ಮಂಗಳೂರು: ಕೋವಿಡ್ ಕಾಲದಲ್ಲಿ ಈಗಾಗಲೇ ಸಂಕಷ್ಟಕ್ಕೆ ತುತ್ತಾಗಿರುವ ಯಕ್ಷಗಾನ ರಂಗಕ್ಕೆ ಮತ್ತೊಂದು ಆಘಾತ. ಗುರುವಾರ ಮುಂಜಾನೆ ವೇಣೂರು ಸಮೀಪ ನಡೆದ ಅಪಘಾತವೊಂದರಲ್ಲಿ ಹಿರಿಯಡ್ಕ ಮೇಳದ ಮ್ಯಾನೇಜರ್ ಕೂಡ ಆಗಿರುವ ಯಕ್ಷಗಾನ ಕಲಾವಿದ ವೇಣೂರು ವಾಮನ ಕುಮಾರ್ (47) ಅವರು ಅಸು ನೀಗಿದ್ದಾರೆ.
ಬುಧವಾರದ ಆಟ ಮುಗಿಸಿ ಬೈಕಿನಲ್ಲಿ ಬರುತ್ತಿದ್ದ ಅವರಿಗೆ ಮಾರುತಿ ಓಮ್ನಿಯೊಂದು ಡಿಕ್ಕಿಯಾಗಿ ಈ ದುರಂತ ಸಂಭವಿಸಿದೆ ಎಂದು ತಿಳಿದುಬಂದಿದೆ. ಅವರಿಗೆ ಇಬ್ಬರು ಮಕ್ಕಳಿದ್ದು, ಇತ್ತೀಚೆಗಷ್ಟೇ ಅವರು ತಮ್ಮ ಅಕ್ಕನನ್ನು ಕಳೆದುಕೊಂಡಿದ್ದರು.
ಗುರುವಾರ ನಸುಕಿನ ಜಾವದಲ್ಲಿ ಮೂಡುಬಿದಿರೆಯ ಗಂಟಾಲಕಟ್ಟೆ ಸಮೀಪ ಈ ದುರಂತ ಸಂಭವಿಸಿದೆ. ಸುಮಾರು 30 ವರ್ಷಗಳಿಂದ ಯಕ್ಷಗಾನ ರಂಗದಲ್ಲಿ ಕಲಾವಿದರಾಗಿದ್ದು, ಇತ್ತೀಚೆಗೆ ಹಿರಿಯಡ್ಕ ಮೇಳದ ವ್ಯವಸ್ಥಾಪಕರಾಗಿ ಮೇಳವನ್ನು ಮುನ್ನಡೆಸುತ್ತಿದ್ದರು.
ಇವರು ಪತ್ನಿ, ಇಬ್ಬರು ಪುಟ್ಟ ಮಕ್ಕಳು ಹಾಗೂ ಅಪಾರ ಯಕ್ಷಗಾನ ಅಭಿಮಾನಿಗಳನ್ನು ಅಗಲಿದ್ದಾರೆ.
ಪುಂಡು ವೇಷ -ಸ್ತ್ರೀವೇಷಗಳ ಅಭಿನಯ ಚತುರ
ವೇಣೂರು ಪರಿಸರದಲ್ಲಿ ಅತ್ಯಂತ ಜನಪ್ರಿಯರಾಗಿರುವ ಸಹೃದಯಿ, ನಿಗರ್ವಿ ಕಲಾವಿದರಾಗಿದ್ದ ಅವರು, ಪುಂಡು ವೇಷ ಮತ್ತು ಸ್ತ್ರೀ ವೇಷಗಳೆರಡರಲ್ಲೂ ಎತ್ತಿದ ಕೈ. ಚುರುಕಾದ ನಾಟ್ಯ, ಆಪ್ತ ಮಾತುಗಾರಿಕೆಯಿಂದ ಮತ್ತು ದುಂಡು ಮುಖದೊಂದಿಗೆ ಯಕ್ಷಗಾನಕ್ಕೊಪ್ಪುವ ರೂಪದಿಂದ ಜನಾನುರಾಗಿ ಕಲಾವಿದರಾಗಿದ್ದರು.
Yakshagana.in Updates ಪಡೆಯಲು: ವಾಟ್ಸ್ಆ್ಯಪ್-5 | ವಾಟ್ಸ್ಆ್ಯಪ್-4 | ವಾಟ್ಸ್ಆ್ಯಪ್-3 | ವಾಟ್ಸ್ಆ್ಯಪ್-1 | ವಾಟ್ಸ್ಆ್ಯಪ್-2 | ಟೆಲಿಗ್ರಾಂ | ಫೇಸ್ಬುಕ್ | ಟ್ವಿಟರ್ | ಯೂಟ್ಯೂಬ್ | ಇನ್ಸ್ಟಾಗ್ರಾಂ
ದುಂಡು ಮುಖ, ತೀಕ್ಷ್ಣ ಕಣ್ಣುಗಳು, ಸದಾ ಹಸನ್ಮುಖಿ - ಇದು ವೇಣೂರು ವಾಮನ ಕುಮಾರ್ ಅವರ ವ್ಯಕ್ತಿತ್ವವೂ ಹೌದು, ವೇಷದ ಆಕರ್ಷಣೆಯೂ ಹೌದು.
