ತುಳು ಯಕ್ಷಗಾನದ ಗಿಮಿಕ್ಸ್ ಮಧ್ಯೆಯೂ ಜಗ್ಗದ ಲೀಲಕ್ಕ: ಡಾ.ಪ್ರಭಾಕರ ಜೋಶಿ

ಶ್ರೀ ಹರಿಲೀಲಾ-75 ಉದ್ಘಾಟನಾ ಕಾರ್ಯಕ್ರಮದಲ್ಲಿ ಎಡದಿಂದ ಅವಿನಾಶ್ ಬೈಪಾಡಿತ್ತಾಯ, ಚಂದ್ರಶೇಖರ ಕೊಂಕಣಾಜೆ, ಡಾ.ಎಂ.ಪ್ರಭಾಕರ ಜೋಶಿ, ಹರಿಕೃಷ್ಣ ಪುನರೂರು, ವೇ.ಮೂ.ಈಶ್ವರ ಭಟ್ ಆಲಂಗಾರು, ಹರಿನಾರಾಯಣ ಬೈಪಾಡಿತ್ತಾಯ ಮತ್ತು ಲೀಲಾವತಿ ಬೈಪಾಡಿತ್ತಾಯ ದಂಪತಿ.

ಮೂಡುಬಿದಿರೆ: ಯಕ್ಷಗಾನದ ಕಳೆದ ನೂರು ವರ್ಷಗಳ ಇತಿಹಾಸದ ಪುಟಗಳಲ್ಲಿ, ಸುವರ್ಣ ಪುಟವಾಗಬಲ್ಲ ಎಲ್ಲ ಯೋಗ್ಯತೆ ಹರಿಲೀಲಾ ದಂಪತಿಗೆ ಇದೆ ಎಂದು ಹೇಳಿರುವ ಖ್ಯಾತ ವಿದ್ವಾಂಸ, ವಾಗ್ಮಿ ಡಾ.ಪ್ರಭಾಕರ ಜೋಶಿ ಅವರು, ಸಮಸ್ಯೆಯೇನೆಂದರೆ, ಹರಿ ಲೀಲಾ ದಂಪತಿಗೆ ತಾವೆಷ್ಟು ದೊಡ್ಡ ಕಲಾವಿದರು ಎಂಬುದೇ ಗೊತ್ತಿಲ್ಲ ಎಂದರು.

ಇಲ್ಲಿನ ಆಲಂಗಾರು ಶ್ರೀ ಮಹಾಗಣಪತಿ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನ.7ರ ಭಾನುವಾರ, ಹರಿನಾರಾಯಣ-ಲೀಲಾವತಿ ಬೈಪಾಡಿತ್ತಾಯ ದಂಪತಿಯ ಅಮೃತ ಮಹೋತ್ಸವ ಪ್ರಯುಕ್ತ "ಶ್ರೀಹರಿಲೀಲಾ-75 ಯಕ್ಷಾಭಿನಂದನಂ, ಶಿಷ್ಯಾಭಿವಂದನಂ, ಯಕ್ಷನಾದೋತ್ಸವಂ" ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.

ಸಮಸ್ತ ಶಿಷ್ಯವೃಂದದವರು ಡಿಜಿ ಯಕ್ಷ ಫೌಂಡೇಶನ್ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಏರ್ಪಡಿಸಿದ ಈ ಕಾರ್ಯಕ್ರಮ ಇತ್ತೀಚಿನ ದಿನಗಳಲ್ಲೇ ಒಂದು ಅದ್ಭುತ ಕಾರ್ಯಕ್ರಮ. ಇದು ಕಾರ್ಯಕ್ರಮವಲ್ಲ, ಒಂದು ಸ್ಟೇಟ್‌ಮೆಂಟ್. ಹರಿಲೀಲಾ ದಂಪತಿಗಳೂ ಹಾಗೆಯೇ ಸ್ಟೇಟ್‌ಮೆಂಟ್ ಎಂದ ಪ್ರಭಾಕರ ಜೋಶಿ, ಹರಿಲೀಲಾ ದಂಪತಿಗಳು ಮಾತನಾಡುವುದು ಕಡಿಮೆ, ಕೆಲಸವೇ ಮಾಡುವುದು. ಪ್ರಾಬ್ಲಂ ಏನಂದ್ರೆ, ಹರಿಲೀಲಾ ದಂಪತಿಗೆ ತಾವು ಎಷ್ಟು ದೊಡ್ಡ ಕಲಾವಿದರು ಎಂಬುದೇ ಗೊತ್ತಿಲ್ಲ ಎಂದರು.

