಸಂಪಾದಕೀಯ ತಂಡದಲ್ಲಿ ಶ್ರೀ ಸುಬ್ರಾಯ ಸಂಪಾಜೆ, ಶ್ರೀ ಅವಿನಾಶ್ ಬೈಪಾಡಿತ್ತಾಯ, ಆರತಿ ಮತ್ತು ನಾನು ಇದ್ದೇವೆ.
2. ಯಕ್ಷ ಗಾನ ಲೀಲಾವಳಿ
ಯಕ್ಷಗಾನ ರಂಗದ ಮೊದಲ ವೃತ್ತಿಪರ ಮಹಿಳಾ ಭಾಗವತರಾದ ಶ್ರೀಮತಿ ಲೀಲಾವತಿ ಬೈಪಾಡಿತ್ತಾಯರ ಆತ್ಮಕಥನ ಇದು. ಪತ್ರಕರ್ತೆ ಶ್ರೀಮತಿ ವಿದ್ಯಾರಶ್ಮಿ ಪೆಲತ್ತಡ್ಕ ನಿರೂಪಿಸಿರುವ ಈ ಕೃತಿಯನ್ನು 'ಅಭಿನವ' ಪ್ರಕಟಿಸಿದೆ. ಲೀಲಮ್ಮನವರು ಕೇವಲ ಕಲಾವಿದೆಯಾಗಿ ಅಲ್ಲದೆ, ಯಕ್ಷಗಾನ ಇತಿಹಾಸದ ಬದಲಾವಣೆಯ ಅಲೆಯೊಂದರ ಪ್ರತಿನಿಧಿಯಾಗಿಯೂ ನಮಗೆ ಮುಖ್ಯರಾಗುತ್ತಾರೆ. ಹಾಗಾಗಿಯೇ ಈ ಪುಸ್ತಕ ಹೊಸ ನಿರೀಕ್ಷೆಯನ್ನು ಹುಟ್ಟಿಸಿದೆ.
ಅಭಿನಂದನ ಗ್ರಂಥದ ಲೇಖಕರಿಗೆ ಗ್ರಂಥ ಸದ್ಯದಲ್ಲೇ ತಲುಪಲಿದೆ. ಆಸಕ್ತರು ಎರಡೂ ಪುಸ್ತಕಗಳನ್ನು ಯಾವುದೇ ಹಿಂಜರಿಕೆಯಿಲ್ಲದೆ ಪಡೆದುಕೊಳ್ಳಬಹುದು. 'ಯಕ್ಷಗಾನ ಕಲಾಯಾನ'ದ ಮೂಲ ಬೆಲೆ ರೂ. 300. ಆಸಕ್ತ ಓದುಗರಿಗೆ ರೂ. 250ಕ್ಕೆ ಲಭ್ಯ. 'ಯಕ್ಷಗಾನ ಲೀಲಾವಳಿ'ಯ ಬೆಲೆ ರೂ. 150. ಆಸಕ್ತರಿಗೆ ರೂ. 125ಕ್ಕೆ ಲಭ್ಯ. ಎರಡನ್ನೂ ಒಟ್ಟಿಗೆ ಕೊಳ್ಳುವುದಿದ್ದರೆ ರೂ. 350 (ಅಂಚೆವೆಚ್ಚ ಸೇರಿ).
ಆಸಕ್ತರು ಪುಸ್ತಕಗಳಿಗಾಗಿ ಶ್ರೀ ಅವಿನಾಶ್ ಬೈಪಾಡಿತ್ತಾಯರನ್ನು 9986266991 ಸಂಖ್ಯೆಯ ಮೂಲಕ ಸಂಪರ್ಕಿಸಿ. ನಿಜವಾದ ಕಲಾಸಕ್ತರನ್ನು, ಯಕ್ಷಗಾನ ಕುತೂಹಲಿಗಳನ್ನು ಸಾಧ್ಯವಾದಷ್ಟರ ಮಟ್ಟಿಗೆ ಪುಸ್ತಕಗಳು ತಲುಪಲಿ ಎಂಬುದಷ್ಟೇ ನಮ್ಮ ಉದ್ದೇಶ.
✒️ ಡಾ. ಸಿಬಂತಿ ಪದ್ಮನಾಭ
Tags:
ಲೇಖನ