ಸೂರಿಕುಮೇರು ಗೋವಿಂದ ಭಟ್ಟರ ಎಪ್ಪತ್ತು ತಿರುಗಾಟಗಳು ಕೃತಿ ಬಿಡುಗಡೆ, ತಾಳಮದ್ದಳೆ


ಮಂಗಳೂರು: ಅಗ್ರಪಂಕ್ತಿಯ ಕಲಾವಿದರಾಗಿರುವ ಸೂರಿಕುಮೇರು ಕೆ.ಗೋವಿಂದ ಭಟ್ಟರು ಗದಾಯುದ್ಧದ ಕೌರವನ ಪಾತ್ರದ ಮೂಲಕ, ತೆಂಕುತಿಟ್ಟು ಯಕ್ಷಗಾನ ರಂಗದಲ್ಲಿಯೂ ಅಭಿನಯ ಚಾತುರ್ಯ ಇದೆ ಎಂಬುದನ್ನು ತೋರಿಸಿಕೊಟ್ಟಿರುವ ಧೀಮಂತ ಕಲಾವಿದ ಎಂದು ಕರ್ನಾಟಕ ಲೋಕಸೇವಾ ಆಯೋಗದ ಮಾಜಿ ಅಧ್ಯಕ್ಷ, ಐಎಎಸ್ ಅಧಿಕಾರಿ ಟಿ.ಶ್ಯಾಮ ಭಟ್ ಹೇಳಿದರು.

ಗುರುವಾರ (ನವೆಂಬರ್ 25, 2021) ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಗೋವಿಂದ ಭಟ್ಟರ '70 ತಿರುಗಾಟಗಳು' ಕೃತಿ ಬಿಡುಗಡೆಗೊಳಿಸಿ ಅವರು ಮಾತನಾಡುತ್ತಿದ್ದರು. ಸಂತ ಅಲೋಶಿಯನ್ ಕಾಲೇಜು, ಸಂತ ಅಲೋಶಿಯಸ್ ಪ್ರಕಾಶನ, ಯುಜಿಸಿ ಸ್ಟ್ರೈಡ್ ಯೋಜನೆ ಸಹಯೋಗದಲ್ಲಿ ಗೋವಿಂದ ಭಟ್ಟರ ಎಪ್ಪತ್ತು ತಿರುಗಾಟಗಳ ಮಾಹಿತಿಯನ್ನು ಒಳಗೊಂಡ ಕೃತಿಯನ್ನು ಹೊರತರಲಾಗಿತ್ತು.

ಧರ್ಮಸ್ಥಳ ಮೇಳದಲ್ಲಿ ಪ್ರಥಮ ಪೆಟ್ಟಿಗೆಗೆ (ಪ್ರಧಾನ ವೇಷಧಾರಿ ಸ್ಥಾನಕ್ಕೆ) ಗೋವಿಂದ ಭಟ್ಟರೆಂದೂ ಹಂಬಲಿಸಿದವರಲ್ಲ. ಐವತ್ತು ವರ್ಷ ತಿರುಗಾಟ ನಡೆಸಿದ ಬಳಿಕವಷ್ಟೇ ಅವರಿಗೆ ಪ್ರಥಮ ಚೌಕಿ ಪೆಟ್ಟಿಗೆಯ ಸ್ಥಾನ ದೊರೆತಿತ್ತು ಎಂಬುದನ್ನು ಶ್ಯಾಮ ಭಟ್ ನೆನಪಿಸಿಕೊಳ್ಳುತ್ತಾ, ಪ್ರಧಾನ ವೇಷಧಾರಿಯಾಗಲು ಅನುಭವ ಮತ್ತು ಹಿರಿತನ ಎಷ್ಟು ಮುಖ್ಯ ಎಂಬ ಅಂಶವನ್ನು ತೆರೆದಿಟ್ಟರು.

ಯಕ್ಷಗಾನ ಕ್ಷೇತ್ರದಲ್ಲಿ ಎಪ್ಪತ್ತು ವರ್ಷಗಳ ತಿರುಗಾಟ ಮಾಡುವುದು ಸಣ್ಣ ಸಾಧನೆಯೇನಲ್ಲ. ಇಷ್ಟು ದೀರ್ಘ ಕಾಲ ತಿರುಗಾಟ ಮಾಡಿದವರು ಬೆರಳೆಣಿಕೆಯಷ್ಟು ಮಂದಿ ಮಾತ್ರ. ಗೋವಿಂದ ಭಟ್ಟರು ಈ ಸಾಧನೆ ಮಾಡಿದ್ದಾರೆ. ಯಾವುದೇ ಪಾತ್ರವಾಗಲಿ, ಅದನ್ನು ಅದ್ಭುತವಾಗಿ ನಿಭಾಯಿಸಿ ಪಾತ್ರಕ್ಕೆ ನ್ಯಾಯ ಒದಗಿಸುತ್ತಿದ್ದ ಗೋವಿಂದ ಭಟ್ಟರು ನಿಗರ್ವಿ. ಎಲ್ಲರೊಂದಿಗೆ ಬೆರೆಯುವ ಗುಣದಿಂದ ಜನಮಾನ್ಯರಾಗಿದ್ದಾರೆ ಎಂದು ಶ್ಯಾಮ ಭಟ್ ಹೇಳಿದರು.

