ನ.27ರಂದು ಕೊಣಾಜೆ ಯಕ್ಷಗಾನ ಅಧ್ಯಯನ ಕೇಂದ್ರದ ದಶಮಾನೋತ್ಸವ


ಮಂಗಳೂರು:
ಕೊಣಾಜೆಯಲ್ಲಿರುವ ಮಂಗಳೂರು ವಿವಿ ಯಕ್ಷಗಾನ ಅಧ್ಯಯನ ಕೇಂದ್ರವು ದಶಮಾನೋತ್ಸವವನ್ನು ಆಚರಿಸುತ್ತಿದ್ದು, ಇಡೀ ದಿನ ಯಕ್ಷಗಾನ ಕಾರ್ಯಕ್ರಮಗಳು ನ.27ರಂದು ನಡೆಯಲಿವೆ. ಆದರೆ, ಚುನಾವಣೆ ನೀತಿ ಸಂಹಿತೆ ಇರುವ ಕಾರಣ, ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಮುಂದೂಡಲಾಗಿದೆ.

ಡಾ.ಪಿ.ದಯಾನಂದ ಪೈ ಮತ್ತು ಶ್ರೀ ಪಿ.ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರವು ಪರಿಪೂರ್ಣ ರಂಗಭೂಮಿಯಾದ ಯಕ್ಷಗಾನದ ಅಧ್ಯಯನ, ಪ್ರಕಟಣೆ, ಸಂವರ್ಧನೆ ಮತ್ತು ಸಂರಕ್ಷಣೆಗಾಗಿ ಮಂಗಳೂರು ವಿವಿಯಲ್ಲಿ ಅಸ್ತಿತ್ವಕ್ಕೆ ಬಂದಿತ್ತು. ಯಕ್ಷಗಾನದ ಕುರಿತ ಅಧ್ಯಯನ ಮತ್ತು ಸಂಗ್ರಹ, ವಿಚಾರಸಂಕಿರಣ, ಪ್ರಚಾರೋಪನ್ಯಾಸ, ದಾಖಲಾತಿ, ಯಕ್ಷ ತರಬೇತಿ, ಪ್ರಾತ್ಯಕ್ಷಿಕೆ, ಯಕ್ಷಮಂಗಳ ಪ್ರಶಸ್ತಿ ಮುಂತಾದ ಕಾರ್ಯಚಟುವಟಿಕೆಗಳನ್ನು ನಡೆಸುತ್ತಿದೆ.

ಕಲಾವಿದರಿಗೆ, ಸಂಶೋಧಕರಿಗೆ, ವಿದ್ಯಾರ್ಥಿಗಳಿಗೆ ಮುಖ್ಯ ಆಕರವಾಗಬಲ್ಲ ಸುಸಜ್ಜಿತ ಗ್ರಂಥಾಲಯ, ಅನನ್ಯವಾದ ವಸ್ತುಸಂಗ್ರಹಾಲಯ ನಿರ್ಮಾಣ, ಸಹಯೋಗದ ಕಾರ್ಯಕ್ರಮಗಳೇ ಮೊದಲಾದ ಬಹುಮುಖೀ ಉದ್ದೇಶ, ಕಾರ್ಯಯೋಜನೆಗಳೊಂದಿಗೆ ಮುನ್ನಡೆಯುತ್ತಿರುವ ಕೇಂದ್ರವು ದಶಮಾನೋತ್ಸವ ಪ್ರಯುಕ್ತ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿದೆ.

ತೆಂಕು, ಬಡಗು ತಿಟ್ಟಿನ ಹಿಮ್ಮೇಳ ಹಾಗೂ ಮುಮ್ಮೇಳ ಸೇರಿದಂತೆ ಹದಿನೈದು ಮಂದಿ 'ದಶಮಾನೋತ್ಸವ ಪ್ರಶಸ್ತಿ'ಗೆ  ಹಾಗೂ ಯಕ್ಷಗಾನ ಸಾಹಿತ್ಯ ಕ್ಷೇತ್ರದ  ಇಬ್ಬರು ಸಾಧಕರು 'ಕೃತಿ ಪ್ರಶಸ್ತಿ'ಗೆ ಆಯ್ಕೆಯಾಗಿದ್ದಾರೆ.
ಮಂಗಳಗಂಗೋತ್ರಿಯ ಮಂಗಳಾ ಸಭಾಂಗಣದಲ್ಲಿ ಬೆಳಿಗ್ಗೆ 10 ಗಂಟೆಗೆ ದೀಪೋಜ್ವಲನ, ಗಣಪತಿ ಪ್ರಾರ್ಥನೆಯ ಬಳಿಕ 10.15ಕ್ಕೆ ಪೀಠಿಕೆಯಾಗಿ, 10.30ರಿಂದ 1 ಗಂಟೆಯವರೆಗೆ ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ 'ಭಕ್ತ ಸುಧನ್ವ' ಯಕ್ಷಗಾನ ತಾಳಮದ್ದಳೆ ಜರುಗಲಿದೆ.

ಅಪರಾಹ್ನ 2 ಗಂಟೆಯಿಂದ ಅಧ್ಯಯನ ಕೇಂದ್ರದ ಯಕ್ಷಮಂಗಳಾ ವಿದ್ಯಾರ್ಥಿಗಳ ತಂಡದಿಂದ ಯಕ್ಷರೂಪಕ ಪ್ರಸ್ತುತಿಗೊಳ್ಳಲಿದೆ.