ವೇಣೂರು ಗ್ರಾಮದ ಗೋಳಿತ್ಯಾರಿನಲ್ಲಿ ದಿ.ಅಣ್ಣು ದೇವಾಡಿಗ ಮತ್ತು ಮೋನಮ್ಮ ದಂಪತಿಯ ಪುತ್ರನಾಗಿ ಜನಿಸಿದ್ದ (1974 ಏಪ್ರಿಲ್ 18) ವಾಮನ ಅವರು, 8ನೇ ತರಗತಿಗೇ ವಿದ್ಯಾಭ್ಯಾಸ ಮೊಟಕುಗೊಳಿಸಿ, ಅಣ್ಣ ತಮ್ಮಂದಿರು ಮತ್ತು ಭಾವ ಜಗದೀಶ ದೇವಾಡಿಗರ ಪ್ರೋತ್ಸಾಹದೊಂದಿಗೆ ಯಕ್ಷಗಾನ ರಂಗಕ್ಕೆ ಸೆಳೆಯಲ್ಪಟ್ಟವರು. ಹಿರಿಯ ಕಲಾವಿದ ಡಿ.ಮನೋಹರ ಕುಮಾರ್ ಅವರ ನೆರವಿನೊಂದಿಗೆ ಕರ್ಗಲ್ಲು ವಿಶ್ವೇಶ್ವರ ಭಟ್ ಅವರಲ್ಲಿ ಯಕ್ಷಗಾನ ಅಭ್ಯಾಸ ಮಾಡಿದವರು.
ಹಿಂದೆ ಡಿ.ಮನೋಹರ್ ಕುಮಾರ್ ಮುಂದಾಳುತ್ವದಲ್ಲಿ ತುಳುವಿನ 'ತಿರುಮಲೆತ ತೀರ್ಥ' ಪ್ರಸಂಗದಲ್ಲಿ ತೇಜಾಕ್ಷಿ ಪಾತ್ರದ ಮೂಲಕ ರಂಗದಲ್ಲಿ ಮೊದಲು ಕಾಣಿಸಿಕೊಂಡ ಅವರು, ತುಳು ಹಾಗೂ ಕನ್ನಡ ಎರಡೂ ವಿಭಾಗದ ಯಕ್ಷಗಾನಗಳಲ್ಲಿ ಸಮರ್ಥ ಪಾತ್ರಧಾರಿಯಾಗಿ ಗುರುತಿಸಿಕೊಂಡಿದ್ದಾರೆ.
ಧರ್ಮಸ್ಥಳ ಮೇಳದಲ್ಲಿ 2 ವರ್ಷ, ಕದ್ರಿ ಮೇಳದಲ್ಲಿ 4 ವರ್ಷ ಹಾಗೂ ಪಿ.ಕಿಶನ್ ಹೆಗ್ಡೆ ನೇತೃತ್ವದ ಮಂಗಳಾದೇವಿ ಮೇಳದಲ್ಲಿ 15ಕ್ಕೂ ಹೆಚ್ಚು ವರ್ಷ ದುಡಿದಿರುವ ಅವರು, ಎಂಟು ವರ್ಷಗಳಿಂದ ಹಿರಿಯಡ್ಕ ಮೇಳದಲ್ಲಿ ದುಡಿಯುತ್ತಿದ್ದರು.
ಪ್ರಮೀಳೆ, ಭ್ರಮರ ಕುಂತಳೆ, ಮಾಲಿನಿ, ಪ್ರಭಾವತಿ, ಪದ್ಮಾವತಿ, ಕಿನ್ನಿದಾರು, ದುರ್ಮುಖಿ ಮುಂತಾದ ಸ್ತ್ರೀಪಾತ್ರಗಳಲ್ಲದೆ, ಕೃಷ್ಣ, ಕುಶ-ಲವ, ಚಂಡ-ಮುಂಡ, ಕೋಟಿ-ಚೆನ್ನಯ, ಕಾಂತಬಾರೆ-ಬುದಬಾರೆ, ಸುದರ್ಶನ, ಭಾರ್ಗವ ಮುಂತಾದ ಅಬ್ಬರದ ಪುಂಡುವೇಷಗಳಲ್ಲಿಯೂ ತಮ್ಮ ಪ್ರತಿಭೆಯನ್ನು ಮೆರೆದಿದ್ದಾರೆ. ಮಸ್ಕತ್ ಸಹಿತ ವಿವಿಧೆಡೆ ಇವರ ಕಲಾಪ್ರತಿಭೆಗೆ ಸನ್ಮಾನವೂ ಸಂದಿದೆ.
ಅವರ ಆತ್ಮಕ್ಕೆ ಚಿರಶಾಂತಿ ದೊರೆಯಲಿ, ಅವರ ಕುಟುಂಬಿಕರಿಗೆ ಈ ನಷ್ಟವನ್ನು ಭರಿಸುವ ಶಕ್ತಿ ನೀಡಲಿ ಎಂದು ಯಕ್ಷಗಾನ.ಇನ್ ಪ್ರಾರ್ಥಿಸುತ್ತದೆ.