ನಮಗೆ ಸ್ವಲ್ಪವಾದರೂ ನಾನು ದೊಡ್ಡ ಕಲಾವಿದ ಅಂತ ಇರಬೇಕು. ಇದು ಹಲವಾರು ವರ್ಷಗಳ ನನ್ನ ಅನುಭವದ ಮಾತು. ಯಕ್ಷಗಾನ ಈಗ ಸ್ಟಾರ್ ಬೇಸ್ಡ್ ಆಗುತ್ತಿದೆ. ವಿಶೇಷ ಆಕರ್ಷಣೆ ಹೆಸರಿನಲ್ಲಿ. ಮೊನ್ನೆ ಮೊನ್ನೆ ಯಕ್ಷಗಾನಕ್ಕೆ ಬಂದವರು ವಿಶೇಷ ಆಕರ್ಷಣೆಯಾದರೆ, ನಾನೆಂಥದ್ದು? 60 ವರ್ಷದಿಂದ ಅರ್ಥ ಹೇಳಿಕೊಂಡು ಮಣ್ಣುಹೊತ್ತಿದ್ದೇನೆ ಎಂದ ಅವರು ಹಿಂದಿನ ಘಟನೆಯೊಂದನ್ನು ಮೆಲುಕು ಹಾಕಿದರು. ಶೇಣಿ (ಗೋಪಾಲಕೃಷ್ಣ ಭಟ್) ಅವರಿದ್ದ ತಾಳಮದ್ದಳೆಯ ಹ್ಯಾಂಡ್‌ಬಿಲ್‌ನಲ್ಲಿ 'ವಿಶೇಷ ಆಕರ್ಷಣೆಯಾಗಿ ಇಂಥವರು ಪದ ಹೇಳಲಿದ್ದಾರೆ' ಅಂತ ಬರೆದಿದ್ದರು. ಹಾಗಿದ್ದರೆ ಅಷ್ಟು ಕಾಲ ಅರ್ಥಗಾರಿಕೆಯಲ್ಲಿ ಮೆರೆದ ಶೇಣಿಯವರು ಏನು? ಎಂದು ಪ್ರಶ್ನಿಸಿದರು.
ಬೈಪಾಡಿತ್ತಾಯ ಕುಟುಂಬದಿಂದ ಚೌಕಿ ಪೂಜೆಗೆ ಸ್ತುತಿ

ಬೈಪಾಡಿತ್ತಾಯರ ಶಿಷ್ಯರಿಂದ ಉದ್ಘಾಟನಾ ಕಾರ್ಯಕ್ರಮದ ಪ್ರಾರ್ಥನೆ

ಈ ಪರಿಯ ವಿಶೇಷ ಆಕರ್ಷಣೆಗಳ ಮಧ್ಯೆ, ಅಲುಗಾಡದೆ, ಹೇಳಿದ್ದನ್ನೇ ಹೇಳದೆ, ಬಂದನು, ಎದ್ದನು, ಬಿದ್ದನು ಹೋದನು ಅಂತೆಲ್ಲ ಲಂಬಿಸದೆ, ಯಕ್ಷಗಾನದ ಪದ್ಯದ ಶೈಲಿಯಲ್ಲೇ, ಹಳೇ ಶೈಲಿಯನ್ನಿಟ್ಟುಕೊಂಡು, ಕಳೆದ ಮತ್ತು ಈ ಶತಮಾನದ ಯಕ್ಷಗಾನದ ತೆಂಕುತಿಟ್ಟು ಸ್ವಚ್ಛ ಶೈಲಿಯ ಮುಂದುವರಿಕೆಗಾಗಿ, ಭಾಗವತರಾಗಿ ಮೆರೆದ ಲೀಲಕ್ಕನವರು ಶ್ಲಾಘ್ಯರು ಎಂದು ಡಾ.ಜೋಶಿ ಹೇಳಿದರು.

