300 ವರ್ಷದ ಹಿಂದಿನ ಯಕ್ಷಗಾನ ಕೃತಿ ಮಾನಸ ಚರಿತ್ರೆ, ವಾಜಿಗ್ರಹಣ ಲೋಕಾರ್ಪಣೆ


ಮೂಲ್ಕಿ: 300 ವರ್ಷಗಳ ಹಿಂದಿನ ಅತ್ಯಮೂಲ್ಯ ಕೃತಿಯೊಂದು ಯಕ್ಷಗಾನ ಪ್ರಪಂಚಕ್ಕೆ ದೊರೆತಿರುವುದು ಕಾಲಪುರುಷನ ಕೃಪೆಯಿಂದ ಎಂದು ಸಂಶೋಧಕ, ವಿದ್ವಾಂಸ ಡಾ.ಕಬ್ಬಿನಾಲೆ ವಸಂತ ಭಾರದ್ವಾಜ್ ಹೇಳಿದರು.

ಮೂಲ್ಕಿ ವೆಂಕಟರಮಣ ದೇವಸ್ಥಾನದಲ್ಲಿ ಶುಕ್ರವಾರ (ನ.19) ಫಣಿಗಿರಿ ಪ್ರತಿಷ್ಠಾನ ಉದ್ಘಾಟನೆ ಹಾಗೂ ಮೂಲಿಕೆ ವೆಂಕಣ್ಣ ಕವಿ ವಿರಚಿತ 'ಮಾನಸ ಚರಿತೆ' ಕೃತಿಯ ವಿಶೇಷತೆ ಬಗ್ಗೆ ಮಾತನಾಡುತ್ತಿದ್ದರು. ಈ ಸಂದರ್ಭ, ಮಾನಸ ಚರಿತ್ರೆ ಹಾಗೂ ಶಿರೂರು ಫಣಿಯಪ್ಪಯ್ಯ ವಿರಚಿತ 'ವಾಜಿಗ್ರಹಣ' ಅಥವಾ 'ಯೌವನಾಶ್ವ ಕಾಳಗ' ಕೃತಿಗಳು ಲೋಕಾರ್ಪಣೆಗೊಂಡವು.

ಕ್ರಿಸ್ತಶಕ 1700ರ ಕಾಲದ ಇತಿಹಾಸ ಹೊಂದಿದ್ದ ಮೂಲಿಕೆ ವೆಂಕಣ್ಣ ಕವಿಯ ರಚನೆಗಳು ಅದ್ಭುತವಾಗಿ ಸಂಯೋಜನೆಗೊಂಡಿವೆ. ಪ್ರಸ್ತುತ ಸನ್ನಿವೇಶವನ್ನು ಪುರಾಣ ಕಥೆಗಳ ಮೂಲಕ ಸಂಯೋಜಿಸಿ ರಚಿಸಲಾಗಿದೆ. ಮಾನಸ ಚರಿತೆಯೊಂದು ಅಮೋಘ ಕೃತಿ ಎಂದು ಅವರು ಹೇಳಿದರು.

ಮೂಲ್ಕಿ ವೆಂಕಟರಮಣ ದೇವಸ್ಥಾನದ ಆಡಳಿತ ಮೊಕ್ತೇಸರ ದಾಮೋದರ ಕುಡ್ವರು ಕೃತಿ ಬಿಡುಗಡೆಗೊಳಿಸಿ, ಕಾಗಿನೆಲೆಯ ಬಂಕಾಪುರದಿಂದ ಮೂಲ್ಕಿಗೆ ಬಂದು ನೆಲೆ ನಿಂತ ವೆಂಕಣ್ಣ ಕವಿ ಶ್ರೀಕ್ಷೇತ್ರದ ಉಗ್ರನರಸಿಂಹ ದೇವರನ್ನು ಸ್ತುತಿಸಿ ಬರೆದ ಹಾಡುಗಳು ಇಂದಿಗೂ ಕಾರ್ತಿಕ ಮಾಸ ಹಾಗೂ ರಥೋತ್ಸವ ಸಂದರ್ಭದಲ್ಲಿ ಕ್ಷೇತ್ರದಲ್ಲಿ ಹಾಡಲಾಗುತ್ತಿದೆ ಎಂದರು.

