ರಾಜವೇಷಕ್ಕೆ ಹೆಸರಾದ ಯಕ್ಷಗಾನ ಕಲಾವಿದ ಬೇತ ಕುಂಞಿ ಕುಲಾಲ್ ನಿಧನ


ಮಂಗಳೂರು: ಹಿರಿಯ ಯಕ್ಷಗಾನ ಕಲಾವಿದ, ಪೀಠಿಕೆ, ಕಿರೀಟ, ರಾಜ ವೇಷಗಳ ವೈವಿಧ್ಯಕ್ಕಾಗಿ ಪ್ರಖ್ಯಾತಿ ಗಳಿಸಿದ್ದ ಬೇತ ಕುಂಞಿ ಕುಲಾಲ್ (78) ಅವರು ಬುಧವಾರ ನಿಧನರಾದರು. ಕಳೆದ ಮೂರು ದಿನಗಳಲ್ಲಿ ವಾಮನ್ ಕುಮಾರ್, ಮಾರ್ಗೋಳಿ ಗೋವಿಂದ ಶೇರಿಗಾರ್ ಹಾಗೂ ಮುಳಿಯಾಲ ಭೀಮ ಭಟ್ಟರನ್ನು ಕಳೆದುಕೊಂಡಿದ್ದ ಯಕ್ಷಗಾನ ರಂಗಕ್ಕೆ ಇದು ಮತ್ತೊಂದು ಆಘಾತ.


ಮೂಲ್ಕಿ, ಕುತ್ಯಾಳ, ಸೌಕೂರು, ಇರಾ, ಕೊಲ್ಲೂರು, ಆದಿಸುಬ್ರಹ್ಮಣ್ಯ ಮೊದಲಾದ ಮೇಳಗಳಲ್ಲಿ ವ್ಯವಸಾಯ ಮಾಡಿದ್ದ ಬೇತ ಕುಂಞಿ ಕುಲಾಲ್ ಅವರು 1943ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಕರೋಪಾಡಿಯ ಬೇತ ಎಂಬಲ್ಲಿ ಮುತ್ತ ಮೂಲ್ಯ - ಅಬ್ಬು ದಂಪತಿಯ ಪುತ್ರರಾಗಿ ಜನಿಸಿದ್ದರು.

Yakshagana.in Updates ಪಡೆಯಲು:  ವಾಟ್ಸ್ಆ್ಯಪ್-5 | ವಾಟ್ಸ್ಆ್ಯಪ್-4 | ವಾಟ್ಸ್ಆ್ಯಪ್-3 | ವಾಟ್ಸ್ಆ್ಯಪ್-1 | ವಾಟ್ಸ್ಆ್ಯಪ್-2 | ಟೆಲಿಗ್ರಾಂ | ಫೇಸ್‌ಬುಕ್ | ಟ್ವಿಟರ್ | ಯೂಟ್ಯೂಬ್ ಇನ್‌ಸ್ಟಾಗ್ರಾಂ

ಐದನೇ ತರಗತಿಗೇ ವಿದ್ಯಾಭ್ಯಾಸ ನಿಲ್ಲಿಸಿದ ಸಂದರ್ಭದಲ್ಲಿ ದಿ.ಕುರಿಯ ವಿಠಲ ಶಾಸ್ತ್ರಿಗಳಲ್ಲಿ ಯಕ್ಷಗಾನ ಕಲಿತು, ಧರ್ಮಸ್ಥಳ ಮೇಳದ ಮೂಲಕ ಕಲಾಜೀವ ಪ್ರಾರಂಭಿಸಿದ್ದರು. ಅಲ್ಲಿ ಖ್ಯಾತ ವೇಷಧಾರಿ ದಿ.ಸಣ್ಣ ತಿಮ್ಮಪ್ಪನವರಿಂದ ಪರಂಪರೆಯ ಕುಣಿತದಲ್ಲಿ ಮತ್ತಷ್ಟು ಪರಿಣತಿ ಗಳಿಸಿದರು. ಹತ್ತು ವರ್ಷಗಳ ಮೇಳದ ತಿರುಗಾಟ ಅವಧಿಯಲ್ಲಿ ಬಾಲಗೋಪಾಲ ಪಾತ್ರದಿಂದ ತೊಡಗಿ, ಹಂತ ಹಂತವಾಗಿ ಮೇಲೇರಿ ಸಮರ್ಥ ಪುಂಡುವೇಷಧಾರಿಯಾಗಿ ರೂಪುಗೊಂಡರು. ಈ ಸಂದರ್ಭ ಅಗರಿ ಭಾಗವತರು, ಕಡತೋಕ, ಕುರಿಯ ಶಾಸ್ತ್ರಿಗಳು, ಬಣ್ಣದ ಮಾಲಿಂಗ, ಮುಳಿಯಾಲ ಭೀಮ ಭಟ್, ಕದ್ರಿ ವಿಷ್ಣು, ವಿಟ್ಲ ರಾಮಯ್ಯ ಶೆಟ್ಟಿ, ಕೋಳ್ಯೂರು ರಾಮಚಂದ್ರ ರಾವ್, ಹೊಸಹಿತ್ಲು ಮಹಾಲಿಂಗ ಭಟ್, ಕರುವೋಳು ದೇರಣ್ಣ ಶೆಟ್ಟಿ, ಕುಂಞಿ ಬಾಬು ಮುಂತಾದವರ ಒಡನಾಟದಲ್ಲಿ ಸಮರ್ಥವಾಗಿ ಪಳಗಿದರು.