ಲೀಲಕ್ಕ ತುಳು ಪ್ರಸಂಗಗಳಲ್ಲಿ ಪದ ಹೇಳಿದವರು. ಅಲ್ಲಿ ಎಲ್ಲ ಥರದ ಗಿಮಿಕ್ಸ್ ಕೂಡ ಇತ್ತು. ಆದರೆ ಯಾರು ಕೂಡ ಲೀಲಕ್ಕನವರನ್ನು ಅಲುಗಾಡಿಸಲಾಗಲಿಲ್ಲ. ಅಲ್ಲದೆ, ಪ್ರಚಾರವೂ ಇತ್ತು - ಹರಿಯಣ್ಣ ಅಲ್ಲದೆ ಬೇರೆ ಮದ್ದಳೆಗಾರರು ಅವರಿಗೆ ಯಾರೂ ಆಗುವುದಿಲ್ಲ ಅಂತ. ಹಾಗೇನಿಲ್ಲ. ಬಲ್ಲಾಳರು, ಪದ್ಯಾಣ ಶಂಕರ ಭಟ್ರು ಎಲ್ಲರೂ ಅವರಿಗೆ ಸಾಥಿಗಳಾಗಿ ಒದಗಿದ್ದಾರೆ ಎಂದರು ಡಾ.ಜೋಶಿ.

ಇಷ್ಟೇ ಅಲ್ಲ, ಶೇಣಿ, ಜೋಶಿ ಎಲ್ಲ ನಿಮ್ಮ ಪದಕ್ಕೆ ಅರ್ಥ ಹೇಳ್ಲಿಕ್ಕಿಲ್ಲ ಅಂತ ಅವರನ್ನು ಕೆಲವರು ಹೆದರಿಸಿಯೂ ಇದ್ದರು. ಎಂತೆಂಥಾ ಉಪಕಾರ ಮಾಡುವರಿದ್ದಾರೆ ನೋಡಿ! ಆದರೆ, ಲೀಲಕ್ಕನದೇ ಭಾಗವತಿಕೆ ಆಗಬೇಕು ಅಂತ ನಾನು ಹೇಳಿದ್ದೆ. ಶೇಣಿಯವರೂ ಲೀಲಕ್ಕನಿಗೆ ಒಳ್ಳೆಯ ಪ್ರೋತ್ಸಾಹ ನೀಡಿದ್ದರು ಎಂದ ಪ್ರಭಾಕರ ಜೋಶಿ, ಮಹಿಳೆ ಹೇಗಿರಬೇಕು, ಗಂಡ-ಹೆಂಡತಿ ಕಲಾವಿದರಾಗಿ, ಗುರುಗಳಾಗಿ, ಗುರುಗಳಾಗಿ, ಆತಿಥೇಯರಾಗಿ, ಮರ್ಯಾದಸ್ಥ ಕಲಾವಿದರಾಗಿ ಸಮಾಜದಲ್ಲಿ ಹೇಗಿರಬೇಕು ಅಂತ ಶತಮಾನದ ಆದರ್ಶವಾಗಿ ಬಾಳಿ ಬೆಳಗಿದವರು ಹರಿಯಣ್ಣ ದಂಪತಿ ಎಂದು ಶ್ಲಾಘಿಸಿದರು.

