ಉಡುಪಿ: ಯಕ್ಷಗಾನದ ತೆಂಕು-ಬಡಗು ಉಭಯ ತಿಟ್ಟುಗಳಲ್ಲಿಯೂ ರಾರಾಜಿಸಿದ ಅನನ್ಯ ಸ್ತ್ರೀವೇಷಧಾರಿ ಕೋಳ್ಯೂರು ರಾಮಚಂದ್ರ ರಾವ್ ಅವರಿಗೆ 90 ತುಂಬಿದ ಪ್ರಯುಕ್ತ ಒಂದು ತಿಂಗಳ ಕಾಲ ಉಡುಪಿಯ ಯಕ್ಷಗಾನ ಕಲಾರಂಗದ ಆಶ್ರಯದಲ್ಲಿ ಏರ್ಪಡಿಸಲಾಗಿದ್ದ, ನವತ್ಯಬ್ದ ಸಂಭ್ರಮದ 'ಕೋಳ್ಯೂರು ವೈಭವ' ಅಭಿಯಾನವು ನವೆಂಬರ್ 14ರಂದು ಉಡುಪಿಯಲ್ಲಿ ಸಮಾಪನಗೊಂಡಿತು.
ಅಕ್ಟೋಬರ್ 14ರಂದು ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಚಾಲನೆ ಪಡೆದ ಒಂದು ತಿಂಗಳ ಈ ಅಭಿಯಾನದಲ್ಲಿ ಹಲವಾರು ಕಲಾವಿದರು ಕೋಳ್ಯೂರು ರಾಮಚಂದ್ರ ರಾವ್ ಅವರ ಪಾತ್ರವೈಭವವನ್ನು ಕೊಂಡಾಡಿದ್ದು, ಪ್ರತಿ ದಿನವೂ ಯೂಟ್ಯೂಬ್ ಮೂಲಕ ಸಹ ಕಲಾವಿದರ ಮಾತುಗಳ ಅಭಿನಂದನೆಯೊಂದಿಗೆ, ತತ್ಸಂಬಂಧಿತ ಹಳೆಯ ಯಕ್ಷಗಾನ ಪ್ರದರ್ಶನಗಳೂ ಮರುಪ್ರಸಾರಗೊಂಡಿದ್ದವು.
ನ.14ರಂದು ಉಡುಪಿಯ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಪರ್ಯಾಯ ಶ್ರೀ ಅದಮಾರು ಮಠದ ಆಶ್ರಯದಲ್ಲಿ ಕೋಳ್ಯೂರರಿಗೆ 90ರ ಸನ್ಮಾನ ನಡೆಸಲಾಯಿತು. ಅದಮಾರು ಮಠದ ಶ್ರೀ ಈಶಪ್ರಿಯತೀರ್ಥ ಸ್ವಾಮೀಜಿ ಅನುಗ್ರಹ ಸಂದೇಶ ನೀಡಿದರು. ವಿದುಷಿ ಡಾ.ಪದ್ಮಾ ಸುಬ್ರಹ್ಮಣ್ಯಂ, ಡಾ.ಕಲಾಮಂಡಲಂ ಗೋಪಿ ಇವರು ಆನ್‌ಲೈನ್ ಮೂಲಕ ಶುಭ ಕೋರಿದರು.
ಚಿಂತನಶೀಲ ಸ್ತ್ರೀವೇಷಧಾರಿ ಮಂಟಪ ಪ್ರಭಾಕರ ಉಪಾಧ್ಯ, ಕೋಳ್ಯೂರರ ಒಡನಾಡಿ ಹಿರಿಯ ಕಲಾವಿದ ಅರುವ ಕೊರಗಪ್ಪ ಶೆಟ್ಟಿ, ಹಿರಿಯ ಸಾಹಿತಿ ಎ.ಪಿ.ಮಾಲತಿ ಅವರು ಅಭಿನಂದನ ಭಾಷಣ ಮಾಡಿದರು. ಚಿಂತಕ ಲಕ್ಷ್ಮೀಶ ತೋಳ್ಪಾಡಿ ಅಧ್ಯಕ್ಷತೆ ವಹಿಸಿದ್ದರು.
Yakshagana.in Updates ಗಾಗಿ: ವಾಟ್ಸ್ಆ್ಯಪ್-4 | ವಾಟ್ಸ್ಆ್ಯಪ್-3 | ವಾಟ್ಸ್ಆ್ಯಪ್-1 | ವಾಟ್ಸ್ಆ್ಯಪ್-2 | . ಟೆಲಿಗ್ರಾಂ | ಫೇಸ್ಬುಕ್ | ಟ್ವಿಟರ್ | ಯೂಟ್ಯೂಬ್ | ಇನ್ಸ್ಟಾಗ್ರಾಂ
ಬೆಳಿಗ್ಗೆ ಐಶ್ವರ್ಯಾ ಮಣಿಕರ್ಣಿಕಾ ಅವರಿಂದ ವೀಣಾವಾದನಕ್ಕೆ ಪುತ್ತೂರು ನಿಕ್ಷಿತ್ ಮೃದಂಗ ಸಾಥ್ ನೀಡಿ, ಕೋಳ್ಯೂರರಿಗೆ ವೀಣಾವಾದನದ ಗೌರವ ಸಲ್ಲಿಸಲಾಯಿತು.