ಮತ್ತೊಬ್ಬ ಖ್ಯಾತ ವೇಷಧಾರಿ ಹೊಸಹಿತ್ಲು ಮಹಾಲಿಂಗ ಭಟ್ಟರ ಜೊತೆಗೆ ಇವರ ಪುಂಡುವೇಷದ ಜೊತೆ ಬಹಳ ಪ್ರಸಿದ್ಧವಾಗಿತ್ತು. ಬಳಿಕ ಕಿರೀಟ ವೇಷದ ನಡೆಗಳನ್ನು, ನರ್ತನಗಳನ್ನು ಕರಗತ ಮಾಡಿಕೊಂಡು ದೇವೇಂದ್ರ, ಅರ್ಜುನ ಮುಂತಾದ ವೇಷಗಳ ಮೂಲಕ ಸಭಾಕ್ಲಾಸ್ ನಾಟ್ಯ ಕಲಿತು, ಸಮರ್ಥ ಕಿರೀಟ ವೇಷಧಾರಿಯಾಗಿ ರೂಪುಗೊಂಡರು. ಅವರಿಗೆ ಕಿರೀಟ ವೇಷದಲ್ಲಿ ಎಷ್ಟು ಒಲವಿತ್ತೆಂದರೆ, ಕಿರೀಟ ವೇಷಗಳ ಪರಿಪೂರ್ಣ ನಡೆ, ಮಾತುಗಳನ್ನೆಲ್ಲ ಅಭ್ಯಸಿಸಿ, ತಮ್ಮದೇ ಆದ ಛಾಪು ನೀಡಿ, ಕಿರೀಟ ವೇಷದ ವಿಶೇಷಜ್ಞ ಎಂದೇ ಜನಜನಿತರಾದರು. ದೇವಿ ಮಹಾತ್ಮೆ ಪ್ರಸಂಗದಲ್ಲಿ ಮಧು ಕೈಟಭರು, ಚಂಡ ಮುಂಡರು, ರಕ್ತಬೀಜ ಪಾತ್ರಗಳಷ್ಟೇ ಅಲ್ಲದೆ, ದೇವಿ ಪಾತ್ರವನ್ನು ಮಾಡಿಯೂ ಸೈ ಅನ್ನಿಸಿಕೊಂಡರು ಕುಂಞಿ ಕುಲಾಲ್ ಅವರು. ಇಂದ್ರಜಿತು, ಕೌಂಡ್ಲಿಕ, ಹಿರಣ್ಯಾಕ್ಷ ಮುಂತಾದ ಕಿರೀಟ ವೇಷಗಳನ್ನು ನಿಭಾಯಿಸಿ ತಮ್ಮದೇ ವಿಶೇಷ ರೀತಿಯಲ್ಲಿ ಈ ಪಾತ್ರಗಳನ್ನು ಮೆರೆಸಿದರು.



(ಬೇತ ಕುಂಞಿ ಕುಲಾಲರ ಸಂದರ್ಶನದ ವಿಡಿಯೊ ತುಣುಕು)


ಸ್ತ್ರೀಪಾತ್ರಗಳಲ್ಲದೆ, ಹೆಣ್ಣು ಬಣ್ಣಗಳಾದ ತಾಟಕಿ, ಶೂರ್ಪನಖಿ, ಅಜಮುಖಿ, ಕರಾಳ ನೇತ್ರೆ ಮೊದಲಾದ ಪಾತ್ರಗಳ ಮೂಲಕವೂ ಅವರು ಪ್ರಸಿದ್ಧರಾದರು. ಹೀಗೆ ಸರ್ವಾಂಗೀಣ ಕಲಾವಿದರಾಗಿ ರೂಪುಗೊಂಡ ಇವರು ಅನುಭವ ಸಂಪಾದಿಸಿ, ಯುವ ಕಲಾವಿದರಿಗೆ ಮಾರ್ಗದರ್ಶನ ನೀಡುತ್ತಿದ್ದರು.


ತುಳು ಯಕ್ಷಗಾನ ಪ್ರಸಂಗಗಳಲ್ಲಿಯೂ ಬುದಬಾರೆ, ಚೆನ್ನಯ್ಯ, ದುಗ್ಗಣ ಕೊಂಡೆ ಮುಂತಾದ ಪಾತ್ರಗಳನ್ನು ಸಮರ್ಥವಾಗಿ ನಿರ್ವಹಿಸಿ ಸೈ ಅನ್ನಿಸಿಕೊಂಡ ಕುಂಞಿ ಕುಲಾಲರದು ಸುಮಾರ ಅರ್ಧ ಶತಮಾನಕ್ಕೂ ಮಿಕ್ಕ ಯಕ್ಷಗಾನ ಕಲಾಸೇವೆ.


2012ರಿಂದ ಸಕ್ರಿಯ ಯಕ್ಷಗಾನದಿಂದ ದೂರವಾದ ಅವರಿಗೆ 2015ರಲ್ಲಿ ತುಳು ಅಕಾಡೆಮಿಯು ಗೌರವಿಸಿದೆ. ಪತ್ನಿ, ಐವರು ಮಕ್ಕಳ ತುಂಬು ಸಂಸಾರ ಅವರದು.


ಗೂಗಲ್ ನ್ಯೂಸ್‌ನಲ್ಲಿ ಯಕ್ಷಗಾನ.ಇನ್ ಫಾಲೋ ಮಾಡಲು ಕ್ಲಿಕ್ ಮಾಡಿ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

ನವೀನ ಹಳೆಯದು