ಯಕ್ಷಗಾನದಲ್ಲಿ ದೇವಿ ಭಟ್ರು ಖ್ಯಾತಿಯ ಹಿರಿಯ ಕಲಾವಿದ ಮುಳಿಯಾಲ ಭೀಮ ಭಟ್ ನಿಧನ



ಮಂಗಳೂರು: ಶ್ರೀದೇವಿ ಮಹಾತ್ಮ್ಯೆಯ ದೇವಿ ಪಾತ್ರದ ಮೂಲಕ ನಾಡಿನಾದ್ಯಂತ ಭಕ್ತಿ ಭಾವ ಮೂಡಿಸಿದ್ದ ಹಿರಿಯ ಯಕ್ಷಗಾನ ಕಲಾವಿದ ಮುಳಿಯಾಲ ಭೀಮ ಭಟ್ (85) ಅವರು ಮಂಗಳವಾರ ಮುಂಜಾನೆ ಕಾಂತಾವರದಲ್ಲಿ ನಿಧನರಾದರು.

ವಯೋಸಹಜ ಸಮಸ್ಯೆಗಳಿಂದ ಯಕ್ಷಗಾನದ ವೃತ್ತಿಯಿಂದ ನಿವೃತ್ತರಾಗಿದ್ದ ಅವರು, ಕಾಂತಾವರ ದೇವಸ್ಥಾನದಲ್ಲಿ ಕಳೆದ ಇಪ್ಪತ್ತು ವರ್ಷಗಳಿಂದ ಸೇವೆ ಮಾಡುತ್ತಿದ್ದರು. ಕಳೆದ ನಾಲ್ಕು ತಿಂಗಳಿಂದ ಅವರಿಗೆ ಅನಾರೋಗ್ಯ ಕಾಡುತ್ತಿತ್ತು.

ಕಟೀಲು ಮೇಳದಲ್ಲಿ ದೇವಿ ಮಹಾತ್ಮ್ಯೆಯ ಶ್ರೀದೇವಿ ಪಾತ್ರಕ್ಕೆ ಅವರು ಹೊಸ ಭಾಷ್ಯ ಬರೆದಿದ್ದರು. ರೂಪ, ಸ್ವರವೂ ಸ್ತ್ರೀಪಾತ್ರಗಳಿಗೆ ತಕ್ಕಂತಿತ್ತು. ಬೆಳಕಿನ ಸೇವೆಯಾದ ಯಕ್ಷಗಾನ ನೋಡುವ ಪ್ರೇಕ್ಷಕರಲ್ಲಿ ಭಕ್ತಿ ಭಾವ ಸ್ಫುರಿಸುವಂತೆ ಅವರು ಶ್ರೀದೇವಿ ಪಾತ್ರ ನಿರ್ವಹಿಸಿ ಜನಮಾನಸದಲ್ಲಿ 'ದೇವಿ ಭಟ್ರು' ಎಂದೇ ಚಿರಸ್ಥಾಯಿಯಾಗಿದ್ದಾರೆ.
ಉದ್ಧಾಮ ಕಲಾವಿದ ಕೀರ್ತಿಶೇಷ ಕುರಿಯ ವಿಠಲ ಶಾಸ್ತ್ರಿಗಳ ಗರಡಿಯಲ್ಲಿ ಪಳಗಿದ್ದ ಮುಳಿಯಾಲ ಭೀಮ ಭಟ್ಟರ ತಂದೆ ಕೇಶವ ಭಟ್ಟರು (ಕೇಚಣ್ಣ) ಕೂಡ ವೇಷಧಾರಿ. 13 -03 -1937ರಂದು ಭೀಮ ಭಟ್ಟರ ಜನನ. ಇವರದು ಕಲಾವಿದರ ವಂಶ. ಬಾಲ್ಯದಲ್ಲಿ ತಂದೆಯೊಂದಿಗೆ ಆಟ ನೋಡಲು ಹೋಗುತ್ತಿದ್ದ ಭೀಮ ಭಟ್ಟರು, ಐದನೇ ತರಗತಿಯಲ್ಲಿ ಫೇಲ್ ಆಗಿ, ಮೈಸೂರಲ್ಲಿ ಹೋಟೆಲ್ ಕೆಲಸಕ್ಕೆ ಹೋಗಿದ್ದರು. ಅಲ್ಲಿಗೆ ಬಂದಿದ್ದ ಕುರಿಯ ವಿಠಲ ಶಾಸ್ತ್ರಿಗಳು ಈ ಹುಡುಗನನ್ನು ಕರೆದುಕೊಂಡು ಹೋಗಿ, ಯಕ್ಷಗಾನ ಶಿಕ್ಷಣ ನೀಡಿದ್ದರು.

1951ರಲ್ಲಿ ಕುರಿಯ ವಿಠಲ ಶಾಸ್ತ್ರಿ ಸಂಚಾಲಕತ್ವದಲ್ಲಿ ಧರ್ಮಸ್ಥಳ ಮೇಳದಲ್ಲಿ ಕೋಡಂಗಿ, ಬಾಲಗೋಪಾಲ, ಮುಖ್ಯಸ್ತ್ರೀವೇಷ, ಪೀಠಿಕೆ ವೇಷ - ಹೀಗೆ ತಮ್ಮ ಯಕ್ಷಗಾನ ವೃತ್ತಿ ಆರಂಭಿಸಿದ್ದ ಮುಳಿಯಾಲ ಭೀಮ ಭಟ್ಟರು, ಹಂತ ಹಂತವಾಗಿ ಪ್ರಬುದ್ಧರಾಗುತ್ತಾ ಮೇಲೇರಿದರು. ಬಣ್ಣದ ಮಾಲಿಂಗ, ಕರ್ಗಲ್ಲು ಸುಬ್ಬಣ್ಣ ಭಟ್, ಕುರಿಯ ಶಾಸ್ತ್ರಿಗಳು - ಇವರೆಲ್ಲರನ್ನೂ ನೋಡುತ್ತಾ ಕಲಿತು, ಅಭ್ಯಾಸ ಮುಂದುವರಿಸಿದ ಭೀಮ ಭಟ್ಟರು ಏಳು ವರ್ಷ ಧರ್ಮಸ್ಥಳ ಮೇಳದಲ್ಲಿ ತಿರುಗಾಟ ನಡೆಸಿದ ಬಳಿಕ, 1958ರಲ್ಲಿ ಕಟೀಲು ಮೇಳ ಸೇರಿದರು. ಅಲ್ಲಿ ಪೊಳಲಿ ಶಂಕರನಾರಾಯಣ ಶಾಸ್ತ್ರಿಗಳ ಮೂಲಕ ಅವರ ದೇವಿ ಪಾತ್ರವು ಮೆರೆಯಲಾರಂಭಿಸಿತು.