ಲೀಲಕ್ಕ ತಮ್ಮ ಭಾಗವತಿಕೆಯ ಆರಂಭದಲ್ಲಿ ಹೆಚ್ಚಾಗಿ ದೇವಿಸ್ತುತಿಯನ್ನೇ ಹೇಳುವುದು. ಮಹಿಳೆಯಾಗಿ ದೇವಿ ಸ್ತುತಿ ಹೇಳುತ್ತಾರೆ. ಲೀಲಕ್ಕನಂತ ಭಾಗವತರಿಗೆ, ಹರಿಯಣ್ಣನಿಗೆ ನಮಸ್ಕರಿಸುವಾಗ ನನಗೆ ಧನ್ಯತೆ ಒದಗುತ್ತದೆ. ಯಾಕೆಂದರೆ, ನೂರಾರು ಶಿಷ್ಯರು, ಪ್ರಶಿಷ್ಯರು ಅವರಿಗಿದ್ದಾರೆ. ಒಬ್ಬನೇ ಒಬ್ಬ ಶಿಷ್ಯನಿಂದ ಅವರ ಬಗೆಗೆ ಒಂದೇ ಒಂದು ಕೊಂಕು ಮಾತು ನಾನು ಕೇಳಿಯೇ ಇಲ್ಲ ಎಂದರು.
ಅಸಾಧಾರಣ ಸಾಧನೆ ಅವರದು. ಈಗ ಅನಾರೋಗ್ಯವಾದರೂ, ಮಕ್ಕಳಿಗೆ ಹೇಳಿಕೊಡುವಲ್ಲಿ ಅವರ ತಾಳ್ಮೆ ನನಗೆ ಅಚ್ಚರಿ. ಯಾಕೆಂದರೆ ಯಕ್ಷಗಾನ ಕಲಿಸಲು ತುಂಬ ತಾಳ್ಮೆ ಬೇಕು. ನಾನೇನಾದರೂ ಗುರುವಾಗಿದ್ದರೆ ಒಂದೇ ವಾರದಲ್ಲಿ ಶಿಷ್ಯರನ್ನು ಓಡಿಸುತ್ತಿದ್ದೆ ಎಂದ ಡಾ.ಜೋಶಿ, ಈ ತಪೋವನದಂತಹ ಅಲಂಕಾರವಿರುವ ಆಲಂಗಾರುವಿನಲ್ಲಿ ಇಂಥದ್ದೊಂದು ಮಾದರಿ ಕಾರ್ಯಕ್ರಮ ನಡೆಯುತ್ತಿರುವುದು ಅತ್ಯಂತ ಶ್ಲಾಘ್ಯ ಎಂದರು.

ಮಹಿಳಾ ಕಲಾವಿದರಿಗೆ ಆದರ್ಶ
ಆಗೆಲ್ಲಾ ತಿರುಗಾಟದ ಮೇಳಗಳಲ್ಲಿ ಊರೂರಿಗೆ ಹೋಗುವುದು. ಕಲಾವಿದರ ಮಧ್ಯೆ ದಂಪತಿಗಳು ಬಂದಾಗ, ವಿಶೇಷವಾಗಿ ಮಹಿಳಾ ಕಲಾವಿದರು ಬಂದರೆ ಆತಂಕ ಸಹಜವಾಗಿತ್ತು. ಹೇಗೆ ನಿಭಾಯಿಸುವುದು ಅಂತ. ಆದರೆ, ಲೀಲಕ್ಕ ಬರುತ್ತಾರೆಂದರೆ ಪರಿಸ್ಥಿತಿ ಹಾಗಿರುವುದಿಲ್ಲ. ಅವರು ಮೋಸ್ಟ್ ವೆಲ್‌ಕಂ. ಇದನ್ನು ಸ್ವತಃ ಕೊರಗಪ್ಪರು (ಕರ್ನೂರು) ಹೇಳಿದ್ದರು ನನ್ನಲ್ಲಿ. "ಎಂಕ್ ಸಮಸ್ಯೆನೇ ಇಜ್ಜಿ ಸ್ವಾಮಿ" ಎಂದಿದ್ದರು ಕರ್ನೂರು. ಲೀಲಾವತಿ ಬೈಪಾಡಿತ್ತಾಯೆರ್ ಎಂಕ್ಲೆನಡೆ ಬರಡ್ ಬರಡ್ ಅಂತ ಹೇಳುವವರೇ ಹೆಚ್ಚಿದ್ದರು ಎಂದರವರು.
ಬೈಪಾಡಿತ್ತಾಯ ದಂಪತಿ ಪರಸ್ಪರ ಹಾರಾರ್ಪಣೆ


