ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸ್ತ್ರೀವೇಷಧಾರಿ ಮಾರ್ಗೋಳಿ ಗೋವಿಂದ ಶೇರಿಗಾರ್ ನಿಧನ

2015ರ ರಾಜ್ಯೋತ್ಸವ ಪುರಸ್ಕೃತರಾಗಿದ್ದ ಮಾರ್ಗೋಳಿಯವರನ್ನು ಕುಂದಾಪುರದಲ್ಲಿ ಅಭಿಮಾನಿಗಳು ಅದ್ಧೂರಿಯಾಗಿ ಸನ್ಮಾನಿಸಿದ ಸಂದರ್ಭದ ಚಿತ್ರ.

ಉಡುಪಿ: 2015ರಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾಗಿದ್ದ ಸುಪ್ರಸಿದ್ಧ ಯಕ್ಷಗಾನ ಸ್ತ್ರೀವೇಷಧಾರಿ ಮಾರ್ಗೋಳಿ ಗೋವಿಂದ ಶೇರಿಗಾರ್ (96) ಅವರು ಭಾನುವಾರ ರಾತ್ರಿ 9.30ರ ಸುಮಾರಿಗೆ ಇಹಲೋಕ ತ್ಯಜಿಸಿದರು.

ಅವರು ಈರ್ವರು ಪುತ್ರರು, ಈರ್ವರು ಪುತ್ರಿಯರನ್ನು, ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ. 

ಕುಂದಾಪುರ-ಬಸ್ರೂರು ಸಮೀಪದ ಮಾರ್ಗೋಳಿ ಎಂಬ ಪುಟ್ಟ ಗ್ರಾಮದ ನರಸಿಂಹ ಶೇರಿಗಾರ ಮತ್ತು ಸುಬ್ಬಮ್ಮ ದಂಪತಿಯ ಪುತ್ರ ಗೋವಿಂದ ಶೇರಿಗಾರ್ ಅವರು ಬಡಗುತಿಟ್ಟಿನ ಸ್ತ್ರೀವೇಷಕ್ಕೆ ವಿಶೇಷ ಮೆರುಗು ನೀಡಿದವರು. 13ನೇ ವಯಸ್ಸಿಗೇ ಗೆಜ್ಜೆ ಕಟ್ಟಿದ್ದ ಅವರು, ಮಂದಾರ್ತಿ ಮೇಳ ಸೇರಿ ಯಕ್ಷಗಾನ ಜೀವನ ಪ್ರಾರಂಭಿಸಿದ್ದರು.
ವೀರಭದ್ರ ನಾಯಕ್, ಕೊಕ್ಕರ್ಣೆ ಗುಂಡು ನಾಯಕ್, ನರಸಿಂಹ ಕಮ್ತಿ ಮುಂತಾದ ಹಿರಿಯ ಕಲಾವಿದರ ಗರಡಿಯಲ್ಲಿ ಬೆಳೆದಿದ್ದ ಅವರು, ಎಳೆ ವಯಸ್ಸಿನಲ್ಲಿಯೇ ಬಡಗು ತಿಟ್ಟು ಯಕ್ಷಗಾನ ರಂಗದ ಪ್ರಮುಖ ಸ್ತ್ರೀವೇಷಧಾರಿಯಾಗಿ ಕಾಣಿಸಿಕೊಂಡಿದ್ದರು.

ಮಂದಾರ್ತಿ, ಮಾರಣಕಟಟ್ಟೆ, ಸೌಕೂರು, ಅಮೃತೇಶ್ವರಿ, ಇಡಗುಂಜಿ, ಕಮಲಶಿಲೆ ಬಯಲಾಟ ಮೇಳಗಳಲ್ಲಿ ಹಾಗೂ ಪೆರ್ಡೂರು ಮತ್ತು ಸಾಲಿಗ್ರಾಮ ಡೇರೆ ಮೇಳಗಳಲ್ಲಿ ಯಕ್ಷಗಾನ ಸೇವೆ ಮಾಡಿದ್ದ ಅವರು ಐದು ದಶಕಗಳ ಕಾಲ ಅಭಿನಯ ಶಾರದೆಯಾಗಿ ಮೆರೆದಿದ್ದರು.