ಶಿರೂರು ಫಣಿಯಪ್ಪಯ್ಯ ಅವರ ವಾಜಿಗ್ರಹಣ ಕೃತಿಯನ್ನು ಯಕ್ಷಗಾನ ಸಂಶೋಧಕ ಕೆ.ಎಲ್.ಕುಂಡಂತಾಯ ಬಿಡುಗಡೆಗೊಳಿಸಿ, ಫಣಿಗಿರಿ ಪ್ರತಿಷ್ಠಾನವು ಅಧ್ಯಯನ ಮುಂದುವರಿಸಿ, ಹಳೆಯ, ಮರೆಯಾಗಬಹುದಾಗಿದ್ದ ಕೃತಿಗಳನ್ನು ಬೆಳಕಿಗೆ ತರುವಲ್ಲಿ ಶ್ರಮಿಸಬೇಕು ಎಂದರು.

ಫಣಿಗಿರಿ ಪ್ರತಿಷ್ಠಾನವನ್ನು ಕಸಾಪ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು ಉದ್ಘಾಟಿಸಿದರು. ಉಭಯ ಕೃತಿಗಳನ್ನು ವಿದ್ವಾಂಸ ಕಬ್ಬಿನಾಲೆ ವಸಂತ ಭಾರದ್ವಾಜರು ಸಂಪಾದಿಸಿದ್ದು, ಅರನ್ನು ಗೌರವಿಸಲಾಯಿತು. ಮೂಲ್ಕಿ ದೇವಳದ ಮೊಕ್ತೇಸರರಾದ ಅತುಲ್ ಕುಡ್ವ, ನರಸಿಂಹ ಪೈ, ಧಾರ್ಮಿಕ ಪರಿಷತ್ ಸದಸ್ಯ ಕೆ.ಭುವನಾಭಿರಾಮ ಉಡುಪ, ಕಾರ್ಯಕ್ರಮ ಸಂಯೋಜಕರಾದ ಶಿರೂರು ಎಸ್. ಉಮೇಶ್, ನಂದಳಿಕೆ ಬಾಲಚಂದ್ರ ರಾವ್, ಯಕ್ಷಗಾನ ವಿದ್ವಾಂಸ ದಿನೇಶ್ ಉಪ್ಪಾರ, ಲೇಖಕ ರಾಜಗೋಪಾಲ್ ಕನ್ಯಾನ, ಕೃಷ್ಣಮೂರ್ತಿ ಪುರಾಣಿಕ್ ಬ್ರಹ್ಮಾವರ ಮತ್ತಿತರರು ಉಪಸ್ಥಿತರಿದ್ದರು. ಸತ್ಯನಾರಾಯಣ ಪುರಾಣಿಕ್ ಸ್ವಾಗತಿಸಿದರು. ಉಮೇಶ್ ಶಿರೂರು ಪ್ರಸ್ತಾವನೆಗೈದರೆ, ರಾಮಕೃಷ್ಣ ಶಿರೂರು ವಂದಿಸಿದರು.

ಆಸಕ್ತರು ಪುಸ್ತಕಕ್ಕಾಗಿ ಸಂಪರ್ಕಿಸಿ: ಉಮೇಶ ಶಿರೂರು 9448353910: ಎರಡು ಪುಸ್ತಕದ ಒಟ್ಟು ಮೂಲ ಬೆಲೆ ₹135. ವಿನಾಯತಿ ದರ ₹80 ಮಾತ್ರ. ಪುಸ್ತಕ ತಲುಪಿದ ನಂತರ Google pay ಮಾಡಬಹುದು. ಇದರ ಜೊತೆಗೆ ಶಿರೂರು ಫಣಿಯಪ್ಪಯ್ಯ ವಿರಚಿತ ಶ್ರೀಕೃಷ್ಣ ಗಾರುಡಿ ಮೂಲ ಪ್ರಕಟಣೆ (1963) ಇದರ ಯಕ್ಷವಾಹಿನಿ ಅಂತರ್ಜಾಲ ಪ್ರಕಟಣೆ 2019ರ  computer printout ಪುಸ್ತಕವನ್ನು ಆಸಕ್ತರು ಉಚಿತವಾಗಿ ಪಡೆಯಬಹುದು. ಸಂಪರ್ಕಿಸಿ: ಫಣಿಗಿರಿ ಪ್ರತಿಷ್ಠಾನ, ಶಿರೂರು, ಬೈಂದೂರು ತಾಲೂಕು, ಉಡುಪಿ. ಇಮೇಲ್  umeshashiroor@gmail.com.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

ನವೀನ ಹಳೆಯದು