ತುಮಕೂರು ವಿವಿ ಪ್ರಾಧ್ಯಾಪಕ ಪ್ರೊ.ನಿತ್ಯಾನಂದ ಬಿ.ಶೆಟ್ಟಿ ಅವರು ಕೃತಿ ಪರಿಚಯ ಮಾಡುತ್ತಾ, ಶಿವರಾಮ ಕಾರಂತರ ಬೆಟ್ಟದ ಜೀವ ಕಾದಂಬರಿ ಮಾದರಿಯಲ್ಲೇ ಎಪ್ಪತ್ತು ತಿರುಗಾಟಗಳು ಕೃತಿಯನ್ನು ಓದಿದರೆ, ಬದುಕಿನ ಅರ್ಥವೇನು ಎಂಬುದು ನಮ್ಮನ್ನು ಕಾಡುವ ಸಂಗತಿಯಾಗುತ್ತದೆ ಎಂದರು.

"ಯಕ್ಷಗಾನದ ತಿರುಗಾಟದ ಕಷ್ಟ ನಷ್ಟಗಳೇನು ಎಂಬುದು ಲೋಕಕ್ಕೆ ತಿಳಿಯಲಿ ಎಂಬ ಹಿನ್ನೆಲೆಯಲ್ಲಿ ಈಕೃತಿಯನ್ನು ರಚಿಸಿದ್ದೇನೆ. ಇದರಲ್ಲಿ ತಿರುಗಾಟಗಳಿಗೆ ಸಂಬಂಧಿಸಿದ ಮಾಹಿತಿ ಇದೆ." ಕೃತಿಕಾರ ಕೆ.ಗೋವಿಂದ ಭಟ್ ಹೇಳಿದರು.

ಕಾರ್ಯಕ್ರಮದಲ್ಲಿ ಹಿರಿಯ ವಿದ್ವಾಂಸ, ವಿಶ್ರಾಂತ ಪ್ರಾಂಶುಪಾಲ ಪ್ರೊ.ಎಂ.ಎಲ್.ಸಾಮಗ, ಅಲೋಶಿಯಸ್ ಸಮೂಹ ಸಂಸ್ಥೆಗಳ ಮೆಲ್ವಿನ್ ಜೋಸೆಫ್ ಪಿಂಟೋ, ಪ್ರಾಂಶುಪಾಲ ಪ್ರವೀಣ್ ಮಾರ್ಟಿಸ್, ಯುಜಿಸಿ ಸ್ಟ್ರೆಡ್ ಯೋಜನೆಯ ನಿರ್ದೇಶಕರೂ, ಕುಲಸಚಿವರೂ ಆಗಿರುವ ಡಾ.ಆಲ್ವಿನ್ ಡೇಸಾ, ಪ್ರಕಾಶನದ ನಿರ್ದೇಶಕಿ ಡಾ.ವಿದ್ಯಾ ವಿನುತಾ ಡಿಸೋಜ ಅವರು ವೇದಿಕೆಯಲ್ಲಿದ್ದರು.

ಕಾರ್ಯಕ್ರಮ ಸಂಯೋಜಿಸಿರುವ ಡಾ.ದಿನೇಶ್ ನಾಯಕ್ ಸ್ವಾಗತಿಸಿದರು. ಕನ್ನಡ ಪ್ರಾಧ್ಯಾಪಕ ಮಹಾಲಿಂಗ ಭಟ್ ಕಾರ್ಯಕ್ರಮ ನಿರೂಪಿಸಿದರು.

ಕಾರ್ಯಕ್ರಮದ ಬಳಿಕ ತ್ಯಾಗಮೇವ ಜಯತೇ ಯಕ್ಷಗಾನ ತಾಳಮದ್ದಳೆ ಜರುಗಿತು. ಹಿಮ್ಮೇಳದಲ್ಲಿ ಪುತ್ತಿಗೆ ರಘುರಾಮ ಹೊಳ್ಳ, ಮುರಾರಿ ಕಡಂಬಳಿತ್ತಾಯ, ಚೈತನ್ಯ ಕೃಷ್ಣ ಪದ್ಯಾಣ, ಮಧುಸೂದನ ಅಲೆವೂರಾಯ ಅವರಿದ್ದರು.

ಮುಮ್ಮೇಳದಲ್ಲಿ ಬಾಹುಬಲಿಯಾಗಿ ಸೂರಿಕುಮೇರು ಕೆ ಗೋವಿಂದ ಭಟ್, ಬುದ್ಧಿಸಾಗರನಾಗಿ ಪ್ರೊ. ಎಂ ಎಲ್ ಸಾಮಗ, ಭರತನಾಗಿ ಸುಣ್ಣಂಬಳ ವಿಶ್ವೇಶ್ವರ ಭಟ್, ದಕ್ಷಿಣಾಂಕನಾಗಿ ವಾಸುದೇವ ರಂಗಾಭಟ್ಟ, ಮಧೂರು, ಪ್ರಣಯ ಚಂದ್ರಮನಾಗಿ ಡಾ ದಿನೇಶ್ ನಾಯಕ್ ಅರ್ಥ ಹೇಳಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

ನವೀನ ಹಳೆಯದು