ಬಡಗುತಿಟ್ಟಿನಲ್ಲಿ ಮೊದಲ ಬಾರಿಗೆ ದೇವಿ ಮಹಾತ್ಮೆ ಪ್ರಸಂಗ ಪ್ರದರ್ಶನಗೊಂಡಿದ್ದು ಮಂದಾರ್ತಿಯಲ್ಲಿ ಎನ್ನಲಾಗುತ್ತಿದ್ದು, ಅದರಲ್ಲಿ ಮೊದಲ ದೇವಿ ಪಾತ್ರಧಾರಿಯಾಗಿ ಕಾಣಿಸಿಕೊಂಡ ಹೆಗ್ಗಳಿಕೆಯೂ ಗೋವಿಂದ ಶೇರಿಗಾರ್ ಅವರದ್ದು.

ಗೋವಿಂದ ಶೇರಿಗಾರರು ಬಡಗು ನಡುತಿಟ್ಟು ಯಕ್ಷಗಾನ ರಂಗ ಕಂಡ ಪಾರಂಪರಿಕ ಶೈಲಿಯ  ಅಗ್ರಮಾನ್ಯ ಸ್ತ್ರೀವೇಷಧಾರಿಯಾಗಿದ್ದು, ಅಗಾಧ ಅನುಭವದ ಖನಿ. ಸುದೀರ್ಘ ರಂಗಾನುಭವಿಯಾಗಿದ್ದರು.

1926ರಲ್ಲಿ ಜನಿಸಿದ ಗೋವಿಂದ ಶೇರಿಗಾರರು ಓದಿದ್ದು ನಾಲ್ಕನೇ ತರಗತಿಮ ಮಾತ್ರ.

ಮಂದಾರ್ತಿ ಮೇಳಕ್ಕೆ ಕೋಡಂಗಿಯಾಗಿ ಸೇರಿ ಗೆಜ್ಜೆಕಟ್ಟಿ ತಿರುಗಾಟ ಶುರುವಿಟ್ಟ ಅವರು ವೀರಭದ್ರ ನಾಯಕರಿಂದ ನಾಟ್ಯ ಹಾಗೂ ರಂಗನಡೆ ಅಭ್ಯಾಸ ಮಾಡಿ ಸೌಕೂರು ಮೇಳ ಸೇರಿ ತಿರುಗಾಟದಲ್ಲಿ ಹಂತ ಹಂತವಾಗಿ ಕೋಡಂಗಿ, ಬಾಲಗೋಪಾಲ, ಸಖಿ, ಸ್ತ್ರೀ ವೇಷಗಳನ್ನು ಮಾಡಿ ಅನುಭವಗಳಿಸಿದರು. ಮುಂದೆ ಬಡಗುತಿಟ್ಟಿನ ಅಪ್ರತಿಮ ಸ್ತ್ರೀವೇಷಧಾರಿ ಕೊಕ್ಕರ್ಣೆ ನರಸಿಂಹ ಕಾಮತರ ಒಡನಾಟದಲ್ಲಿ ಮತ್ತಷ್ಟು ಪಳಗಿದರು. ಅಮೃತೇಶ್ವರಿ ಮೇಳದಲ್ಲಿ ಹಾರಾಡಿ ನಾರಾಯಣ ಗಾಣಿಗರ ಅನುಭವವನ್ನು ಸದುಪಯೋಗಪಡಿಸಿಕೊಂಡ  ಮಾರ್ಗೋಳಿಯವರು ಸ್ತ್ರೀವೇಷಧಾರಿಯಾಗಿ ಪರಿಪೂರ್ಣತೆಯತ್ತ ನಡೆದರು.