ಬೈಪಾಡಿತ್ತಾಯ ದಂಪತಿ ಪರಸ್ಪರ ಹಾರಾರ್ಪಣೆ

ಹರಿನಾರಾಯಣ - ಲೀಲಾವತಿ ಬೈಪಾಡಿತ್ತಾಯ ಗುರು ದಂಪತಿ

ಚಿತ್ರಗಳು: ಮಧುಸೂದನ ಅಲೆವೂರಾಯ

ಲೀಲಕ್ಕ ನಮ್ಮ ಮನೆಗೆ ಬಂದಿದ್ದರು
ಆ ಕಾಲದಲ್ಲಿ ಗಂಡಸರಿಗೇ ಮೀಸಲಾಗಿದ್ದ ಯಕ್ಷಗಾನದಲ್ಲಿ ಹೆಣ್ಣು ಹೆಂಗಸು ಬಂದಾಗ ಬಿಡಾರದ ಸಮಸ್ಯೆಯಿದ್ದ ಕಾಲ. ಈಗೇನೂ ಹಾಗಿಲ್ಲ, ಎಲ್ಲರೂ ಮನೆಗೆ ಹೋಗುತ್ತಾರೆ. ಆದರೆ, ಅಂದಿನ ದಿನಗಳನ್ನು ನೆನಪಿಸಿಕೊಳ್ಳುತ್ತಾ ಇವತ್ತು ಎಲ್ಲರೂ ಹೇಳಿ ಹೆಮ್ಮೆ ಪಡ್ತಾರೆ. 'ಲೀಲಕ್ಕ ನಮ್ಮ ಮನೆಗೆ ಬಂದಿದ್ದರು, ಅವರು ಒಂದು ದಿವಸ ಇದ್ರು.' ಹೀಗೆ ಹೆಮ್ಮೆ ಪಡುತ್ತಾರೆ. ಹಾಗೆ, ಒಂದು ಸಮಾಜವೇ ಹೆಮ್ಮೆ ಪಡುವ ಗುರುವಾಗಿ ಇರಬೇಕು. ಅವರನ್ನು ಈ ರೀತಿಯ ಮಾನ ಸಮ್ಮಾನಗಳ ನೀಡಲಿಕ್ಕೂ ಭಾಗ್ಯ ಬೇಕು. ಇದು ಭಾಗ್ಯ ಇದು ಭಾಗ್ಯ ಇದು ಭಾಗ್ಯವಯ್ಯ. ಅದರಲ್ಲಿ ಭಾಷಣ ಮಾಡುವುದು ಪ್ರತಿಬಿಂಬಿತ ವೈಭವ ಎಂದು ವಿವರಿಸಿದರು ಡಾ.ಜೋಶಿ.

ಕಾರ್ಯಕ್ರಮದ ವಿಡಿಯೊ ಇಲ್ಲಿ ನೋಡಿ: 

ನಾನೇನೂ ಅವರಿಗೆ ಬಹಳ ಆತ್ಮೀಯನಲ್ಲ. ಆದರೆ ನಾನು ಅವರ ದೊಡ್ಡ ಅಭಿಮಾನಿ. ಲೀಲಕ್ಕ-ಹರಿಯಣ್ಣನವರ ಭಕ್ತ ನಾನು ಅಂತ ಹೇಳಿದರೂ ತಪ್ಪಿಲ್ಲ. ಇಷ್ಟು ಸುಂದರವಾದ ಕಾರ್ಯಕ್ರಮವನ್ನು ಬೆಂಬಲಿಸಿದ ಆಲಂಗಾರು ಈಶ್ವರ ಭಟ್ಟರಿಗೆ ಮತ್ತು ಡಿಜಿ ಯಕ್ಷ ಫೌಂಡೇಶನ್‌ಗೆ, ಸಂಸ್ಕೃತಿ ಇಲಾಖೆಗೆ ಮತ್ತು ಎಲ್ಲ ಶಿಷ್ಯರಿಗೆ ಅಭಿನಂದನೆಗಳು ಎನ್ನುತ್ತಾ, ಚೊಕ್ಕವಾಗಿ, ಸಮಯಬದ್ಧವಾಗಿ ಇದು ನಡೆಯಲಿ. ಸಾಯಂಕಾಲದ ಅಭಿನಂದನೆ ಕಾರ್ಯಕ್ರಮ ಸೊಗಸಾಗಿ ನಡೆಯಲಿ ಎಂದು ಹಾರೈಸಿದರು.