ಸೋದೆ ವಾದಿರಾಜ ಮಠದ ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದರು ಉದ್ಘಾಟನಾ ಕಾರ್ಯಕ್ರಮದಲ್ಲಿ ಅನುಗ್ರಹ ಸಂದೇಶ ನೀಡಿದರು. ಹಾಸ್ಯಗಾರ, ಹಿರಿಯ ಕಲಾವಿದ ಪೆರುವೋಡಿ ನಾರಾಯಣ ಭಟ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮಂಗಳೂರು ವಿವಿ ಕುಲಪತಿ ಡಾ.ಪಿ.ಎಸ್.ಯಡಪಡಿತ್ತಾಯರು ಶುಭಾಶಂಸನೆಗೈದರು. ಮಣಿಪಾಲ ವಿವಿ ಸಹಕುಲಾಧಿಪತಿ ಡಾ.ಎಚ್.ಎಸ್.ಬಲ್ಲಾಳ್ ಅಧ್ಯಕ್ಷತೆ ವಹಿಸಿದ್ದರು.
ಕೋಳ್ಯೂರರಿಗೆ ವಿದ್ವತ್ ಗೋಷ್ಠಿಯ ಗೌರವ ಕಾರ್ಯಕ್ರಮದಲ್ಲಿ ಭಾರತೀಯ ಕಲಾವಿಮರ್ಶಕ, ವಿದ್ವಾಂಸ ಡಾ.ಪಪ್ಪು ವೇಣುಗೋಪಾಲ ರಾವ್ ಅವರು 'ಭರತನ ನಾಟ್ಯಶಾಸ್ತ್ರದಿಂದ ಆಧುನಿಕ ಕಾಲದವರೆಗಿನ ಪ್ರದರ್ಶನ ಕಲೆಗಳಲ್ಲಿ ಪುರುಷರು ನಿರ್ವಹಿಸುವ ಸ್ತ್ರೀಪಾತ್ರ-ಒಂದು ಅವಲೋಕನ' ಕುರಿತು ಉಪನ್ಯಾಸ ನೀಡಿದರು.
ಮಧ್ಯಾಹ್ನ ಭಾಗವತರಾದ ಸಿರಿಬಾಗಿಲು ರಾಮಕೃಷ್ಣ ಮಯ್ಯ, ಆಕಾಶವಾಣಿ ಕಾರ್ಯಕ್ರಮ ನಿರ್ವಾಹಕ ಸೂರ್ಯನಾರಾಯಣ ಭಟ್ ಪಿ., ತುಳು ರಂಗಭೂಮಿಯ ಭೋಜರಾಜ ವಾಮಂಜೂರು, ವಿಮರ್ಶಕ, ಮದ್ದಳೆಗಾರ ಕೃಷ್ಣಪ್ರಕಾಶ್ ಉಳಿತ್ತಾಯ, ಪ್ರಸಿದ್ಧ ಸ್ತ್ರೀವೇಷಧಾರಿ ಶಶಿಕಾಂತ ಶೆಟ್ಟಿ ಕಾರ್ಕಳ, ಪ್ರಸಿದ್ಧ ಕಲಾವಿದ, ಕೋಳ್ಯೂರರ ಶಿಷ್ಯ ಮೋಹನ್ ಕುಮಾರ್ ಅಮ್ಮುಂಜೆ ಅವರು ನುಡಿಗೌರವ ಸಲ್ಲಿಸಿದರು. ಭಾಗವತ ಪಟ್ಲ ಸತೀಶ್ ಶೆಟ್ಟಿ ಸಮನ್ವಯಕಾರರಾಗಿದ್ದರು.
ಮಧ್ಯಾಹ್ನ ಆತ್ಮಕಥನ ವಾಚನ ಗೌರವ ನಡೆಯಿತು. ರಂಗ ನಿರ್ದೇಶಕ ರಾಜೇಂದ್ರ ಕಾರಂತ, ಭರತನಾಟ್ಯ ಕಲಾವಿದೆ ಮಂಜುಳಾ ಸುಬ್ರಹ್ಮಣ್ಯ ಭಾಗವಹಿಸಿದ್ದರು.
ಬಳಿಕ ಕೋಳ್ಯೂರರ 90ನೇ ಹುಟ್ಟುಹಬ್ಬದ ಪ್ರಯುಕ್ತ, ಅವರದೇ ಅಧ್ಯಕ್ಷತೆಯಲ್ಲಿ ತೆಂಕು-ಬಡಗಿನ 90ಕ್ಕೂ ಹೆಚ್ಚು ಸ್ತ್ರೀವೇಷಧಾರಿಗಳನ್ನು ಆದರದಿಂದ ಗೌರವಿಸಲಾಯಿತು. ಸಾಯಂಕಾಲ ಕಥಕಳಿ ಕಲಾಪ್ರದರ್ಶನದ ಗೌರವ ಕಾರ್ಯಕ್ರಮದಲ್ಲಿ ಕೃಷ್ಣ ಕುಚೇಲ ವೃತ್ತಮ್ ಆಖ್ಯಾನವನ್ನು ಕಲಾಮಂಡಲಂ ಮೂಲಕ ಪ್ರದರ್ಶಿಸಲಾಯಿತು.
Tags:
ಸುದ್ದಿ