ನಿರಂತರ 53 ವರ್ಷಗಳ ತಿರುಗಾಟದಲ್ಲಿ 26 ವರ್ಷ ಮಾರಣಕಟ್ಟೆ ಮೇಳದಲ್ಲೇ ಕಳೆದರು. ಜೊತೆಗೆ  ಯಕ್ಷಗಾನ ಲೋಕ ಕಂಡ  ಅಗ್ರಮಾನ್ಯ ಕಲಾವಿದರಾದ ಹಾರಾಡಿ ರಾಮ ಹಾರಾಡಿ, ಕುಷ್ಠ ಗಾಣಿಗರು, ವೀರಭದ್ರ ನಾಯಕರು, ಶಿವರಾಮ ಹೆಗ್ಡೆಯವರು, ಕೊಕ್ಕರ್ಣೆ ನರಸಿಂಹ ಕಾಮತರು, ಕೊಳಕೆಬೈಲು ಶೀನ ನಾಯ್ಕ್, ಹಾರಾಡಿ ನಾರಾಯಣ ಗಾಣಿಗರು, ಉಪ್ಪೂರುದ್ವಯರು ಹಾಗೂ ಮರವಂತೆ ದಾಸ ಭಾಗವತರ ಜೊತೆ ತಿರುಗಾಟ ಮಾಡಿದವರು.

ಶಶಿಪ್ರಭೆ, ಮೀನಾಕ್ಷಿ, ಚಿತ್ರಾಂಗದೆ, ಪ್ರಭಾವತಿ, ಮೋಹಿನಿ ,ದಮಯಂತಿ, ಸುಗರ್ಭೆ, ಸುಭದ್ರೆ, ಮದನಾಕ್ಷಿ, ತಾರಾವಳಿ, ಕೈಕೇಯಿ, ದೇವಿ ಮುಂತಾದ ವಿಭಿನ್ನ ಸ್ವಭಾವದ  ಸ್ತ್ರೀ ವೇಷಗಳನ್ನು ಸಮರ್ಥವಾಗಿ  ನಿರ್ವಹಿಸಿದ್ದಾರೆ. ಪುರುಷ ವೇಷಗಳಾದ ಅರ್ಜುನ, ಕೃಷ್ಣ , ರಾಮ, ಈಶ್ವರ, ಕಮಲಭೂಪ, ಹಂಸಧ್ವಜ ವೇಷಗಳನ್ನೂ ಮೆರೆಸಿದ್ದಾರೆ.

2004ರಲ್ಲಿ ಕರ್ನಾಟಕ ಜಾನಪದ ಹಾಗೂ ಯಕ್ಷಗಾನ ಅಕಾಡೆಮಿ ಪ್ರಶಸ್ತಿ  ಹಾಗೂ 2015ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಬಂದಿವೆ. 1950 ರಲ್ಲಿ ಮಾರಣಕಟ್ಟೆ ದೇವಳದ ವತಿಯಿಂದ ದೊರೆತ 20 ಗ್ರಾಂ ನ ಚಿನ್ನದ ಸರ, ಕಾಸರಗೋಡು ಹಾಗೂ ಬೈಂದೂರು ನಲ್ಲಿ ಚಿನ್ನದ ಪದಕ ಕೂಡ ಅವರಿಗೆ ದೊರೆತಿದ್ದು, ರಾಜ್ಯೋತ್ಸವ ಪ್ರಶಸ್ತಿ ಪಡೆದ ಬಳಿಕ ಕುಂದಾಪುರ ನಾಗರಿಕರು ಅವರನ್ನು ಅದ್ದೂರಿಯಾಗಿ ಮೆರವಣಿಗೆ ಮಾಡಿ ಸನ್ಮಾನಿಸಿದರು ಎಂಬುದು ದಾಖಲಾರ್ಹ ವಿಚಾರ.

ಬಡಗುತಿಟ್ಟಿನ ಪ್ರಾತಿನಿಧಿಕ ಕಲಾವಿದರಾಗಿ, ಹಳೆಯ ಶೈಲಿಯ ಅಪಾರ ಅನುಭವ ಹೊಂದಿದ್ದ ಅವರ ನಿಧನವು ಯಕ್ಷಗಾನ ರಂಗಕ್ಕೆ ತುಂಬಲಾರದ ನಷ್ಟ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

ನವೀನ ಹಳೆಯದು