ವೇದಿಕೆಯಲ್ಲಿದ್ದ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ, ಕಲಾಪೋಷಕ ಹರಿಕೃಷ್ಣ ಪುನರೂರು ಮಾತನಾಡಿ, ಇಂಥ ಕಲೆ ಬೆಳೆಯಬೇಕು, ಇದಕ್ಕೆ ಇಂಥ ಗುರುಗಳ ಬೆಂಬಲ ಇರಬೇಕು ಎನ್ನುತ್ತಾ, ಗುರು ದಂಪತಿಗೆ ಶುಭ ಹಾರೈಸಿದರು.

ಸ್ವಾಗತ ಭಾಷಣದಲ್ಲಿ ಅಭಿನಂದನ ಸಮಿತಿ ಅಧ್ಯಕ್ಷ ಚಂದ್ರಶೇಖರ ಭಟ್ ಕೊಂಕಣಾಜೆ ಮಾತನಾಡಿ, ಗುರುಗಳು ಧರ್ಮಸ್ಥಳ ಕೇಂದ್ರದಲ್ಲಿರುವಾಗ ಚೆಂಡೆ ಮದ್ದಳೆಯನ್ನಷ್ಟೇ ಅಲ್ಲ, ಸಮಯದ ಪಾಠವನ್ನೂ ಮಾಡಿದ್ದಾರೆ ಎನ್ನುತ್ತಾ, ಆ ದಿನದ ಕಾರ್ಯಕ್ರಮದಲ್ಲಿ ಸಮಯಪಾಲನೆಯ ಮಹತ್ವದ ಮುನ್ಸೂಚನೆ ನೀಡಿದರು.

ಬೈಪಾಡಿತ್ತಾಯ ಕುಟುಂಬಿಕರಿಂದ ಚೌಕಿ ಪೂಜೆ
ಬೆಳಿಗ್ಗೆ 9.30ಕ್ಕೆ ದೇವಸ್ಥಾನದಲ್ಲಿ ಯಕ್ಷಗಾನ ಸೇವೆಯ ಬಳಿಕ, 9.45ರ ಕ್ಲಪ್ತ ಸಮಯಕ್ಕೆ ಚೌಕಿ ಪೂಜೆ ನೆರವೇರಿತು. ಶ್ರೀಮತಿ ಲೀಲಾವತಿ ಬೈಪಾಡಿತ್ತಾಯರೇ ಗಜಮುಖದವಗೆ ಗಣಪಗೆ ಸ್ತುತಿ ಹಾಡಿದರೆ, ಪತಿ ಹರಿನಾರಾಯಣ ಬೈಪಾಡಿತ್ತಾಯರೂ ಚೆಂಡೆಯಲ್ಲೂ, ಪುತ್ರ ಅವಿನಾಶ್ ಬೈಪಾಡಿತ್ತಾಯ ಮದ್ದಳೆಯಲ್ಲೂ, ಶ್ರೀರಾಮ ಶರ್ಮ ಚಕ್ರತಾಳದಲ್ಲೂ ಸಹಕರಿಸಿದರು.

ಶಿಷ್ಯರಿಂದ ಪ್ರಾರ್ಥನೆ
ಉದ್ಘಾಟನಾ ಕಾರ್ಯಕ್ರಮದಲ್ಲಿ, ಶಿಷ್ಯರಾದ ಕರುಣಾಕರ ಶೆಟ್ಟಿಗಾರ್ ಕಾಶಿಪಟ್ಣ ಭಾಗವತಿಕೆಯಲ್ಲಿ, ಆನಂದ ಗುಡಿಗಾರ್ ಕೆರ್ವಾಶೆ ಚೆಂಡೆಯಲ್ಲಿ, ಗುರುಪ್ರಸಾದ್ ಬೊಳಿಂಜಡ್ಕ ಮದ್ದಳೆಯಲ್ಲಿ, ಶ್ರೀರಾಮ ಶರ್ಮ ಚಕ್ರತಾಳದೊಂದಿಗೆ ಪ್ರಾರ್ಥನೆ ನೆರವೇರಿಸಲಾಯಿತು.


#ShreeHariLeela

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

ನವೀನ ಹಳೆಯದು