2.30ರಿಂದ ಸಭಾ ಕಾರ್ಯಕ್ರಮ ನಡೆಯಲಿದ್ದು, ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಅಧ್ಯಯನ ಕೇಂದ್ರದ ಪ್ರಾಯೋಜಕರಾದ ಡಾ.ಪಿ.ದಯಾನಂದ ಪೈ ಉದ್ಘಾಟಿಸಲಿದ್ದಾರೆ. ಕರ್ನಾಟಕ ಲೋಕಸೇವಾ ಆಯೋಗದ ಮಾಜಿ ಅಧ್ಯಕ್ಷ, ಕಲಾಪೋಷಕ ಟಿ.ಶ್ಯಾಮ್ ಭಟ್ ಅವರು ರಂಗಸ್ಥಳಕ್ಕೆ ಶಿಲಾನ್ಯಾಸ ನಡೆಸಲಿದ್ದಾರೆ.

ಸಾಧಕರಿಗೆ ಪ್ರಶಸ್ತಿ, ಸನ್ಮಾನ ಮುಂದಕ್ಕೆ
ಮುಮ್ಮೇಳದ ಸಾಧಕರಾದ ಅರುವ ಕೊರಗಪ್ಪ ಶೆಟ್ಟಿ, ಪೇತ್ರಿ ಮಾಧವ ನಾಯ್ಕ್, ಮುಖ್ಯಪ್ರಾಣ ಕಿನ್ನಿಗೋಳಿ, ಕೃಷ್ಣ ಯಾಜಿ ಬಳ್ಕೂರು, ಆರ್ಗೋಡು ಮೋಹನ್ ದಾಸ್ ಶೆಣೈ, ಶಿವರಾಮ ಜೋಗಿ, ಪೂಕಳ ಲಕ್ಷ್ಮೀನಾರಾಯಣ ಭಟ್, ಉಬರಡ್ಕ ಉಮೇಶ್ ಶೆಟ್ಟಿ, ಕುಂಬ್ಳೆ ಸುಂದರ್ ರಾವ್, ಹಿಮ್ಮೇಳ ಕ್ಷೇತ್ರದ ಸಾಧಕರಾದ ಸುಬ್ರಹ್ಮಣ್ಯ ಧಾರೇಶ್ವರ, ಕುರಿಯ ಗಣಪತಿ ಶಾಸ್ತ್ರಿ, ಪುತ್ತಿಗೆ ರಘುರಾಮ ಹೊಳ್ಳ, ದಿನೇಶ ಅಮ್ಮಣ್ಣಾಯ, ಪದ್ಯಾಣ ಶಂಕರನಾರಾಯಣ ಭಟ್, ಹರಿನಾರಾಯಣ ಬೈಪಾಡಿತ್ತಾಯ ಅವರಿಗೆ 'ದಶಮಾನೋತ್ಸವ ಪ್ರಶಸ್ತಿ' ಘೋಷಿಸಲಾಗಿದ್ದು, ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ಇದೇ ವೇದಿಕೆಯಲ್ಲಿ ನಡೆಯಲಿತ್ತು. ಆದರೆ, ಅದನ್ನು ಚುನಾವಣಾ ನೀತಿ ಸಂಹಿತೆ ಪ್ರಯುಕ್ತ ಮುಂದೂಡಲಾಗಿದೆ. ಯಕ್ಷಗಾನ ಸಾಹಿತ್ಯ  ಕೃತಿಗಳನ್ನು ರಚಿಸಿರುವ ಡಾ.ಉಪ್ಪಂಗಳ ಶಂಕರನಾರಾಯಣ ಭಟ್ ಹಾಗೂ ಡಾ.ಚಂದ್ರಶೇಖರ್ ದಾಮ್ಲೆ ಅವರಿಗೂ ದಶಮಾನೋತ್ಸವದ 'ಕೃತಿ ಪ್ರಶಸ್ತಿ' ಪ್ರದಾನ ಮಾಡಲಾಗುತ್ತದೆ.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಡಾ.ಮೋಹನ ಆಳ್ವ ಅವರು ಕೃತಿ ಬಿಡುಗಡೆ ಮಾಡಲಿದ್ದು, ಉಪಕುಲಪತಿಗಳಾದ ಪ್ರೊ.ಪಿ.ಸುಬ್ರಹ್ಮಣ್ಯ ಎಡಪಡಿತ್ತಾಯರು ಅಧ್ಯಕ್ಷತೆ ವಹಿಸಲಿದ್ದಾರೆ. ಕರ್ನಾಟಕ ಜಾನಪದ ವಿವಿಯ ವಿಶ್ರಾಂತ ಕುಲಪತಿ ಡಾ.ಕೆ.ಚಿನ್ನಪ್ಪ ಗೌಡರು ಮುಖ್ಯ ಅತಿಥಿಯಾಗಿ ಭಾಗವಹಿಸುವರು. ಕರ್ನಾಟಕ ಯಕ್ಷಗಾನ ಅಕಾಡೆಮಿ ಮಾಜಿ ಅಧ್ಯಕ್ಷ, ಕಲಾವಿದ ಪ್ರೊ.ಎಂ.ಎಲ್.ಸಾಮಗ ಹಾಗೂ ಅರ್ಥಧಾರಿ, ಪ್ರಾಂಶುಪಾಲ ಡಾ.ಗಣರಾಜ ಕುಂಬ್ಳೆ ಅವರು ಅಭಿನಂದನ ಭಾಷಣ ಮಾಡಲಿದ್ದಾರೆ.

ಸಂಜೆ 5.15ರಿಂದ ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ಜಾಂಬವತಿ ಕಲ್ಯಾಣ ಯಕ್ಷಗಾನ ಪ್ರದರ್ಶನ ನಡೆಯಲಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

ನವೀನ ಹಳೆಯದು