ಕೋಳ್ಯೂರು ರಾಮಚಂದ್ರರಾಯರ 90ರ ಕೋಳ್ಯೂರು ವೈಭವ ಕಾರ್ಯಕ್ರಮ ಸರಣಿಯಲ್ಲಿ ಮುಳಿಯಾಲ ಭೀಮ ಭಟ್ಟರು ಮಾತನಾಡಿರುವುದು ಇಲ್ಲಿದೆ:



ಪ್ರಮೀಳೆ, ಶಶಿಪ್ರಭೆ, ಮೀನಾಕ್ಷಿಯಂತಹಾ ವೀರವನಿತೆಯರ ಪಾತ್ರದಲ್ಲಿ ಮಿಂಚಿದ್ದ ಭೀಮ ಭಟ್ಟರು, ಅತಿಕಾಯ, ತಾಮ್ರಧ್ವಜ, ಕರ್ಣ, ದ್ರುಪದ, ಕೃಷ್ಣ, ಹನೂಮಂತ ಮುಂತಾದ ಪುರುಷ ಪಾತ್ರಗಳಲ್ಲಿಯೂ ಮೆರೆದವರು. ಸೀತೆ, ದಮಯಂತಿ, ಚಂದ್ರಮತಿ, ದ್ರೌಪದಿ ಮುಂತಾದ ಗರತಿ ಪಾತ್ರಗಳನ್ನೂ ಅಷ್ಟೇ ಸಮರ್ಥವಾಗಿ ನಿಭಾಯಿಸಿದವರು.

ದೇವಿಯಾಗಿ ಶರೀರ, ಶಾರೀರ, ಪಾತ್ರದ ಕುರಿತಾಗಿನ ಶ್ರದ್ಧೆ, ಭಕ್ತಿಯು ಅವರಿಗೆ 'ದೇವಿ ಭಟ್ರು' ಎಂಬ ಹೆಸರು ತಂದುಕೊಟ್ಟಿತ್ತು. ಗಂಭೀರವಾದ ಶ್ರೀದೇವಿ ಪಾತ್ರಕ್ಕೆ ಹಿತ-ಮಿತವಾದ ಪಾತ್ರಾಭಿವ್ಯಕ್ತಿ.

ಬಳಿಕವೂ ಕುಂಡಾವು, ಮರಳಿ ಧರ್ಮಸ್ಥಳ ಮೇಳದಲ್ಲಿ 5 ವರ್ಷ ಸೇವೆ ಸಲ್ಲಿಸಿದ ಬಳಿಕ 1979ರಿಂದ 1990ರವರೆಗೆ ಸುಂಕದಕಟ್ಟೆ ಮೇಳದಲ್ಲಿ ವ್ಯವಸಾಯ ಮಾಡಿದ ಮುಳಿಯಾಲ ಭೀಮ ಭಟ್ಟರು, ಮಳೆಗಾಲದಲ್ಲಿ ಕಲಾವಿದರನ್ನು ಒಟ್ಟು ಸೇರಿಸಿ ಅನ್ಯ ರಾಜ್ಯಗಳಿಗೂ ಯಕ್ಷಗಾನವನ್ನು ಕೊಂಡೊಯ್ದಿದ್ದರು.

1991ರಲ್ಲಿ ಅಪಘಾತಕ್ಕೀಡಾದ ಬಳಿಕ ಸಕ್ರಿಯ ಯಕ್ಷಗಾನದಿಂದ ದೂರವಾದ ಅವರು, ಕಳೆದ ಹಲವಾರು ವರ್ಷಗಳಿಂದ ಕಾಂತಾವರ ದೇವಸ್ಥಾನದಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದರು. ಇಳಿ ವಯಸ್ಸಿನಲ್ಲಿ ಡಾ.ಜೀವಂಧರ ಬಲ್ಲಾಳರು ಅವರ ಅನ್ನಕ್ಕೆ ಹಾದಿ ಮಾಡಿಕೊಟ್ಟಿದ್ದನ್ನು ಮುಳಿಯಾಲರು ಪದೇ ಪದೇ ನೆನಪಿಸಿಕೊಳ್ಳುತ್ತಿದ್ದರು.

ಪತ್ನಿ ಹಾಗೂ ಒಬ್ಬಳು ಮಗಳು ಅವರಿದ್ದಾರೆ. ಇತ್ತೀಚೆಗೆ ಧರ್ಮಸ್ಥಳದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರಿಗೆ ಪಾತಾಳ ಯಕ್ಷ ಕಲಾ ಮಂಗಳ ಪುರಸ್ಕಾರವನ್ನು ನೀಡಿ ಗೌರವಿಸಲಾಗಿತ್ತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

ನವೀನ ಹಳೆಯದು